ಮುಗಿಯದ ಹೆಣ್ಣಿನ ಜವಾಬ್ದಾರಿಗಳು

ಮನೆಯಲ್ಲಿ ಹೆಣ್ಣು ಮಾಡುವ ಕೆಲಸ ಸಣ್ಣ, ಪುಣ್ಣ ಕೆಲಸವೇ. ನಿಜ, ಆದರೆ ಅಂತಹ ಕೆಲಸ ದಿನವಿಡಿ ಇರುತ್ತವೆ. ಇನ್ನು ಹುಷಾರಿಲ್ಲದಾಗ ಆ ಕೆಲಸಗಳು ದೇಹಕ್ಕೆ, ಮನಸ್ಸಿಗೆ ಎರಡಕ್ಕೂ ಭಾರವಾಗುತ್ತವೆ. ಹೆಣ್ಣಿನ ಜವಾಬ್ದಾರಿಯ ಕುರಿತು ಸ್ನೇಹ ತೆಗ್ಗಿಹಾಳ್ ಅವರು ಬರೆದ ಲೇಖನವನ್ನು ತಪ್ಪದೆ ಮುಂದೆ ಓದಿ….

ಅಂದು ಹೆಂಡತಿ ಹುಷಾರಿಲ್ಲದೆ ಮಲಗಿದ್ದಳು.

‘ ರೀ… ಇವತ್ತು ಹೋಟೆಲ್ ನಿಂದ ಇಡ್ಲಿ, ಸಾಂಬಾರ್ ತಂದ್ಬಿಡಿ’ ಅಂದಾಗ ‘ಬೇಡ ಕಣೆ, ಸುಮ್ನೆ ದುಡ್ಡು ಮತ್ತು ಆರೋಗ್ಯ ಹಾಳು’ ಅಂತ ಅಂದು. ಗಂಡ ಸುಲಭವಾಗಿ ಹೇಳ್ತಾನೆ, ಅದೂ ಉದಾರ ಮನಸ್ಸಿನಿಂದ ತಿಂಡಿಗೆ ಸಿಂಪಲ್  ಉಪ್ಪಿಟ್ಟು ಮಾಡು ಅಷ್ಟೇ ಸಾಕು.

ಆದ್ರೆ ಅಡುಗೆ ಗೊತ್ತಿಲ್ಲದವರಿಗೆ ಅದಕ್ಕೆ ಎಷ್ಟು ಕೆಲಸವಾಗುತ್ತದೆ ಎಂದು ತಿಳಿದಿರುವುದಿಲ್ಲ. ಬರೀ ರವೆ ಹಾಕಿ ಮಾಡಿದ್ರೆ ಕಾಂಕ್ರೀಟ್ ಇದ್ದ ಹಾಗಿದೆ ಅಂತ ಪಟ್ಟಂತ ಮಾತು ಬರುತ್ತದೆ.
ಕೊತ್ತಂಬರಿ, ನಿಂಬೆರಸ, ಹಸಿ ಮೆಣಸಿನಕಾಯಿ, ಈರುಳ್ಳಿ ಎಲ್ಲವನ್ನೂ ತೊಳೆದು, ಹೆಚ್ಚಿ, ರವೆ ಹುರಿಯಬೇಕು, ಒಗ್ಗರಣೆ ಮಾಡಬೇಕು. ಇದೆಲ್ಲ ತಯಾರಿ ಮಾಡಿಕೊಂಡು ಹದವಾದ, ರುಚಿಯಾದ ಉಪ್ಪಿಟ್ಟು ಇಳಿಸಲು ಏನಿಲ್ಲವೆಂದರೂ ಮುಕ್ಕಾಲು ಗಂಟೆ ಬೇಕೇಬೇಕು.

ನಂತರ ಕಾಫಿ ಅಥವಾ ಟೀ ಮಾಡಿ ಅಡುಗೆ ಮನೆ ಸ್ವಚ್ಛಗೊಳಿಸಲು ಇನ್ನರ್ಧ ಗಂಟೆಯಾದರೂ ಬೇಕು. ಅಂದ್ರೆ ಬೇಗ ಬೇಗ ಮಾಡಿದ್ರೂ ಸರಾಸರಿ ಒಂದು ಕಾಲು ಘಂಟೆ, ಇನ್ನು ಹುಷಾರಿಲ್ಲದ ಸಮಯದಲ್ಲಿ ಮಾಡಿದ್ರೆ ಅದಕ್ಕಿಂತಲೂ ನಿಧಾನ.

ಆಮೇಲೆ ಮಧ್ಯಾಹ್ನಕ್ಕೆ ಸಿಂಪಲ್ ಅನ್ನ ಸಾರು ಅಂದ್ರೂ, ಅದಕ್ಕೂ ತಯಾರಿ ಬೇಕು. ಹೀಗೆ ದಿನವಿಡಿ ಅಡುಗೆ ಮನೆಯ ಗಿರಣಿ ನಡೆದೇ ಇರುತ್ತದೆ. ಇನ್ನೂ ಆರೋಗ್ಯದಿಂದ ಇದ್ದಾಗಂತೂ ಸರಿಯೇ, ಕೆಲಸ ಮಾಡುವ ತಾಯಿಯ ಮುಖದಲ್ಲಿ ಆಯಾಸ ಕಂಡರೂ ಮಕ್ಕಳು ಕೇಳುವುದಿಲ್ಲ. ‘ಸಾಕಾಯ್ತಾ ಅಮ್ಮಾ’…. ಅಂತ ಕೇಳಿದರೆ ಕೆಲಸ ಅವರು ಹೊರಬೇಕಾಗುತ್ತದೆ ಅಲ್ವೇ…
ಇಷ್ಟೇ ಅಲ್ವಾ… ಮಾಡು ಎನ್ನುವವರಿಗೆ ಅದರ ದು:ಖ ಗೊತ್ತಿರುವುದಿಲ್ಲ. ಕಾರಣ ಅವರಿಗೆ ಅಡುಗೆ ಬರುತ್ತಿರುವುದಿಲ್ಲ. ಹೀಗಾಗಿ ಒಂದು ಅಡುಗೆ, ತಿಂಡಿ ಮಾಡಿದ ಮೇಲೆ ಮುಖ್ಯವಾಗಿ ಅಡುಗೆಮನೆ ಸ್ವಚ್ಛಗೊಳಿಸಲು ಎಷ್ಟೋ ಸಮಯ ತೆಗೆದುಕೊಳ್ಳುತ್ತದೆ ಎಂದು ಅರಿವಿಲ್ಲದೆ ಇರುತ್ತಾರೆ. ಅಕಸ್ಮಾತ್ ಗೊತ್ತಿದ್ದರೂ ನಮಗೇ ಏನೂ ಗೊತ್ತೇ ಇಲ್ಲ ಎನ್ನುವ ಹಾಗೆ ಕುಳಿತುಕೊಳ್ಳುವ ಸ್ವಭಾವವೂ ಕೂಡ.

ಮನೆಯಲ್ಲಿ ಹೆಣ್ಣು ಮಾಡುವ ಕೆಲಸ ಸಣ್ಣ, ಪುಣ್ಣ ಕೆಲಸವೇ. ನಿಜ, ಆದರೆ ಅಂತಹ ಕೆಲಸ ದಿನವಿಡಿ ಇರುತ್ತವೆ. ಇನ್ನು ಹುಷಾರಿಲ್ಲದಾಗ ಆ ಕೆಲಸಗಳು ದೇಹಕ್ಕೆ, ಮನಸ್ಸಿಗೆ ಎರಡಕ್ಕೂ ಭಾರವಾಗುತ್ತವೆ.

ಹೀಗಾಗಿ ದಿನವೂ ಕಾಳಜಿ ತೆಗೆದುಕೊಳ್ಳುವ ಹೆಂಡತಿ, ತಾಯಿ, ತಂಗಿ, ಅಕ್ಕ ಯಾರೇ ಇರಲಿ ಒಂದೆರಡು ದಿನ ಅವರು ಸಾಕಾಗಿದೆ ಅಂದರೆ ಅವರಿಗೆ ವಿಶ್ರಾಂತಿ ತೆಗೆದುಕೊಳ್ಳಲು ಹೇಳಿ ನೀವು ಆ ಕೆಲಸದ ಜವಬ್ದಾರಿ ವಹಿಸಿಕೊಳ್ಳಿ, ಪ್ರೀತಿಯಿಂದ ಕಾಳಜಿ ತೆಗೆದುಕೊಳ್ಳಿ. ನೀವು ಹೊರಗಡೆಯಿಂದ ತಿಂಡಿ ತಂದು ಕೊಟ್ಟರೂ ಸಹ ಹೆಂಡತಿಗೆ ನೀವು ಆಕೆಯ ಕಡೆಗೆ ಗಮನ ಕೊಟ್ಟಿದ್ದೀರಿ ಅನಿಸುತ್ತದೆ. ಆರೋಗ್ಯ ಬೇಗ ಸುಧಾರಿಸುತ್ತದೆ.  ಮಾನಸಿಕ ಸಮಾಧಾನ ದೇಹದ ಆರೋಗ್ಯಕ್ಕೆ ಬೇಗ ಸುಧಾರಣೆ ತರುತ್ತದೆ.

ಜೀವನ ಇಷ್ಟೇ, ಗಂಡ ಆಫೀಸಿನಿಂದ ಬಂದರೆ ಹೆಂಡತಿ ಆತನ ಬಗ್ಗೆ ಗಮನ ಕೊಡಬೇಕು, ಹೆಂಡತಿ ‌ತುಂಬಾ ದಣಿದರೆ ಆಕೆಗೆ ವಿಶ್ರಾಂತಿ ಕೊಟ್ಟು ನೀವು ಕಾಳಜಿ ತೋರಬೇಕು ಅಷ್ಟೇ!
ಒಬ್ಬರು ಯಾವಾಗಲೂ ಸ್ವಚ್ಛ ಮಾಡುವುದು, ಇನ್ನೊಬ್ಬರು ಹರಡುವುದು ಅಂದರೆ ಜೀವನದ ಹಾದಿ ತುಂಬಾ ಕಷ್ಟ. ಮನೆಯಲ್ಲಿ ಹೆಂಡತಿಗೆ ಬೇಕಾದ ಸಹಾಯ ಮಾಡಿಕೊಟ್ಟು ಜೊತೆಗೆ ನಗು ನಗುತ್ತಾ ಮಾತನಾಡಿದರೆ ಸಾಕು ಇಬ್ಬರ ಮನಸ್ಸು ಮುದಗೊಳ್ಳುತ್ತದೆ! ಮನೆಯನ್ನು ಸ್ವಚ್ಛವಾಗಿ ಇಡುವುದು ಆ ಮನೆಯ ಪ್ರತಿಯೊಬ್ಬ ಸದಸ್ಯರ ಹೊಣೆ, ಇದೊಂದು ನಾವು ತಿಳಿದು ಕೊಳ್ಳುವ ಸಾಮಾನ್ಯ ಜ್ಞಾನ ಕೂಡ. ಆಗ ಇನ್ನೂ ಹೆಚ್ಚು ಕೆಲಸ, ಅಡುಗೆ ಮಾಡಲು ಆ ಮನೆಯ ಒಡತಿಗೆ ಹುಮ್ಮಸ್ಸು ಬರುತ್ತದೆ.

ಪ್ರೇರಣೆ ಯಾವಾಗಲೂ ಕುಟುಂಬದ ಸದಸ್ಯರು, ಮಕ್ಕಳು, ಜೀವನ ಸಂಗಾತಿಯಿಂದಲೇ ಸಿಗಬೇಕು. ಸೆಲ್ಫ್ ರೆಸ್ಪೆಕ್ಟ್ ಎಲ್ಲರಿಗೂ ಇಷ್ಟ, ಆದರೆ ಅದರ ಜೊತೆಗೆ ನಮ್ಮವರ ಬೇರೆಯವರ ರೆಸ್ಪೆಕ್ಟ್ ಅಷ್ಟೇ ಮುಖ್ಯ.


  • ಸ್ನೇಹ ತೆಗ್ಗಿಹಾಳ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading