ಪತ್ತೇದಾರಿ ಕಾದಂಬರಿಕಾರ ರವಿರಾಜ ಬೈಕಂಪಾಡಿ ಅವರು ‘ಅನಾಮಧೇಯ ಕರೆ’ ಕೃತಿಯ ಕುರಿತು ಹೆಚ್ ವಿ ಮೀನಾ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ : ಅನಾಮಧೇಯ ಕರೆ
ಲೇಖಕರು : ರವಿರಾಜ ಬೈಕಂಪಾಡಿ
ಪ್ರಕಾಶಕರು : ಅಂಕಿತ ಪುಸ್ತಕ
ಬೆಲೆ : 250/-
ಮೊಬೈಲ್ : 9019190502/ 080-26617100
‘ಅನಾಮಧೇಯ ಕರೆ’ ನನಗಿಷ್ಟವಾದ ಒಂದು ರೋಚಕ ಪತ್ತೇದಾರಿ ಕಾದಂಬರಿ. ಅನಾಮಧೇಯ ಕರೆ ಬಂದರೆ ನಾನು ಮೊದಲು ಟ್ರೂಕಾಲರ್ ನಲ್ಲಿ ಯಾರೆಂದು ತಿಳಿದು ನಂತರ ಆ ಕರೆಯನ್ನ ಸ್ವೀಕರಿಸಬೇಕೇ! ಬೇಡವೇ! ಎಂದು ಯೋಚಿಸಿ ನಿರ್ಧರಿಸುತ್ತೇನೆ. ಆದರೇ ವಕೀಲ ಪೊನ್ನಪ್ಪ ಹಾಗೆ ಮಾಡಲಿಲ್ಲ. ಕರೆ ಸ್ವೀಕರಿಸಿಯೇ ಬಿಟ್ಟ.
ಕೆಲವೊಮ್ಮೆ ನಾವು ಎಷ್ಟೇ ಜಾಣರಾದರೂ ಒಳ್ಳೆಯ ಉದ್ದೇಶದಿಂದ ಯಾರಿಗಾದರೂ ಉಪಕಾರ ಮಾಡಲು ಹೋಗಿ ನಾವೇ ಖೇಡ್ಡಕ್ಕೆ ಬೀಳುತ್ತೇವೆ. ವಕೀಲ ಪೊನ್ನಪ್ಪನ ಸ್ಥಿತಿಯೂ ಕೂಡ ಹಾಗೇ ಆಯಿತು ನೋಡಿ. ಬೇರೆಯವರ ಕಷ್ಟಗಳಿಗೆ ಸ್ಪಂದಿಸುವ ಗುಣ ಪೊನ್ನಪ್ಪನದು.
ಅಂದು ಗಾಢ ನಿದ್ರೆಯಲ್ಲಿದ್ದ ಪೊನ್ನಪ್ಪನ ಮೊಬೈಲ್ ಜೋರಾಗಿ ಹೊಡೆದುಕೊಂಡಿತು. ಕಣ್ಣುಜ್ಜಿಕೊಂಡು ಎದ್ದು ಕರೆ ಯಾರದೆಂದು ನೋಡಿದಾಗ ಒಂದು ‘ಅನಾಮಧೇಯ ಕರೆ’ ಅದಾಗಿತ್ತು. ಅವ ಟ್ರೂಕಾಲರ್ ಬಳಸಿ ನೋಡಿದ. ಅದು “ಶ್ರೀವಲ್ಲಿ” ಎಂಬ ಮಹಿಳೆಯ ಕರೆ!! ರಾತ್ರಿ ಸುಮಾರು 10-55 ರ ಸಮಯದಲ್ಲಿ ಹೆಣ್ಣಿನ ಕರೆ! ‘ಶ್ರೀವಲ್ಲಿ’… ಹೆಸರು ಎಲ್ಲೋ ಕೇಳಿದ ನೆನಪು! ಪೊನ್ನಪ್ಪನ ಹೃದಯ ಮಿಡಿಯಿತು. ಆ ಹೆಣ್ಣು ಕಕ್ಷಿದಾರ ಇರಬಹುದು ಎಂದು ಕರೆ ಸ್ವೀಕರಿಸಿದ ಪೊನ್ನಪ್ಪನು ಭೀತಿ ತುಂಬಿದ ಹೆಣ್ಣಿನ ಧ್ವನಿಗೆ ಗಲಿಬಿಲಿಗೊಂಡು ತಡಮಾಡದೇ ಶ್ರೀವಲ್ಲಿ ಹೇಳಿದ ಸ್ಥಳಕ್ಕೆ ಕಪ್ಪು ಬಣ್ಣದ ಜರ್ಕಿನ್ ಏರಿಸಿ ಟಾರ್ಚ್ ಹಿಡಿದು ಹೋರಟೇಬಿಟ್ಟ. ಹೊರಡುವ ಅತುರದಲ್ಲಿ ತನ್ನ ಬೈಕನ್ನು ಹಿಂದಕ್ಕೆ ತಿರುಗಿಸಿದಾಗ ಗಾಡಿಯ ಸಂಖ್ಯಾ ಫಲಕ ಗೋಡೆಗೆ ತಗುಲಿ ಅದು ಮುರಿಯಿತು. ಲೋಚಗುಟ್ಟಿ ಗೇಟಿನ ಹೊರಗೆ ಹೋಗುತ್ತಿದ್ದಾಗ ಗಾಡಿಯ ಶಬ್ದಕ್ಕೆ ಮನೆ ಮಾಲೀಕ ಸುಬ್ಬಯ್ಯ ಎದ್ದು ಕಿಟಕಿಯಲ್ಲಿ ಇಣುಕಿ ನೋಡಿದ್ದನ್ನು ಪೊನ್ನಪ್ಪ ಗಮನಿಸಲೇ ಇಲ್ಲ.

ಅಲ್ಲಿಂದ ಶ್ರೀವಲ್ಲಿ ಹೇಳಿದ ವಿರಾಜಪೇಟೆಯ ಕಾವೇರಿ ಥೀಯೇಟರ್ ಬಳಿ ಇದ್ದ ಅವಳ ಮನೆಯತ್ತ ಗಾಡಿ ಓಡಿಸುತ್ತಿದ್ದ ಪೊನ್ನಪ್ಪನ ತಲೆಯಲ್ಲಿ ನೂರಾರು ಕುತೂಹಲ ವಿಚಾರಗಳು ಭುಗಿಲೆದ್ದಿದ್ದವು. ನಿರ್ಜನ ರಸ್ತೆಯಲ್ಲಿ ಮೆಲ್ಲನೆ ಹೆಜ್ಜೆಯಿಡುತ್ತಾ ಕಾಂಪೌಂಡ್ ಜಿಗಿದು ಮನೆಯ ಬಾಗಿಲ ಬಳಿ ಬಂದು ಕದ ತಟ್ಟಿದಾಗ ಉತ್ತರ ಬಾರದಿದ್ದಕ್ಕೆ ಬಾಗಿಲನ್ನು ತಳ್ಳಿದ. ಬಾಗಿಲು ತೆರೆದುಕೊಂಡಿತು ಕಗ್ಗತ್ತಲು ಆವರಿಸಿತ್ತು. ಮೆಲ್ಲನೆ ಹೆಜ್ಜೆ ಇಡುತ್ತ ಒಳಗೆ ಹೋದಾಗ ಲೋಹದ ಕೀರಲು ಸದ್ದಾಗಿ ಅಲ್ಲಿ ಹೆಜ್ಜೆಯ ಸಪ್ಪಳ ಕೇಳಿಬಂದಾಗ ಅಲ್ಲಿ ಯಾರೋ ಇದ್ದಾರೆ ಎಂದೆನಿಸಿ ಅಲ್ಲೇ ಗೋಡೆಗೆ ಶಿಲೆಯಂತೆ ನಿಂತುಕೊಂಡ. ಹೊರಗೆ ಮರೆಯಲ್ಲಿ ನಿಲ್ಲಿಸಿದ್ದ ಪೊನ್ನಪ್ಪನ ಗಾಡಿಯ ಫಲಕವನ್ನು ಕಂಡವರು ಠಾಣೆಗೆ ತಿಳಿಸಿಯಾಗಿತ್ತು. ಮರುದಿನ: ‘ಯುವತಿಯ ಕೊಲೆ : ಪರಾರಿಯಾದ ಕೊಲೆಗಾರ’ ಸುದ್ದಿ ಪ್ರಕಟವಾಗಿತ್ತು.
ಪೊಲೀಸ್ ಅಧಿಕಾರಿ ಅಚ್ಚಯ್ಯ, ಶ್ರೀವಲ್ಲಿಯ ಕೊಲೆ ಪ್ರಕರಣದಲ್ಲಿ ತಲೆ ಕೆಡಿಸಿಕೊಂಡಿದ್ದಾಗ ಠಾಣೆಗೆ ಬಂದ ಪೊನ್ನಪ್ಪನನ್ನು ನೋಡಿ ಆಶ್ಚರ್ಯದಿಂದ ಅವನನ್ನು ಬರಮಾಡಿಕೊಂಡನು. ಮಾತು ಮಾತಲ್ಲಿ ಪೊಲೀಸ್ ಅಧಿಕಾರಿ ಶ್ರೀವಲ್ಲಿ ಕೊಲೆಯ ತನಿಖೆಯನ್ನು ಚುರುಕು ಗೊಳ್ಳಿಸಿದ್ದಾನೆ ಎಂದು ತಿಳಿದ ಪೊನ್ನಪ್ಪ ಕುತೂಹಲ ತಡೆಯಲಾರದೆ ಕೊಲೆಯ ತನಿಖೆಯಲ್ಲಿ ಸಹಾಯವಾಗುವಂತಹ ಒಂದಷ್ಟು ಉಹಾಪೋಹಳನ್ನು ಅಚ್ಚಯ್ಯನ ತಲೆಯಲ್ಲಿ ತುಂಬಿ ತನಗೆ ಬೇಕಾಗಿದ್ದ ಕೊಲೆಗೆ ಸಂಬಂಧಿಸಿದ ವಿಷಯಗಳನ್ನು ತಿಳಿದನು. ಹೇಗಾದರೂ ಮಾಡಿ ಕೊಲೆ ಪ್ರಕರಣದಿಂದ ಪಾರಾಗಬೇಕು ಎಂದು ತನ್ನ ಮುಂದಿನ ಹೆಜ್ಜೆಗೆ ಸಜ್ಜಾದನು. ಠಾಣೆಯ ಹೊರಗೆ ಬಂದು ಬೈಕ್ ಹತ್ತಿದ ಪೊನ್ನಪ್ಪನ ಬೈಕಿನ ಸಂಖ್ಯಾ ಫಲಕ ಅಚ್ಚಯ್ಯನ ಗಮನಕ್ಕೆ ಬಂದದ್ದು ಪೊನ್ನಪ್ಪನಿಗೆ ತಿಳಿಯಲೇ ಇಲ್ಲ.
ಕೊಲೆ ಪ್ರಕರಣದ ತನಿಖೆಯ ವೇಳೆ ಪೊಲೀಸ್ ಅಧಿಕಾರಿ ಅಚ್ಚಯ್ಯನಿಗೆ, ಶ್ರೀವಲ್ಲಿ ಮನೆಯ ಬಳಿ ಮರೆಯಲ್ಲಿ ಕಂಡುಬಂದ ಬೈಕಿನ ಮುರಿದ ಸಂಖ್ಯಾ ಫಲಕದಲ್ಲಿದ್ದ ಸಂಖ್ಯೆಗಳು ಹಾಗೂ ಪೊನ್ನಪ್ಪ ಠಾಣೆಗೆ ಬಂದಿದ್ದಾಗ ಕಂಡ ಗಾಡಿಯ ಮುರಿಯದೇ ಇದ್ದ ಫಲಕದ ಸಂಖ್ಯೆಗಳು ಒಂದೇ ಎಂಬ ಮಾಹಿತಿ ಸಿಕ್ಕಿತು. ಪೊನ್ನಪ್ಪನ ಮನೆಯ ಅಟ್ಟದಲ್ಲಿಟ್ಟಿದ್ದ ರಕ್ತ ಸಿಕ್ತ ಬಟ್ಟೆಯ ಗಂಟು ಸಿಕ್ಕಿದಾಗ ಅದನ್ನು ಫೋರೆನ್ಸಿಕ್ ಡಿಪಾರ್ಟ್ಮೆಂಟ್ ಗೆ ಕಳುಹಿಸಿದನು. ಅಟ್ಟದ ಮೇಲೆ ಅಂಟು ಗೊಂಡಿದ್ದ ರಕ್ತ ಹಾಗೂ ಬಟ್ಟೆಗಳ ಮೇಲೆ ಇದ್ದ ರಕ್ತದ ಕಲೆಗಳ ಫೋರೆನ್ಸಿಕ್ ರಿಪೋರ್ಟ್ಗಳು ಹಾಗೂ ಕೊಲೆಯಾದ ಶ್ರೀವಲ್ಲಿಯ ರಕ್ತ, ಕೊಲೆಯಾದ ಸ್ಥಳದಲ್ಲಿ ಸಿಕ್ಕಿದ್ದ ಚಾಕು ಹಾಗೂ ಹಾಕಿ ಸ್ಟಿಕ್ ಮೇಲಿನ ಫಿಂಗರ್ ಪ್ರಿಂಟ್ಸ್ ಒಂದಕೊಂದು ಮ್ಯಾಚ್ ಆಗಿದ್ದನ್ನು ನೋಡಿ ಅಚ್ಚಯ್ಯ ದಿಗ್ಭ್ರಮೆಗೊಂಡನು.
‘ಶ್ರೀವಲ್ಲಿಯ ಕೊಲೆಗಾರ ವಕೀಲ ಪೊನ್ನಪ್ಪ!!!’ ಪೊಲೀಸ್ ಅಧಿಕಾರಿ ಅಚ್ಚಯ್ಯ, ಪೊನ್ನಪ್ಪನ್ನ ಬೆನ್ನೇರಿದನು. ತನ್ನ ಮನೆಯ ಅಟ್ಟದಲ್ಲಿಟ್ಟಿದ್ದ ರಕ್ತ ಸಿಕ್ತ ಬಟ್ಟೆಯ ಗಂಟು ನಾಪತ್ತೆ ಯಾಗಿದೆ ಎಂದು ತಿಳಿದ ಪೊನ್ನಪ್ಪನ ಹೃದಯದ ಬಡಿತ ಹೆಚ್ಚಾಗಿ ಪೊಲೀಸ್ ಅಧಿಕಾರಿಯ ಕೈಗೆ ಸಿಕ್ಕಿಹಾಕಿಕೊಳ್ಳುವ ಮುನ್ನ ತಾನು ನಿರಪರಾಧಿ ಎಂದು ಸಾಬೀತುಪಡಿಸಲೇ ಬೇಕು ಎಂದು ಪೊಲೀಸ್ ಅಧಿಕಾರಿ ಅಚ್ಚಯ್ಯನ ಶಿಷ್ಯ ಕುಶಾಲಪ್ಪನಿಂದ ಶ್ರೀವಲ್ಲಿಯ ಬಗ್ಗೆ ಮಾಹಿತಿಗಳನ್ನು ಸಂಗ್ರಹಿಸಿದಾಗ ಶ್ರೀವಲ್ಲಿಗೆ ಆಂಡ್ರು ಮೆಕಾಲಿಫ್ ನ ಮಗ ಸಮೀರ್ ಮೆಕಾಲಿಫ್ ಎಂಬ ಪ್ರಿಯಕರನಿದ್ದನೆಂದು, ಅವಳು ಅವನಿಂದ ಬಸಿರಾಗಿದ್ದಳು ಎಂಬು ಮುಖ್ಯ ವಿಷಯ ತಿಳಿದು.
“ಮೆಕಾಲಿಫ್ ನಂತಹ ಶ್ರೀಮಂತನ ಸೊಸೆಯಾಗುವವಳನ್ನು ಕೊಂದವನು ಯಾರು? ” ಬಡಕುಟುಂಬದವಳಾದ ಶ್ರೀವಲ್ಲಿಯು ಬಸುರಿಯಾಗಿದ್ದಾಳೆ ಎಂದು ಗೊತ್ತಾದಾಗ ಸಮೀರ್ ಮೆಕಾಲಿಫ್ ಅವಳನ್ನು ಮದುವೆಯಾಗಲು ನಿರಾಕರಿಸಿ ಅವಳನ್ನು ಕೊಲೆ ಮಾಡಿರಬೇಕು! ಪೊನ್ನಪ್ಪನ ತಲೆ ಮತ್ತಷ್ಟು ಚುರುಕಾಗಿ ಕೆಲಸಮಾಡಿತು.
ಬ್ಲೂಬೆರಿ ಎಸ್ಟೇಟ್ ನ ಮೆನೆಜರ್ ಅಂತೋಣಿ ಡಿಕಾಸ್ಟ ಯಾವುದೋ ಒಂದು ಕೇಸಿನ ಕುರಿತಾಗಿ ಮಾತನಾಡಲು ಪೊನ್ನಪ್ಪನ ಕಚೇರಿಗೆ ಬಂದು ವಿಷಯದ ಬಗ್ಗೆ ಮಾತನಾಡುತ್ತ, ಮಾತು ಮಾತಲ್ಲಿ “ಆಂಡ್ರು ಮೆಕಾಲಿಫ್, ಶ್ರೀವಲ್ಲಿಯನ್ನು ಸೊಸೆಯಾಗಿ ಸ್ವೀಕರಿಸಲು ಒಪ್ಪಲಿಲ್ಲ. ಅಂತರ್ಜಾತಿಯ ಪ್ರೇಮ ಪ್ರಕರಣವಾಗಿದ್ದರಿಂದ ಆ ಹುಡುಗಿನಾ ಕೊಂದುಹಾಕಿದ” ಎಂದು ಹೇಳಿದಾಗ ದಂಗಾದ ಪೊನ್ನಪ್ಪ ತನ್ನ ತನಿಖೆಯನ್ನು ಅತ್ತ ಹರಿಸಿದ.
ಚುಮು ಚುಮು ಬೆಳಕಲ್ಲಿ ಆಂಡ್ರು ಮೆಕಾಲಿಫ್ ನ ಎಸ್ಟೇಟ್ ಕಡೆ ಗಾಡಿಯನ್ನು ಓಡಿಸಿದ. ಎಸ್ಟೇಟ್ ನ ಕೆಲಸಗಾರ ಮಂದಣ್ಣ ಪೊನ್ನಪ್ಪನನ್ನು ಸ್ವಾಗತಿಸಿ ಎಸ್ಟೇಟ್ ಸುತ್ತ ಮುತ್ತ ಏನೆಲ್ಲಾ ಇದೆ ಎಂದು ತೋರಿಸಲು ಅವನ ಜೊತೆ ಹೋದ. ಪೊನ್ನಪ್ಪನು ತಾನು ಸಂಗ್ರಹಿಸಿದ್ದ ಒಂದು ನಕ್ಷೆಯ ಪ್ರಕಾರ ಎಸ್ಟೇಟ್ ನ ಜಾಗಗಳನ್ನು ಪರಿಶೀಲಿಸುತ್ತಾ ಹೋದನು. ಅಲ್ಲಲ್ಲಿ ಆಕರ್ಷಕ ಶಿಲುಬೆಗಳಿದ್ದು ಶಿಲುಬೆಗಳ ಅಡಿಯಲ್ಲಿ ಬರೆದಿದ್ದ ಒಗಟಿನ ಮಾದರಿಯ ಫಲಕಗಳು ಕುತೂಹಲವನ್ನು ಹೆಚ್ಚಿಸಿತು. ನಡೆದು ಎಸ್ಟೇಟಿನ ಗಡಿಯ ಸಮೀಪಿಸಿದಾಗ ಅಲ್ಲೊಂದು ತಾವರೆ ಹೂಗಳಿಂದ ತುಂಬಿದ್ದ ಕೊಳ!…ಅಲ್ಲಲ್ಲಿ ಫಲಕಗಳು. ಫಲಕದ ಮೇಲೆ.

‘ಯಾವಾಗಲೂ ಗಡಿ ದಾಟಬೇಡಿ! ಪೊನ್ನಪ್ಪನಿಗೆ ವಿಚಿತ್ರ ಎಂದೆನಿಸಿ ಚಕಿತಗೊಂಡನು. ಅಲ್ಲೆಲ್ಲೋ ಸ್ಮಶಾನ ಇರಬಹುದು ಎಂಬ ಸಂಶಯ ಮೂಡಿ, ಮಂದಣ್ಣನನ್ನು ವಿಚಾರಿಸಿದಾಗ ಆ ಕೊಳದಲ್ಲಿ ಆಂಡ್ರು ಮೆಕಾಲಿಫ್ ನ ತಾಯಿಯ ಹಾಗೂ ಅಣ್ಣನ ಸಮಾಧಿ ಇದೆ ಎಂದೂ ಅಣ್ಣ ಜಾನ್ ಮೆಕಾಲಿಫ್ ಅದೇ ಕೊಳದಲ್ಲಿ ಮುಳುಗಿ ಸತ್ತಿದ್ದ ವಿಷಯವನ್ನು ಪೊನ್ನಪ್ಪನಿಗೆ ತಿಳಿಸಿದ. ಆ ಸಮಯದಲ್ಲಿ ಅಲ್ಲಿ ಎದುರಿಗೆ ಸಿಕ್ಕ ‘ಚೇರಿಯನ್’ ಎಂಬ ವ್ಯಕ್ತಿ ಪೋನಪ್ಪನ ಗಮನವನ್ನು ಸೆಳೆದನು.
ಇತ್ತ ಪೊಲೀಸ್ ಅಧಿಕಾರಿ ಅಚ್ಚಯ್ಯ ಅಚ್ಚರಿಯಿಂದ ಹುಬ್ಬೇರಿಸಿ ಶ್ರೀ ವಲ್ಲಿಯ ಮೊಬೈಲ್ ನ ಕರ ಪಟ್ಟಿಗಳಲ್ಲಿದ್ದ ಮೊಬೈಲ್ ಸಂಖ್ಯೆಗಳನ್ನು ಪರಿಶೀಲಿಸಿದಾಗ ಕಂಡುಬಂದದ್ದು. ಪೊನ್ನಪ್ಪನು ಮನೆಯಲ್ಲಿಲ್ಲದ ಸಮಯದಲ್ಲಿ ಅಚ್ಚಯ್ಯ, ಪೊನ್ನಪ್ಪನ ಮನೆಗೆ ಹೋಗಿ ಮಾಲೀಕ ಸುಬ್ಬಯ್ಯನ ಬಳಿ ಇದ್ದ ಮನೆಯ ಡೂಪ್ಲಿಕೇಟ್ ಕೀ ಸಹಾಯದಿಂದ ಮನೆಯೊಳಗೆ ಹೋಗಿ ಪೊನ್ನಪ್ಪನ ಮನೆಯನ್ನು ಶೋಧಿಸುತ್ತಿದ್ದಾಗ ಕಂಪ್ಯೂಟರ್ ಪಕ್ಕ ಇರಿಸಿದ್ದ ಒಂದು ಕಾಗದ ಪತ್ರ ಕಣ್ಣಿಗೆ ಬಿದ್ದು ಆತುರಾತುರದಿಂದ ಕಾಗದ ಪತ್ರಗಳನ್ನು ಓದುತ್ತಾನೆ. ಅದು ಒಂದು “ಉಡುಗೊರೆ ಪತ್ರ” ವಾಗಿತ್ತು. ಕುತೂಹಲದಿಂದ ಓದಿದ ಅಚ್ಚಪ್ಪ ಬೆಚ್ಚಿಬಿದ್ದ. ಪೊನ್ನಪ್ಪನ್ನ ಹೆಸರಲ್ಲಿ ಆಂಡ್ರು ಮೆಕಾಲಿಫ್ ಮಾಡಿದ್ದ ಉಡುಗೊರೆ ಪತ್ರ ಅದಾಗಿದ್ದು ಸುಮಾರು ‘ಎಪ್ಪತ್ತು ಲಕ್ಷ’ ಮೌಲ್ಯದ ಎರೆಡು ಮಳಿಗೆಗಳನ್ನು ಪೊನ್ನಪ್ಪನಿಗೆ ಉಡುಗೊರೆಯಾಗಿ ಕೊಡುವ ಕರಾರು ಪತ್ರ. ಹಣದ ಆಮಿಷಕ್ಕೆ ಪೊನ್ನಪ್ಪನೇ ಕೊಲೆ ಮಾಡಿದ್ದಾನೆ ಎಂಬ ಸಂಶಯ ಬಲವಾಯಿತು.
ಪೊಲೀಸ್ ಅಧಿಕಾರಿ ಅಚ್ಚಯ್ಯನ ಸಂಶಯದಂತೆ ಪೊನ್ನಪ್ಪ ಕೊಲೆಗಾರನೇ ಲಾಯರ್ ಪೊನ್ನಪ್ಪ ತನ್ನನ್ನು ತಾನು ನಿರಪರಾಧಿ ಎಂದು ಸಾಬೀತುಪಡಿಸಲು ತನ್ನೆಲ್ಲಾ ಜಾಣತನವನ್ನು ಉಪಯೋಗಿಸಿ ಕಂಡುಕೊಂಡ ಸತ್ಯ ಫಲ ನೀಡಿತೇ. ಅಂದು ರಾತ್ರಿ 10-55 ಕ್ಕೆ ಶ್ರೀವಲ್ಲಿ ಪೊನ್ನಪ್ಪನಿಗೆ ಫೋನ್ ಮಾಡಿ ಹೀಗೆಂದು ಹೇಳಿದಳು :
“ಪೆಮ್ಮಯ್ಯ, ನಾನೀಗ ಅಪಾಯದಲ್ಲಿದ್ದೀನಿ. ತಕ್ಷಣ ಬಾ. ಹಿಂದುಗಡೆ ಅವರಿಬ್ಬರೂ ನಿಂತಂತೆ ಕಾಣಿಸುತ್ತಿದೆ. ನೀನು ಹಿಂದುಗಡೆ ಕಾವೇರಿ ಥೀಯೇಟರ್ ಕಡೆಯಿಂದ ಪಾಗಾರ ಹಾರಿ ಬಾ…… ತಡ ಮಾಡಬೇಡ….”
ಅಂದಹಾಗೆ ಈ ಪೆಮ್ಮಯ್ಯ ಯಾರು!?
ಪೊನ್ನಪ್ಪನಿಗೆ ಕರೆ ಮಾಡಿ ‘ಪೆಮ್ಮಯ್ಯ’ ಎಂದು ಹೇಳಿದಳಲ್ಲ!!!
ಲಾಯರ್ ಪೊನ್ನಪ್ಪ ಹಾಗೂ ಪೊಲೀಸ್ ಅಧಿಕಾರಿ ಅಚ್ಚಯ್ಯ ಇವರಿಬ್ಬರ ತನಿಖಾ ಶೈಲಿಯನ್ನು ರೋಚಕವಾಗಿ ಹೆಣೆದು, ಪ್ರತೀ ಪಾತ್ರಗಳಿಗೆ, ಸನ್ನಿವೇಶಗಳಿಗೆ ಕುತೂಹಲ ತುಂಬಿ ಕೊನೆಯ ಹಂತದವರೆಗೂ ಕೌತುಕವನ್ನು ಹುಟ್ಟಿಸುತ್ತ ಒಂದು ರೋಚಕ ಪತ್ತೇದಾರಿ ಕಾದಂಬರಿಯನ್ನು ಓದುಗರಿಗೆ ತಲುಪಿಸಿದ ಲೇಖಕರಾದ ಶ್ರೀಯುತ ರವಿರಾಜ್ ಬೈಕಂಪಾಡಿ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು.
ಪ್ರತೀ ಹಂತದಲ್ಲೂ ಕುತೂಹಲ ತುಂಬಿರುವ ಈ ಪುಸ್ತಕವನ್ನು ಕೊಂಡು ಓದಿ ಪ್ರೋತ್ಸಾಹಿಸಿ.
- ಹೆಚ್ ವಿ ಮೀನಾ – ಪತ್ತೇದಾರಿ ಕಾದಂಬರಿಗಾರ್ತಿ, ಬೆಂಗಳೂರು.
