ತಂದೆ-ಮಗನ ಸಂಘರ್ಷ, ಧರ್ಮ ಮತ್ತು ಲೋಕಕಲ್ಯಾಣದ ನಡುವಿನ ವ್ಯತ್ಯಾಸ ಇವೆಲ್ಲವನ್ನು ಒಂದೇ ಕಥಾಹಂದರದಲ್ಲಿ ಜೋಡಿಸುವ ಅಪರೂಪದ ಪ್ರಯತ್ನವೇ ಈ ಲಕ್ಷ್ಮಣ ಕೌಂಟೆ ಅವರ ‘ಋಷ್ಯಶೃಂಗ’ ಕಾದಂಬರಿ. ಈ ಕೃತಿಯ ಕುರಿತು ಸುಮಾ ಭಟ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ: ಋಷ್ಯಶೃಂಗ
ಲೇಖಕರು : ಲಕ್ಷ್ಮಣ ಕೌಂಟೆ
ಮುದ್ರಣ: ೨೦೧೯(ಪ್ರಥಮ)
ಪ್ರಕಾಶಕರು: ಭರತ್ ಬುಕ್ಸ್
ಪುಟಗಳು:೩೨೬
ಬೆಲೆ: ೩೨೫
ಮಹಾಭಾರತ ಮತ್ತು ರಾಮಾಯಣದಂತಹ ಮಹಾಕಾವ್ಯಗಳಲ್ಲಿ ಕೆಲವೇ ಸಾಲುಗಳಲ್ಲಿ ಬಂದು ಹೋಗುವ ಕೆಲವು ಪಾತ್ರಗಳು, ಕೆಲವೊಮ್ಮೆ ಸಂಪೂರ್ಣ ಯುಗದ ತತ್ತ್ವವನ್ನು ಹೊತ್ತು ನಿಲ್ಲುತ್ತವೆ. ಅಂತಹ ಅಪರೂಪದ ಪಾತ್ರವಾದ ಋಷ್ಯಶೃಂಗ, ವೇದಕಾಲದ ಮಳೆ, ಮನುಷ್ಯನ ಒಳಗುಟ್ಟು ಮತ್ತು ಹೆಣ್ಣಿಗಾದ ಅನ್ಯಾಯದ ಬಗ್ಗೆ ವಿವರಿಸುವ ಮಹಾಕಾವ್ಯಾತ್ಮಕ ಕಾದಂಬರಿ. ವೇದಕಾಲದ ಹಿನ್ನೆಲೆ, ತಪಸ್ಸಿನ ಗಾಂಭೀರ್ಯ, ಪ್ರಕೃತಿ ಮತ್ತು ಮಾನವ ಬದುಕಿನ ಸಂಬಂಧ, ಸ್ತ್ರೀ-ಪುರುಷ ಮನೋವಿಜ್ಞಾನ, ತಂದೆ-ಮಗನ ಸಂಘರ್ಷ, ಧರ್ಮ ಮತ್ತು ಲೋಕಕಲ್ಯಾಣದ ನಡುವಿನ ವ್ಯತ್ಯಾಸ ಇವೆಲ್ಲವನ್ನು ಒಂದೇ ಕಥಾಹಂದರದಲ್ಲಿ ಜೋಡಿಸುವ ಅಪರೂಪದ ಪ್ರಯತ್ನವೇ ಈ ” ಋಷ್ಯಶೃಂಗ” ಕಾದಂಬರಿ.
ಲೇಖಕರು ಇಲ್ಲಿ ಉಪಕತೆಯೊಂದನ್ನು ಕೇವಲ ವಿಸ್ತರಿಸಿಲ್ಲಾ, ಅದಕ್ಕೆ ಹೊಸ ಜೀವ, ಹೊಸ ತಾತ್ವಿಕತೆ ಮತ್ತು ಮನೋವೈಜ್ಞಾನಿಕ ಆಳತೆಯನ್ನು ನೀಡಿದ್ದಾರೆ. ವೇದಕಾಲದ ಬದುಕನ್ನು ಕೇವಲ ಪೌರಾಣಿಕ ಅದ್ಭುತಗಳ ಮೂಲಕವಲ್ಲ, ಮಾನವ ಸಂಬಂಧಗಳ ಸೂಕ್ಷ್ಮತೆಯ ಮೂಲಕ ಕಟ್ಟಿಕೊಟ್ಟಿರುವುದು ಈ ಕೃತಿಯ ವಿಶೇಷ. ರಾಮಾಯಣದ ಅಂಚಿನಲ್ಲಿ ಕೇವಲ ಒಂದು ಉಪಕತೆಯಾಗಿ ಕಾಣಿಸಿಕೊಂಡ ಋಷ್ಯಶೃಂಗನ ಕಥೆಯನ್ನು, ವೇದಕಾಲದ ಸಾಮಾಜಿಕ-ಮಾನಸಿಕ ಸಂಘರ್ಷಗಳೊಂದಿಗೆ ವಿಸ್ತರಿಸಿ, ಜೀವಂತವಾದ ಕಾದಂಬರಿಯನ್ನಾಗಿ ರೂಪಿಸುವುದು ಸಾಮಾನ್ಯ ಸಾಹಿತ್ಯಿಕ ಸಾಹಸವಲ್ಲ. ರಾಮಾಯಣದಲ್ಲಿ ದಶರಥನ ಪುತ್ರಕಾಮೇಷ್ಠಿ ಯಾಗಕ್ಕೆ ಕಾರಣನಾದ ಮುನಿಯಾಗಿ, ಮಹಾಭಾರತದಲ್ಲಿ ಮಳೆ ಮತ್ತು ಪರ್ಜನ್ಯಕ್ಕೆ ಸಂಬಂಧಿಸಿದ ತಪಸ್ವಿಯಾಗಿ ಕಾಣಿಸಿಕೊಳ್ಳುವ ಋಷ್ಯಶೃಂಗ ಪಾತ್ರವನ್ನು ಆಧರಿಸಿಕೊಂಡು ವಿಶಾಲವಾದ ಕಾದಂಬರಿಯನ್ನು ಕಟ್ಟಿಕೊಡುವ ಸಾಹಸಮಯ ಸಾಹಿತ್ಯ ಪ್ರಯತ್ನದ ಧೀರ್ಘ ಪಯಣದ ಫಲಸ್ವರೂಪವೇ ಈ ಕಾದಂಬರಿ.

ಕಾದಂಬರಿಯ ಕೇಂದ್ರಬಿಂದು ಋಷ್ಯಶೃಂಗನಾದರೂ, ಕಥೆಯ ನಿಜವಾದ ತೂಕ ಹೊತ್ತಿರುವುದು ಮೂರೂ ಪಾತ್ರಗಳು ವಿಭಾಂಡಕ, ಓಜಸ್ವತಿ ಮತ್ತು ರೋಮಪಾದ. ಈ ಮೂರರ ಮೂಲಕ ಲೇಖಕರು ಮೂರು ವಿಭಿನ್ನ ಲೋಕಗಳನ್ನು ಕಟ್ಟಿಕೊಡುತ್ತಾರೆ. ವಿಭಾಂಡಕ ತಪಸ್ಸಿನ ಹೆಸರಿನಲ್ಲಿ ಪ್ರಕೃತಿಯನ್ನೂ, ಭಾವನೆಗಳನ್ನೂ ಬಂಧಿಸಲು ಯತ್ನಿಸುವ ಮನೋವಿಕಾರದ ಪ್ರತೀಕ. ರೋಮಪಾದ ಅಧಿಕಾರದ ಅಹಂಕಾರದಿಂದ ತಪ್ಪುಮಾಡಿ, ಅದರ ಪರಿಣಾಮವನ್ನು ಪ್ರಜೆಗಳ ಬದುಕಿನ ಮೇಲೆ ಬೀರುವ ರಾಜಕೀಯ ಮನಸ್ಥಿತಿಯ ಸಂಕೇತ. ಓಜಸ್ವತಿ ಮಾತ್ರ ಈ ಕಥೆಯ ನಿಜವಾದ ಆತ್ಮ,ಪ್ರೀತಿಸುವವಳು, ತ್ಯಾಗ ಮಾಡುವವಳು, ಆದರೆ ಕೊನೆಯಲ್ಲಿ ಮರೆಯಲ್ಪಡುವಳು.
ಕಾದಂಬರಿಯ ಅತ್ಯಂತ ಪರಿಣಾಮಕಾರಿ ಮತ್ತು ಆಳವಾದ ಅಂಶವೆಂದರೆ “ಬರ” ಅದನ್ನು ಸಹಾ ಇಲ್ಲಿ ಮನುಷ್ಯನ ಆಂತರಿಕ ಒಣಗುವಿಕೆಯ ಪ್ರತೀಕವಾಗಿ ಬಳಸಲಾಗಿದೆ.ಅಂಗದೇಶದಲ್ಲಿ ಮಳೆ ಬಾರದಿರುವುದು ಕೇವಲ ಋಷಿಯ ಶಾಪದ ಪರಿಣಾಮವಲ್ಲಾ, ಅದು ರಾಜನ ನೈತಿಕ ವಿಫಲತೆಯ ಪ್ರತಿಫಲ. ರಾಜ ರೋಮಪಾದ ತನ್ನ ತಪ್ಪನ್ನು ಮರೆತುಬಿಡುತ್ತಾನೆ, ಆದರೆ ಪ್ರಕೃತಿ ಮರೆತಿರುವುದಿಲ್ಲ. ಲೇಖಕರು ಇಲ್ಲಿ ಪ್ರಕೃತಿಯನ್ನು ನೈತಿಕ ಶಕ್ತಿಯಾಗಿ ಚಿತ್ರಿಸುತ್ತಾರೆ. ರಾಜನ ಅನ್ಯಾಯ, ಕಾಮಾಸಕ್ತಿ, ಸ್ವಾರ್ಥ ಇವೆಲ್ಲವೂ ಪ್ರಕೃತಿಯ ಸಮತೋಲನವನ್ನು ಹಾಳುಮಾಡುತ್ತವೆ. ವೇದಕಾಲದ ಜನರ ಮನೋಭಾವದಲ್ಲಿ ಪ್ರಕೃತಿ ಮತ್ತು ಧರ್ಮ ಬೇರೆ ಬೇರೆ ಅಲ್ಲವೇ ಅಲ್ಲಾ. ಮನುಷ್ಯನ ಧರ್ಮಭ್ರಷ್ಟತೆ ಪ್ರಕೃತಿಯ ಕ್ರೋಧವಾಗಿ ವ್ಯಕ್ತವಾಗುತ್ತದೆ. ಇದೇ ಕಾರಣಕ್ಕೆ ಬರವು ಇಲ್ಲಿ ದೈಹಿಕ ಸಂಕಷ್ಟಕ್ಕಿಂತ ಹೆಚ್ಚಾಗಿ ಆತ್ಮೀಯ ಒಣಗುವಿಕೆಯ ಸಂಕೇತವಾಗಿ ಬಿಂಬಿಸಲಾಗಿದೆ.
ಈ ಕಾದಂಬರಿಯ ಅತ್ಯಂತ ಸಂಕೀರ್ಣವಾದರೂ ಗಾಢವಾದ ಪಾತ್ರ ವಿಭಾಂಡಕ. ಅವನು ಸಾಮಾನ್ಯ ಪೌರಾಣಿಕ ಋಷಿಯಲ್ಲಾ, ಅವನು ಗಾಯಗೊಂಡ ಮನುಷ್ಯ. ಪ್ರೀತಿ, ಕಾಮ ಮತ್ತು ಮೋಸದ ಅನುಭವ ಅವನ ಮನಸ್ಸನ್ನು ವಿಕೃತಗೊಳಿಸಿದೆ. ಹೆಣ್ಣಿನ ಮೇಲೆ ಹುಟ್ಟಿದ ದ್ವೇಷದಿಂದಾಗಿ, ಸ್ತ್ರೀ ಸಂಪರ್ಕದಿಂದ ತಪಸ್ಸು ನಾಶವಾಗುತ್ತದೆ ಎನ್ನುವ ಭಯ ಅವನಲ್ಲಿ ಅತಿರೇಕಕ್ಕೆ ತಿರುಗುತ್ತದೆ. ಆದ ಕಾರಣ ಮಗನ ಮನಸ್ಸನ್ನೇ ವಿಷಮಯಗೊಳಿಸಿ ಅವನನ್ನು ಸಂಪೂರ್ಣವಾಗಿ ಲೋಕದಿಂದ ದೂರ ಇಡುತ್ತಾನೆ. “ಸ್ತ್ರೀ ಎಂದರೆ ಮಾಯೆ” ಎನ್ನುವ ಭಯವನ್ನು ತುಂಬಿ, ಋಷ್ಯಶೃಂಗನನ್ನು ಮನುಷ್ಯ ಸಮುದಾಯದಿಂದಲೇ ದೂರವಿಡುತ್ತಾನೆ.
ಮೊದಲ ನೋಟಕ್ಕೆ ಆತ ಕ್ರೂರ ತಂದೆ. ಮಗನ ಮೇಲೆ ಗದರಿಕೆ, ಶಿಕ್ಷೆ, ದೇಹದಂಡನೆ, ಸ್ತ್ರೀದ್ವೇಷ, ಲೋಕವಿಮುಖತೆ ಇವೆಲ್ಲವನ್ನೂ ಬಲವಂತವಾಗಿ ಅವನ ಮನದಲ್ಲಿ ನೆಲೆಯೂರಿಸುವವ ಎಂದೆನಿಸುತ್ತಾನೆ.
ಆದರೆ ಇಲ್ಲಿ ಲೇಖಕರು ವಿಭಾಂಡಕನನ್ನು ಖಳನಾಯಕನನ್ನಾಗಿ ಚಿತ್ರಿಸಿಲ್ಲಾ… ಅವನಲ್ಲಿ ಪ್ರೀತಿಯೂ ಇದೆ…ಹಾಗೇ ಮಗ ತಪ್ಪಿಹೋಗಬಾರದು ಎಂಬ ಭಯವೂ ಇದೆ. ಇಲ್ಲಿ ವಿಭಾಂಡಕನ ಪ್ರೀತಿ ಕಠೋರತೆಯ ರೂಪದಲ್ಲಿ ವ್ಯಕ್ತವಾಗುತ್ತದೆ ಎನಿಸಿದರೂ, ಅವನಿಗಾದ ಮೋಸದಿಂದ ಅವನ ಮನಸ್ಸು ನೋವಿನಿಂದ ಕಣ್ಣೀರು ಹಾಕುತ್ತದೆ. ಮಗನ ಮೇಲೆ ಪ್ರೀತಿ ಇದ್ದರೂ, ಆ ಪ್ರೀತಿಯ ವ್ಯಕ್ತೀಕರಣ ಕಠೋರತೆ ಮತ್ತು ಶಿಕ್ಷೆಯ ರೂಪದಲ್ಲೇ ಬರುತ್ತದೆ. ತಾಯಿಯಿಲ್ಲದ ಮಗುವನ್ನು ತಾನು ಕಠಿಣಗೊಳಿಸುತ್ತಿದ್ದರೂ ಒಳಗೊಳಗೇ ಕರುಣೆಯಿಂದ ಕರಗುತ್ತಾನೆ, ಈ ಸಂಬಂಧವನ್ನು ಲೇಖಕರು ಸೂಕ್ಷ್ಮವಾಗಿ ಕಟ್ಟಿಕೊಟ್ಟಿದ್ದಾರೆ. ವಿಭಾಂಡಕನೊಳಗೆ ಪ್ರೀತಿ ಇದೆ, ಆದರೆ ಅದು ಭಯದಿಂದ ಕಲ್ಲಾಗಿರುವ ಪ್ರೀತಿ. ಆದ್ದರಿಂದ ಆತ ಮಗನನ್ನು ರಕ್ಷಿಸುವ ಹೆಸರಿನಲ್ಲಿ ಅವನ ಮಾನವೀಯತೆಯನ್ನೇ ಕಸಿದುಕೊಳ್ಳುತ್ತಾನೆ. ಅವನ ಬದುಕಿನ ತತ್ವವೇ “ಲೌಕಿಕ ಜಗತ್ತು ಮನುಷ್ಯನನ್ನು ಪತನದತ್ತ ಕೊಂಡೊಯ್ಯುತ್ತದೆ, ಆತ್ಮೋದ್ಧಾರವೇ ಬದುಕಿನ
ಗುರಿ”. ಆ ಪಾತ್ರದ ಅತಿಯಾದ ದ್ವಂದ್ವವೇ ಅವನನ್ನು ಇಲ್ಲಿ ಗಾಢವಾಗಿಸುತ್ತದೆ.
ಋಷ್ಯಶೃಂಗ ಈ ಕಾದಂಬರಿಯಲ್ಲಿ ಕೇವಲ ಮಹರ್ಷಿಯಲ್ಲಾ, ಆತ ಒಂದು “ಅಪೂರ್ಣ ಮನುಷ್ಯ”, ಅವನಿಗೆ ಲೋಕ ಗೊತ್ತಿಲ್ಲಾ…ಹೆಣ್ಣು ಗೊತ್ತಿಲ್ಲಾ…ಸಮಾಜ ಗೊತ್ತಿಲ್ಲಾ…ಪ್ರೀತಿ ಗೊತ್ತಿಲ್ಲಾ. ಋಷ್ಯಶೃಂಗನ ಬದುಕು ಇಲ್ಲಿ ಅತ್ಯಂತ ಕರುಣಾಜನಕ, ಜಗತ್ತಿನ ಬಗ್ಗೆ ಅರಿವಿಲ್ಲದ, ಹೆಣ್ಣಿನ ಅಸ್ತಿತ್ವವೇ ಗೊತ್ತಿಲ್ಲದ ಯುವತಪಸ್ವಿ, ತಂದೆಯ ಮಾತೇ ಸತ್ಯವೆಂದು ನಂಬಿ ಬದುಕುತ್ತಾನೆ. ಆದರೆ ಇಂತಹ ವ್ಯಕ್ತಿಯೊಳಗೆ ಮೊದಲ ಬಾರಿಗೆ ಪ್ರಶ್ನೆಗಳು ಹುಟ್ಟಿಸುವುದು ಓಜಸ್ವತಿ, ಆ ಪ್ರಶ್ನೆಗಳೇ ಅವನ ತಪಸ್ಸಿಗಿಂತ ದೊಡ್ಡ ಜಾಗೃತಿಯ ಆರಂಭ. ಋಷ್ಯಶೃಂಗನ ಮನಸ್ಸಿನ ಬದಲಾವಣೆ ಬಹಳ ಸೂಕ್ಷ್ಮವಾಗಿ ಚಿತ್ರಿತವಾಗಿದೆ, ಮೊದಲು ಕುತೂಹಲ, ನಂತರ ಆಕರ್ಷಣೆ, ಆಮೇಲೆ ಅನುಮಾನ, ಕೊನೆಗೆ ಪ್ರೀತಿ. ಪ್ರಕೃತಿಯನ್ನು ಅರಿತವನಿಗೆ, ಕೊನೆಗೆ ಮಾನವೀಯ
ಭಾವನೆಗಳೂ ಪ್ರಕೃತಿಯ ಭಾಗವೇ ಎಂಬ ಅರಿವು ಬರತೊಡಗುತ್ತದೆ. ಈ ಬದಲಾವಣೆ ಕೇವಲ ಶೃಂಗಾರದ ಜಾಗೃತಿ ಅಲ್ಲಾ, ಅದು ಮನುಷ್ಯತ್ವದ ಜನನ.
ಈ ಕಾದಂಬರಿಯಲ್ಲಿ ನಿಸ್ಸಂಶಯವಾಗಿ ಬಲವಾದ ಮತ್ತು ಅತ್ಯಂತ ಶಕ್ತಿಶಾಲಿ ಪಾತ್ರ ಓಜಸ್ವತಿ. ಓಜಸ್ವತಿ ಕೇವಲ ಸೌಂದರ್ಯದ ಪ್ರತೀಕವಲ್ಲಾ…ಬುದ್ಧಿವಂತಿಕೆ, ತ್ಯಾಗ, ಧೈರ್ಯ ಮತ್ತು ಭಾವನಾತ್ಮಕ ಸಂಕೀರ್ಣತೆಯ ಸಂಗಮ. ಅವಳು ರಾಜಕೀಯವಾಗಿ ಬಳಸಲ್ಪಟ್ಟು ಬಲಿಯಾಗುವ ಹೆಣ್ಣು. ಪುರುಷರು ವಿಫಲರಾದಾಗ, ತಪಸ್ವಿಗಳು ಸೋತಾಗ, ಮಂತ್ರಿಗಳು ನಿರ್ಗತಿಕರಾದಾಗ, ರಾಜಕೀಯ ಕುಸಿದಾಗ ಕೊನೆಗೆ ಸಮಸ್ಯೆ ಪರಿಹರಿಸಲು ಹೆಣ್ಣಿನ ಭಾವನೆ, ಬುದ್ಧಿವಂತಿಕೆ ಮತ್ತು ತ್ಯಾಗವೇ ನೆರವಾಗುತ್ತದೆ. ಓಜಸ್ವತಿ ಋಷ್ಯಶೃಂಗನನ್ನು ಪ್ರೀತಿಸುತ್ತಾಳೆ, ಆದರೆ ಆ ಪ್ರೀತಿಯೊಳಗೆ ಕರ್ತವ್ಯವೂ ಬೆರೆತಿದದ್ದೇ ಅವಳ ದುರಂತ. ಓಜಸ್ವತಿ ಮತ್ತು ಋಷ್ಯಶೃಂಗರ ನಡುವಿನ ಸಂಬಂಧವನ್ನು ಲೇಖಕರು ಕೇವಲ ಶೃಂಗಾರದ ಮಟ್ಟದಲ್ಲಿ ನಿಲ್ಲಿಸಿಲ್ಲಾ. ಅದು ಎರಡು ವಿಭಿನ್ನ ಲೋಕಗಳ ಮುಖಾಮುಖಿ ಒಂದು ಕಟ್ಟಿಹಾಕಲ್ಪಟ್ಟ ತಪಸ್ಸಿನ ಲೋಕವಾದರೆ, ಮತ್ತೊಂದು ಜೀವನವನ್ನು ಸಂಪೂರ್ಣವಾಗಿ ಅನುಭವಿಸುವ ಲೌಕಿಕ ಜಗತ್ತು.
ರಾಜ್ಯದ ಸಂಕಷ್ಟವನ್ನು ನೀಗಿಸಲು ಕೊನೆಗೆ ಆಯ್ಕೆಯಾಗುವುದು ಒಬ್ಬ ಹೆಣ್ಣು ಎಂಬುದೇ ಕಾದಂಬರಿಯ ಪ್ರಮುಖ ವ್ಯಂಗ್ಯ. ಓಜಸ್ವತಿ ಋಷ್ಯಶೃಂಗನಿಗೆ ಪ್ರೀತಿಯನ್ನು ಕಲಿಸುತ್ತಾಳೆ, ಆದರೆ ಆ ಪ್ರೀತಿಯ ಹಿಂದೆ ಅವಳ ನೋವು ಮೌನವಾಗಿ ನಿಂತಿರುತ್ತದೆ. ಆತ ಗೆದ್ದಂತೆ ಕಾಣುತ್ತಾನೆ, ಆದರೆ ನಿಜವಾಗಿ ಸೋಲುವುದು ಓಜಸ್ವತಿಯಾ?? ಓಜಸ್ವತಿ ಋಷ್ಯಶೃಂಗನನ್ನು ಮೋಸಗೊಳಿಸುತ್ತಾಳೆಯೇ? ಅಥವಾ ಪ್ರೀತಿಸುತ್ತಾಳೆಯೇ? ಈ ಪ್ರಶ್ನೆಗೆ ಕಾದಂಬರಿ ಸ್ಪಷ್ಟ ಉತ್ತರ ಕೊಡುವುದಿಲ್ಲ. ಆಕೆಯೊಳಗೆ ಕರ್ತವ್ಯವೂ.. ಪ್ರೀತಿಯೂ…ತಳಮಳವೂ ಇದ್ದರೂ ಋಷ್ಯಶೃಂಗನನ್ನು ರಾಜ್ಯಕ್ಕಾಗಿ ಕರೆತರುವ ಪ್ರಕ್ರಿಯೆಯಲ್ಲಿ ತನ್ನನ್ನೇ ಕಳೆದುಕೊಳ್ಳುತ್ತಾಳೆ. ಅವಳು ಕರ್ತವ್ಯ ಮತ್ತು ಪ್ರೀತಿಯ ನಡುವೆ ಸಿಲುಕಿದ ವ್ಯಕ್ತಿಯಾಗಿ, ಅವಳು ರಾಜ್ಯದ ಉಳಿವಿಗಾಗಿ ತನ್ನ ಬದುಕನ್ನೇ ಅರ್ಪಿಸಿದವಳು, ತಂದೆಯ ತಪ್ಪನ್ನು ಸರಿಪಡಿಸಲು ಮಗಳಾದ ಅವಳು ತನ್ನ ಬದುಕನ್ನೇ ಅರ್ಪಿಸಬೇಕಾಗುತ್ತದೆ.

ಕಾದಂಬರಿಯ ಅತ್ಯಂತ ನೋವಿನ ಭಾಗ ಹೆಣ್ಣಿನ ತ್ಯಾಗವನ್ನು ಸಮಾಜ ಮರೆತುಬಿಡುವುದು. ಹೇಮಪ್ರಭೆ ಬಳಸಲ್ಪಟ್ಟ ಹೆಣ್ಣಾದರೆ…ಓಜಸ್ವತಿ ತ್ಯಾಗಮಾಡಿದ ಹೆಣ್ಣಾದರೆ…ವರ್ಷಿಣಿ ಅಧಿಕಾರದ ಒಳರಾಜಕೀಯದ ಪ್ರತಿನಿಧಿ. ರಾಜ್ಯವನ್ನು ಉಳಿಸಿದ ಓಜಸ್ವತಿಯ ಹೆಸರೇ ಮರೆಯಾಗುತ್ತದೆ, ಅವಳ ಸಾಧನೆಯನ್ನು ಶಾಂತೆಯ ಹೆಸರಿನಲ್ಲಿ ಮುಚ್ಚಿಹಾಕಲಾಗುತ್ತದೆ. ಇದು ಕೇವಲ ಕಥೆಯ ತಿರುವಲ್ಲಾ ಇತಿಹಾಸದ ಕಹಿ ಸತ್ಯ, ಕಾದಂಬರಿಯ ಕೊನೆಯ ಭಾಗ ಮನಸ್ಸನ್ನು ಹೆಚ್ಚು ತಟ್ಟುವುದು ಕೂಡ ಇದೇ ಕಾರಣಕ್ಕೆ. ರಾಜ್ಯವನ್ನು ಉಳಿಸಿದವಳೇ ಕೊನೆಯಲ್ಲಿ ಮರೆಯಲ್ಪಡುತ್ತಾಳೆ. ಶಾಂತೆಯ ಹೆಸರಿನಲ್ಲಿ ಕಥೆಯನ್ನು ಬದಲಾಯಿಸುವ ರೋಮಪಾದನ ನಡೆ ಕೇವಲ ರಾಜಕೀಯ ಸುಳ್ಳಲ್ಲಾ, ಅದು ಹೆಣ್ಣಿನ ತ್ಯಾಗವನ್ನು ಇತಿಹಾಸ ಹೇಗೆ ಅಳಿಸಿಬಿಡುತ್ತದೆ ಎಂಬುದಕ್ಕೆ ದರ್ಪಣ ಹಿಡಿದಂತಿದೆ. “ಹೆಣ್ಣಿಗೆ ಹೆಣ್ಣು ಶತ್ರು” ಎನ್ನುವ ಭಾವವೂ ಇಲ್ಲಿ ವರ್ಷಿಣಿಯ ನಡೆ ಮೂಲಕ ಸೂಕ್ಷ್ಮವಾಗಿ ವ್ಯಕ್ತವಾಗುತ್ತದೆ. ರಾಜಕೀಯ, ಕುಟುಂಬ, ಸಂಪ್ರದಾಯ ಎಲ್ಲವೂ ಸೇರಿ ಓಜಸ್ವತಿಯಂತಹ ಹೆಣ್ಣಿನ ಬದುಕನ್ನು ನುಂಗಿಬಿಡುತ್ತವೆ.
ರೋಮಪಾದನ ಪಾತ್ರ ರಾಜಕೀಯದ ದುರಂತವನ್ನು ತೋರಿಸುತ್ತದೆ. ಆತ ಕೆಟ್ಟ ರಾಜನಲ್ಲಾ ನಿಜಾ, ಪ್ರಜೆಗಳ ಬಗ್ಗೆ ಕಾಳಜಿ ಉಳ್ಳವನೇ, ಆದರೆ ವೈಯಕ್ತಿಕ ಬದುಕಿನ ತಪ್ಪುಗಳು ರಾಜ್ಯದ ಮೇಲೆ ಪರಿಣಾಮ ಬೀರುತ್ತವೆ. ರೋಮಪಾದ ತನ್ನ ಕಾಮ, ಅಹಂಕಾರ ಮತ್ತು ಸ್ವಾರ್ಥದ ನಡುವೆ ಮಾಡಿದ ಅನ್ಯಾಯವನ್ನು ಮರೆತುಬಿಡುತ್ತಾನೆ, ಆದರೆ ಪ್ರಕೃತಿ ಮರೆತಿರುವುದಿಲ್ಲ. ವೇದಕಾಲದ ಕಥೆಯ ನೆಪದಲ್ಲಿ ಲೇಖಕರು ಇಲ್ಲಿ ಆಡಳಿತದ ಹೊಣೆಗಾರಿಕೆಯ ಶಾಶ್ವತ ಸತ್ಯವನ್ನೇ ಹೇಳುತ್ತಾರೆ. ರಾಜನ ಒಂದು ತಪ್ಪು, ಇಡೀ ಸಮಾಜದ ದುಃಖವಾಗಬಹುದು, ಈ ದುರಂತದಿಂದಾಗಿ ಆತ ಕೃತಜ್ಞತೆಯನ್ನು ಉಳಿಸಿಕೊಳ್ಳಲಾರ. ಓಜಸ್ವತಿ ರಾಜ್ಯವನ್ನು ಉಳಿಸಿದರೂ, ಕೊನೆಯಲ್ಲಿ ರಾಜಕೀಯ ಸತ್ಯಕ್ಕಿಂತ “ಸಮಾಜಕ್ಕೆ ಹೇಳಲು ಅನುಕೂಲವಾದ ಸುಳ್ಳು” ಮುಖ್ಯವಾಗುತ್ತದೆ, ಇದು ಇಂದಿನ ಸಮಾಜಕ್ಕೂ ಅನ್ವಯಿಸುವಂತದ್ದೇ. ಹೆಣ್ಣು ಸಾಧನೆ ಮಾಡಬಹುದು, ತ್ಯಾಗ ಮಾಡಬಹುದು, ರಾಜ್ಯ ಉಳಿಸಬಹುದು ಆದರೆ ಕೀರ್ತಿ ಯಾರಿಗೋ ಹೋಗಬಹುದು.
ಇನ್ನು ಪ್ರಕೃತಿ ಇಲ್ಲಿ ಹಿನ್ನೆಲೆಯಾಗಿ ಚಿತ್ರಿತವಾಗಿಲ್ಲಾ, ಅದೊಂದು ಜೀವಂತ ಪಾತ್ರ. ಮೋಡಗಳು, ಕಾಡು, ನದಿ, ಮಳೆ, ಬರ, ಮಿಂಚು ಎಲ್ಲವೂ ಭಾವನೆಗಳಂತೆ ವರ್ತಿಸುತ್ತವೆ.“ ಪ್ರಕೃತಿ ವರ್ಣನೆಗಳಲ್ಲಿ ಲೇಖಕರು ವಿಶಿಷ್ಟ ದೃಶ್ಯ ಕಲ್ಪನೆಯನ್ನು ಮೂಡಿಸುತ್ತಾರೆ. ಕಾದಂಬರಿಯ ಮತ್ತೊಂದು ವಿಶೇಷತೆ ಅದರ ಭಾಷಾ ವೈಭವ. ಸಂದರ್ಭಾನುಸಾರ ಬರುವ ಸಂಸ್ಕೃತ ಶ್ಲೋಕಗಳು, ವೇದಕಾಲದ ವಾತಾವರಣ, ಕಾಡಿನ ಚಿತ್ರಣ, ಮಳೆ, ಬರಗಳ ರೂಪಕಗಳು ಕಥೆಗೆ ಗಂಭೀರತೆಯನ್ನು ಕೊಡುತ್ತವೆ. ವಿಶೇಷವಾಗಿ ಪ್ರಕೃತಿ ವರ್ಣನೆಗಳು ದೃಶ್ಯಾತ್ಮಕ ಅನುಭವವನ್ನು ನೀಡುತ್ತವೆ. “ಆಕಾಶ ವಿಧವೆಯಂತೆ ಬೋಳಾಗಿ ಕಾಣುವುದು” ಎಂಬ ರೂಪಕಗಳು ಕೇವಲ ಅಲಂಕಾರವಲ್ಲಾ, ವರ್ಣನೆಗಳಲ್ಲಾ ಅವು ಕಥೆಯ ಭಾವವಿಸ್ತಾರ. ಸಂಸ್ಕೃತ ಶ್ಲೋಕಗಳು ಕಥೆಗೆ ಗಂಭೀರತೆ ನೀಡುತ್ತಾ,ವೇದಕಾಲದ ವಾತಾವರಣವನ್ನು ಜೀವಂತವಾಗಿಸುತ್ತವೆ.
ಈ ಕಾದಂಬರಿಯನ್ನು ಓದಿ ಮುಗಿಸಿದ ನಂತರ ಮನಸ್ಸಿನಲ್ಲಿ ಉಳಿಯುವುದು ಸಂತೋಷವಲ್ಲಾ, ವಿಚಿತ್ರವಾದ ವಿಷಾದ, “ಹೀಗಾಗಬಾರದಿತ್ತು” ಎನ್ನುವ ಭಾವ. ಓಜಸ್ವತಿಯ ಬದುಕಿಗೆ ನ್ಯಾಯ ಸಿಗಬೇಕಿತ್ತು. ಹೇಮಪ್ರಭೆಯ ತ್ಯಾಗ ಮರೆಯಬಾರದಿತ್ತು, ಋಷ್ಯಶೃಂಗನ ನಿರ್ದೋಷಿತನ ದುರುಪಯೋಗವಾಗಬಾರದಿತ್ತು ಎನಿಸುತ್ತದೆ. ಆದರೆ ಲೇಖಕರು ಬದುಕಿನ ಕಹಿ ವಾಸ್ತವಿಕತೆಯನ್ನು ಆರಿಸಿಕೊಂಡ ಕಾರಣದಿಂದಲೇ ಕಾದಂಬರಿ ಮನಸ್ಸಿನಲ್ಲಿ ಉಳಿಯುತ್ತದೆ.” ಋಷ್ಯಶೃಂಗ” ಕೇವಲ ಪೌರಾಣಿಕ ಕಾದಂಬರಿಯಲ್ಲಾ, ಅದು ಮಾನವನೊಳಗಿನ ಎರಡು ಲೋಕಗಳ ಸಂಘರ್ಷ ಒಂದು ತಪಸ್ಸಿನದಾದರೆ ಮತ್ತೊಂದು ಪ್ರೀತಿಯದು. ವಿಭಾಂಡಕ ಲೋಕದಿಂದ ದೂರವಿರಲು ಕಲಿಸಿದರೆ, ಋಷ್ಯಶೃಂಗ ಲೋಕದೊಳಗೆ ಪ್ರವೇಶಿಸಿ ಲೋಕಕಲ್ಯಾಣವನ್ನು ಅರಿಯುತ್ತಾನೆ,ಇದೇ ಕಾದಂಬರಿಯ ತಾತ್ವಿಕ ಕೇಂದ್ರಬಿಂದು.
ಉಪಕತೆಯೊಂದನ್ನು ಸುದೀರ್ಘ ಕಾದಂಬರಿಯನ್ನಾಗಿ ರೂಪಿಸಿ, ವೇದಕಾಲದ ವಾತಾವರಣ, ಮಾನವ ಮನಸ್ಸಿನ ಸಂಕೀರ್ಣತೆ ಮತ್ತು ಸಮಾಜದ ವೈಪರಿತ್ಯಗಳನ್ನು ಸಮರ್ಥವಾಗಿ ಕಟ್ಟಿಕೊಟ್ಟಿರುವ ಲೇಖಕರ ಪ್ರಯತ್ನ ನಿಜಕ್ಕೂ ಸ್ತುತ್ಯಾರ್ಹ. ಈ ಕೃತಿ ಪೌರಾಣಿಕ ಕಥೆಯನ್ನು ಓದಿದ ಅನುಭವ ಮಾತ್ರವಲ್ಲಾ, ಮಾನವ ಬದುಕಿನ ಕುರಿತ ಚಿಂತನೆಗೆ ದೂಡುವ ಸಾಹಿತ್ಯಾನುಭವವಾಗಿ ಉಳಿಯುತ್ತದೆ.
ಈ ಕೃತಿಯನ್ನು ಓದಿ ಮುಗಿಸಿದ ಮೇಲೂ ನೆನಪಿನಲ್ಲಿ ಉಳಿಯುವ ಸಾಲುಗಳು…….
“ಮೋಡಗಳೆಲ್ಲ ಕರಗಿ ಆಗಸ ಶಿರಮುಂಡನ ಮಾಡಿಕೊಂಡ ವಿಧವೆಯಂತೆ ಬೋಳು ಬೋಳಾಗಿ ಕಾಣುತ್ತದೆ”
“ಎಲ್ಲರ ಬಲಾಬಲಗಳು ನಿಂತಿರುವುದು ಕಾಲನ ಅನುಗ್ರಹದ ಮೇಲೆಯೇ”
“ಸಮಾಜದಲ್ಲಿ ಮಡದಿಗೆ ಮಾತ್ರ ಬೆಲೆ ಇದೆ; ಮನದನ್ನೆಗಲ್ಲ.”
ಮಳೆ ತರಿಸುವ ಋಷಿಯ ಕಥೆಯೊಳಗೆ, ಒಣಗಿದ ಮಾನವ ಸಂಬಂಧಗಳಿವೆ. ಇಲ್ಲಿ ವೇದಮಂತ್ರಗಳ ಮಧ್ಯೆ, ಮೌನವಾಗಿ ಅಳುವ ಹೆಣ್ಣಿನ ಧ್ವನಿಯಿದೆ, ರಾಜಕೀಯದ ನಡುವೆ, ತ್ಯಾಗದ ಮೌನ ಸಮಾಧಿಯಿದೆ. ಇದೆಲ್ಲಕ್ಕಿಂತ ಮುಖ್ಯವಾಗಿ ಈ ಕಾದಂಬರಿ ಹೇಳುವುದು ಒಂದೇ ಸತ್ಯ. ಪ್ರಕೃತಿಯನ್ನು ಜಯಿಸುವುದು ಸಾಧ್ಯವಿರಬಹುದು, ಆದರೆ ಮಾನವೀಯತೆಯನ್ನು ನಿರಾಕರಿಸಿ ಬದುಕುವುದು ಸಾಧ್ಯವಿಲ್ಲ. ವಿಭಿನ್ನ ಮನಃಸ್ಥಿತಿಗೆ ಓದುಗನನ್ನು ಕರೆದೊಯ್ಯವ ಲಕ್ಷಣ ಕೌಂಟೆಯವರ “ಋಷ್ಯಶೃಂಗ” ಕೃತಿ ಸಿಕ್ಕರೆ ನೀವೂ ಓದಿ ನೋಡಿ.
ಶ್ರೀಮತಿ ಚಿತ್ರಲೇಖಾರ ಕೃತಿಗಳ ಪರಿಚಯದ ಅಭಿಯಾನದಲ್ಲಿ ಈ ಪುಸ್ತಕ ಪ್ರಾಯೋಜಿಸಿ ಈ ವಿಶೇಷ ಅಭಿಯಾನಕ್ಕೆ ಬರೆಯಲು ಮತ್ತು ಈ ವಿಶಿಷ್ಟ ಓದಿಗೆ ಕಾರಣರಾದ ವೀಣಾ ನಾಯಕ್ ಮೇಡಂ ಅವರಿಗೆ ಹುತ್ಪೂರ್ವಕ ಧನ್ಯವಾದಗಳು.
- ಸುಮಾ ಭಟ್
