ಭಾವನೆಗಳಂತೆ ಬದುಕು 

ಮನುಷ್ಯ ಜಾತಿಯಲ್ಲಿ ಸರ್ವರೂ ಒಂದೇ ತೆರನಾಗಿ ಇರುವುದಿಲ್ಲ, ಅದೇ ತರ ಭಾವನೆಯು ಅತೀ ಮುಖ್ಯ. ಶಾಲೆಯಲ್ಲಿ ಒಂದೇ ತರಗತಿಯಲ್ಲಿ ಓದುವ ಒಂದೇ ವಯಸ್ಸಿನ ಹಲವಾರು ಮಕ್ಕಳಿದ್ದೂ ಅವರವರ ವರ್ತನೆ ಬೇರೆ ಬೇರೆ ರೀತಿಯದ್ದು ಕಾಣಸಿಗುವುದು. ಶೀತಲ್ ಹೆಗಡೆ ಅವರ ಬದುಕು ಭಾವನೆಗಳ ಮೇಲೆ ಅವಲಂಬಿತವಾಗಿರುತ್ತದೆ. ತಪ್ಪದೆ ಮುಂದೆ ಓದಿ…

“ಯದ್ಭಾವಂ ತದ್ಭವತಿ” ಅಂದರೆ ಭಾವನೆಯಂತೆಯೇ ಬದುಕು ಎಂದರ್ಥ. ಇದು ಭಗವದ್ಗೀತೆಯಲ್ಲಿ ಉಲ್ಲೇಖಿತವಾದ ಮಾತಿನ ಸಾರ. ಗೀತೆಯಲ್ಲಿ ಜನ್ಮಗಳ ಸಂಬಂಧಿತವಾದ ಪ್ರವಚನ ಪಾಂಡವರಿಗೆ ಕೊಡುತ್ತಿರುವ ಸಮಯದಲ್ಲಿ ಉಲ್ಲೇಖಿಸಿದ ನುಡಿ.

ಧರ್ಮಶಾಸ್ತ್ರದಲ್ಲಿ ಎಲ್ಲ ಜೀವಿಗಳಿಗಿಂತ ಮಾನವ ಜನ್ಮ ಶ್ರೇಷ್ಟವಾದುದೆಂದು ಹೇಳಲಾಗಿದೆ. ಎಲ್ಲವೂ ಅನುಭವಿಸಿ ಎಲ್ಲದರ ಮೇಲೂ ಜಯಸಾಧಿಸಿ ಕೊನೆಯಲ್ಲಿ ಅರ್ಹವಾಗಿರುವ ಜೀವಿಯೇ ಮನುಷ್ಯ ರೂಪವನ್ನು ಹೊಂದಿ ಭೂಮಿಯಲ್ಲಿ ಜನ್ಮ ತಾಳುವುವನೆಂಬ ಅಗಾಧ ನಂಬಿಕೆ ಇದೆ.

ಮನುಷ್ಯ ಜಾತಿಯಲ್ಲಿ ಸರ್ವರೂ ಒಂದೇ ತೆರನಾಗಿ ಇರುವುದಿಲ್ಲ, ಇರಲೂ ಸಾಧ್ಯವೂ ಇಲ್ಲ. ಅದು ಬಣ್ಣ, ಆಕಾರ ಹಾಗೂ ಬುದ್ದಿ ಮತ್ತೆ ಪ್ರಕಾರ ಬೇರೆ ಬೇರೆ ತೆರನಾಗಿ ಕಾಣಸಿಗುವರು.
ಭಾವನೆಗಳೂ ಹಾಗೆಯೇ, ಅವನ ಮನದಲ್ಲಿ ಯಾವ ಕಾಲಕ್ಕೆ ಏನನ್ನು ಯೋಚಿಸುವನು? ಅದಕ್ಕೆ ಹೇಗೆ ಪ್ರತಿಕ್ರಿಯಿಸುವನು ಎಂಬುದು ವ್ಯಕ್ತಿಗತವಾದ ವಿಷಯ.

ಒಬ್ಬ ಸಾಮಾನ್ಯ ಮನುಷ್ಯನು ಅವನು ವ್ಯವಹರಿಸುವ ಸುತ್ತಲಿನ ಪರಿಸರ, ಅವನ ಕುಟುಂಬ, ಸ್ನೇಹಿತ ಬಳಗ ಹಾಗೂ ಸಮಾಜದ ಕಟ್ಟುಪಾಡುಗಳು. ಹೀಗೆ ಹತ್ತು ಹಲವಾರು ಅಂಶಗಳ ಪ್ರಭಾವ ಅವನ ಯೋಚನೆಯ ಮೇಲೆ ಹಿಡಿತ ಸಾಧಿಸಿದಾಗ ಅವನು ಹೇಗೆ ಅದಕ್ಕೆ ಪ್ರತಿಕ್ರಿಯಿಸುವನು ಎಂಬುದರ ಮೇಲೆ ಅವನು ನಡೆಸುವ ಬದುಕು ನಿರ್ಭರಿತವಾಗಿದೆ.

ಇಲ್ಲಿ ಭಾವನೆಯು ಅತೀ ಮುಖ್ಯ. ಶಾಲೆಯಲ್ಲಿ ಒಂದೇ ತರಗತಿಯಲ್ಲಿ ಓದುವ ಒಂದೇ ವಯಸ್ಸಿನ ಹಲವಾರು ಮಕ್ಕಳಿದ್ದೂ ಅವರವರ ವರ್ತನೆ ಬೇರೆ ಬೇರೆ ರೀತಿಯದ್ದು ಕಾಣಸಿಗುವುದು. ಒಬ್ಬನು ಸೌಮ್ಯ, ಒಬ್ಬನು ತುಂಬಾ ತುಂಟ ಮತ್ತು ಒಬ್ಬ ಕಳ್ಳತನ (ಪೆನ್ಸಿಲ್ಲ, ಪೆನ್ನು, ನೋಟ ಬುಕ್ ) ಮಾಡುವವನನ್ನೂ ಕಾಣಬಹುದು. ಇವೆಲ್ಲ ಅವರುಗಳು ಯೋಚಿಸುವ ರೀತಿ. ಅದರಂತೆ ಸಮಾಜದಲ್ಲಿ ಮಹಾನ್ ವ್ಯಕ್ತಿಗಳು, ಅವರ ಜೀವನಗಾಥೆಯನ್ನು ತಿಳಿದುಕೊಂಡಾಗ ಒಂದಂಶವನ್ನು ಗಮನಿಸಬಹುದು ಅವರೇನು ಯೋಚಿಸುವರೋ… ಅವರ ಭಾವನೆ ಎಂತಿರುವುದೋ ಅದೇ ರೀತಿಯ ಜೀವನ ಬದುಕುವ ಪರಿಯೂ ಹಾಗೇ ಇರುತ್ತದೆ.

ಸ್ವಾಮಿ ವಿವೇಕಾನಂದರು ಶ್ರೀಮಂತ ಮನೆತನದಲ್ಲಿ ಜನಿಸಿದರೂ, ಅವರ ಮುಂದಿನ ದಿನಗಳಲ್ಲಿ ಶ್ರೇಷ್ಠ ಆಧ್ಯಾತ್ಮಿಕ ನಾಯಕ ಹಾಗೂ ಯುವಜನರ ಸ್ಪೂರ್ತಿಯಾಗಿ ಹೊರಹೊಮ್ಮಿದರು. ಗುರು ರಾಮಕೃಷ್ಣ ಪರಮಹಂಸರ ಭೇಟಿಯ ನಂತರ ಅವರ ಜೀವನವೇ ಬದಲಾಯ್ತು. ಅವರ ಪ್ರಭಾವಕ್ಕೆ ಒಳಗಾಗಿ ಸನ್ಯಾಸತ್ವ ಪಡೆದರು.

ಡಾ.ಎಪಿಜೆ ಅಬ್ದುಲ್ ಕಲಾಂ ರವರು ಅತ್ಯಂತ ಬಡತನದಲ್ಲಿ ಜನಿಸಿದ್ರೂ ಅವರ ಓದಿನ ಬಗೆಗಿದ್ದ ಅತೀವ ಹಂಬಲದಿಂದ ಇಸ್ರೋದಲ್ಲಿ ಎಸ್ಎಲ್ ವಿ ಯಲ್ಲಿ ಯೋಜನಾ ನಿರ್ದೇಶಕರಾಗಿ ಭಾರತದ ಮೊದಲ ಸ್ವದೇಶಿ ಉಪಗ್ರಹ ಉಡಾವಣೆ ವಾಹನದ ಯಶಸ್ಸಿಗೆ ಕಾರಣರಾದರು.’ ಮಿಸೈಲ್ ಮ್ಯಾನ್’ ಎಂದೇ ಪ್ರಖ್ಯಾತ ಹೊಂದಿ ಅತ್ಯಂತ ಕಡಿಮೆ ವೆಚ್ಚದಲ್ಲಿ ಹೃದಯದ ಸ್ಟಂಟ್ ಅಭಿವೃದ್ಧಿಗೆ ಕಾರಣವಾದರಲ್ಲದೇ ವಿದ್ಯಾರ್ಥಿಗಳೆಂದರೆ ಅದೆಷ್ಟು ಪ್ರೀತಿ ಮಮತೆಯೆಂದರೆ ಅವರ ಕೊನೆಯುಸಿರೂ ಸಹ ವಿದ್ಯಾರ್ಥಿಗಳ ಜೊತೆ ಸಂವಾದಮಾಡುತ್ತಲೇ ಮುಕ್ತಯಗೊಳಿಸಿಕೊಂಡ್ರು.

ಬುದ್ಧನನ್ನು ಗಮನಿಸಿದಾಗ ಅವನು ರಾಜ ಮನೆತನದಲ್ಲಿ ಹುಟ್ಟಿ ಕ್ರಮೇಣ ಐಷಾರಾಮಿ ಭೋಗಗಳ ಜೀವನದಿಂದ ಜಿಗುಪ್ಸೆ ಹೊಂದಿ ತನ್ನ ಹೆಂಡತಿ ಮಗನನ್ನು ಬಿಟ್ಟು ವೈರಾಗ್ಯದೆಡೆಗೆ ಅವನ ಮನಸ್ಸು ವಾಲಿದ್ದು ನಂತರದಲ್ಲಿ ಬದುಕಿನಲ್ಲಿ ಮುಕ್ತಿಮಾರ್ಗವನ್ನು ಹೇಗೆ ಪಡೆಯಲು ಸಾಧ್ಯವೆಂಬುದನ್ನು ಸಾಧಿಸಿದ ವಿರಾಗಿಯವನು.

ಸ್ವಾತಂತ್ರ್ಯಹೋರಾಟಗಾರರು, ಮಹಾನ್ ಸಂಗೀತಗಾರರು,ಲೇಖಕರು, ಅನೇಕರು ಅವರ ಸಾಧನೆಯ ಹಾದಿಯಲ್ಲಿ ಯಶಸ್ಸು ಕಂಡಿರುವುದು ಅವರ ಪ್ರಯತ್ನದ ಜೊತೆ ನಂಬಿಕೆ ವಿಶ್ವಾಸ ಹಾಗೂ ಎಲ್ಲಕ್ಕಿಂತ ಅವರ ಭಾವನೆಯಲ್ಲಿ ಪ್ರಮುಖವಾಗಿ ತಾನು ಇಂತಹುದಕ್ಕಂತನೇ ಇರುವೆ, ತನ್ನ ಜೀವನ ಇದಕ್ಕಂತಲೇ ಮೀಸಲು ಎಂಬುದರ ಬಗ್ಗೆ ಯೋಚಿಸಿವುದೇ ಯಶಸ್ಸಿಗೆ ಕಾರಣವಾಗಿರುವುದು.

ಸಾಮಾನ್ಯ  ಜನರಲ್ಲಿ ನಾನಾ ರೀತಿಯವರು ಇರುವುದನ್ನು ನೋಡಿರತೀವಿ. ಕಲ್ಲಿನಲ್ಲಿ ದೇವರನ್ನು ಕಾಣುವರನ್ನು, ಕಲ್ಲನ್ನು ಬಚ್ಚಲಮನೆಯಲ್ಲಿ ಉಪಯೋಗಿಸುವವರನ್ನು,ವೈದ್ಯರಲ್ಲಿ, ನ್ಯಾಯವಾದಿಗಳಲ್ಲಿ ನಂಬಿಕೆ ಇಡುವವರರೊಂದೆಡೆಯಾದರೆ ಇವರಂತ ಅನ್ಯಾಯಿಗಳಿಲ್ಲ ಮನುಷ್ಯನ ಜೀವವನ್ನೇ ಬಲಿಕೊಡುವ ಕಲಿಯುಗದ ರಕ್ಕಸರೆಂದು ತಿಳಿದವರೂ ಇದ್ದಾರೆ. ಜನ್ಮವಿತ್ತ ಹೆತ್ತವರನ್ನು ದೇವರೆಂದು ಪೂಜಿಸುವವರು ಇದ್ದಲ್ಲಿ, ಅವರು ಹೊರೆಯೆಂದು ಮನೆಯಿಂದ ಹೊರತಳ್ಳುವ ನೀಚ ಸಂತಾನವೂ ಇದೆ. ಹೆಣ್ಣನ್ನು ದೇವತೆಯೆಂದು ಪೂಜಿಸುವ ಮನಸೂ ಇದೆ, ಅವಳಲ್ಲಿ ತನ್ನ ಕಾಮತೃಷೆಯನ್ನು ತಣಿಸಿಕೊಂಡು, ಅಸಹ್ಯಭಾವದಿಂದ ನೋಡಿ ಭೋಗದ ವಸ್ತುವನ್ನಾಗಿಸಿ ಸಮಾಜದಲ್ಲಿ ತಿಪ್ಪೆಗೆಸಿಯುವ ಜನರೂ ಇದ್ದಾರೆ.

ಮನದಮಾತು

ಯಾವುದೇ ಮನುಷ್ಯನಾಗಲೀ ಹುಟ್ಟತಾ ಮಹಾನ್ ನಾಗಿಯೋ, ಕೊಲೆಗೆಡುಕನಾಗಿಯೋ, ಕಳ್ಳನಾಗಿಯೋ, ಮೋಸವಂಚಕನಾಗಿಯೋ,ಲೋಭಿಯಾಗಿಯೋ ಇರಲಾರ ಇವೆಲ್ಲ ಕ್ರಮೇಣ ಅವನ ಸುತ್ತಲಿನ ಪರಿಸರ, ಅವನು ಬೆಳೆದ ವಾತಾವರಣ, ಅವನ ಕುಟುಂಬದಲ್ಲಿ ಇತರರ ವರ್ತನೆ ಹಾಗೂ ಅವನು ತನ್ನಲ್ಲಿ ಏನನ್ನು ಸ್ವೀಕರಿಸುತ್ತಾನೆ ಎಂಬುದರ ಮೇಲೆ ಅವನ ಗುಣ ಸ್ವಭಾವ ಹಾಗೂ ಅವನ ಮುಂದಿನ ಬದುಕು ನಿರ್ಭರಿತವಾಗಿದೆ. ಇವಕ್ಕೆಲ್ಲ ಕಾರಣ ಅವನ ಭಾವನೆಗಳು. (ಹಾಗಾಗಿಯೇ ಮಹಾನ್ ವ್ಯಕ್ತಿಗಳು ಮಹಾನಾ ಅನ್ನಿಸಿಕೊಂಡಿದ್ದು,) ಅವನು ಭಾವನೆಗೆ ಸ್ಪಂದಿಸುವ ರೀತಿ. ಇದನ್ನೇ ಭಗವದ್ಗೀತೆಯಲ್ಲಿ ಹೇಳಿರುವರು ನಾವೆಲ್ಲ ಅರಿಯಬೇಕಾದ ಸಂಗತಿ

‘ಯದ್ಭಾವಂ ತದ್ಭವತಿ’… ನಮ್ಮ ಭಾವನೆಗಳಂತೆ ನಮ್ಮ ಬದುಕು.

ಇದನ್ನು ಹಸನಾಗಿ ಮಾಡಿಕೊಳ್ಳಬೇಕೋ ಅಥವಾ ನಮ್ಮ ಗುಂಡಿಯನ್ನು ನಾವೇ ತೋಡಿಕೊಳ್ಳಬೇಕೋ ಅನ್ನುವುದು ನಮ್ಮ ಕೈಯಲ್ಲಿದೆ.


  • ಶೀತಲ್ ಹೆಗಡೆ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading