‘ಅಸ್ಥಿ’ ಕವನ – ಕಂಸ

ಅಸ್ಥಿ ಭಾರ ಹೊತ್ತು ನಡೆದವ, ದಾಖಲೆ ಕೇಳಿದ ನೀವು ಜಗತ್ತಿನೆದುರು ಬೆತ್ತಲಾಗೇ ಉಳಿದಿರಿ… ಕವಿ ಕಂಚುಗಾರನಹಳ್ಳಿ ಸತೀಶ್ ಅವರ ಲೇಖನಿಯಲ್ಲಿ ಮೂಡಿದ ಭಾವಪೂರ್ವಕ ಕವಿತೆಯನ್ನು ತಪ್ಪದೆ ಮುಂದೆ ಓದಿ…

ಆತ
ಆತನ ಸಹೋದರಿಯ
ಅಸ್ಥಿ ಹಿಡಿದು ನಡೆದ
ನೀವು ಅವನ ಆಸ್ತಿ ಹಿಡಿದು
ಕುಳಿತಲ್ಲಿಯೇ ಕುಳಿತಿದ್ದೀರಿ…

ಮುದ್ರಿತ ಹಾಳೆಗಳೇ
ಬದುಕಾಗಿದ್ದರೆ
ಮನುಕುಲಕ್ಕಿಲ್ಲಿ ಜಾಗ ಇರುತ್ತಿರಲಿಲ್ಲ
ತುತ್ತು ಕೂಳಿಗಾಗಿ
ನಗದು ಕೇವಲ ನೆಪಮಾತ್ರ
ನಗದೇ ಕೇಕೆ ಹಾಕಿ ನಕ್ಕರೆ
ನರನಿಗೇ ಅವಮಾನವಲ್ಲವೇ..?

ಅಸ್ಥಿ ಭಾರ ಹೊತ್ತು ನಡೆದವ
ಮುಗ್ದನಾಗಿ ಜಗತ್ತಿನೆದುರು
ಗೆಲುವು ದಾಖಲಿಸಿದ
ದಾಖಲೆ ಕೇಳಿದ ನೀವು
ಜಗತ್ತಿನೆದುರು ಬೆತ್ತಲಾಗೇ ಉಳಿದಿರಿ..!

ಮಾನ ಅವಮಾನಕ್ಕೆ ಹೆದರದೆ
ಸ್ವಾಭಿಮಾನದ ಕುರುವು ತಂದ
ನೀವಿಲ್ಲಿ ಮುಜುಗರಕ್ಕೊಳಗಾಗಿ
ಮುಖ ಮುಚ್ಚಿಕೊಳ್ಳುವ
ದಯನಿಯ ಸ್ಥಿತಿ ಸೃಷ್ಟಿಸಿದ…

ಚೀ ಥೂ ಎನಿಸಿಕೊಳ್ಳಲು
ದಾಖಲೆಯೇ ಬೇಕಾಯಿತು
ಮೃತ ದೇಹ ಹಗೆಯಲು
ಅವನೆಷ್ಟು ನೊಂದಿರಬೇಕು..?

ಅವನಲ್ಲೇನಿದೆ
ಮಣ್ಣಾಗುವ ಎಲುಬಿನ ಪಂಜರ
ಬಡತನದಲ್ಲೇ ಬದುಕಿ
ಸೋತ ಕಂತೆಗಳ ಹೊರೆ ಅಷ್ಟೆ…

ಪುಡಿಗಾಸಿಗಾಗಿ ಗೋಗರೆದಾಗ
ಮಾನವೀಯತೆ ತೋರಿದ್ದರೆ
ನಿಮ್ಮ ಮಾನ ಉಳಿಯುತ್ತಿತ್ತು
ಸಮ ಸಮಾಜದ
ಅಸಮಾನತೆ ಅಳಿಸಿದ
ಹೆಮ್ಮೆಯ ಆತ್ಮ ತೃಪ್ತಿ
ತಮ್ಮದಾಗುತ್ತಿತ್ತು…


  • ಕಂಸ – ಕಂಚುಗಾರನಹಳ್ಳಿ ಸತೀಶ್ 

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading