ಹಾಸ್ಯ ನಟ ಬ್ಯಾಂಕ್ ಜನಾರ್ಧನ್ ಅವರು ಸರಿ ಸುಮಾರು ೮೬೦ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಮೂರು ಬಾರಿ ಬೈಪಾಸ್ ಸರ್ಜರಿಗೆ ಒಳಗಾಗಿದ್ದ ಬ್ಯಾಂಕ್ ಜನಾರ್ಧನ್ ಏಪ್ರಿಲ್ ಹದಿನಾಲ್ಕನೇ ತಾರೀಖು ಕೊನೆಯುಸಿರೆಳೆದಿದ್ದಾರೆ. ಅವರಿಗೆ ಭಾವಪೂರ್ವಕ ನಮನಗಳು…
ಇಂದಿನ ತಲೆಮಾರಿನ ಬೆರಳೆಣಿಕೆಯಷ್ಟು ಹಾಸ್ಯ ನಟರ ಹಾಸ್ಯ ಮತ್ತು ಸಂಭಾಷಣೆ ಕುಚೋದ್ಯ ಭರಿತ ವ್ಯಂಗ್ಯದಿಂದ ಸೊಂಟದ ಕೆಳಗಿನ ವಿಷಯದ ಜೊತೆಗೆ ಅಶ್ಲೀಲತೆಯಿಂದ ಕೂಡಿರುತ್ತದೆ. ಒಂದರ್ಥದಲ್ಲಿ ಡಬಲ್ ಮೀನಿಂಗ್ ಅಂದ್ರೆ ತಪ್ಪಾಗಲಾರದು.ಕೂಡು ಕುಟುಂಬದ ಮನೆ ಹಿರಿಯ ಸದಸ್ಯರ ಜೊತೆ ಇಂಥಹ ಹಾಸ್ಯ ಸನ್ನಿವೇಶವನ್ನು ನೋಡೋದಕ್ಕೆ ಸೂಕ್ಷ್ಮಮತಿಗಳಿಗೆ ಮುಜುಗರವೆನಿಸುವುದು ಸಹಜವೇ.ಆದರೆ ತೊಂಬತ್ತರ ದಶಕದ ಕೆಲವು ಹಾಸ್ಯ ನಟರು ಇದಕ್ಕೆ ಅಪವಾದ ಎಂಬುದು ನನ್ನ ಅನಿಸಿಕೆ. ಆ ಸಾಲಿನಲ್ಲಿ ಪ್ರಮುಖವಾಗಿ ನಿಲ್ಲುವವರು ಹಿರಿಯ ಕಲಾವಿದರಾದ ಬ್ಯಾಂಕ್ ಜನಾರ್ಧನ್. ಕಳೆದ ಎರಡು ದಶಕಗಳಿಂದ ಇವರ ಹಾಸ್ಯವನ್ನು ನೋಡುತ್ತಾ ಬೆಳೆದವರು ನಾವು..
ಯಾವುದಾದರೂ ಒಂದು ಘಳಿಗೆಯಲ್ಲಿ ಹಾಸ್ಯ ನೆನೆಸಿಕೊಂಡರೆ ಜೋರು ನಗು ಬರುತ್ತದೆ ಅನ್ನೋದಕ್ಕೆ ನಾನು ಕೊಡು ಏಕಮಾತ್ರ ಉದಾಹರಣೆ ಉಪೇಂದ್ರ ನಿರ್ದೇಶನದ ಕಾಶೀನಾಥ್ ಅಭಿನಯದ ಶ್!!! ಚಿತ್ರದ ಪೊಲೀಸ್ ಕಾಳಯ್ಯನ ಪಾತ್ರ.”ಥೂ ಬೇವರ್ಸಿ ಕುಂಟ್ ನನ್ ಮಗ ಯಾವಳ್ ಹಿಂದೆ ಓಡೋಹೋದ್ನೇನೋ ಈ ರಂಡೆ ಯಾವನ್ ಹಿಂದೆ ಓಡೋಹೋದ್ಲೇನೋ ಇವರನ್ ಕಂಡುಹಿಡಿಯೋಕೆ ನಾನ್ ಬೇರೆ ಹೋಗ್ಬೇಕು, ನನಗೆನ್ ಬೇರೇನ ಕೆಲಸ ಇಲ್ಲ?? ಯಾವಗ್ ಸಿಕ್ರೂ ಏನಾಯ್ತು ಸರ್ ಏನಾಯ್ತು ಸರ್?? ಅಲ್ ನೋಡಿದ್ರೆ ಆ ನನ್ ಮಕ್ಳು ಕಾಟ ಇಲ್ ನೋಡಿದ್ರೆ ಈ ನನ್ ಮಕ್ಳ್ ಕಾಟ ಈ ಮಧ್ಯ ಈ ಸಿನಿಮಾ ನನ್ ಮಕ್ಕಳ ಕಾಟ ಬೇರೆ”ಎಂದು ಆಕ್ರೋಶ ತುಂಬಿದ ಹಾಸ್ಯ ಸಂಭಾಷಣೆಯಲ್ಲಿ ಬೈಕ್ ಕಿಕ್ ಒದಿಯುತ್ತಾ “ಥೂ ಈ ಹಲಕಟ್ ಬೈಕ್ ಒಂದು ಸ್ಟಾರ್ಟ್ ಆಗಲ್ಲ” ಅಂತ ಪೊಲೀಸ್ ಪಾತ್ರದಲ್ಲಿ ಪರಿಪೂರ್ಣವಾಗಿ ಒಳಹೊಕ್ಕಿದ ಇವರ ಶ್!!! ಚಿತ್ರದ ಅಭಿನಯ ಕಂಡಾಗ ಬಿದ್ದು ಬಿದ್ದು ನಕ್ಕಿದ್ದಿದೆ.ಅಷ್ಟೆ ಏಕೆ?? ಬೇರೊಂದು ಕೆಲಸದಲ್ಲಿ ನಿರತನಾಗಿದ್ದಾಗ ಶ್!!! ಚಿತ್ರದ ಈ ದೃಶ್ಯ ಬ್ಯಾಂಕ್ ಜನಾರ್ಧನ್ ರವರ ಹಾಸ್ಯ ನೆನಪಾದರೆ ಅಲ್ಲೇ ಜೋರಾಗಿ ನಕ್ಕಿದ್ದಿದೆ.ಎದುರಿಗಿದ್ದವರು ಪಕ್ಕದಲ್ಲಿದ್ದವರು ಏನಾಯ್ತು?? ಎಂದು ಕುತೂಹಲಭರಿತವಾಗಿ ನಿನಗೇನು ಹುಚ್ಚ ಸುಮ್ ಸುಮ್ನೆ ನಗ್ತಿಯಾ ಎಂದು ಮರುಪ್ರಶ್ನೆ ಮಾಡಿದ್ದಿದೆ?? ಆ ಮಟ್ಟದ ಅಟ್ಟಹಾಸದ ನಗು ತರಿಸುತಿತ್ತು.

ಕಲಾಮಾಧ್ಯಮದ ಸಂದರ್ಶನದಲ್ಲಿ ಇವರು ಹೇಳಿಕೊಂಡಿದ್ದಿದೆ. ರಾಜಣ್ಣ ಮೂರ್ ಸರಿ ಶ್!!! ಸಿನಿಮಾ ನೋಡಿದ್ರು. ಆ ಖಾಕಿ ಪಾತ್ರದಲ್ಲಿ ಬೈದಿದ್ದೀರಿ ಬೈದಿದ್ದೀರಿ ಬೈದಿದ್ದೀರಿ ಎಲ್ಲಿಂದ ಬೈಯೋದನ್ನ ಕಲಿತಿರಿ?? ಎಲ್ಲರೂ ನನಗೆ ಹೇಳ್ತಾರೆ ನಾನು ನಿಮ್ಮ ಅಭಿಮಾನಿ ಅಂದುಕೊಂಡು ಆದರೆ ನಾನು ನಿಮಗೆ ಹೇಳ್ತೀನಿ ಈ ಸಿನಿಮಾ ನೋಡಿ ನಾನು ನಿಮ್ಮ ಅಭಿಮಾನಿ ಎಂದು ಸಿಕ್ಕಾಗಲ್ಲ ಕೊಳ್ಳೆಂದು ನಗೋರು ಅಂತ ನಕ್ಕಿದ್ದಿದೆ. ಈ ರಸಾನುಭವ ನನಗೂ ಆಗಿತ್ತು. ಆದರೆ ಇಂದು ಬೆಳಿಗ್ಗೆ ಹಲ್ಲು ಉಜ್ಜುತ್ತ ನ್ಯೂಸ್ ತೆರೆದಾಗ ಬ್ಯಾಂಕ್ ಜನಾರ್ಧನ್ ಇನ್ನಿಲ್ಲ ಎಂಬ ಸುದ್ದಿ ಓದಿ ನಿಜಕ್ಕೂ ಮನಸ್ಸಿಗೆ ಸೂತಕ ಆವರಿಸಿದಂತಾಯಿತು. ಅದೇಕೋ ಗೊತ್ತಿಲ್ಲ?ನನ್ನ ಬದುಕಿನ ಭಾಗವೇ ಆಗಿದ್ದ ಓರ್ವ ಸದಸ್ಯ ತೀರಿಕೊಂಡರು ಎಂಬುವಷ್ಟರ ಮಟ್ಟಿಗೆ ಸುಮ್ಮನೆ ಕುಳಿತೆ. ಇತ್ತೀಚಿಗೆ ಹಿರಿಯ ಪತ್ರಕರ್ತ ಗಣೇಶ್ ಕಾಸರಗೋಡುರವರು ಸುದ್ದಿಮನೆ ವಾಹಿನಿಯಲ್ಲಿ ನಡೆಸಿಕೊಟ್ಟ ಇವರ ಸಂದರ್ಶನವನ್ನು ನೋಡಿದ್ದೆ. ತೀರಾ ಅಸ್ವಸ್ಥರಾಗಿದ್ದರು. ಕಳೆದ ಕೆಲವು ವರ್ಷಗಳ ಹಿಂದೆ ಅವರಿಗೆ ಲಘು ಹೃದಯಘಾತವಾಗಿತ್ತು. ಅದೃಷ್ಟವಶಾತ್ ಚೇತರಿಸಿಕೊಂಡಿದ್ದರು .ಆದರೆ ಇಂದು ಕಾಲನ ಕರೆಗೆ ಓಗೊಟ್ಟು ತೆರಳಿದ್ದಾರೆ.ಮೃತರ ಆತ್ಮಕ್ಕೆ ಶಾಂತಿ ಸಿಗಲಿ…
- ನಿತಿನ್ ಅಂಕೋಲಾ
