ಬದುಕಿಗೊಂದು ಸೆಲೆ (ಭಾಗ – ೬)

ನನಗೆ ವಯಸ್ಸಾಗಿದೆಯೆಂದು ಯಾರು ಹೇಳಿರಬಹುದೆಂದು ಯೋಚಿಸಿ ಸೋಜಿಗ ಪಡಬೇಡಿ. ಬಸ್ಸಿನಲ್ಲಿ ಪಯಣಿಸುವಾಗ ಇದೀಗ ತಾನೇ ಹರಯಕ್ಕೆ ಕಾಲಿಟ್ಟ ಪುಟ್ಟ ಯುವಕ ತನ್ನ ಸೀಟನ್ನು ನನಗೆ ಬಿಟ್ಟು ಕೊಟ್ಟಾಗ ಓ! ನನಗೆ ವಯಸ್ಸಾಯ್ತು ಎಂದು ನಾನು ಯೋಚಿಸಿದೆ. ಲೇಖಕಿ ವೀಣಾ ಹೇಮಂತ್ ಗೌಡ ಪಾಟೀಲ್ ಅವರ ‘ಹೌದು! ನನಗೆ ವಯಸ್ಸಾಗುತ್ತಿದೆ’ ಕುರಿತು ಇಂದಿನ ಅಂಕಣದಲ್ಲಿ ಓದಿ…

ಹೌದು ನಾನು ದಿನದಿಂದ ದಿನಕ್ಕೆ ವೃದ್ದಾಪ್ಯದತ್ತ ನಡೆಯುತ್ತಿದ್ದೇನೆ. ವಯಸ್ಸು ತನ್ನ ಎಂದಿನ ಗತಿಯಲ್ಲಿ ಚಲಿಸುತ್ತಿದ್ದರೂ ನನಗೆ ಮಾತ್ರ ನಿಧಾನವಾಗಿ ನನಗೆ ವಯಸ್ಸಾಗುತ್ತಿದೆ ಎಂದು ಭಾಸವಾಗುತ್ತಿದೆ.

ನನಗೆ ವಯಸ್ಸಾಗುತ್ತಿದೆ ಎಂಬುದನ್ನು ನನ್ನ ಮುಖದ ಮೇಲಿನ ನೆರಿಗೆಗಳು ಹೇಳುತ್ತಿಲ್ಲ, ನನ್ನ ತಲೆಯಲ್ಲಿ ಅಲ್ಲಲ್ಲಿ ಇಣುಕುವ ಬಿಳಿ ಕೂದಲುಗಳು ಕೂಡ ಹೇಳುತ್ತಿಲ್ಲ ಬಹಳ ಹೊತ್ತು ಕುಳಿತುಕೊಂಡು ಒಮ್ಮಿಂದೊಮ್ಮೆಲೆ ಮೇಲೆ ಏಳುವಾಗ ಚಕ್ಕೆಂದು ಹಿಡಿದುಕೊಳ್ಳುವ ಕಾಲು ಕೂಡ ಹೇಳುತ್ತಿಲ್ಲ. ನನ್ನ ನಿಧಾನವಾದ ನಡಿಗೆ ಕೂಡ ಹೇಳುತ್ತಿಲ್ಲ. ಆದರೂ ನನಗೆ ವಯಸ್ಸಾಗುತ್ತಿದೆ ಎಂದು ನನಗೆ ಗೊತ್ತು.

ಹಾಗಾದರೆ ನನಗೆ ವಯಸ್ಸಾಗಿದೆಯೆಂದು ಯಾರು ಹೇಳಿರಬಹುದೆಂದು ಯೋಚಿಸಿ ಸೋಜಿಗ ಪಡಬೇಡಿ. ಬಸ್ಸಿನಲ್ಲಿ ಪಯಣಿಸುವಾಗ ಇದೀಗ ತಾನೇ ಹರಯಕ್ಕೆ ಕಾಲಿಟ್ಟ ಪುಟ್ಟ ಯುವಕ ತನ್ನ ಸೀಟನ್ನು ನನಗೆ ಬಿಟ್ಟು ಕೊಟ್ಟಾಗ ಓ! ನನಗೆ ವಯಸ್ಸಾಯ್ತು ಎಂದು ನಾನು ಯೋಚಿಸಿದೆ.

ಇನ್ನೂ ಹೇಳಬೇಕೆಂದರೆ ಕೇವಲ ನನಗಿಂತ ಐದಾರು ವರ್ಷ ಚಿಕ್ಕವರಾಗಿರುವ ಸೇಲ್ಸ್ ಮ್ಯಾನ್ ಗಳು ಆಂಟಿ ಹೀಗೆ ಬನ್ನಿ ಎಂದು ಹೇಳಿದಾಗ ಮೊದಮೊದಲು ಸಿಲಿಮರಿಗೊಳ್ಳುತ್ತಿದ್ದ ನಾನು ಇದೀಗ ನಕ್ಕು ಅವರು ತೋರಿದತ್ತ ನಡೆದುಬಿಡುತ್ತೇನೆ. ಆಗ ನನಗೆ ಖಂಡಿತವಾಗಿಯೂ ವಯಸ್ಸಾಗಿದೆ ಎಂದು ಭಾಸವಾಗುತ್ತದೆ.

ಫೋಟೋ ಕೃಪೆ : ಅಂತರ್ಜಾಲ

ಚಾಲ್ತಿಯಲ್ಲಿರುವ ಹೊಸ ವಿಧದ ಬಟ್ಟೆಗಳು ನನಗೆ ಅರ್ಥವಾಗುವುದಿಲ್ಲ, ಚಲನಚಿತ್ರದ ಹಾಡುಗಳು ನನಗೆ ಗೊಂದಲದ ಗೂಡಿನಂತೆ ಕರ್ಕಶವಾಗಿ ಕೇಳುತ್ತಿವೆ. ಈ ಹಿಂದೆ ನಮ್ಮ ಹಿರಿಯರು ಕೇಳುತ್ತಿದ್ದ ಹಳೆಯ ಹಿಂದಿ ಮತ್ತು ಕನ್ನಡ ಚಲನಚಿತ್ರಗಳನ್ನು ಕೇಳುತ್ತಾ ಆ ಭಾವದಲ್ಲಿ ಕರಗಿ ಹೋಗಲು ನಾನು ಇಚ್ಚಿಸುತ್ತೇನೆ. ನಾನು ಹೇಳದೆಯೇ ನನ್ನ ಮನದ ಭಾವಗಳನ್ನು ಅರಿತು ಕವಿ ಬರೆದಿದ್ದಾನೋ ಎಂಬಂತಿರುವ ಗೀತೆಗಳು ನನ್ನ ಮನಸ್ಸಿಗೆ ಮುದ ನೀಡುತ್ತವೆ… ನಿಧಾನವಾಗಿ ನನಗೆ ವಯಸ್ಸಾಗುತ್ತಿದೆ ಎಂಬ ಭಾವ ನನ್ನನ್ನು ಮುದಗೊಳಿಸುತ್ತದೆ.

ಮೊದಲಿನಂತೆ ಸೀರೆಗೆ ಮ್ಯಾಚಿಂಗ್ ಬಳೆಗಳು, ಕಿವಿಯೋಲೆ, ಕೇಶಾಲಂಕಾರ ಮುಂತಾದ ಅಲಂಕಾರದ ಕುರಿತು ನಾನು ಅಷ್ಟಾಗಿ ಕಾಳಜಿ ವಹಿಸುತ್ತಿಲ್ಲ ಹಾಗೆಂದು ಬೇಕಾ ಬಿಟ್ಟಿಯಾಗಿಯೂ ಇರುವುದಿಲ್ಲ. ಈ ಹಿಂದಿನಂತೆ ನನಗೆ ಒಗ್ಗದೆ ಹೋದರೂ ಟ್ರೆಂಡ್ ಇದೆ ಎಂಬ ಕಾರಣಕ್ಕೆ ಧರಿಸುತ್ತಿದ್ದ ಬಟ್ಟೆಬರೆಗಳನ್ನು ಮೂಲೆಗುಂಪು ಮಾಡಿದ್ದೇನೆ. ನನಗೆ ಸರಿ ಕಂಡಂತೆ ಹಿತಮಿತವಾದ ಅಲಂಕಾರ, ಸರಳವಾದ ಮತ್ತು ನನಗೆ ಹಿತವೆನಿಸುವ ಬಟ್ಟೆ ಬರೆಗಳಲ್ಲಿ ನಾನು ಹುದುಗಬಯಸುತ್ತೇನೆ. ನನಗೆ ನಾನು ಧರಿಸುವ ಬಟ್ಟೆ ಬರೆಗಳು ಸರಿ ತೋರಿದಂತೆ ಇದ್ದರೆ ಸಾಕು. ಮಿತವಾದ ಅಲಂಕಾರ ಮತ್ತು ನೆಪಕ್ಕಷ್ಟೇ ಧರಿಸುವ ಒಡವೆ ವಸ್ತುಗಳು ನನ್ನಲ್ಲಿ ಒಂದು ರೀತಿಯ ಪ್ರಬುದ್ಧತೆಯ ಕಳೆಯನ್ನು ಹೆಚ್ಚಿಸಿ ನನ್ನ ವಯಸ್ಸಿಗೆ ಮೆರಗನ್ನು ನೀಡುತ್ತಿದೆ. ಖಂಡಿತವಾಗಿಯೂ ನನಗೆ ವಯಸ್ಸಾಗುತ್ತಿದೆ ಐ ಯಾಮ್ ಏಜಿಂಗ್ ಗ್ರೇಸ್ ಫುಲ್ಲಿ.

ಕೆಲ ವಿಷಯಗಳನ್ನು ನಾನು ಅರ್ಥ ಮಾಡಿಕೊಳ್ಳಲು ಹೋಗುವುದೇ ಇಲ್ಲ. ಎಲ್ಲರೂ ಎಲ್ಲವನ್ನು ಕಲಿಯಲು ಸಾಧ್ಯವಿಲ್ಲ ನನ್ನ ಇತಿಮಿತಿಯಲ್ಲಿ ನನಗೆ ಇಷ್ಟವಾದದನ್ನು ನಾನು ಕಲಿತು ಅದನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಸಾಕು ಎಂಬ ಅಭಿಪ್ರಾಯ ಇದೀಗ ನನ್ನದಾಗಿದೆ. ಎಲ್ಲಕ್ಕೂ ಮಿಗಿಲಾಗಿ ಬೇರೆಯವರಿಗೆ ಅರ್ಥ ಮಾಡಿಸುವುದನ್ನು ನಾನು ಬಿಟ್ಟುಬಿಟ್ಟಾಗ ನನಗೆ ವಯಸ್ಸಾಯ್ತು ಎಂದು ಖುದ್ದು ನನಗೆ ಅರಿವಾಯಿತು.

ಈ ಹಿಂದಿನಂತೆ ಅತ್ತೆ, ಮಾವ, ಗಂಡ, ಮಕ್ಕಳಿಗೆ ಬೇಕು ಬೇಕಾದ್ದನ್ನೆಲ್ಲಾ ಮಾಡಿ ಹಾಕಿ ಹೌದೆನ್ನಿಸಿಕೊಳ್ಳಬೇಕು ಎಂಬ ಧಾವಂತದಿಂದ ಅದೆಷ್ಟೇ ಕಷ್ಟವಾದರೂ ದಣಿವಾದರೂ ಬಿಡುವಿಲ್ಲದೆ ಕೆಲಸಕ್ಕಿಳಿಯುತ್ತಿದ್ದ ನಾನು ಇದೀಗ ನನಗೆ ಸಾಧ್ಯವಿದ್ದಷ್ಟು ಸಮಯವನ್ನು ವಿನಿಯೋಗಿಸಿ ಉತ್ತಮವಾಗಿ ರುಚಿ ಶುಚಿಯಾಗಿ ಎಲ್ಲರಿಗೂ ಅಡುಗೆಯನ್ನು ಮಾಡುತ್ತಿದ್ದೇನೆ.. ಆಗಾಗ ನನಗೆ ಇಷ್ಟವಾದ ಅಡುಗೆಯನ್ನು ಕೂಡ ಮಾಡಿ ಮನಸ್ಸು ತೃಪ್ತಿಯಾಗುವಷ್ಟು ತಿನ್ನುತ್ತೇನೆ …ಕಾರಣ ನನಗೂ ವಯಸ್ಸಾಗುತ್ತಿದೆ ಎಂಬುದು ನನಗೆ ಈಗ ಮೊದಲಿಗಿಂತಲೂ ಹೆಚ್ಚು ಸ್ಪಷ್ಟವಾಗಿ ಅರಿವಾಗುತ್ತಿದೆ.

ಯಾರಾದರೂ ನನಗೆ ಹೀಯಾಳಿಸಿ ಮಾತನಾಡಿದಾಗ ನಾನು ಸಿಟ್ಟಿಗೇಳುವುದಿಲ್ಲ. ನೋವಾಗುವಂತೆ ಏನನ್ನಾದರೂ ಹೇಳಿದಾಗ ನಾನು ನಕ್ಕು ಸುಮ್ಮನಾಗುತ್ತಿದ್ದೇನೆ. ಅವರ ಸಕಾರಾತ್ಮಕವಾದ ಉತ್ತಮ ಅಭಿಪ್ರಾಯಗಳಿಗೆ ನಾನು ಬೆಲೆ ನೀಡುತ್ತೇನೆ ಆದರೆ ಹೀಯಾಳಿಸಬೇಕೆಂದು ನಿಶ್ಚಿತವಾಗಿ ನನ್ನ ಮನಸ್ಸನ್ನು ಅವರು ನೋಯಿಸಿದರೆ ನಕ್ಕು ಮುಂದೆ ಸಾಗುವುದನ್ನು ಕಲಿತಿದ್ದೇನೆ. ನನ್ನ ಈ ಶಕ್ತಿಯ ಅರಿವಾದ ನಂತರವೇ ನನಗೆ ಗೊತ್ತಾಗಿದ್ದು ನನಗೆ ವಯಸ್ಸಾಯ್ತು ಎಂದು. ಯಾವುದೇ ಘಟನೆಗಳನ್ನು ನಾನು ಅತಿಯಾಗಿ ಮನಸ್ಸಿಗೆ ಹಚ್ಚಿಕೊಳ್ಳದೆ ಹೋಗಲಿ ಬಿಡು ಜನ ಇರುವುದೇ ಹಾಗೆ ಎಂದು ಹೇಳುವುದನ್ನು ಕಲಿತಾಗ ನನಗೆ ಗೊತ್ತಾಯ್ತು ನನಗೆ ವಯಸ್ಸಾಯ್ತು ಎಂದು.

ನನ್ನ ಋತುಚರ್ಯೆಯಲ್ಲಿ ವ್ಯತ್ಯಾಸವಾಗಿ ಸಣ್ಣ ಪುಟ್ಟ ದೈಹಿಕ ತೊಂದರೆಗಳು ಆರಂಭವಾದಾಗ ನಿಜವಾಗಿಯೂ ನನಗೆ ವಯಸ್ಸಾದಂತೆ ಭಾಸವಾಯಿತು. ನನ್ನ ಕುರಿತು ಕೆಟ್ಟದಾಗಿ ಮಾತನಾಡುವವರ ಬಗ್ಗೆ ನಕ್ಕು ತೇಲಿಸಿ ಬಿಡುವ ನಾನು ಅವರಿಂದ ಕ್ಷಮೆಯನ್ನು ಯಾಚಿಸುವುದಿಲ್ಲ… ತಪ್ಪು ಮಾಡಿ ಆ ಕುರಿತು ಒಂದಷ್ಟು ಕೂಡ ಮುಜುಗರವಿಲ್ಲದ ಜನರಿಂದ ಕ್ಷಮೆಯನ್ನು ಅಪೇಕ್ಷಿಸುವುದು ಉಪಯೋಗವಿಲ್ಲ ಅಲ್ಲವೇ?

ಫೋಟೋ ಕೃಪೆ : ಅಂತರ್ಜಾಲ

ಕೆಲವೊಮ್ಮೆ ಮನೆಯವರು, ಸ್ನೇಹಿತರು ಮೌನವಾಗಿ ಉಳಿದುಬಿಡುತ್ತಾರೆ ಅದು ಕೂಡ ಈಗೀಗ ನನ್ನನ್ನು ಬಾಧಿಸುವುದಿಲ್ಲ. ಎಲ್ಲರೂ ತಮ್ಮ ಬದುಕಿನ ಹೋರಾಟಗಳಲ್ಲಿ ವ್ಯಸ್ತರಾಗಿದ್ದಾರೆ ಬೇರೆಯವರ ಕುರಿತು ಯೋಚಿಸಲು ಕೂಡ ಅವರಿಗೆ ಪುರುಸೊತ್ತಿಲ್ಲ ಎಂಬುದು ಇದೀಗ ನನಗೆ ಅರ್ಥವಾಗಿದೆ. ಮಾತನಾಡಬೇಕೆಂಬ ಅವಶ್ಯಕತೆ ಅವರಿಗೆ ಇದ್ದರೆ ಖಂಡಿತವಾಗಿಯೂ ಅವರು ಮಾತನಾಡುತ್ತಾರೆ.

ಈ ಮೊದಲು ನಾನು ಮಾಡಿದ ಕೆಲಸಗಳ, ಅಡುಗೆಯ, ಮನೆಯನ್ನು ಸ್ವಚ್ಛವಾಗಿಟ್ಟುಕೊಂಡ ರೀತಿ ಬೇರೆಯವರು ನನ್ನನ್ನು ಹೊಗಳಲಿ ಎಂದು ಆಶಿಸುತ್ತಿದ್ದ ನನಗೆ ಇದೀಗ ಯಾರೊಬ್ಬರ ಅಪ್ರುವಲ್ ಬೇಕಾಗಿಲ್ಲ ಎಂಬುದು ಅರಿವಾಗಿದೆ. ನಾನು ಶಾಂತಿಯಿಂದ ಸಮಾಧಾನದಿಂದ ಬದುಕಲು ಮಾತ್ರ ಬಯಸುತ್ತಿದ್ದೇನೆ… ಕಾರಣ ನನಗೆ ವಯಸ್ಸಾಗುತ್ತಿದೆ ಎಂದು ನನಗೆ ಅರಿವಾಗುತ್ತಿದೆ.

ಯಾರೊಂದಿಗೂ ಕಿರಿಕಿರಿ ಮಾಡಿಕೊಳ್ಳಲು, ಜಗಳ ಮಾಡಲು ದ್ವೇಷ ಸಾಧಿಸಲು ನನಗೆ ಇದೀಗ ಮನಸ್ಸಿಲ್ಲ. ಮೊದಲು ಮಾತಿಗೆ ಇದಿರು ಮಾತನ್ನು ಹೇಳಬೇಕೆಂದು ಬಯಸಿದರೂ ತಡೆದುಕೊಳ್ಳುತ್ತಿದ್ದ ನಾನು ಇದೀಗ ನನ್ನ ಯಾವುದೇ ಪ್ರಯತ್ನವಿಲ್ಲದೆ, ವಿಪರೀತ ಪ್ರತಿಕ್ರಿಯೆ ತೋರದೆ ನಕ್ಕು ಸುಮ್ಮನಾಗಿ ಬಿಡುತ್ತೇನೆ. ಈ ಮೊದಲು ತುಸುವೇ ಸ್ತೂಲವಾಗಿರುವ ನನ್ನ ದೇಹವನ್ನು ಅದರ ಓರೆ ಕೋರೆಗಳನ್ನು ಕಂಡು ಬೇಸರಪಟ್ಟುಕೊಳ್ಳುತ್ತಿದ್ದ ನಾನು ಇದೀಗ ನನ್ನ ದೇಹವನ್ನು ಪ್ರೀತಿಸುತ್ತೇನೆ. ನನ್ನ ದೇಹವೇ ನನ್ನ ಮನಸ್ಸಿನ ಮನೆ. ಇಲ್ಲಿ ನನ್ನೆಲ್ಲ ನೆನಪುಗಳು ನನ್ನೊಂದಿಗೆ ಇರುತ್ತವೆ. ನನ್ನ ದೇಹ ಮತ್ತು ಮನಸುಗಳಿಗೆ ನಾನು ಬದುಕಿನಲ್ಲಿ ಹೊಂದಿದ ಪ್ರೀತಿ, ವಿಶ್ವಾಸ,ನೋವು, ನಲಿವು ಮುಂತಾದ ಬದುಕಿನ ಏರಿಳಿತಗಳ ಅರಿವಿದೆ. ನನ್ನ ದೇಹವಿಲ್ಲದೆ ನನ್ನ ಅಸ್ತಿತ್ವವಿಲ್ಲ ಎಂಬ ಅರಿವು ಮೂಡಿರುವ ನಾನು ನನ್ನ ದೇಹವನ್ನು ವಿಶೇಷ ಕಾಳಜಿಯಿಂದ ಕಾಯ್ದುಕೊಳ್ಳುತ್ತಿದ್ದೇನೆ. ಅದಕ್ಕಾಗಿ ಯೋಗ, ವ್ಯಾಯಾಮ, ಸ್ನೇಹಿತರೊಂದಿಗೆ ವಾಕಿಂಗ್, ಭಜನೆ ಎಂದು ನನ್ನನ್ನು ನಾನು ವ್ಯಸ್ತವಾಗಿ ಇಟ್ಟುಕೊಂಡಿದ್ದೇನೆ. ಈ ಮೊದಲು ಇಷ್ಟವಾದುದನ್ನೆಲ್ಲ ತಿನ್ನುತ್ತಿದ್ದ ನಾನು ಇದೀಗ ನನ್ನ ದೇಹಕ್ಕೆ ಒಗ್ಗುವ ಆಹಾರವನ್ನು ಮಾತ್ರ ಸೇವಿಸುತ್ತಿದ್ದೇನೆ. ನನ್ನ ಆಹಾರ ವಿಹಾರಗಳು ನನ್ನನ್ನು ಮಾಗಿದ ಪ್ರಬುದ್ಧ ವ್ಯಕ್ತಿಯನ್ನಾಗಿಸಿವೆ ಎಂದರೆ ತಪ್ಪಿಲ್ಲ.

ಮಕ್ಕಳು ದೊಡ್ಡವರಾಗಿದ್ದಾರೆ ಅವರಿಗೆ ಸಂಗಾತಿಯನ್ನು ಹುಡುಕಿ ಮದುವೆ ಮಾಡಿದ್ದು ನಾನು ನನ್ನ ಸಂಗಾತಿಯೊಂದಿಗೆ ಹೆಚ್ಚು ಸಮಯವನ್ನು ಕಳೆಯಲು ಬಯಸುತ್ತೇನೆ. ಯವ್ವನದ ಸಮಯದಲ್ಲಿ, ವಿವಾಹವಾದ ನಂತರ ಮಕ್ಕಳು, ಅವರ ಓದು ಆಟ ಪಾಠಗಳಲ್ಲಿ ನಾವು ಕಳೆದುಕೊಂಡ ಸಂತಸದ ಕ್ಷಣಗಳನ್ನು ಮತ್ತೆ ತಂದುಕೊಳ್ಳಲು ಕಾತರರಾಗಿದ್ದೇವೆ. ಕಳೆದು ಹೋದ ದಿನಗಳು ಮತ್ತೆ ಬರುವುದಿಲ್ಲ ಆದರೆ ಇರುವಷ್ಟು ದಿನವೂ ಚೆನ್ನಾಗಿರಬೇಕು ಎಂಬ ಆಶಯ ನಮ್ಮದು. ಆಗಿನಂತೆ ಪ್ರಣಯ ಪಕ್ಷಿಗಳಲ್ಲದೆ ಹೋದರೂ ಪ್ರಬುದ್ಧ ಪ್ರೇಮಿಗಳಾಗಿ ಪರಸ್ಪರ ಕೈ ಕೈ ಹಿಡಿದು ಬದುಕಿನ ಸಂಜೆಯಲ್ಲಿ ಒಬ್ಬರಿಗೊಬ್ಬರು ಆಸರೆಯಾಗುವ ಆಶಯ ನಮ್ಮದಾಗಿದೆ. ಕಾರಣ ನಮಗೆ ವಯಸ್ಸಾಗುತ್ತಿದೆ.

ಇದೀಗ ನಾನು ವಿಭಿನ್ನವಾಗಿ ಬದುಕಲು ಇಚ್ಚಿಸುತ್ತೇನೆ…  ಯಾವುದೇ ರೀತಿಯ ಧಾವಂತದ ಬದುಕು ನಮ್ಮದಾಗಿಲ್ಲ. ಸಮಯಕ್ಕೆ ಸರಿಯಾಗಿ ಅಡುಗೆ ಮಾಡುವ, ಮಕ್ಕಳಿಗೆ ಡಬ್ಬಿ ಕಟ್ಟುವ ಅವರ ಹೋಮ ವರ್ಕ್ ಮಾಡಿಸುವ ಯಾವುದೇ ಗುರುತರ ಕೆಲಸಗಳು ನಮಗಿಲ್ಲ. ಮಾಡಲೇಬೇಕು ಎಂಬ ತರಾತುರಿ ಇಲ್ಲದ ಬದುಕು ನಮ್ಮದಾಗಿದೆ. ಈ ರೀತಿಯ ಬದುಕನ್ನು ಆಯ್ಕೆ ಮಾಡಿಕೊಂಡ ಕುರಿತು ಇದೀಗ ನನಗೆ ಯಾವುದೇ ರೀತಿಯ ಪಶ್ಚಾತ್ತಾಪವೂ ಇಲ್ಲ ಕಾರಣ… ನಮಗೆ ವಯಸ್ಸಾಗುತ್ತಿದೆ.

ಗಂಡನನ್ನು ಆಫೀಸಿಗೆ, ಮಕ್ಕಳನ್ನು ಶಾಲೆಗೆ ತಯಾರು ಮಾಡುವ ಅವರ ಡಬ್ಬಿ ಕಟ್ಟುವ ಅವಸರದಲ್ಲಿ ಅಂದು ನನ್ನ ಕಾಫೀ ಆರಿ ಹೋಗುತ್ತಿತ್ತು. ಇದೀಗ ನಾನು ಬಿಸಿಯಾದ ಕಾಫಿಯನ್ನು ಕೈಯಲ್ಲಿ ಹಿಡಿದು ಅದರ ವಾಸನೆಯನ್ನು ಗಾಢವಾಗಿ ಆಫ್ರಾಣಿಸುತ್ತ ಒಂದೊಂದೇ ಗುಟುಕನ್ನು ಹೀರುತ್ತೇನೆ. ಸ್ನೇಹಿತರಿಂದ ಬರುವ ವಾಟ್ಸಾಪ್ ಸಂದೇಶಗಳನ್ನು ನಿಧಾನವಾಗಿ ನೋಡಿ ಯಾವುದೇ ಒತ್ತಡವಿಲ್ಲದೆ ಉತ್ತರಿಸುತ್ತೇನೆ.

ತೀವ್ರ ಚಟುವಟಿಕೆಯಿಂದ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಓಡಾಡುತ್ತಿದ್ದ ನಾನು ಇದೀಗ ತುಸು ಹೊತ್ತು ಸುಮ್ಮನೆ ಕುಳಿತುಕೊಳ್ಳ ಬಯಸುತ್ತಿದ್ದೇನೆ.

ಇದೀಗ ನನ್ನ ನಡಿಗೆಯಲ್ಲಿ ಧಾವಂತವಿಲ್ಲ. ಗುರಿಯನ್ನು ಮುಟ್ಟಲೇಬೇಕು ಎಂಬ ಛಲವಿಲ್ಲ. ಗುರಿಯನ್ನು ತಲುಪುವ ಹಾದಿಯಲ್ಲಿ ನಿಧಾನವಾಗಿ ನಡೆಯಬೇಕು. ನಡೆಯುವ ಹಾದಿಯ ಎಲ್ಲ ಏರಿಳಿತಗಳನ್ನು ಅನುಭವಿಸುತ್ತಾ ಸುತ್ತಣ ಪ್ರಕೃತಿಯನ್ನು ಆಸ್ವಾದಿಸುತ್ತಾ ಮುಂದೆ ನಡೆಯುವ ಆಶಯ ನನ್ನದು. ನನ್ನದೇ ಮನಸ್ಸಿನ ಕರೆಗೆ ಓಗೊಡುವ ನಾನು ನನ್ನ ಮನದ ದನಿಗೆ ಕಿವಿಯಾಗಿದ್ದೇನೆ.ನನ್ನನ್ನು ಮೊದಲಿಗಿಂತ ಹೆಚ್ಚು ಅರ್ಥ ಮಾಡಿಕೊಂಡಿದ್ದೇನೆ. ನನ್ನನ್ನೇ ನಾನು ಅಪ್ಪಿ ಕೊಂಡಿದ್ದೇನೆ… ನನ್ನ ಬದುಕು ನನಗೆ ಮಾತ್ರ ಮೀಸಲು ಎಂದು ಭಾವಿಸಿ ಬದುಕಿನಲ್ಲಿ ಮುನ್ನಡೆದಿದ್ದೇನೆ ಕಾರಣ ನನಗೆ ವಯಸ್ಸಾಗಿದೆ.

ಸ್ನೇಹಿತರೆ ನಿಮಗೂ ವಯಸ್ಸಾದಾಗ ಈ ರೀತಿಯ ಭಾವನೆಗಳು ಬರುತ್ತವೆಯೇ?.

ಹಿಂದಿನ ಸಂಚಿಕೆಗಳು :


  • ವೀಣಾ ಹೇಮಂತ್ ಗೌಡ ಪಾಟೀಲ್ – ಮುಂಡರಗಿ ಗದಗ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading