‘ವಿದ್ಯಾವಂತ ವೇಶ್ಯೆಯ ಆತ್ಮಕಥೆ’ ಕೃತಿ ಪರಿಚಯ

ಡಾ. ನಾಗ ಎಚ್. ಹುಬ್ಳಿ ಅವರು ಬಂಗಾಳಿ ಭಾಷೆಯಿಂದ ನೇರವಾಗಿ ಅನುವಾದಿಸಿದಂತಹ ‘ವಿದ್ಯಾವಂತ ವೇಶ್ಯೆಯ ಆತ್ಮಕಥೆ’ ಕೃತಿಯ ಕುರಿತು ಹಿರಿಯ ಸಾಹಿತಿಗಳು, ಚಿಂತಕರು ಆದ ಅರಣಕುಮಾರ ಹಬ್ಬು ಅವರು ತಮ್ಮ ಅಭಿಪ್ರಾಯವನ್ನು ದಾಖಲಿಸಿದ್ದಾರೆ. ತಪ್ಪದೆ ಮುಂದೆ ಓದಿ…

ಪುಸ್ತಕ : ವಿದ್ಯಾವಂತ ವೇಶ್ಯೆಯ ಆತ್ಮಕಥೆ
ಲೇಖಕರು : ಡಾ. ನಾಗ ಎಚ್. ಹುಬ್ಳಿ
ಪ್ರಕಾರ : ಆತ್ಮಕಥೆ

ಪ್ರಕಾಶಕರು : ಛಂದ ಪುಸ್ತಕ, ಬೆಂಗಳೂರು
ಬೆಲೆ:  ೨೪೦ ರೂಪಾಯಿ 

ಅನುವಾದ ಒಂದು ಯಶಸ್ವಿ ಕೃತಿಯಾಗಿ ಹೊರಹೊಮ್ಮಬೇಕಿದ್ದರೆ ವಿಷಯದ ಆಯ್ಕೆ ಬಹು‌ ಮುಖ್ಯ ಪಾತ್ರ ವಹಿಸುತ್ತದೆ. ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ತರ್ಜುಮೆ ಮಾಡುವುದೆಂದರೆ ಮೂಲ ಕೃತಿ ಬರೆದಷ್ಟೆ ಶ್ರಮ, ಭಾಷಾ ಪ್ರಭುತ್ವ, ಮೂಲ ಕೃತಿಯಲ್ಲಿ ಬರುವ ವಿಷಯ‌ಮತ್ತು‌ ಆಯಾ ಪ್ರಾದೇಶಿಕ ವಾತಾವರಣದ ಅರಿವು ಕೂಡಾ ಅಷ್ಟೇ ಪ್ರಧಾನವಾಗಿರುತ್ತದೆ.

ಈ ಹಿನ್ನೆಲೆಯಲ್ಲಿ ಸದ್ಯ ಜಾರ್ಖಂಡ ನ ರಾಂಚಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ನಾಗ ಎಚ್. ಹುಬ್ಳಿ ಅವರು ಆಯ್ಕೆ ಮಾಡಿಕೊಂಡ ಬಂಗಾಳಿ ಮಹಿಳೆಯೊಬ್ಬಳ ಆತ್ಮಕಥೆ ಕೃತಿ ಅನುವಾದಕ್ಕೆ ಒಂದು ಮಾದರಿಯಾಗಿದೆ.

ಕುಮಾರಿ/ಶ್ರೀಮತಿ ಮಾನದಾ ದೇವಿಯ ಆತ್ಮಕಥೆ ಓದುಗರ ಮನ ಕಲಕುವ ದಾರುಣ ಕಥೆಯಾಗಿದೆ. ತಾತ್ಕಾಲಿಕ ದೈಹಿಕ ಆಕರ್ಷಣೆಗೆ ಒಳಗಾದ ಈ ಮಹಿಳೆಯೊಬ್ಬಳು ಅನೇಕ ರೀತಿಯಲ್ಲಿ ಶೋಷಣೆಗೆ ಒಳಗಾಗಿ ಇಲ್ಲಸಲ್ಲದ ಕಷ್ಟ ಅನುಭವಿಸಿ ನಂತರ ಪಶ್ಚಾತ್ತಾಪದಲ್ಲಿ ನೊಂದು ಬೆಂದು “ಈ ಪಾಪದ ವೃತ್ತಿಯನ್ನು ಮುಂದುವರಿಸುವುದಿಲ್ಲ. ಅರಿಷಡ್ವರ್ಗಗಳನ್ನು ಗೆಲ್ಲುವುದು ನನ್ನಿಂದ ಕಷ್ಟವಾಗಬಹುದು. ಆದರೆ ಅವುಗಳ ವಿರುದ್ಧದ ಗೆಲುವಿಗಾಗಿ ಪ್ರಯತ್ನಿಸುವುದರಲ್ಲಿ ತಪ್ಪೇನಿದೆ?” ಎನ್ನುವ ಪ್ರತಿಜ್ಞೆ ಮಾಡುತ್ತಾಳೆ.

ವಿದ್ಯಾವಂತ ವೇಶ್ಯೆಯ ಆತ್ಮಕಥೆ ಒಂದು ಅದ್ಭುತ ಕೃತಿ. ಯೌವನದಲ್ಲಿ ದಾರಿ ತಪ್ಪಿ ಅನೈತಿಕವಾಗಿರುವ ವೇಶ್ಯಾವೃತ್ತಿಗೆ ಇಳಿದಿರುವ ಮಾನದಾಳ ಆತ್ಮ ಶೋಧನೆಯಾಗಿದೆ. ಶಿಕ್ಷಿತಾ ಪತಿತಾರ್ ಆತ್ಮಚರಿತಾ ಮೂಲ ಕೃತಿಯ ಶೀರ್ಷಿಕೆ. ಅನುವಾದಕರೇ ಹೇಳಿದಂತೆ ಬಂಗಾಳಿ ಸಾಹಿತ್ಯ ಲೋಕದಲ್ಲಿ ಸುಮಾರು ಒಂದು ಶತಮಾನದಷ್ಟು ಹಿಂದೆಯೇ ಹೊಸದೊಂದು ಸಂಚಲನ ಉಂಟು ಮಾಡಿದ ಅತ್ಯಂತ ಅಪರೂಪದ ಕೃತಿ. ಲೇಖಕಿ ಮಾನದಾ ತನ್ನೆಲ್ಲ ತಪ್ಪುಗಳನ್ನು ಇಷ್ಟೊಂದು ಮುಕ್ತವಾಗಿ ಅಕ್ಷರಗಳ ಮೂಲಕ ಅಭಿವ್ಯಕ್ತಿಗೊಳಿಸಿರುವುದು ಅಪರೂಪದಲ್ಲಿ ಅಪರೂಪ.

ಈ ಕೃತಿ ಓದುತ್ತಿದ್ದಂತೆ ಮಾನದಾ ಕುರಿತು‌ ಓದುಗರಲ್ಲಿ ಕೋಪ, ಅನುಕಂಪ, ಅಭಿಮಾನ ಎಲ್ಲವೂ ಒಟ್ಟಿಗೇ ಆವಿರ್ಭವಿಸುತ್ತವೆ. ಇಂಥ ಸಂಚಲನ ಮೂಡಿಸಿದ ಈ ಕ್ಲಾಸಿಕ್ ಕೃತಿಯನ್ನುವ ಡಾ. ನಾಗ ಹುಬ್ಳಿಯವರು ಕನ್ನಡಕ್ಕೆ ತರ್ಜುಮೆ ಮಾಡಿ ನಾಡಿನ ಓದುಗರಿಗೆ ತಲುಪಿಸಿರುವುದು ಕೂಡಾ ಅದ್ಭುತ ಕಾರ್ಯವೇ ಸೈ. ಇದಕ್ಕಾಗಿ ನಾನು ಅವರಿಗೆ ಅಭಿನಂದನೆ‌ ಮತ್ತು ಕೃತಜ್ಞತೆಗಳನ್ನು ಒಟ್ಟಿಗೇ ಸಲ್ಲಿಸುತ್ತೇನೆ.

ಸಾಮಾನ್ಯವಾಗಿ ಅನುವಾದ ಮಾಡುವಾಗ ಲೇಖಕ ಆ ಕೃತಿಯಲ್ಲಿ ಪರಕಾಯ ಪ್ರವೇಶ ಮಾಡುವುದು ಅನಿವಾರ್ಯ. ಅಂಥ ಸಾಧನೆ ಮಾಡಿದಾಗಲೇ ಕೃತಿಯ ಮೌಲ್ಯ ಹೆಚ್ಚುತ್ತದೆ. ಅಂಥ ಸಾಧನೆಯನ್ನು ಡಾ. ನಾಗ ಮಾಡಿ ಅಭಿನಂದನಾರ್ಹರಾಗಿದ್ದಾರೆ.


ಒಂದು ವೇಶ್ಯೆಯ ಆತ್ಮಕಥೆಯ ಈ ಕನ್ನಡಾನುವಾದ ಓದುತ್ತ ಹೋದಂತೆ ಅನುವಾದವೆಂಬ ಭಾವನೆ‌ ಮೂಡುವುದೇ ಇಲ್ಲ. ಇದೊಂದು ಸ್ವತಂತ್ರ ಕೃತಿಯೆಂಬ ಭಾವನೆ ತಾನೇ ತಾನಾಗಿ ಮೂಡಿ ಓದುಗ ಕೃತಿಯೊಳಗೆ ತಾದಾತ್ಮತೆ ಹೊಂದುತ್ತಾನೆ. ನನಗಂತೂ ಈ ಕೃತಿ ಓದುತ್ತಿದ್ದಂತೆ ಇಂಥ ಘಟನೆ ನಮ್ಮ ಸುತ್ತಮುತ್ತಲೆಲ್ಲೋ ನಡೆದಂತೆ ಭಾಸವಾಗಿದೆ. ಇದೇ ಅನುವಾದ ಕೃತಿಯ ಯಶಸ್ಸಿನ ಗುಟ್ಟೂ ಆಗಿದೆ.

ಡಾ. ನಾಗ ಅವರಲ್ಲಿ ಇರುವ ಭಾಷೆಯ ಪ್ರಭುತ್ವ ಈ ಕೃತಿಯಲ್ಲಿ ವ್ಯಕ್ತವಾಗಿದೆ. ಎಲ್ಲಿಯೂ ಇದು ಅನುವಾದ ಎಂದೆನಿಸದೇ ಅಸ್ಖಲಿತವಾಗಿ ಕೊನೆಯವರೆಗೂ ಬಿಟ್ಟೂ ಬಿಡದೇ ಓದಿಸಿಕೊಂಡು ಹೋಗುತ್ತದೆ. ಮನಸ್ಸನ್ನು ಹಿಡಿದಿಡುವ ಶಕ್ತಿ ಈ ಅನುವಾದದಲ್ಲಿ ಇದೆ.

ನಾಗ ಅವರು ಮೂಲತಃ ಪತ್ರಿಕೋದ್ಯಮದಲ್ಲಿ ಅಧ್ಯಯನ ಮಾಡಿದವರು. ಆದರೆ ಈ ಕೃತಿ ಕೇವಲ ವರದಿಯಾಗದೇ ಒಂದು ಅದ್ಭುತ ಸುಂದರ ಸಾಹಿತ್ಯ ಕೃತಿಯಾಗಿರುವುದು ಸ್ಪಷ್ಟ.

ಡಾ. ನಾಗ ಅವರು ಆದಿವಾಸಿಗಳ ಕುರಿತ ಅಧ್ಯಯನದಲ್ಲಿ ನಿರತರಾಗಿದ್ದಾರೆ ಎಂದು ಕೇಳಿದ್ದೇನೆ‌. ಜಾರ್ಖಂಡ್ ಆದಿವಾಸಿ ಬದುಕು ಎಂಬ ಕೃತಿಯನ್ನೂ ರಚಿಸಿದ್ದಾರೆ. ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸುತ್ತಿರುವ ಅವರು ಇನ್ನೂ ಇಂಥ ಹಲವು ಕೃತಿಗಳನ್ನು ನಮಗೆ ಒದಗಿಸಲಿ ಎಂದು ಹಾರೈಸುತ್ತೇನೆ.


  • ಅರುಣ ಕುಮಾರ ಹಬ್ಬು

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW