ಹೊಸಮೆರುಗು ಪಡೆದು ಹೂಬನವು ನಳನಳಿಸೆ… ಚೆಲುವಿನೋಕುಳಿ ಬುವಿಗೆ ವಸಂತಮಾಸದಿ… ಕವಿ ಪ್ರಭಾವತಿ ಹೆಗಡೆ ಅವರು ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ಶಿಶಿರದ ಬೇಗೆಯಲಿ ರಸವಿರದ ಧರೆಯಲಿ l
ಕಳೆತುಂಬಿ ಮತ್ತೆ ಬರಲೆಂದು ಉಲ್ಲಾಸ l
ಪಸುರಿನ ಚಿತ್ತಾರ ಪಲ್ಲವಿಸಿ ಸೂಸಿತು l
ಇಳೆಯ ಮೊಗದಲ್ಲಿ ಚೈತ್ರದ ಮಂದಹಾಸ ll
ಋತುರಾಜ ಬರಲು ಮೇದಿನಿಗೆ ವರವಾಗಿ l
ಕಂದರ್ಪನೊಡಗೂಡಿ ಕುಸುಮಶರ ಪಿಡಿದು l
ರತಿಯಂತೆ ಶೋಭಿಸುತ ನಲಿಯುತಿರೆ ವಸುಧೆ l
ಮಂದಮಾರುತ ಬಂದ ಮೆಲ್ಲನೇ ಸುಳಿದು ll
ಪಸರಿಸಲು ಪವನ ಚೂತದಾ ಕಂಪನ್ನು l
ನಲಿಯುತಿವೆ ಶುಕಪಿಕಗಳಿಂಚರದಿ ಮುದದಿ l
ಹೊಸಮೆರುಗು ಪಡೆದು ಹೂಬನವು ನಳನಳಿಸೆ l
ಚೆಲುವಿನೋಕುಳಿ ಬುವಿಗೆ ವಸಂತಮಾಸದಿ ll
ಇಂತು ನಾವೀನ್ಯವನು ಹೊಂದುವುದು ಪ್ರಕೃತಿಯು l
ಹಳೆ ಬೇರು ಎಳೆ ಚಿಗುರುಗಳ ತಂತು ಬೆಸೆದು l
ಕಂತುಪಿತನಾಣತಿಯ ಪಾಲಿಸುತ ಪೃಥ್ವಿ l
ಕೊಳೆಯೆಲ್ಲ ಸರಿಸುವುದು ಹೊಸತನವ ಪಡೆದು ll
- ಪ್ರಭಾವತಿ ಹೆಗಡೆ
