ಕರ್ವಾಲೋ… ವಾಹ್…!

 ಕನ್ನಡ ಸಾರಸ್ವತ ಲೋಕ ಯಾಕಿಷ್ಟು ಶ್ರೀಮಂತವಾಗಿದೆ ಎಂದು ಯಾರಾದರೂ ಕೇಳಿದರೆ ಅವರಿಗೆ ಪೂರ್ಣಚಂದ್ರ ತೇಜಸ್ವಿಯವರ ಕೃತಿಗಳನ್ನು ಒಮ್ಮೆ ಓದಿ ನೋಡಿ ಎಂಬುದು ನೇರವಾದ ಅಷ್ಟೇ ಸರಳವಾದ ಉತ್ತರ !! ಲೇಖಕ ಹಿರಿಯೂರು ಪ್ರಕಾಶ್ ಅವರು ಈ ಲೇಖನವನ್ನು ತಪ್ಪದೆ ಮುಂದೆ ಓದಿ…

ಕನ್ನಡದ ಇತರೆ ಕಾದಂಬರಿಕಾರರು, ಸಾಹಿತಿಗಳು ಬರಹಗಾರರದ್ದೇ ಒಂದು ತೂಕವಾದರೆ ತೇಜಸ್ವಿಯವರದ್ದೇ ಇನ್ನೊಂದು ವಿಶೇಷ ತೂಕ. ಅದೆಂತಹ ಮಾಂತ್ರಿಕ ಶಕ್ತಿ , ಆಕರ್ಷಣೆ, ವಿಷಯ ಜ್ಞಾನ, ವಾಸ್ತವತೆ ಹಾಗೂ ವಸ್ತುನಿಷ್ಠತೆ ತುಂಬಿರುತ್ತದೆ ಅವರ ಬರಹಗಳಲ್ಲಿ ! ಅವರ ಕೃತಿಗಳ‌‌ನ್ನೋದುವುದೇ ಅವರ್ಣನೀಯ ಅನುಭವ. ಅದನ್ನು ಅನುಭವಿಸಿ ನೋಡಬೇಕೇ ಹೊರತು ಅಕ್ಷರಗಳಲ್ಲಿ ಹಿಡಿದಿಡುವುದು ಸ್ವಲ್ಪ ತ್ರಾಸದಾಯಕ.

ತಮ್ಮ ತಂದೆ ರಸಋಷಿ ಕುವೆಂಪು ರವರದ್ದೇ ಒಂದು ಹಾದಿ, ಶೈಲಿಯಾದರೆ ತೇಜಸ್ವಿಯವರದ್ದೇ ಬೇರೆ ಯಾರೂ ಅನುಕರಿಸಲಾಗದ ಭಿನ್ನವಾದ ಶೈಲಿ. ಕತೆ ಹೇಳುವಲ್ಲಿ ಅವರು ಬಳಸುವ ಸಹಜವಾದ ನಿರೂಪಣಾ ಶೈಲಿ, ಅತಿರೇಕಗಳಿಲ್ಲದ ಶಬ್ಧಗಳ ಬಳಕೆ, ನೇರ ನುಡಿಗಳು, ಕಥಾವಸ್ತುವಿನ ಪಾತ್ರಗಳ ಯಥಾವತ್ ಚಿತ್ರಣ, ಎಲ್ಲಕ್ಕಿಂತ ಮುಖ್ಯವಾಗಿ ಯಾವುದೇ ಪೂರ್ವಾಗ್ರಹ‌ಪೀಡಿತರಾಗದೇ ಯಾವುದೇ ಜಾತಿ ಮತ ಪಂಥ ಧರ್ಮಗಳ ನೆರಳಿಗೆ ಮುಂಗಡವಾಗಿಯೇ ಆತುಕೊಂಡಿರದೇ ತಮ್ಮ ಕಥಾವಸ್ತುವಿಗೆ ಏನೆಲ್ಲಾ ಬೇಕೋ ಅದನ್ನು ನಿರ್ಭಯವಾಗಿ ,ಕುತೂಹಲಕಾರಿಯಾಗಿ ವಸ್ತುನಿಷ್ಠವಾಗಿ ಅಷ್ಟೇ ಮನರಂಜನಾತ್ಮಕವಾಗಿ ಬರೆಯುವ ತೇಜಸ್ವಿಯವರ ಎದೆಗಾರಿಕೆಗೆ ಅವರ ಆಲೋಚನೆಗಳು ಮತ್ತು ಅಕ್ಷರಗಳನ್ನು ಕಟ್ಟಿಕೊಡುವ ನಡುವೆ ಯಾವುದೇ ಅನಗತ್ಯ ಸೋಸುವಿಕೆ ಇಲ್ಲದಿರುವುದೇ ಬಹುಮುಖ್ಯ ಕಾರಣ.

ಈಗೀಗಷ್ಟೇ ಕನ್ನಡ ಸಾಹಿತ್ಯಲೋಕದ ಕೃತಿಗಳ ಕದ ತಟ್ಟುತ್ತಿರುವ ನನಗೆ ತೇಜಸ್ವಿಯವರ “ಕರ್ವಾಲೋ‌‌ ” ಕಣ್ಣಿಗೆ ಬಿದ್ದಾಗ ಅದರ ಹೆಸರು ಹಾಗೂ ಮುಖಪುಟ‌ ವಿನ್ಯಾಸ ಆಸಕ್ತಿ ಕೆರಳಿಸಿ ಓದಲು ಶುರು ಮಾಡಿದೆ. ಅಸಲಿಗೆ ನಾನು ಓದಿದೆ ಎನ್ನುವುದಕ್ಕಿಂತ ಸಹ್ಯಾದ್ರಿ ಕಾಡುಗಳ ಕೊಂಪೆಗಳಲ್ಲಿ ಒಂದಿಡೀ ದಿನ ಮೈಮರೆತು ಖುಷಿಯಿಂದ ವಿಹರಿಸಿದೆ ಎಂಬುದು ಹೆಚ್ಚು ಸೂಕ್ತ.
ಸಹ್ಯಾದ್ರಿ ತಪ್ಪಲಿನ‌ ಕಾಡುಮೇಡುಗಳು, ಕಾಡು ಪ್ರಾಣಿಗಳು, ಕ್ರಿಮಿಕೀಟಗಳು, ಹೊಲ ಗದ್ದೆ ತೋಟಗಳು, ನದಿ, ಝರಿ, ಮಳೆ, ಅಚ್ಚ ಹಸುರಿನ ಪ್ರಕೃತಿ ಇವೆಲ್ಲದರ ಅದ್ಭುತ ಸ್ವಾದವನ್ನು ತಮ್ಮ ನೈಜಾನುಭವಗಳ ಜೊತೆ ಜೊತೆಗೆ ಆಸಕ್ತಿದಾಯಕವಾಗಿ ತೇಜಸ್ವಿಯವರು ಕಟ್ಟಿಕೊಟ್ಟಿದ್ದಾರೆ.

ಮೂಡಿಗೆರೆಯ ಬಳಿಯ ಕಗ್ಗಾಡಿನ ನಾಲ್ಕಾರು ಮನೆಗಳಿರುವ ನಾರ್ವೆ ಮುಂತಾದ ಕೊಂಪೆಗಳಲ್ಲಿ , ಚಾರ್ಮುಡಿ- ಶಿರಾಡಿ ಘಾಟುಗಳ ಸುತ್ತಲೂ ಹರಡಿಕೊಂಡಿರುವ ಭಯಾನಕ ಕಾನನಗಳ ಪರಿಸರದಲ್ಲಿ ಕರ್ವಾಲೋ ಎಂಬ ಕೀಟಗಳ ವಿಜ್ಞಾನಿ, ಅವನ ಶಿಷ್ಯ ಮಂದಣ್ಣ , ಫೋಟೋಗ್ರಾಫ಼ರ್ ಪ್ರಭಾಕರ, ಬಿರ್ಯಾನಿ ಕರಿಯಪ್ಪ, ಹಾವು ಹಿಡಿಯುವ ಎಂಗ್ಟ, ತೇಜಸ್ವಿಯವರ ಮನೆ ಕೆಲಸದ ಪ್ಯಾರಾ ಹಾಗೂ ಅವರ ನೆಚ್ಚಿನ ಸಾಕು ನಾಯಿ ಕಿವಿ….ಇವರೆಲ್ಲರ ಸುತ್ತ ಕೌತುಕದಿಂದ ತಿರುಗುವ ಕಥೆ ಓದುಗರನ್ನು ಅನಾಮತ್ತು ಸೆಳೆದುಬಿಡುತ್ತದೆ.

ತಂದೆಯವರಿಗಾಗಿ ಜೇನು‌ ಖರೀದಿಸಲು ತೇಜಸ್ವಿಯವರು ಮೂಡಿಗೆರೆಯ ಜೇನು ಸೊಸೈಟಿಗೆ ಪ್ರವೇಶ ಕೊಡುವ ಘಟನೆಯಿಂದ ಕಥೆ ತೆರೆದುಕೊಳ್ಳುತ್ತದೆ. ಸೊಸೈಟಿಯ ಕೆಲಸಗಾರರಾದ ಲಕ್ಷ್ಮಣ ಮತ್ತು ಮಂದಣ್ಣನವರ ಪರಿಚಯ ಹಾಗೂ ಅವರಿಂದ ‌ಜೇನುಗಳ ಬಗ್ಗೆ ಸಾಕಷ್ಟು ಮಾಹಿತಿ ಪಡೆದ ತೇಜಸ್ವಿಯವರು ಅವುಗಳ ಜೀವ ವೈವಿಧ್ಯತೆ , ಜೇನು ಕೂಡಿಡುವ ರೀತಿ ಎಲ್ಲವನ್ನೂ ಸೂಕ್ಷ್ಮವಾಗಿ ಅರಿಯುತ್ತಲೇ ಜೇನಿನ ಟಿನ್ ಅನ್ನು ಮನೆಗೆ ಒಯ್ಯುತ್ತಾರೆ. ಅಲ್ಲಿಂದ ಪರಿಚಯವಾದ ಸ್ವಲ್ಪ ಎಡಬಿಡಂಗಿಯಂತಾಡುವ ಮಂದಣ್ಣ ಅಲ್ಲಿ ಕರ್ವಾಲೋ ಎಂಬ ಪ್ತಸಿದ್ಧ ವಿಜ್ಞಾನಿಗೆ ಅದೇಗೆ ಬಲಗೈ‌ ಭಂಟನಾಗಿ ಉಳಿದ ಎಂಬ ಅಚ್ವರಿಯೊಂದಿಗೆ ಮಂದಣ್ಣನ‌ ಬಗ್ಗೆ ಅರಿಯುತ್ತಲೇ ಕರ್ವಾಲೋರನ್ನೂ ಭೇಟಿ ಮಾಡುತ್ತಾರೆ.

ಜೀವ ಜಗತ್ತು, ಸರೀಸೃಪ ಕ್ರಿಮಿ‌ಕೀಟಗಳು ಇತ್ಯಾದಿಗಳ ಬಗ್ಗೆ ಸಂಶೋಧನೆಯಲ್ಲಿ ತೊಡಗಿರುವ ಕರ್ವಾಲೋಗೆ ಮಂದಣ್ಣ ಅದೆಂಥದೋ ಹಾರುವ ಓತಿ ನೋಡಿದ್ದಾಗಿ ಹೇಳಿದ್ದು ಕೇಳಿದ ಮೇಲೆ ತುಂಬಾನೇ‌ ಥ್ರಿಲ್ ಆಗಿ ಅದರ ಸುಳುಹನ್ನು‌ ಹಿಡಿಯಬೇಕೆಂದು‌ ನಿರ್ಧರಿಸುತ್ತಾರೆ. ತೇಜಸ್ವಿಯವರೊಂದಿಗೆ‌ ಮಾತನಾಡುತ್ತಾ ಈ‌ ಜಗತ್ತಿನಲ್ಲಿ ಐದಾರು ಸಾವಿರ ವರ್ಷಗಳಿಂದ ಮಂಗನಿಂದ ಮಾನವ ಆದ ರೀತಿಯಲ್ಲೇ ಅನೇಕ ಜೀವಜಂತುಗಳು ತಮ್ಮ‌ ಮೂಲ ಆಕೃತಿಯನ್ನು‌ ಬಿಟ್ಟು ‌ಬೇರೆಯದೇ ಆದ ಆಕೃತಿಗೆ ರೂಪಾಂತರಗೊಂಡು‌ ವಿಕಾಸವಾಗಿದ್ದರೂ ಈ ಹಾರುವ ಓತಿ ಮಾತ್ರ ಯಾವ ಬದಲಾವಣೆಯೂ ಇಲ್ಲದೇ ಜಗತ್ತಿನಲ್ಲೆಲ್ಲೂ ಕಾಣಿಸಿಕೊಳ್ಳದೇ ಹಾಗೆಯೇ ಉಳಿದಿದೆ ಎಂಬ ಅತ್ಯಚ್ಚರಿಯ ಸಂಶೋಧನೆಗಾಗಿ ಲಕ್ಷಾಂತರ ರೂಪಾಯಿಗಳನ್ನು‌ ಖರ್ಚು ಮಾಡಲಾಗಿದೆ ಎಂಬ ಸುದ್ದಿ‌ಕೇಳಿ ಮೊದಲೇ ಅಲೆಮಾರಿಯಾಗಿದ್ದ ತೇಜಸ್ವಿಯವರಿಗೂ ಕುತೂಹಲ ಹುಟ್ಟಿ ಅದರ ಇರುವಿಕೆ ಪತ್ತೆ ಮಾಡಲು ಕರ್ವಾಲೋಗೆ ಸಾಥ್ ಕೊಡುತ್ತಾರೆ.
ಈ ಅಭಿಯಾನದಲ್ಲಿ ಅವರಿಗೆ ಮಂದಣ್ಣ, ಕರಿಯಪ್ಪ, ಪ್ರಭಾಕರ, ಎಂಗ್ಟ , ಪ್ಯಾರ ಮುಂತಾದವರು ಜೊತೆಗೊಡಿ ಕಾಡನ್ನು ಮನಬಂದಂತೆ ಅಲೆಯುತ್ತಾರೆ. ಕೊನೆಗೆ ಮಂದಣ್ಣ ಹೇಳಿದ್ದ ನೋಡಿದ್ದ ಆ ಹಾರುವ ಓತಿಯ ದರ್ಶನ‌ ಇವರಿಗೆ ಆಗುತ್ತಾ ..? ಇವರುಗಳು ಅದನ್ನು‌ ಹಿಡಿಯುವಲ್ಲಿ ಯಶಸ್ವಿಯಾದರಾ ? ಕಗ್ಗಾಡಿನಲ್ಲಿ ತೇಜಸ್ವಿಯರು ಮತ್ತು ಕರ್ವಾಲೋ ಉಳಿದ ಅಮಾಯಕರಿಂದ ಅನುಭವಿಸಿದ ಪಡಿಪಾಟಲುಗಳೇನು. ಫಜೀತಿಗಳೇನು.? ಇವೇ ಮುಂತಾದ ಕುತೂಹಲಕ್ಕೆ ಕೃತಿಯನ್ನು‌ ಓದಿಯೇ ಸವಿಯಬೇಕು‌!

ಈ ಎಲ್ಲದರ ನಡುವೆ ಮಂದಣ್ಣನ‌ ಲವ್ ಮ್ಯಾರೇಜು ಫಜೀತಿ, ಅವನನ್ನು ಕಳ್ಳಭಟ್ಟಿ ಶೇಂದೀ ಕೇಸಿನಲ್ಲಿ ಸಿಕ್ಕಿಹಾಕಿಸುವ ಪೋಲೀಸರು, ಪ್ಯಾರಾ ನ ಗಮಾರತನ, ಸಾಕುನಾಯಿ ಕಿವಿ ಯ ತುಂಟತನ, ಜೇನುಗಳಿಂದ ಕಚ್ಚಿಸಿಕೊಳ್ಳುವ ಕೆಲವು ಪ್ರಸಂಗಗಳು, ಬಿರ್ಯಾನಿ ಕರಿಯಪ್ಪನ ಗರ್ಮೀ ನೇಚರ್ರು, ಎಂಗ್ಟನ ಅಮಾಯಕತನ, ಹಾವನ್ನು ಹಿಡಿದು ಅದರ ಚರ್ಮವನ್ನು ಬಾಳೆಹಣ್ಣಿನ ಸಿಪ್ಪೆ ಸುಲಿಯುವಂತೆ ಸುಲಿಯುವ ಅವನ ಚಾಕಚಕ್ಯತೆ, ಪ್ರಭಾಕರನ ಫೋಟೋಗ್ರಫ಼ೀ, ಕೀಟ ಜಗತ್ತಿನ ಬಗ್ಗೆ ಕರ್ವಾಲೋ ರ ಅಗಾಧ ಜ್ಞಾನ ಮತ್ತು ಧ್ಯಾನದಂತೆ ವಿಜ್ಞಾನದ ಮೂಲಕವೂ ಸಾಕ್ಷಾತ್ಕಾರ ಪಡೆಯಬಹುದೆನ್ನುವ ಅವರ ನಂಬಿಕೆ ಮತ್ತು ಸಿದ್ದಾಂತ. ಈ ಎಲ್ಲಾ ಅಂಶಗಳಿಗೆ ಕಳಶವಿಟ್ಟಂತೆ ಪ್ರತೀ ಸಾಲನ್ನೂ ತಮ್ಮ ಅದ್ಭುತ ನಿರೂಪಣೆಯಿಂದ ವಿಸ್ಮಯವೆನಿಸುವ ಶೈಲಿಯಿಂದ, ಪ್ರತೀ ಅಕ್ಷರದಲ್ಲೂ ತುಂಬಿರುವ ಜೀವಂತಿಕೆಯಿಂದ ತೇಜಸ್ವಿಯವರು ಕಟ್ಟಿಕೊಟ್ಟ ರೀತಿ ಮಾತ್ರ ಅಲ್ಟಿಮೇಟ್ !

ಅವರ ನಿರರ್ಗಳವಾದ ಭಾಷಾ ಶೈಲಿಯ ರಸದೌತಣದಂತಿರುವ ಕರ್ವಾಲೋ ಓದುತ್ತಾ ಓದುತ್ತಾ ಅನೇಕ ಬಾರಿ ಮನದುಂಬಿ ನಕ್ಕು ಹೃದಯ ಹಗುರಾಗಿಸಿಕೊಂಡಿದ್ದೇನೆ. ಈ ಕೃತಿ ಓದುವಾಗ ನಿಮಗೆ ಯಾವ ಹಂತದಲ್ಲೂ ಕೆಳಗಿಡಲು ಮನಸೇ ಬಾರದು. ಅಷ್ಟರಮಟ್ಟಿಗೆ ಪೂರ್ಣಚಂದ್ರ ತೇಜಸ್ವಿಯವರು ‌ನಿಮ್ಮನ್ನು ಇಡಿಯಾಗಿ ಆವರಿಸಿಬಿಡುತ್ತಾರೆ.

ಕರ್ವಾಲೋ….ಇನ್ನೂ ಓದಿಲ್ಲವಾದಲ್ಲಿ , ಆ ತಪ್ಪನ್ನು ಮರೆತು ಈ ಕ್ಷಣವೇ ಕೊಂಡು‌ ಓದಿ . ಕನ್ನಡದ ಸಾಹಿತ್ಯಲೋಕವನ್ನು‌ ಇಡೀ ಜಗತ್ತೇ ಕೊಂಡಾಡುವುದೇಕೆ ಎಂಬ ಪ್ರಶ್ನೆಗೆ ಸೂಕ್ಷ್ಮ ಉತ್ತರ ನಿಮ್ಮ‌ ಕಣ್ಣಮುಂದೆಯೇ‌ ಬಂದು ನಿಲ್ಲುತ್ತದೆ.

** ಮರೆಯುವ ಮುನ್ನ **

ಕರ್ವಾಲೋ….! ಸುಮಾರು ನಲವತ್ತೈದು ವರ್ಷಗಳಲ್ಲಿ ಅರವತ್ತು ಮರುಮುದ್ರಣ ಕಂಡಿರುವ ಅಪರೂಪದ ಕೃತಿ. ತೇಜಸ್ವಿಯವರು ಅದ್ಭುತವಾದ ಜ್ಞಾನ ಭಂಡಾರವನ್ನೇ ತಮ್ಮ ನರನಾಡಿಗಳಲ್ಲಿ ತುಂಬಿಕೊಂಡಿದ್ದರೂ , ಅದನ್ನೆಲ್ಲೂ ಢಂಗೂರ ಸಾರದೇ ಅಥವಾ ತೋರಿಕೆಯ ಜ್ಞಾನ ವ್ಯಸನಿ ಯಾಗದೇ ಬದುಕನ್ನು ಒಬ್ಬ ಸಾಧಾರಣ ತೋಟದ ಮಾಲೀಕನಂತೆ, ಎಲ್ಲ ಸಾಮಾನ್ಯ‌ ಮನುಷ್ಯರಂತೆ ಮನದುಂಬಿ ‌ಜೀವಿಸುತ್ತಲೇ ಕನ್ನಡಕ್ಕೆ ಅನೇಕ ಅಪರೂಪದ ಕೃತಿಗಳನ್ನು ಕಟ್ಟಿಕೊಟ್ಟಿದ್ದಲ್ಲದೇ ಬದುಕಿನ‌ ಅನೂಹ್ಯ ಸೂಕ್ಷ್ಮಗಳನ್ನು ತಮ್ಮ‌ ಮನಮೋಹಕ ಬರಹಗಳ ಮೂಲಕ‌ ಅಮರವಾಗಿಸಿ ಹೋಗಿದ್ದಾರೆ.

ಯಾವುದೋ ತಗಡು ಸಿದ್ದಾಂತ, ಜಾತಿ ,ಮತ ಧರ್ಮ ಹಾಗೂ ಶ್ರೇಷ್ಟತೆಯ ವ್ಯಸನಗಳನ್ನು ಮೈಪೂರಾ ಒಳಗೊಳಗೇ ಆವಾಹಿಸಿಕೊಂಡು ಅವುಗಳನ್ನು‌ ಪೋಷಿಸಲಿಕ್ಕೆಂದೇ ಪಾತ್ರಗಳನ್ನು ಸೃಷ್ಟಿಸಿ ಬರೆಯುವ ಸ್ವಜಾತಿ ಪ್ರೇಮಿ ಸೋಗಲಾಡಿ ಸಾಹಿತಿಗಳ ನಡುವೆ ತೇಜಸ್ವಿ ಮತ್ತವರ ಕೃತಿಗಳು ಬದುಕನ್ನು ಹೇಗೆ ಸಹಜ ಸುಂದರವಾಗಿ ಆಸ್ವಾದಿಸಬೇಕೆಂಬ ಸರಳ ಸತ್ಯವನ್ನು ನೇರವಾಗಿ ಅನಾವರಣ‌ ಮಾಡಿಸುತ್ತವೆ.

“ಕರ್ವಾಲೋ” ವನ್ನು ಕನ್ನಡಿಗರಿಗೆ ಸೊಗಸಾಗಿ ಕಟ್ಟಿಕೊಟ್ಟ ತೇಜಸ್ವಿಯವರಿಗೆ ಕನ್ನಡಾಭಿಮಾನದ ಹೆಮ್ಮೆಯ‌ ಚಪ್ಪಾಳೆ.

ಪ್ರೀತಿಯಿಂದ…


  • ಹಿರಿಯೂರು ಪ್ರಕಾಶ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading