“ಇದು ಭಾಗ್ಯ, ಇದು ಭಾಗ್ಯ, ಇದು ಭಾಗ್ಯವಯ್ಯ”

ಎಲ್ಲಾ ದಾಸವರು ಹೇಳಿರುವ ಭಕ್ತಿ ಮಾರ್ಗದ ಶ್ರೇಷ್ಠತೆ ಸಾರುವ ವಿಷಯವನ್ನು ಒಂದು ಸಿನಿಮಾದಲ್ಲಿ ತರುವ ಪ್ರಯತ್ನವನ್ನು “ಸಂಕೀರ್ತನ”* ಮಾಡಿದ್ದಾರೆ. ಪ್ರಮುಖ ಪಾತ್ರಗಳಲ್ಲಿ ರಮೇಶ್ ಭಟ್, ಶ್ರೀಧರ್, ರಾಮಕೃಷ್ಣ ಮತ್ತು ನಟರಾಜ್ ಭಟ್ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.ಲೇಖಕರಾದ ಎನ್.ವಿ.ರಘುರಾಮ್ ಅವರು ಈ ಸಿನಿಮಾ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…

ಕರ್ನಾಟಕದ ದಾಸ ಪರಂಪರೆ ಅರಿಯದವರಾರು? ಪುರಂದರದಾಸರು ಮತ್ತು ಕನಕದಾಸರು ರಚಿಸಿದ ಕೀರ್ತನೆಗಳನ್ನು ಕೇಳದೇ ಇರುವವರು ಯಾರು? ಆ ಕೀರ್ತನೆಗಳನ್ನು ಕೇಳಿ ತಲೆದೊಗದೇ ಇರುವವರು ಯಾರು? ಇದಕ್ಕೆ ಮುಖ್ಯ ಕಾರಣ ದಾಸವರೇಣ್ಯರು ಸಕಲರಿಗೂ ಅರ್ಥವಾಗುವ ಸರಳವಾದ ಕನ್ನಡದಲ್ಲಿ ರಚಿಸಿದ ಕೀರ್ತನೆಗಳು. ಈ ಕೀರ್ತನೆಗಳು ಶ್ರೇಷ್ಠ ಸಂಗೀತಗಾರರ ಕಂಠದಲ್ಲಿ ನಲಿದಾಡಿರುವುದಲ್ಲದೇ ಜನ ಸಾಮಾನ್ಯರ ಭಜನೆಯಲ್ಲೂ ಪದಗಳಾಗಿ ನಲಿದಿವೆ ಮತ್ತು ನಲಿಯುತ್ತಿವೆ.

ಈ ಹರಿದಾಸ ಪಂಥದವರು ಮುಖ್ಯವಾಗಿ ಭಕ್ತಿ ಪಥದಲ್ಲಿ ನಡೆದು ಹರಿ ಸಾಯಾಜ್ಯವನ್ನು ಪಡೆದವರು. ಕಾಯಾ, ವಾಚಾ, ಮನಸಾ ಭಕ್ತಿ ಪಥದಲ್ಲಿ ನಡೆಯುವ ಮಹತ್ವ ಹೇಳುವ ಈ ಕೀರ್ತನೆಗಳು ನಮ್ಮ ವೇದ, ಉಪನಿಷತ್ತುಗಳ ಸಾರವನ್ನೇ ಹೊತ್ತು ತಂದಿದೆ ಎಂದು ಬಲ್ಲವರು ಹೇಳುತ್ತಾರೆ. ಈ ಎಲ್ಲಾ ದಾಸವರೇಣ್ಯರು ಹೇಳಿರುವ ಭಕ್ತಿ ಮಾರ್ಗದ ಶ್ರೇಷ್ಠತೆ ಸಾರುವ ವಿಷಯವನ್ನು ಒಂದು ಸಿನಿಮಾದಲ್ಲಿ ತರಲು ಪ್ರಯತ್ನ ಮಾಡಿದಾಗ ಮೂಡಿರುವುದೇ ಈ *”ಸಂಕೀರ್ತನ”* ಸಿನಿಮಾ.

“ಆನಂದಾನಂದ ಸಂಕೀರ್ತನ…. “ಎಂದು ಟೈಟಲ್ ಕಾರ್ಡ್ ನೊಂದಿಗೆ ಪ್ರಾರಂಭವಾಗುವ ಹಾಡು, ಟೈಟಲ್ ಕಾರ್ಡ್ ಮುಗಿಯುವ ಹೊತ್ತಿಗೆ ಪ್ರೇಕ್ಷರನ್ನು ತನ್ನೊಳಗೆ ಸೆಳೆದುಕೊಳ್ಳಲು ಯಶಸ್ವಿಯಾಗುತ್ತದೆ. ಆನಂತರ ತೆರೆದುಕೊಳ್ಳುವುದೆ ವಿಜಯನಗರ ಸಾಮ್ರಾಜ್ಯದ ಸುವರ್ಣಯುಗದ ದೃಶ್ಯ. ವಿಜಯನಗರದ ನವರಾತ್ರಿಯ ಸಂದರ್ಭದಲ್ಲಿ ವ್ಯಾಪಾರದಲ್ಲಿ ಮಾಡಿದ ಲಾಭವನ್ನು ತೆಗೆದುಕೊಂಡು ಕೆಲವು ವರ್ತಕರು ತಮ್ಮ ಸ್ಥಳಗಳಿಗೆ ಹಿಂದಿರುಗಿ ಹೊರಟಾಗ ಅಕಾಲದಲ್ಲಿ ಬಂದ ಮಳೆಗೆ ಸಿಲುಕಿಕೊಂಡು ಧನರಾಜ್ ಎನ್ನುವವನ ಬಳಿ ಬಂದು ನಿಲ್ಲುತ್ತಾರೆ. ಧನರಾಜ್ ಅವರ ಸಂಪತ್ತನ್ನು ಅಪಹರಿಸಲು, ಆ ವರ್ತಕರನ್ನು ಕೊಲ್ಲಲು ಯೋಚಿಸುತ್ತಾನೆ. ಆ ವಿಷಯ ತಿಳಿಯದ ಈ ವರ್ತಕರು ಸಮಯವನ್ನು ಕಳೆಯುವುದಕ್ಕೆ ಅವರಿಗೆ ತಿಳಿದಿರುವ ದಾಸರ ವಿಷಯಗಳನ್ನು ತಮ್ಮ ತಮ್ಮಲ್ಲಿ ಹಂಚಿಕೊಳ್ಳುತ್ತಾರೆ. ಅದನ್ನು ಆ ಧನರಾಜ್ ಕೂಡ ಕೇಳಿಸಿಕೊಳ್ಳುತ್ತಾನೆ. ಧನರಾಜನ ಧನದ ದಾಹ ತೀರಿತೇ? ವರ್ತಕರು ಹಣ ಕಳೆದುಕೊಂಡರೆ? ಇವೆಲ್ಲವನ್ನೂ ಸಿನಿಮಾ ನೋಡಿ ತಿಳಿದರೆ ಚೆನ್ನ.

ಸಂಕೀರ್ತನ (ಅಥವಾ ಸಂಕೀರ್ತನೆ) ಎಂದರೆ ಪರಮಾತ್ಮನ ಗುಣಗಾನ, ಸ್ತುತಿ ಅಥವಾ ಭಜನೆ ಎಂದು ಅರ್ಥ. “ಶ್ರೀರಂಗ ವಿಠಲನ ಶ್ರೀ ಮಕಟಕ್ಕೆ ಶರಣು…. ” ಎಂಬ ಕೀರ್ತನೆಯಿಂದ ಪ್ರಾರಂಭವಾಗುವ ಈ ಸಿನಿಮಾದಲ್ಲಿ ಶ್ರೀಪಾದರಾಜರು, ಶ್ರೀವ್ಯಾಸರಾಜರು, ಶ್ರೀವಾದಿರಾಜರು, ಶ್ರೀಪುರಂದರ ದಾಸರು, ಶ್ರೀಕನಕರಾಜರು, ಶ್ರೀವೈಕುಂಠದಾಸರು, ಶ್ರೀ ಕುಮಾರವ್ಯಾಸರು ಮುಂತಾದ 16ನೇ ಶತಮಾನದ ದಾಸ ಪರಂಪರೆಯ ಶ್ರೇಷ್ಠರ ಸಮಾಗಮವೇ ಆಗಿದೆ. ಆ ಮಹಾಮಹಿಮರು ರಚಿಸಿರುವ ಕೀರ್ತನೆಗಳನ್ನು ಪ್ರೇಕ್ಷಕರಿಗೆ ಕೊಟ್ಟಿರುವ ರೀತಿ ಅನನ್ಯ.

“ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯ ಪದುಮನಾಭನ ಪಾದ ಭಜನೆ ಸುಖವಯ್ಯ…” ಕೀರ್ತನೆ ಭಗವಂತನ ಸೇವೆಯ ಮಹತ್ವ ಹೇಳುತ್ತದೆ. “ಕುಡಿಯಲಿ ಉಡುಗೆಜ್ಜೆ, ಬೆರಳಲಿ ಉಂಗುರ, ಕೊರಳಲು ಧರಿಸಿದ ವೈಜಯಂತಿ ಮಾಲೆ…” ಕೀರ್ತನೆಯಲ್ಲಿ ಸ್ತುತಿ ಇದೆ. “ಸಾಧಿಸಿ ತ್ರಿಪುರದ ಗೆಲಿದವನೇ ಗೋವಿಂದ ಹರಿದಾಸ ಗೋವಿಂದರ ಛೇದಿಸಿ ಹಯವೇರಿ ಮೆರೆದವನೇ…” ಕೀರ್ತನೆಯಲ್ಲಿ ಶೌರ್ಯ ಮತ್ತು ದುಷ್ಟರ ಸಂಹಾರದ ವಿಷಯವಿದೆ. ಹೀಗೆ ಸಿನಿಮಾದಲ್ಲಿ ಪ್ರಸ್ತುತಿ ಪಡಿಸಿರುವ 14 ಕೀರ್ತನೆಗಳಲ್ಲಿ ಪಂಡರಾಪುರದ ವಿಠ್ಠಲ, ಕಾಗಿನೆಲೆಯ ಕೇಶವ, ಉಡುಪಿಯ ಶ್ರೀಕೃಷ್ಣ, ವೇಲೂರಿನ ಚೆನ್ನ ಕೇಶವನ ಸ್ತುತಿಯ ಜೊತೆಗೆ ಶ್ರೀಹರಿಯ ವಿವಿಧ ಅವತಾರಗಳ ಮಹತ್ವದ ಬಗ್ಗೆ ತಿಳಿಸುತ್ತಾ ಕೊನೆಯಲ್ಲಿ ಆ ಶ್ರೀಹರಿ ತನ್ನ ಭಕ್ತರ ದಾಸ ಎಂದು ಹೇಳಿದ್ದಾರೆ. ಆ ಕೀರ್ತನೆಗಳನ್ನು ಒಂದಾದ ಮೇಲೊಂದು ಬರುವ ಘಟನೆಗಳ ಮತ್ತು ಸಂಗತಿಗಳ ಮೂಲಕ ತೆರೆದಿಟ್ಟಿರುವ ರೀತಿ ಮನಸ್ಸನ್ನು ತಟ್ಟುತ್ತದೆ.

ಪ್ರಮುಖ ಪಾತ್ರಗಳಲ್ಲಿ ರಮೇಶ್ ಭಟ್, ಶ್ರೀಧರ್, ರಾಮಕೃಷ್ಣ ಮತ್ತು ನಟರಾಜ್ ಭಟ್ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಜೆ.ಎಮ್. ಪ್ರಹ್ಲಾದ್ ಅವರ ಕಥೆ ಮತ್ತು ಚಿತ್ರಕಥೆ ಸರಳವಾಗಿದ್ದು, ಭಕ್ತಿಯ ಸಾರವನ್ನು ಸುಲಭವಾಗಿ ತಲುಪಿಸುತ್ತದೆ. ಆರಂಭದ ಗೀತೆಯನ್ನು ಕೂಡ ಇವರು ಬರೆದಿದ್ದಾರೆ. ಸಂಗೀತ ನಿರ್ದೇಶಕ ಶ್ರೀ ಪ್ರವೀಣ್ ಡಿ ರಾವ್ ಗೀತೆಗಳಲ್ಲಿ ಜೀವ ತುಂಬಿಸುವಲ್ಲಿ ಯಶಸ್ವಿಯಾಗಿದ್ದಾರೆ. ಭಕ್ತಿ ಮತ್ತು ಸಂಗೀತ ಪ್ರಧಾನವಾದ ಈ ಚಿತ್ರದ ನಿರ್ದೇಶಕರು ಶ್ರೀ ಡಿ.ಎಸ್.ಮಂಜುನಾಥ್. ಈ ತರಹದ ಸಿನಿಮಾ ಮಾಡುವ ಸಹಾಸ ಮಾಡಿರುವ ನಿರ್ಮಾಪಕರು ಶ್ರೀ ಕೆ.ಪದ್ಮಕಲಾ ಗುಂಡುರಾವ್.

ಚಿತ್ರದಲ್ಲಿ ನ್ಯೂನತೆಗಳು ಇಲ್ಲವೆಂದಿಲ್ಲ. ಆದರೆ ಆವೆಲ್ಲವೂ ಭಕ್ತಿಯ ಹೊಳೆಯಲ್ಲಿ ಮಿಂದೇಳುವಾಗ ಗೌಣವಾಗುತ್ತವೆ. ಈ ಸಿನಿಮಾ ಹೃದಯ ಮುಟ್ಟುವ, ಮನಸ್ಸು ತಟ್ಟುವ, ಸನ್ಮಾರ್ಗದಲ್ಲಿ ಮುನ್ನೆಡುಸುವ ಅಪರೋಕ್ಷ ಜ್ಞಾನಿಗಳ ಕೀರ್ತನೆಗಳ ಅಮೃತಧಾರೆಯೇ ಸರಿ.

ಈಗ ಹೊರಗಡೆ ಪ್ರಪಂಚದಲ್ಲಿ ಇರುವ ಪ್ರಕ್ಷುಬ್ಧ ಪರಿಸ್ಥಿತಿಯನ್ನು ಮರೆಸಿ ಈ ಸಿನಿಮಾ ದಾಸ ಪರಂಪರೆಯ ಭಕ್ತಿ, ಸಂಗೀತ ಮತ್ತು ಜೀವನ ಮೌಲ್ಯಗಳನ್ನು ಪರಿಚಯಿಸುವ ಒಂದು ಆತ್ಮೀಯ ಅನುಭವ ನೀಡುತ್ತದೆ ಮತ್ತು ಅದನ್ನು ಮತ್ತೆ, ಮತ್ತೆ ಮೆಲಕು ಹಾಕುವಂತೆ ಮಾಡುತ್ತದೆ. ಇದೊಂದು ಆದ್ಯಂತ ರಹಿತನ ಸಂಕೀರ್ತನವೇ ಸರಿ.

ಸಾಧ್ಯವಾದಲ್ಲಿ ಈ ದಿನವೇ ಚಿತ್ರ ಮಂದಿರದಲ್ಲಿ ಸಿನಿಮಾ ನೋಡಿ, ಪ್ರೋತ್ಸಾಹ ನೀಡಿ.


  • ಎನ್.ವಿ.ರಘುರಾಮ್ – ನಿವೃತ್ತ ಅಧೀಕ್ಷಕ ಅಭಿಯಂತ(ವಿದ್ಯುತ್), ಕ.ವಿ.ನಿ.ನಿ., ಬೆಂಗಳೂರು.

5 1 vote
Article Rating

Leave a Reply

1 Comment
Inline Feedbacks
View all comments
ravikumarjnj

ಸೂಪರ್👌

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

1
0
Would love your thoughts, please comment.x
()
x
Aakruti Kannada

FREE
VIEW