ನಿವೇದಿತಾ ರಘುನಾಥ್ ಭೀಡೆಯವರ ಕೃತಿ ಪರಿಚಯ

ನಿವೇದಿತಾ ರಘುನಾಥ್ ಭೀಡೆ ಅವರ ‘Swami Vivekanada’s vision and Indian Womanhood : The Road Ahead’ ಕೃತಿಯ ಕುರಿತು ಮೃಣಾಲಿನಿ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ,ತಪ್ಪದೆ ಮುಂದೆ ಓದಿ…

ಪುಸ್ತಕ: Swami Vivekanada’s vision and Indian Womanhood : The Road Ahead
ಭಾಷೆ : ಇಂಗ್ಲಿಷ್
ಲೇಖಕಿ : ನಿವೇದಿತಾ ರಘುನಾಥ್ ಭೀಡೆ.
ಪ್ರಕಾಶಕರು : ವಿವೇಕಾನಂದ ಕೇಂದ್ರ ಪ್ರಕಾಶನ ಟ್ರಸ್ಟ್
ಚೆನ್ನೈ. 2014

ಮನೋಹರವಾದ ಮೂರು ಸಾಗರಗಳ ತ್ರಿವೇಣಿ ಸಂಗಮದ ತಾಣ, ಭಾರತದ ದಕ್ಷಿಣ ತುದಿ ಕನ್ಯಾಕುಮಾರಿಗೆ ಪ್ರವಾಸಕ್ಕೆ ಹೋದಾಗ, ವಿವೇಕಾನಂದ ಶೀಲಾಸ್ಮಾರಕದಲ್ಲಿ ನನ್ನವರ ಹಿಂಡನ್ನು ಆಗಲಿ, ಒಂದು ಪುಸ್ತಕ ಮಳಿಗೆಯ ಒಳ ಹೊಕ್ಕು, ಅಲ್ಲಿದ್ದ ಪುಸ್ತಕಗಳ ರಾಶಿಯಿಂದ, ಕೆಲವೇ ನಿಮಿಷಗಳಲ್ಲಿ ಒಂದು ಪುಸ್ತಕ ಆಯ್ದು, ಕೊಂಡುಕೊಳ್ಳುವುದು ಎಷ್ಟು ಕಷ್ಟಕರ ಕೆಲಸ ಅಲ್ವಾ…? ಅಂತಹ ಸಂದರ್ಭದಲ್ಲಿ ಪುಸ್ತಕದ ಮುಖಪುಟ, ಶೀರ್ಷಿಕೆ ಎಷ್ಟು ಹೆಲ್ಪ್ ಮಾಡುತ್ತವೆ.

“ಎಲ್ಲಿ ಇದ್ದಿ….?” ಎಂದು ಮನೆಯವರು ಫೋನ್ ರಿಂಗಣಿಸುವುದ್ರೊಳಗೆ ನಾನು ಈ ಪುಸ್ತಕ ಖರೀದಿಸಿ ಆಚೆ ಬಂದಿದ್ದೆ, “ಇಲ್ಲೇ ಇದ್ದೆ… ” ಎಂದು ಹೇಳಿ ನನ್ನವರ ಗಡಿಬಿಡಿಯ ನಡುಗೆಯನ್ನು ಹಿಂಬಾಲಿಸಿದೆ. ನಂತರ ಸ್ವಸ್ಥಳಕ್ಕೆ ಮರಳಿದಾಗ ಈ ಪುಸ್ತಕ ಕೈಗೆ ಬಂದಿದ್ದು, ದಿನಕಳೆದಂತೆ ಸಾವಧಾನವಾಗಿ ಪುಸ್ತಕದ ವಿಷಯ ಮನನವಾಗಿದ್ದು. ಒಂದೊಂದು ಪುಟ ತೆರೆದಂತೆ, ಪುಸ್ತಕದ ಅಂತರಾಳ ನನ್ನ ಗ್ರಹಿಕೆಗೆ ದಕ್ಕುತ್ತಾ, ಪುಳಕ ಉಂಟು ಮಾಡಿತ್ತು. ನನ್ನ ಆಯ್ಕೆಗೆ ನಾನೇ ಸಂತೋಷಪಟ್ಟಿದ್ದೆ, ಬರೀ 60 ರೂಪಾಯಿ ಬೆಲೆ ಉಳ್ಳ ಈ ಹೊತ್ತಿಗೆ ಎಷ್ಟು ಉದಾತ್ತ ವಿಚಾರಗಳನ್ನು ಓದುಗರಿಗೆ ಹೊತ್ತು ತಂದಿದೆಯಲ್ಲ ಎಂದು ಚಕಿತಳಾಗಿದ್ದೆ.

ಹಾಗಾದ್ರೆ ಏನಿದೆ ಈ ಪುಸ್ತಕದಲ್ಲಿ? ಭಾರತೀಯ ಸ್ತ್ರೀತ್ವದ ವಿಕಸನ ಹೇಗಾಯಿತು…? ಭಾರತೀಯ ಮಹಿಳೆಯರ ಶಕ್ತಿ ಸಾಮರ್ಥ್ಯ, ಅವರ ಘನತೆ ಗೌರವದ ಬಗ್ಗೆ ಹಲವು ಮಹನೀಯರ ಅಭಿಪ್ರಾಯಗಳು ಮುಖ್ಯವಾಗಿ ಸ್ವಾಮಿ ವಿವೇಕಾನಂದರ ದೃಷ್ಟಿಕೋನವೇನು..? ಇದಲ್ಲದೆ, ಭಾರತೀಯ ಮಹಿಳೆಯ ವಿಕಸನದ ಮುಂದಿನ ಪಥವೇನು?.

ಇಷ್ಟೆಲ್ಲ ಗಹನ ವಿಷಯಗಳನ್ನು ಸರಳವಾಗಿ ಅರ್ಥವಾಗುವ ಇಂಗ್ಲಿಷ್ನಲ್ಲಿ ಸ್ಫೂಟವಾಗಿ ಮುದ್ರಿಸಲ್ಪಟ್ಟ ಈ ಪುಸ್ತಕ ಸಂಗ್ರಹ ಯೋಗ್ಯ, ಪುಸ್ತಕದ ಹಲವು ಮಾಹಿತಿಗಳನ್ನು ನನ್ನ ಲೇಖನಗಳಲ್ಲಿ ಆಗಾಗ ಬಳಿಸಿಕೊಂಡಿದ್ದೇನೆ ಕೂಡ.

ಪುಸ್ತಕದ ಕೊನೆಯ ಪುಟದಲ್ಲಿ ವಿನೋಬ ಭಾವೆ ಅವರ ಸಾಲುಗಳು ಮುದ್ರಿಸಿ, ಪುಸ್ತಕದ ಮೌಲ್ಯ ವರ್ಧಿಸಿದ್ದಾರೆ , ಮಹಿಳೆ ಎಂದರೆ ಶಕ್ತಿ ಎಂಬ ಅರ್ಥ ಬಿಂಬಿತವಾಗಿದೆ, “ನಾನು ಎಲ್ಲಿಯೂ ಮಹಿಳಾ ಸಂಘಗಳನ್ನು ಅಬಲಾ ಸಂಘ ಎಂದು ಹೆಸರಿಸಿದ್ದು ನೋಡಿಲ್ಲ, ಇದರ ಅರ್ಥ ಭಾರತೀಯ ಮಹಿಳೆಯರಿಗೆ ತಮ್ಮ ಶಕ್ತಿ ಸಾಮರ್ಥ್ಯವನ್ನು ವೃದ್ಧಿಸುವದಿದೆ”, ಎಂದು ವಿನೋಬಾ ಅವರು ಹೇಳುತ್ತಾರೆ.

ಪುಸ್ತಕದ ಪ್ರಥಮ ಅಂಕವಾಗಿ ಭಾರತೀಯ ಮಹಿಳೆ ನಡೆದು ಬಂದ ದಾರಿಯನ್ನು ವಿವರಿಸುತ್ತಾರೆ, ಅದರೊಟ್ಟಿಗೆ ಮಹಿಳೆಯರ ಮುನ್ನಡೆಯ ಬೇಕಾದ ಪಥವನ್ನು ಜೊತೆಗೆ ಅವರು ಎದುರಿಸಬಹುದಾದ ಸವಾಲುಗಳನ್ನು ವಿವರವಾಗಿ ಹೇಳುತ್ತಾರೆ. ನಮಗೆ ಭಾರತೀಯ ಮಹಿಳೆಯ ಸ್ಥಾನ ಮಾನದ ಬಗ್ಗೆ ಅಧ್ಯಯನ ಮಾಡಬೇಕೆಂದರೆ ನಾವು ಮೊದಲು ಬದುಕಿನ ಬಗ್ಗೆ ಭಾರತೀಯರ ದೃಷ್ಟಿಕೋನವೇನು ಎಂದು ತಿಳಿದುಕೊಳ್ಳಬೇಕು. ಒಂದು ನಾಗರೀಕತೆ ಹಾಗೂ ಸಂಸ್ಕೃತಿ ಬೆಳೆಯಬೇಕೆಂದರೆ ಆ ನೆಲದ ಮೌಲ್ಯಗಳು ಬಗ್ಗೆ ಅರಿವು ಅತೀ ಮುಖ್ಯವಾಗುತ್ತದೆ.

ಪಿಂಡದಿಂದ ಬ್ರಹ್ಮಾಂಡ ಎಂಬ ವಿಚಾರ ನಮ್ಮ ಎಲ್ಲ ಶಾಸ್ತ್ರಗಳು ಹೇಳುತ್ತವೆ, ಪುರುಷಸೂಕ್ತ ಹೇಳುವಂತೆ, ಕೆಲವು ಅಣುವಿನಿಂದ, ಸಹಸ್ರಾರು ಜೀವಕೋಶಗಳಾಗಿ ಅದರಿಂದ ಮೆದುಳಿನ ಜೀವಕೋಶ, ರಕ್ತದ ಜೀವಕೋಶ, ಯಕೃತ್ತಿನ ಜೀವಕೋಶಗಳು ಹೀಗೆ ಅನೇಕ ಗುಂಪಿನ ಜೀವಕೋಶಗಳಿಂದ ಮನುಷ್ಯನ ಅವಯವಗಳು ಬೆಳೆಯುತ್ತಾ ಹೋಗುತ್ತವೆ, ಒಂದು ಒಂದು ಹಿಡಿ ಮಾಂಸದ ಮುದ್ದೆಯಿಂದ, ಎಲ್ಲ ಅಂಗಾಂಗಗಳು ಜೀವಕೋಶಗಳು ಅವಯವಗಳು, ತಮ್ಮದೇ ಆದ ಕಾರ್ಯವೈಖರಿಯನ್ನು ಹೊಂದಿದ್ದು, ಮಾನವ ಶರೀರವಾಗಿ ಮಾರ್ಪಡಿಸುತ್ತದೆ. ಇಲ್ಲಿ ಒಂದಕ್ಕೊಂದು ಅವಲಂಬಿತವಾಗಿವೆ, ಭಿನ್ನತೆ ಇದ್ದರೂ ಕೂಡ ಅವಲಂಬಿತವಾಗಿ ಏಕತೆಯನ್ನು ತೋರಿಸುತ್ತವೆ. ಎಲ್ಲವು ಪರಸ್ಪರ ಸಂಬಂಧಿತವಾಗಿವೆ, ಇದೆ ಆಧುನಿಕ ಭೌತಶಾಸ್ತ್ರದ ಕ್ವಾಂಟಮ್ ಫಿಸಿಕ್ಸ್ ಪ್ರತಿಪಾದಿಸುತ್ತದೆ. ( physical phenomena at nanoscopic scales).

ಭಾರತೀಯ ಸಂಸ್ಕೃತಿಯ ಪ್ರಕಾರ ಮನುಷ್ಯ ಒಂದು ಪವಿತ್ರ ಆತ್ಮ ಎಂದು ಅಭಿಪ್ರಾಯವನ್ನು ಹೊಂದಿದೆ, ಪ್ರತಿಯೊಬ್ಬ ಪುರುಷ ಅಥವಾ ಮಹಿಳೆ ಒಂದು ಪವಿತ್ರ ಆತ್ಮ, ಭಾರತೀಯರ ಬದುಕಿನ ಉದ್ದೇಶ ಈ ಆತ್ಮದ ದಿವ್ಯತೆಯ ಅನುಭೂತಿ ಪಡೆಯುವುದು, ಆತ್ಮದ ಸಾಕ್ಷಾತ್ಕಾರವೇ ಭಾರತೀಯ ಬದುಕಿನ ಅಂತಿಮ ಉದ್ದೇಶ, ಆದ್ದರಿಂದ ಭಾರತೀಯ ಸಮಾಜ ಪುರುಷನಂತೆ ಸ್ತ್ರೀಯನ್ನು ಕೂಡ ಇದೇ ದೃಷ್ಟಿಕೋನದಿಂದ ನೋಡುತ್ತದೆ, ಇಬ್ಬರು ಆತ್ಮದ ಸಾಕ್ಷಾತ್ಕಾರವನ್ನೇ ಬಯಸುತ್ತಾರೆ, ಅರಸುತ್ತಾರೆ, ಇಲ್ಲಿ ಲಿಂಗ ತಾರತಮ್ಯ ಇಲ್ಲ ಯಾವುದೇ ಭೇದಭಾವ ಇಲ್ಲ. ಭಾರತೀಯ ಸಮಾಜದಲ್ಲಿ ಪುರುಷ ಮತ್ತು ಸ್ತ್ರೀಯ ನಡುವೆ ಸಹಕಾರದ ಅಪೇಕ್ಷೆ ಇದೆ ಹೊರತು ಸ್ಪರ್ಧೆ ಅಥವಾ ಪೈಪೋಟಿಗೆ ಬೆಂಬಲವಿಲ್ಲ. ‘ಬೃಹದಾರಣ್ಯಕ ಉಪನಿಷತ್’ ಪ್ರಕಾರ, ಒಂದು ಸಂಪೂರ್ಣ ಮಾನವನಾಗಲು ಪುರುಷ ಮತ್ತು ಸ್ತ್ರೀ ಇಬ್ಬರ ಅಗತ್ಯವಿದೆ, ಈ ವಿಚಾರವೇ ಅರ್ಧನಾರೀಶ್ವರ ಎಂಬ ಸಿದ್ಧಾಂತವನ್ನು ಬೆಳಕಿಗೆ ತರುತ್ತದೆ. ಇದೇ ಶಿವ ಮತ್ತು ಶಕ್ತಿಯ ಐಕ್ಯ, ಆಧ್ಯಾತ್ಮಿಕ ಹಾಗೂ ಲೌಕಿಕ ಜಗತ್ತಿನಲ್ಲಿ ಸ್ತ್ರೀ ಹಾಗೂ ಪುರುಷ ಇಬ್ಬರದೂ ಸಮಾನವಾದ ಮಹತ್ವವಿದೆ, ಪರಿಪೂರ್ಣ ಪುರುಷನಾಗಲು ಸ್ತ್ರೀ ಬೇಕು ಪರಿಪೂರ್ಣ ಸ್ತ್ರೀಯಾಗಲು ಪುರುಷ ಬೇಕು. ನಮ್ಮ ದೇವತೆಗಳು ಕೂಡ ತಮ್ಮ ಸ್ತ್ರೀ ಸಂಗಾತಿಯೊಂದಿಗೆ ಕಲ್ಪಿಸಲ್ಪಟ್ಟಿದ್ದಾರೆ, ಉದಾ ಲಕ್ಷ್ಮಿ- ವಿಷ್ಣು, ಶಿವ -ಪಾರ್ವತಿ, ಸಪ್ತಶತಿಯನ್ನು ನೋಡಿದರೂ ಕೂಡ ಮಾನವ ಕುಲಕ್ಕೆ ಘಾತಕರಾದ ಅಸೂರರನ್ನು ಕೂಡ ಸ್ತ್ರೀ ಹಾಗು ಪುರುಷ ದೇವತೆಗಳು ಜೊತೆಯಾಗಿಯೇ ಕೂಡಿ ನಾಶ ಮಾಡಿದ್ದಾರೆ.

ಆಧ್ಯಾತ್ಮಿಕ ಅರ್ಥದಲ್ಲಿ ಸ್ತ್ರೀ ಹಾಗೂ ಪುರುಷರು ಸಮಾನರು, ಆದರೆ ಅವರು ತಮ್ಮ ಬದುಕನ್ನು ನಡೆಸುವ ಪಾತ್ರಗಳಲ್ಲಿ, ಜವಾಬ್ದಾರಿಗಳಲ್ಲಿ, ಕರ್ತವ್ಯದಲ್ಲಿ ಭಿನ್ನತೆಯನ್ನು ಹೊಂದಿದ್ದಾರೆ, ತಮ್ಮ ಸಂಸಾರವನ್ನು ನಡೆಸುವಾಗ ಒಬ್ಬರನ್ನು ಅನುಸರಿಸಿ ಇನ್ನೊಬ್ಬರು ನಡೆಯುತ್ತಾರೆ, ಅವರವರದೇ ಆದ ಜವಾಬ್ದಾರಿಗಳು ಇವೆ, ಒಬ್ಬರ ಸ್ಥಾನವನ್ನು ಇನ್ನೊಬ್ಬರು ತುಂಬಲಾರರು ಎನ್ನುವ ಉದಾತ್ತ ವಿಚಾರಗಳನ್ನು ಈ ಪುಸ್ತಕದಲ್ಲಿ ನಿರೂಪಿಸಿದ್ದಾರೆ. ಈ ಪುಸ್ತಕದಲ್ಲಿ ಹಲವಾರು ಬಾರಿ ಸಪ್ತಶತಿಯ ಉಲ್ಲೇಖವಿದೆ, ಇಲ್ಲಿ ಮಹಿಳೆಯನ್ನು ಜಗಜ್ಜನನಿ ಎಂದು ವ್ಯಾಖ್ಯಾನಿಸುತ್ತಾರೆ.

ಮಹಿಳೆಯರು ಗೃಹಿಣಿಯಾಗಿ, ಸೃಜನೆಯಾಗಿ, ಪೋಷಕಿಯಾಗಿ, ಸಂವರ್ಧನ ಶಕ್ತಿಯಾಗಿ ತನ್ನ ಸಂಸಾರದ ಅಭಿವೃದ್ಧಿಗಾಗಿ ಸೀಮಿತವಾಗಿಲ್ಲ, ಸಂಪೂರ್ಣ ಸಮಾಜದಲ್ಲಿ ಸಾಮರಸ್ಯವನ್ನು ಸ್ಥಾಪಿಸಲು ಮಹಿಳೆಯ ಅಗತ್ಯವಿದೆ, ಧರ್ಮವನ್ನು ಸ್ಥಾಪಿಸುವ ವಿಶೇಷ ಶಕ್ತಿ ಮಹಿಳೆಯರಿಲ್ಲಿ ಮಾತ್ರ ಇದೆ, ಯಾವಾಗ ಮಹಿಳೆ ತನ್ನಲ್ಲಿರುವ ಈ ವಿಶೇಷ ಶಕ್ತಿ ಹಾಗೂ ಸಾಮರ್ಥ್ಯದ ಅರಿವಾಗುತ್ತದೆಯೋ ಆಗ ಅವಳು, ಎಲ್ಲೇ ಇದ್ದರೂ ಧರ್ಮದ ಮಾರ್ಗದಲ್ಲಿ ನಡೆಯುತ್ತಾಳೆ, ಮೌಲ್ಯವಿತ ಬದುಕನ್ನು ಸ್ಥಾಪಿಸುತ್ತಾಳೆ.

ಈ ಪುಸ್ತಕದ ಇನ್ನೊಂದು ಮಹತ್ವದ ಅಂಕ ಎಂದರೆ, ವೈದಿಕ ಯುಗದಲ್ಲಿ ಭಾರತೀಯ ಸ್ತ್ರೀಯರ ಪಾತ್ರವೇನಿತ್ತು ಎಂದು ಬಹಳ ಅದ್ಭುತವಾಗಿ ವಿವರಿಸಿದ್ದಾರೆ, ಯಾಜ್ಞವಲ್ಕ ಮಹಾಋಷಿಗಳ ಮೂಲಕ ಮಹಿಳೆಯರಲ್ಲಿರುವ ಅಪಾರ ಶಕ್ತಿಯನ್ನು ನಿರೂಪಿಸಿದ್ದಾರೆ, ಬ್ರಹ್ಮವಾದಿನಿಯರ ಬಗ್ಗೆ ವಿವರಣೆ ಕೊಟ್ಟಿದ್ದಾರೆ, ರಿಷಿಕೆಯರ ಪಟ್ಟಿ ಮಾಡಿದ್ದಾರೆ.
ಮುಖ್ಯವಾಗಿ ಅದಿತಿ -ಸೂರ್ಯ, ಸಾವಿತ್ರಿ, ಯಾಮಿ, ಸಚಿ, ಅಗಸ್ತ್ಯ,ವಾಸಾ, ಅಪಲ,ಅತ್ರೆಯಿ ಮುಂತಾದ ವೈದಿಕ ಯುಗದ ಸಾಧ್ವನಿಯರ ಬಗ್ಗೆ ಹೇಳಿದ್ದಾರೆ, ಅಲ್ಲಲ್ಲಿ ಸ್ವಾಮಿ ವಿವೇಕಾನಂದರ ಉಪನ್ಯಾಸದ ಸಾರಾಂಶವನ್ನು ಕೊಟ್ಟಿದ್ದಾರೆ, ಭಾರತೀಯ ಸ್ತ್ರೀಯರ ಬಗ್ಗೆ ಅವರಿಗಿದ್ದ ಗೌರವ ಹಾಗೂ ಆದರಗಳನ್ನು ಅವರ ವ್ಯಾಖ್ಯಾನದಲ್ಲಿ ನಾವು ನೋಡಬಹುದು.
ರಾಮಾಯಣ, ಮಹಾಭಾರತದ ಯುಗದಲ್ಲಿ ಸ್ತ್ರೀಯರ ಪಾತ್ರ ಹಾಗೂ ಅವರ ಮಹತ್ವವನ್ನು ಬಹಳ ಅರ್ಥಪೂರ್ಣವಾಗಿ ವಿವರಿಸಿದ್ದಾರೆ, ಈ ಯುಗದ ಸ್ತ್ರೀಯರಿಗೆ ಹಲವು ರೀತಿಯಲ್ಲಿ ಸಮಾಜದಲ್ಲಿ ಉನ್ನತ ಸ್ಥಾನಮಾನಗಳನ್ನುಕೊಟ್ಟಿದ್ದರು, ಅವರು ಧರ್ಮ ಪಾಲನೆ ಅಲ್ಲದೆ ರಾಜ್ಯಪಾಲನೆಯನ್ನು ಕೂಡ ಮಾಡಿದರು ಎಂದು ಹೇಳುತ್ತಾರೆ. ಪ್ರಜಾ ರಕ್ಷಣೆ ಅವರ ಕರ್ತವ್ಯವಾಗಿತ್ತು, ರಾಜಕುಮಾರಿ ಅಂಬೆ ಅಂತಹ ಸ್ತ್ರೀಯರು, ಕೈಕೈ ಅಂತಹ ಮಹಾರಾಣಿಯರು ಯುದ್ಧ ಕಲೆಯನ್ನು ಕೂಡ ಕಲಿತಿದ್ದರು, ರಣರಂಗದಲ್ಲಿ ಮಹಾರಾಜರ ಸಮಾನವಾಗಿ ನಿಂತು, ಆಯುಧಗಳಿಂದ ಅತ್ಯುಗ್ರ ಯುದ್ಧ ಮಾಡುತ್ತಿದ್ದರು.

ಮಹಾಭಾರತ ನಂತರ ಹಾಗೂ ಇಸ್ಲಾಮಿಕ್ ದಾಳಿಯ ತನಕ, ಭಾರತೀಯ ಸ್ತ್ರೀಯರ ಸ್ಥಾನಮಾನದಲ್ಲಿ ಬದಲಾವಣೆಯನ್ನು ಯಥಾವತ್ತಾಗಿ ಹಲವು ಉದಾಹರಣೆಯೊಂದಿಗೆ ಕೊಟ್ಟಿದ್ದಾರೆ, ಈ ಪುಸ್ತಕದ ಇನ್ನೊಂದು ವಿಶೇಷತೆ ಏನೆಂದರೆ 4, 5,10 ಹಾಗು 11 ಶತಮಾನಗಳಲ್ಲಿ ಕವಯಿತ್ರಿಗಳ ಲೇಖಕಿಯರ ಬಗ್ಗೆ ಪ್ರಸ್ತಾಪನೆ ಇದೆ, ಅನುಲಕ್ಷ್ಮಿ, ಅಸುಲಾಧಿ, ಮಾಧವಿ ಪ್ರಹತಾ ರೇವ, ರೋಹಾ, ಮುಂತಾದ ಶ್ರೇಷ್ಠ ಕವಿತ್ರಿಗಳು ಇದ್ದರು, ಅವರೆಲ್ಲರೂ ಸುಶಿಕ್ಷಿತರಲ್ಲದೆ ಪ್ರತಿಭಾವಂತರಿದ್ದರು ಅವರ ಪ್ರತಿಭೆಗೆ ಸಮಾಜದಲ್ಲಿ ಮನ್ನಣೆ ಕೂಡ ಇತ್ತು ಎಂದು ಹೇಳುತ್ತಾರೆ.
ಮೆಗಸ್ತಾನಿಸ್ ಪ್ರಕಾರ ಚಂದ್ರಗುಪ್ತನ ಆಡಳಿತದಲ್ಲಿ, ಮಹಿಳಾ ಅಂಗರಕ್ಷಕಿಯರಿದ್ದರಂತೆ, ಅವರಿಗೆ ಸೈನ್ಯದಲ್ಲಿ ಪ್ರವೇಶವಿತ್ತು ಜೊತೆಗೆ ಅವರಿಗೆ ಯುದ್ಧ ಕಲೆಯಲ್ಲಿ ತರಬೇತಿ ಕೊಡುತ್ತಿದ್ದರು.
ಭಾರತದಲ್ಲಿ ಬೌದ್ಧ ಧರ್ಮದ ಪ್ರಖ್ಯಾತಿಯಿಂದ ಸ್ತ್ರೀಯರು ಸನ್ಯಾಸಿಗಳಾಗುವ ಪದ್ಧತಿ ಪ್ರವರ್ಧಮಾನಕ್ಕೆ ಬಂದಿತು, ಇದನ್ನು ತಪ್ಪಿಸಲು ಸ್ತ್ರೀಯರ ಮದುವೆಯ ವಯಸ್ಸನ್ನು ಕಡಿತಗೊಳಿಸಲಾಯಿತು, ಎಲ್ಲಿ ಸ್ತ್ರೀಯರು ಸನ್ಯಾಸಿಗಳಾಗಿ ಸಮಾಜದ ಬೆಳವಣಿಗೆ ಕುಂಠಿತವಾಗುತ್ತದೆಯೋ ಎಂಬ ಆತಂಕದಿಂದ ಸ್ತ್ರೀಯರಿಗೆ ಚಿಕ್ಕ ವಯಸ್ಸಿನಲ್ಲಿ ಮದುವೆ ಮಾಡುವ ಪ್ರಥಾ ಬೆಳೆಯಿತು, ಮಹಿಳೆಯರ ಶೀಲ, ಹಾಗೂ ಪವಿತ್ತ್ರ್ಯತೆಯನ್ನು ಕಾಪಾಡಲು ಕೆಲವು ಬದಲಾವಣೆಗಳನ್ನು ತರಲಾಯಿತು, ಆದರೂ ಕೂಡ 16ನೇ ಶತಮಾನದಲ್ಲಿ ಕೂಡ ಮೃಗನಯನಾ, ಚಂದ್ರಕಲಾದೇವಿಯ, ರೂಪಮತಿ ಅಂತಹ ಮಹಾರಾಣಿಯರು ತಮ್ಮ ಪ್ರಜೆಗಳಿಗಾಗಿ ಸಿಂಹಾಸನದ ಮೇಲೆ ಕುಳಿತು ಆಡಳಿತ ನಡೆಸಿದ ಉದಾಹರಣೆಗಳು ಇಂದಿಗೂ ಇವೆ.

ಸ್ವಾಮಿ ವಿವೇಕಾನಂದರು ಹೇಳುತ್ತಾರೆ ನಮ್ಮ ಸ್ವತ್ತುಗಳಾದ ಮುತ್ತು ರತ್ನ ವಜ್ರಗಳನ್ನು ತೆರೆದು ಪಡಸಾಲೆಯ ಟೇಬಲ್ ಮೇಲೆ ಇಡುವುದಿಲ್ಲ , ಅವನ್ನು ಜತನದಿಂದ ಬೀರುವಿನಲ್ಲಿ ಇಡುತ್ತೇವೆ, ಯಾರ ಕಣ್ಣಿಗೂ ಬೀಳದಂತೆ ಸಂರಕ್ಷಿಸುತ್ತೇವೆ, ಯಾವಾಗ ಭಾರತದ ನೆಲದ ಮೇಲೆ ಮೊಘಲರು, ತುರ್ಕರು,ಅರಬರು ಪಠಾಣರು, ಮಂಗೋಲರು ಅಕ್ರಮಣ ಮಾಡಿದರು, ನೂರಾರು ವರ್ಷ ತಮ್ಮ ಕ್ರೂರತೆಯನ್ನು ಮಹಿಳೆಯರ ಮೇಲೆ ತೋರಿದರು ಆಗ ಭಾರತೀಯ ಸ್ತ್ರೀಯರು ತಮ್ಮ ಸ್ವಾತಂತ್ರ್ಯವನ್ನು ಕಳೆದುಕೊಂಡರು, ನಾಲ್ಕು ಗೋಡೆಗಳ ಬಂಧನಕ್ಕೊಳಗಾದರು, ಇದರಿಂದ ಅವರು ಶಾಲೆಗೆ ಹೋಗಿ ಶಿಕ್ಷಿತರಾಗುವುದರಿಂದ ಕೂಡ ವಂಚಿತರಾದರು, ಆದರೂ ಕೂಡ ಮನೆಯಲ್ಲಿ ಇದ್ದುಕೊಂಡು ಗುರು ಹಿರಿಯರಿಂದ ಧರ್ಮ ಮಾರ್ಗದಲ್ಲಿ ನಡೆಯುವ ಹಲವು ಪಾಠವನ್ನು ಅರಿತರು, ಸಂಸ್ಕಾರವನ್ನು ಅಳವಡಿಸಿಕೊಂಡರು, ತಮ್ಮ ಮುಂದಿನ ಪೀಳಿಗೆಗೆ ಮೌಲ್ಯಗಳನ್ನು ವರ್ಗಾಯಿಸಿದರು, ಮಕ್ಕಳನ್ನು ಪೋಷಿಸಿದರು, ಸ್ವಾರ್ಥ ಬುದ್ಧಿಯನ್ನು ತ್ಯಜಿಸಿ, ಸಮಾಜದ ಉದ್ಧಾರದ ಜವಾಬ್ದಾರಿಯನ್ನು ಹೊತ್ತರು.

ಸ್ವಾಮಿ ವಿವೇಕಾನಂದರು ಹೇಳುವ ಪ್ರಕಾರ….
There is no chance for the welfare of the world unless
The condition of women is improved. It is not possible for a bird to fly on only one wing.

ಈ ಪುಸ್ತಕದಲ್ಲಿ ಭಾರತೀಯ ನಾರಿಯರ ಮುಂದಿನ ಹೆಜ್ಜೆ ಹೇಗಿರಬೇಕು ಎಂಬ ಅಂಶಗಳನ್ನು ಸವಿಸ್ತಾರವಾಗಿ ಸೂಕ್ತ ಸಲಹೆಗಳೊಂದಿಗೆ ಕೊಟ್ಟಿದ್ದಾರೆ,ಮಹಿಳಾ ಸಬಲೀಕರಣದಲ್ಲಿ, ಪ್ರತಿಯೊಂದು ಸ್ಥರದಲ್ಲಿ ಮಹಿಳೆಯರ ಭಾಗವಹಿಸುವಿಕೆ ಪ್ರಮುಖ ಪಾತ್ರವಹಿಸುತ್ತದೆ, ಮಹಿಳೆ ತನ್ನ ಸಪ್ತಶಕ್ತಿಯನ್ನು ಜಾಗೃತಗೊಳಿಸಬೇಕು ಎಂದು ಒಂದು ಅತ್ಯಂತ ಮಹತ್ವದ ಸಲಹೆಯನ್ನು ನೀಡುತ್ತಾರೆ.

ಕೀರ್ತಿ, ವಿದ್ಯಾಶಕ್ತಿ, ವಾಕ್ ಶಕ್ತಿ, ಸ್ಮೃತಿ, ಮೇಧಾ, ದೃತಿ ಕ್ಷಮಾ ಇವೇ ಏಳು ಶಕ್ತಿಗಳು ಮಹಿಳೆಯನ್ನು ಸಶಕ್ತಳನ್ನಾಗಿ ಮಾಡಿಸುತ್ತವೆ. ಮಹಿಳೆಯು ತನ್ನ ಮನೆ ಹಾಗೂ ಸಂಸಾರವನ್ನು ಪ್ರಥಮ ಆದ್ಯತೆಯನ್ನಾಗಿ ಇಟ್ಟುಕೊಳ್ಳಬೇಕು, ಧರ್ಮದ ಮಾರ್ಗಕ್ಕೆ ಆದ್ಯತೆಯನ್ನು ಕೊಡಬೇಕು, ಮಹಿಳೆ ಗೃಹಲಕ್ಷ್ಮಿ ಆಗಬೇಕು, ತನ್ನ ಪರಿವಾರದ ಅಭಿವೃದ್ಧಿ ಹಾಗೂ ಕ್ಷೇಮವನ್ನು ಬಯಸಬೇಕು ಎಂದು ಹೇಳುತ್ತಾರೆ.

ಓದುತ್ತಾ ಹೋದಂತೆ ಈ ಪುಸ್ತಕ ನನಗೆ ಬಹಳಷ್ಟು ಹಿಡಿಸಿತು ಇಲ್ಲಿ ಪ್ರತಿಯೊಂದು ವಿಚಾರ, ವಿವೇಕಾನಂದರ ಬಗ್ಗೆ ನನಗಿದ್ದ ಗೌರವವನ್ನು ಇಮ್ಮಡಿಸಿತು, ನನ್ನ ದೇಶದ ಸಂಸ್ಕೃತಿಯ ಬಗ್ಗೆ ಹೆಮ್ಮೆ ಎನಿಸಿತು, ಇಂದಿನ ಸ್ತ್ರೀವಾದಿಗಳಿಗೆ ಈ ಪುಸ್ತಕವನ್ನು ಓದಿ ಹೇಳಲೇ… ಎಂದು ಮನ ತವಕಿಸಿತು,ನಾನೋದಿದ ಈ ಪುಸ್ತಕದ ಬಗ್ಗೆ ಪ್ರೀತಿ ಉಕ್ಕಿ, ಪುಸ್ತಕವನ್ನು ಎದೆಗವಚಿಕೊಂಡಾಯಿತು.


  • ಮೃಣಾಲಿನಿ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW