ಕಾಳಿದಾಸನ ಮೇಘಧೂತ ಮತ್ತು ಕನ್ನಡ ರೂಪಾಂತರಗಳು

ಡಾ.ಶೈಲಜಾ ಹೆಗಡೆ ಅವರ ‘ಕಾಳಿದಾಸನ ಮೇಘಧೂತ ಮತ್ತು ಕನ್ನಡ ರೂಪಾಂತರಗಳು’ ಕೃತಿಯ ಕುರಿತು ರಘುನಾಥ್ ಕೃಷ್ಣಮಾಚಾರ್ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಪುಸ್ತಕ : ಕಾಳಿದಾಸನ ಮೇಘಧೂತ ಮತ್ತು ಕನ್ನಡ ರೂಪಾಂತರಗಳು
ಲೇಖಕರು : ಡಾ.ಶೈಲಜಾ ಹೆಗಡೆ
ಪ್ರಕಾಶನ : ಅಭಿಜಿತ ಪ್ರಕಾಶನ

ನನ್ನ ಕನ್ನಡ ಸ್ನಾತಕೋತ್ತರ ವಿದ್ಯಾರ್ಥಿಯಾದ ಶೈಲಜಾ ಹೆಗಡೆ , ಸಂಸ್ಕೃತ ಎಂ.ಎ ಮುಗಿಸಿ ಡಾ.ಜೀವಿಯವರ ಸಲಹೆಯ ಮೇರೆಗೆ ಕನ್ನಡಕ್ಕೆ ಕಾಲಿಟ್ಟರು. ಅವರ ಕೈಯಲ್ಲಿ ಬೇಂದ್ರೆಯವರು ಕಾಳಿದಾಸನ ಮೇಘದೂತವನ್ನು ತಂದ ಕನ್ನಡ ಅವತರಣಿಕೆಯನ್ನು ಪಾಠ ಹೇಳಿ ಸಿಕೊಂಡವರು. ಸ್ನಾತಕಸ್ನಾತಕೋತ್ತರ ಪದವಿಪಡೆದರು. ನಂತರ ಜೀವಿ ಅವರ ಸಲಹೆಯ ಮೇರೆಗೆ ಕನ್ನಡಕ್ಕೆ ಬಂದ ಮೇಘದೂತದ ರೂಪಾಂತರಗಳನ್ನು ತೌಲನಿಕ ಅಧ್ಯಯನಕ್ಕೆ ತೊಡಗಿದರು. ಅದನ್ನು ತಮ್ಮ ಎಂ.ಫಿಲ್ ಪದವಿಗೆ ವಿಷಯವನ್ನಾಗಿಸಿಕೊಂಡರು.

ಕನ್ನಡ ಮಾತ್ರವಲ್ಲದೆ ಹಿಂದಿ ಮತ್ತು ಮರಾಠಿ ಅವತರಣಿಗಳನ್ನು ತಮ್ಮ ಅಧ್ಯಯನದ ವ್ಯಾಪ್ತಿಗೆ ಒಳಪಡಿಸಿರುವುದು ಅವರ ವಿಸ್ತೃತವಾದ ಆಸಕ್ತಿಗೆ ನಿದರ್ಶನ. ಅದನ್ನು ಅವರು ವ್ಯವಸ್ಥಿತವಾಗಿ ಕಾಳಿದಾಸನ ಹಿನ್ನೆಲೆ, ಅವನ ಉಳಿದ ಕೃತಿಗಳ ಹರಹು, ಮೇಘದೂತದ ವಸ್ತು ವಿನ್ಯಾಸ, ವಿಭಿನ್ನ ರೂಪಾಂತರಗಳನ್ನು ಪರಿಶೀಲನೆಗೆ ಒಳಪಡಿಸಿ ಸಂಪ್ರಬಂಧವನ್ನು ಸಿದ್ದಪಡಿಸಿ ಮು.ವಿ.ವಿ.ಗೆ ಸಲ್ಲಿಸಿದರು. ಮೌಲ್ಯ ಮಾಪನದ ನಂತರ ವಿ.ವಿ.ಅದಕ್ಕೆ ಎಂ.ಫಿಲ್ ಪದವಿಯನ್ನು ಕೊಡಮಾಡಿತು. ಅವರ ಮಾರ್ಗದರ್ಶಕರಾದ ಡಾ.ಗಣೇಶ್ ಉಪಾಧ್ಯ ತಮ್ಮ ಅಭಿಜಿತ್ ಪ್ರಕಾಶನದ ಮೂಲಕ ಪ್ರಕಟಿಸಿದರು. ” ನನಗೂ ನಿನಗೂ ಅಂಟಿದ ನಂಟಿನ ಕೊನೆ ಬಲ್ಲವರಾರು” ನಾನು ಎಂ.ಎ. ವಿದ್ಯಾರ್ಥಿಯಾದಾಗ ನನಗೆ ಬೇಂದ್ರೆಯವರ ಮೇಘದೂತ ಪಠ್ಯವಾಗಿತ್ತು. ಅದನ್ನು ನಮಗೆ ಡಾ.ಕೆ.ವಿ.ನಾರಾಯಣ ಪಾಠ ಮಾಡುತ್ತಿದ್ದರು. ನಾನು ಇಲ್ಲಿಗೆ ಬಂದಾಗ ಇಲ್ಲಿ ಅದನ್ನು ಎಂ.ಎ ಪಾಠ ಮಾಡುವಾಗ ನಾನು ಅವರಿಂದ ಕಲಿತದ್ದನ್ನು ವಿದ್ಯಾರ್ಥಿಗಳಿಗೆ ದಾಟಿಸಿದೆ. ಯಕ್ಷನ ವಿರಹವೇದನೆಯ ಪರಿಣಾಮವನ್ನು ಸೂಚಿಸಲು ” ಭುಜದ ಕಂಕಣ ಮೊಣಕೈಗೆ ಸರಿದು ಬಂತು ” ಎಂಬ ರೂಪಕವನ್ನು ಬಳಸಿದ್ದಾರೆ.

ಶೈಲಜಾ ಹೆಗಡೆಯವರ ಅಧ್ಯಯನದಲ್ಲಿ ಮೇಲಿನ ಸಾಲು ಉಕ್ತವಾಗಿರುವ ಮೂಲ ಪದ್ಯದ ಜತೆಗೆ ಉಳಿದ ರೂಪಾಂತರಗಳಲ್ಲಿ ಅದು ಮೂಡಿಬಂದ ಬಗೆಯನ್ನು ತೌಲನಿಕವಾಗಿ ಸಮೀಕ್ಷೆಗೆ ಒಳಪಡಿಸಿದ್ದಾರೆ. ಹೀಗೆ ಮಾಡುವಾಗ ಅವರು ಸಂಸ್ಕೃತ ಭಾಷೆಯ ಮಾರ್ಗ ಪರಂಪರೆ, ಬೇಂದ್ರೆಯವರ ರೂಪಾಂತರದಲ್ಲಿ ಹೇಗೆ ” ದೇಸೀ ಸಂಸ್ಕೃತಿಯ ಸ್ವರೂಪವನ್ನು ಪಡೆದು ಕೊಂಡಿದೆ” ಎಂದು ಗುರುತಿಸಿದ್ದಾರೆ. ಸಂಸ್ಕೃತ ಮತ್ತು ಕನ್ನಡ ಭಾಷೆಯ ರಚನೆಯ ಹಿನ್ನೆಲೆಯಲ್ಲಿ ಇದನ್ನು ವಿವೇಚನೆಗೆ ಒಳಪಡಿಸಿರುವುದು ಅವರ ಸ್ವೋಪಜ್ಞತೆಗೆ ಸಾಕ್ಷಿಯಾಗಿದೆ. ಜತೆಗೆ ಸಂಸ್ಕೃತದಿಂದ ಕನ್ನಡಕ್ಕೆ ತರಬೇಕಾದಾಗ ಎದುರಿಸಬೇಕಾದ ಸವಾಲುಗಳನ್ನು ಅವುಗಳ ರಚನೆಯ ಹಿನ್ನೆಲೆಯಲ್ಲಿ ಅವರು ಗಮನಕ್ಕೆ ತಂದುಕೊಂಡಿದ್ದಾರೆ. ಈ ಮೂಲಕ ಕಾಳಿದಾಸನ ಕನ್ನಡ ರೂಪಾಂತರಗಳನ್ನು ಅಧ್ಯಯನ ಮಾಡುವವರಿಗೆ ತಕ್ಕ ವೇದಿಕೆಯೊಂದನ್ನು ಸಿದ್ದಪಡಿಸಿದ ಶ್ರೇಯಸ್ಸು ಶೈಲಜಾ ಹೆಗಡೆಯವರಿಗೆ ಸಲ್ಲಬೇಕು. ಇವರು ನನ್ನ ಶಿಷ್ಯೆ ಎಂಬುದು ನನಗೆ ಹೆಮ್ಮೆಯ ಸಂಗತಿ. ಇಲ್ಲಿಗೆ ಅವರ ಅಧ್ಯಯನ ನಿಲ್ಲದೆ ಕಾಳಿದಾಸನ ಉಳಿದ ಕೃತಿಗಳಿಗೆ ವಿಸ್ತರಿಸಲಿ ಅದರ ಲಾಭ ನಮಗೆಲ್ಲ ದೊರೆಯಲಿ ಎಂದು ಹಾರೈಕೆ. ಇಂತಹದೊಂದನ್ಮು ಆಗು ಮಾಡಿಸಿದ ಶೈಲಜಾ ಹೆಗಡೆಯವರಿಗೂ ಮಾರ್ಗದರ್ಶನ ಮಾಡಿದ ಡಾ.ಗಣೇಶ್ ಉಪಾಧ್ಯ ಅವರಿಗೆ ಅಭಿನಂದನೆ. ಇಲ್ಲಿ ಮುಖಪುಟ ಮತ್ತು ಜೀವಿ ಅವರು ಅದಕ್ಕೆ ಬರೆದ ಬೆನ್ನುಡಿಯನ್ನು ಕೊಡಲಾಗಿದೆ.


  • ರಘುನಾಥ್ ಕೃಷ್ಣಮಾಚಾರ್ – ಲೇಖಕರು,  ರಾಮನಿರಂಜನ್ ಝುನ್ಝುನ್ವಾಲ ಕಾಲೇಜು ಉಪನ್ಯಾಸಕರು

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading