“ಇದು ಇವರು ಬರೆದಿದ್ದೆ? ಅಥವಾ ಎ.ಐ.ನೇ?”

ನಾನು ಸೂರ್ಯವಂಶದವನು ಅಂದರೆ ಸೂರ್ಯ ಹುಟ್ಟಿದ ಮೇಲೆ ಏಳುವವನು. ಆದರೆ ಈ ದಿನ ಬೆಳಿಗ್ಗೆ ಬೇಗ ಎಚ್ಚರವಾಯಿತು. ಇದಕ್ಕೆ ಎ.ಐ. ಇಟ್ಟಿದ್ದ ಅಲಾರಾಂ ಕಾರಣ. ಮುಂದೇನಾಯಿತು ಲೇಖಕರಾದ ಎನ್.ವಿ.ರಘುರಾಮ್ ಅವರ ಈ ಲೇಖನವನ್ನು ತಪ್ಪದೆ ಮುಂದೆ ಓದಿ…

“ಬೇಗ ಮಲಗಿ ಬೇಗ ಏಳುವವನು, ಆರೋಗ್ಯವಂತ, ಶ್ರೀಮಂತ ಮತ್ತು ಬುದ್ಧಿವಂತನಾಗುತ್ತಾನೆ” (ಅರ್ಲಿ ಟು ಬೆಡ್, ಅರ್ಲಿ ಟು ರೈಜ್ ಮೇಕ್ಸ್ ದ ಮ್ಯಾನ್ ಹೆಲ್ದೀ, ವೆಲ್ತಿ ಆಂಡ್ ವೈಸ್) ಎಂದು ಬೆಂಜಮಿನ್ ಫ್ರಾಂಕ್ಲಿನ್ ಹೇಳಿ ಎಷ್ಟೋ ವರ್ಷವಾಗಿದೆ. ಇಂಗ್ಲಿಷ್ ಬರದ ಅಮ್ಮನೂ ಇದನ್ನೇ ಐದು ದಶಕದ ಹಿಂದೆಯೇ ಕನ್ನಡದಲ್ಲಿ ಹೇಳಿ, ಹೇಳಿ ಸಾಕಾಗಿ ಸುಮ್ಮನಾಗಿದ್ದರು. ನನ್ನಾಕೆ ನನ್ನನ್ನು ಈ ವಿಷಯದಲ್ಲಿ ಬದಲಾಯಿಸಲು ಸಾಧ್ಯವೇ ಇಲ್ಲವೆಂದು ತಿಳಿದು ಕೈ ಚೆಲ್ಲಿ ವರುಷಗಳೇ ಕಳೆದಿವೆ. ಯಾರ ಕೈಯಲ್ಲಿ ಮಾಡಿಸಲು ಆಗದ ಕೆಲಸ ಈ ದಿನ ಎ.ಐ. ಮಾಡಿಸಿತ್ತು.

ಬೆಳಿಗ್ಗೆ ಬೇಗ ಎದ್ದರೆ ಆಗುವ ಅನುಕೂಲದಲ್ಲಿ ಅದು ಹೇಳಿದ ಒಂದು ವಿಷಯ ಮಾತ್ರ ನನ್ನ ಗಮನ ಸೆಳೆದಿದ್ದು ನಿಜ. ಹೌದು, ಬೇಗ ಎದ್ದರೆ ದೇಹದ ಗಡಿಯಾರ ಸರಿಯಾಗಿ ಕೆಲಸ ಮಾಡುತ್ತದೆ. ಆಗ ಹೊಟ್ಟೆ ಸರಿಯಾಗಿ ಖಾಲಿ ಮಾಡಲು ಕರುಳು ಸರಿಯಾದ ಸಹಕಾರ ಕೊಡುತ್ತದೆ. ವಯಸ್ಸಾದ ಮೇಲೆ ಬೆಳಿಗ್ಗೆ ಸರಿಯಾಗಿ ಹೊಟ್ಟೆ ಖಾಲಿಯಾದರೆ ಆಗುವ ಸಮಾಧಾನ ಇನ್ಯಾವುದಕ್ಕೂ ಸಮನಲ್ಲ ಎಂದು ಎಲ್ಲರಿಗೂ ಗೊತ್ತಿರುವ ವಿಷಯವೇ ಬಿಡಿ. ಸರಿ ಈ ದಿನ ಪರೀಕ್ಷೆ ಮಾಡಿಯೇ ಬಿಡೋಣ ಎಂದು ಎದ್ದೆ. ಅದೂ ಎ.ಐ.ಹೇಳಿದ ತರಹವೇ ಆಗಬೇಕೆ?. ಈಗ ಎ.ಐ. ಮೇಲೆ ನಂಬಿಕೆ ಬಂತು.

ನಾನು ಬೇಗ ಎದ್ದು ಬಾತ್ ರೂಮ್ಗೆ ಹೋಗಿದ್ದು ನೋಡಿದ ಮನದನ್ನೆ “ಯಾಕೆ, ಏನಾಯ್ತು? ಹೊಟ್ಟೆ ಸರಿ ಇದೆ ತಾನೇ?” ಎಂದು ಕಾಳಜಿಯಿಂದ ಕೇಳಿದಳು. “ಚಾಟ್ ಜಿಪಿಟಿ ಹೇಳಿದನ್ನು ಪರೀಕ್ಷೆ ಮಾಡುತ್ತಿದ್ದೆ…” ಎಂದು ಹೇಳುತ್ತಿದ್ದಾಗ ಆಕೆಯ ಕುತೂಹಲ ಜಾಸ್ತಿ ಆಯಿತು. ವಿಷಯ ತಿಳಿದ ಮೇಲೆ “ಮೂವತ್ತು ವರ್ಷ ಹಿಂದೆಯೇ ಈ ಚಾಟ್ ಜಿಪಿಟಿ ಬಂದಿದ್ದರೆ ನನಗೆ ಬೆಳಿಗ್ಗೆ ಏಳಿಸುವ ತೊಂದರೆ ಆದ್ರೂ ತಪ್ಪುತ್ತಿತ್ತು. ಎ.ಐ. ನಿನಗೆ ದೊಡ್ಡ ನಮಸ್ಕಾರ” ಎನ್ನುತ್ತಾ ನಾಟಕೀಯವಾಗಿ ಟ್ಯಾಬ್ ಗೆ ಕೈ ಮುಗಿದು ಅಡಿಗೆ ಮನೆಗೆ ಹೋದಳು.

ದಿನ ಪತ್ರಿಕೆ ಹಿಡಿದು ಕೂತಿದ್ದ ನನಗೆ ಎಂದಿನಂತೆ ಗಮಗಮ ಕಾಫೀ ತಂದು ಕೊಟ್ಟಳು. ಆಕೆಯ ಕಡೆಗೆ ಮೆಚ್ಚುಗೆಯ ನೋಟ ಬೀರುತ್ತಾ ಇನ್ನೇನು ಕಾಫೀ ಬಟ್ಟಲು ಬಾಯಿಗೆ ಇಡವುದರಲ್ಲಿ ಮತ್ತೆ ಅಲಾರಾಂ ಹೊಡೆಯಿತು. ‘ಈಗ ಒಂದು ನೂರು ಎಂ.ಎಲ್. ಉಗುರು ಬೆಚ್ಚಗಿನ ನೀರು ಕುಡಿದು, ಕುಳಿತು ಧ್ಯಾನ ಮಾಡಬೇಕು’ ಎಂಬ ಸಂದೇಶ ಎ.ಐ.ನಿಂದ ಬಂದಿತ್ತು. ಆಗ “ಸ್ವಲ್ಪ ಹೊತ್ತು ಬಿಟ್ಟು ಕಾಫೀ ಕುಡಿಯುತ್ತೇನೆ, ಈಗ ನೀರು ಕುಡಿದು ಧ್ಯಾನ ಮಾಡುತ್ತೇನೆ, ಕಣೆ” ಎಂದಾಗ ಆಕೆಗೆ ಏನು ಹೇಳ ಬೇಕೆಂದು ಗೊತ್ತಾಗಲಿಲ್ಲ. ‘ಇವರಿಗೆ ಏನೋ ಆಗಿದೆ ಇವತ್ತು. ಇರಲಿ, ಇವೆಲ್ಲಾ ಮೂರು ದಿನದ ಶೋಕಿ ಅಷ್ಟೇ. ನನಗೆ ಗೊತ್ತಿಲ್ಲವೇ ನನ್ನ ದೇವರ ಸತ್ಯ’ ಎನ್ನುವ ಮಾತು ಆಕೆಯ ಬಾಯಿಂದ ಬರದೇ ಇದ್ದರೂ, ನನಗಂತೂ ಹಾಗೆ ಕೇಳಿಸಿದ್ದು ನಿಜ!

ಫೋಟೋ ಕೃಪೆ : ಅಂತರ್ಜಾಲ

ಎದುರುಗಡೆ ಆಪ್ ನಲ್ಲಿರುವ ಕ್ಯಾಮೆರಾ ತೆರೆದಿಟ್ಟು ಧ್ಯಾನಕ್ಕೆ ಕುಳಿತುಕೊಂಡೆ. ಕುತ್ತಿಗೆ ನೆಟ್ಟಗಿರಲಿ, ಕೈಚಾಚು ಹೀಗೆ ಅದು ಒಂದಾದರ ಮೇಲೆ ಒಂದು ಹೇಳುತ್ತಾ ಸಾಗಿತ್ತು. ಮನ ಅದನ್ನು ಮಾಡಲು ಬಯಸಿದರೂ ದೇಹ ಅದಕ್ಕೆ ಸಹಕರಿಸಲಿಲ್ಲ. ‘ಬೇಜಾರು ಬೇಡ, ನಿಧಾನವಾಗಿ ಸರಿಯಾಗುತ್ತದೆ… ಈಗ ಮುಂದುವರಿಸಿ’ ಎಂಬ ಸಂದೇಶ ಬಂದಿತು. ಅಂತೂ ಅದು ಹೇಳಿದಂತೆ ಮಾಡಲು ಪ್ರಯತ್ನ ಪಟ್ಟು ಮಂಡಿ ನೋವು ಮತ್ತೆ ಪ್ರಾರಂಭವಾದಾಗ, ಅಲ್ಲಿಗೆ ನಿಲ್ಲಿಸಿ ಮತ್ತೆ ಬಂದು ಸೋಫಾದ ಮೇಲೆ ಕುಳಿತುಕೊಂಡೆ.

ನನ್ನಾಕೆ ಆ ವೇಳೆಗೆ ಸ್ನಾನ ಮುಗಿಸಿಕೊಂಡು, ದೇವರಿಗೆ ದೀಪ ಹಚ್ಚಿ, ಅಡುಗೆ ಮನೆಗೆ ಹೋಗಿದ್ದಳು. ಮತ್ತೆ ಹೊಸದಾಗಿ ಕಾಫೀ ಮಾಡಿಕೊಂಡು ಬಂದು ಕೊಟ್ಟಳು. ಈ ದಿನ ಕಾಫೀ ಎಂದಿಗಿಂತ ರುಚಿಯಾಗಿದೆ ಅನ್ನಿಸಿದ್ದು ನಿಜ. ಅದನ್ನು ಬಾಯಿಬಿಟ್ಟು ಹೇಳಿದೆ. “ಏನ್ರೀ, ಇದನ್ನು ಹೇಳು ಎಂದು ಎ.ಐ. ಹೇಳಿಕೊಟ್ಟಿದ್ದಾ?” ಎಂದಾಗ ನಾನು ಒಂದು ಕ್ಷಣ ಕಕ್ಕಾಬಿಕ್ಕಿಯಾಗಿದ್ದು ನಿಜ. “ಇಲ್ಲ ಕಣೆ, ನಾನೇ ಹೇಳಿದ್ದು… ಐ ಸ್ವೇರ್” ಎಂದರೂ ಆಕೆಗೆ ನಂಬಿಕೆ ಬರಲಿಲ್ಲ. ‘ಈ ಗಂಡಸರೇ ಹೀಗೆ, ಹೋಟೆಲಿನಲ್ಲಿ ಕೊಡುವ ಕೆಟ್ಟ ಕಾಫೀ ಕುಡಿದು, ಚೆನ್ನಾಗಿದೆ ಎಂದು ಹೇಳುತ್ತಾ ಹತ್ತು ರೂಪಾಯಿ ಕಾಫೀಗೆ ಹತ್ತು ರೂಪಾಯಿ ಟಿಪ್ಸ್ ಕೊಟ್ಟು ಬರುವವರು, ಮನೆಯಲ್ಲಿ ಕಾಫೀ ಚೆನ್ನಾಗಿದೆ ಎಂದು ಹೇಳಲು ಎ.ಐ.ಬರಬೇಕಾಯಿತು’ ಎಂದು ಗೊಣಗಿಕೊಂಡು ಎದ್ದು ಅಡಿಗೆ ಮನೆಗೆ ಹೋದಳು.

ನಾನು ಸ್ನಾನ ಮಾಡಿ ಬರುವಷ್ಟರಲ್ಲಿ ಅಡುಗೆ ಮನೆಯಿಂದ ಗಮಗಮ ಉಪ್ಪಿಟ್ಟಿನ ಸುವಾಸನೆ ಬರಲು ಪ್ರಾರಂಭವಾಗಿತ್ತು. ಅಡಿಗೆ ವಿಷಯದಲ್ಲಿ ನನ್ನಾಕೆ ಸಾಕ್ಷಾತ್ ಅನ್ನಪೂರ್ಣೇಶ್ವರಿ ದೇವಿಯೇ ಸರಿ. “ಈ ದಿನ ನಿಮ್ಮ ಎ.ಐ. ಏನ್ನನ್ನು ತಿನ್ನಲು ಹೇಳಿದೆ? ಹೇಳುವಂತವರಾಗಿ ಯಜಮಾನರೇ” ಎಂದಾಗ, ಒಂದು ಕ್ಷಣ ಎ.ಐ. ಕಡೆಯಿಂದ ಬಂದ ಸಂದೇಶವನ್ನು ನೋಡಿದೆ. “ಅರೇ ಇದೇನಿದು? ನೋಡೆ ಇಲ್ಲಿ, ೨೫೦ ಗ್ರಾಂ ಉಪ್ಪಿಟ್ಟು ಎಂದು ಬರೆದಿದೆ ಕಣೆ” ಎಂದು ಆಶ್ಚರ್ಯದಿಂದ ಹೇಳಿದಾಗ, ಆಕೆ ನನಗೂ ಉಪ್ಪಿಟ್ಟು ಕೊಟ್ಟಳು! ‘ಎ.ಐ. ಕೂಡ ಉಪ್ಪಿಟ್ಟಿನ ಸುವಾಸನೆ ಕಂಡುಹಿಡಿಯುತ್ತದೆಯೇ?’ ಎಂದು ಅನಿಸಿದ್ದು ನಿಜ.

ಗಂಟೆ ಹತ್ತಾಗುತ್ತಾ ಬಂದಿತ್ತು. ಯುದ್ಧದ ಗಲಾಟೆಯ ಮಧ್ಯೆದಲ್ಲಿ ಷೇರುಗಳ ಬೆಲೆ ಏನಾಯಿತು? ನೋಡೋಣ ಎಂದು ಗಣಕಯಂತ್ರ ತೆರೆದೆ. ‘ಈ ದಿನ ಪೆಟ್ರೋಲ್ ಬೆಲೆ ಹೆಚ್ಚು/ಕಡಿಮೆ ಆದಂತೆ, ಬ್ಯಾಂಕು, ಎಲೆಕ್ಟ್ರಿಕ್ ವಾಹನ ತಯಾರಿಕಾ ಕಂಪನಿಗಳ ಷೇರು ಏರಿಕೆ ಆಗುತ್ತದೆ. ತಾಳ್ಮೆ ಇರಲಿ. ಹೋಲ್ಡ್ ಮಾಡಿ’ ಎನ್ನುವ ಉಪದೇಶ ಎ.ಐ.ಕೊಟ್ಟಿತು. ಅದು ಹೇಳಿದ ಹಾಗೆ ನನ್ನ ಮನೆಯವರು ಕೆಲಸ ಮಾಡುತ್ತಿದ್ದ ಬ್ಯಾಂಕಿನ ಷೇರು ಮತ್ತು ಇತರ ಷೇರುಗಳ ಬೆಲೆ ಜಾಸ್ತಿಯಾಗಿ ಮಧ್ಯಾಹ್ನದ ಹೊತ್ತಿಗೆ ನನ್ನಾಕೆಯ ಹುಟ್ಟು ಹಬ್ಬಕ್ಕೆ ಎರಡು ಗ್ರಾಂ ಬಂಗಾರ ತೆಗೆದುಕೊಳ್ಳುವಷ್ಟು ಲಾಭ ಒಂದೇ ದಿನ ಆಯಿತು.

ಆ ಸಮಯದಲ್ಲೇ ಚೆಡ್ಡಿ ದೋಸ್ತ್ ರಾಮಣ್ಣನ ಕರೆ ಬಂತು. “ಏನೋ, ನೀನ್ನಿನ್ನು ಹಳೇ ಡಿ.ಪಿ. ಹಾಕಿಕೊಂಡಿದ್ದೀಯಾ? ಎಲ್ಲರೂ ಎ.ಐ.ಮಾಡಿದ ಫೋಟೋ ಹಾಕಿಕೊಳ್ಳೋದು ಲೇಟೆಸ್ಟ್ ಟ್ರೆಂಡ್ ಕಣೋ….” ಎನ್ನುತ್ತಾ ಹೇಳುತ್ತಾ ಹೋದ. ಸರಿ ನಾನು ಎ.ಐ. ತೆರೆದೆ. ಇದೇನಿದು ಆಶ್ಚರ್ಯ! ನಾನು ಮತ್ತು ನನ್ನಾಕೆ ಇದ್ದ ಫೋಟೋವನ್ನು ಎ.ಐ.ತಯಾರು ಮಾಡಿ ಇಟ್ಟಿದೆ. ಡಿ.ಪಿ.ಯಲ್ಲಿ ನನ್ನ ಇಪ್ಪತ್ತು ವರ್ಷಗಳ ಹಿಂದಿನ ಫೋಟೋ ಸುಮಾರು ದಿನಗಳಿಂದ ಹಾಕಿಕೊಂಡಿದ್ದೆ. ಆ ಫೋಟೋದಲ್ಲಿ ತಲೆ ತುಂಬ ಕಪ್ಪು ಕೂದಲು ಇದ್ದಿದ್ದೆ ಅದನ್ನು ಡಿ.ಪಿ.ಯಲ್ಲಿ ಹಾಕಲು ಮುಖ್ಯ ಕಾರಣವಾಗಿತ್ತು. ಎಷ್ಟೆಲ್ಲಾ ಲೇಖನಗಳನ್ನು ಬರೆದರೂ, ಇನ್ನೂ ‘ಉದಯೋನ್ಮುಖ ಕವಿ’ ಪಟ್ಟದಿಂದ ಮೇಲೆ ಹೋಗಲೇ ಇಲ್ಲ ಎಂದು ಅನಿಸಲು ಪ್ರಾರಂಭವಾಗಿತ್ತು. ಅದಕ್ಕೆ ಮುಖ್ಯ ಕಾರಣ ಈ ಡಿ.ಪಿ.ಯಲ್ಲಿರುವ ಫೋಟೋ ಇರಬಹುದೇ? ಎಂಬ ಅನಿಸಿಕೆ ಪ್ರಾರಂಭವಾದಾಗ, ಒಂದಿಷ್ಟು ಬೆಳ್ಳಿಕೂದಲು ಕಾಣುವ ಗಂಭೀರ ಮುಖಭಾವದ ಫೋಟೋ ಡಿ.ಪಿ.ಗೆ ಇತ್ತೀಚೆಗೆ ಹಾಕಿಕೊಂಡೆ. ಅದಾದ ಮೇಲೆ ಬರೆದ ಲೇಖನವನ್ನು ಅನೇಕರು ಪ್ರೌಢ ಪ್ರಬಂಧ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಹಾಗಾಗಿ ಈಗ ಆ ಫೋಟೋ ಬದಲಾವಣೆ ಮಾಡಲು ಮನಸ್ಸಿಲ್ಲದಿದ್ದರೂ ಎ.ಐ. ಹೇಳಿದ ಫೋಟೋ ಡಿ.ಪಿ.ಆಯಿತು. ನನ್ನ ಡಿ.ಪಿ.ಯಲ್ಲಿ ಆಕೆಯ ಜೊತೆ ಇರುವ ಫೋಟೋ ಮೊದಲಬಾರಿಗೆ ಕಂಡು ಖುಷಿಯಾದ ನನ್ನಾಕೆ ಬೆಳಿಗ್ಗೆ ದೇವರಿಗೆ ನೈವೇದ್ಯ ಮಾಡಿ ಇಟ್ಟಿದ್ದ ನಂದಿನಿ ಪೇಡಾವನ್ನು ತಂದು “ಪ್ರಸಾದ, ಸಿಹಿಯಾದರೂ ಪರವಾಗಿಲ್ಲ, ತಿನ್ನಬಹುದು” ಎನ್ನುತ್ತಾ ಕೊಟ್ಟಳು.

ಫೋಟೋ ಕೃಪೆ : ಅಂತರ್ಜಾಲ

ಅಷ್ಟರಲ್ಲಿ ಮಗಳಿಂದ ಫೋನ್ ಬಂತು. “ಅಪ್ಪ, ಡಿ.ಪಿ.ಚೆನ್ನಾಗಿದೆ. ಆದರೆ ಇವತ್ತಿನ ಟ್ರೆಂಡ್ ಅದಲ್ಲ ಅಪ್ಪ. ಎ.ಐ.ಗೆ ನಿನ್ನ ಬಗ್ಗೆ ಏನು ಅನಿಸುತ್ತದೆ ಎಂದು ಕೇಳು, ಅದು ಹೇಳಿದ್ದನ್ನು ಸ್ಟೇಟಸ್ ಗೆ ಹಾಕು” ಎಂದಳು.

“ನಾನು ಯಾವ ರೀತಿಯ ಮನೋಭಾವದವನು ಎಂದು ತಮಗೆ ಗೊತ್ತೆ?” ಎಂಬ ಪ್ರಶ್ನೆಗೆ ಎಐ ಕ್ಷಣ ಮಾತ್ರದಲ್ಲಿ ಉತ್ತರ ಕೊಡಲಿಲ್ಲ. “ಯೋಚಿಸುತ್ತಿದ್ದೇನೆ” ಎಂದು ಫ್ಲಾಶ್ ಆಗುತ್ತಿತ್ತು. ನನಗೆ ಕೂಡ ಈಗ ಏನು ಹೇಳಬಹುದೆಂದು ಕುತೂಹಲ ಮೂಡಿತ್ತು. ‘ಮೃದುವಾದ ಮಗುವಿನಂತ ಮನಸ್ಸು, ಪ್ರೀತಿಗೆ ಮನಸೋಲುವವನು.’ ಹೀಗೆ ಹೇಳಬಹುದೇ ಎಂದು ಮನಸ್ಸು ಓಡುತ್ತಿತ್ತು. ಆಗ ಟಿನ್ ಎನ್ನುತ್ತಾ ಸಂದೇಶ ಬಂದಿತು. “ತಾವು ಕೆ. ಕೀಟ್ಸ್ ತರಹ ಮನಸ್ಥಿತಿ ಉಳ್ಳವರು” ಎಂದಿತ್ತು. “ನೋಡೇ… ನಾನು ಪ್ರಸಿದ್ಧ ಇಂಗ್ಲಿಷ್ ಕವಿ ಕೀಟ್ಸ್ ತರಹ ಇದ್ದೀನಂತೆ” ಎಂದು ಕೂಗಿ ಹೇಳಿದಾಗ, ಆಕೆಯೂ ಬಂದು ಸಂದೇಶವನ್ನು ನೋಡಿದಳು ಮತ್ತು ನನ್ನ ಮುಖವನ್ನು ನೋಡಿ, ಬರುತ್ತಿದ್ದ ನಗುವನ್ನು ಕಷ್ಟಪಟ್ಟು ತಡೆಹಿಡಿದುಕೊಂಡು “ಇವರು ಜಾನ್ ಕೀಟ್ಸ್ ಅಲ್ಲ, ಕೆ. ಕೀಟ್ಸ್. ಕೆ ಅಂದರೆ ಕುಮಾರ್ ಎಂದು” ಎಂದಳು. “ನಾನು ವರ್ಡ್ಸ್ವರ್ತ್, ಜಾನ್ ಕೀಟ್ಸ್, ರಾಬರ್ಟ್ ಫ್ರಾಸ್ಟ್, ಇಲಿಯಟ್ ಎಲ್ಲರ ಬಗ್ಗೆಯೂ ಕೇಳಿದ್ದೇನೆ. ಆದರೆ ಯಾರು ಈ ಕುಮಾರ್ ಕೀಟ್ಸ್ ಗೊತ್ತಾಗಲಿಲ್ಲ” ಎಂದೆ. “ಅವರು ಜಾನ್ ಕೀಟ್ಸ್ ಕವನಗಳ ಲೈಕ್ ಮಾಡುವ ಕನ್ನಡದ ಕುಮಾರ” ಎಂದಾಗ ನನಗೂ ನಗು ಬಂತು. ಹೈಸ್ಕೂಲಿನ ಇಂಗ್ಲಿಷ್ ಪಾಠದಲ್ಲಿ ಇದ್ದ ಕೀಟ್ಸ್ ಕವನವೊಂದನ್ನು ಓದಿದ್ದು ಬಿಟ್ಟರೆ ನಾನು ಅವರು ಬರೆದಿದ್ದ ಬೇರೆ ಏನ್ನನ್ನೂ ಓದಿಲ್ಲ. ಅದು ಎ.ಐ.ಗೆ ಗೊತ್ತಿರುವುದಿಲ್ಲ ಬಿಡಿ.

ಈಗ ನನ್ನಾಕೆ “ಏನ್ರೀ, ಎರಡು ದಿನದಿಂದ ಏನೂ ಬರದೇ ಇಲ್ಲ” ಎಂದಾಗ “ಹೌದು, ಕಣೆ ಎರಡು ದಿನದಿಂದ ತಲೆ ಓಡುತ್ತಾ ಇಲ್ಲ. ಅದಕ್ಕೆ ಸುಮ್ಮನೆ ಎ.ಐ.ಯಲ್ಲಿ ಫಿಟ್ ನೆಸ್ ಬಗ್ಗೆ ನೋಡುತ್ತಾ ಕಾಲ ಕಳೆಯುತ್ತೀದ್ದೇನೆ” ಎಂದೆ. “ಅಯ್ಯೋ, ಅದಕ್ಯಾಕೆ ತಲೆ ಕೆಡಿಸಿಕೊಳ್ಳುತ್ತೀರಿ. ಈಗ ಆಗಿದ್ದನ್ನೇ ಬರೆಯಿರಿ” ಎಂದಾಗ “ಅಯ್ಯೋ ಹೌದಲ್ಲ!, ನಾನು ಯಾಕೆ ಬರೆಯ ಬಾರದು” ಎನ್ನುತ್ತಾ ಮತ್ತೆ ಟ್ಯಾಬ್ ತೆರೆದೆ. ಬರೆದಾದ ಮೇಲೆ ಓದಿದ ನನ್ನಾಕೆ “ಅಲ್ಲಾ ರೀ, ಬರಹದಲ್ಲಿ ಎ.ಐ. ಪದವೇ ತುಂಬಿ ತುಳುಕುತ್ತಿದೆ. ಸರ್ವಂ ಎ.ಐ. ಮಯವೇ ಆಗಿದೆ. ಓದಿದವರು ಇದು ಇವರೇ ಬರೆದಿದ್ದೇ?… ಅಥವಾ ಎ.ಐ.ನೇ? ಎಂದು ಅನುಮಾನ ಪಟ್ಟುಕೊಳ್ಳುವುದಿಲ್ಲವೇ” ಎಂದಳು. “ಅದಕ್ಕೆ ಉತ್ತರ ಎ.ಐ.ಗೆ ಕೇಳಬೇಕು” ಎಂದೆ!


  • ಎನ್.ವಿ.ರಘುರಾಮ್ – ನಿವೃತ್ತ ಅಧೀಕ್ಷಕ ಅಭಿಯಂತರ(ವಿದ್ಯುತ್), ಕ.ವಿ.ನಿ.ನಿ., ಬೆಂಗಳೂರು.

One thought on ““ಇದು ಇವರು ಬರೆದಿದ್ದೆ? ಅಥವಾ ಎ.ಐ.ನೇ?”

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading