ಇದು ಮಾವಿನ ಸಮಯ : ನಳಿನಿ ಟಿ. ಭೀಮಪ್ಪ

ಮಾವು ತಿನ್ನುವುದೂ ಸಹ ಒಂದು ಕಲೆ. ನಯನಾಜೂಕಿನಿಂದ ತಿನ್ನಬಾರದು. ಇನ್ನೂ ಮಾವಿನಲ್ಲಿಯೂ ಹತ್ತಾರು ತಳಿಗಳಿವೆ. ಪ್ರತಿಯೊಂದು ಬ್ರಾಡ್‌ಗೂ ಅದರದ್ದೇ ಆದ ಅಭಿಮಾನಿಗಳಿರುವವರು. ಕಲ್ಮಿಮ ಒನಪು, ರಸಪೂರಿಯ ಘಮಲು, ಮಲ್ಲಿಕಾಳ ಸೊಬಗು, ಮಲಗೋಬಾದಂತಹ ದೈತ್ಯ ಹೀಗೆ ಹತ್ತಾರು ತಳಿಗಳು ಮಾವುವಾದಿಗಳ ರುಚಿ ತಣಿಸುತ್ತವೆ. ಲೇಖಕಿ ನಳಿನಿ ಟಿ. ಭೀಮಪ್ಪ ಅವರು ಮಾವಿನ ಹಣ್ಣಿನ ಕುರಿತು ಬರೆದ ವಿಶೇಷ ಲೇಖನವನ್ನು ತಪ್ಪದೆ ಮುಂದೆ ಓದಿ…

ಯಾವ ಹಣ್ಣು ಯಾವ ಸೀಸನ್ನಿನಲ್ಲಿ ದೊರೆಯುತ್ತದೆ ಎಂದು ಯಾರಿಗೆ ಮಾಹಿತಿ ಇರುತ್ತದೆಯೋ ಇಲ್ಲವೋ ಗೊತ್ತಿಲ್ಲ, ಆದರೆ ಮಾವಿನ ಸೀಸನ್ ಮಾತ್ರ ಬೇಸಿಗೆ ಎಂದು ನಿದ್ರೆಯಲ್ಲಿದ್ದವರನ್ನು ಎಬ್ಬಿಸಿ ಕೇಳಿದರೂ ಯಾವುದೇ ರೀಸನ್ ಹುಡುಕದೆ ಸಲೀಸಾಗಿ ಹೇಳುತ್ತಾರೆ. ಬೇರೆ ಹಣ್ಣುಗಳನ್ನು ವೈದ್ಯರ ಸಲಹೆ ಮೇರೆಗೆ ಆರೋಗ್ಯದ ದೃಷ್ಟಿಯಿಂದ ತಿನ್ನುವುದು ಹೆಚ್ಚಾದರೆ, ಮಾವನ್ನು ಮಾತ್ರ ಅದರ ಗಾಢ ರುಚಿಯ ದೃಷ್ಟಿಯಿಂದಲೇ ಭುಜಿಸುವುದು.

ಮಾವಿನಮರ ಯಾವ ಹಾದಿಯಲ್ಲಿರಲಿ, ಯಾವ ಬೀದಿಯಲ್ಲಿರಲಿ, ಯಾರ ಮನೆಯ ಕಾಂಪೌಂಡಿನ ಮುಂದಿರಲಿ, ಹಿತ್ತಲಿನಲ್ಲಿರಲಿ, ಮಾವುವಾದಿಗಳು ಅದರ ಮೇಲೊಂದು ಕಣ್ಣನ್ನು ಇಟ್ಟಿಯೇ ಇರುತ್ತಾರೆ. ಅದರಲ್ಲಿ ಕೆಂಪು ಚಿಗುರು ಮೂಡಿ ನಳನಳಿಸುತ್ತಿರುವಾಗಲೇ, ಯಾವಾಗ ಹೂಬಿಡಬಹುದು, ಯಾವಾಗ ಮಿಡಿಯಾಗಬಹುದು, ಉಪ್ಪಿನಕಾಯಿಗೆ ಕಾಯಿ ಸಿಗಬಹುದು, ಹಣ್ಣಾಗಬಹುದು ಎಂದು ಎಲ್ಲರೂ ತಮ್ಮ ತಮ್ಮಲ್ಲೇ ಸ್ಕೆಚ್ ಹಾಕತೊಡಗುವುದಿದೆ. ಬೇರೆ ಋತುಗಳಲ್ಲಿ ಹಾಡುವುದನ್ನೇ ಮರೆತ ಕೋಗಿಲೆಗಳು, ವಸಂತಕಾಲದಲ್ಲಿ ಮಾವಿನಾಗ ಮನದ ಸೂಚನೆಯನ್ನು ಎಲ್ಲರಿಗೂ ತಲುಪಿಸುವ ಉದ್ಧೇಶದಿಂದಲೇ, ಮಾಮರದಲ್ಲಿ ಬೀಡುಬಿಟ್ಟು ‘ಕುಹೂ’ ಕುಹೂ’ ಎಂದು ಕಹಳೆ ಊದಿ, ಹಣ್ಣುಗಳ ರಾಜ ಮಾವು ಬರುವ ಸಮಯ ಸಮೀಪಿಸುತ್ತಿದೆ, ಬೇರೆ ಹಣ್ಣುಗಳೆಲ್ಲ ವಾರಿಗೆ ಸರಿದು ಸೈಡ್ ಬಿಡಿ, ಎನ್ನುವ ಸೂಚನೆಯನ್ನು ತಲುಪಿಸುವ ಜವಾಬ್ದಾರಿ ಹೊತ್ತಿದೆಯೇನೋ ಎನಿಸುತ್ತದೆ.

ಮನುಷ್ಯ, ಹಣ್ಣಿಗಿಂತ ದಾಳಿಮಾಡುವುದು ಅದರ ಎಲೆಗಳಿಗೇ ಮೊದಲು. ಹಬ್ಬಗಳಲ್ಲಿ ಮಾವಿನ ತಪ್ಪಲಿಗಾಗಿ, ಮಂಗಳಿಗಿAತ ಹೆಚ್ಚಾಗಿ ಮಾವಿನಮರಕ್ಕೆ ಎಡತಾಕುತ್ತಾರೆ. ಎಲ್ಲ ಪ್ರಮುಖ ಹಬ್ಬಗಳಲ್ಲೂ ಮಾವಿನ ತೋರಣ ಕಟ್ಟುತ್ತಾರಾದರೂ, ಆ ಹಬ್ಬಗಳು ಕೇವಲ ಬಾಗಿಲ ತೋರಣದಲ್ಲಿ ಎಲೆಯನ್ನುಟ್ಟು ತೃಪ್ತಿಪಟ್ಟುಕೊಳ್ಳಬೇಕು. ಯುಗಾದಿಯಲ್ಲಿ ಮಾತ್ರ ತೋರಣದ ಜೊತೆಗೆ ಮಾವು ಕೂಡ ಅನೇಕ ವಿಧಗಳಲ್ಲಿ ಸವಿಯಲು ಲಭ್ಯವಿರುತ್ತದೆ. ದಾರಕ್ಕೆ ಎಲೆಗಳ ತೊಟ್ಟನ್ನು ಹಿಂಬಾಗಿಸಿ ಅಥವಾ ಮುಂಬಾಗಿಸಿ ಎಲೆಯೊಳಗೆ ತೂರಿಸಿ, ಒತ್ತಾದ ತೋರಣ ಕಟ್ಟುತ್ತಾರೆ. ಆಕಡೆ ಈಕಡೆ ಹೆಣ್ಣುಮಕ್ಕಳ ಎರಡು ಬದನೆಕಾಯಿ ಜಡೆಗಳಂತೆ, ಬೇವಿನ ತಪ್ಪಲು ಸಿಕ್ಕಿಸಿದಾಗಲೇ ಹಬ್ಬ ಸಂಪನ್ನ. ಯುಗಾದಿ ಬರುವವರೆಗೂ ಮಾವಿನಕಾಯಿಯನ್ನು ಬಾಯಿಗಿಡದಂತೆ ಹಿರಿಯರು ಜೋರು ಬಾಯಿ ಮಾಡುತ್ತಿರುತ್ತಾರೆ. ಅವರ ಕಣ್ತಪ್ಪಿಸಿ ಮರಕ್ಕೆ ಕಲ್ಲು ಹೊಡೆದು ಹೀಚುಕಾಯಿಯನ್ನೋ, ಎಳೆಕಾಯಿಯನ್ನೋ ಹೊಡೆದು ಬೀಳಿಸಿ, ಆಮ್‌ಚೂರುಗಳನ್ನಾಗಿ ಮಾಡಿಕೊಂಡು ಉಪ್ಪು ಖಾರ ಹಚ್ಚಿಕೊಂಡು ತಿನ್ನುವ ಆಮ್‌ಚೋರ್‌ಗಳೂ ಇರುವರು. ಮಿಡಿಗಾಯಿಗಳ ಬೇಟೆಯಾಗಿ, ಉಪ್ಪಿನಲ್ಲಿ ತೈಯ್ಯಾ ತಕ್ಕಾ ಎಂದು ಮುಳುಗೇಳುತ್ತಿರುತ್ತವೆ.

ಫೋಟೋ ಕೃಪೆ : ಅಂತರ್ಜಾಲ

ಯುಗಾದಿಯಂದು ಹೋಳಿಗೆಯ ಜೊತೆಗೆ, ಆಗ ತಾನೇ ಪತಿಯ ಮನೆಗೆ ತುಂಬು ಸೇರೊದ್ದು, ನಾಚುತ್ತಾ ನವವಧುವಿನಂತೆ ಕಾಲಿಟ್ಟ ಹಣ್ಣುಗಳ ಸೀಕರಣೆ, ಆಕೆ ಹೊಸಪರಿಸರಕ್ಕೆ ಹೊಂದಿಕೊಳ್ಳಲು ಹೆಣಗಾಡುವಂತೆ ಸ್ವಲ್ಪ ಹುಳಿಹುಳಿಯೇ. ಮುಂದೆ ಹದಿನೈದು ದಿನಗಳಲ್ಲಿ ಸುರಿಮಳೆಯಂತೆ, ‘ಎಲ್ಲೆಲ್ಲಿ ನೋಡಲೀ, ನಿನ್ನನ್ನೇ ಕಾಣುವೆ’ ಎನ್ನುವಂತೆ ಎಲ್ಲೆಡೆ ಮಾವಿನ ಘಮಲು. ಧಿಮ್ಮನೆ ಹೆಣ್ಣುಮಕ್ಕಳು ಹುಳಿಮಾವಿನಕಾಯಿ ತಿನ್ನುವ ಬಯಕೆ ಹತ್ತಿಕ್ಕಲಾಗದೆ ಹೋಗುವರು. ‘ಉಂಡು ಮಾವು ತಿನ್ನು’ ಎಂದು ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ, ಮಾವನ್ನೇ ಹೊಟ್ಟೆ ತುಂಬುವಂತೆ ತಿನ್ನುವವರೇ ಹೆಚ್ಚು. ಮಕ್ಕಳ ಪರೀಕ್ಷೆಗಳೆಲ್ಲ ಮುಗಿದ ನಂತರವೇ ಈ ಹಣ್ಣಿನ ರಾಜನ ಆಗಮನವಾಗುವುದರಿಂದ, ತಿಂದು ತಿಂದು ಹೊಟ್ಟೆ ಉಬ್ಬರಿಸಲಿ, ಕೆಡಲಿ ‘ಮಾವು…ಬಿಡೆವು ನಿನ್ನ ನಾವು’ ಎನ್ನುವ ಪಾಲಿಸಿಯನ್ನು ಪಾಲಿಸುವ ಪಾಲಿಸಿದಾರರಾಗುವುದು ಹೆಚ್ಚು.

ಮಾವು ತಿನ್ನುವುದೂ ಸಹ ಒಂದು ಕಲೆ. ನಯನಾಜೂಕಿನಿಂದ ಮುಟ್ಟಲೋ ಬೇಡವೋ ಎಂಬಂತೆ ಹಿಡಿದು, ಹಗೂರಾಗಿ ಸಿಪ್ಪೆ ಎಳೆದು, ಚಾಕೂ ತೆಗೆದುಕೊಂಡು, ಜ್ಯಾಮಿಟ್ರಿಕಲ್ ಫಿಗರ್‌ಗಳಂತೆ ಕಣ್ಣಿನಲ್ಲೇ ಕರಾರುವಕ್ಕಾಗಿ ಲೆಕ್ಕ ಹಾಗಿ ಉದ್ದುದ್ದ, ಅಡ್ಡಡ್ಡ ಸ್ಲೆಸ್ ಮಾಡಿ, ಚಂದನೆಯ ತಟ್ಟೆಯಲ್ಲಿಟ್ಟುಕೊಂಡು, ಉಗುರಿನಿಂದ ನೀಟಾಗಿ ಎಬ್ಬಿ ಅಥವಾ ಮಿಕ್ಸಿಯಲ್ಲಿ ರುಬ್ಬಿ ತಿನ್ನುವವರಿಗೆ ಅದರ ರುಚಿ ತಿಳಿಯಲು ಸಾಧ್ಯವಿಲ್ಲ. ಮಾವಿನ ಬಾಕ್ಸ್ ಮುಂದೆ (ಹಿಂದಿನ ಕಾಲದಲ್ಲಿ ಬುಟ್ಟಿ) ಪಟ್ಟಾಗಿ ಚಕ್ಕಳಮಕ್ಕಳ ಹಾಕಿ ಕುಳಿತು, ಹಣ್ಣಾಗಿರುವ ಮಾವಿನ ಕಂಡೀಷನ್‌ನನ್ನು, ಕಣ್ಣಿನಿಂದಲೇ ಸ್ಕಾನ್ ಮಾಡಿ, ನಾಸಿಕದ ಬಳಿ ಹಿಡಿದು ಆಘ್ರಾಣಿಸಿ, ವೈದ್ಯರು ಸ್ಟೆಥೋಸ್ಕೋಪ್ ಹಿಡಿದು ಟೆಸ್ಟ್ ಮಾಡುವಂತೆ, ಕೈಗಳಿಂದ ಅಲ್ಲಲ್ಲಿ ಒತ್ತಿ ಕನ್ಫರ್ಮ್ ಮಾಡಿಕೊಳ್ಳಬೇಕಾಗುತ್ತದೆ. ಅದರ ಕೇರನ್ನು ಕಿತ್ತು, ಇಡೀ ಮೈಯನ್ನು ಆಲೂಗಡ್ಡೆ ಹಿಸುಕಿದಂತೆ ಹಿಸುಕಿ ಮೆತ್ತಗಾಗಿಸಿ ಹೀರುವ ಹೀರೋ/ಯಿನ್ ಗಳು ಒಂದೆಡೆಯಾದರೆ, ಅದರ ಸಿಪ್ಪೆಯನ್ನು ದುಶ್ಯಾಸನ ದ್ರೌಪದಿಯ ವಸ್ತಾçಪಹರಣ ಮಾಡುವಂತೆ ಸರಸರ ಎಳೆದಂತೆಳೆದು, ಆ ಸಿಪ್ಪೆಯನ್ನೂ ಹಲ್ಲುಗಳಿಂದ ಜೆಸಿಬಿ ಕೆರೆದಂತೆ ಕೆರೆದು, ನಂತರ ಹಣ್ಣಿನ ಖಂಡವನ್ನೆಲ್ಲ ಖಂಡಾಂತರ ಮಾಡಿ ಬಾಯಿಗಿಳಿಸಿ, ಖಾಲಿ ಗೊಟ್ಟದ ಸುತ್ತಲ ಅಂಚನ್ನು ಇಂಚು ಇಂಚಾಗಿ ಸೀಪುವುದರ ಜೊತೆಗೆ, ಕೈಬೆರಳುಗಳು, ಅಂಗೈ, ಮುಂಗೈ ದಾಟಿ ಮೊಣಕೈವರೆಗೂ ಇಳಿದ ಮಾವಿನ ರಸವನ್ನು, ನಾಲಗೆಯಿಂದ ನಾಯಿ ನೆಕ್ಕುವ ಹಾಗೆ ನೆಕ್ಕಿದಾಗಲೇ ಸಂತೃಪ್ತಿ. ಹೀಗೆ ಸಿಕ್ಕಾಪಟ್ಟೆ ಆಮ್ ತಿಂದು, ಆಮ್‌ಶಂಕೆ ಹತ್ತಿದರೂ ಬಿಡದೆ ಭುಜಿಸುವ ಇವರನ್ನು ಆಮ್ ಆದ್ಮಿ ಪಾರ್ಟಿಯವರು ಎಂದು ಒಪ್ಪಬಹುದು.

ಮದುವೆಗಳೆಲ್ಲಾ ಹೆಚ್ಚಾಗಿ ಮಾವಿನಕಾಲದಲ್ಲಿಯೇ ನಡೆಯುವುದರಿಂದ, ಬಡವ ಬಲ್ಲಿದರೆನ್ನದೆ ಎಲ್ಲರ ಮನೆಯಲ್ಲಿಯೂ ಹೋಳಿಗೆ ಸೀಕರಣೆಯ ಮೆನು ಒಂದು ಹೊತ್ತಾದರೂ ಊಟಕ್ಕೆ ಇದ್ದೇ ಇರುತ್ತದೆ. ಚಿತ್ರಾನ್ನ, ಸಾರು, ಗೊಜ್ಜು, ಚಟ್ನಿ, ತೊಕ್ಕು, ಉಪ್ಪಿನಕಾಯಿ, ಗುಳಂಬ, ಜ್ಯಾಮು, ಮಿಲ್ಕ್ಶೇಕು, ಆಮ್ರಖಂಡ, ಜ್ಯೂಸ್, ಐಸ್‌ಕ್ರೀಮು, ಕೇಕು ಎಲ್ಲ ಮಾವುಮಯ. ಮಾವಿನ ಮಾವ್‌ಸಮ್ ಮುಗಿಯುವ ತನಕ, ಅದರಿಂದ ತಯಾರಾಗುವ ಎಲ್ಲ ಪದಾರ್ಥಗಳನ್ನೂ ‘ಆಸಮ್’ ಎನ್ನುತ್ತಲೇ ತಿನ್ನುವ ಚಪಲಕ್ಕೆ ಅಂಕುಶ ಹಾಕಲಾಗದ ಮಾವುತರಾಗಿಬಿಡುವರು. ಮಾವಯ್ಯ, ಮಾವ್‌ಶಿ ಹೀಗೇ ಮನೆಗೆ ಯಾರೇ ಅತಿಥಿಗಳು ಬಂದರೂ, ಮಾವು-ಲಾವೋ-ಖಾವೋ-ಜಾವೋ ಕಾರ್ಯಕ್ರಮ ಸದಾ ಜಾರಿಯಲ್ಲಿರುತ್ತದೆ. ಆಮ್‌ದನಿ ಕಡಿಮೆ ಇರಲಿ, ಹೆಚ್ಚಿರಲಿ, ಆಮ್‌ಗಾಗಿ ಹೂಡಿಕೆ ಇದ್ದೇ ಇರುತ್ತದೆ.

ಫೋಟೋ ಕೃಪೆ : ಅಂತರ್ಜಾಲ

ಮಾವಿನಲ್ಲಿಯೂ ಹತ್ತಾರು ತಳಿಗಳಿವೆ. ಪ್ರತಿಯೊಂದು ಬ್ರಾಡ್‌ಗೂ ಅದರದ್ದೇ ಆದ ಅಭಿಮಾನಿಗಳಿರುವವರು. ಈ ಎಲ್ಲ ಮಾ(ವು)ಡೆಲ್‌ಗಳಲ್ಲಿ ಆಪೂಸ್ ಎನ್ನುವ ತಳಿ ‘ಶೋ ಸ್ಟಾಪರ್’ ಇದ್ದ ಹಾಗೆ. ಅಲ್ಫಾನ್ಸೋ ಎಂದೇ ಗುರುತಿಸಿಕೊಳ್ಳುವ ಈ ತಳಿಗೆ ‘ All are fans’ ಎನ್ನಬಹುದು. ಕಲ್ಮಿಮ ಒನಪು, ರಸಪೂರಿಯ ಘಮಲು, ಮಲ್ಲಿಕಾಳ ಸೊಬಗು, ಮಲಗೋಬಾದಂತಹ ದೈತ್ಯ ಹೀಗೆ ಹತ್ತಾರು ತಳಿಗಳು ಮಾವುವಾದಿಗಳ ರುಚಿ ತಣಿಸುತ್ತವೆ. ಇತಿಹಾಸದಲ್ಲಿ ಮಾವಿನಮರದ ಕೆಳಗೆ ದೊರೆತ ಹೆಣ್ಣು ಶಿಶು ‘ಆಮ್ರಪಾಲಿ’ ಎನ್ನುವ ಹೆಸರಿನಿಂದಲೇ ಪ್ರಸಿದ್ಧಿಯಾಗಿರುವ ರಾಜನರ್ತಕಿಯ ಬಗ್ಗೆ ತಿಳಿದೇ ಇದೆ. ಮಾವಿನಿಂದ ಅವಳಿಗೆ ಹೆಸರು ಬಂದಂತೆ, ಈ ಕಾಲದಲ್ಲಿ ಅವಳ ಹೆಸರಿನಿಂದಲೇ ಮಾವಿನ ತಳಿಯೊಂದು ಗುರುತಿಸಿಕೊಂಡಿರುವುದು ವಿಶೇಷ.

ಮಾವು ದೇಹದ ತೂಕವನ್ನು ಹೆಚ್ಚಿಸುವಲ್ಲಿ ಸಹಕಾರಿಯಂತೆ. ಆದರೆ ತೂಕವನ್ನು ಇಳಿಸುವವರೇ ಹೆಚ್ಚಾಗಿರುವುದರಿಂದ ಮಾವು ಕಾಲಿಡುವ ಮೊದಲು, ಹೊಸವರ್ಷದಲ್ಲಿ ಟುಸ್ ಪಟಾಕಿಯಂತೆ ಮಕಾಡೆ ಮಲಗುವ ರೆಸಲ್ಯೂಷನ್‌ಗಳಂತೆ, ಪ್ರತಿವರ್ಷ ಮಾವಿನಿಂದ ಅಂತರ ಕಾಯ್ದುಕೊಳ್ಳುವ ಬಹುತೇಕರ ಸಂಕಲ್ಪ ಕೂಡಾ, ಅದರ ಆಕರ್ಷಣೆಯಿಂದ ಅಷ್ಟು ಸುಲಭವಾಗಿ ತಪ್ಪಿಸಿಕೊಳ್ಳಲಾಗದೆ ಇಲ್ಯೂಷನ್ಸ್ನಲ್ಲೇ ಮುಕ್ತಾಯವಾಗಿ, ಮತ್ತೆ ಮುಂದಿನ ವರ್ಷಕ್ಕೆ ಮುಂದೂಡಿ ಮನಸೋಇಚ್ಛೆ ಸವಿಯುವ ಮ್ಯಾಂಗೋಲಿಯನ್‌ಗಳಾಗುತ್ತಾರೆ.

ಎಂತೆಂತಹ ಕಟ್ಟುನಿಟ್ಟಾಗಿ ಆieಣ ಪಾಲಿಸುವ ವೀರಾಗ್ರಣಿಗಳು ಕೂಡಾ, ಮಾವಿನ ಸಂಪರ್ಕಕ್ಕೆ ಬರುತ್ತಿದ್ದ ಹಾಗೆ, ವಿಶ್ವಾಮಿತ್ರನ ತಪಸ್ಸು ಮೇನಕೆಯ ರೂಪ, ಲಾವಣ್ಯ, ನೃತ್ಯಕ್ಕೆ ಭಂಗವಾಗಿ ಶರಣಾದಂತೆ, ಮಾವಿನ ರೂಪ, ಘಮಲುವಿಗೆ ಮರುಳಾಗಿ Die to eat’ ತತ್ವಕ್ಕೆ ಶರಣಾಗುವವರು. ಮಧುಮೇಹಿಗಳಿಗೆ ಸವತಿಯಂತೆ ಕಾಣು(ಡು)ವ ಈ ಮೂರು ತಿಂಗಳ ಮಾವೆಂಬ ಅತಿಥಿಯ ಮೋಹದೊಳಗೆ ಸಿಲುಕದಂತೆ ಮನೋನಿಗ್ರಹವೇ ದೊಡ್ಡ ಸವಾಲು.

ಇದರ ಕಾಲ ಮುಗಿಯಲು ಬಂದರೂ ಮಾವುಪ್ರಿಯರ ತಿನ್ನುವ ಹುಮ್ಮಸ್ಸು ಕಡಿಮೆಯಾಗುವುದಿಲ್ಲ. ಮಳೆ ಬಿತ್ತೂ ಎಂದರೆ ಮಾವಿಗೆ ಹುಳ ಬಿತ್ತೂ ಅಂತಲೇ ಅರ್ಥ. ಕೋಗಿಲೆ ಸ್ವಾಗತ ಕೋರಿದಂತೆ, ಹುಳುಗಳು ವಿದಾಯ ಕೋರಲು ಬರುವುವು. ಹುಳುಗಳ ಸೈನ್ಯ ಹಣ್ಣಿಗೆ ದಂಡು ದಂಡಾಗಿ ಅಟ್ಯಾಕ್ ಮಾಡಿದಾಗಲೇ, ಸವಿಯುವ ಚಪಲಕ್ಕೆ ತಣ್ಣೀರೆರಚಿದಂತಾಗಿ, ಮಾವಿನಿಂದ ದೂರಸರಿಯುವವರು. ಆದರೂ ಯಥೇಚ್ಛವಾಗಿ ದೊರೆಯುವ ಸಮಯದಲ್ಲಿ ಕಾಯಿಗಳನ್ನು ಉಪ್ಪಿನಲ್ಲಿ ನೆನೆ ಇಡುವುದೋ, , ಹಣ್ಣಿನ ತಿರುಳನ್ನು ಸಕ್ಕರೆಯಲ್ಲಿ ಸಂಸ್ಕರಿಸಿ ಅಥವಾ ಕಾಯಿತುರಿದು ಫ್ರೀಜರ್‌ನಲ್ಲಿ ಇಡುವುದೋ ಒಟ್ಟಿನಲ್ಲಿ ಕಾಲ ಮುಗಿದ ನಂತರವೂ, ವಾರ್ಷಿಕ ಯೋಜನೆಗೆ ಮಾವನ್ನು ಫಿಕ್ಸ್÷್ಡ ಡೆಪಾಸಿಟ್ ರೀತಿಯಲ್ಲಿ ಸಂರಕ್ಷಿಸುವವರಿದ್ದಾರೆ.
ವರ್ಷಕ್ಕೊಮ್ಮೆ ತವರುಮನೆಗೆ ತಕತಕನೆ ಕುಣಿಕುಣಿಯುತ್ತಾ ಬರುವ ಮುದ್ದಿನ ಮಗಳಂತೆ ಆಗಮಮಿಸುವ ಮಾವು, ಎಲ್ಲರೊಂದಿಗೆ ಸಖ್ಯ, ಅನ್ಯೋನ್ಯತೆ ಸಾಧಿಸಿ, ಮನತಣಿಸಿ, ನೆನಪುಗಳ ಹೊಸೆದು, ಅನುಬಂಧಗಳ ಬೆಸೆದು, ಮತ್ತೆ ಅದೇ ಪ್ರೀತಿಯಿಂದ ವಾಪಸಾಗುವ ಭರವಸೆಯಿತ್ತು ಭಾವಪೂರ್ಣ ವಿದಾಯ ಹೇಳಿಸಿಕೊಳ್ಳುತ್ತ ಮರೆಯಾಗುವ ರೀತಿ ಅನನ್ಯ.


  • ನಳಿನಿ ಟಿ. ಭೀಮಪ್ಪ – ಧಾರವಾಡ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading