ಸಾಹಸ ಸಿಂಹ ಡಾ.ವಿಷ್ಣುವರ್ಧನ ಅವರು ಎಲ್ಲರ ಮನದಲ್ಲಿ ಇನ್ನೂ ಕೂಡಾ ಜೀವಂತವಾಗಿದ್ದಾರೆ. ಅವರನ್ನು ಮೊದಲ ಬಾರಿಗೆ ಹತ್ತಿರದಿಂದ ನೋಡಿದ ಸಂದರ್ಭ ಕಣ್ಣಿಗೆ ಕಟ್ಟಿದಂತಿದೆ.ಮುಂದೆ ಓದಿ…
೨೦೦೩ರ ಸಾಲಿನ ಆರ್ಯಭಟ ಪ್ರಶಸ್ತಿಗೆ ಆಯ್ಕೆಯಾದವರಲ್ಲಿ ನಮ್ಮ ತಂದೆ ಹೂಲಿಶೇಖರ ಅವರು ಒಬ್ಬರು. ‘ಮೂಡಲ ಮನೆ’ ಧಾರಾವಾಹಿಯ ಅತ್ಯುತ್ತಮ ಚಿತ್ರಕತೆ-ಸಂಭಾಷಣೆಗಾಗಿ ಆರ್ಯಭಟ ಪ್ರಶಸ್ತಿ ಲಭಿಸಿತ್ತು. ಆ ಪ್ರಶಸ್ತಿ ಕಾರ್ಯಕ್ರಮದ ಆಹ್ವಾನ ಪತ್ರ ಮನೆಗೆ ಬಂದಾಗ ಮನೆಯಲ್ಲರಿಗೂ ಸಂಭ್ರಮ. ಆಗ ನಾನು ಕಾಲೇಜಿನಲ್ಲಿ ಓದುತ್ತಿದ್ದೆ. ಅಪ್ಪನಿಗೆ ಪ್ರಶಸ್ತಿ ಸಿಕ್ಕ ಖುಷಿ ಒಂದೆಡೆ ಆದರೆ ಆ ಪ್ರಶಸ್ತಿಯನ್ನು ಡಾ.ವಿಷ್ಣುವರ್ಧನ ಅವರು ಪ್ರದಾನ ಮಾಡುತ್ತಿರುವ ಖುಷಿ ಇನ್ನೊಂದೆಡೆ.
ಕವಿ, ಸಾಹಿತಿಗಳ ತವರೂರಾದ ಧಾರವಾಡದಲ್ಲಿ ಬೆಳೆದ ನನಗೆ ಸಾಹಿತಿ, ಬರಹಗಾರರ ಪರಿಚಯ ತಕ್ಕ ಮಟ್ಟಿಗೆ ಇತ್ತು. ಆದರೆ ಸಿನಿಮಾ ನಟರುಗಳ ಪರಿಚಯ ಅಷ್ಟೊಂದು ಇರಲಿಲ್ಲ. ಅದರಲ್ಲೂ ಕನ್ನಡದ ವಿಷ್ಣುವರ್ಧನ್ ಎಂದರೆ ಕೇಳಬೇಕೆ? ಅಪ್ಪಾಜಿಗೆ ವಿಷ್ಣುವರ್ಧನ ಪ್ರಶಸ್ತಿ ಪ್ರದಾನ ಮಾಡುತ್ತಾರೆ ಎಂದಾಗ ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ.
ಅಪ್ಪನ ಹೊರತಾಗಿ, ಕಾರ್ಯಕ್ರಮಕ್ಕೆ ಒಂದು ವಾರದ ಮೊದಲೇ ಮನೆಯವರೆಲ್ಲಾ ಸಜ್ಜಾಗಿ ಕೂತಿದ್ದೆವು. ಅಮ್ಮ ಯಾವ ಸೀರೆ ಉಡಬೇಕು, ಅಕ್ಕ ಯಾವ ಚೂಡಿದಾರ ಹಾಕ್ಬೇಕು, ನಾನು ಸ್ವಲ್ಪ ಡಿಫರೆಂಟ್ ಆಗಿ ಕಾಣಬೇಕು ಅಂತ ಪ್ಯಾಂಟ್, ಕುರ್ತಾ ರೆಡಿ ಮಾಡಿಕೊಂಡೆವು.
ಅಪ್ಪಾಜಿಯ ಯಾವುದೇ ಪ್ರಶಸ್ತಿ ಅಥವಾ ಕಾರ್ಯಕ್ರಮಗಳಿರಲಿ ಮನೆಯವರೆಲ್ಲಾ ತಪ್ಪದೆ ಹೋಗುತ್ತಿದ್ದೆವು. ಅಣ್ಣ ವಿದೇಶದಲ್ಲಿದ್ದರೆ ಕಾರ್ಯಕ್ರಮವನ್ನು ತಪ್ಪಿಸಿಕೊಳ್ಳುತ್ತಿದ್ದ. ಆದರೆ ಕಾರ್ಯಕ್ರಮ ಮುಗಿದ ಮೇಲೆ ಚಾಚೂ ತಪ್ಪದೆ ಅವನ ವಿದೇಶದ ಸಮಯ ಬೇರೆ ಇದ್ದರು ಫೋನ್ ಮಾಡಿ ಕಣ್ಣಿಗೆ ಕಟ್ಟುವಂತೆ ಕಥೆ ಹೇಳುತ್ತಿದ್ದೆವು. ಹಾಗಾಗಿ ಅವನಿಗೂ ಕಾರ್ಯಕ್ರಮ ತಪ್ಪಿಸಿಕೊಂಡೆ ಎನ್ನುವ ಭಾವನೆ ಬರುತ್ತಿರಲಿಲ್ಲ.
ಆರ್ಯಭಟ ಪ್ರಶಸ್ತಿ ಸಮಾರಂಭಕ್ಕೆ ಎಲ್ಲರೂ ಸಜ್ಜಾಗಿ ಹೋದೆವು. ವೇದಿಕೆ ಮೇಲೆ ಆರ್ಯಭಟ ಪ್ರಶಸ್ತಿಗೆ ಆಯ್ಕೆಯಾದ ಗಣ್ಯರುಗಳನ್ನು ಕೂರಿಸಲಾಗಿತ್ತು. ಈಗಿನ ಹಾಗೆ ಆಗ ನನ್ನ ಕೈಯಲ್ಲಿ ಮೊಬೈಲ್ ಒಂದಿರಲಿಲ್ಲ. ಇದ್ದರೆ ಅಪ್ಪನ ಬೇರೆ ಬೇರೆ ಆಂಗಲ್ ಫೋಟೋ ಶೂಟ್ ನಾನೇ ಮಾಡುತ್ತಿದೆ. ‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮದ ಅತ್ಯುತ್ತಮ ನಿರೂಪಣೆಗಾಗಿ ಎಸ್.ಪಿ. ಬಾಲಸುಬ್ರಮಣ್ಯಂ ಅವರಿಗೂ ಅಪ್ಪನ ಜೊತೆಯಲ್ಲಿಯೇ ಈ ಪ್ರಶಸ್ತಿಯನ್ನು ನೀಡಲಾಯಿತು.
ದೊಡ್ಡ ನಾಯಕ ನಟನೆಂದರೆ ಅವನ ವೇಷ-ಭೂಷಣ ಸೂಟು-ಬೂಟು ಹಾಕಿಕೊಂಡಿರಬಹುದು, ಸಿಕ್ಕಾ ಪಟ್ಟೆ ಗಾಂಭೀರ್ಯ ವ್ಯಕ್ತಿ ಇರಬಹುದು ಎಂದೆಲ್ಲಾ ಅಂದುಕೊಂಡಿದ್ದೆ. ಆದರೆ ವಿಷ್ಣುವರ್ಧನ ಅವರು ಆ ಲೆಕ್ಕವನ್ನು ಕೆಳಗೆ ಮೇಲೆ ಮಾಡಿದರು. ಅವರು ಸಭಾಂಗಣವನ್ನು ಪ್ರವೇಶಿಸುತ್ತಿದ್ದಂತೆ ನನಗೆ ಅಚ್ಚರಿಯೊಂದು ಕಾದಿತ್ತು.
ಬಿಳಿ ಪಯಿಜಾಮ-ಕೂರ್ತಾ, ತಲೆಗೆ ಬಿಳಿಯ ಬಟ್ಟೆ ಅವರನ್ನು ನೋಡಿದಾಕ್ಷಣ ದೊಡ್ಡ ಮೇದಾವಿಯನ್ನು ಕಂಡಂತಾಯಿತು. ವೇದಿಕೆ ಮೇಲಿದ್ದ ಎಲ್ಲ ಗಣ್ಯರಿಗೂ ವಿಷ್ಣುವರ್ಧನ ಅವರೇ ಪ್ರಶಸ್ತಿ ಪ್ರದಾನ ಮಾಡಬೇಕಿತ್ತು. ಆದರೆ ಕೆಲವು ಗಣ್ಯರು ನಮಗೆ ವಿಷ್ಣುವರ್ಧನ ಬದಲಾಗಿ ಎಸ್.ಪಿ.ಬಾಲಸುಬ್ರಮಣ್ಯಮ್ ಅವರು ಪ್ರಶಸ್ತಿಯನ್ನು ಪ್ರದಾನ ಮಾಡಲಿ ಎಂದರು. ಅಲ್ಲಿ ಕುಳಿತ ವೀಕ್ಷಕರಿಗೆಲ್ಲಾ ಕಕ್ಕಾ-ಬಿಕ್ಕಿ ಆದರು. ಆದರೆ ವಿಷ್ಣುವರ್ಧನವರು ಶಾಂತಚಿತ್ತವಾಗಿ ಯಾವುದೇ ಬೇಸರವಿಲ್ಲದೆ ಸಂತೋಷದಿಂದ ಒಪ್ಪಿಕೊಂಡರು. ವಿಷ್ಣುವರ್ಧನ ಎಂದರೆ ಸರಳ. ಸರಳವೆಂದರೆ ವಿಷ್ಣುವರ್ಧನ ಎನ್ನುವುದು ಅಂದು ನನಗೆ ತಿಳಿಯಿತು.
ವಿಷ್ಣುವರ್ಧನವರು ಇಂದು ನಮ್ಮನ್ನು ಅಗಲಿ ವರ್ಷಗಳೇ ಕಳೆದಿರಬಹುದು. ಆದರೆ ಅವರ ಸರಳ ವ್ಯಕ್ತಿತ್ವ ಮತ್ತು ನಟನೆಯಿಂದ ಇಂದಿಗೂ ಅಭಿಮಾನಿಗಳ ಹೃದಯದಲ್ಲಿ ಸದಾಕಾಲ ನೆಲೆಸಿದ್ದಾರೆ. ಅವರ ಹುಟ್ಟು ಹಬ್ಬವನ್ನು ಮನೆಯವರಂತೆ ರಾಜ್ಯದೆಲ್ಲೆಡೆ ವಿಜೃಂಭಣೆಯಿಂದ ಆಚರಿಸಲಾಗುತ್ತದೆ . ಕಲಾವಿದನಿಗೆ ಸಾವಿಲ್ಲ ಎನ್ನುವುದಕ್ಕೆ ವಿಷ್ಣುವರ್ಧನ ಅವರ ಹುಟ್ಟುಹಬ್ಬದ ಆಚರಣೆಯೇ ಸಾಕ್ಷಿ. ಅವರ ಹುಟ್ಟುಹಬ್ಬದ ಪ್ರಯುಕ್ತ ವಿಷ್ಣುವರ್ಧನ ಅವರ ಹಳೆಯ ನೆನಪುಗಳನ್ನು ಬಿಚ್ಚಿಡುವ ಪ್ರಯತ್ನ ನಾನು ಮಾಡಿದ್ದೇನೆ.
- ಶಾಲಿನಿ ಪ್ರದೀಪ್ ak.shalini@outlook.com