‘ಇರುವುದೊಂದೇ ಭೂಮಿ’ ಕೃತಿ ಪರಿಚಯ

ಖ್ಯಾತ ಲೇಖಕರಾದ ನಾಗೇಶ್ ಹೆಗಡೆ ಅವರ ‘ಇರುವುದೊಂದೇ ಭೂಮಿ’ ಕೃತಿ ಪರಿಚಯ ಲೇಖಕರಾದ ರಘುನಾಥ್ ಕೃಷ್ಣಮಾಚಾರ್ ಅವರ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…

ಪುಸ್ತಕ : ಇರುವುದೊಂದೇ ಭೂಮಿ
ಲೇಖಕರು :  ನಾಗೇಶ್ ಹೆಗಡೆ
ಪ್ರಕಾಶನ : ಅಂಕಿತ ಪುಸ್ತಕ
ಬೆಲೆ : 120.00

1938 ರಲ್ಲಿ ಪ್ರಕಟವಾದ ಮಾಸ್ತಿಯವರ ಕಾಕನಕೋಟೆ ನಾಟಕದ ಒಂದು ಹಾಡು ಮೇಲಿನ ಕೃತಿಗೆ ಒಂದು ಮುಂಗಾಣ್ಕೆಯಂತೆ ಇದೆ . ಅದು” ಕಾಡನು ಕಡಿದು ಬೂಡನು ಮಾಡಿದ ಕರಿಹೈದ” . ಈಗ ನಾವು ಬುಡಕಟ್ಟು ಜನಾಂಗ ಎಂದು ಗುರುತಿಸುವ ಕಾಡಿನಲ್ಲಿ ವಾಸಿಸುತ್ತಿದ್ಧ ಸಮುದಾಯ, ತನ್ನ ವಸತಿಗಾಗಿ ಕಾಡನು ಕಡಿದು ಗೂಡು ಕಟ್ಟಿಕೊಂಡು ಮುಂದೆ ಮೈಸೂರಿನ ಅರಸರ ಜೊತೆಗೆ ತನ್ನ ಕಾಡಿನ ಜ್ಞಾನದಿಂದ ಸ್ನೇಹ ಸಂಬಂಧ ಸ್ಥಾಪಿಸಿದ ವಸ್ತುವನ್ನು ಒಳಗೊಂಡಿದೆ. ಅದರಂತೆ ಬೇಂದ್ರೆಯವರ ” ಚಿಗರಿಗಂಗಳ ಚೆಲುವೆ’ ಕವಿತೆಯಲ್ಲಿ ” ಒಡವ್ಯಲ್ಲೋ ಇದು ಉಸಿರಿದ್ದ ಒಡಲು” ಎಂದು ಆರ್ತನಾದ ಗೈವ ಭೂಮಿಯ ಆರ್ತನಾದವನ್ನು ತನ್ನ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗುತ್ತಿರವವರನ್ನು” “ತಾಯ್ಗಂಡರು” ಎಂದು ಕರೆಯಲು ಅವಳು ಹಿಂಜರಿಯುವುದಿಲ್ಲ. ಮೇಲಿನ ಶೀರ್ಷಿಕೆಯ ಕೃತಿ ಬೇಂದ್ರೆಯವರ ಮಾತುಗಳನ್ನು ಸಾಕ್ಷ್ಯಾಧಾರಗಳ ಸಮೇತ ಧೃಡನಡಿಸುತ್ತದೆ.

ಮೇಲೆ ಉಲ್ಲೇಖಿಸಿದ ಸಾಹಿತ್ಯದ ಉಲ್ಲೇಖಗಳನ್ನು ರೂಪಕಗಳು ಎಂದು ಪರಿಗಣಿಸಿದರೆ, ಐದನ್ನು ನಿಸರ್ಗ ಸಂಪನ್ಮೂಲಗಳ ಶತ್ರುಗಳು ಎಂದು ಪರಿಭಾವಿಸಬಹುದು; ಅವು: ಬಂಡವಾಳ ಶಾಹಿಗಳು , ಅವರ ಕೈಗೊಂಬೆಯಾದ ಸರ್ಕಾರ, ಅವರೊಂದಿಗೆ ಶಾಮೀಲಾದ ಇಂಜಿನಿಯರಗಳು, ಮತ್ತು ಗುತ್ತಿಗೆದಾರರು. ಇವರಿಗೆ ಸಾಧನಗಳಾಗಿರುವ ವಿಜ್ಞಾನಿಗಳು ಮತ್ತು ಅದರ ಉಪಉತ್ಪನ್ನವಾದ ತಂತ್ರಜ್ಞಾನ. ಅಭಿವೃದ್ಧಿಯೆಂಬ ಮರೀಚಿಕೆಯ ಬೆನ್ನು ಹತ್ತಿ ಅದರ ಪರಿಣಾಮವಾಗಿ ನಿಸರ್ಗ ಸಂಪನ್ಮೂಲಗಳಾದ ಕಾಡು, ನದಿಗಳು, ಸಮುದ್ರಗಳು, ಬೆಟ್ಟ ಗುಡ್ಡಗಳು , ಭೂಮಿಯ ಖನಿಜ ಸಂಪತ್ತುಗಳನ್ನು ಒಂದೇ ಸಮನೇ ಅಭಿವೃದ್ಧಿಯೆಂಬ ಭಸ್ಮಾಸುರನಿಗೆ ಆಹುತಿ ಕೊಡಲಾಗುತ್ತಿರುವುದನ್ನು ಈ ಕೃತಿ ವಿಷಾದದಿಂದ ದಾಖಲಿಸಿದೆ. ಅದರಿಂದ ಇಂದು ಕರ್ನಾಟಕದ ಕುದುರೆ ಮುಖದಲ್ಲಿ ಉಳಿದವರ ಅಳಲು, ಪಶ್ಚಿಮ ಘಟ್ಟಗಳ ಜೀವ ವೈವಿಧ್ಯ , ಶರಾವತಿ, ಕಾಳಿನದಿ ಕಾವೇರಿ ಕಪಿಲೆ ನದಿಗಳು ಕಲುಷಿತಗೊಂಡು ಕಾರ್ಖಾನೆಗಳು, ಅಣೆಕಟ್ಟುಗಳು, ಅಣುಸ್ಥಾವರ (ಕೈಗಾ) ಇತ್ಯಾದಿಗಳ ಮೂಲಕ, ಅಲ್ಲಿನ ಜಲಚರಗಳು ಮೃತ್ಯುಮುಖವನ್ನು ಕಂಡಿವೆ. ಅರಣ್ಯಗಳಿಗೆ, ಅಲ್ಲಿನ ಜೀವವೈವಿಧ್ಯಕ್ಕೆ ಧಕ್ಕೆ ಉಂಟಾಗಿದೆ. ಮರಗಳು ಕಡಿಯುವವರ ಜೊತೆ ಭ್ರಷ್ಟರಾದ ಅರಣ್ಯಾಧಿಕಾರಿಗಳು ಶಾಮೀಲಾದ ಉದಾಹರಣೆಗಳು ಇವೆ. ಇವೆಲ್ಲ ಬೇಲಿಯೇ ಎದ್ದು ಹೊಲ ಮೆಯ್ದಂತೆ. ರಕ್ಷಿಸಬೇಕಾದವರೆ ಭಕ್ಷಕರಾದರೆ ಇನ್ನು ಯಾರಿಗೆ ದೂರವುದು?. ಇದನ್ನು ಮೊದಲೇ ಗುರುತಿಸಿ ಎಚ್ಚರಿಕೆಯ ಗಂಟೆ ಮೊಳಗಿಸಿದ ಪರಿಸರ ತಜ್ಞರ ವರದಿಗಳನ್ನು ( ಮಾಧವ ಗಾಡ್ಗಿಲ್) ಕಸದ ಬುಟ್ಟಿಗೆ ಎಸೆದು, ತಮ್ಮ ಧಂಧೆಯನ್ನು ಮುಂದುವರಿಸುತ್ತಿರುವ ನಿರ್ಲಜ್ಜ ಸರಕಾರವನ್ನು, ಅದರ ಅಧಿಕಾರಿ ವರ್ಗವನ್ನು, ಇಲ್ಲಿ ತರಾಟೆಗೆ ತೆಗೆದು ಕೊಳ್ಳಲಾಗಿದೆ. ಜನಸಾಮಾನ್ಯರೇ ಈಗ ಪರಿಸರ ಸಂರಕ್ಷಣೆಗೆ ಮುಂದಾಗಿರುವುದನ್ನು ಇಲ್ಲಿ ದಾಖಲಿಸಿದ್ದಾರೆ.

ಅಪ್ಪಿಕೋ ಚಳವಳಿ, ಇದರೊಂದಿಗೆ ಸಾವಿರಾರು ಬೀಜಗಳ ಬಿತ್ತಿ ಮರಗಳನ್ನು ಪೋಷಿಸಿದ ಸಾಲುಮರದ ತಿಮ್ಮಕ್ಕನ ಸಾಧನೆಯನ್ನೂ ಇಲ್ಲಿ ಉಲ್ಲೇಖಿಸಬಹುದಿತ್ತು. ಪರ್ಯಾಯ ವ್ಯವಸ್ಥೆಗಳನ್ನು ಇಲ್ಲಿ ಸೂಚಿಸಲಾಗಿದೆ. ಆದರೆ ತಮ್ಮ ಕಿಸೆ ತುಂಬುವುದಿಲ್ಲವಾದ್ದರಿಂದ, ಭವಿಷ್ಯದ ಜನಾಂಗದ ಬೇಕು ಬೇಡಗಳಿಗೆ ಕಿವುಡರು ಕುರುಡು ಆಗಿ, ಸುಸ್ತಿರ ಅಭಿವೃದ್ಧಿಯನ್ನು ಗಾಳಿಗೆ ತೂರಲಾಗಿದೆ. ಇದನ್ನು ಬರೆಯುವ ಮೂಲಕ ನಮ್ಮ ಸರ್ಕಾರಕ್ಕೆ ಎಚ್ಚರಿಕೆಯ ಗಂಟೆಯನ್ನು ಮೊಳಗಿಸಿರುವ ಲೇಖಕರಾದ ನಾಗೇಶ್ ಹೆಗಡೆ ಅವರಿಗೆ ಮತ್ತು ಇದನ್ನು ಪ್ರಕಟಿಸಿದ ನನ್ನ ಸಹಪಾಠಿ ಗೆಳೆಯರಾದ ಪ್ರಕಾಶ್ ಪ್ರಭಾಗೆ ಅಭಿನಂದನೆಗಳು. ಇದು ಹಲವಾರು ಮುದ್ರಣಗಳನ್ನು ಕಂಡಿರುವದು ಇದರ ಜನಪ್ರಿಯತೆಗೆ ಸಾಕ್ಷಿ. ಇದನ್ನು ನಮ್ಮ ಶಿಕ್ಷಣದ ವಿವಿಧ ಹಂತಗಳಲ್ಲಿ ಪಠ್ಯವನ್ನಾಗಿಸಿದರೆ, ನಮ್ಮ ಯುವ ಜನಾಂಗದಲ್ಲಿ ಪರಿಸರ ಪ್ರೇಮವನ್ನು ಬಿತ್ತಿ ಬೆಳೆಯುವುದರಲ್ಲಿ ಸಂದೇಹವಿಲ್ಲ.

ಬೆನ್ನುಡಿಯಲ್ಲಿ ಇದರ ಮಹತ್ವವನ್ನು ನಮ್ಮ ಹಿರಿಯ ಸಹಪಾಠಿ ಖ್ಯಾತ ಪತ್ರಕರ್ತೆ ಡಾ.ಆರ್ ಪೂರ್ಣಿಮಾ ಗುರುತಿಸಿದ್ದಾರೆ. ಇಬ್ಬರಿಗೂ ಅಭಿನಂದನೆಗಳು.


  • ರಘುನಾಥ್ ಕೃಷ್ಣಮಾಚಾರ್ – ಲೇಖಕರು, ಚಿಂತಕರು, ರಾಮನಿರಂಜನ್ ಝುನ್ಝುನ್ವಾಲ ಕಾಲೇಜು ಉಪನ್ಯಾಸಕರು.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW