ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು – (ಭಾಗ-೨೯)

ಒಂದು ಪೈಸೆಯ ಪ್ರತಿಫಲಾಪೇಕ್ಷೆಯೂ ಇಲ್ಲದೆ ತನ್ನ ಸಂಸಾರಕ್ಕಾಗಿ ದುಡಿಯುವ ಗೃಹಿಣಿಗೆ ಕೃತಜ್ಞತೆ ಸಲ್ಲಲೇ ಬೇಕಲ್ಲವೇ? ಶಿಕ್ಷಕರು, ಲೇಖಕರಾದ ಶಿವದೇವಿ ಅವನೀಶಚಂದ್ರ ಅವರ ‘ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು’ ಅಂಕಣದಲ್ಲಿ ‘ಕಾರ್ಮಿಕ ದಿನದ ವಿಶೇಷತೆ’ ಕುರಿತು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ನಮ್ಮ ಮನೆಯ ಬಿಡಾರಗಳಲ್ಲಿ ಕಾಫಿ ಕೊಯ್ಲು ವೇಳೆಗೆ ಸಹಾಯಕರಾಗಿ ಬಂಗಾಳಿಗಳ ಎರಡು ಮೂರು ಕುಟುಂಬಗಳು ಬರುತ್ತವೆ. ಕನಿಷ್ಠ ಪಾತ್ರೆ ಚಾಪೆ ಹೊದಿಕೆಗಳೊಂದಿಗೆ ಬಂದು ಸುಮಾರು ಆರು ತಿಂಗಳು ನಮ್ಮ ತೋಟದ ಎಲ್ಲ ಕೆಲಸಗಳನ್ನೂ ಮಾಡಿ ಎಪ್ರಿಲ್ ವೇಳೆಗೆ ಹಿಂತಿರುಗಿ ಬಿಡುತ್ತಾರೆ.

ಅವರ ಅವಶ್ಯಕತೆಗಳೋ ತೀರಾ ಕನಿಷ್ಠ. ಬಂದವರೇ ಅಡುಗೆಗೊಂದು ಚೆಂದದ ಒಲೆಹಾಕುವುದೇ ಅವರ ಆದ್ಯತೆ. ಕುಸುಲಕ್ಕಿ ಅನ್ನ, ಚಪಾತಿ, ಆಲೂ ಸಬ್ಜಿ, ಅಪರೂಪಕ್ಕೊಮ್ಮೆ ಮಚ್ಛಿ (ಮೀನು) ಫ್ರೆೈ, ಮಂಗಳವಾರ ವಾರದ ರಜೆಯದಿನ ಸಂತೆಯಿಂದ ತಂದ ಚಿಕನ್ ಅಥವಾ ಮಚ್ಛಿ… ಹೀಗೆ ತೀರಾ ಮಿತ ಅಗತ್ಯಗಳೊಂದಿಗೆ ದಿನವನ್ನು ಖುಷಿಯಿಂದ ಕಳೆಯುತ್ತಾರೆ. ಚಳಿ ಮಳೆಗಳ ಪರಿವೆಯೇ ಇಲ್ಲ. ಮದ್ಯಪಾನ ವೆಚ್ಚದ ಹವ್ಯಾಸವಾದುದರಿಂದ ಅದಕ್ಕೂ ನಿಗ್ರಹವೇ.. ಯಜಮಾನ ವಿಶೇಷ ಸಂದರ್ಭಗಳಲ್ಲಿ ಕೊಡಿಸಿದ ಮದ್ಯವೇ ಅಮೃತಪಾನ. ಮತ್ತೆಲ್ಲವೂ ದೂರದ ಬಂಗಾಹ ದೇಶದಲ್ಲಿರುವ ತಮ್ಮ ಸಂಸಾರದ ಸಲುವಾಗಿ. ಸದಾ ನಗುತ್ತಾ ಕಾಲಕಳೆಯುವ ಇವರಲ್ಲಿ ಕುಟುಂಬ ಕಲಹವೆನ್ನುವುದೇ ಅಪರೂಪ. ಅದಕ್ಕೆ ಸಾಕಷ್ಟು ಸಮಯವೂ ಅವರಿಗಿಲ್ಲವೆನ್ನಿ.

ಎಷ್ಟು ಪ್ರಯಾಸದ ಕೆಲಸವನ್ನೂ ನಿರಾಯಾಸವಾಗಿ ಮಾಡಿಬಿಡುವ ಇವರ ಶಾರೀರಿಕ ಸಾಮರ್ಥ್ಯಕ್ಕೆ ನಾನು ದಂಗುಬಡಿದು ಹೋಗಿದ್ದೇನೆ. ಅವರ ಕೆಲಸದ ವೇಳೆಯೆಲ್ಲ ಅವರಿಗೆ ಧ್ಯಾನಸ್ಥ ಸಮಯವೇ. ಗದ್ದೆ ಕೆಲಸವನ್ನು ಅವರು ಮಾಡಿ ಮುಗಿಸುವ ಪರಿಯನ್ನು ನಾವು ಅವರಿಂದ ಕಲಿಯಬೇಕಿದೆ.

ಐಷಾರಾಮಿ ಹವಾನಿಯಂತ್ರಿತ ಕೊಠಡಿಗಳಲ್ಲಿ ಜನಪರ ಶಾಸನಗಳನ್ನು ಮಾಡುವೆವೆಂದು ಬಡಾಯಿ ಕೊಚ್ಚಿಕೊಳ್ಳುವ ಜನಪ್ರತಿನಿಧಿಗಳು ಒಂದು ದಿನ ಇವರೊಡನೆ ಹೆಜ್ಜೆ ಹಾಕಿದರೆ ಸಾಕು. ತಾವು ಅವರ ಹಕ್ಕುಗಳನ್ನು ಕಸಿದು ಹೇಗೆ ಅವರನ್ನು ವಂಚಿಸುತ್ತಿದ್ದೇವೆಂಬುದರ ಅರಿವಾಗುತ್ತದೆ. ಅವರ ಬೆವರಿನ ಅನ್ನದ ಋಣಿಗಳಾದ ನಾವು ಕನಿಷ್ಠ ಅವರ ಪ್ರಾಥಮಿಕ ಅವಶ್ಯಕತೆಗಳನ್ನೂ ಪೂರಯಿಸಲಾಗದ ಕರ್ತವ್ಯಭ್ರಷ್ಠರಾಗಿದ್ದೇವೆ. ಆಡಳಿತದ ಚುಕ್ಕಾಣಿ ಹಿಡಿದವರ ಬಾಲಂಗೋಚಿಗಳಾಗಿ ಕೇವಲ ತಮ್ಮ ತೀರದ ದಾಹಗಳನ್ನು ತಣಿಸಿಕೊಳ್ಳುವ ನಾವು ಆತ್ಮಸಾಕ್ಷಿಗಳಿಲ್ಲದ ಡಮ್ಮಿಗಳಾಗಿದ್ದೇವೆ. ನಮಗೆ ಕಾಯಕದ ಮೌಲ್ಯವೂ ತಿಳಿದಿಲ್ಲ. ಎಲ್ಲ ಮರೆತು ದಣಿವಿಗೆ ನಿದ್ರಾದೇವಿಯ ತೆಕ್ಕೆಯಲ್ಲಿ ವಿರಮಿಸಿ ಮತ್ತೆ ನವೋತ್ಸಾಹದೊಂದಿಗೆ ಕಾಯಕಕ್ಕೆ ಸನ್ನದ್ಧವಾಗುವ ಇವರ ಕರ್ತವ್ಯಬದ್ಧತೆ, ದುಡಿಯುವ ನಿಷ್ಠೆಗೆ, ಯಾರೂ ಬಸವಣ್ಣನ ತತ್ವಗಳನ್ನು ಬೋಧಿಸುವ ಅಗತ್ಯವಿಲ್ಲ. ನಾವೇ ನಾಚಿಕೊಳ್ಳುವಂತಹ ಕಾಯಕತತ್ವ ಅವರದು. ವೇದಿಕೆಯ ಉಪನ್ಯಾಸಗಳೆಲ್ಲ ಅವರಿಗೆ ಅವಶ್ಯಕವೂ ಅಲ್ಲ. ಅದರಿಂದ ಅವರು ಕಲಿಯಬೇಕಾದುದು ಏನೂ ಇಲ್ಲ. ಶಿವಗುಡಿಯ ಅರ್ಚಕರು, ಭಕ್ತರು ಕರ್ತವ್ಯ ನಿರತ ಜಾಲಗಾರನನ್ನು ನಿಂದಿಸಿದಂತೆ ಮೂಢಭಕ್ತಿಯ ಜನರ ಆತ್ಮದ್ರೋಹ ಯಾರಿಗೆ ಸುಖನೀಡುತ್ತದೆ?.

ನನಗೆ ಇವರನ್ನು ನೋಡುವಾಗ, ಕಾರ್ಮಿಕ ವರ್ಗದ ಎಲ್ಲ ಕೆಲಸಗಾರರ ನೆನಪಾಗುತ್ತದೆ. ಕುವೆಂಪುರವರು ಯೋಧರ ಕುರಿತು ಬರೆದ ಈ ಗೀತೆ ಕಾರ್ಮಿಕ ವೃಂದಕ್ಕೂ ಹೇಗೆ ಅನ್ವಯಿಸುವುದೆಂದು ನೋಡಿ….

‘ನಾನಳಿವೆ ನೀನಳಿವೆ
ನಮ್ಮೆಲುಗಳ ಮೇಲೆ
ಮೂಡುವುದು ಮೂಡುವುದು
ನವ ಭಾರತದ ಲೀಲೆ’

*
ನಿಜ..! ನವಭಾರತ ಮಾತ್ರವಲ್ಲ, ಇಡೀ ವಿಶ್ವಸಮುದಾಯ ಅಹರ್ಶಿನಿ ದುಡಿಯುವ ಕರ್ಮಯೋಗಿಗಳ ಶ್ರಮದ ಅಡಿಪಾಯದ ಮೇಲೆ ನಿಂತಿದೆ. ಯೋಜನೆಗಳನ್ನು ರೂಪಿಸುವ ಬುದ್ಧಿಜೀವಿಗಳ ಆಲೋಚನೆ ಸಾಕಾರಗೊಳ್ಳಬೇಕಾದರೆ ಈ ಕಾರ್ಮಿಕ ಬಂಧುಗಳಿಂದ ಕೆಲಸದ ಅನುಷ್ಠಾನವಾಗಲೇಬೇಕು.

ರಸ್ತೆ ಕಾರ್ಮಿಕರು, ಸ್ವಚ್ಛತಾ ಕಾರ್ಮಿಕರು, ಕೈಗಾರಿಕೆಗಳಲ್ಲಿ, ಗಣಿಗಳಲ್ಲಿ, ಕಟ್ಟಡದ ಕಾಮಗಾರಿಗಳಲ್ಲಿ, ಕಾರ್ಖಾನೆಗಳಲ್ಲಿ ದುಡಿಯುವ ಕಾರ್ಮಿಕರು ಇತ್ಯಾದಿ, ಇತ್ಯಾದಿ. ಅಷ್ಟೇ ಅಲ್ಲ. ಹಗಲಿರುಳೆನ್ನದೆ ಭೂತಾಯ ಒಡಲಿನಲ್ಲಿ ಹೊನ್ನ ಬೆಳೆ ತೆಗೆದು ನಮ್ಮ ತುತ್ತಿನ ಚೀಲತುಂಬುವ ನೇಗಿಲಯೋಗಿಗಳಾದ ಕೃಷಿಕಾರ್ಮಿಕರು, ದೇಶ ಕಾಯುವ ತ್ಯಾಗ ಜೀವಿಗಳಾದ ಯೋಧರು, ಹೋಟೆಲ್ ಕಾರ್ಮಿಕರು, ಗುಡಿ ಕೈಗಾರಿಕೆಗಳಲ್ಲಿ ತೊಡಗಿ ದೇಶದ‌ ಕಲಾ ಕೌಶಲಕ್ಕೆ ಅಮೋಘ ಗರಿಮೆಯನ್ನು ತಂದಿತ್ತ ಕುಶಲಕರ್ಮಿಗಳು… ಯಾರನ್ನು ಹೇಳದೆ ಇರಲಿ…?
ಹ್ಞಾಂ.. ಮರೆಯಬಾರದ ಒಂದು ವಿಚಾರವನ್ನು ಇಲ್ಲಿ ಪ್ರಸ್ತಾಪಿಸದಿದ್ದರೆ ಲೇಖನಕ್ಕೆ ನ್ಯಾಯ ಒದಗಿಸಿದಂತಾಗದು.

ಒಂದು ಪೈಸೆಯ ಪ್ರತಿಫಲಾಪೇಕ್ಷೆಯೂ ಇಲ್ಲದೆ ತನ್ನ ಸಂಸಾರಕ್ಕಾಗಿ ದುಡಿಯುವ ಗೃಹಿಣಿಗೆ ಕೃತಜ್ಞತೆ ಸಲ್ಲಲೇ ಬೇಕಲ್ಲವೇ…? ಇಂತಹ ಕಾರ್ಮಿಕರ ಬದುಕು ಬಂಗಾರವಾಗಲಿ. ಸರಕಾರ ಅವರಿಗೆ ಒಂದು ಸೂರನ್ನಾದರೂ ಒದಗಿಸುವತ್ತ ಮನಸ್ಸು ಮಾಡಲಿ, ಮಾನವೀಯತೆಯ ಘನತೆ ಹೆಚ್ಚಲಿ ಎಂಬ ಆಶಯ ನನ್ನದು.

‘ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ‌ ನೆನಪುಗಳು’ ಅಂಕಣ ಹಿಂದಿನ ಸಂಚಿಕೆಗಳು :


  • ಶಿವದೇವಿ ಅವನೀಶಚಂದ್ರ – ಕವಿ, ಅಂಕಣಕಾರ್ತಿ, ಕೊಡಗು.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW