ಅನನ್ಯ ಕಲಾವಿದ ಸೀತಾರಾಮಣ್ಣ

ಸೀತಾರಾಮಣ್ಣ ಅವರ ಪ್ರತಿಭೆಯನ್ನು ಕೇವಲ ಸಂಗ್ಯಾ ಬಾಳ್ಯ ನಾಟಕ ಪ್ರಸಂಗಕ್ಕಷ್ಟೇ ಸೀಮಿತ ಮಾಡಿ ಬಿಟ್ಟರೆ ದೊಡ್ಡ ಪ್ರಮಾದ ಆಗಬಹುದು. ಅವರ ಬುಲ್ ಬುಲ್ ಸಿತಾರ್ ವಾದನ ನೆನಪಿಗೆ ಬರುತ್ತದೆ. ಈ ವಾದನ ಸ್ವತಃ ಅವರ ಪರಿಶ್ರಮದ ಧ್ವನಿ. ಅವರ ಈ ಕಲೆಗೆ ಯಾವುದೇ ಗುರುವಿನ ಅನುಗ್ರಹ ಇಲ್ಲ.ಸ್ವತಃ ಅವರೇ ನುಡಿಸಿ ನುಡಿಸಿ ಪಕ್ವತೆ ಪಡೆದದ್ದು. ಅವರ ಪ್ರತಿಭೆ ಕುರಿತು ನಾಗೇಂದ್ರ ಸಾಗರ್ ಅವರು ಅನಾವರಣ ಮಾಡಿದ್ದಾರೆ, ತಪ್ಪದೆ ಮುಂದೆ ಓದಿ…

ಸಾಗರ ತಾಲೂಕಿನ ಹಾರೆಗೊಪ್ಪದವರಾದ ಸೀತಾರಾಮ ನಮ್ಮ ನಡುವೆ ಇರುವ ಒಬ್ಬ ಅತ್ಯಂತ ಹಿರಿಯ, ಸಜ್ಜನಿಕೆಯ ಅಪರೂಪದ ಅನನ್ಯ ಕಲಾವಿದರು. ಇತ್ತೀಚೆಗೆ ಅವರನ್ನು ಭೇಟಿ ಮಾಡಿ ಚುಟುಕು ಮಾತನಾಡುವ ಪ್ರಸಂಗ ಒದಗಿ ಬಂದದ್ದು ನನ್ನ ಬದುಕಿನ ಅಮೂಲ್ಯ ಕ್ಷಣಗಳಾದವು.

ಹಾರೆಗೊಪ್ಪ ಸೀತಾರಾಮಣ್ಣ ಎಂದರೆ ಸಾಗರ ಭಾಗದಲ್ಲಿ ತಟಕ್ಕನೆ ನೆನಪಿಗೆ ಬರೋದೆ ಅವರ ಸಂಗ್ಯಾ ಬಾಳ್ಯ ನಾಟಕ.. ಈಗಾಗಲೇ ನಾಡಿನಾದ್ಯಂತ ಚಿರಪರಿತವಾದ ಪ್ರಸಂಗವನ್ನು ಮಲೆನಾಡ ಭಾಗದಲ್ಲಿ ಕೇವಲ ಗೀತೆ ಮತ್ತು ನರ್ತನದ ಸೊಬಗು ತುಂಬಿ ಪ್ರೇಕ್ಷಕರ ಮೆಚ್ಚುಗೆ ಗಳಿಸುವುದು ಸುಲಭದ ಮಾತಲ್ಲ… ನಾಲ್ಕೂವರೆ ದಶಕಗಳ ಹಿಂದೆ ಸೀತಾರಾಮರು ತಮ್ಮ ಸಮಕಾಲೀನ ಗೆಳೆಯರೊಡಗೂಡಿ ಕಟ್ಟಿ ಕೊಟ್ಟ ಈ ಪ್ರಸಂಗ ಹೊಸ ಪೀಳಿಗೆಯ ಹುಡುಗರ ಕೈಗೆ ಬಂದರೂ ಇಂದಿಗೂ ಅದೇ ಅನನ್ಯತೆಯನ್ನು ಉಳಿಸಿ ಕೊಂಡಿದೆ ಎಂದರೆ ಅದರ ಹಿಂದಿನ ಗಟ್ಟಿತನ ಏನು ಎಂದು ಗೊತ್ತಾಗುತ್ತದೆ.

ಸೀತಾರಾಮಣ್ಣನವರಿಗೆ ಇದೇ ಮಾತನ್ನು ನಾನು ಮನಃಪೂರ್ವಕವಾಗಿ ಹೇಳಿದಾಗ ಅವರ ಮುಖ ಭಾವದಲ್ಲಿ ಅರಳಿದ ಆ ಸುಪ್ರಸನ್ನತೆಯ ನಗುವಿದೆಯಲ್ಲ ಅದು ಬಹುಕಾಲ ನನ್ನ ನೆನಪಿನಲ್ಲಿ ಉಳಿಯುತ್ತದೆ.. ಹಾಗೆಯೇ ಇದೇ ಸಂಗ್ಯಾ ಬಾಳ್ಯದ ಕುರಿತಾದ ಪುಸ್ತಕಗಳನ್ನು ನನಗೆ ಕೊಡುವಾಗ ಗೆಳೆಯ ರಾಧಾಕೃಷ್ಣ ಬಂದಗದ್ದೆ ತೆಗೆದ ಫೋಟೋ ಕೂಡ ನನ್ನ ಫೋಟೋ ಗ್ಯಾಲರಿಯಲ್ಲಿ ವಿಶೇಷವಾದ ಸ್ಥಾನ ಪಡೆದಂತಾಯಿತು.

ಸೀತಾರಾಮಣ್ಣ ಅವರ ಪ್ರತಿಭೆಯನ್ನು ಕೇವಲ ಸಂಗ್ಯಾ ಬಾಳ್ಯ ನಾಟಕ ಪ್ರಸಂಗಕ್ಕಷ್ಟೇ ಸೀಮಿತ ಮಾಡಿ ಬಿಟ್ಟರೆ ದೊಡ್ಡ ಪ್ರಮಾದ ಆದೀತು.. ಅವರೆಂದ ಕೂಡಲೆ ಅವರ ಬುಲ್ ಬುಲ್ ಸಿತಾರ್ ವಾದನ ಕೂಡ ಜೊತೆಯಾಗಿ ನೆನಪಿಗೆ ಬರುತ್ತದೆ.. ಈ ವಾದನ ಸ್ವತಃ ಅವರ ಪರಿಶ್ರಮದ ಧ್ವನಿ.. ಅವರ ಈ ಕಲೆಗೆ ಯಾವುದೇ ಗುರುವಿನ ಅನುಗ್ರಹ ಇಲ್ಲ.. ಸ್ವತಃ ಅವರೇ ನುಡಿಸಿ ನುಡಿಸಿ ಪಕ್ವತೆ ಪಡೆದದ್ದು.

ಆಗಿನ ಕಾಲದಲ್ಲಿ ರೇಡಿಯೋ ಆಲಿಸಿ ಈ ವಾದನದ ನಾದವಾಗಿಸಿದ್ದರು.. ಬುಲ್ ಬುಲ್ ಸಿತಾರ್ ವಾದನಕ್ಕೆ ಅದರದೇ ಆದ ಚೌಕಟ್ಟಿದೆ.. ಲಿಮಿಟೇಶನ್ ಇದೆ.. ಅಂತಹ ಚೌಕಟ್ಟು ಇಟ್ಟುಕೊಂಡೂ ಇವರು ಅದನ್ನು ನಾದಮಯ ಆಗಿಸಿದ್ದರಲ್ಲಿಯೇ ಇವರ ವಿಶೇಷತೆ ಇದೆ.

ಅಂದಿನದು ನನ್ನದು ಚುಟುಕು ಅವಧಿಯ ಭೇಟಿ ಆದ ಕಾರಣಕ್ಕೆ ಅವರಿಂದ ಆ ಹೊತ್ತಿನಲ್ಲಿ ಈ ವಾದನವನ್ನು ನುಡಿಸಿ ಕೇಳುವ ಮತ್ತು ನಿಮಗೂ ಕೇಳಿಸುವ ಅವಕಾಶ ಆಗದೇ ಹೋದ ಕಸಿವಿಸಿ ನನ್ನದಾಯಿತು.. ಇನ್ನೊಮ್ಮೆ ಬಿಡುವು ಮಾಡಿಕೊಂಡು ಈ ಅವಕಾಶ ಪಡೆಯ ಬೇಕು.

ಸೀತಾರಾಮಣ್ಣನವರ ಜಗುಲೀ ಕಟ್ಟೆಯಲ್ಲಿ ಎದ್ದು ಕಾಣುವುದು ಅವರು ಇತ್ತೀಚಿನ ವರ್ಷಗಳಲ್ಲಿ ರೂಢಿಸಿಕೊಂಡು ಬರೆದ ಬಿಳಿಯ ಹಾಳೆಯ ಮೇಲೆ ಕಪ್ಪು ಇಂಕು ಬಳಸಿ ಬರೆದ ಚಿತ್ರಗಳು.. ಕೇವಲ ವ್ಯಕ್ತಿ ಚಿತ್ರಗಳು ಅಲ್ಲದೇ ಪ್ರಕೃತಿ ಮತ್ತು ಸ್ಥಳಗಳ ಕುರಿತ ಚಿತ್ರಗಳು ವಿಶೇಷದ್ದು ಆಗಿವೆ.

ಚಿಟ್ಟಾಣಿಯವರ ಅದ್ಭುತ ಅಭಿನಯವನ್ನು ಸಾರಿ ಹೇಳುವ ಅವರ ಮುಖಭಾವದ ಚಿತ್ರಿಕೆ ಇದೆಯಲ್ಲಾ ಅದು ಅದ್ಭುತ… ಅದನ್ನು ನೋಡಿದಾಕ್ಷಣ ನಾವು ಯಕ್ಷಲೋಕಕ್ಕೇ ಪಯಣಿಸಿ ಬಿಡುತ್ತೇವೆ.. ಹಾಗೆಯೇ ಗಂಡು ಹೆಣ್ಣಿನ ಜೋಡಿ ಕುಳಿತು ಭಾವ ಪ್ರಪಂಚದಲ್ಲಿ ಕಳೆದು ಹೋದ ಚಿತ್ರಿಕೆ ಕೂಡ ಜೀನಿಯಸ್ಸಾಗಿ ನನಗೆ ಕಂಡಿತು.

ಸೀತಾರಾಮಣ್ಣನಿಗೆ ಈಗ ವಯಸ್ಸು ಎಂಬತ್ತೆರಡು.. ವಯೋ ಸಹಜವಾದ ಆರೋಗ್ಯ ಸಮಸ್ಯೆ ಹಾಗೆ ಹೇಳುವಂತದ್ದೇನೂ ಇಲ್ಲ.. ಅದನ್ನು ಮೀರಿದ ಕಾರ್ಯ ಚಟುವಟಿಕೆ ಅವರದ್ದು.. ತಮ್ಮ ಈ ತುಡಿತ ವಯಸ್ಸಿನ ಕಾರಣಕ್ಕೆ ಕೇವಲ ತಮ್ಮ ಜಗಲೀಕಟ್ಟೆಗೆ ಸೀಮಿತ ಆಯಿತಲ್ಲ ಎನ್ನುವ ವಯೋ ಸಹಜ ಕಸಿವಿಸಿ ಅವರದ್ದು… ಹಾಗಂತ ಇಂದಿಗೂ ಅಲ್ಲಿ ಇಲ್ಲಿ ಮಲೆ ನಾಡಿನ ಮನೆಯಂಗಳದಲ್ಲಿ ಆಡುತ್ತಲೇ ಇರುವ, ಆಗುತ್ತಲೇ ಇರುವ ಸಂಗ್ಯಾ ಬಾಳ್ಯ ಗೀತ ನೃತ್ಯ ಪ್ರದರ್ಶನದ ಹಿಂದೆ ಅವರ ಪ್ರಭಾವಳಿ ಇದ್ದೇ ಇರುತ್ತದೆ.

ಸೀತಾರಾಮಣ್ಣನವರ ಈ ಕಲಾ ಚಟುವಟಿಕೆಗೆ ಮುಖ್ಯ ಪ್ರೇರೇಪಣೆಯೇ ಅವರ ತಂದೆ ಗಣಪತಿಯವರು.. ಯೌವನದ ದಿನಗಳಲ್ಲಿ ಇವರು ತಮ್ಮ ವಯೋಮಾನದ ಯುವಕರನ್ನು ಕಟ್ಟಿಕೊಂಡು ಭಾರತಿ ಕಲಾವಿದರು ಎಂಬ ರಂಗಾಸಕ್ತಿಯ ಟೋಳಿಯನ್ನು ಕಟ್ಟಿ ಬೆಳೆಸಿದರು.. ಹುಲ್ಲು ಮಾಡಿನ ಗುಡಿಸಲೇ ತಾಲೀಮು ಕೇಂದ್ರ.. ಸಮಾನ ಆಸಕ್ತಿಯ ಟೀಮಿನ ಎಲ್ಲರ ಅಭಿರುಚಿ, ಕಾಳಜಿ ನಿಸ್ಸಂದೇಹವಾಗಿ ನಿಸ್ಪ್ರಹತೆಯಿಂದ ಕೂಡಿದ್ದ ಕಾರಣಕ್ಕೆ ಸಾಂಘಿಕ ಪ್ರಯತ್ನ ಯಶಸ್ವಿ ಆಗುತ್ತಿತ್ತು.. ಇದೇ ಕಾರಣಕ್ಕಾಗಿ ವರ್ಷಗಳುರುಳಿದರೂ ತಲೆಮಾರು ಬದಲಾದರೂ ಕೆಳದಿಯ ಭಾರತಿ ಕಲಾವಿದರು ಇಂದಿಗೂ ಕ್ರಿಯಾಶೀಲವಾಗಿದೆ.

ಸೀತಾರಾಮಣ್ಣನನ್ನು ಬಹಳ ಹತ್ತಿರದಿಂದ ನೋಡಿ ಬಲ್ಲ ಅದೇ ಊರಿನ ನನ್ನ ಹಿರಿಯ ಗೆಳೆಯ ಬಿ. ವಿ. ಅನಂತರಾಮು ಅವರ ಈ ಕಲಾ ಸಿದ್ಧಿಯ ಬಗ್ಗೆ ಬಲು ಹೆಮ್ಮೆ ಪಡುತ್ತಾರೆ.. ಈ ನಾಟಕದ ಪ್ರದರ್ಶನ ಪ್ರೇಕ್ಷಕರಿಗೆ ಒಂದು ಹಬ್ಬ ಆದರೆ ಅದರ ಹಿಂದಿನ ತಾಲೀಮು ಮತ್ತು ತಯಾರಿಯೇ ಇನ್ನೊಂದು ಹಬ್ಬ ಅನ್ನುತ್ತಾರೆ.. ಅಂದಿಗೂ ಇಂದಿಗೂ ಈ ಪ್ರದರ್ಶನದ ಹಿಂದೆ ಯಾವುದೇ ಬಡಿವಾರಗಳೇ ಇಲ್ಲ.. ಹೆಚ್ಚೂ ಕಡಿಮೆ ಇದು ನೂರಕ್ಕೂ ಹೆಚ್ಚಿನ ಪ್ರಸಂಗ ಕಂಡಿದೆ.. ಇಂದಿಗೂ ಅದು ಸೊಬಗು ಮತ್ತು ಸೊಗಡನ್ನು ಉಳಿಸಿಕೊಂಡಿದೆ ಎಂದರೆ ಅದಕ್ಕೆ ಅದರಲ್ಲಿ ಪ್ರತಿಯೊಬ್ಬರ ಇನ್ವಾಲ್ಮೆಂಟೇ ಕಾರಣ ಎನ್ನುತ್ತಾರೆ.

ಸಂಗ್ಯಾ ಬಾಳ್ಯದ ಪ್ರಸ್ತುತಿಯಲ್ಲಿ ಯಾರೂ ಇಲ್ಲಿ ದೊಡ್ಡ ಲೀಡರ್ ಅಲ್ಲ.. ಅನಿವಾರ್ಯರೂ ಅಲ್ಲ.. ರಂಗದ ಮೇಲಿನ ಮತ್ತು ಹಿಂದಿನ ಕಲಾವಿದರಲ್ಲಿ ಹೆಚ್ಚುಗಾರರು ಅಂತ ಹೇಳಿಲ್ಲ. ಪ್ರತಿಯೊಬ್ಬರ ಸಾಂಘಿಕ ಪ್ರಯತ್ನ ಮಾತ್ರದಿಂದಲೇ ಸಂಗ್ಯಾ ಬಾಳ್ಯ ಗೆದ್ದಿದೆ.. ಮೇಲಿಂದ ಮೇಲೆ ರಂಗಾಸಕ್ತರಿಗೆ ಖುಷಿ ಕೊಡುತ್ತಿದೆ. ರಂಗಾಸಕ್ತರಿಗೆ ಈ ಖುಷಿಯನ್ನು ಕೊಟ್ಟ ಕೀರ್ತಿ ಸೀತಾರಾಮಣ್ಣ ಅವರದ್ದಾಗಿದೆ.. ಇಂತಹ ಅಪರೂಪದ ವ್ಯಕ್ತಿತ್ವದ ಹಿರಿಯರೊಡನೆ ನನ್ನ ಭೇಟಿ ನನಗೊದಗಿದ ಸೌಭಾಗ್ಯದ ಕ್ಷಣಗಳಾಗಿದ್ದವು.


  • ನಾಗೇಂದ್ರ ಸಾಗರ್ 

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading