ಈಚೀಚೆಗೆ ನನಗೇಕೋ ಸ್ತ್ರೀವಾದವೆಂದರೆ ಮಹಿಳೆಯರು ತಮ್ಮ ಶಕ್ತಿಯ ಸಂಪೂರ್ಣ ಸಾಮರ್ಥ್ಯಕ್ಕೆ ಪೂರ್ತಿಯಾಗಿ ಅರಳುವುದೇ ಎನಿಸುತ್ತಿದೆ. ಹೀಗೆ ಎನಿಸುವುದಕ್ಕೆ ಕಾರಣ ಇತ್ತೀಚೆಗೆ ಬಿಡುಗಡೆಯಾದ ನಾಗಮಣಿ ಎಸ್. ರಾವ್ ಅವರ ‘ಸುದ್ದಿ ಸಂಗಾತಿಯ ಸ್ವಗತ’.ಈ ಕೃತಿಯ ಕುರಿತು ಹಿರಿಯ ಲೇಖಕಿ ಗಿರಿಜಾ ಶಾಸ್ತ್ರಿ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ : ‘ಸುದ್ದಿಸಂಗಾತಿಯ ಸ್ವಗತ’
ಲೇಖಕರು : ನಾಗಮಣಿ ಎಸ್. ರಾವ್
ಪ್ರಕಾಶನ : ವಿಕಾಸ ಪ್ರಕಾಶನ
ಬೆಲೆ : ೨೫೦.೦೦
ಖರೀದಿಗಾಗಿ : ಮೊ: 9900095204

ನಾಗಮಣಿಯವರು ೧೯೫೭ ರಲ್ಲೇ ಪಿ.ಆರ್. ರಾಮಯ್ಯನವರು ಸ್ಥಾಪಿಸಿದ ‘ತಾಯಿನಾಡು’ ಪತ್ರಿಕೆಯಲ್ಲಿ ಉಪಸಂಪಾದಕರಾಗಿ ಸೇರಿಕೊಳ್ಳುತ್ತಾರೆ. ಅದಕ್ಕೂ ಒಂದು ವರ್ಷ ಮುಂಚೆ ‘ಜನಮಿತ್ರ’ (೧೯೫೬) ಪತ್ರಿಕೆಯಲ್ಲಿ ಕೇವಲ ಇಪ್ಪತ್ತು ವರುಷಗಳ ಯುವತಿ -ಸಹ ಸಂಪಾದಕರಾಗುತ್ತಾರೆ. ಅಂದರೆ ನಾನು ಹುಟ್ಟುವುದಕ್ಕೂ ಎರಡು ವರ್ಷಗಳ ಮುನ್ನವೇ- ೬೮ ವರುಷಗಳ ಹಿಂದೆ!! ಅವರು ಆ ಕಾಲಕ್ಕೆ ಹುಡುಗರ ಜೊತೆ ಕುಳಿತು ಅಭ್ಯಾಸ ಮಾಡಿ ಬಿ.ಎ. ಪದವೀಧರೆಯಾಗಿ ಪತ್ರಿಕಾರಂಗಕ್ಕೆ ಬಂದಿರುತ್ತಾರೆ.
ನಮ್ಮ ದೇಶದಲ್ಲಿ ಒಂದೇ ಕಾಲದಲ್ಲಿ ಎಲ್ಲಾ ಶತಮಾನಗಳೂ ಬದುಕಿರುತ್ತವೆ ಎಂದು URA ಹೇಳುತ್ತಿದ್ದರು, ಅದು ನಿಜ. ಇವರಿಗಿಂತ ಹತ್ತು ವರ್ಷಗಳಷ್ಟೇ ದೊಡ್ಡವರು ನನ್ನಮ್ಮ. ಏಳನೇ ತರಗತಿ ಮುಗಿದ ನಂತರ ಶಾಲೆ ಬಿಡಿಸಿ ಅಜ್ಜ ಮನೆಯಲ್ಲಿ ಕೂರಿಸಿದರು. ಅಜ್ಜನ ಮೇಲೆ ಆಕ್ಷೇಪವಿಲ್ಲ. ತಮ್ಮ ಕಾಲವನ್ನು ಮೀರುವ ಧೈರ್ಯ ಹೆಚ್ಚಿನವರಿಗೆ ಇರುವುದಿಲ್ಲ. ಕಾಲದ ಸವಾಲಿಗೆ ಬಾಗಿ ಹದಿನಾಲ್ಕು ವರ್ಷಕ್ಕೇ ಮದುವೆ ಮಾಡಿಬಿಟ್ಟರು. ಅಮ್ಮ ಕೂಡ ತುಂಬಾ ಬುದ್ಧಿವಂತೆಯಾಗಿದ್ದಳು. ಆದರೆ ಅವಳಿಗೆ ಅವಳೊಳಗಿನ ಶಕ್ತಿಯ ಸಾಮರ್ಥ್ಯಕ್ಕೆ ಪೂರ್ಣವಾಗಿ ಅರಳಲು ಸಾಧ್ಯವಾಗದೇ ಹೋಯಿತು.

ಇಂತಹ ಕಾಲದಲ್ಲೇ ನಾಗಮಣಿಯವರು ಬಿ.ಎ. ಮಾಡಿ, ಬಿ.ಎಲ್ ಮಾಡಿ, ಪತ್ರಕರ್ತೆಯಾಗಿ, ಆಕಾಶವಾಣಿಯ ಸುದ್ದಿವಾಚಕಿಯಾಗಿ, ಲೇಖಕಿಯರ ಸಂಘವನ್ನು ಕಟ್ಟಿ ಬೆಳೆಸಿ ಅದರ ಅಧ್ಯಕ್ಷೆಯೂ ಆಗಿ ಅನೇಕ ಸಾಹಿತ್ಯಕ ಕಾರ್ಯಕ್ರಮಗಳನ್ನು ರೂಪಿಸಿ ತನ್ನ ಕಾಲದ ಅನೇಕ ಮಹಿಳೆಯರಿಗೆ ಅವರವರ ಶಕ್ತಿಯ ಸ್ವರೂಪವನ್ನು ಕಂಡುಕೊಳ್ಳಲು ಮಾರ್ಗ ಹಾಕಿಕೊಟ್ಟರು. ನಾಟಕವನ್ನು ರಚಿಸಿದರು. ಪಾತ್ರವನ್ನೂ ಮಾಡಿದರು! ಹೀಗೆ ನನ್ನಮ್ಮನನ್ನಾಗಲೀ, ನನ್ನ ದೊಡ್ಡು, ಚಿಕ್ಕಿಯರನ್ನಾಗಲೀ ನಾನು ಕಲ್ಪಸಿಕೊಳ್ಳಲಾದೀತೇ? ಅಬ್ಬಾ! ಎನಿಸುತ್ತದೆ.
ಅವರ ಈ ಸಾಧನೆಗೆ ಅವರ ತಂದೆ ಮತ್ತು ಅವರ ಗಂಡ ಸತ್ಯಾಜಿ ರಾವ್ ಅವರು ನೀಡಿದ ಒತ್ತಾಸೆಯೂ ಕಾರಣವಿರಬಹುದು. ಒತ್ತಾಸೆ ನೀಡದಿದ್ದರೂ ಅದನ್ನು ಮೀರಿ ಬೆಳೆಯುವ ಶಕ್ತಿ ನಾಗಮಣಿಯವರಿಗೆ ಇತ್ತೇನೋ. ಯಾವುದೇ ಕೌಟುಂಬಿಕ ಸಂಘರ್ಷವಿಲ್ಲದೇ ಸುಲಲಿತವಾಗಿ ಗೆದ್ದು ಬಂದರು. ಮಹಿಳೆಯರ ಮಾದರಿಯಾದರು. ಅವರ ಕೌಟುಂಬಿಕ ಪರಿಸರ ತನ್ನ ಕಾಲಕ್ಕಿಂತ ಒಂದೈವತ್ತು ವರ್ಷಗಳಾದರೂ ಮುಂದಿದ್ದಿತು.
ಪ್ರತಿಯೊಬ್ಬ ಮಹಿಳೆಯೂ ಹೀಗೆ ಕಾಲಕ್ಕೆ ಸೆಡ್ಡು ಹೊಡೆದು, ಅದನ್ನು ಮೀರಿ ನಿಲ್ಲುವುದಾದರೆ, ಮುಂದೆ ಓಡಲು ಸಾಧ್ಯವಾದರೆ ಪಿತೃಪ್ರಧಾನತೆಯ ಯಾಜಮಾನ್ಯದ ಎದುರು ಮೇಜು ಗುದ್ದಬೇಕಾಗಿಲ್ಲ, ಮಹಿಳೆಯ ದಯನೀಯ ಸ್ಥಿತಿಯನ್ನು ಸ್ಥಾಪಿಸಬೇಕಾಗಿಲ್ಲ, ಚಳವಳಿ ಹೂಡಬೇಕಾಗಿಲ್ಲ ಎಂದೇ ಎನಿಸುತ್ತದೆ. ಹಾಗೆಂದಾಕ್ಷಣ ಇಲ್ಲಿ ನಾನು ಚಳವಳಿಗಳ ಮಹತ್ವವನ್ನು ಅಲ್ಲಗಳೆಯುತ್ತಿಲ್ಲ.

ನಮ್ಮ ಹೆಚ್ಚಿನ ಮಹಿಳೆಯರಿಗೆ ಗಂಡ ಮಕ್ಕಳು ಮನೆಯನ್ನು ನಿರ್ವಹಿಸುವುದೇ ದೊಡ್ಡ ಸಂಗತಿ.ಅದಕಾಗಿ ಹೊರಬರಲು ನೂರೆಂಟು ಕುಂಟು ನೆಪಗಳು. ಗಂಡಂದಿರ ಹೆಗಲ ಮೇಲೆ ಬಂದೂಕನಿಟ್ಟು ಕೆಲಸ ಸಾಧಿಸುತ್ತೇವೆ. ಅಂತಹ ಮಹಿಳೆಯರಿಗೆ ನಾಗಮಣಿ ಗುರಿ ಇಟ್ಟು ಹೊಡೆದ ಒಂದು ಉತ್ತರದಂತಿದ್ದಾರೆ.
ಗಂಡುಮಕ್ಕಳ ನಡುವೆ ಕಲಿಯುವಾಗ, ನೌಕರಿ ಮಾಡುವಾಗ, ಪತ್ರಿಕಾ ವರದಿಗೆ ಹೋಗುವಾಗ ಅವರು ಎದುರಿಸಿದ ಸಮಸ್ಯೆಗಳು ನಿಭಾಯಿಸಿದ ರೀತಿ, ಆಕಾಶವಾಣಿಯಲ್ಲಿ ಪ್ರಾಮಾಣಿಕವಾಗಿ ದುಡಿದು ಗೆದ್ದ ದೊಡ್ಡಸ್ತಿಕೆ, ಸಾಮಾಜಿಕ ಕಾರ್ಯಗಳಿಗಾಗಿ ದೊರೆತ ಕಿರೀಟಗಳು ಈ ಎಲ್ಲವುಗಳ ಮೂಲಕವೇ ಅರಳಿದ ರೀತಿ ಎಲ್ಲವನ್ನೂ ಬಹಳ ಅಚ್ಚುಟ್ಟಾಗಿ, ಆರ್ದ್ರವಾಗಿ ಅನನ್ಯವಾಗಿ ಮಾಲತಿ ಭಟ್ ಸಂಯೋಜಿಸಿಕೊಟ್ಟಿದ್ದಾರೆ. ಮಾಲತಿ ಈ ಸಾಹಸವನ್ನು ಕೈಗೊಳ್ಳದಿದ್ದರೆ ನಾಗಮಣಿಯವರ ಮೇರು ವ್ಯಕ್ತಿತ್ವ ಕೇವಲ ಅವರ ಪರಿಚಿತ ವಲಯಗಳಲ್ಲೇ ಪಸರಿಸಿ ಮರೆಯಾಗಿಬಿಡುತ್ತಿತ್ತು. ಅಂತಹ ಘನವನ್ನು ಹಿಡಿಯಲು ಯತ್ನಿಸಿರುವ ಮಾಲತಿ, ಅದನ್ನು ಪ್ರಕಾಶಕ್ಕೆತಂದ ಪೂರ್ಣಿಮಾ ರಾಜಾರಾವ್ ಅವರನ್ನು ಎಷ್ಟು ಪ್ರಶಂಸಿಸಿದರೂ ಸಾಲದು.
‘ಸುದ್ದಿಸಂಗಾತಿಯ ಸ್ವಗತ’ವನ್ನು ಮಹತ್ವಾಕಾಂಕ್ಷಿಗಳಾದ ಎಲ್ಲಾ ಮಹಿಳೆಯರೂ ಓದಲೇ ಬೇಕು. ನನಗಂತೂ ನಾಗಮಣಿಯವರ ಮೇಲೆ ತುಂಬಾ ಲವ್ ಆಗಿಬಿಟ್ಟಿದೆ. ಅದೇ ಗುಂಗಿನಲ್ಲಿದ್ದೇನೆ. ಇದಕ್ಕೆ ಕಾರಣರಾದ ಮಾಲತಿ ಭಟ್ ಮತ್ತು ವಿಕಾಸ ಪ್ರಕಾಶನದ ಪೂರ್ಣಿಮಾ ಮೇಡಂ ಅವರಿಗೆ ಅಭಿನಂದನೆಗಳು. ಶುಭಾಶಯಗಳು.ಧನ್ಯವಾದಗಳು.
- ಗಿರಿಜಾ ಶಾಸ್ತ್ರಿ
