ಇನ್ನು ಭೂಮಿ ತಾಯಿಯ ಒಡಲಿಗೆ ನಾವು ಹಾಕಿದ ವಿಷ, ಕಾರ್ಖಾನೆಗಳ ರಾಸಾಯನಿಕಗಳು ನಾವು ಕುಡಿಯುವ ಗಂಗೆಯನ್ನು ಕಲುಷಿತಗೊಳಿಸಿದೆ. ಸೂರ್ಯ ದೇವಾ ನಿನ್ನ ಕೋಪ ತಾಪವನ್ನು ಬದಿಗಿಟ್ಟು ಎಳೆಯ ಹದವಾದ ಬಿಸಿಲನ್ನು ಮಾತ್ರ ನಮಗೆ ನೀಡು. ನಿನ್ನ ಮಕ್ಕಳನ್ನು ಕಾಪಾಡು ಎಂದು ಕೇಳಿಕೊಳ್ಳುವ ನಿನ್ನ ಮಕ್ಕಳು.ಲೇಖಕಿ ವೀಣಾ ಹೇಮಂತ್ ಗೌಡ ಅವರ ‘ಬದುಕಿಗೊಂದು ಸೆಲೆ’ ಅಂಕಣದಲ್ಲಿ ‘ಸುಡುವ ಸೂರ್ಯನಿಗೊಂದು ಪತ್ರ’ ತಪ್ಪದೆ ಮುಂದೆ ಓದಿ…
ಅಪ್ಪ ಜಗತ್ಪಾಲಕ ಸೂರ್ಯದೇವನೇ, ನಿನಗೆ ಹೀಗೊಂದು ಪತ್ರ ಬರೆಯುವ ಪ್ರಮೇಯ ಬದುಕಿನಲ್ಲಿ ಬರುತ್ತದೆ ಎಂದು ಖಂಡಿತವಾಗಿಯೂ ಅಂದುಕೊಂಡಿರಲಿಲ್ಲ. ಆದರೇನು ಮಾಡುವುದು? ಇದೀಗ ನಿನಗೆ ಪತ್ರ ಬರೆಯಲೇಬೇಕಾದ, ಬರೆದು ಕ್ಷಮೆ ಕೇಳಿಕೊಳ್ಳಲೇಬೇಕಾದ ಕಾಲ ಕೂಡಿ ಬಂದಿದೆ.
ನೀನು ನಮ್ಮನ್ನು ಕ್ಷಮಿಸುವೆ ಎಂಬ ಭರವಸೆ ನನಗಿಲ್ಲ. ಆದರೆ ನಮ್ಮ ಸ್ವಯಂಕೃತ ಅಪರಾಧದ ತಪ್ಪೊಪ್ಪಿಗೆಯನ್ನು ನಿನ್ನ ಮುಂದೆ ಹೇಳಿಕೊಂಡು ನನ್ನ ಮನದ ಭಾರವನ್ನು ಹಗುರವಾಗಿಸಿಕೊಳ್ಳುವ ಆಶಯ ನನ್ನದು.
ನಮ್ಮ ಬದುಕನ್ನು ಬೆಳಗುವ ನಮ್ಮೆಲ್ಲ ದೈನಂದಿನ ಕೃತ್ಯಗಳಿಗೆ ಸಾಕ್ಷಿಯಾಗುವ ನಮಗೆ ಆಹಾರ ತಯಾರಿಸಿಕೊಳ್ಳಲು ಬೇಕಾಗುವ ಸಸ್ಯಗಳಿಗೆ ಸಂಜೀವಿನಿಯಾಗಿರುವ, ನಿನ್ನ ಅಸ್ತಿತ್ವವಿಲ್ಲದೆ ನಾವ್ಯಾರು ಇಲ್ಲ ಎಂಬ ಅರಿವನ್ನು ಹೊಂದಿದ್ದರೂ ಕೂಡ, ತಿಳಿದು ಕೂಡ ಅಜ್ಞರಂತೆ ವರ್ತಿಸುತ್ತಿರುವ ನಿನ್ನ ಮಕ್ಕಳ ತಪ್ಪು ಕ್ಷಮಿಸಲಾರದ ಮಹಾಪರಾಧ. ನಿಜ.
ಕೇವಲ ನಾಲ್ಕೈದು ದಶಕಗಳ ಹಿಂದೆ ಉದ್ಯಮಗಳು ತೆವಳುತ್ತಿರುವ ಕಾಲದಲ್ಲಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಅವಶ್ಯಕತೆ ಇತ್ತು. ಇದೀಗ ಸರ್ಕಾರದ ಕಟ್ಟುನಿಟ್ಟಿನ ನಿಯಮಾವಳಿಗಳ ಚಾಪೆಯ ಕೆಳಗೆ ನುಸುಳುವ ಕಲೆ ಜನರಿಗೆ ಗೊತ್ತಾಗಿದೆ. ಮತ್ತೆ ಕೆಲವರು ರಂಗೋಲಿಯ ಕೆಳಗೆ ನುಸುಳುವ ಚಾಣಾಕ್ಷತೆಯನ್ನು ಕೂಡ ಹೊಂದಿದ್ದಾರೆ. ಎಲ್ಲೋ
ಒಬ್ಬಿಬ್ಬರು ಹೀಗೆ ಮಾಡಿದ್ದರೆ ನೀನು ಕೂಡ ಹೋಗಲಿ ಬಿಡು ಎಂದು ಕ್ಷಮಿಸಿ ಬಿಡುತ್ತಿದ್ದೆ ಅಲ್ವೇ? ಆದರೆ ಉದ್ಯಮಗಳು ಉಗುಳುವ ಹೊಗೆಯನ್ನು ನಿನ್ನ ಅತಿ ನೇರಳೆ ಕಿರಣಗಳ ತಾಪವನ್ನು ತಡೆಯಲೆಂದು ಇರುವ ರಕ್ಷಾ ಕವಚ ಓಜೋನನ್ನು ಒಂದು ಇಡೀ ಆಸ್ಟ್ರೇಲಿಯಾ ಖಂಡದಷ್ಟು ಛಿದ್ರಗೊಳಿಸಿದ ಮೇಲೆ ನಿನಗೆ ಕೋಪ ಬರದಿದ್ದರೆ ಹೇಗೆ?.
ಉಣ್ಣುವ ತಟ್ಟೆಯನ್ನು ಛೇದ ಮಾಡುವಂತಹ ವಿಸ್ಮೃತಿ ನಮಗೇಕೆ ಬಂತು ಎಂದು ನಿನಗೆ ಕೋಪ ಬಂದಿದ್ದರೆ ಖಂಡಿತವಾಗಿಯೂ ಅದು ನಿನ್ನ ತಪ್ಪಲ್ಲ. ಹಾಗೆಂದು ಎಲ್ಲ ತಪ್ಪನ್ನು ಉದ್ಯಮಗಳ ಮೇಲೆ ಅವುಗಳು ಕಾರುವ ಕರಿ ಹೊಗೆಗಳ ಮೇಲೆ ಹಾಕಿ ನಾವು ಸಾಚಾ ಸಿದ್ದಪ್ಪಗಳು ಎಂದುಕೊಂಡರೆ ಅದು ನಮ್ಮ ಮೂರ್ಖತನವಾದೀತು. ನಿನ್ನ ಈ ಪ್ರಕೋಪಕ್ಕೆ ನಾವು ಮನುಷ್ಯರು ಕೂಡ ನಮ್ಮ ತಪ್ಪಿನ ಸಿಂಹಪಾಲನ್ನು ಸಲ್ಲಿಸಿದ್ದೇವೆ.

ನಮ್ಮದೇ ಸಂತಾನವನ್ನು ಹೆಚ್ಚಿಸಿಕೊಳ್ಳುವ ನಮ್ಮದೇ ಬದುಕನ್ನು ಮತ್ತಷ್ಟು ಮಗದಷ್ಟು ಚೆನ್ನಾಗಿ ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಕಾಡನ್ನು ಕಡಿದು ನಾಡಾಗಿಸಿದ್ದೇವೆ. ಕಾಡಿನ ಪ್ರಾಣಿಗಳು ಅವು ಕೂಡ ನಿನ್ನ ಮಕ್ಕಳಲ್ಲವೇ ? ಅವುಗಳ ಮನೆಗೆ ಬೆಂಕಿ ಇಟ್ಟು ಅವರನ್ನು ನೆಲೆಗೇಡಿಯನ್ನಾಗಿಸಿ ನಾವು ಬೆಚ್ಚಗಿನ ಗೂಡಿನಲ್ಲಿ ಇರಲು ಸಾಧ್ಯವೇ ? ಧಗೆಯ ಒಡಲೇ ನಮ್ಮ ಬದುಕು
ಆಗುತ್ತದೆ ಎಂಬ ಅರಿವಿಲ್ಲದೆ ಅಭಿವೃದ್ಧಿಯ ಹೆಸರಿನಲ್ಲಿ, ಮೂಲ ಸೌಕರ್ಯಗಳನ್ನು ಹೆಚ್ಚಿಸುವ ನೆವದಲ್ಲಿ ಕಾಡನ್ನು ನಾಶ ಮಾಡಿರುವುದು, ಗಿಡ ಮರಗಳಿಗೆ ಕೊಡಲಿಯ ಪ್ರಹಾರ ಮಾಡಿ ಅವುಗಳನ್ನು ಧರಾಶಾಹಿಯಾಗಿಸಿರುವುದು ನಮ್ಮದೇ ಸ್ವಯಂಕೃತ ಅಪರಾಧವಲ್ಲವೇ ?
ಒಳ್ಳೆಯ ಬೆಳೆ ಬೇಕು ಎಂಬ ಆಶಯ ತಪ್ಪಲ್ಲ. ಆದರೆ ಕಿಸೀ ಬಿ ಕೀಮತ್ ಪರ್ ಎಂಬ ಹಿಂದಿಯ ಹೇಳಿಕೆಯಂತೆ ಖಂಡಿತವಾಗಿಯೂ ಅಲ್ಲ. ನಮ್ಮ ಹೆಚ್ಚಿನ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಅದೆಷ್ಟೇ ಕೆಳಮಟ್ಟಕ್ಕೆ ಇಳಿಯಲು ಮನುಷ್ಯ ಸಿದ್ದನಾಗಿದ್ದಾನೆ. ಉಳಿವಿಗಾಗಿನ ಈ ಹೋರಾಟದಲ್ಲಿ ಕೇವಲ ತನ್ನ ಉಳಿವಿನ ಕುರಿತು ಮಾತ್ರ ಯೋಚಿಸುತ್ತಿರುವ ಆತ ಅತಿಯಾದ ದುರಾಸೆಯಿಂದ ಭೂಮಿ ತಾಯಿಯ ಒಡಲಿಗೆ ವಿಷ ಹಾಕುತ್ತಿದ್ದಾನೆ. ಏನನ್ನಾದರೂ ತೆರುವ, ಎಷ್ಟನ್ನಾದರೂ ತೆರುವ ಮೂಲಕ ನಾವು ಫಲವತ್ತಾದ ಭೂಮಿ ತಾಯಿಯ ಮಡಿಲಿಗೆ ಹಾಲಾಹಲದಂತಹ ರಾಸಾಯನಿಕಗಳನ್ನು ಬೆರೆಸಿದರೆ ಆಕೆಯಾದರೂ ಹೇಗೆ ಸುಮ್ಮನಿದ್ದಾಳು ? ಅಮೃತದಂತಹ ಬದುಕನ್ನು ನಮಗೆ ಕೊಡಮಾಡಿರುವ ಭೂಮಿತಾಯಿಯ ಮಡಿಲಿನಲ್ಲಿ ಗರಿಕೆ ಹುಲ್ಲು ಕೂಡ ಬೆಳೆಯದಂತೆ ಬಂಜರು ಮಾಡಿ ಇದೀಗ ಗೋಳಿಟ್ಟರೆ ಏನು ಪ್ರಯೋಜನ ? ಸಹಿಸಿ ಸಾಕಾದ ಆಕೆ ಕೂಡ ಧಗೆಯ ಒಡಲಾಗಿ ನಮಗೆ ಶಿಕ್ಷೆ ನೀಡುತ್ತಿದ್ದಾಳೆ. ಇನ್ನು ಆಪೋಷನ ತೆಗೆದುಕೊಳ್ಳುವುದಷ್ಟೇ ಬಾಕಿ.
ಇನ್ನು ಭೂಮಿ ತಾಯಿಯ ಒಡಲಿಗೆ ನಾವು ಹಾಕಿದ ವಿಷ, ಕಾರ್ಖಾನೆಗಳ ರಾಸಾಯನಿಕಗಳು ನಾವು ಕುಡಿಯುವ ಗಂಗೆಯನ್ನು ಕಲುಷಿತಗೊಳಿಸಿದೆ. ತನ್ನ ಒಡಲಲ್ಲಿರುವ ಆಮ್ಲಜನಕವನ್ನು, ಲವಣ ಮತ್ತು ಖನಿಜಗಳನ್ನು ಪೋಷಕಾಂಶಗಳ ರೂಪದಲ್ಲಿ ನಮಗೆ ನೀರಿನ ಮೂಲಕ ನೀಡುವ, ನಾವೆಲ್ಲರೂ ಗಂಗಾಮಾತೆ ಎಂದು ಪೂಜಿಸುವ ಜಲವನ್ನು ಕಲುಷಿತಗೊಳಿಸಿದ. ಮಹಾಪರಾಧ ಕೂಡ ನಮ್ಮದೇ. ನಾವು ಹುಲು ಮಾನವರಂತೆಯೇ ಜಲಚರಗಳು ಕೂಡ ನಿನ್ನ ಮಕ್ಕಳು.
ನಿನ್ನ ಒಡಲಿಗೆ ನಮ್ಮೆಲ್ಲ ಕಲ್ಮಶಗಳನ್ನು ಎಸೆಯುವ, ರಾಸಾಯನಿಕಗಳನ್ನು ಬೆರೆಸುವ, ನಿನ್ನೊಡಲನ್ನು ಮಲಿನಗೊಳಿಸುವ ನಿನ್ನಲ್ಲಿಯೇ ತಮ್ಮ ಬದುಕನ್ನು ಕಂಡುಕೊಂಡಿರುವ ನಿನ್ನ ಮಕ್ಕಳಾದ ಜಲಚರ ವಾಸಿಗಳಿಗೆ ಕೇಡು ಬಗೆಯುವ ನಮ್ಮ ಕುರಿತು ನಿನಗೆ ಪ್ರೀತಿಯಾದರೂ ಹೇಗೆ ಹುಟ್ಟೀತು ? ನಿನ್ನ ದ್ವೇಷಕ್ಕೂ ನಾವು ಅನರ್ಹರು ಎಂದು ಮಾತ್ರ ಹೇಳಬಲ್ಲೆ. ತಿಳಿಯದೆ ಮಾಡುವುದು ಮೂಢತನ ಎಂದಾದರೆ ತಿಳಿದು ಕೂಡ ಮಾಡುವ ನಮ್ಮ ಅಜ್ಞಾನಕ್ಕೆ ಬೆಲೆ ತೆರಬೇಕಾದವರು ನಾವೇ ಅಲ್ಲವೇ?.
ಈ ಹಿಂದೆ ಪ್ರತಿಯೊಬ್ಬರ ಮನೆಗಳಲ್ಲಿ ಹಿತ್ತಲಿರುತ್ತಿತ್ತು ಅಲ್ಲಿ ದಿನಬಳಕೆಯ ತರಕಾರಿಗಳ ಜೊತೆಗೆ ಹೂವು ಹಣ್ಣು ಗಳ ಗಿಡಮರಗಳ ಜೊತೆಗೆ ದೊಡ್ಡದಾದ ಹುಣಸೆ ಮರಗಳು ಕೂಡ ಇರುತ್ತಿದ್ದವು . ನಮ್ಮ ದೈನಂದಿನ ಅವಶ್ಯಕತೆಗಳನ್ನು ಪೂರೈಸಿ ಇತರರಿಗೆ ಕೊಡುವಷ್ಟು ಕೂಡ ವಿಶಾಲತೆ ನಮ್ಮದಾಗಿತ್ತು. ಆದರೆ ಆಧುನಿಕತೆಯ ಹೆಸರಿನಲ್ಲಿ ಅಲಂಕಾರಿಕ ಗಿಡಗಳನ್ನು ಮಾತ್ರ ನೆಟ್ಟು ನೀರು ದೊರೆಯುವುದಿಲ್ಲ ಎಂಬ ನೆಪ ವಡ್ಡಿ ಗಿಡ ಮರಗಳಿಗೆ ಕೊಡಲಿ ಹಾಕಿರುವ ನಮ್ಮ ಬುದ್ಧಿಗೇಡಿತನಕ್ಕೆ ನೀನಾದರೂ ಏನು ಮಾಡುತ್ತಿ?.

ಆಗಲೂ ಕೂಡ ಬೇಸಿಗೆ ಇತ್ತು ಆದರೆ ದಿನದ ಕೆಲಸಗಳನ್ನು ಮಾಡಿ ಪೂರೈಸಿ ದಣಿದ ದೇಹ ಮನೆಯ ಹಿತ್ತಲಿನಲ್ಲಿ ಕಟ್ಟೆಯ ಮೇಲೆ ಮರದ ಕೆಳಗೆ ಬರಿ ನೆಲದ ಮೇಲೆ ಮಲಗಿದರು ಕೂಡ ಬೀಸುವ ಮರಗಳ ತಂಗಾಳಿ ನಮಗೆ ವಿಶ್ರಾಂತಿಯ ಜೊತೆಗೆ ನೆಮ್ಮದಿಯನ್ನು ಕೂಡ ನೀಡುತ್ತಿದ್ದವು.
ಈಗ ಮನೆ ಮನೆಗಳಲ್ಲಿ ಫ್ಯಾನ್‌ಗಳು, ಏರ್ ಕೂಲರ್ ಗಳು ಎಸಿಗಳ ಭರಾಟೆ ಇದೆ, ನಿಜ! ಆದರೆ ಭೂಮಿ ತಾಯಿಯ ಮಡಿಲಲ್ಲಿ ಬೆಳೆದ ಮರಗಳು ಕೊಡುವ ನೆರಳು ಮತ್ತು ಗಾಳಿಯನ್ನು ನೀಡಲು ಯಾರಿಂದಲೂ ಸಾಧ್ಯವಿಲ್ಲ. ನಮಗೆ ಶುದ್ಧ ಆಮ್ಲಜನಕವನ್ನು, ನೆರಳನ್ನು ಫಲ ಪುಷ್ಪಗಳನ್ನು ನೀಡುವ ಅಂತಹ ಮರಗಳನ್ನು ಬೇರು ಬಿಟ್ಟು ಕಾಂಪೌಂಡ್ ನಾಶ ಮಾಡುತ್ತವೆ ಎಂಬ ಕಾರಣಕ್ಕಾಗಿ ಕಡಿದೊಗೆದಿರುವ ನಾವು ಮನೆಯ ಯಾವ ಮೂಲೆಯಲ್ಲಿ ಹೋದರೂ ನೆಮ್ಮದಿಯ ನೆಳಲು ಕಾಣದೆ ನಿಟ್ಟುಸಿರು ಬಿಡುವಂತಹ ಪರಿಸ್ಥಿತಿ ನಮ್ಮದಾಗಿದೆ.
ಇನ್ನು ನಾವು ಬಳಸುವ ಎ.ಸಿ ಗಳು ವಾತಾವರಣದಲ್ಲಿ ಮೀಥೇನ್ ಅನಿಲವನ್ನು ಬಿಡುಗಡೆ ಮಾಡಿ ವಾಯು ಮಾಲಿನ್ಯವನ್ನು ಉಂಟು ಮಾಡುತ್ತವೆ. ಇದರ ಪ್ರಮಾಣ ಹೆಚ್ಚಿದಷ್ಟು ನಾವು ಮನುಷ್ಯರಿಗೆ ಅಪಾಯ ತಪ್ಪಿದ್ದಲ್ಲ. ಭೂಮಿಯನ್ನು ಮಾತ್ರವಲ್ಲ ಆಕಾಶವನ್ನು ಕೂಡ ನಮ್ಮ ಅತಿಯಾದ ದಾಹಕ್ಕೆ ಆಪೋಷಣೆ ತೆಗೆದುಕೊಂಡು ಅಲ್ಲೂ ಕೂಡ ವಾಯು ಮಾಲಿನ್ಯದ ಮೂಲಕ ಹಾಳು ಮಾಡಿರುವ ನಮ್ಮ ಮೌಡ್ಯತೆಯನ್ನು ಸಹಿಸುವುದು ನಿನಗೆ ಕೂಡ ಅಸಾಧ್ಯ ಅಲ್ಲವೇ ?. ಹೀಗೆ ನೆಲ,ಜಲ, ವಾಯುವನ್ನು ಹಾಳು ಮಾಡಿರುವ ನಾವು ಗಿಡ ಮರಗಳನ್ನು ಕಡಿದೊಗೆದು ಪರಿಸರವನ್ನು ನಾಶ ಮಾಡಿದ್ದೇವೆ. ಪರಿಣಾಮವಾಗಿ ವಾತಾವರಣದ ತಾಪಮಾನ ಹೆಚ್ಚಾಗಿದೆ. ಸಹಸ್ರಾರು ವರ್ಷಗಳಿಂದ ಒಂದು ಸೆಂಟಿಮೀಟರ್ ಇನ್ನಷ್ಟು ಕರಗದ ಬೃಹದಾಕಾರದ ಹಿಮದ ನೀರ್ಗಲ್ಲುಗಳು ಇನ್ನಿಲ್ಲದಂತೆ ಕರಗಿ ಹರಿಯುತ್ತಿವೆ ಪರಿಣಾಮವಾಗಿ ವಿಪರೀತ ಬಿಸಿಲು ಚಳಿ ಮಳೆಗಳ ತೊಂದರೆಗಳಿಂದ ನಾವು ನಲುಗುತ್ತಿದ್ದೇವೆ.
ನಮ್ಮ ಪೂರ್ವಜರು ನಮಗೆ ಸ್ವಚ್ಚ,ಶುದ್ಧವಾದ ಹಾಗೂ ಬದುಕಲು ಯೋಗ್ಯವಾದ ಪರಿಸರವನ್ನು ನೀಡಿದ್ದರು. ಅದು ಅವರ ಕರ್ತವ್ಯವಾಗಿತ್ತು. ಈ ಭೂಮಿಯ ಪ್ರಜೆಗಳಾದ ನಾವುಗಳು ನಮ್ಮ ಮುಂದಿನ ಪೀಳಿಗೆಗೆ ಅಷ್ಟೇ ಬದುಕಲು ಯೋಗ್ಯವಾದ ವಾತಾವರಣವನ್ನು ಹೊಂದಿರುವ ಪರಿಸರವನ್ನು ಬಿಟ್ಟು ಕೊಡಬೇಕಾದ ಜವಾಬ್ದಾರಿ ಹೊತ್ತಿದ್ದು ಆ ನಿಟ್ಟಿನಲ್ಲಿ ಇನ್ನು ಮುಂದೆ ಯಾದರೂ ಕಾರ್ಯನಿರ್ವಹಿಸಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಈಗಾಗಲೇ ಆಗಿ ಹೋಗಿರುವ ಪ್ರಮಾದವನ್ನು ಸರಿಪಡಿಸಲು ಇಂದಿನಿಂದಲೇ ಕಾರ್ಯ ನಿರ್ವಹಿಸುತ್ತೇವೆ ಎಂಬ ಭರವಸೆಯನ್ನು ಭೂಮಿಯ ವಾಸಿಗಳಾದ ನಾವು ನಿನಗೆ ನೀಡುತ್ತೇವೆ. ಇನ್ನಾದರೂ ನಿನ್ನ ಕೋಪ ತಾಪವನ್ನು ಬದಿಗಿಟ್ಟು ಎಳೆಯ ಹದವಾದ ಬಿಸಿಲನ್ನು ಮಾತ್ರ ನಮಗೆ ನೀಡು. ನಿನ್ನ ಮಕ್ಕಳನ್ನು ಕಾಪಾಡು ಎಂದು ಕೇಳಿಕೊಳ್ಳುವ ನಿನ್ನ ಮಕ್ಕಳು.
- ಹಿಂದಿನ ಸಂಚಿಕೆಗಳು :
- ಬದುಕಿಗೊಂದು ಸೆಲೆ (ಭಾಗ -೧)
- ಬದುಕಿಗೊಂದು ಸೆಲೆ (ಭಾಗ -೨)
- ಬದುಕಿಗೊಂದು ಸೆಲೆ (ಭಾಗ -೩)
- ಬದುಕಿಗೊಂದು ಸೆಲೆ ‘ಕೆಲ ವಿಷಯಗಳಿಗೆ ಕಿವುಡರಾಗಬೇಕು’ (ಭಾಗ – ೪)
- ಬದುಕಿಗೊಂದು ಸೆಲೆ ‘ಉದಾರತೆ ಎಂಬ ಮಾರುಕಟ್ಟೆ ತಂತ್ರ’ (ಭಾಗ- ೫)
- ಬದುಕಿಗೊಂದು ಸೆಲೆ ‘ಹೌದು! ನನಗೆ ವಯಸ್ಸಾಗುತ್ತಿದೆ’ (ಭಾಗ – ೬)
- ಬದುಕಿಗೊಂದು ಸೆಲೆ‘ಕಾಯುತ್ತಿದ್ದಾರೆ ನಿಮ್ಮವರು… ನಿಮಗಾಗಿ’ (ಭಾಗ -೭)
- ಬದುಕಿಗೊಂದು ಸೆಲೆ ‘ಹೆಣ್ಣು ಮಕ್ಕಳೇ ಎಚ್ಚರವಾಗಿ’ (ಭಾಗ – ೮)
- ಬದುಕಿಗೊಂದು ಸೆಲೆ ‘ ಮನೆಯ ಆಹಾರವೂ,ಕೌಟುಂಬಿಕ ಬಂಧವೂ’ (ಭಾಗ – ೯)
- ಬದುಕಿಗೊಂದು ಸೆಲೆ ‘ಶ್ರಾವಣ ಮಾಸ… ಶ್ರವಣ ಮಾಸ’ (ಭಾಗ – ೧೦)
- ಬದುಕಿಗೊಂದು ಸೆಲೆ ‘ಪ್ಯಾರಿಸ್ ಸುಗಂಧದ ಖ್ಯಾತಿಯ ಕೋಕೋ ಚಾನೆಲ್…. ಸತತ ಪ್ರಯತ್ನದ ಸಾಫಲ್ಯ’ (ಭಾಗ – ೧೧)
- ಬದುಕಿಗೊಂದು ಸೆಲೆ ವರಮಹಾಲಕ್ಷ್ಮಿ ಹಬ್ಬ (ಭಾಗ – ೧೨)
- ಬದುಕಿಗೊಂದು ಸೆಲೆ ‘ಸಿತಾರೆ ಜಮೀನ್ ಪರ್’ (ಭಾಗ – ೧೪)
- ಬದುಕಿಗೊಂದು ಸೆಲೆ ‘ಸಾಧನೆಯ ಶಿಖರ ಏರಲು…ಬೇಕು ಬದ್ಧತೆ’ (ಭಾಗ – ೧೫)
- ಬದುಕಿಗೊಂದು ಸೆಲೆ ‘ನನ್ನ ಪ್ರೀತಿಯ ಗಣೇಶ’ (ಭಾಗ – ೧೬)
- ಬದುಕಿಗೊಂದು ಸೆಲೆ ‘ಗಣೇಶ….ವಿಗ್ರಹ ಒಂದು ಸಂಕೇತಗಳು ನೂರು’ (ಭಾಗ – ೧೭)
- ಬದುಕಿಗೊಂದು ಸೆಲೆ ‘ನಮ್ಮ ಬದುಕು ಮತ್ತು ಆಯ್ಕೆಗಳು’ (ಭಾಗ – ೧೮)
- ಬದುಕಿಗೊಂದು ಸೆಲೆ ‘ಸ್ನೇಹ ಬಂಧ ’ (ಭಾಗ-೧೯)
- ಬದುಕಿಗೊಂದು ಸೆಲೆ ‘ಮಕ್ಕಳ ಕುರಿತು ಅತಿ ಕಾಳಜಿ…. ಖಂಡಿತ ಬೇಡ’ (ಭಾಗ-೨೦)
- ಬದುಕಿಗೊಂದು ಸೆಲೆ ‘ಮಕ್ಕಳ ಸಂಸ್ಕಾರದಲ್ಲಿ ತಾಯಿಯ ಪಾತ್ರ’ (ಭಾಗ-೨೧)
- ಬದುಕಿಗೊಂದು ಸೆಲೆ ‘ಮಗನಿಗೆ ಶಿಸ್ತಿನ ಪಾಠದ ಪತ್ರ’ (ಭಾಗ-೨೨)
- ಬದುಕಿಗೊಂದು ಸೆಲೆ ‘ಭಿತ್ತಿಯಲ್ಲಿ ನೆನಪಾಗಿ ಉಳಿದ… ಎಸ್ ಎಲ್ ಭೈರಪ್ಪ’ (ಭಾಗ-೨೩)
- ಬದುಕಿಗೊಂದು ಸೆಲೆ “ದ ಹ್ಯಾಪಿಯಸ್ ಮ್ಯಾನ ಆನ್ ದ ಅರ್ಥ’ (ಭಾಗ-೨೪)
- ಬದುಕಿಗೊಂದು ಸೆಲೆ ‘ಎಲ್ಲ ಏಟಿಗೂ ಇದಿರೇಟು….ಉತ್ತರವಲ್ಲ’ (ಭಾಗ-೨೫)
- ಬದುಕಿಗೊಂದು ಸೆಲೆ ‘ಗಂಡು ಹೆಣ್ಣು…. ಒಂದು ಸಾಮಾಜಿಕ ವಿಶ್ಲೇಷಣೆ’ (ಭಾಗ-೨೬)
- ಬದುಕಿಗೊಂದು ಸೆಲೆ ‘ಮೂಲಭೂತ ಅಭ್ಯಾಸಗಳು ಮತ್ತು ಮಕ್ಕಳು’ (ಭಾಗ-೨೭)
- ಬದುಕಿಗೊಂದು ಸೆಲೆ ‘ಬೆಳಕಿನ ಹಬ್ಬ ದೀಪಾವಳಿ ’ (ಭಾಗ-೨೮)
- ಬದುಕಿಗೊಂದು ಸೆಲೆ ‘ಸಡಗರ ಸಂಭ್ರಮದ ಕನ್ನಡ ರಾಜ್ಯೋತ್ಸವ’ (ಭಾಗ-೨೯)
- ಬದುಕಿಗೊಂದು ಸೆಲೆ ‘ಸಡಗರ ಸಂಭ್ರಮದ ಕನ್ನಡ ರಾಜ್ಯೋತ್ಸವ’ (ಭಾಗ-೩೦)
- ಬದುಕಿಗೊಂದು ಸೆಲೆ ‘ನಿಮ್ಮ ಮಕ್ಕಳ ವರ್ತನೆ ಮಿತಿಯಲ್ಲಿರಲಿ… ಯಾವುದೂ ಅತಿಯಾಗದಿರಲಿ ’ (ಭಾಗ-೩೧)
- ಬದುಕಿಗೊಂದು ಸೆಲೆ ಹಸಿರಲ್ಲಿ ಒಂದಾದ ಸಾಲುಮರದ ತಿಮ್ಮಕ್ಕ (ಭಾಗ-೩೨)
- ಬದುಕಿಗೊಂದು ಸೆಲೆ (ಭಾಗ-೩೩)
- ಬದುಕಿಗೊಂದು ಸೆಲೆ ‘ಪ್ರೀತಿಯ ತೀವ್ರತೆ’ (ಭಾಗ-೩೪)
- ಬದುಕಿಗೊಂದು ಸೆಲೆ ‘ಖಾಲಿ ಕುರ್ಚಿ ಎಂಬ ತತ್ವವೂ…ನಮ್ಮ ಬದುಕೂ’ (ಭಾಗ-೩೫)
- ಬದುಕಿಗೊಂದು ಸೆಲೆ ‘ಒಂದು ಸುತ್ತು….ಋತುಚಕ್ರ ರಜೆಯ ಸುತ್ತ’ (ಭಾಗ-೩೬)
- ಬದುಕಿಗೊಂದು ಸೆಲೆ ‘ಮೌನ ಸಾಧನೆ’ (ಭಾಗ-೩೭)
- ಬದುಕಿಗೊಂದು ಸೆಲೆ ‘ಮಹತ್ವಕಾಂಕ್ಷಿ ಕ್ರೀಡಾ ಯೋಜನೆಗಳು ಹಾಗೂ ಕ್ರೀಡೆಯ ಭವಿಷ್ಯ??’ (ಭಾಗ-೩೮)
- ಬದುಕಿಗೊಂದು ಸೆಲೆ ‘ಮಾಧ್ಯಮಗಳ ವೈಭವೀಕೃತ ಸುದ್ದಿ ನಿರೂಪಣೆ…. ಒಂದು ವಿವೇಚನೆ’ (ಭಾಗ-೩೯)
- ಬದುಕಿಗೊಂದು ಸೆಲೆ ‘ಎಳ್ಳು ಅಮಾವಾಸ್ಯೆ…ಚರಗ ಚೆಲ್ಲುವ ಹಬ್ಬನೆ’ (ಭಾಗ-೪೦)
- ಬದುಕಿಗೊಂದು ಸೆಲೆ ‘ಅವರಿವರನ್ನು ಕಂಡು ಕರುಬದಿರಿ… ನೀವು ನೀವಾಗಿಯೇ ಇರಿ’ (ಭಾಗ-೪೧)
- ಬದುಕಿಗೊಂದು ಸೆಲೆ ‘ಶ್ರೀ ಸಿದ್ದೇಶ್ವರ ಸ್ವಾಮಿಗಳು’ (ಭಾಗ-೪೨)
- ಬದುಕಿಗೊಂದು ಸೆಲೆ ‘ಯುವ ಜನತೆಗೆ ಹಣಕಾಸಿನ ಕುರಿತಾದ ಚಿನ್ನದಂತಹ ನಿಯಮಗಳು’ (ಭಾಗ-೪೩)
- ಬದುಕಿಗೊಂದು ಸೆಲೆ ‘ಮಕ್ಕಳಲ್ಲಿ ಆತ್ಮವಿಶ್ವಾಸ ಬೆಳೆಸುವುದು ಹೇಗೆ ?’ (ಭಾಗ-೪೪)
- ಬದುಕಿಗೊಂದು ಸೆಲೆ ‘ದಾಂಪತ್ಯದಲ್ಲಿ ಸಮಾನತೆ ’ (ಭಾಗ-೪೫)
- ಬದುಕಿಗೊಂದು ಸೆಲೆ ‘ಹೀಗೊಂದು ವಧು/ವರ ಪರೀಕ್ಷೆ ’ (ಭಾಗ-೪೭)
- ಬದುಕಿಗೊಂದು ಸೆಲೆ ‘ಒಂಟಿ ಧ್ವನಿಗೆ… ಜಂಟಿಯಾದ ನೂರಾರು ಧ್ವನಿಗಳು’ (ಭಾಗ-೪೮)
- ಬದುಕಿಗೊಂದು ಸೆಲೆ ‘ಹಕ್…… ತನ್ನ ಹಕ್ಕಿಗಾಗಿ ಹೆಣ್ಣು ಮಗಳ ಹೋರಾಟ’ (ಭಾಗ-೪೯)
- ಬದುಕಿಗೊಂದು ಸೆಲೆ ಶಾಂತಿ ಸುಧಾ ಘೋಷ್ (ಭಾಗ- ೫೧)
- ಬದುಕಿಗೊಂದು ಸೆಲೆ ಪೋಲ್ಯಾಂಡ್ ದೇಶದ ಮಕ್ಕಳ ದುರಂತದ ಕತೆ (ಭಾಗ- ೫೨)
- ಬದುಕಿಗೊಂದು ಸೆಲೆ ಕಾಶಿಯ ಲತಾ ಮಂಗಳ ಕಪೂರ್ ಗೆ ಪದ್ಮಶ್ರೀ ಪುರಸ್ಕಾರ (ಭಾಗ- ೫೩)
- ಬದುಕಿಗೊಂದು ಸೆಲೆ ‘ಶಿವರಾತ್ರಿ, ಶಿವನ ಆರಾಧನೆಯ ದಿನ’ (ಭಾಗ- ೫೪)
- ಬದುಕಿಗೊಂದು ಸೆಲೆ ‘ಅಸಹನೀಯವಾಗದಿರಲಿ ವೃದ್ಧಾಪ್ಯ’ (ಭಾಗ- ೫೫)
- ಬದುಕಿಗೊಂದು ಸೆಲೆ ‘ಸಮತೋಲಿತ ಆಹಾರ’ (ಭಾಗ- ೫೬)
- ಬದುಕಿಗೊಂದು ಸೆಲೆ ‘ನವಜಾತ ಶಿಶು ವಿಜ್ಞಾನ ಶಾಸ್ತ್ರದ ಮಹಾತಾಯಿ….ಡಾಕ್ಟರ್ ಅಮಿದಾ ಫರ್ನಾಂಡಿಸ್’ (ಭಾಗ- ೫೭)
- ಬದುಕಿಗೊಂದು ಸೆಲೆ ‘ಬಣ್ಣಗಳ ಹಬ್ಬ…. ಹೋಳಿ’ (ಭಾಗ- ೫೮)
- ಬದುಕಿಗೊಂದು ಸೆಲೆ ‘ಇರಲಿ ಆಸರೆ, ಹಿರಿ ಜೀವಗಳಿಗೆ ’ (ಭಾಗ- ೫೯)
- ಬದುಕಿಗೊಂದು ಸೆಲೆ ‘ಸಂಕಲ್ಪ ಶಕ್ತಿ ಮತ್ತು ಯಶೋಗಾಥೆ ’ (ಭಾಗ- ೬೦)
- ಬದುಕಿಗೊಂದು ಸೆಲೆ ಅನುರಾಧ ಕೊಯಿರಾಲ (ಭಾಗ- ೬೧)
- ಬದುಕಿಗೊಂದು ಸೆಲೆ ‘ಗ್ರಾಮೀಣ ಬದುಕಿನಲ್ಲಿ ಯುಗಾದಿ ಹಬ್ಬದ ಸಂಭ್ರಮ’ (ಭಾಗ- ೬೨)
- ಬದುಕಿಗೊಂದು ಸೆಲೆ ‘ ಯುಥನೇಶಿಯ…. ದಯಾಮರಣಕ್ಕೆ ಅಸ್ತು’ (ಭಾಗ- ೬೩)
- ಬದುಕಿಗೊಂದು ಸೆಲೆ ‘ ವೈರುಧ್ಯಗಳ ನಡುವೆ…. ಹೆಣ್ಣಿನ ಬದುಕು’ (ಭಾಗ- ೬೪)
- ಬದುಕಿಗೊಂದು ಸೆಲೆ ‘ಗೃಹಕೃತ್ಯ…ಕಾನೂನಿನಲ್ಲಿ ಮಾನ್ಯತೆ’ (ಭಾಗ- ೬೫)
- ಬದುಕಿಗೊಂದು ಸೆಲೆ ‘ಹಿಂದಿ ಇರಲಿ ನಮ್ಮ ಪಠ್ಯದ ಭಾಗ’ (ಭಾಗ- ೬೬)
- ಬದುಕಿಗೊಂದು ಸೆಲೆ ‘ಒಂದು ಕಪ್ ಚಹಾ ಮತ್ತು ಒಂಟಿತನ’ (ಭಾಗ- ೬೭)
- ಬದುಕಿಗೊಂದು ಸೆಲೆ ‘ನಿಮ್ಮ ಮನವ ಸಂತೈಸಿಕೊಳ್ಳಿ’ (ಭಾಗ- ೬೮)
- ವೀಣಾ ಹೇಮಂತ್ ಗೌಡ ಪಾಟೀಲ್ – ಮುಂಡರಗಿ, ಗದಗ.
