ರಾಷ್ಟ್ರಪ್ರಶಸ್ತಿ ಪುರಸ್ಕೃತರಾದ ಜಿ.ಎಂ.ಪ್ರಹ್ಲಾದ್ ಅವರ ಕಥೆ- ಚಿತ್ರಕಥೆ- ಸಂಭಾಷಣೆಯ“ಸಂಕೀರ್ತನ” ಚಲನಚಿತ್ರ ಯಶಸ್ವಿಯಾಗಿ ತೆರೆಯ ಮೇಲೆ ಮೂಡಿ ಬಂದಿದೆ. ಈ ಸಿನಿಮಾದ ಕುರಿತು ಪತ್ರಕರ್ತರಾದ ಎನ್.ಎಸ್.ಶ್ರೀಧರ ಮೂರ್ತಿ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…
ಸ್ನೇಹಿತ ಜಿ.ಎಂ.ಪ್ರಹ್ಲಾದ್ ಚಿತ್ರಗೀತ ರಚನೆಗಾಗಿ ರಾಷ್ಟ್ರಪ್ರಶಸ್ತಿಯನ್ನು ಪಡೆದ ಮೂರನೆಯ ಕನ್ನಡಿಗರು. ಹತ್ತು ಸಾವಿರಕ್ಕೂ ಹೆಚ್ಚು ಟಿ.ವಿ.ಧಾರಾವಾಹಿ ಕಂತುಗಳನ್ನು ಬರೆದ ಹೆಗ್ಗಳಿಕೆಯ ಇವರದು. ಎಪ್ಪತ್ತು ಚಿತ್ರಗಳಿಗೆ ಚಿತ್ರಕಥೆ-ಸಂಭಾಷಣೆ-ಗೀತರಚನೆ ಮಾಡಿದ್ದಾರೆ. ಸದಾ ಎಲೆ ಮರೆಯ ಕಾಯಿಯಂತೆ ತಮ್ಮ ಕೆಲಸದಲ್ಲಿ ತೊಡಗಿ ಕೊಂಡಿರುವ ಅವರು ಯಾವುದೇ ಚಿತ್ರವನ್ನು ಆರಂಭಿಸುವ ಮುನ್ನ ನನ್ನೊಂದಿಗೆ ಚರ್ಚಿಸುತ್ತಾರೆ.
ಅವರ ʼಶ್ರೀ ಜಗನ್ನಾಥ ದಾಸರುʼ ಚಿತ್ರ ಯಶಸ್ವಿಯಾದ ಬಳಿಕ ಇದೇ ಮಾದರಿಯ ಭಕ್ತಿ ಪಾರಾಯಣದ ಕೆಲವು ಚಿತ್ರಗಳನ್ನು ರೂಪಿಸಿದರು. ಹರಿದಾಸ ಚಳುವಳಿಯ ಶ್ರೀಮಂತಕಾಲದ ಕೀರ್ತನೆಗಳನ್ನು ಒಳಗೊಂಡಂತಹ “ಸಂಕೀರ್ತನ” ಎನ್ನುವ ಚಲನಚಿತ್ರದ ಪ್ರಸ್ತಾಪವನ್ನು ಎರಡು ವರ್ಷಗಳ ಹಿಂದೆ ಮಾಡಿದ್ದರು. ಕನ್ನಡದಲ್ಲಿ ʼಭಕ್ತ ಕನಕದಾಸʼ ಚಿತ್ರದಿಂದಲೇ ಕೀರ್ತನೆಗಳನ್ನೇ ಹೂರಣವಾಗಿ ಉಳ್ಳ ಚಿತ್ರಗಳ ಪರಂಪರೆ ಇದೆ. ಆಗಿನ ಕಾಲದಲ್ಲಿ ಇದಕ್ಕೆ ಪೂರಕ ವಾತಾವರಣವೂ ಇತ್ತು. ಕನ್ನಡ ಚಿತ್ರದ ಪ್ರಧಾನವಾಹಿನಿಯೇ ಆತಂಕದ ಕಾಲವನ್ನು ಎದುರಿಸುತ್ತಿರುವಾಗ ಅಂಚಿನ ಈ ಬೆಳವಣಿಗೆಗಳು ಹೀಗೆ ಗೆಲ್ಲ ಬಲ್ಲದು ಎನ್ನುವ ಆತಂಕವೂ ನನಗಿತ್ತು. ಹಲವು ತಿರುವುಗಳ ನಂತರ “ಸಂಕೀರ್ತನ” ಈಗ ತೆರೆಗೆ ಬಂದಿದೆ. ಜಿ.ಎಂ.ಪ್ರಹ್ಲಾದ್ ಚಿತ್ರ ನಿರ್ಮಾಪಕರಲ್ಲೊಬ್ಬರಾಗಿರುವುದರ ಜೊತೆಗೆ ಕಥೆ-ಚಿತ್ರಕಥೆ-ಸಂಭಾಷಣೆಯನ್ನೂ ಬರೆದಿದ್ದಾರೆ. ಬಹಳ ದಿನಗಳಿಂದ ಈ ಚಿತ್ರವನ್ನು ನೋಡಲು ಒತ್ತಾಯಿಸುತ್ತಲೇ ಇದ್ದರು. ನನ್ನ ಅನಿವಾರ್ಯತೆಗಳಿಂದ ಆಗಿರಲಿಲ್ಲ. ನಿನ್ನೆ ಜೆ.ಪಿ.ನಗರ ಐನಾಕ್ಸ್‌ನಲ್ಲಿ ಇದನ್ನು ನೋಡುವ ಅವಕಾಶ ಸಿಕ್ಕಿತು.

ಹಲವು ಯಶಸ್ವಿ ಧಾರಾವಾಹಿಗಳನ್ನು ನಿರ್ದೇಶಿಸಿರುವ ಐವತ್ತಕ್ಕೂ ಹೆಚ್ಚು ಚಿತ್ರಗಳಿಗೆ ಸಹ ನಿರ್ದೇಶಕರಾಗಿ ಅನುಭವ ಪಡೆದರುವ ಡಿ.ಎಸ್.ಮಂಜುನಾಥ್ (ಕಲಾಗಂಗೋತ್ರಿ ಮಂಜು) ಅವರು ನಿರ್ದೇಶಿಸಿದ ಮೊದಲ ಚಿತ್ರ ಇದು. ಇದು ಕಥಾತ್ಮಕವಾದ ಚಿತ್ರವಲ್ಲ. ಕಥೆ ಏನಿದ್ದರೂ ಪ್ರಾಸಂಗಿಕ, ಭಕ್ತಿ-ಸಂಗೀತವೇ ಪ್ರಧಾನ. ಪ್ರವೀಣ್.ಡಿ.ರಾವ್ ಸಂಗೀತದ ಪಯಣದಲ್ಲಿ ಅತ್ಯಂತ ಯಶಸ್ವಿಯಾಗಿದ್ದಾರೆ. ಚಿತ್ರದಲ್ಲಿ ಅಳವಡಿಕೆಯಾಗಿರುವ ಹದಿನಾರು ಕೀರ್ತನೆಗಳೂ ಗಮನ ಸೆಳೆಯುತ್ತವೆ. ಹೆಚ್ಚು ಜನಪ್ರಿಯವಲ್ಲದ ಕೀರ್ತನೆಗಳನ್ನೇ ಆಯ್ಕೆ ಮಾಡಿಕೊಂಡಿರುವುದು ಸೂಕ್ತವಾಗಿಯೂ ಇದೆ. ಹಂಪಿಗೆ ವ್ಯಾಪಾರ ಮಾಡಲು ಬಂದ ವ್ಯಾಪಾರಿಗಳು ಮಳೆಯಲ್ಲಿ ಸಿಕ್ಕಿ ಹಾಕಿಕೊಂಡಾಗ ಹೊತ್ತು ಕಳೆಯಲು ದಾಸರ ಕಥನಗಳನ್ನು ಹೇಳುತ್ತಾ ಹೋಗುವುದು ಇದರ ಸ್ಥೂಲ ಹಂದರ. ಅವರನ್ನು ಕೊಲ್ಲಲು ಪ್ರಯತ್ನಿಸಿದವರ ಮನಪರಿವರ್ತನೆಯ ಅಂಶವೂ ಇಲ್ಲಿ ಸೇರಿರುವುದರಿಂದ ಚಿತ್ರದ ಉದ್ದೇಶಿತ ಗುಣಾತ್ಮಕತೆ ಸಹಜವಾಗಿ ಸೇರಿಕೊಂಡಿದೆ.
ಇಡೀ ಕಥಾನಕವನ್ನು ಜೋಡಿಸುವ ಮುಖ್ಯಪಾತ್ರವಾದ ಶ್ರೀ ವ್ಯಾಸರಾಜರಾಗಿ ಹಿರಿಯ ನಟ ಶ್ರೀಧರ್ ಗಮನ ಸೆಳೆಯುತ್ತಾರೆ. ಭಕ್ತ ಪರವಶತೆಯ ಅಭಿನಯದಲ್ಲಿ ಕಣ್ಣುಗಳನ್ನು ಒದ್ದೆಯಾಗಿಸುತ್ತಾರೆ. ದಾಸರ ಪೈಕಿ ಅಷ್ಟೇನು ಪ್ರಚಲಿತರಲ್ಲದ ವೈಕುಂಠದಾಸರಿಗೆ ಚಿತ್ರದಲ್ಲಿ ಹೆಚ್ಚಿನ ಅವಕಾಶ ಸಿಕ್ಕಿದೆ. ಅವರ ಕುರಿತು ಇರುವ ಮಾಹಿತಿಗಳ ಕೊರತೆಯಿಂದ ಇದು ಸೂಕ್ತವೂ ಆಗಿದೆ. ಈ ಪಾತ್ರವನ್ನು ಇನ್ನೊಬ್ಬ ಹಿರಿಯ ನಟ ರಾಮಕೃಷ್ಣ ಜೀವಂತಗೊಳಿಸಿದ್ದಾರೆ. ಅವರ ಸಮರ್ಥ ಅಭಿನಯ ಕನ್ನಡ ಚಿತ್ರರಂಗದ ಭಕ್ತಿಚಿತ್ರಗಳ ವೈಭವದ ಯುಗವನ್ನು ನೆನಪಿಸುವಷ್ಟು ಶಕ್ತವಾಗಿದೆ. ಶ್ರೀಪಾದ ರಾಜರಾಗಿ ಇನ್ನೊಬ್ಬ ಹಿರಿಯ ನಟ ರಮೇಶ್ ಭಟ್ ಕೂಡ ಸೀಮಿತ ಅವಧಿಯಲ್ಲಿಯೇ ಗಮನ ಸೆಳೆಯುತ್ತಾರೆ. ಈಗಾಗಲೇ ತೆರೆಯ ಮೇಲೆ ಶ್ರೀಮಂತವಾಗಿ ಬಂದ ಪಾತ್ರವನ್ನು ಮರು ರೂಪಿಸುವುದು ನಿಜಕ್ಕೂ ಸವಾಲು ಡಾ.ರಾಜ್ ಕುಮಾರ್ ಅವರಂತಹ ಮೇರು ನಟ ಅಭಿನಯಿಸಿದ ಕನಕ ದಾಸರ ಪಾತ್ರವನ್ನು ಹಳ್ಳಿ ಮೇಷ್ಟ್ರು ಚಿತ್ರದಲ್ಲಿ ಬಾಲನಟನಾಗಿ ಗಮನ ಸೆಳೆದಿದ್ದ ನಂಜುಂಡ ಅಜಯ್ ರಾವ್ ಬಹಳ ವಿಶಿಷ್ಟವಾಗಿ ರೂಪಿಸಿದ್ದಾರೆ. ವಾದಿರಾಜರಾಗಿ ನಟರಾಜ, ಪುರಂದರ ದಾಸರಾಗಿ ವಿಜಯಾನಂದ ನಾಯಕ್ ಕೂಡ ಗಮನ ಸೆಳೆಯುತ್ತಾರೆ ʼಸಂಕೀರ್ತನʼ ಇತಿಹಾಸ-ಪುರಾಣ-ಸಾಹಿತ್ಯಗಳ ಸಮ್ಮಿಶ್ರಣ. ಇಲ್ಲಿನ ಪಾತ್ರಗಳೂ ಅಧಿಕ. ಕೆಲವು ಪಾತ್ರಗಳು ಕೃತಕವಾಗಿವೆ, ಪರಿಣಾಮ ಬೀರದೆ ಹೋಗಿವೆ. ಕೆಲವಂತೂ ಕಿರಿಕಿರಿ ಎನ್ನಿಸುವಷ್ಟು ನಿರ್ಜೀವವಾಗಿವೆ. ಸಂಗೀತ ಈ ಕೊರತೆಯನ್ನು ತುಂಬಿಸಿ ಆದರೆ ಚಿತ್ರದ ಒಟ್ಟಂದದ ಮೇಲೆ ಇದು ಪರಿಣಾಮ ಬೀರದಂತೆ ನೋಡಿ ಕೊಂಡಿದೆ. ಕುಮಾರ ವ್ಯಾಸ, ತಿಮ್ಮಣ್ಣ ಕವಿಗಳ ಪಾತ್ರಗಳೂ ಆ ಕಾಲದ ವಿಸ್ತಾರವನ್ನು ಬಿಂಬಿಸುವಂತೆ ಬಂದಿವೆ.
“ಸಂಕೀರ್ತನಾʼ ಈಗಾಗಲೇ ಹೇಳಿದಂತೆ ಮುಖ್ಯವಾಗಿ ಸಂಗೀತಮಯ ಚಿತ್ರ.ಪ್ರವೀಣ್.ಡಿ.ನಾಯಕ್ ಅವರ ಸಂಗೀತದಂತೆ ಬಾಲಸುಬ್ರಹ್ಮಣ್ಯ ಶರ್ಮ, ವಿಜಯಾನಂದ ನಾಯಕ್, ರೋಹಿತ್ ಭಟ್, ದಿವ್ಯಾ ರಮೇಶ್, ಅಜಯ್ ವಾರಿಯರ್, ಕೀರ್ತನ ಹೊಳ್ಳ, ಭಾರ್ಗವ.ಎಚ್.ಸಿ ಅವರ ಗಾಯನವೂ ಮುದ ನೀಡುತ್ತದೆ. ವಿ.ಎಫ್.ಎಕ್ಸ್‌ನ ಬಳಕೆ ಕೂಡ ಚಿತ್ರವನ್ನು ಪರಿಣಾಮಕಾರಿ ಗೊಳಸಿದೆ. ಇಂತಹ ಚಿತ್ರಗಳು ಗೆಲ್ಲ ಬೇಕು, ಈಗಾಗಲೇ ರೂಪುಗೊಂಡಿರುವ ಸಂಗೀತ-ಭಕ್ತಿಯ ಪರಂಪರೆ ಕನ್ನಡದಲ್ಲಿ ಉಳಿಯ ಬೇಕು.ಸಂಗೀತ-ಸಾಹಿತ್ಯ ಪ್ರೇಮಿಗಳು ಇದಕ್ಕೆ ಬೆಂಬಲವಾಗಿ ನಿಲ್ಲಬೇಕು. ಈ ಸಾಹಸಕ್ಕಾಗಿ ಸ್ನೇಹಿತರಾದ ಜಿ.ಎಂ.ಪ್ರಹ್ಲಾದ್ ಮತ್ತು ಕಲಾಗಂಗ್ರೂತ್ರಿ ಮಂಜು ಮತ್ತಿತರನ್ನು ಅಭಿನಂದಿಸುತ್ತೇನೆ.
ಈ ಸಿನಿಮಾದ ಕುರಿತು ಮತ್ತಷ್ಟು ವಿಮರ್ಶೆಗಳು :
- ಎನ್.ಎಸ್.ಶ್ರೀಧರ ಮೂರ್ತಿ
