ಬೆಳಕಿನ ಸವಿ ಉಣಿಸಿದ ಕಾದಂಬರಿ ಈ ಪರಿಕ್ರಮ. ಕಾದಂಬರಿಯ ಕರ್ತರು ರಮ್ಯ ಎಸ್. ಈ ಕೃತಿಯ ಕುರಿತು ಲಕ್ಷ್ಮಿ ನಂದ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…
ಪುಸ್ತಕ : ಪರಿಕ್ರಮ
ಲೇಖಕಿ: ರಮ್ಯ ಎಸ್
ಪ್ರಕಾಶನ : ಸಮನ್ವಿತ , ಬೆಂಗಳೂರು
ಬೆಲೆ: 230/-
ನಭೋ ಮಂಡಲದಲ್ಲಿ ಮೂಡುವ ತಾರೆಗಳ ಪರಿಕ್ರಮದಂತೆ ಮನುಜನ ಬದುಕಿನ ಅದರಲ್ಲೂ ದಾಂಪತ್ಯದಲ್ಲಿ ಹೆಣ್ಣು ಗಂಡಿನ ನಡುವೆ ಬೆಸೆಯುವ ಬಂಧದ ಪರಿಕ್ರಮ ಹೇಗಿದ್ದರೆ ಸೊಗಸು ಎಂದು ಬಿಂಬಿಸುವ ಕತೆಯೇ ಈ ಪರಿಕ್ರಮ. ಮುಸುಕಿದ್ದ ಮಬ್ಬು ಹರಿದ ಮೇಲೆ ಮೂಡುವ ಬೆಳಕನ್ನು ನೋಡಲದೆಷ್ಟು ಸೊಗಸಲ್ಲವೆ ! ಅಂತಹದ್ದೇ ಬೆಳಕಿನ ಸವಿ ಉಣಿಸಿದ ಕಾದಂಬರಿ ಈ ಪರಿಕ್ರಮ. ನಂಬಿಕೆ, ಭರವಸೆ , ಸಮರ್ಪಣೆಯ ಭಾವದ ಅಡಿಯಲ್ಲಿ ಸುಂದರವಾಗಿ ಮೂಡಿ ಬಂದ ದಾಂಪತ್ಯದ ಕತೆ.
ಈ ಕತೆಯಲ್ಲಿ ನನ್ನನ್ನ ಸೆಳೆದಿದ್ದು ಕತೆಯ ನಾಯಕ , ನಾಯಕಿ. ಈ ಕತೆಯಲ್ಲಿ ಯಾರು ಹದಿಹರೆಯದ ಪ್ರೇಮಿಗಳಿಲ್ಲ. ಪ್ರಬುದ್ಧ ಮನದ ನಾಯಕ ನಾಯಕಿಯಿಂದ ಕೂಡಿದ ಕತೆಯಾದರೂ , ಚಂದದ ಕಥ ಹಂದರದೊಂದಿಗೆ ಸಾಗುವ ಕತೆ ಓದುಗರನ್ನು ಹಿಡಿದಿಟ್ಟು ಓದಿಸಿಕೊಂಡು ಹೋಗಿದ್ದಂತು ನಿಜ. ಪ್ರತಿ ಹಂತದಲ್ಲೂ ಕುತೂಹಲ ಕಾಯ್ದಿಟ್ಟುಕೊಂಡು ಮುಂದೆ ಸಾಗುವ ಕತೆ ಇದು.

ಪಾತ್ರಗಳ ಪರಿಚಯ , ಪ್ರತಿ ಪಾತ್ರಕ್ಕೂ ಇದ್ದ ಅಳತೆ ತೂಕ ಎಲ್ಲೂ ಒಂದಿನಿತು ಕಡಿಮೆಯಾಗದ ಹಾಗೆ ಮೂಡಿ ಬಂದಿರುವ ಕತೆ. ಈ ಕತೆಯಲ್ಲಿ ನನ್ನನ್ನ ಹೆಚ್ಚಾಗಿ ಕಾಡಿ, ಆವರಿಸಿದ ಪಾತ್ರ ನಾಯಕಿ ಅರುಂಧತಿಯ ಪಾತ್ರ. ದಿಟ್ಟ ನಿಲುವಿನ , ಸ್ವಾಭಿಮಾನದ ಪ್ರತೀಕವಾಗಿ ಮೂಡಿ ಬಂದ ಪಾತ್ರ. ವಿದ್ಯಾ ದದಾತಿ ವಿನಯಂ ವಿನಯಾದ್ಯಾತಿ ಪಾತ್ರತಾಂ। ಪಾತ್ರತ್ವಾದ್ಧನ ಮಾಪ್ನೋತಿ ಧನಾದ್ಧರ್ಮಂ ತತಃ ಸುಖಂ। ಎನ್ನುವ ಉಕ್ತಿಗೆ ಸರಿಹೊಂದುವಂತೆ ವಿದ್ಯೆಯೊಂದಿಗೆ ವಿನಯ , ಸಹನೆ , ತಾಳ್ಮೆಯನ್ನು ಮೇಳೈಸಿಕೊಂಡು ನಡೆಯುವ ನಾಯಕಿ, ಹೆಣ್ಣಿನ ಬದುಕಿನ ಹಲವು ಆಯಾಮಗಳಿಗೆ ಕನ್ನಡಿ ಹಿಡಿದಂತ ಪಾತ್ರ.
ತನ್ನ ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಸೆಟೆದು ನಿಲ್ಲುವ , ಗಂಡನಿಂದಾದ ತಪ್ಪಿಗೆ ನೊಂದು ಬೆಂದು , ಆತ್ಮಭಿಮಾನಕ್ಕಾಗಿ ಅವನ ಮನೆ ಮನದಿಂದ ಹೊರ ನಡೆದವಳು , ಅದೇ ಗಂಡನ ಕ್ಷಮೆಯಾಚನೆಗೆ ಮನಸೋತು ಕ್ಷಮಯಾಧಾರಿತ್ರಿಯಾಗಿ ನಿಂತು ಅವನು ಮುಂದೆ ತೊಡಕಿನಲ್ಲಿ ಸಿಲುಕಿದಾಗ ತನ್ನ ಮುಂದಾಲೋಚನೆಯಿಂದ ಅವನನ್ನು ಆಪತ್ತಿನಿಂದ ಹೊರ ತಂದ ಬಗೆ ಓದುಗರ ಮನ ಗೆಲ್ಲುತ್ತದೆ . ಅರುಂಧತಿ ತಾಯಿಯಾಗಿ, ಮಗಳಾಗಿ, ಹೆಂಡತಿಯಾಗಿ, ಸೊಸೆಯಾಗಿ ಪ್ರತಿ ಪಾತ್ರದಲ್ಲೂ ತನ್ನ ತನವನ್ನು ಕಳೆದುಕೊಳ್ಳದೆ ತೂಗಿಸಿಕೊಂಡು ಹೋಗುವ ಪರಿ ತುಂಬಾ ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ ಲೇಖಕಿ.
ಹೆಣ್ಣಿನ ಬದುಕಿನಲ್ಲಿ ಬಹು ಮುಖ್ಯ ಘಟ್ಟ ಎಂದರೆ ಮದುವೆ. ಅಂತಹ ಮದುವೆಯ ಬಗ್ಗೆ ಅರುಂಧತಿಯ ಮನದಲ್ಲಿ ಇದ್ದುದು ಕಹಿಯ ಭಾವನೆ , ಅದಕ್ಕೆ ಕಾರಣ ಅರುಂಧತಿಯ ಬಾಲ್ಯದಲ್ಲಿ ಘಟಿಸಿದ ಕಹಿ ಘಟನೆ. ಮುಂದೆ ಅವಳ ಮನದ ಶಂಕೆ , ಅಪನಂಬಿಕೆಗಳನ್ನೆಲ್ಲ ದೂರ ಮಾಡಿ ಅವಳ ಬಾಳಿನ ಹೊಸ ಪುಟದೊಳಗಡಿ ಇಟ್ಟು ಅವಳ ಸಹಚರನಾಗುವವನೆ ಅಭಿರಾಮ್ .
ಕತೆಯಲ್ಲಿ ನನ್ನನ್ನು ಸೆಳೆದ ಇನ್ನೊಂದು ಪ್ರಮುಖ ಪಾತ್ರವೆಂದರೆ ಕಥಾ ನಾಯಕಿ ಆರುಂಧತಿಯ ತಂದೆ ಶ್ರೀಕಂಠಯ್ಯನವರು. ಪ್ರತಿ ಹೆಣ್ಣು ಮಗುವಿಗೂ ಇಂತಹ ತಂದೆ ಇದ್ದರೆ ಎಷ್ಟು ಚೆನ್ನ , ಅನಿಸುವ ಹಾಗೆ ಮೂಡಿ ಬಂದಂತ ಪಾತ್ರ. ಘನತೆವೆತ್ತ ಗೌರವವಾದ ನೌಕರಿಯಲ್ಲಿದ್ದರು ಪತ್ನಿ ಇಂದ ಆದ ತಪ್ಪಿಗೆ, ಬಿದ್ದ ಪೆಟ್ಟಿಗೆ ಯಾರನ್ನು ದೂಷಿಸದೆ , ಒಬ್ಬಂಟಿಯಾಗಿ , ಮಗಳಿಗೆ ತಾಯ ಕೊರತೆಯನ್ನು ನೀಗಿಸಿ ಸಮಾಜಕ್ಕೆ ಅಂಜದೆ ಅವಳನ್ನು ಸ್ವಾಭಿಮಾನಿಯಾಗಿ ಜನರ ನಡುವೆ ತಲೆ ಎತ್ತಿ ಬಾಳುವಂತೆ ಬೆಳಸಿದ ಶ್ರೀಕಂಠಯ್ಯನವರು, ಅವಳ ನಿರ್ಧಾರ , ನಿಲುವುಗಳಿಗೆ ಬೆಲೆ ಕೊಟ್ಟು ಬದುಕಿನ ಪಾಠ ಹೇಳಿದ ಪರಿ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಕತೆಯಲ್ಲಿ.

ಇನ್ನೂ ಈ ಕತೆಯ ನಾಯಕ ಅಭಿರಾಮ್ ವಸಿಷ್ಠ, ತನ್ನ ಒಲವನ್ನು ನಿರಾಕರಿಸಿದವಳ ಮನ ನೋಯಿಸದೆ ಅವಳ ಒಲವಿಗಾಗಿ ತಪನ ಗೈದಂತೆ ತಾಳ್ಮೆಯಿಂದ ಕಾದು ಮದುವೆ ಎಂಬ ಬಂಧದ ಬಗ್ಗೆ ಅವಳ ಮನದಲ್ಲಿ ಮೂಡಿದ್ದ ಅಪನಂಬಿಕೆಯನ್ನು ಹೋಗಲಾಡಿಸಿ ತನ್ನ ಮನದರಸಿಯನ್ನಾಗಿ ಮಾಡಿಕೊಂಡವನು ಅವಳಿಗಾಗಿ ವಸಿಷ್ಠ ನಾಗುತ್ತಾನೆ. ಮೂವತ್ತು ವರ್ಷಗಳ ಕಾಲ ಸುಖಿ ದಾಂಪತ್ಯ ಜೀವನ ನಡೆಸಿದ ನಂತರ , ಸಮೃದ್ಧಿಯ ತುತ್ತ ತುದಿಯಲ್ಲಿದ್ದ ಕಾಲದಲ್ಲೇ ಅದೊಂದು ದುರ್ಬಲ ಕ್ಷಣದಲ್ಲಿ ತನ್ನಿಂದ ಆಗಬಹುದಾಗಿದ್ದ ತಪ್ಪಿಗೆ ನೊಂದು ಬೆಂದು ಕ್ಷಮೆಯಾಚಿಸಿ ಮನೆ ಮನಗಳಿಂದ ದೂರಾಗಲು ಹೊರಟಿದ್ದ ಮನದರಸಿಯನ್ನು ಹೇಗೆ ಒಲಿಸಿಕೊಂಡು ವಾಪಸ್ ಕರೆತರಲು ಸಮರ್ಥನಾಗುತ್ತಾನೆ. ಮುಂದೆ ಅವರ ಬಾಳಿನಲ್ಲಿ ಬಂದ ಬಿರುಗಾಳಿಯನ್ನು ಇಬ್ಬರು ಸಮರ್ಥವಾಗಿ ನಿಭಾಯಿಸಿ ಮಕ್ಕಳ ಹಾಗೂ ಮನೆಯವರೆಲ್ಲರ ಮುಂದೆ ಹೇಗೆ ಮಾದರಿಯಾಗಿ ನಿಲ್ಲುತ್ತಾರೆ ಅನ್ನುವುದನ್ನು ನೀವು ಕತೆ ಓದಿಯೇ ತಿಳಿಯಬೇಕು. ದಾಂಪತ್ಯದ ಅನುಸಂದಾನದೊಂದಿಗೆ ಕೌಟುಂಬಿಕ ನೆಲೆಗಟ್ಟಿನ ಆಯಾಮಗಳನ್ನು ಹೇಳುತ್ತ ಸಾಗುತ್ತದೆ ಈ ಕತೆ. ಕತೆಯನ್ನು ಓದದವರು ಇಂದೆ ಕೊಂಡು ಓದಿ .
ಕಾದಂಬರಿಯಲ್ಲಿ ವಿಶಿಷ್ಟವಾಗಿ ಮೂಡಿ ಬಂದ ಇನ್ನೊಂದು ಅಂಶವೆಂದರೆ ಕತೆಯ ಕೊನೆಯಲ್ಲಿ ಲೇಖಕಿ ರಮ್ಯ ಅವರು ಅರುಂಧತಿ ವಸಿಷ್ಠ ನಕ್ಷತ್ರದ ಕುರಿತಾಗಿ ನೀಡಿರುವ ಮಾಹಿತಿ ಬಹಳ ಸೊಗಸಾಗಿ ಮೂಡಿ ಬಂದಿದೆ. ನಕ್ಷತ್ರ ಲೋಕದಲ್ಲಿನ ತಾರೆಗಳ ಪರಿಕ್ರಮದ ಬಗ್ಗೆ ಬಹಳಷ್ಟು ಮಾಹಿತಿ ನೀಡಿದ್ದಾರೆ. ವಿವಾಹಗಳಲ್ಲಿ ಅರುಂಧತಿ ನಕ್ಷತ್ರವನ್ನು ವಧುವರರಿಗೆ ತೋರಿಸುವ ಕಾರಣ , ಅದರ ಹಿಂದಿರುವ ಭಾವರ್ಥ ಎಲ್ಲವನ್ನೂ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ ಲೇಖಕಿ ರಮ್ಯ ಅವರು.
ಅಂತ್ಯದ ವರೆಗೂ ಕತೆ ಓದುಗರನ್ನು ತನ್ನ ತೆಕ್ಕೆಗೆ ಸೆಳೆದು ಓದಿಸಿಕೊಂಡು ಹೋಗುವುದಂತು ಸುಳ್ಳಲ್ಲ. ಮುಗಿದ ನಂತರ ಪಾತ್ರಗಳು ನಮ್ಮನ್ನ ಆವರಿಸಿ ಕಾಡುವುದಂತು ಸತ್ಯ. ಚಂದದ ಹಾಗೂ ಅರ್ಥವತ್ತದ ಮುಖಪುಟದೊಂದಿಗೆ ಮೂಡಿ ಬಂದಿರುವ ಪರಿಕ್ರಮ ಪುಸ್ತಕವನ್ನು ಕೊಂಡು ಓದಿ ಗೆಳತಿ , ಲೇಖಕಿ ರಮ್ಯ ಅವರನ್ನು ಪ್ರೋತ್ಸಾಹಿಸಿ.
- ಲಕ್ಷ್ಮಿ ನಂದ
