'ಅರಳಿ – ಮರಳಿ' ದ ಅನಂತನಾಗ್…

ak.shalini@outlook.com

ವಯಸ್ಸುಅರವತ್ತು ದಾಟುವುದೇ ತಡ ‘ಅರಳು-ಮರಳು’ ಎನ್ನುವ ಮಾತಿಗೆ ಜಾರಿಬಿಡುತ್ತೇವೆ. ಆದರೆ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಸಿನಿಮಾದಲ್ಲಿ ಅನಂತನಾಗ್ ಅವರ ಅಭಿನಯ ನೋಡಿದ ಮೇಲೆ ಆ ಮಾತನ್ನು ‘ಅರಳಿ-ಮರಳಿ’ ಎಂದರೆ ಸೂಕ್ತ ಎಂದೆನ್ನಿಸುತ್ತದೆ. ಅನಂತನಾಗ್ ಅವರಿಗೆ ಈಗ ೭೦ ವರ್ಷ. ‘ಗಣೇಶನ ಮದುವೆ’ ಸಿನಿಮಾದಲ್ಲಿ ನೋಡಿದ ಅನಂತ ನಾಗ್ ಅವರಿಗೂ, ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಸಿನಿಮಾದಲ್ಲಿ ನೋಡಿದ ಅನಂತ ನಾಗ್ ಅವರಿಗೂ ಯಾವುದೇ ವ್ಯತ್ಯಾಸ ಕಾಣುವುದಿಲ್ಲ. ಅದೇ ತುಂಟಾಟದ ನಗು, ಅದೇ ಗಾಂಭೀರ್ಯ ಸಿನಿಮಾದಲ್ಲಿ ಎದ್ದು ಕಾಣುತ್ತದೆ. ಉಫ್… ಅನಂತ ನಾಗ್ ನೀವು ೭೦ರ ವಯಸ್ಸಿನಲ್ಲಿ ಇಲ್ಲ. ಬದಲಾಗಿ ೩೦-೪೦ ವರ್ಷದ ಆಸು-ಪಾಸಿನಲ್ಲಿ ಇರಬಹುದೇನೋ ಎನ್ನುವ ಅನುಮಾನ ಈಗ ಶುರುವಾಗಿದೆ. ಒಬ್ಬ ಕಲಾವಿದನಿಗೆ ಎಷ್ಟೇ ವಯಸ್ಸಾಗಲಿ ಆತನ ರಕ್ತದ ಕಣ ಕಣದಲ್ಲಿಯೂ ಅಭಿನಯ ಬೇರೂರಿದಿರುತ್ತದೆ ಎನ್ನುವುದಕ್ಕೆ ಅನಂತ ನಾಗ್ ಅವರೇ ಸಾಕ್ಷಿ…

ಅತ್ಯಂತ ಸರಳ ಅಭಿನಯದ ಮೂಲಕ ಎಲ್ಲರ ಮನಸ್ಸಿನಲ್ಲಿಯೂ ಅಚ್ಚಳಿಯದೇ ಸದಾ ಕಾಲ ಉಳಿಯುವ ಕಲಾವಿದರ ಹೆಸರಿನಲ್ಲಿ ಅನಂತನಾಗ್ ಕೂಡಾ ಒಬ್ಬರು. ದೊಡ್ದಪರದೆಯಷ್ಟೆ ಅಲ್ಲದೆ ಕಿರುತೆರೆಯಲ್ಲಿ ಯಾವುದೇ ಭೇದ-ಭಾವವಿಲ್ಲದೆ ತಮ್ಮ ನಟನೆಯಲ್ಲಿ ಪೂರ್ಣ ಪ್ರಮಾಣ ನ್ಯಾಯ ನೀಡುತ್ತಾ ಬಂದಿದ್ದಾರೆ. ಜೊತೆಗೆ ಹೊಸ ಕಲಾವಿದರೊಂದಿಗೆ ಬೆರೆತು ಅವರಿಗೆ ಒಳ್ಳೆಯ ಗುರುವಾಗಿ, ಸಹ ಕಲಾವಿದನಾಗಿ, ತಮ್ಮ ಪಾತ್ರಕ್ಕೆ ಎಲ್ಲಿಯೂ ಕಪ್ಪು ಚುಕ್ಕಿ ಬಾರದಂತೆ ಕಾಪಾಡಿಕೊಂಡು ಅಮೋಘ ಅಭಿನಯ ನೀಡುವಲ್ಲಿ ಇವರ ಪಾತ್ರ ಹಿರಿಯದು. ಒಂದು ಸಿನಿಮಾ ಗೆಲ್ಲುತ್ತದೆಯೋ, ಇಲ್ಲವೋ ಗೊತ್ತಿಲ್ಲ. ಆದರೆ ಆ ಸಿನಿಮಾದಲ್ಲಿ ಇವರ ಪಾತ್ರಕ್ಕೆ ಮಾತ್ರ ನೂರಕ್ಕೆ ನೂರು ಅಂಕವಂತೂ ಸಿಕ್ಕೇ ಸಿಗುತ್ತದೆ. ಇವರ ಅಭಿನಯದಲ್ಲಿ ನೈಜ್ಯತೆ ಎದ್ದು ಕಾಣುತ್ತದೆ.

‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಸಿನಿಮಾದಲ್ಲಿ ಅನಂತ ನಾಗ್ ಅವರ ಪಾತ್ರ ಆರಂಭವಾಗುವುದೇ ಇಂಟರ್ವೆಲ್ ನಂತರ. ಯಾವುದೇ ಮ್ಯೂಸಿಕ್ ಹಾವಳಿಗಳಿಲ್ಲದೆ, ಯಾವುದೇ ಹೀರೋಯಿಸಂ ಎಂಟ್ರಿ ಇಲ್ಲದೆ ಸರಳವಾಗಿಯೇ ಪರಿಚಯವಾಗುವ ಈ ಪಾತ್ರ ಕಡಿಮಾವಧಿಯಲ್ಲಿಯೇ ಪ್ರೇಕ್ಷಕನ ಮನಸ್ಸನ್ನು ಗೆದ್ದುಬಿಡುತ್ತದೆ. ಎಲ್ಲ ಪಾತ್ರಕ್ಕೂ ಸೈ ಎನ್ನುವ ಅನಂತ ನಾಗ್ ಅವರು ಒಂದು ರೀತಿಯಲ್ಲಿ ಹದಿಹರೆಯದ ಯುವತಿಯರ ರೋಮಿಯೋ ಎಂದು ಕರೆದರೆ ತಪ್ಪಾಗಲಾರದು. ಇಂದಿನ ಕಲಾವಿದರುಗಳು ಇವರಿಂದ ಸಾಕಷ್ಟು ಕಲಿಯಬೇಕಿದೆ.

‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಅವರ ನಿರ್ದೇಶನದ ಬಗ್ಗೆ ಹೇಳಲೇಬೇಕು. ವಿದೇಶಗಳ ಸೌಂದರ್ಯಕ್ಕೆ ಮಾರು ಹೋಗುವ ಇಂದಿನ ನಿರ್ದೇಶಕ, ನಿರ್ಮಾಪಕರಗಳಿಗೆ ದಕ್ಷಿಣ ಕನ್ನಡದ ದೃಶ್ಯಗಳನ್ನು ಬಳಸಿ ನಮ್ಮ ಕರ್ನಾಟಕದ ಸೌಂದರ್ಯವು ಯಾವ ಹೊರದೇಶಗಳಿಗಿಂತ ಕಮ್ಮಿಇಲ್ಲ ಎನ್ನುವುದನ್ನು ರಿಷಬ್ ಶೆಟ್ಟಿ ಅವರು ತೋರಿಸಿಕೊಟ್ಟಿದ್ದಾರೆ. ಈ ಸಿನಿಮಾದಲ್ಲಿ ಇನ್ನೊಂದು ವಿಶೇಷತೆ ಏನೆಂದರೆ ನಟರಿಗೆ ತಕ್ಕಂತಹ ಪಾತ್ರಗಳನ್ನೂ ರೂಪಿಸದೆ, ಪಾತ್ರಕ್ಕೆ ತಕ್ಕಂತೆ ನಟರನ್ನು ಆಯ್ದು ಕೊಂಡಿದ್ದು ಯಶಸ್ಸಿಗೆ ಒಂದು ಕಾರಣ. ಮಕ್ಕಳ ಮುಗ್ದತೆ, ಶಾಲೆಯ ಮೇಲಿನ ಪ್ರೀತಿ ಮತ್ತು ಸಿನಿಮಾದಲ್ಲಿ ಬಳಸಲಾಗಿರುವ ಪಾತ್ರಗಳು ಪ್ರೇಕ್ಷಕನ ಮನಸ್ಸಿನಲ್ಲಿ ಅಚ್ಚಳಿಯದೆ ಕೂರುತ್ತವೆ.

ಇಂದು ಸರ್ಕಾರಿ ಕನ್ನಡ ಮಾಧ್ಯಮಗಳು ಕ್ರಮೇಣ ಮುಚ್ಚುತ್ತಿದ್ದು, ಎಲ್ಲೆಡೆ ಇಂಗ್ಲಿಷ್ ಮಾಧ್ಯಮಗಳು ತಲೆಯೆತ್ತುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಕನ್ನಡ ಶಾಲೆಗಳು ಯಾವ ಕಾರಣಗಳಿಂದ ಮುಚ್ಚುತ್ತಿವೆ? ಎನ್ನುವ ಒಂದು ಎಳೆಯನ್ನು ಇಟ್ಟುಕೊಂಡು ಮಾಡಿರುವ ಈ ಸಿನಿಮಾ ಸರ್ಕಾರಿ ಕನ್ನಡ ಶಾಲೆಗಳ ಬಗ್ಗೆ ಜಾಗೃತಿ ಮೂಡಿಸುತ್ತದೆ. ನಮ್ಮ ಭಾಷೆ, ನೆಲದ ಮೇಲೆ ಅಭಿಮಾನ ಹುಟ್ಟಿಸುತ್ತದೆ. ಒಳ್ಳೆಯ ಸಿನಿಮಾಗಳು ಬಂದಾಗ ಪ್ರೇಕ್ಷಕರು ಎಂದು ಕೈ ಬಿಡುವುದಿಲ್ಲ ಎನ್ನುವುದಕ್ಕೆ ಈ ಸಿನಿಮಾ ಒಳ್ಳೆಯ ನಿದರ್ಶನ. ಒಟ್ಟಿನಲ್ಲಿ ಈ ಸಿನಿಮಾ ಆರಂಭದಿಂದ ಕೊನೆಯವರೆಗೂ ಮಕ್ಕಳಿಂದ ದೊಡ್ಡವರವರೆಗೂ ಖುಷಿ ಕೊಡುತ್ತದೆ.

ಹೀಗೆ ರಿಷಬ್ ಶೆಟ್ಟಿ ಅವರಿಂದ ಕರ್ನಾಟಕದ ಸೌಂದರ್ಯ, ಕನ್ನಡ ಕಲಾವಿದರನ್ನ ಒಳಗೊಂಡ ಹೊಸ ಹೊಸ ಚಿತ್ರಗಳು ಇನ್ನಷ್ಟು ತೆರೆಯ ಮೇಲೆ ಮೂಡಿ ಬರಲಿ.

ಅನಂತ ನಾಗ್ ಅವರ ಮಾರ್ಗರ್ಶನದಲ್ಲಿ ಇನ್ನಷ್ಟು ಹೊಸ ಕಲಾವಿದರು ಬೆಳೆಯಲಿ ಮತ್ತು ನಮ್ಮ ರೋಮಿಯೋ ನೂರು ವರ್ಷಗಳಿಗಿಂತ ಹೆಚ್ಚು ಕಾಲ ಬಾಳಲಿ. ಯುವತಿಯರ ಮನಸ್ಸನ್ನು ಹೀಗೆ ಕದಿಯುತ್ತಿರಲಿ ಎಂದು ಆಶಿಸುತ್ತೇನೆ.

……………………………………….

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW