ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು – (ಭಾಗ-೨೪)

ರೈತರಿಗೆ ಜಮೀನಿನ ಒಡೆತನವಿದ್ದರೂ ಬೇಸಾಯ ಮಾಡಲು ಸಹಾಯಕರ ಅವಶ್ಯಕತೆ ಇದೆ. ಹೊರಗಿನಿಂದ ಕೂಲಿ ಕೊಟ್ಟು ಮಾಡಿಸುವಷ್ಟು ಭತ್ತದ ಕೃಷಿ ಲಾಭದಾಯಕವಲ್ಲ. ಬೇಸಗೆಯಲ್ಲಿ ಗದ್ದೆಯಲ್ಲಿ ಬೆಳೆಯುತ್ತಿದ್ದ, ಮೆಣಸು, ಸೊಪ್ಪುತರಕಾರಿಗಳೆಲ್ಲ ಈಗ ಅಪರೂಪವಾಗಿ, ನೆಲದ ಅಂದ ಹಾಗೂ ಅದರ ಗರ್ಭದಲ್ಲಿ ಬೆಳೆದ ಹಣ್ಣು, ತರಕಾರಿಗಳ ಸ್ವಾದ, ಈಗ ಇತಿಹಾಸದತ್ತ ಮುಖ ಮಾಡುತ್ತಿದೆ. ಶಿಕ್ಷಕರು, ಲೇಖಕರಾದ ಶಿವದೇವಿ ಅವನೀಶಚಂದ್ರ ಅವರ ‘ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು’ ಅಂಕಣದಲ್ಲಿ ‘ರಾಷ್ಟ್ರೀಯ ರೈತ ದಿನಕ್ಕೊಂದು ರೈತಪರದನಿ’ ತಪ್ಪದೆ ಮುಂದೆ ಓದಿ…

ಈ ದಿನ ಬೆಳಿಗ್ಗೆ ನಮ್ಮ ಮನೆಗೆ ದಿನವೂ ಹಾಲು ಕೊಡಲು ಬರುವ ರೈತಬಂಧುವೊಬ್ಬರು,ನನ್ನವರ ಜೊತೆ ಮಾತನಾಡುವ ವಿಷಯವನ್ನು ಅಡುಗೆ ಮನೆಯಿಂದ ಆಲಿಸುತ್ತಿದ್ದೆ.

ಅಣ್ಣಾ, ನಿಮ್ಮದ್ ಬೆಳೆ (ಭತ್ತ)ಕೊಯ್ದ್ ಆತಾ…’

‘ಇಲ್ಲೆ (ಇಲ್ಲ) ಅಣ್ಣಾ…ಇನ್ನೂ ತ್ವಾಟದ ಕೆಲ್ಸಾ ಮುಗ್ತ್ಲೆ(ಮುಗಿದಿಲ್ಲ)’

‘ಅಯ್ಯೋ..ಇದ್ ಮುಗಿವ ಹೊತ್ತ್ ಗೆ ಗಿಡಲಿ ಒಂದೂ ಕಾಳೂ ಉಳಿಯೊದ್ಲೆ.ಎಲ್ಲಾ ಉದ್ರಿ ಹೋಗಿದ್ದದೆ..’

ಯಾಕೆ..?

‘ಈಗಲೇ ಗಿಡ ಒಣ್ಗಿ ಹೋಗುಟು. ಇನ್ನೂ ತಡ ಮಾಡ್ರೆ ಬೆಳ್ದ ಬೆಳೆ ಎಲ್ಲಾ ಉದ್ರಿ ಭತ್ತದ ಕಾಳೆಲ್ಲ ಗದ್ದೆಲೇ…’

ಇನ್ನ್ ಅರ್ಕಟ್ಟ್(ಹೊರೆ) ಕಟ್ಟಿ ಮನೆ ಅಂಗಳಕ್ಕೆ ಹೊತ್ತ್ ತಾಕನ (ಹೊತ್ತು ತರುವಾಗ) ಅರ್ಧಕ್ಕರ್ಧ ಭತ್ತ ಉದುರಿ ಹೋದ್ದೆ(ಹೋಗುತ್ತದೆ).ರೈತಂಗೆ ಯಾಗೋಳೂ ನಷ್ಟನೇ…’ಆಗ ನಾನೆಂದೆ, ಬೇಸಾಯಗಾರನಷ್ಟು ಶ್ರೇಷ್ಠ ದಾನಿ ಈ ಜಗತ್ತಿನಲ್ಲಿ ಯಾರೂ ಇಲ್ಲ. ಅವನು ತನಗೆ ನಷ್ಟವಾದರೂ… ಪ್ರಾಣಿ ಪಕ್ಷಿಗಳಿಗೂ ಧಾರಾಳವಾಗಿ ದಾನ ನೀಡುವ ಉದಾರಿ.ಮಂಗಗಳು,ನವಿಲುಗಳು,ಆನೆಗಳು,ಹಕ್ಕಿಗಳು…ಎಲ್ಲಾ ಪ್ರಾಣಿಗಳಿಗೂ ಅವನ ಬೇಸಾಯ ಭೂಮಿ ಒಂದು ಊಟದ ತಟ್ಟೆ ಅಲ್ವಾ…ಈ ಪುಣ್ಯಕ್ಕೆ ಸಾಟಿ ಯಾವುದಿದೆ…?

ಫೋಟೋ ಕೃಪೆ : ಅಂತರ್ಜಾಲ

ಇದು ವಿಭಕ್ತ ಕುಟುಂಬಗಳ ಹಳ್ಳಿಯ ಮನೆಗಳ ಕೃಷಿಕರು ಎದುರಿಸುತ್ತಿರುವ ಜ್ವಲಂತ ಸಮಸ್ಯೆ. ಜಮೀನಿನ ಒಡೆತನ ಇದ್ದರೂ ಅದನ್ನು ಬೇಸಾಯ ಮಾಡಲು ಸಹಾಯಕರ ಅವಶ್ಯಕತೆ ಇದ್ದೇ ಇದೆ. ಹೊರಗಿನಿಂದ ಕೂಲಿ ಕೊಟ್ಟು ಮಾಡಿಸುವಷ್ಟು ಭತ್ತದ ಕೃಷಿ ಲಾಭದಾಯಕವಲ್ಲ. ಹುಲ್ಲು ದನಕರುಗಳಿಗೆ ಮೇವಿಗೆ ಒದಗುತ್ತದೆಂಬ ಆಸೆಯಿಂದ‌ ಗದ್ದೆಗಳು ಹಸಿರು ತೊಡುತ್ತಿವೆ. ಅಷ್ಟೇ ಹೊರತು… ಯಂತ್ರವನ್ನು ಉಪಯೋಗಿಸಿ ಗದ್ದೆ ಕೃಷಿ ಮಾಡುವ ರೂಢಿ ಜಾರಿಗೆ ಬಂದ ಮೇಲೆ ಮನೆಗೊಂದಾದರೂ ಹಟ್ಟಿ, ಅದರಲ್ಲಿ ಹಾಲುಕರೆಯುವ ಹಸುಗಳು, ಗದ್ದೆ ಉಳುವ ಎತ್ತುಗಳಿಂದ ದೊರೆಯುತ್ತಿದ್ದ ಸಗಣಿಗಂಜಲಗಳೂ ಲಭ್ಯವಿಲ್ಲದಂತಾಗಿದೆ. ಹಟ್ಟಿ ಗೊಬ್ಬರವಿಲ್ಲದೆ ಮಾಡುವ ಕೃಷಿಯ ಅರ್ಥವಾದರೂ ಏನು…? ಕೃತಕ ಗೊಬ್ಬರಗಳ ಬಳಕೆ ನೆಲದ ಸತ್ವವನ್ನೆ ನಾಶ ಮಾಡಿರುವಾಗ ಬರುವ ಆದಾಯವೆಲ್ಲ ಗೊಬ್ಬರ ಖರೀದಿಗೆ, ಕೂಲಿಕಾರ್ಮಿಕರ ವೇತನ ಸಂದಾಯಕ್ಕೇ ಸರಿಹೋಗುತ್ತದೆ. ಬೇಸಗೆಯಲ್ಲಿ ಗದ್ದೆಯಲ್ಲಿ ಬೆಳೆಯುತ್ತಿದ್ದ,
ಮೆಣಸು, ಸೊಪ್ಪುತರಕಾರಿಗಳೆಲ್ಲ ಈಗ ಅಪರೂಪವಾಗಿ, ನೆಲದ ಅಂದ ಹಾಗೂ ಅದರ ಗರ್ಭದಲ್ಲಿ ಬೆಳೆದ ಹಣ್ಣು, ತರಕಾರಿಗಳ ಸ್ವಾದ, ಈಗ ಇತಿಹಾಸದತ್ತ ಮುಖ ಮಾಡಿದೆ. ಇದು ಭೂಮಿತಾಯಿಯ ಚೊಚ್ಚಿಲು ಮಗನಿಗೆ ಆಗುತ್ತಿರುವ ಘೋರ ಅನ್ಯಾಯ.

ಪ್ರತಿವರ್ಷ ಒಂದಲ್ಲ ಒಂದು ಸ್ವರೂಪದಲ್ಲಿ ಮುನಿಯುತ್ತಿರುವ ಪ್ರಕೃತಿ ಆತನ ಬದುಕಿನ ಭರವಸೆಯನ್ನು ಕಸಿಯತೊಡಗಿದ್ದಾಳೆ. ಹವಾ ನಿಯಂತ್ರಿತ ಕೊಠಡಿಗಳಲ್ಲಿ ಕುಳಿತು ಉದ್ಯೋಗ ಮಾಡಬಯಸುವ ಮಕ್ಕಳ ಶಿಕ್ಷಣದ ಬದಲಾದ ಮಾದರಿ… ಅವರನ್ನು ಕೃಷಿಕಾರ್ಯ ಹಾಗೂ ಅದಕ್ಕೆ ಅಗತ್ಯವಾಗಿ ಬೇಕಾದ ಜ್ಞಾನ ಹಾಗೂ ಅನುಭವಗಳಿಂದ ವಂಚಿತರನ್ನಾಗಿ
ಮಾಡುತ್ತಿದೆ. ಇದು ಒಂದು ಘೋರ ಸಾಮಾಜಿಕ ದುರಂತವೇ ಆಗಿದೆ.

ಏಕೆಂದರೆ ಮಹಾನಗರಗಳ ಪಾಲಾಗಿ ತಮ್ಮ ಬದುಕಿನ ಹಾದಿ ಕಂಡುಕೊಳ್ಳುವ ಯುವಜನತೆ, ಸೂರ್ಯೋದಯದ ಪ್ರಕೃತಿಯ ಸೊಬಗನ್ನು ಸವಿಯುವ, ಸೂರ್ಯಾಸ್ತದ ವೈಭವವನ್ನು ಕಣ್ತುಂಬಿಕೊಳ್ಳುವ ಎಲ್ಲ ಭಾವನಾತ್ಮಕ ಸುಖಗಳಿಂದ ವಂಚಿತರಾಗುತ್ತಿದ್ದಾರೆ. ಅವರ ಆಹಾರಕ್ರಮ, ವಿಶ್ರಾಮದ ಅವಧಿ ಎರಡೂ ವ್ಯತ್ಯಯವಾಗಿ ಶಾರೀರಿಕ ಸ್ವಾಸ್ಥ್ಯಕ್ಕೂ ಎರವಾಗುತ್ತಿದ್ದಾರೆ.

ಅಕಾಲ ಮುಪ್ಪು, ಶೀಘ್ರವಾಗಿ‌ ತುತ್ತಾಗುವ ಅನಾರೋಗ್ಯಗಳಿಗೆ ಈಡಾಗುತ್ತಿದ್ದಾರೆ. ಸಾಂಸಾರಿಕ ಸುಖವನ್ನು ಸವಿಯಲೂ ಈ ಒತ್ತಡದ ಬದುಕು ಬಿಡುವು ಕೊಡುತ್ತಿಲ್ಲ. ಗಳಿಕೆಯ ಸದ್ವಿನಿಯೋಗವೂ ಆಗುತ್ತಿಲ್ಲ.ಹೀಗಾಗಿ ಹೆತ್ತವರು,ಸಾಕಿದವರು ಹಾಗೂ ಮಕ್ಕಳು ಇವರ ನಡುವಿನ ಬಾಂಧವ್ಯದ ತಂತು ಕ್ಷೀಣವಾಗುತ್ತಿದೆ. ಪರಿಣಾಮ ಹಳ್ಳಿಗಳಲ್ಲಿ ನೆಲೆಸಿರುವ ಪೋಷಕರು, ‘ಅತ್ತ ಪುಲಿ ಇತ್ತ ದರಿ’ ಎನ್ನುವ ಅತಂತ್ರ ಸ್ಥಿತಿಯಲ್ಲಿದ್ದಾರೆ. ವಾಣಿಜ್ಯ ಬೆಳೆಗಳು ಯಾವಾಗಲೂ ಒಂದೇ ಗತಿಯಲ್ಲಿ ಕೈಹಿಡಿಯುವುದಿಲ್ಲ.ಮಾರುಕಟ್ಟೆಯಲ್ಲಿ ಕುಸಿಯುವ ಏರುವ ಮೌಲ್ಯಗಳು, ಬೇಡಿಕೆಯ ಅಭಾವ, ಮೇಘ ಸ್ಫೋಟ,ಮಳೆಯ ಕೊರತೆಯಂಥ ಪ್ರಾಕೃತಿಕ ವೈಪರೀತ್ಯಗಳು ಇವುಗಳ ನಡುವೆ ಅವನ ಜೀವನ ಇಬ್ಬಾಯ ಕತ್ತಿಯ ಕೆಳಗೆ ತೂಗಾಡುತ್ತಿದೆ. ಆದರೂ ಮನುಷ್ಯ ತನ್ನ ಉದರವನ್ನು ಕಡೆಗಣಿಸುವಂತಿಲ್ಲ. ‘ಎಲ್ಲಾರು ಮಾಡುವುದು ಹೊಟ್ಟೆಗಾಗಿ,ಗೇಣು ಬಟ್ಟೆಗಾಗಿ,ತುತ್ತು ಹಿಟ್ಟಿಗಾಗಿ’ ಎಂಬ ದಾಸರ ನುಡಿಯಂತೆ ಹಸಿವನ್ನು ಹೋಗಲಾಡಿಸಲು, ಭೋಜ್ಯಕ್ಕೆ ಅನ್ನಪಾನಾದಿಗಳ ನೆರವು ಬೇಕೇಬೇಕು.ಅದನ್ನು ಭೂಮಿತಾಯಿಯ ಮಡಿಲಿನಿಂದಲೇ ನಾವು ಪಡೆಯಬೇಕು.ಶ್ರಮಿಕನ ಬೆವರಹನಿಯಿಂದಲೇ ನಮ್ಮ ಜಿಹ್ವಾಚಾಪಲ್ಯ ತಣಿಯುವುದು.

ಫೋಟೋ ಕೃಪೆ : ಅಂತರ್ಜಾಲ

ಆರೋಗ್ಯ ಸಂವರ್ಧನೆಯೂ ಆಗುವುದು.ಅಷ್ಟೇ ಅಲ್ಲ,ಉದರದೇವ ಶಾಂತವಾಗಿದ್ದರೆ ಮಾತ್ರ ನಮಗೆಎಲ್ಲ ಭಾಗ್ಯಗಳನ್ನೂ ಅನುಭವಿಸುವ ಯೋಗ ದೊರೆಯುವುದು. ಕೃಷಿ ಒಂದು ದಂಧೆಯಲ್ಲ. ಅದು ಭೂಮಿ ತಾಯಿಯನ್ನು ಪರಿಪರಿಯಿಂದ ಆರಾಧಿಸುವ ಒಂದು ಅಪೂರ್ವ ಸಂಸ್ಕೃತಿ. ಅದು ಅನಿವಾರ್ಯ ಜೀವನ ವಿಧಾನ.ಈ ಸೂತ್ರವನ್ನು ಅರಿತೇ…ನಮ್ಮ ಬಾಪೂ..ಹಳ್ಳಿಗಳನ್ನು ಸ್ವಯಂಪೂರ್ಣ ಹಾಗೂ ಸ್ವಾವಲಂಬಿಗಳನ್ನಾಗಿಸುವ ಕನಸು ಕಂಡದ್ದು.ನಮ್ಮ ಮಾಜಿ ಪ್ರಧಾನಿ ಲಾಲ್ ಬಹಾದುರ್ ಶಾಸ್ತ್ರಿಯವರು,’ಜೈ ಜವಾನ್; ಜೈ ಕಿಸಾನ್ ಘೋಷಣೆಯಿಂದ’ ರಾಷ್ಟ್ರವನ್ನು ಬಡಿದೆಬ್ಬಿಸಿದ್ದು.

ಯೋಧರು ತಮ್ಮ ಬಲಿದಾನದಿಂದ ರಾಷ್ಟ್ರ ರಕ್ಷಕರು.ರೈತರು ತಮ್ಮ ನಿರಂತರ ಶ್ರಮದ ದುಡಿಮೆಯಿಂದ ದೇಶಕ್ಕೇ ಅನ್ನದಾತರಾದ ನೇಗಿಲಯೋಗಿಗಳು..! ಇವರನ್ನು ಕಡೆಗಣಿಸಿದ ಯಾವ ರಾಷ್ಟ್ರದ ಸರ್ಕಾರವೂ ತಮ್ಮ ಪ್ರಜೆಗಳಿಗೆ ನ್ಯಾಯ ಒದಗಿಸುವುದಿಲ್ಲ.ರೈತರ ನೋವಿಗೆ,ಸೋಲಿಗೆ ಮಿಡಿಯುತ್ತಾ,ಕೃಷಿಯನ್ನು ಬೆಂಬಲಿಸುತ್ತಾ,ಕೃಷಿಕರಲ್ಲಿ ನೈತಿಕ ಸ್ಥೈರ್ಯವನ್ನು ತುಂಬುತ್ತಾ,ಕೃಷಿಯಲ್ಲಿ,ಸಂಶೋಧನೆ,ಮೌಲ್ಯವರ್ಧನೆ,ಮಾರುಕಟ್ಟೆ ವಿಶ್ಲೇಷಣೆ ಇತ್ಯಾದಿಗಳ ಅರಿವನ್ನು ತುಂಬುತ್ತಾ,ಸುಧಾರಿತ ಬೇಸಾಯ ಪದ್ಧತಿಗಳ ಬಗೆಗೆ ಮಾರ್ಗದರ್ಶನ ಮಾಡುತ್ತಾ ಸರ್ಕಾರ, ‘ಮಳೆಯೊಡನೆ ಜೂಜಾಟವಾಡುವ ‘ರೈತನ ಸ್ಥಿತಿಯನ್ನು ಮನಗಂಡು,ದೇಶದ ಬೆನ್ನೆಲುಬಾಗಿರುವ ಅವನಿಗೆ ತನ್ನ ಕಾಯಕದಲ್ಲಿ ಸದಾ ಪ್ರೋತ್ಸಾಹವನ್ನು ನೀಡುತ್ತಾ ಸಾಗಿದರೆ,ಅವನು ಎಂತಹ ಸ್ಥಿತಿಯಲ್ಲೂ ಆತ್ಮಹತ್ಯೆಯಂತಹ ಹತಾಶೆಗೆ ಜಾರದೆ ತನ್ನ ಉದ್ಯೋಗದಲ್ಲಿ ಮುನ್ನಡಿಯಿಡಲು ಸಾಧ್ಯವಾಗುತ್ತದೆ.

ಈ ನಿಟ್ಟಿನಲ್ಲಿ ‘ನೆಲದ ಮಗ’ನಿಗೆ, ತನ್ನ ಜನ್ಮದಿನವನ್ನೇ ಮೀಸಲಿರಿಸಿ,ಉತ್ತೇಜಿಸಿ, ಗೌರವಿಸಿದ, ನಮ್ಮ ದೇಶದ ಮಾಜಿ ಪ್ರಧಾನಿ ಮಾನ್ಯ ಚೌಧರಿಚರಣ್ ಸಿಂಗ್ ರಿಗೆ,ನಮ್ಮ ದೇಶ ಸದಾ ಕೃತಜ್ಞವಾಗಿರುತ್ತದೆ.

*
ಕೃಷಿಕನ ಬಾಳಿಗೆ ಬದಲಾವಣೆಯ ಹೊಸ ಉಜ್ವಲ ದಿಕ್ಕು ಗೋಚರಿಸಲಿ.ಆ ಮೂಲಕ,ದೇಶದ ಹೆಮ್ಮೆಯ ಸಂಸ್ಕೃತಿ ಹಾಗೂ ಸಂಪತ್ತು ವರ್ಧಿಸಲಿ ಎಂದು ಹಾರೈಸುವೆ. ನಮ್ಮ ರೈತ ಬಂಧುಗಳಿಗೆಲ್ಲ ರಾಷ್ಟ್ರೀಯ ಕೃಷಿ ದಿನಾಚರಣೆಯ ಹಾರ್ದಿಕ ಶುಭಾಶಯಗಳು.

ಅನ್ನದಾತೋ..ಸುಖೀಭವ…!

ಜೈ ಹಿಂದ್!

‘ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ‌ ನೆನಪುಗಳು’ ಅಂಕಣ ಹಿಂದಿನ ಸಂಚಿಕೆಗಳು :


  • ಶಿವದೇವಿ ಅವನೀಶಚಂದ್ರ– ನಿವೃತ್ತ ಶಿಕ್ಷಕರು, ಕವಿಯತ್ರಿ, ಲೇಖಕರು , ಕೊಡಗು.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading