ಮರಿಕೆ ಬ್ರಾಂಡ್ ಹೆಸರಿನಲ್ಲಿ ಸುಮಾರು ಬಗೆಯ ನ್ಯಾಚುರಲ್ ಐಸ್ಕ್ರೀಮುಗಳು ಸಿಗುತ್ತವೆ, ಸ್ಥಳೀಯವಾಗಿ ದೊರಕುವ ಬಹುಬಗೆಯ ಹಣ್ಣು ಹಂಪಲುಗಳನ್ನು ಬಳಸಿಕೊಂಡು ಐಸ್ಕ್ರೀಮು ಮಾಡುತ್ತಾರೆ. ಈ ಕುರಿತು ನಾಗೇಂದ್ರ ಸಾಗರ್ ಅವರ ಲೇಖನವನ್ನು ತಪ್ಪದೆ ಮುಂದೆ ಓದಿ…
ಪುತ್ತೂರು ಸಮೀಪದ ಮರಿಕೆಯಲ್ಲಿ ಇರುವ ಎ. ಪಿ. ಸದಾಶಿವ ಅವರಿಗೆ ಎಲೆಕ್ಟ್ರಿಕಲ್ ಡ್ರೈಯರ್ ಕೊಡುವುದಿತ್ತು. ಇದರೊಂದಿಗೆ ಫ್ಯಾಮಿಲಿ ಟ್ರಿಪ್ಪನ್ನೂ ಲಗತ್ತು ಮಾಡಿಕೊಂಡು ಹೋಗಿದ್ದೆವು.. ನಾನು, ವಾಣಿ ಮತ್ತು ಹೊಸ ಜೋಡಿ ಅಳಿಯ ಸಚಿನ್ ಮತ್ತು ಮಗಳು ಶ್ರಾವ್ಯ.
ಶ್ರೀಯುತ ಸದಾಶಿವ ಅವರ ಮನೆಗೆ ಹಿಂದೊಮ್ಮೆ ಸುಮಾರು ಇಪ್ಪತ್ತು ವರ್ಷಗಳ ಹಿಂದೆ ನಾನು ಹೋಗಿದ್ದೆ. ಆಗ ನನ್ನದು ಜೇನು ಉದ್ದೇಶದ ಭೇಟಿ ಆಗಿತ್ತು.. ಆಗ ನನ್ನೊಂದಿಗೆ ಒಂದಷ್ಟು ಜೇನು ಮಿತ್ರರಿದ್ದರು… ಆ ಸಮಯದಲ್ಲಿ ಸದಾಶಿವ ಅವರು ಮುಂಚೂಣಿ ಜೇನು ಕೃಷಿಕರು.. ಘಟ್ಟದ ಕೆಳಗಿನ ಕೃಷಿಕರ ಪ್ರಯೋಗಶೀಲ ಮನೋಭಾವವನ್ನು ನಾವು ಅಳವಡಿಸಿ ಕೊಳ್ಳಬೇಕಿದೆ ಎಂದು ನಾನೂ ನನ್ನ ಮಿತ್ರರು ಮಾತಾಡಿಕೊಂಡಿದ್ದೆವು.

ಡ್ರೈಯರ್ರನ್ನು ಜೋಡಿಸಿಕೊಡುತ್ತಾ ಇದೇ ಯೋಚನೆಯಲ್ಲಿ ಮತ್ತೇನು ಹೊಸತು ನಡೆದಿದೆ ಎಂದೆ. ಇನ್ನೇನು ಇಲ್ಲ… ಡ್ರೈಯರ್ ಬಂದಿದೆಯಲ್ಲ ಏನೇನು ಮಾಡಬಹುದು ಎಂದು ನೋಡಬೇಕು ಎಂದರು… ಮಾತಿಗೆ ಅವರ ಮನೆಯಾಕೆ ಮತ್ತು ಸೊಸೆ ಕೂಡ ಜೊತೆಯಾದರು.. ಕೆಲವು ಪ್ರಶ್ನೆಗಳಿಗೆ ಜೊತೆಯಲ್ಲಿದ್ದ ನನ್ನ ಮಗಳು ಉತ್ತರೆ ಆದಳು…
ನಿಮ್ಮ ಮಗ ಕಾಣಲಿಲ್ಲ ಎಂದು ಸುಹಾಸ್ ಬಗ್ಗೆ ಕೇಳಿದೆ… ಪೇಟೆಯಿಂದ ಬರಬೇಕಷ್ಟೆ ಎಂದರು. ನಮ್ಮದು ಐಸ್ಕ್ರೀಮು ಘಟಕವಿದೆ. ಪುತ್ತೂರು ಪೇಟೆಯಲ್ಲಿ ಅದರ ಔಟಲೆಟ್ ಇದೆ. ಇನ್ನೇನು ಬರಬೇಕಷ್ಟೆ ಎಂದರು. ಐಸ್ಕ್ರೀಮ್ ಘಟಕ ಅಂದ ಕೂಡಲೇ ನಮ್ಮ ಕಿವಿ ಸ್ವಾಭಾವಿಕವಾಗಿ ನಿಮಿರಿತು. ಈ ವರ್ಷವಷ್ಟೇ ನಾವೂ ಐಸ್ಕ್ರೀಮಿನ ತಯಾರಿಗೆ ಇಳಿದಿದ್ದೆವು. ಈಗಾಗಲೇ ಈ ಉದ್ಯಮದಲ್ಲಿ ಏಳೆಂಟು ವರ್ಷಗಳಿಂದ ಇರುವಲ್ಲಿಗೆ ಅಚಾನಕ್ಕಾಗಿ ಬಂದಿದ್ದೆವು. ಅರಿವಿನ ವಿಸ್ತಾರಕ್ಕೆ ಸಿಕ್ಕ ಈ ಅಪರೂಪದ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಅಪ್ಪ ಮಗಳು ಮನದಲ್ಲೇ ಮಾತಾಡಿಕೊಂಡೆವು.
ನಾವಿಬ್ಬರೂ ಕೆಲಸ ಮಾಡುವ ಜಾಗಕ್ಕೆ ಬಂದ ಮಡದಿಗೆ ನೋಡು ವಾಣಿ ಇವರೂ ಸುಮಾರು ವರ್ಷಗಳಿಂದ ಐಸ್ಕ್ರೀಮು ಮಾಡುತ್ತಿದ್ದಾರಂತೆ. ಸುಮಾರು ಬಗೆಯ ನ್ಯಾಚುರಲ್ ಐಸ್ಕ್ರೀಮು ಇದೆಯಂತೆ ಎಂದು ಹೇಳುತ್ತಿದ್ದಂತೆ ಅಲ್ಲಿ ಐಸ್ಕ್ರೀಮಿನ ವಿಶಾಲ ಪ್ರಪಂಚವೇ ತೆರೆದುಕೊಂಡಿತು. ಪರಸ್ಪರದ ಮಾಹಿತಿ ವಿನಿಮಯವಾಗಿ ಸಾಧಕ ಬಾಧಕಗಳು, ಆಳ ಅಗಲಗಳು ಗೊತ್ತಾದವು.

ಸ್ಥಳೀಯವಾಗಿ ದೊರಕುವ ಬಹುಬಗೆಯ ಹಣ್ಣು ಹಂಪಲುಗಳನ್ನು ಬಳಸಿಕೊಂಡು ಐಸ್ಕ್ರೀಮು ಮಾಡುವ ಪ್ರಯತ್ನ, ವಿಧಿ ವಿಧಾನಗಳ ಚರ್ಚೆ ಆಯಿತು. ನಾವು ಈವರೆಗೂ ಮುನ್ನಲೆಯಲ್ಲಿ ಇರುವ ಸಿಹಿ ಮಾವಿನ ಐಸ್ಕ್ರೀಮು ಮಾತ್ರ ಮಾಡುತ್ತಿದ್ದೆವು. ಅವರು ವಿಶೇಷ ಪರಿಮಳದ ಕಾಟು ಮಾವಿನ ಪಲ್ಪು ತೆಗೆದು ಅದರ ಐಸ್ಕ್ರೀಮನ್ನೂ ಮಾಡುತ್ತಿದ್ದಾರೆ. ಹಲಸಂತೂ ಎರಡೂ ಕಡೆಯಲ್ಲೂ ಬಹು ಫೇವರಿಟ್ ಐಸ್ಕ್ರೀಮು ಎಂದಾಯಿತು.
ನಾವು ಆನೆ ಅಂಜೂರಿನ ಐಸ್ಕ್ರೀಮಿನ ಸುದ್ದಿ ಹೇಳಿದೆವು. ಅದು ಅಲ್ಲಿ ಚಾಲ್ತಿಯಲ್ಲಿ ಇಲ್ಲ ಎಂದಾಯಿತು.. ಅಲ್ಲಿ ಆ ಹಣ್ಣಿನ ಕೃಷಿ ಅಷ್ಟಕ್ಕಷ್ಟೇ ಅಂತೆ.

ನಮ್ಮಲ್ಲಿ ಪ್ರಯೋಗಶೀಲ ಕೃಷಿಕರ ಮನೆ ಮನೆಯಲ್ಲಿ ಅಂಜೂರದ ಗಿಡ ಇದೆ.. ಅಂಜೂರ ಅಂದಕೂಡಲೇ ನನಗೆ ತೆಂಕೋಡಿನ ಗುರುಮೂರ್ತಿ ಮತ್ತವರ ಮಗ ಶಶಾಂಕ, Shashanka Tenkodu ನೆನಪಾಗುತ್ತಾರೆ..
ನಾವು ಈ ಡ್ರೈಯರ್ರು ಮತ್ತು ವಗೈರೆಯ ವ್ಯವಹಾರಕ್ಕೆ ಇಳಿದಾಗ ಮೊಟ್ಟ ಮೊದಲನೆಯ ಗ್ರಾಹಕರೇ ತೆಂಕೋಡಿನ ಗುರುಮೂರ್ತಿ.. ಮೂರ ಟ್ರೇ ಇರುವ ಪುಟ್ಟ ಡ್ರೈಯರ್ ಖರೀದಿಸಿ ಅದರ ಮೊತ್ತದ ಜೊತೆಗೆ ಶ್ರೀಧರ ಸ್ವಾಮಿಗಳು ಇವರಲ್ಲಿಗೆ ಬಂದಾಗ ಆಶೀರ್ವಚನ ನೀಡಿ ಕೊಟ್ಟ ಬೆಳ್ಳಿ ನಾಣ್ಯವನ್ನು ನಮಗೆ ಕೊಟ್ಟು ಉದ್ಯಮ ಒಳ್ಳೆಯದಾಗಲಿ ಎಂದು ಆಶಿರ್ವದಿಸಿದ್ದರು.. ಗುರಣ್ಣ ಇಂದು ನಮ್ಮೊಂದಿಗಿಲ್ಲ. ಆದರೆ ಅವರ ಶುಭಾಶಿರ್ವಾದದಿಂದಾಗಿ ನಮ್ಮ ಉದ್ಯಮ ಚೆನ್ನಾಗಿ ನಡೆದುಕೊಂಡು ಹೋಗುತ್ತಿದೆ..
ಇನ್ನು ಅವರ ಮಗ ಶಶಾಂಕ ವರ್ಕ ಫ್ರೊಮ್ ಹೋಂ ಕೆಲಸ ಮಾಡುತ್ತಲೇ ಅವರಮ್ಮ ಮಾಡುವ ಬಹುವಿಧದ ಅಂಜೂರದ ಮೌಲ್ಯವರ್ಧಿತ ಉತ್ಪನ್ನಗಳನ್ನು ಮಾರ್ಕೇಟು ಮಾಡುತ್ತಿದ್ದಾರೆ… ಹತ್ತರೊಳಗೆ ಇನ್ನೊಂದು ಎನ್ನಿಸಿದ ಅಂಜೂರವನ್ನು ಮುನ್ನೆಲೆಗೆ ತಂದು ನಿಲ್ಲಿಸಿದ ಹಿರಿಮೆ ಶಶಾಂಕ ಅವರಿಗೆ ಸಲ್ಲುತ್ತದೆ. ಇತ್ತೀಚೆಗೆ ಅವರು ತಂದ ಅಂಜೂರದ ಸುಪಾರಿ ತುಂಬಾ ಚೆನ್ನಾಗಿದೆ. ಅದರ ಮೇಲೆ ಬೆಳಕು ಚೆಲ್ಲುವ ಕೆಲಸ ಬಾಕಿ ಉಳಿಸಿಕೊಂಡ ಬಗ್ಗೆ ನಾನು ಮತ್ತೊಮ್ಮೆ ತಲೆ ಚಚ್ಚಿಕೊಂಡೆ.
ಶಶಾಂಕನ ಕುರಿತು ಮನಸ್ಸಿನಲ್ಲಿ ಎಣಿಸಿಕೊಳ್ಳುವ ಹೊತ್ತಿಗೆ ತಮ್ಮೂರು “ಮರಿಕೆ'” ಯನ್ನೇ ಐಸ್ಕ್ರೀಮಿನ ಬ್ರಾಂಡ್ ಆಗಿಸಿಕೊಂಡು ಅದರ ಮಾರುಕಟ್ಟೆಯ ಉಸ್ತುವಾರಿ ನೋಡಿಕೊಳ್ಳುತ್ತಿರುವ ಅವರ ಮಗ ಸುಹಾಸ್ ಬಂದರು. ಅವರು ತಮ್ಮ ಐಸ್ಕ್ರೀಮು ಮಾರುಕಟ್ಟೆಯ ಉದ್ದೇಶಕ್ಕೆ ಪುತ್ತೂರಿನಲ್ಲಿ ಒಂದು ಔಟ್ ಲೆಟ್ ಇಟ್ಟುಕೊಂಡಿದ್ದಾರೆ. ಐಸ್ಕ್ರೀಮಿನ ಜೊತೆಗೆ ಸಾವಯವದಲ್ಲಿ ಬೆಳೆದ ಹಳ್ಳಿಮನೆ ಹಣ್ಣು ಹಂಪಲು ಇತ್ಯಾದಿಗಳು ಅಲ್ಲಿ ಸಿಗುತ್ತವೆ.

ಅವರ ಮರಿಕೆ ಬ್ರಾಂಡ್ ಐಸ್ಕ್ರೀಮನ್ನು ಸಭೆ ಸಮಾರಂಭಗಳಿಗೆ ಮಾತ್ರ ಕೊಡುತ್ತಾರೆ.. ಸ್ಕೂಪ್ ವಿಧಾನದಲ್ಲಿ ಲಭ್ಯ.. ಅವರ ಕೌಂಟರ್ರಿನಲ್ಲಿ ಕೂಡ ಇದು ಲಭ್ಯವಿದೆ.
ನಮ್ಮಲ್ಲಿ ಸ್ಕೂಪು, ಸ್ಲೈಸಿಗಿಂತ ಹೆಚ್ಚಿನದಾಗಿ ಕಪ್ ಐಸ್ಕ್ರೀಮು ಬಯಸುತ್ತಾರೆ.. ಸ್ಪರ್ಧಾತ್ಮಕ ದರ ಇರುವ ಕಾರಣ ನಮ್ಮದು ಇನ್ನೂ ಪ್ಲಾಸ್ಟಿಕ್ ಕಪ್ಪೇ ಚಾಲ್ತಿಯಲ್ಲಿದೆ.. ಅವರಲ್ಲಿ ಅಪರೂಪಕ್ಕೆ ಕಪ್ ಐಸ್ಕ್ರೀಮು ಕೂಡ ಕೊಡುವ ಪದ್ಧತಿ ಇದೆ ಆದರೂ ಅವರು ಅಡಿಕೆ ಹಾಳೆಯಲ್ಲಿ ಮಾಡಿದ ವಿಶೇಷ ವಿನ್ಯಾಸದ ಕಪ್ಪಿನಲ್ಲಿ ಕೊಡುತ್ತಾರೆ.. ಅದು ಸುಳ್ಯದ್ದು ಎಂದು ಹೇಳಿದರು.. ಮುಂದಿನ ದಿನಗಳಲ್ಲಿ ನಾವೂ ಕೂಡ ಈ ಬಗ್ಗೆ ಚಿಂತಿಸಬೇಕು ಎಂದು ಮಾತಾಡಿಕೊಂಡೆವು..
ಡ್ರೈಯರ್ರಿನ ಕಲೆಕ್ಷನ್ ಕೊಟ್ಟು ಯಥೋಚಿತ ಟಿಪ್ಸನ್ನೂ ಕೊಟ್ಟು ಅವರ ಐಸ್ಕ್ರೀಮಿನ ಘಟಕಕ್ಕೆ ಎಂಟ್ರಿ ಕೊಟ್ಟೆವು.. ಬಹು ವಿಧದ ಐಸ್ಕ್ರೀಮು ತಿಂದಿದ್ದಾಯಿತು.. ಅರಿಷಿಣ ಎಲೆಯ ಫ್ಲೆವರ್ರಿನ ಐಸ್ಕ್ರೀಮು ಇಷ್ಟವೂ ಆಯಿತು.
ಐಸ್ಕ್ರೀಮು ಉದ್ಯಮದ ಜೊತೆಗೆ ಈಗ ಪಿಎಂಎಫ್ಎಂಇ ಯೋಜನೆಯಲ್ಲಿ ಅವರೀಗ ಹಲ್ವಾ ತಯಾರಿಸುತ್ತಿದ್ದಾರೆ.. ಅದಕ್ಕೂ ಬೇಡಿಕೆ ಇದೆ ಎಂದು ಹೇಳಿದರು..ನಮಗಿದು ಹೊಸ ಹೊಳವು..
ಹೀಗೆ ಹೊಸ ಹೊಳವು, ಹೊಸ ಹುರುಪು, ಎಲ್ಲವನ್ನೂ ಸೇರಿಸಿಕೊಂಡು ಹೊಸ ಉತ್ಸಾಹದೊಂದಿಗೆ ಮುಂದಿನ ಕೆಲಸಕ್ಕೆ ಹೊರಟೆವು.. ಈ ರೀತಿಯ ಪ್ರವಾಸ, ಅನುಭವ, ದೇಖರೇಖೆಗಳು ನಮಗೆ ಹೊಸತಲ್ಲ.. ಆದರೆ ನಮ್ಮ ಅಳಿಮಯ್ಯನಿಗೆ ಮಾತ್ರ ಹೊಸತು..
ಕಲಿತಷ್ಟೂ ಉಂಟು ಮಾರಾಯ.. ಈ ಪ್ರವಾಸದಿಂದ ನಾವೇನು ಕಲಿತೆವು, ನಾವೇನು ಅಳವಡಿಸಿಕೊಳ್ಳಬಹುದು ಎಂದಷ್ಟೇ ನಾವು ಯೋಚಿಸೋಣ ಎಂದು ಚರ್ಚಿಸುತ್ತಾ ಮುಂದಿನ ಗಮ್ಯ ಸೇರಿದಾಗ ಸಮಯ ಜಾರಿದ್ದೇ ಗೊತ್ತಾಗಲಿಲ್ಲ….
- ನಾಗೇಂದ್ರ ಸಾಗರ್
