‘ತೋಡರಂ’ ಸಿನಿಮಾವನ್ನು ತಪ್ಪದೆ ನೋಡಿ

ದಕ್ಷಿಣ ಸಿನಿಮಾದ ಖ್ಯಾತ ನಟ ಮೋಹನ್ ಲಾಲ್ ಅವರ ಅಭಿನಯದ ‘ತೋಡರಂ’ ಸಿನಿಮಾವು 9 ದಿನಗಳಲ್ಲಿ 145 ಕೋಟಿ ರೂ. ಗಳಿಸಿದೆ. ಈ ಚಿತ್ರವು ಈಗ OTT ಯಲ್ಲಿಯೂ ಸಹ ಸಂಚಲನ ಮೂಡಿಸಲಿದೆ. ಈ ಸಿನಿಮಾದ ಕುರಿತು ಪ್ರಶಾಂತ್ ಸಾಗರ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…

ದಿನಾ ಬೆಳಿಗ್ಗೆ ಎದ್ ತಕ್ಷಣ ಮಾಡೋ ಕೆಲಸಗಳಲ್ಲಿ ಸ್ಕೂಟಿ ಧೂಳು‌ ಒರೆಸೋದು ಕೂಡ ಒಂದು. ಬಿಸಿಲಿದ್ದಾಗ ನೆರಳು‌ ಹುಡುಕಿ ನಿಲ್ಲಿಸೋದು, ಮಳೆ ಬಂದಾಗ ಓಡ್ಹೋಗಿ ಕವರ್ ಹೊದಿಸೋದು, ಕೆಸರಾದಾಗ ಕ್ಲೀನಾಗಿ ತೊಳಿಯೋದು, ಸಮಯಕ್ಕೆ ಸರಿಯಾಗಿ ಸರ್ವೀಸ್ ಮಾಡಿಸೋದು ತಮ್ಮ ಗಾಡಿಯನ್ನು ಪ್ರೀತಿಸುವವರೆಲ್ಲರ ಜೀವನದ ಅವಿಭಾಜ್ಯ ಅಂಗ. ಹಾಗೆ ಸರ್ವೀಸ್ ಕೊಟ್ಟಾಗಲೆಲ್ಲ ಎರಡ್ಮೂರು ದಿನ ಅದೆ ರಸ್ತೇಲಿ ಓಡಾಡುವಾಗ ನಮ್ ಗಾಡಿ ಸರದಿ ಬರೋವರೆಗು ಹತ್ತಾರು ಗಾಡಿಗಳ ಮಧ್ಯೆ ಅನಾಥವಾಗಿ ನಿಂತಿದ್ದನ್ನ ನೋಡಿ, ‘ಅವರು ಸರ್ವಿಸ್ ಯಾವಾಗ್ಲಾದ್ರು ಮಾಡಿಕೊಡ್ಲಿ.‌ ಅಲ್ಲಿವರೆಗೂ ಧೂಳಾದ್ರು ಒರೆಸೋಣ, ನೆರಳಲ್ಲಾದ್ರು ನಿಲ್ಲಿಸೋಣ’ ಅನಿಸ್ತಿರುತ್ತೆ‌. ಇದೇ ರೀತಿ ಮಲೆಯಾಳಂ ‘ತೋಡರಂ’ ಸಿನಿಮಾದಲ್ಲಿ ನಾಯಕ ಯಾವುದೋ ಕಾರ್ಯನಿಮಿತ್ತ ಊರಿಗೆ ಹೋಗಿ ಬರೋದ್ರೊಳ್ಗೆ ಅವನ ಕಾರು ಪೊಲೀಸ್ ಸ್ಟೇಶನ್ ಅಂಗಳದಲ್ಲಿ ನಿಂತಿರುತ್ತೆ. ಕೇಸ್ ಇತ್ಯರ್ಥ ಆಗೋವರೆಗೂ ಕಾರು ಬಿಡೋಕಾಗಲ್ಲ ಅಂತ ಅದನ್ನ ಅಲ್ಲೆ ಉಳಸ್ಕೋತಾರೆ. ತನ್ನ ಕುಟುಂಬ ಪೋಷಿಸುತ್ತಿದ್ದ ಆ ಬಾಡಿಗೆ ಹೊಡಿತಿದ್ದ ಕಾರು ಕಸ ಧೂಳಿಂದ ಕೊಳೆಯಾಗೋದನ್ನ ನೋಡೋಕಾಗ್ದೆ ನಾಯಕ ಬಕೆಟಲ್ಲಿ ನೀರು ತಗೊಂಡು ಅಲ್ಲೆ ಕಾರು ತೊಳಿಯೋಕೆ ಹೋಗ್ತಾನೆ! ನಮಗೆ ಅನಿಸುವಂತಹ ಇಂತ ಸಾಮಾನ್ಯ ಸಂಗತಿಗಳನ್ನೇ ಸಿನಿಮಾದ ತೆರೆಮೇಲೂ ನೋಡಿದಾಗ ನಮ್ಮನ್ನ ನಾವು ನಾಯಕನಲ್ಲಿ ಕಂಡುಕೊಂಡು ಆ ಸಿನಿಮಾ ನಮಗೆ ಇನ್ನಷ್ಟು ಆಪ್ತವಾಗುತ್ತೆ.

ಈ ಚಿತ್ರದಲ್ಲಿ ನಂಗೆ ವಿಶೇಷ ಅನಿಸಿದ್ದು ಎರಡು ಸಂಗತಿಗಳು. ಒಂದು, ಮುಖ್ಯ ಖಳನಟರಾಗಿ ಮಾಡಿದ ಪ್ರಕಾಶ್ ವರ್ಮಾ ಅವರ ಪಾತ್ರದ ಗ್ರಾಫ್ ದೃಶ್ಯದಿಂದ ದೃಶ್ಯಕ್ಕೆ ಏರುತ್ತಾ ಹೋಗುವುದು. ಮೋಹನಲಾಲ್ ಅವರು ಎಂಥ ನಟ ಅನ್ನೋದು ಮೂರು ದಶಕಗಳಿಂದಲೂ ಎಲ್ರಿಗೂ ಗೊತ್ತು. ಆದ್ರೆ ತಮ್ಮ ಮೊದಲನೆ ಸಿನಿಮಾದಲ್ಲೆ ನಾಯಕನಿಗೆ ಪೈಪೋಟಿ ನೀಡೋ ಹಾಗೆ ಪ್ರಕಾಶ್ ವರ್ಮಾ ಅಭಿನಯಿಸಿದ್ದು ಅಚ್ಚರಿಯ ಖುಷಿ.

ಫೋಟೋ ಕೃಪೆ : ಅಂತರ್ಜಾಲ

ಇನ್ನೊಂದು, ನಾಯಕನ ಹಿಂದಿನ ಕತೆ ಹೇಳುವಾಗ ಅದ್ರಲ್ಲಿ ನಾಯಕನ ಗೆಳೆಯ ಅಂತ ವಿಜಯ್ ಸೇತುಪತಿ ಅವರ ಫೋಟೋ ತೋರಿಸ್ತಾರೆ. ಆಮೇಲೆ ನಾವು ಆ ಕತೆ ಹೇಳಿ ಮುಗಿಸೋವರೆಗೂ ಅದ್ರಲ್ಲಿ ವಿಜಯ್ ಸೇತುಪತಿ ಅವರ ಅಭಿನಯವನ್ನೇ ಕಲ್ಪಿಸಿಕೊಳ್ತಿವಿ. ಸಿನಿಮಾದಲ್ಲಿ ನೇರವಾಗಿ ಪಾತ್ರವನ್ನೇ ಮಾಡದೆ ನಮ್ಮ ಕಲ್ಪನೆಯಲ್ಲೆ ಅವರ ಅಭಿನಯ ಅಷ್ಟು ದಟ್ಟವಾಗಿ ಮೂಡುತ್ತೆ. ಇದು ಹೇಗೆ ಸಾಧ್ಯವಾಯ್ತು ಅಂತ ಯೋಚಿಸಿದ್ರೆ ವಿಜಯ್ ಸೇತುಪತಿ ತಮ್ಮ ಹಿಂದಿನೆಲ್ಲಾ ಸಿನಿಮಾಗಳಲ್ಲಿ ತಾನೊಬ್ಬ ಪರಿಪೂರ್ಣ ಕಲಾವಿದ ಅಂತ ಸಾಬೀತುಪಡಿಸಿರೋದ್ರಿಂದ.

ಸಾಮಾನ್ಯವಾಗಿ ನಾವು ಸಿನಿಮಾದವರು ಯಾವುದೇ ಸಿನಿಮಾ ನೋಡಿದ್ರೂ ‘ಇಲ್ಲಿ ಈ ಶಾಟ್ ಇರಬೇಕಿತ್ತು, ಅಲ್ಲಿ ಆ ಶಾಟ್ ಬೇಕಿತ್ತು’ ಅಂತ ಟೆಕ್ನಿಕಲ್ ಆಗಿ ಯೋಚಿಸ್ತಿರ್ತೀವಿ‌. ಆದ್ರೆ ಈ ಸಿನಿಮಾ ನೋಡುವಾಗ ನಂಗೆ ಯಾವ ದೃಶ್ಯದಲ್ಲೂ ಇದು ಅನಗತ್ಯ ಅಥವಾ ಇಲ್ಲಿ ಇದು ಅಗತ್ಯವಿದ್ದ ಶಾಟ್ ಅಂತ ಅನಿಸಲಿಲ್ಲ. ಅಷ್ಟು ಚೆನ್ನಾಗಿ ನಿರ್ದೇಶಕರು ತಮ್ಮ ಕೆಲಸ ಮಾಡಿದಾರೆ. ಮೋಹನಲಾಲ್ ಅವರ ಎರಡ್ಮೂರು ಸಿನಿಮಾಗಳು ಥಿಯೇಟರಲ್ಲಿ ‌ನೋಡಿದೀನಿ. ಆದ್ರೆ ಅವೇನು ಥಿಯೇಟರಲ್ಲೆ ನೋಡಬೇಕಾದ ಸಿನಿಮಾ ಅಂತ ಅನಿಸಿರಲಿಲ್ಲ. ಆದ್ರೆ ಈ ಸಿನಿಮಾ ಮಾತ್ರ ನಾನು ಥಿಯೇಟರಲ್ಲಿ ನೋಡದೆ ಓಟಿಟಿಲಿ ನೋಡಿದ್ದಿದ್ರೆ ಖಂಡಿತಾ ಮಿಸ್ ಮಾಡ್ಕೊಂಡೆ ಅನಿಸಿರೋದು.


  • ಪ್ರಶಾಂತ್ ಸಾಗರ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading