‘ಚಿತ್ರಕಾರನ ಬೆರಳು’ ಕೃತಿಯ ಪರಿಚಯ

ಶಾಂತಿ ಕೆ ಅಪ್ಪಣ್ಣ ಅವರ ‘ಚಿತ್ರಕಾರನ ಬೆರಳು’ ಕೃತಿಯ ಕುರಿತು ಲೇಖಕರಾದ ರಘುನಾಥ್ ಕೃಷ್ಣಮಾಚಾರ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಪುಸ್ತಕ : ಚಿತ್ರಕಾರನ ಬೆರಳು
ಲೇಖಕರು : ಶಾಂತಿ ಕೆ ಅಪ್ಪಣ್ಣ
ಪ್ರಕಾಶನ : ಅಂಕಿತ ಪ್ರಕಾಶನ
ಪ್ರಕಾರ : ಕಥಾಸಂಕಲನ

ಶಾಂತಿ ಕೆ ಅಪ್ಪಣ್ಣ ಅವರ ಭಿನ್ನ ಕಥಾಲೋಕ. ಇಲ್ಲಿ ಬರುವ ಕಥೆಗಳನ್ನು ಕಥಾವಸ್ತುವಿನ ದೃಷ್ಠಿಯಿಂದ, ಪಾತ್ರಗಳ ದೃಷ್ಠಿಯಿಂದ, ಸಂನಿವೇಶ ನಿರ್ಮಾಣಗಳ ದೃಷ್ಠಿಯಿಂದ ಅಭ್ಯಾಸ ಮಾಡಬಹುದು. ಕಥಾವಸ್ತುವಿನ ದೃ಼ಷ್ಠಿಯಿಂದ ವರ್ಷಕ್ಕೊಮ್ಮೆ ದುಬೈನಿಂದ ಬರುವ ಗಂಡಂದಿರ ಅನುಪಸ್ಥಿತಿಯಲ್ಲಿ ಓರಗಿತ್ತಿಯರು ಪರಸ್ಪರ ಸಲಿಂಗರತಿಯಲ್ಲಿ ತೊಡಗುವ ಕಥೆ ಇಲ್ಲಿದೆ.

ಈಗಾಗಲೆ ಇದು ಶಬನಾ ಆಜ್ಮಿ ಮತ್ತು ಸ್ಮಿತಾ ಪಾಟೀಲರು ನಟಿಸಿರುವ ಫೈರ್ ಚಿತ್ರದಲ್ಲಿ ಬಂದಿದ್ದು ಹೆಚ್ಚಿನ ಚರ್ಚಿಗೆ ಒಳಪಟ್ಟಿದೆ. ಕತೆಯಾಗಿ ಕೂಡ ಮುಂಬಯಿ ಕನ್ನಡ ಲೇಖಕಿ ಮಿತ್ರಾ ವೆಂಕಟರಾಜ್ ತಮ್ಮ ಹೂವಿನ ಹುಡುಗಿ ಕತೆಯಲ್ಲು ಇದನ್ನು ತಂದಿದ್ದಾರೆ. ಈ ಕತೆಯ ವಿಶೇಷವೆಂದರೆ ಇದರಲ್ಲಿ ಅದಕ್ಕೆ ಸಾಕ್ಷಿಯಾದವಳು ಹರೆಯದ ಹೆಣ್ಣು. ಅಲ್ಲದೆ ಬಳಸಿರುವ ದಿನಚರಿಯ ವಿನ್ಯಾಸ. ಯಾವುದೇ ಪಾಪ ಪ್ರಜ್ಞೆಯಿಲ್ಲದೆ ಅದರಲ್ಲಿ ಅವರು ತೊಡಗಿ ತಮ್ಮ ಸಂಬಂಧದ ಸಮರ್ಥನೆ ಮಾಡಿಕೊಳ್ಳುವುದು. ಈಚೆಗೆ ಸಲಿಂಗ ರತಿಯನ್ನು ಕಾನೂನು ಬದ್ದವನ್ನಾಗಿಸಿರುವ ಹಿನ್ನೆಲೆಯಲ್ಲಿ ಇದು ಮಹತ್ವವನ್ನು ಪಡೆದುಕೊಳ್ಳುತ್ತದೆ.

ಪಾತ್ರಗಳ ದೃಷ್ಠಿಯಿಂದ ಇಲ್ಲಿ ಸಣ್ಣಮ್ಮ ಎನ್ನುವ ಹೆಣ್ಣೊಬ್ಬಳು ಷಂಡ ಗಂಡನನ್ನು ಕಟ್ಟಿಕೊಂಡು , ಜೀವನೋಪಾಯಕ್ಕೆ ಇತರ ಹೆಣ್ಣಗಳ ಹೇನು ಹೆಕ್ಕುವ ಕಾರ್ಯದಲ್ಲಿ ತೊಡಗಿಕೊಳ್ಳುತ್ತಾಳೆ. ಬಹುಶಃ ಮಾವನಿಗೆ ಬಸಿರಾಗಿ ಗಂಡನನ್ನು ಕೊಂದು , ರಕ್ತ ಹರಿಸಿಕೊಂಡು ನಡೆವ ವಿಶಿಷ್ಟ ಹೆಣ್ಣಿನ ಕತೆ. ಇಲ್ಲಿ ಕೂಡಾ ಅವಳಿಗೆ ತನ್ನ ಕೆಲಸದ ಬಗ್ಗೆ ಯಾವುದೇ ಪಾಪ ಪ್ರಜ್ಞೆಯಿಲ್ಲದಿರುವುದು ಗಮನಾರ್ಹ.

ತಂದೆ ತಾಯಿಗಳ ಕುರಿತಾಗಲಿ ಪಕ್ಕದ ಮನೆಯವರ ಬಗ್ಗೆ ಯಾವುದೇ ಕುತೂಹಲ ಇಲ್ಲದ ತನ್ನ ಪಾಡಿಗೆ ಇದ್ದರೂ ತಾನು ಇರುವ ಹೆಣ್ಣಿನ ಕತೆ ಕೂಡಾ ಇಲ್ಲಿದೆ. ಆ ಮನೆಯ ಹುಡುಗಿ ಕಾಣೆಯಾದಾಗ, ಅವಳನ್ನು ಹುಡುಕಲು ಬಂದ ಪೋಲಿಸರು ಇವಳ ಮನೆಗೆ ವಿಚಾರಣೆಗೆ ಬರುವುದು ಒಂದು ವೈಪರೀತ್ಯವಾಗಿದೆ. ಯಾರ ತಂಟೆಗೂ ಹೋಗದ ತನ್ನಷ್ಟಕ್ಕೆ ತಾನಿರುವ ಒಂಟಿ ಹೆಣ್ಣನ್ನು ಸಮಾಜದ ಪ್ರತೀಕವಾಗಿದೆ.

ಸಂನಿವೇಶ ನಿರ್ಮಾಣದ ದೃಷ್ಠಿಯಿಂದ ಮಕ್ಕಳಿರುವ ಗಂಡನನ್ನು ಕಳೆದುಕೊಂಡ ಹೆಣ್ಣೊಬ್ಬಳು, ಸ್ವ ಇಚ್ಚೆಯಿಂದ , ಇನ್ನೊಬ್ಬ ವ್ಯಕ್ತಿಯೊಂದಿಗೆ ಕೂಡಿ ಬಸಿರಾದಾಗ , ಅದನ್ನು ಮಕ್ಕಳಿಗೆ ಹೇಗೆ ವಿವರಿಸುವುದು, ಎಂಬ ಆತಂಕವನ್ನು ಎದುರಿಸುವ ಹೆಣ್ಣಿನ ಕತೆ ಕೂಡಾ ಇಲ್ಲಿದೆ.

ತಪ್ಪು ಮಾಡಿದವರಿಗೆ ತಿದ್ದಿಕೊಳ್ಳಲು ಅವಕಾಶಕೊಡಬೇಕು ಎಂಬ ಸದಾಶಯದ ಕತೆ ಕೂಡಾ ಇಲ್ಲಿದೆ. ಶಿಕ್ಷಣ ವಿದ್ದರೂ ಅದಕ್ಕೆ ತಕ್ಕಂತೆ ಕೆಲಸ ಸಿಕ್ಕದೆ , ಒಂಟಿಯಾದ ಶ್ರೀಮಂತ ಹೆಣ್ಣುಗಳನ್ನು ಗುರಿಯಾಗಿಸಿಕೊಂಡು ಅವರನ್ನು ಭಾವನಾತ್ಮಕವಾಗಿ ಶೋಷಣೆಗೆ ಒಳಪಡಿಸಿ, ಅವರಿಂದ ಹಣಪಡೆದು ಮೋಸ ಮಾಡುವ ಹುಡುಗನೊಬ್ಬ, ಮೂರನೇ ಹೆಣ್ಣಿಗೂ ಅದನ್ನೇ ಮಾಡಲು ಹೊರಟಾಗ ಅವಳ ಪ್ರೀತಿಗೆ ಮಾರುಹೋಗಿ, ಅವನ ಅಂತಃಸಾಕ್ಷಿಯನ್ನು ಚುಚ್ಚಿದಾಗ ,ಅವನು ಅವಳ ಬಳಿಗೆ ತಾನು ಅವಳಿಂದ ಪಡೆದ ಹಣವನ್ನು ಮರಳಿಸಿದ್ದಲ್ಲದೆ ತಾನು ಇಬ್ಬರು ಹೆಣ್ಣುಮಕ್ಕಳಿಗೆ ತನ್ನ ಗೆಳೆಯನ ಮಾತನ್ನು ಕೇಳಿ ಮಾಡಿದ ಮೋಸವನ್ನು ಒಪ್ಪಿಕೊಂಡಾಗ, ಅವಳು ಅವನಿಗೆ ಒಂದು ಅವಕಾಶ ಕೊಡಲು ನಿರ್ಧರಿಸಿ , ಅವನು ಮಾಡಿದ ತಪ್ಪನ್ನು ತಾನಾಗಿ ಹೋಗಿ ಪೋಲಿಸ ಸ್ಟೇಷನ್ ನಲ್ಲಿ ತಪ್ಪೊಪ್ಪಿಗೆಯನ್ನು ಮಾಡುತ್ತಾನಲ್ಲದೆ, ಮೋಸ ಮಾಡಿದ ಆ ಇಬ್ಬರು ಹೆಣ್ಣು ಮಕ್ಕಳಿಗೂ ತಾನು ದುಡಿದು ಅವರ ಹಣವನ್ನು ಹಿಂದುರುಗಿಸಲು, ಇವಳು‌ ಕೊಟ್ಟ ಕಂಪನಿಯಲ್ಲಿ ಕೆಲಸ ಮಾಡಿ ಪ್ರತಿತಿಂಗಳು ಬರುವ ಸಂಬಳದಿಂದ ಅದನ್ನು ಎರಡು ವರ್ಷಗಳ ಕಾಲ ತೀರಿಸುತ್ತಾನೆ. ನಂತರ ಅವರಿಬ್ಬರ ಸಂಬಂಧ ವಿವಾಹದಲ್ಲಿ ಪರ್ಯವಸಾನಗೊಳ್ಳುತ್ತದೆ. ಆದ್ದರಿಂದ ಇದೊಂದು ಸಕಾರಾತ್ಮಕ ಕತೆ.

ಇಂತಹ ವಿಶಿಷ್ಟವಾದ ಭಿನ್ನ ಬಗೆಯ ಕತೆಗಳನ್ನು ಬರೆದಿರುವ ಲೇಖಕಿಗೆ , ಇದನ್ನು ಪ್ರಕಟಿಸಿದ ಅಂಕಿತದ ನನ್ನ ಸಹಪಾಠಿಗಳಾದ ಪ್ರಕಾಶ್ ಮತ್ತು ಪ್ರಭಾರಿಗೆ ಅಭಿನಂದನೆ.


  • ರಘುನಾಥ್ ಕೃಷ್ಣಮಾಚಾರ್ – ಲೇಖಕರು, ಚಿಂತಕರು, ರಾಮನಿರಂಜನ್ ಝುನ್ಝುನ್ವಾಲ ಕಾಲೇಜು ಉಪನ್ಯಾಸಕರು.

 

 

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading