ಸಂಧ್ಯಾಕಾಲದಲ್ಲಿ ಗಂಡನಿಗೆ ಹೆಂಡತಿ, ಹೆಂಡತಿಗೆ ಗಂಡ ಅವಲಂಬಿತರಾಗಿರುತ್ತಾರೆ. ಆ ಸಮಯದಲ್ಲಿ ಯಾರಿಂದ ಫಲಾಪೇಕ್ಷೆಯಿಲ್ಲದೆ ಒಳ್ಳೆ ಊಟ, ವ್ಯಾಯಾಮ ಮಾಡಿ ಒಳ್ಳೆ ಆರೋಗ್ಯ ಕಾಪಾಡಿಕೊಳ್ಳಬೇಕು. ಸ್ನೇಹಾ ಆನಂದ್ ಅವರ ಈ ಲೇಖನವನ್ನು ತಪ್ಪದೆ ಮುಂದೆ ಓದಿ..
ವಯಸ್ಸಾದ ಮೇಲೆಯೇ ಜೀವನ ಸಂಗಾತಿಯ ಅವಶ್ಯಕತೆ ಹೆಚ್ಚು. ಒಬ್ಬ ವ್ಯಕ್ತಿಗೆ ಮದುವೆಯಾದ ಮೇಲೆ ಸ್ವಲ್ಪ ದಿನಗಳಲ್ಲೇ ಮಕ್ಕಳ ಜವಾಬ್ದಾರಿ ಪ್ರಾರಂಭವಾಗಿ ಬಿಡುತ್ತದೆ. ಆ ಸಮಯದಲ್ಲಿಯ ನಮ್ಮ ಜೀವನ ಮಕ್ಕಳ ಆಟ, ಪಾಠ, ಊಟ ಎನ್ನುವ ಈ ಮೂರು ಪದಗಳಲ್ಲೇ ಯೌವನದ ದಿನಗಳು ಮುಗಿದೇ ಹೋಗುತ್ತವೆ.
ನಮ್ಮ ಗುರಿ ಮಕ್ಕಳ ಭವಿಷ್ಯದತ್ತ ಎನ್ನುವಂತೆ ಹೊರತು ನಮ್ಮ ವೈಯಕ್ತಿಕ ಜೀವನದ ಬಗ್ಗೆ ಗಮನವೇ ಇರುವುದಿಲ್ಲ. ತಲೆಯಲ್ಲಿ ಬಿಳಿ ಕೂದಲು ಕಂಡ ಬಂದ ಮೇಲೆಯೇ ನಮ್ಮ ಜೀವನ ಸ್ವಲ್ಪ ಉಸಿರಾಡುವಂತೆ ಆಗುವುದು.
ಒಂದೆನಾದರೂ ತಿನಿಸು ಮಾಡಬೇಕಾದರೂ ಮಕ್ಕಳ ಅಪೇಕ್ಷೆಯತ್ತ ಗಮನ ಕೊಡುತ್ತೇವೆ. ಶಾಲೆಯ ಫೀಸ್, ಅವರ ದಿನಚರಿ, ಅವರ ಇಷ್ಟದ ತರಾವರಿ ತಿಂಡಿ ಮಾಡಿ ಬಾಕ್ಸ್ ಗೆ ಹಾಕುವುದು ಶಾಲೆಗೆ ಕಳಿಸಿ, ಕರೆದುಕೊಂಡು ಬರುವುದು, ಅವರ ಹೊಂವರ್ಕ ಹೀಗೆ ದಿನ ಪೂರ್ತಿ ಅವರ ಕಾಳಜಿಯಲ್ಲಿ ನಮ್ಮನ್ನು ನಾವು ಬಿಜಿಯಾಗಿ ಇಟ್ಟು ಕೊಳ್ಳುತ್ತೇವೆ. ನಾವು ಕೂಡ ಊಟ ಮಾಡಬೇಕು ಎನ್ನುವುದು ಒಂದೊಂದು ಬಾರಿ ಗಮನಕ್ಕೂ ಬಾರದಷ್ಟು ಜವಾಬ್ದಾರಿಗಳ ಹೊರೆ ಆ ಸಮಯದಲ್ಲಿ ದೇವರಲ್ಲಿ ಏನಾದರೂ ಬೇಡಿಕೆ ಇಟ್ಟರೆ ಅದು ಮಕ್ಕಳಿಗಾಗಿಯೇ ಹೊರತು ನಮಗಾಗಿ ಅಲ್ಲ. ಒಂದು ಹೊಸ ಬಟ್ಟೆ ತೆಗೆಯಬೇಕಾದರೂ ಮಕ್ಕಳಿಗೆ ಮೊದಲು, ದುಡ್ಡು ಉಳಿದರೆ ಮಾತ್ರ ನಮಗೆ ಎನ್ನುವಷ್ಟು ಮಕ್ಕಳು ನಮ್ಮ ಜೀವನದಲ್ಲಿ ಆವರಿಸಿರುತ್ತಾರೆ.
ಹೀಗಿರುವಾಗ ಹೇಗೋ ನಮಗೆ ತಿಳಿಯದಂತೆ ಮಕ್ಕಳು ದೊಡ್ಡವರಾಗಿಯೇ ಬಿಡುತ್ತಾರೆ. ಮಕ್ಕಳು ಒಳ್ಳೆಯ ವಿದ್ಯಾಭ್ಯಾಸ ಹೊಂದಿ ಒಂದೊಳ್ಳೆಯ ಕೆಲಸವನ್ನು ಹುಡುಕಿಕೊಂಡು ತಮ್ಮದೇ ಲೋಕದಲ್ಲಿ ಕಳೆದು ಹೋಗುತ್ತಾರೆ, ಮಕ್ಕಳ ಮದುವೆಯಾದ ನಂತರ ತಂದೆ, ತಾಯಿಗೆ ಮನೆ ಖಾಲಿಯಾಗಿ ನಿಧಾನವಾಗಿ ಒಂಟಿತನ ಕಾಡಲು ಪ್ರಾರಂಭವಾಗುತ್ತದೆ.

ಹೀಗಾಗಿ ಈ ಸಮಯದಲ್ಲೇ ಬಾಳಸಂಗಾತಿಯ ಅವಶ್ಯಕತೆ ಜಾಸ್ತಿ ಇರುತ್ತದೆ. ತಮ್ಮ ಜೀವನವನ್ನು ಹಿಂತಿರುಗಿ ನೋಡಿದಾಗ ಒಂದು ಸಂತೃಪ್ತಿ ಸಿಕ್ಕರೆ ಅದರ ಸವಿ ನೆನಪುಗಳು ಜೊತೆಗೆ ಬಾಳ ಸಂಗಾತಿಯಿಂದ ಆ ಖಾಲಿ ಮನಸ್ಸು ಸಮಾಧಾನಗೊಳ್ಳುತ್ತದೆ. ಮಕ್ಕಳು ಚಿಕ್ಕವರಿದ್ದಾಗ ಮಾತನಾಡಲೂ ಸಮಯವಿಲ್ಲದಂತೆ ಇರುವ ಸಂಗಾತಿಗಳಿಗೆ ಬಾಳ ಸಂಜೆ ದೇವರು ಕೊಟ್ಟ ಬೆಳದಿಂಗಳಂತೆ. ಹೀಗಾಗಿ ಈ ಸಮಯ ಆನಂದಮಯ. ಮಾತನಾಡುತ್ತಾ ಕಾಲ ಕಳೆಯಲು ಸುಸಮಯ. ಜೊತೆಯಾಗಿ ಇರುವುದಕ್ಕೆ ಕಾಲಾವಕಾಶ ಸಿಗುವುದೇ ಈ ಸುಂದರ ಬಾಳ ಸಂಜೆಯಲ್ಲಿ.
ಮಕ್ಕಳು ತಮ್ಮದೇ ಲೋಕದಲ್ಲಿ ಮುಳುಗಿದಾಗ ಪಾಲಕರ ಮನಸ್ಸು ಬೇಸರಗೊಳ್ಳುತ್ತದೆ. ನಾವು ಎಷ್ಟು ಸಮಯ ಅವರಿಗೋಸ್ಕರ ಕೊಟ್ಟೆವು. ಅವರಿಗೆ ನಮ್ಮ ಮಾತನ್ನೂ ಸಮಾಧಾನದಿಂದ ಕೇಳುವ ವ್ಯವಧಾನವೂ ಕೂಡ ಇಲ್ಲ ಎನ್ನುವ ಒಂದು ಹತಾಶೆ ಅವರಿಗೆ ಕಾಡುತ್ತಲೇ ಇರುತ್ತದೆ.
ಆಗ ಆ ಜೀವನ ಸಂಗಾತಿಗಳು ಆಹಾರ ಪದ್ಧತಿಯನ್ನು ಆರೋಗ್ಯಕರವಾಗಿರುವಂತೆ ಬದಲಾಯಿಸಿ, ತಂಪಾದ ಗಾಳಿಯಲ್ಲಿ ವಾಯುವಿಹಾರ ಮಾಡಿ, ಮಕ್ಕಳಿಗೆ ಸಮಯ ಸಿಕ್ಕಾಗ ಸ್ವಲ್ಪ ಮಾತನಾಡಿ, ದೇವರ ಧ್ಯಾನದತ್ತ ಮನಸ್ಸು ಕೊಟ್ಟರೆ ಮನಸ್ಸಿನ ಖಾಲಿತನ ತಾನಾಗಿಯೇ ಕಡಿಮೆಯಾಗುತ್ತದೆ, ಜೀವನದಲ್ಲಿ ಉತ್ಸಾಹ ಬರುತ್ತದೆ!
ಇದೇ ನಮ್ಮನ್ನು ನಾವು ಅರಿಯಲು ಇರುವ ಸಮಯ. ಹೀಗಾಗಿ ವಿಶ್ರಾಂತಿ ಬೇಕೆಂದರೆ ಏಕಾಂತ ಬೇಕೇಬೇಕು. ಹೀಗಾಗಿ ನಮ್ಮ ಒಂಟಿತನಕ್ಕೆ ಜಂಟಿಯಾಗಿ ಒಂದು ನಮ್ಮದೇ ಆದ ಹವ್ಯಾಸವನ್ನು ಬೆಳೆಸಿಕೊಂಡರೆ ಸಾಕು ನಮ್ಮ ಸಮಯಕ್ಕೂ ಒಬ್ಬರು ಕಾಯುತ್ತಾರೆ ಬಿಡು ಎನಿಸುತ್ತದೆ.

ಕಾಲಚಕ್ರ ಹೀಗೆಯೇ ಸಮಯದ ಜೊತೆಗೆ ಮುಂದೆ ಹೋದಂತೆ ದೈಹಿಕ ಶಕ್ತಿ ಕಡಿಮೆಯಾಗಿ ಯಾವುದೇ ಜವಾಬ್ದಾರಿಗಳ ಭಾರ ಬೇಡವೆನಿಸಬಹುದು ಹೊರತು ನಮ್ಮ ಬಗ್ಗೆ ನಾವೇ ಕಾಳಜಿ ಮಾಡಿಕೊಳ್ಳುವಷ್ಟು ತಾಕತ್ತು ನಮ್ಮಲ್ಲಿ ಇದ್ದೆ ಇರುತ್ತದೆ.
ಹೀಗಾಗಿ ಈ ಸಂಧ್ಯಾಕಾಲದಲ್ಲಿ ನಮಗೆ ಬೇಕಾದ ರೀತಿಯಲ್ಲಿ ಆರೋಗ್ಯಕರ ಅಡುಗೆ ಮಾಡಿಕೊಂಡು ನಮ್ಮ ದೈಹಿಕ ಆರೋಗ್ಯ ಕಾಪಾಡಿಕೊಂಡು, ದೈನಂದಿನ ಜೀವನದಲ್ಲಿ ಯಾರಿಂದಲೂ ಯಾವುದೇ ರೀತಿಯ ಅಪೇಕ್ಷೆ, ನಿರೀಕ್ಷೆಯನ್ನು ಅತಿಯಾಗಿ ಇಟ್ಟುಕೊಳ್ಳದೆ ಬದುಕು ಸಾಗಿದರೆ ಎರಡು ಹೊತ್ತಿನ ಸತ್ವ ಭರಿತ ಸಾತ್ವಿಕ ಊಟ, ನೆಮ್ಮದಿಯ ನಿದ್ರೆ, ಸಂಜೆಯ ತಂಪು ಆಹಾ ಎನಿಸುತ್ತದೆ.
- ಸ್ನೇಹಾ ಆನಂದ್
