ಕಿವಿದೆರೆಯ ಮೇಲೆ ಬಿತ್ತು, ಯಾರೋ ಹಾಡ್ತಾ ಇದ್ದ ಈ ಹಾಡು, ಮಡದಿ ಸತ್ತರೆ ಮತ್ತೆ ತರಬಹುದು… ಅಣ್ಣಯ್ಯ ಒಡಹುಟ್ಟಿದವರ ಪಡಿಲಾರೆ’ ಏಕೆ ಜನಪದರ ಮನಸ್ಸಿನಲ್ಲಿ ಹುಟ್ಟಿತು ಇಂತಹ ಒಂದು ಧೋರಣೆ…? ಶಿಕ್ಷಕರು, ಲೇಖಕರಾದ ಶಿವದೇವಿ ಅವನೀಶಚಂದ್ರ ಅವರ ‘ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು’ ಅಂಕಣದಲ್ಲಿ ‘ಹೆಣ್ಣೆಂದರೆ ಯಾಕೆ ಹೀಗೆ?’… ತಪ್ಪದೆ ಮುಂದೆ ಓದಿ…
ಕಾಶೀಗೆ ಹೋಗಲೀಕೆ ಏಸೊಂದು ದಿನಬೇಕು
ಕಾಶಿ ಕುಂತವ್ಳೆ ಹಡೆದವ್ವ/ತಾಸೊತ್ತಿನ
ಹಾದಿ ತವರೂರು…
ಹಡೆದವ್ವ ಸಹ ಹಿಂದೆ ಈ ಮನೆಗೆ ಸೊಸೆಯಾಗಿಯೇ ಬಂದವಳು. ಅಣ್ಣಯ್ಯನ ಹೆಂಡತಿಯೂ ಸೊಸೆಯೇ, ಅವನು ಮಕ್ಕಳಿಗೂ ಅವಳು ತನ್ನ ತಾಯಿಯಂತಹವಳೇ. ಆದರೂ ಈ ತಾರತಮ್ಯ ಏಕೆ?. ಕಾಶಿಯ ವಿಶಾಲಾಕ್ಷಿಯಷ್ಟು ಪವಿತ್ರವಾದ ತಾಯಿಗೆ ಇರುವ ಮಾನ್ಯತೆ ಈ ವಿಶಾಲಾಕ್ಷಿಗೆ ಸಿಗಲಿಲ್ಲವೇಕೆ ?
ಜನಪದರ ಈ ಅಭಿಪ್ರಾಯವೇ ಪ್ರಶ್ನಾರ್ಹವೇ?.
‘ವೇದ ಸುಳ್ಳಾದರೂ ಗಾದೆ ಸುಳ್ಳಾಗದು ,’ ಎಂಬಂತಹ ಅನುಭವ ಜನ್ಯ ಮೌಲ್ಯಯುತ ಸಾಹಿತ್ಯ ಸಂಪತ್ತನ್ನು ಬಿಟ್ಟುಹೋದ ಜಾನಪದ ಸಾಹಿತ್ಯದಲ್ಲಿ ಹೆಣ್ಣೇ ಏಕೆ ಹೆಣ್ಣನ್ನು ಮಾನ್ಯ ಮಾಡಲಾರದ ಅಂತರವಿದೆ….?
ಕಣ್ತೆರೆಸಿದ ಹೆಣ್ಣು, ‘ಮುಳುಗೋನ ಬೆನ್ನಿಗೆ ಬೆಂಡೆನಿಸಿದ ಹೆಣ್ಣು’
‘ಗೃಹ ತಪಸ್ವಿನಿ’ ಎನಿಸಿಕೊಂಡ ಹೆಣ್ಣು ಈ ಪರಿ ಅಸಡ್ಡೆಗೆ , ನಿಂದನೆಗೆ ಪಕ್ಕಾದಳೆಂದರೆ ಅದರ ಮಥಿತಾರ್ಥವಾದರೂ ಏನು…?
ಅರ್ಧನಾರೀಶ್ವರನ ಕಲ್ಪನೆಯಲ್ಲಿ ಶಿವಪಾರ್ವತಿಯನ್ನು ಪೂಜಿಸುವ ನಾವು, ಮಾನವ ತನ್ನ ಬದುಕಿನಲ್ಲಿ ಉಸಿರಿರುವವರೆಗೂ ತನ್ನೊಡನೆ ಸಾಗಿ ಬರುವ ,ಅಗ್ನಿಸಾಕ್ಷಿಯಾಗಿ ಸಪ್ತಪದಿ ತುಳಿದು ತನ್ನ ಬಾಳನ್ನು ಪ್ರವೇಶಿಸಿದ ತನ್ನ ಧರ್ಮಪತ್ನಿಗೆ ಅದೇ ಸ್ಥಾನವನ್ನು ಏಕೆ ಕೊಡಬಾರದು?. ‘ಮತ್ತೆ ತರಬಹುದು’ ಆದರೆ ಅವಳನ್ನೇ ಅಲ್ಲವಲ್ಲ, ಬೇರೆಯವಳನ್ನು. ಆ ‘ಬೇರೆಯವಳು’ ಅವಳೇ ಆಗುವುದು ಸಾಧ್ಯವಾ?.
ತನ್ನ ಪತಿ ಸತ್ತ ಮೇಲೆ ಸಹಗಮನಕ್ಕಾಗಿ ಚಿತೆಯೇರುತ್ತಿದ್ದ ಹೆಣ್ಣಿನಂತೆ ಜಾನಪದರ ಆಶಯದಂತೆ ಹೆಣ್ಣು ಸಹ ಅದೇ ಅವಗಣನೆಗೆ ಪಕ್ಕಾಗಬೇಕಾ? ಬದಲಿಸಬಹುದಾ? ಯಾವುದೇ ಹೆಣ್ಣನ್ನು ಒಂದು ಜೀವಂತ ಚೈತನ್ಯವನ್ನು ತವರಿನ ಒಡಹುಟ್ಟುಗಳೂ ಹೆಣ್ಣಾದರೆ ಅವರಿಗೇಕೆ ವಿಶೇಷ ಸ್ಥಾನಮಾನ ?. ಹೊರಗಿನಿಂದ ತಂದ ಹೆಣ್ಣಾದರೆ ಅವಳಿಗೂ ಪ್ರತ್ಯೇಕವಾದ ಒಂದು ಬದುಕೆಂದೆಂಬುದು ಇದ್ದೇ ಇದೆಯಲ್ಲ. ಅಲ್ಲಿ ಅವರನ್ನು ಪ್ರೀತಿಸುವ ಜೀವಿಗಳೂ ಇರುವುದು ಸುಳ್ಳೆ ಹಾಗಾದರೆ.

ಫೋಟೋ ಕೃಪೆ : ಅಂತರ್ಜಾಲ
‘ಹೆತ್ತವರ ಮನೆಗಿಂದು ಹೊರಗಾದೆ ನೀ ಮಗಳೆ’… ಎಂದು ಕಣ್ಣೀರಿಡುತ್ತಾ ಹೆಣ್ಣನ್ನು ಬೀಳ್ಕೊಟ್ಟ ಮೇಲೆ ಅವಳು ಹೊರಮನೆಯ ಸೊಸೆಯಾಗಿ, ಆಮೇಲೆ ಕರುಳು ಬಳ್ಳಿಯ ಸಂಬಂಧ ತುಂಡರಿಸಿದಂತೆಯೇ?.
‘ಧರ್ಮೇಚ ಅರ್ಥೇಚ ಕಾಮೇಚ ನಾತಿಚರಾಮಿ’ ಎಂದು ಪತಿ ಸಪ್ತಪದಿಯಲ್ಲಿ ನೀಡುವ ಭರವಸೆಗೆ ಅರ್ಥವೇನು?. ಅರ್ಧನಾರೀಶ್ವರ ಕಲ್ಪನೆಯಲ್ಲಿ….ಹೆಣ್ಣಿಲ್ಲದ ಗಂಡನಿಗೆ ಪೂರ್ಣತ್ವವಿಲ್ಲ ಎಂದು ನಾವು ಭಕ್ತಿಯಿಂದ ಆರಾಧಿಸುವ ಶಿವಪಾರ್ವತಿಯರಿಗೆ ವಂದಿಸುವ ಶ್ರದ್ಧಾಭಕ್ತಿಗಳು ಕೇವಲ ಡಾಂಭಿಕವೆ?.
ಜಾನಪದ ಸಾಹಿತ್ಯಕ್ಕೆ ಅದರದೇ ಆದ ಮಹತ್ವವಿದೆ. ‘ವೇದ ಸುಳ್ಳಾದರೂ ಗಾದೆ ಸುಳ್ಳಾಗದು’ ಎಂದು ಜನಪದರು. ರೂಢಿಗೆ ತಂದ ಗಾದೆಗಳು, ಅವರದೇ ಹೇಳಿಕೆಯ ಮೂಲಕ ಅರ್ಥ ಕಳೆದುಕೊಳ್ಳಬಲ್ಲವೇ? ಅಣ್ಣಯ್ಯನಿರುವ ತವರಿನಲ್ಲಿ ಆ ತವರಿನ ಒಂದು ಪ್ರಮುಖ ಭಾಗವೇ ಆಗಿ ವಂಶವನ್ನು ಉದ್ಧಾರಮಾಡುವ ಅತ್ತಿಗೆ ಯಾಕೆ ಅಲ್ಲಿ ತನ್ನ ಸ್ಥಾನವನ್ನು ಕಂಡುಕೊಳ್ಳಲಾಗುವುದಿಲ್ಲ? ದ್ವಿತೀಯ ಅಥವಾ ತೃತೀಯ ದರ್ಜೆಯ ಪ್ರಜೆಯಾಗಿಯೇ ಅವಳು ಉಳಿದುಬಿಡುವುದೇಕೆ?.
‘ಗಂಜೀಯ ಕುಡಿದರೂ ಗಂಡನ ಮನಿ ಲೇಸ
ಅಂದಣದ ಮ್ಯಾಲ ಚವುರವ/ ಸಾರಿದರೂ/
ಹಂಗೀನ ತವರ ಮನಿ ಸಾಕ’
ಎಂದು ಗಂಡನ ಮನೆಯನ್ನೇ ಆಧರಿಸಿ ನಿಲ್ಲುವ ಹೆಣ್ಣು ಅಲ್ಲಿ… ಇಲ್ಲಿ… ಸ್ಥಾನಾಂತರಗೊಂಡಾಗ ಅದೇ ಸತ್ಯ ಪಲ್ಲಟವಾಗುವುದಾದರೂ ಹೇಗೆ?.
ಹಚ್ಚಡದ ಪದರಾಗ ಅಚ್ಚಮಲ್ಲಿಗಿ ಹೂವ ಬಿಚ್ಚಿನ ನನಮ್ಯಾಲ //ಎಸೆವಂತ/
ರಾಯರನು ಬಿಟ್ಹ್ಯಾಂಗ ಬರಲಿ ಹಡೆದವ್ವ//
ಎಂದು ತನ್ನ ಗಂಡನ ಪ್ರೀತಿಯಲ್ಲಿ ತವರಿನ ಆಹ್ವಾನವನ್ನೂ ನಿರಾಕರಿಸುವ ಹೆಣ್ಣಿಗೆ ತನ್ನ ಗಂಡನೇ ಈಗ ಮುಖ್ಯ ಎಂದು ಅನಿಸುವಂತಹುದು ನಿಜವಾದ ಪ್ರೀತಿ ತಾನೆ ? ಅದೇ ತಾಯಿ ಅವಳನ್ನು ಮದುವೆಯಾಗಿ ಪತಿಗೃಹಕ್ಕೆ ಕಳುಹಿಸುವಾಗ,
‘ಅತ್ತೆ ಮಾವ ಗಂಜಿ ಸುತ್ತೇಳು ನೆರೆಗಂಜಿ ಮತ್ತೆ ಆಳುವ ದೊರೆಗಂಜಿ’
‘ಬಾಳುವ’ ಕಿವಿಮಾತು ಹೇಳಿಯೇ ಕಳುಹಿಸಿರುತ್ತಾಳೆ. ತವರೀಗೆ ಹೆಸರು ತರುವ’ ಸೂಕ್ಷ್ಮ ಸಂವೇದನೆ ಕೂಡ ಈ ಉಪದೇಶದಲ್ಲಿದೆ. ಅದು ತನ್ನ ಸೊಸೆಗೂ ಮಗಳಿಗೂ ಒಟ್ಟಾಗಿಯೇ ಅನ್ವಯಿಸುವುದಿಲ್ಲವೇ?. ವೈಚಾರಿಕವಾದ ನೆಲೆಗಟ್ಟಿನಲ್ಲಿ ನಿಂತು ಯೋಚಿಸುವಾಗ, ಜನಪದರ ಈ ಧೋರಣೆಯೂ ನಮ್ಮನ್ನು ಕಂಗೆಡಿಸುತ್ತದೆ.
‘ಬಾಲಕರಿಲ್ಲದ ಬಾಲೀದ್ಯಾತರ ಜನ್ಮ
ಬಾಡಿಗೀ ಎತ್ತು ದುಡಿದಂಗ
ಬಾಳೆಲೆಯ /
ಹಾಸ್ಯುಂಡು ಬೀಸಿ ಒಗೆದಂಗ//’
ತನ್ನ ಬಂಜೆತನಕ್ಕೆ ಕಾರಣ ಸೊಸೆ ತಾನೊಬ್ಬಳೇ ಅಲ್ಲದಿರುವಾಗ,ತನ್ನ ಮಗನ ಗಂಡಸುತನದ ಬಗ್ಗೆ ಕಿಂಚಿತ್ತೂ ಅನುಮಾನಿಸದಿರುವ ಅತ್ತೆ…ತಾನೂ ಒಬ್ಬ ಹೆಣ್ಣೆಂಬುದನ್ನು ಮರೆತು ಸೊಸೆಯನ್ನೇ ಅನುಮಾನಿಸುತ್ತಾಳೆ, ಅವಮಾನಿಸುತ್ತಾಳೆ. ತಿರಸ್ಕರಿಸಲು ಮಗನ ಮನಸ್ಸನ್ನು ಸಿದ್ಧಗೊಳಿಸಿಯೇ ಬಿಡುತ್ತಾಳೆ. ಆಗ ಈ ನೆಲೆತಪ್ಪಿದ ನೋವನ್ನು, ಅಪಮಾನವನ್ನು ಸಹಿಸಬೇಕಾದ ಹೀನ ಸ್ಥಿತಿ ಯಾರದು?. ಅದೇ ಮನೆಯಲ್ಲಿ ಉಳಿದರೂ ಅವಳಿಗೆ ಗಾಣದ ಎತ್ತಿನ ಕಾಯಕ ಅಷ್ಟೆ.
‘ಅತ್ತೀಯ ಮನೆಯಲ್ಲಿ ತೊತ್ತಾಗಿ ಇರಬೇಕು
ಹೊತ್ತಾಗಿ ನೀಡಿದರೂ ಉಣಬೇಕು//ತಂಗ್ಯವ್ವ//
ತವರೀಗಿ ಹೆಸರು ತರಬೇಕು’

ಫೋಟೋ ಕೃಪೆ : ಅಂತರ್ಜಾಲ
‘ತವರೀಗಿ ಹೆಸರಾ ತರಲು’ ಅವಳು ತನ್ನ ವೈಯಕ್ತಿಕ ಆಶೋತ್ತರಗಳಿಗೆ ತಿಲಾಂಜಲಿ ನೀಡಬೇಕು. ತನ್ನ ಹಸಿವು ಬಾಯಾರಿಕೆಯನ್ನು ನಿಯಂತ್ರಿಸಿಕೊಳ್ಳಬೇಕು.
‘ಬ್ಯಾಸಕಿ ದಿವಸಕ ಬೇವಿನ ಮರತಂಪ
ಭೀಮರತಿಯೆಂಬ ಹೊಳಿತಂಪ/ಹಡೆದವ್ವ//
ನೀ ತಂಪು ನನ್ನ ತವರೀಗಿ’
ನೊಂದಾಗ ಸಾಂತ್ವನಗೊಳಿಸುವ ಆ ತವರು ಅವಳಿಗೆ ಶಾಶ್ವತವಲ್ಲ. ಆದರೆ ನೆನೆದಾಗಲೆಲ್ಲ ಆ ತಂಪು ಸುರಿಯುವ ಆ ಬಾಲ್ಯದ ನಂದನ ಅವಳ ನೋವಿನಲ್ಲಿ ಮುದಕೊಡುವ ಒಂದು ಅಮೃತದ ಮಡು. ‘ಅತ್ತೆ ಮಾವನನ್ನು ದೈವ ಸಮಾನರಾಗಿ ನೋಡಬೇಕಾದ’ ಹೆಣ್ಣು ನಾದಿನಿ ಮೈದುನಂದಿರಿಗೆ ತಾಯಿಯ ಸ್ಥಾನದಲ್ಲಿ ನಿಲ್ಲಬೇಕು. ಆಕೆ ಚಿಕ್ಕವಳಿರಲಿ ಪ್ರೌಢಳಿರಲಿ. ಅತ್ತೆಯ ಮನೆಯಲ್ಲಿ ತಾನು ತನ್ನಿಚ್ಛೆಯಂತೆ ಬಾಳುವಂತಿಲ್ಲ. ಉಪ್ಪು ಸಕ್ಕರೆಯನ್ನು ತನ್ನಲ್ಲಿ ಕರಗಿಸಿಕೊಳ್ಳುವ ನೀರಿನಂತೆ ಅವಳು ಎಲ್ಲರನ್ನೂ ಒಳಗೊಂಡು ಅವರೆಲ್ಲರ ಆಶೋತ್ತರಗಳನ್ನೂ ಪೂರೈಸುವ ಸಂಯಮಿಯಾಗಿರಬೇಕು. ಎಂದರೆ ಎಲ್ಲಾ ಕಡೆಗೂ ಬಾಗಬಲ್ಲ ಗರಿಕೆಯ ಕುಡಿಯಂತೆ ಗಾಳಿ ನೀರಿನ ಹರಿವಿಗೆ ತನ್ನನ್ನು ಒಡ್ಡಿಕೊಂಡು ಅಸ್ತಿತ್ವವನ್ನು ಕಾಪಾಡಿಕೊಳ್ಳುವ ನಮ್ಯತೆಯನ್ನು ಹೊಂದಿರಬೇಕು.
ಹೆಣ್ಣು ಎಂತಹ ಸಾಮರ್ಥ್ಯ ವುಳ್ಳವಳು… ತನ್ನ ಕುಟುಂಬದ ಘನತೆಯನ್ನು ಕಾಪಾಡಲು ಅವಳು ತನ್ನೊಳಗಿನ ಪ್ರತ್ಯೇಕ ಆಶೆ ಆಮಿಷಗಳನ್ನು ಗಾಳಿಗೆ ತೂರುತ್ತಾಳೆ.ಗಂಧದಂತೆ ಸವೆದು ಭಗವಂತನಿಗೂ,ತನ್ನ ಬಳಗಕ್ಕೂ ಕಂಪು ನೀಡುತ್ತಾಳೆ.ಹೆಣ್ಣಿನ ತ್ಯಾಗದ ನೆಲೆಗಟ್ಟಿನಲ್ಲಿ ಪುರುಷ ತನ್ನ ಪುರುಷಾರ್ಥವನ್ನು ಸಾಧಿಸಿಕೊಳ್ಳುತ್ತಾನೆ. ಆದರೂ….ಅವಳ ಬಗೆಗೇಕೆ
‘ಸತ್ತರೆ ಮತ್ತೆ ತರಬಹುದು ಮಡದೀಯ…’ ಎಂಬ ನಿಕೃಷ್ಟತೆ. ಹಾಗೆ ಬಯಸಿದವಳೂ ಒಂದು ಹೆಣ್ಣೇ ಎಂಬುದು ಎಂತಹ ವಿಡಂಬನೆ… ಗಂಡ ಹೆಂಡತಿಯರ ನಡುವೆ ಈ ತಾರತಮ್ಯವನ್ನು ಬಿತ್ತುವ ಈ ಆಲೋಚನೆ…ಉದ್ದೇಶಪೂರ್ವಕವೋ ಅಥವಾ…ಸಾಂದರ್ಭಿಕವೋ. ಅತ್ತಿಗೆಯ ಸ್ಥಾನದಲ್ಲಿ ಆಕೆ ತಾನೇ ನಿಂತು ನೋಡುವಾಗ ಈ ಹೇಳಿಕೆಯ ಸಮಂಜಸತೆ ಅರ್ಥವಾಗಬಹುದೇನೋ.
*
ಈಗಿನ ಪರಿವರ್ತನಶೀಲ ಸಮಾಜದಲ್ಲಿ ಈ ಯಾವ ಕಿವಿಮಾತು ಯಾರಿಗೂ ಅನುಸರಣೀಯವೆನಿಸುತ್ತಿಲ್ಲ. ಏಕೆಂದರೆ ವಿದ್ಯೆ ಹಾಗೂ ಉದ್ಯೋಗ ಎರಡನ್ನೂ ಪಡೆದು ಸ್ವತಂತ್ರವಾಗಿ ಆಲೋಚಿಸುವ ಹೆಣ್ಣಿಗೆ ಹೊಂದಾಣಿಕೆಯ ಮಹತ್ವ ಗಂಭೀರವೆನಿಸುವುದಿಲ್ಲ.ಇದರ ಪರಿಣಾಮವಾಗಿಯೇ ಒಂದು ಅತಂತ್ರ ಸಾಮಾಜಿಕತೆಯ ನೆಲೆಗಟ್ಟಿನಲ್ಲಿ ನಿಂತು ನಾವು ಸಮಾಜವನ್ನು ನೋಡುತ್ತಿದ್ದೇವೆ.ಅದರ ಪರಿಣಾಮವನ್ನು ಎದುರಿಸುತ್ತಿದ್ದೇವೆ. ಸ್ವಂತ ಉದ್ಧಾರದ ಕನಸನ್ನು ಕಂಡು ‘ಇದೇ ಬದುಕು ‘ಎಂಬ ಅಮಲಿನಲ್ಲಿದ್ದೇವೆ. ‘ಬಾಗಲು’ ಸಿದ್ಧರಿಲ್ಲ.ಆದುದರಿಂದ ‘ಬೀಗುವ ಮನೋಭಾವ’ನಮ್ಮ ಹೆಣ್ಣುಮಕ್ಕಳಿಗೆ ಸಂಬಂಧಗಳನ್ನು ಅನಾಯಾಸವಾಗಿ ಮುರಿದುಕೊಂಡು ತಮ್ಮಿಚ್ಛೆಯಂತೆ ಬದುಕುವ ಒಂದು ಪರಿವರ್ತನಶೀಲ ಸಮಾಜವನ್ನು ಕಟ್ಟಿಕೊಟ್ಟಿದೆ.
ಈ ಧೋರಣೆ ಕೌಟುಂಬಿಕ ಬದ್ಧತೆಗೆ ಒಳಪಡದ ಒಂದು ಸ್ವೇಚ್ಛೆಯ ಬದುಕಿನ ಹಂತದಲ್ಲಿ ಪ್ರತಿಷ್ಠಾಪನೆ ಮಾಡಿದೆ. ಕಡೆಗೊಮ್ಮೆ ಅನಿಥಪ್ರಜ್ಞೆಯಿಂದ ತನ್ನವರೆಂಬುವವರು ಯಾರೂ ಇಲ್ಲದೆ ಮಾದಕ ದ್ರವ್ಯಗಳ ದಾಸ್ಯಕ್ಕೆ ಒಳಗಾಗಿರುವ ವರನ್ನು ನಾವು ಕಾಣುತ್ತಿದ್ದೇವೆ.’ಪರಿವರ್ತನೆ ಜಗದ ನಿಯಮ’,ಆದರೆ ಹೆಣ್ಣು ತನ್ನ ಕರ್ತೃತ್ವ ಶಕ್ತಿಯನ್ನು ಧನಾತ್ಮಕತೆಯತ್ತ ತಿರುಗಿಸಬೇಕೇ ಹೊರತು ನಿರ್ಭಾವುಕತೆಯಿಂದ ತನ್ನ ಬದುಕನ್ನೇ ಅಗ್ನಿಯಲ್ಲಿ ಹೋಮಿಸಿಕೊಳ್ಳುವುದಕ್ಕಲ್ಲ. ಇದರ ಪರಿಣಾಮ ಎಲ್ಲೆಂದರಲ್ಲಿ ವಿಜ್ರಂಭಿಸುತ್ತಿರುವ ಅನಾಥಾಲಯಗಳು ಹಾಗೂ ವೃದ್ಧಾಶ್ರಮಗಳು ಎಂಬುದು ಈ ಪ್ರಗತಿಶೀಲ ಬದುಕಿನ ಒಂದು ವ್ಯಂಗ್ಯವೇ ಅಲ್ಲವೇ….
‘ಕಾಷಾಯವೇಂ ತಪಸು ಗೃಹಲೋಕ ನಿರ್ವಾಹ
ವೇಷತಾಳದ ತಪಸು ಕಠಿಣತರ ತಪಸು ಲೇಸಿನಿಂದದ ಜೈಸೆ ಬೇಕು ಶಮ ದಮ ಸಮತೆ
ಅಸಿಧಾರಾವ್ರತವೋ’
– ಮಂಕುತಿಮ್ಮ
ಡಿ.ವಿ.ಜಿ
*
ಹೆಣ್ಣು ಎಂದಿಗೂ ತನ್ನ ಸಂವೇದನಾಶೀಲತೆಯನ್ನು ಹಾಗೂ ಜನ್ಮಜಾತ ಅಸ್ಮಿತೆಯನ್ನು ಕಳೆದುಕೊಳ್ಳಬಾರದು. ಗಳಿಕೆ ಬಾಳಿಕೆ ಎಲ್ಲವೂ ಸರಿ. ಆದರೆ ತನ್ನತನವನ್ನು ನಾಶಗೊಳಿಸಿಕೊಳ್ಳುವ ಅಧ:ಪತನವಿದೆಯಲ್ಲ ಅದರ ಬಗೆಗೆ ಸದಾ ಎಚ್ಚರದ ಮನೋಭಾವ ಹೊಂದಿದ್ದರೆ ಅದು ಸಮಾಜದ ಸ್ವಾಸ್ಥ್ಯ ದ ದೃಷ್ಟಿಯಿಂದ ಬಹುದೊಡ್ಡ ಕೊಡುಗೆ..!
- ಶಿವದೇವಿ ಅವನೀಶಚಂದ್ರ – ನಿವೃತ್ತ ಶಿಕ್ಷಕರು, ಕವಿಯತ್ರಿ, ಲೇಖಕರು , ಕೊಡಗು.
