ವೃದ್ಧರು ಬರಲೇ ಇಲ್ಲ. ಅನಾರೋಗ್ಯದಿಂದ ಬಂದಿರಲಿಕ್ಕಿಲ್ಲ ಎಂದು ಮಾಲೀಕರು ಹಾಗೂ ಅಲ್ಲಿಯ ಸಿಬ್ಬಂದಿ ಭಾವಿಸಿದರು. ಆದರೆ ಮರುದಿನವೂ ಅವರು ಬರಲಿಲ್ಲ. ಲೇಖಕಿ ವೀಣಾ ಹೇಮಂತ್ ಗೌಡ ಅವರ ‘ಬದುಕಿಗೊಂದು ಸೆಲೆ’ ಅಂಕಣದಲ್ಲಿ ‘ಒಂದು ಕಪ್ ಚಹಾ ಮತ್ತು ಒಂಟಿತನ’ ತಪ್ಪದೆ ಮುಂದೆ ಓದಿ…
ಊರಿನ ಮಧ್ಯ ಭಾಗದಲ್ಲಿ ಇರುವ ಆ ಪುಟ್ಟ ಹೋಟೆಲ್ನಲ್ಲಿ ಸದಾ ಜನ ಜಂಗುಳಿ ಇರುತ್ತಿತ್ತು. ದೋಸೆ ಹೊಯ್ಯುವ ಶಬ್ದ, ಚಟ್ನಿ ರುಬ್ಬುವ ಮಿಕ್ಸಿಯ ಜೋರಾದ ಅರಚುವಿಕೆ, ಘಮ್ ಎಂಬ ಸುವಾಸನೆಯನ್ನು ಹರಡುವ ಒಗ್ಗರಣೆಯ ಶಬ್ದ, ಸರಸರ ಓಡಾಡುತ್ತಾ ಅವರವರು ಬೇಡಿದ್ದನ್ನು ತಂದು ಅವರ ಟೇಬಲ್ ಗೆ ಒದಗಿಸುತ್ತಿದ್ದ ಮಾಣಿಗಳು ಮುಂಭಾಗದ ಎತ್ತರದ ಸ್ಥಳದಲ್ಲಿ ಕ್ಯಾಶ್ ಬಾಕ್ಸ್ ಹಿಂದೆ ಕುಳಿತುಕೊಳ್ಳುತ್ತಿದ್ದ ಹೋಟೆಲ್ ನ ಮ್ಯಾನೇಜರ್ ಕಮ್ ಮಾಲೀಕರು ಹೀಗೆ ಸದಾ ಗಿಜಿಗುಟ್ಟುವಿಕೆಯಿಂದ ಕೂಡಿದ ಹೋಟೆಲ್ನಲ್ಲಿ ಮಧ್ಯಾಹ್ನ 3 ಗಂಟೆಯಿಂದ ಸಂಜೆ 5 ರವರೆಗೆ ತುಸು ವಿರಾಮ ಇರುತ್ತಿತ್ತು.
ಇಳಿ ಮಧ್ಯಾಹ್ನ ನಾಲ್ಕರ ಸುಮಾರಿಗೆ ಆ ಹೊಟಲ್ಲಿಗೆ ಬಂದು ಕಿಡಕಿಗೆ ಹತ್ತಿರವಾದ ಮೂಲೆಯ ಒಂದು ಟೇಬಲ್ ನಲ್ಲಿ ಕುಳಿತುಕೊಳ್ಳುತ್ತಿದ್ದ ಆ ವ್ಯಕ್ತಿ ಕೇವಲ ಒಂದು ಕಪ್ ಚಹಾಗೆ ಆರ್ಡರ್ ಮಾಡುತ್ತಿದ್ದರು. ಹಾಗೆ ತಂದುಕೊಟ್ಟ ಆ ಚಹವನ್ನು ಗುಟುಕರಿಸಿ ಕುಡಿಯುತ್ತಾ ಸರಿಸುಮಾರು ಎರಡು ಗಂಟೆಗಳ ಕಾಲ ಅವರು ಅಲ್ಲಿಯೇ ಕುಳಿತುಕೊಳ್ಳುತ್ತಿದ್ದರು.
70 ಕ್ಕೂ ಹೆಚ್ಚು ವಸಂತಗಳನ್ನು ಕಂಡಿರಬಹುದಾದ ಅವರ ಪ್ಯಾಂಟು ಅಲ್ಲಲ್ಲಿ ಮಾಸಿದ್ದರೆ ಅವರ ಶರ್ಟು ಕಲೆಗಳಿಂದ ಮುಕ್ತವಾಗಿರಲಿಲ್ಲ. ಬಹಳ ಹಳೆಯವೇನೋ ಎಂದು ತೋರುತ್ತಿದ್ದ ಅವರ ಶೂಗಳು ಅವರ ದುರ್ಬಲ ಆರ್ಥಿಕ ಪರಿಸ್ಥಿತಿಯನ್ನು ಕುರಿತು ಹೇಳುತ್ತಿದ್ದವು. ಒಂದು ಕಪ್ ಚಹಾದ ಹೊರತಾಗಿ ಆತ ಬೇರೇನನ್ನೂ ಆರ್ಡರ್ ಮಾಡುತ್ತಿರಲಿಲ್ಲ. ಕಿಟಕಿಯ ಹೊರಗೆ ನೋಡುತ್ತಾ ಮತ್ತೆ ಕೆಲವೊಮ್ಮೆ ಹೋಟೆಲಿನ ಗೌಜಿ ಗದ್ದಲದಲ್ಲಿ ಕಳೆದು ಹೋದವರಂತೆ ತೋರುತ್ತಿದ್ದ.
ಅವರು ಅಲ್ಲಿ ಕುಳಿತುಕೊಳ್ಳುವುದಕ್ಕೆ ಯಾರ ಅಭ್ಯಂತರ ಇರದೆ ಹೋದರೂ ಕೂಡ ಕೇವಲ ಒಂದು ಕಪ್ ಚಹಾ ಕುಡಿಯುವ ವ್ಯಕ್ತಿ ಅಷ್ಟೊಂದು ಸಮಯ ಅಲ್ಲಿ ಕುಳಿತುಕೊಳ್ಳಬೇಕೆ? ಎಂದು ಅಲ್ಲಿಯ ಮಾಣಿಗಳು ತಮ್ಮ ತಮ್ಮಲ್ಲಿಯೇ ಮಾತಾಡಿಕೊಳ್ಳುತ್ತಿದ್ದರು. ಮಾಲೀಕರಿಗೂ ವೃದ್ಧರಾಗಿ ವರ್ತನೆ ವಿಚಿತ್ರ ಎನಿಸಿದರೂ ಕೂಡ ಮಧ್ಯಾಹ್ನದ ಆ ಇಳಿ ಹೊತ್ತಿನಲ್ಲಿ ತಮ್ಮ ಪಾಡಿಗೆ ತಾವು ಕುಳಿತು ಹೊರಟು ಹೋಗುತ್ತಿದ್ದ ವೃದ್ಧರಿಗೆ ಬದಲು ಹೇಳಲು ಸಾಧ್ಯವಾಗುತ್ತಿರಲಿಲ್ಲ.
ಹೀಗೆಯೇ ಕೆಲ ದಿನಗಳು ಕಳೆದ ಮೇಲೆ ಅದೇಕೋ ಮಾಲೀಕರಿಗೆ ಆತನ ಆರ್ಥಿಕ ಪರಿಸ್ಥಿತಿ ಒಂದು ಕಪ್ ಚಹಾ ತೆಗೆದುಕೊಳ್ಳುವುದಕ್ಕೂ ಅನುವು ಮಾಡಿಕೊಡುವುದಿಲ್ಲವಾದರೂ ಆತ ಇಲ್ಲಿ ಬಂದು ಕುಳಿತುಕೊಳ್ಳುತ್ತಾರೆ ಎಂದರೆ ಏನೋ ಕಾರಣ ಇರಬಹುದು ಎಂದು ಬಲವಾಗಿ ಅನಿಸತೊಡಗಿತ್ತು.
ಅದೊಂದು ದಿನ ಚಹಾದ ಜೊತೆ ಒಂದೆರಡು ತುಂಡು ರಸ್ಕ್ ಗಳನ್ನು ಒಂದು ತಟ್ಟೆಯಲ್ಲಿಟ್ಟು ತಾವೇ ಅವರ ಬಳಿ ಹೋಗಿ ಕೊಟ್ಟರು. ತಲೆ ಎತ್ತಿ ನೋಡಿದ ಅವರು ನಾನು ಇದನ್ನು ಆರ್ಡರ್ ಮಾಡಿರಲಿಲ್ಲ ಎಂದು ಹೇಳಿದರು.
ನೀವು ಆರ್ಡರ್ ಮಾಡಿರಲಿಲ್ಲ ನಿಜ. ಆದರೆ ನಿಮಗೆ ಹಸಿವಾಗಿರಬಹುದು ಎಂದು ನಾನೇ ತಂದುಕೊಟ್ಟೆ. ಇದಕ್ಕೆ ನೀವೇನು ಬಿಲ್ ಪೇ ಮಾಡಬೇಕಾಗಿಲ್ಲ ಎಂದು ಹೇಳಿದರು. ತುಂಬಿದ ಮನದಿಂದ ಅವರಿಗೆ ಧನ್ಯವಾದಗಳನ್ನು ಹೇಳಿದ ಆ ವೃದ್ದರು ತುಸು ನಿರಾಳ ಭಾವದಿಂದ ಕುಳಿತರು. ಅತ್ಯಂತ ನಿಧಾನವಾಗಿ ರಸ್ಕಿನ ಪ್ರತಿಯೊಂದು ತುಂಡನ್ನು ಚಹಾದಲ್ಲಿ ಅದ್ದಿ ಪ್ರೀತಿಯಿಂದ ಸೇವಿಸಿದರು.
ಈ ರೀತಿ ಮಾಲೀಕರು ಆಗಾಗ ಆ ವೃದ್ದರಿಗೆ ಹೋಟೆಲ್ ನಲ್ಲಿ ಮಾಡಿದ ಯಾವುದೋ ಒಂದು ತಿನಿಸನ್ನು ಅಂದಿನ ವಿಶೇಷ ಎಂದು ಹೇಳಿ ತಮ್ಮ ಕೊಡುಗೆಯಾಗಿ ಅವರಿಗೆ ನೀಡುವುದು ಅವರು ಅದನ್ನು ಪ್ರೀತಿಯಿಂದ ಆಸ್ವಾದಿಸುವುದು ನಡೆಯಿತು. ಮಾಲೀಕರ ಈ ವರ್ತನೆಯಿಂದ ಪ್ರಭಾವಿತರಾದ ಮಾಣಿಗಳು ಕೂಡ ಅವರನ್ನು ವಿಶೇಷವಾಗಿ ಕಾಣತೊಡಗಿದರು. ಹೀಗೆಯೇ ಒಂದೆರಡು ವರ್ಷಗಳು ಕಳೆದವು.

ಫೋಟೋ ಕೃಪೆ : ಅಂತರ್ಜಾಲ
ಅದೊಂದು ದಿನ ವೃದ್ಧರು ಬರಲೇ ಇಲ್ಲ. ಅನಾರೋಗ್ಯದಿಂದ ಬಂದಿರಲಿಕ್ಕಿಲ್ಲ ಎಂದು ಮಾಲೀಕರು ಹಾಗೂ ಅಲ್ಲಿಯ ಸಿಬ್ಬಂದಿ ಭಾವಿಸಿದರು. ಆದರೆ ಮರುದಿನವೂ ಅವರು ಬರಲಿಲ್ಲ…. ಎಲ್ಲರೂ ಅವರ ಬರವಿಗಾಗಿ ಕಾಯ್ದವರಂತೆ ಇದ್ದರು. ದಿನಗಳು ಉರುಳಿ ಒಂದು ವಾರವೇ ಆಯಿತು ಅವರ ಪತ್ತೆಯೇ ಇರಲಿಲ್ಲ. ಅದೊಂದು ದಿನ ಮಧ್ಯಾಹ್ನ ಓರ್ವ ಮಧ್ಯ ವಯಸ್ಸಿನ ಹೆಣ್ಣುಮಗಳು ಆ ಪುಟ್ಟ ಹೋಟೆಲ್ ನ ಒಳಗೆ ಬಂದು ಮೇಲ್ವಿಚಾರಕರ ಕುರ್ಚಿಯಲ್ಲಿ ಕುಳಿತಿದ್ದ ಹೋಟೆಲ್ ಮ್ಯಾನೇಜರ್ ಕಮ್ ಮಾಲೀಕರನ್ನು ಭೇಟಿಯಾದರು.
ಇಲ್ಲಿ ಮೂಲೆಯ ಟೇಬಲ್ ಮೇಲೆ ಕೂರುತ್ತಿದ್ದ ವ್ಯಕ್ತಿ ಎಂದು ಆಕೆ ಹೇಳುತ್ತಿದ್ದಂತೆಯೇ ಧಾವಂತದಿಂದ ಹೌದು! ಕಳೆದ ಕೆಲವು ದಿನಗಳಿಂದ ಅವರು ಬಂದಿಲ್ಲ ನಾವೆಲ್ಲರೂ ಅವರಿಗಾಗಿ ಕಾಯುತ್ತಿದ್ದೇವೆ. ನಿಮಗೆ ಅವರ ವಿಳಾಸ ಗೊತ್ತೆ ಎಂದು ಮಾಲೀಕರು ಅವರನ್ನು ಕೇಳಿದರು. ಮೆಲುವಾದ ನಗುವನ್ನು ಸೂಸುತ್ತಾ ಆ ಹೆಣ್ಣು ಮಗಳು ಹೌದು ಅವರು ಇನ್ನು ಮುಂದೆ ಬರುವುದಿಲ್ಲ. ಬಾರದ ಲೋಕಕ್ಕೆ ಅವರು ಪಯಣಿಸಿದ್ದಾರೆ. ನಿಮ್ಮ ಹೋಟೆಲ್ ಬಗ್ಗೆ ಹಾಗೂ ನಿಮ್ಮ ಕುರಿತು ಅವರು ಸಾಕಷ್ಟು ವಿಷಯಗಳನ್ನು ಹೇಳುತ್ತಿದ್ದರು. ಅವರು ನಿಮಗೆ ಕೊಡಲು ಈ ಪತ್ರವನ್ನು ಕೊಟ್ಟಿದ್ದಾರೆ ಎಂದು ಹೇಳಿ ಆ ಪತ್ರವನ್ನು ಅವರಿಗೆ ಹಸ್ತಾಂತರಿಸಿದರು.
ಅವರ ಮರಣದ ಸುದ್ದಿಯನ್ನು ಕೇಳುತ್ತಲೇ ಕಣ್ಣಂಚಿನಲ್ಲಿ ನೀರು ತುಂಬಿಕೊಂಡ ಮಾಲೀಕರು ಪತ್ರ ಇರೋ ವಿಷಯವನ್ನು ಕೇಳಿ ಆ ಪತ್ರವನ್ನು ಆಕೆಯ ಕೈಯಿಂದ ಪಡೆದುಕೊಂಡು ಅದರ ಮೇಲೆ ಕಣ್ಣಾಡಿಸಿದರು. ನನ್ನ ಪತ್ನಿಯ ಮರಣದ ನಂತರ ನಾನು ಅಕ್ಷರಶಃ ಒಬ್ಬಂಟಿಯಾಗಿದ್ದೆ. ನನ್ನ ಮನೆ ಮತ್ತು ಮನದ ಭಾವನೆಗಳನ್ನು ಮೌನವೇ ಆಳುತ್ತಿತ್ತು. ನನ್ನ ಮನದ ತಳಮಳವನ್ನು ನನ್ನ ಮಗಳಿಗೆ ಹೇಳಿ ಆಕೆಯನ್ನು ಕೂಡ ದುಃಖಕ್ಕೆ ಈಡು ಮಾಡಲು ನನಗೆ ಇಷ್ಟವಿರಲಿಲ್ಲ.
ಒಬ್ಬಂಟಿತನದ ನೋವನ್ನು ಅನುಭವಿಸುತ್ತಿರುವ ಅಂತಹ ಒಂದು ದಿನ ನಾನು ನಿಮ್ಮ ಹೋಟೆಲ್ ನ ಒಳ ಹೊಕ್ಕೆ. ಇಲ್ಲಿ ನಾನು ಬದುಕಿನ ನಿಜವಾದ ಜೀವಂತಿಕೆಯನ್ನು ಕಂಡೆ. ನನ್ನ ಪತ್ನಿಯ ಸಾವಿನ ಮುಂಚೆ ನನ್ನ ಮನೆಯಲ್ಲಿ ಇರುತ್ತಿದ್ದ ಅದೇ ಜೀವಂತಿಕೆ ಇಲ್ಲಿ ತಾಂಡವ ಮಾಡುತ್ತಿತ್ತು. ಆದರೆ ಇಲ್ಲಿ ಬಂದು ಕೂರಲು ನನ್ನ ಜೇಬು ಅನುಮತಿಸುತ್ತಿರಲಿಲ್ಲ. ನನ್ನ ಪತ್ನಿಯ ಅನಾರೋಗ್ಯಕ್ಕೆ ಸಾಕಷ್ಟು ಹಣವನ್ನು ಕಳೆದುಕೊಂಡ ನಾನು ಯಾವುದೇ ಆದಾಯವನ್ನು ಹೊಂದಿರಲಿಲ್ಲ. ಆದರೆ ನನ್ನ ಒಬ್ಬಂಟಿತನವನ್ನು ಮರೆಯಲು ನನಗೆ ನಿಮ್ಮ ಹೋಟೆಲ್ನ ಮೂಲೆಯ ಆ ಟೇಬಲ್, ನೀವು ಹಾಗೂ ನಿಮ್ಮ ಸಿಬ್ಬಂದಿಗಳು ಬಹಳಷ್ಟು ಉಪಕಾರ ಮಾಡಿದಿರಿ. ನಿಮಗೆ ಅದೆಷ್ಟು ಧನ್ಯವಾದಗಳು ಹೇಳಿದರೂ ಸಾಲದು.
ನಿಮಗೆ ನಾನು ಕೊಡುತ್ತಿರುವ ಪುಟ್ಟ ಕಾಣಿಕೆಯನ್ನು ಸ್ವೀಕರಿಸಿ ನನ್ನಂತೆ ಒಬ್ಬಂಟಿತನದಿಂದ ನರಳುತ್ತಿರುವ ಯಾರಿಗಾದರೂ ಇದರಿಂದ ಅನುಕೂಲವಾಗಲಿ ಎಂದು ಬರೆದಿದ್ದ ಆ ಪತ್ರದ ಜೊತೆಗೆ ಇದ್ದ ಒಂದು ಚೆಕ್ ಕಂಡು ಅವರ ಕಣ್ಣಂಚಿನ ನೀರು ಕಂಬನಿಯ ಧಾರೆಯಾಗಿ ಕೆನ್ನೆಯ ಮೇಲೆ ಹರಿಯಿತು.
ಇದೀಗ ಆ ಹೋಟೆಲಿನ ಆ ಮೂಲೆಯ ಗೋಡೆಯ ಮೇಲೆ ಒಂದು ಕೈಬರಹದ ಪತ್ರವನ್ನು ಅಂಟಿಸಿದ್ದಾರೆ. ನಿಮಗೆ ಒಬ್ಬಂಟಿತನ ಕಾಡುತ್ತಿದೆಯೇ ?. ಈ ಮೂಲೆಯ ಟೇಬಲ್ ನಿಮಗಾಗಿ ಇದೆ ನಿಮ್ಮ ನೋವನ್ನು ಹಂಚಿಕೊಳ್ಳಲು ಎಂಬ ಒಕ್ಕಣೆಯನ್ನು ಆ ಪತ್ರ ಹೊಂದಿದೆ.

ಫೋಟೋ ಕೃಪೆ : ಅಂತರ್ಜಾಲ
ಇದೀಗ ಆ ಮೂಲೆಯ ಟೇಬಲ್ ಬಳಿ ಯಾರೋ ಒಬ್ಬ ಹೆಣ್ಣುಮಗಳು ಕೆಲ ನಿಮಿಷಗಳ ಕಾಲ ಕುಳಿತು ಹೋಗುತ್ತಾರೆ. ಯಾರೋ ಒಬ್ಬ ವಿದ್ಯಾರ್ಥಿ ತನ್ನ ಪುಸ್ತಕಗಳನ್ನು ಇಟ್ಟುಕೊಂಡು ಓದುತ್ತಾನೆ. ಮತ್ತಾರೋ ತಮ್ಮ ಮನದ ಅಳಲನ್ನು ಕಳೆದುಕೊಳ್ಳಲು ಅಲ್ಲಿ ಬಂದು ಮೌನವಾಗಿ ಕುಳಿತು ಹೊರಟು ಹೋಗುತ್ತಾರೆ. ಅವರೆಲ್ಲರಿಗೂ ಅತ್ಯಂತ ಪ್ರೀತಿಯಿಂದ ಹಣವನ್ನು ಅವರು ಕೊಡಲಿ, ಕೊಡದೆ ಇರಲಿ ಒಂದಷ್ಟು ಚಹಾವನ್ನು ಖಂಡಿತವಾಗಿಯೂ ಪೂರೈಸಲಾಗುತ್ತದೆ. ಮಾನವೀಯ ತಂತುಗಳು ಅಲ್ಲಿ ಮತ್ತೆ ಬೆಸೆಯಲ್ಪಡುತ್ತವೆ. ಹೊಸ ಬದುಕಿಗೆ ಮುನ್ನುಡಿ ಹಾಡುತ್ತವೆ.
ಹೌದಲ್ವೇ ಸ್ನೇಹಿತರೇ? ಬದುಕಿನ ನಾಗಾಲೋಟದಲ್ಲಿ ನಾವೆಲ್ಲರೂ ಒಂದಲ್ಲ ಒಂದು ಸಮಯದಲ್ಲಿ ಅಂತಹ ಒಂಟಿತನವನ್ನು ಮತ್ತು ಅದು ಕೊಡುವ ನೋವನ್ನು ಅನುಭವಿಸಿಯೇ ಇರುತ್ತೇವೆ. ಯಾರಾದರೂ ನಮ್ಮ ನೋವಿಗೆ ಕಿವಿಯಾಗಬಲ್ಲರೇ? ಎಂಬ ಆಸೆ ಎಲ್ಲರಲ್ಲೂ ಇರುತ್ತದೆ. ನೋವನ್ನು ಹೇಳಿಕೊಂಡು ಹಗುರವಾಗುವರು. ಒಂದು ಪುಟ್ಟ ಭರವಸೆ, ಒಂದಷ್ಟು ಸಾಂತ್ವನ ಮತ್ತೆ ಬದುಕಿನಲ್ಲಿ ಮುನ್ನಡೆಯಲು ಎಷ್ಟೋ ಸಹಾಯಕವಾಗುತ್ತದೆ. ಆದ್ದರಿಂದ ಸ್ನೇಹಿತರೆ, ನಿಮ್ಮ ಸುತ್ತಲಿನ ಜನರಲ್ಲಿ ಇಂತಹ ತೊಂದರೆಗಳಿಂದ ಬಳಲುತ್ತಿರುವವರು ಇದ್ದರೆ ಅವರನ್ನು ಸೂಕ್ಷ್ಮವಾಗಿ ಗಮನಿಸಿ ನಿಮಗೆ ಸಾಧ್ಯವಿದ್ದಷ್ಟು ಸಹಾಯ ಮಾಡಿ. ಎಷ್ಟೋ ಬಾರಿ ಸಾವಿನ ಅಂಚಿಗೆ ತಳ್ಳುವ ಒಬ್ಬಂಟಿತನದ ನಿರಾಶೆ ನಿಮ್ಮ ಸ್ನೇಹದ ಕಾರಣದಿಂದ ಒಂದು ಪುಟ್ಟ ಭರವಸೆಯಿಂದ ಮತ್ತೆ ಬದುಕಿನಲ್ಲಿ ಚೇತರಿಸಿಕೊಳ್ಳಲು ಸಾಧ್ಯವಾಗಬಹುದು. ಏನಂತೀರಾ ಸ್ನೇಹಿತರೆ ?
- ಹಿಂದಿನ ಸಂಚಿಕೆಗಳು :
- ಬದುಕಿಗೊಂದು ಸೆಲೆ (ಭಾಗ -೧)
- ಬದುಕಿಗೊಂದು ಸೆಲೆ (ಭಾಗ -೨)
- ಬದುಕಿಗೊಂದು ಸೆಲೆ (ಭಾಗ -೩)
- ಬದುಕಿಗೊಂದು ಸೆಲೆ ‘ಕೆಲ ವಿಷಯಗಳಿಗೆ ಕಿವುಡರಾಗಬೇಕು’ (ಭಾಗ – ೪)
- ಬದುಕಿಗೊಂದು ಸೆಲೆ ‘ಉದಾರತೆ ಎಂಬ ಮಾರುಕಟ್ಟೆ ತಂತ್ರ’ (ಭಾಗ- ೫)
- ಬದುಕಿಗೊಂದು ಸೆಲೆ ‘ಹೌದು! ನನಗೆ ವಯಸ್ಸಾಗುತ್ತಿದೆ’ (ಭಾಗ – ೬)
- ಬದುಕಿಗೊಂದು ಸೆಲೆ‘ಕಾಯುತ್ತಿದ್ದಾರೆ ನಿಮ್ಮವರು… ನಿಮಗಾಗಿ’ (ಭಾಗ -೭)
- ಬದುಕಿಗೊಂದು ಸೆಲೆ ‘ಹೆಣ್ಣು ಮಕ್ಕಳೇ ಎಚ್ಚರವಾಗಿ’ (ಭಾಗ – ೮)
- ಬದುಕಿಗೊಂದು ಸೆಲೆ ‘ ಮನೆಯ ಆಹಾರವೂ,ಕೌಟುಂಬಿಕ ಬಂಧವೂ’ (ಭಾಗ – ೯)
- ಬದುಕಿಗೊಂದು ಸೆಲೆ ‘ಶ್ರಾವಣ ಮಾಸ… ಶ್ರವಣ ಮಾಸ’ (ಭಾಗ – ೧೦)
- ಬದುಕಿಗೊಂದು ಸೆಲೆ ‘ಪ್ಯಾರಿಸ್ ಸುಗಂಧದ ಖ್ಯಾತಿಯ ಕೋಕೋ ಚಾನೆಲ್…. ಸತತ ಪ್ರಯತ್ನದ ಸಾಫಲ್ಯ’ (ಭಾಗ – ೧೧)
- ಬದುಕಿಗೊಂದು ಸೆಲೆ ವರಮಹಾಲಕ್ಷ್ಮಿ ಹಬ್ಬ (ಭಾಗ – ೧೨)
- ಬದುಕಿಗೊಂದು ಸೆಲೆ ‘ಸಿತಾರೆ ಜಮೀನ್ ಪರ್’ (ಭಾಗ – ೧೪)
- ಬದುಕಿಗೊಂದು ಸೆಲೆ ‘ಸಾಧನೆಯ ಶಿಖರ ಏರಲು…ಬೇಕು ಬದ್ಧತೆ’ (ಭಾಗ – ೧೫)
- ಬದುಕಿಗೊಂದು ಸೆಲೆ ‘ನನ್ನ ಪ್ರೀತಿಯ ಗಣೇಶ’ (ಭಾಗ – ೧೬)
- ಬದುಕಿಗೊಂದು ಸೆಲೆ ‘ಗಣೇಶ….ವಿಗ್ರಹ ಒಂದು ಸಂಕೇತಗಳು ನೂರು’ (ಭಾಗ – ೧೭)
- ಬದುಕಿಗೊಂದು ಸೆಲೆ ‘ನಮ್ಮ ಬದುಕು ಮತ್ತು ಆಯ್ಕೆಗಳು’ (ಭಾಗ – ೧೮)
- ಬದುಕಿಗೊಂದು ಸೆಲೆ ‘ಸ್ನೇಹ ಬಂಧ ’ (ಭಾಗ-೧೯)
- ಬದುಕಿಗೊಂದು ಸೆಲೆ ‘ಮಕ್ಕಳ ಕುರಿತು ಅತಿ ಕಾಳಜಿ…. ಖಂಡಿತ ಬೇಡ’ (ಭಾಗ-೨೦)
- ಬದುಕಿಗೊಂದು ಸೆಲೆ ‘ಮಕ್ಕಳ ಸಂಸ್ಕಾರದಲ್ಲಿ ತಾಯಿಯ ಪಾತ್ರ’ (ಭಾಗ-೨೧)
- ಬದುಕಿಗೊಂದು ಸೆಲೆ ‘ಮಗನಿಗೆ ಶಿಸ್ತಿನ ಪಾಠದ ಪತ್ರ’ (ಭಾಗ-೨೨)
- ಬದುಕಿಗೊಂದು ಸೆಲೆ ‘ಭಿತ್ತಿಯಲ್ಲಿ ನೆನಪಾಗಿ ಉಳಿದ… ಎಸ್ ಎಲ್ ಭೈರಪ್ಪ’ (ಭಾಗ-೨೩)
- ಬದುಕಿಗೊಂದು ಸೆಲೆ “ದ ಹ್ಯಾಪಿಯಸ್ ಮ್ಯಾನ ಆನ್ ದ ಅರ್ಥ’ (ಭಾಗ-೨೪)
- ಬದುಕಿಗೊಂದು ಸೆಲೆ ‘ಎಲ್ಲ ಏಟಿಗೂ ಇದಿರೇಟು….ಉತ್ತರವಲ್ಲ’ (ಭಾಗ-೨೫)
- ಬದುಕಿಗೊಂದು ಸೆಲೆ ‘ಗಂಡು ಹೆಣ್ಣು…. ಒಂದು ಸಾಮಾಜಿಕ ವಿಶ್ಲೇಷಣೆ’ (ಭಾಗ-೨೬)
- ಬದುಕಿಗೊಂದು ಸೆಲೆ ‘ಮೂಲಭೂತ ಅಭ್ಯಾಸಗಳು ಮತ್ತು ಮಕ್ಕಳು’ (ಭಾಗ-೨೭)
- ಬದುಕಿಗೊಂದು ಸೆಲೆ ‘ಬೆಳಕಿನ ಹಬ್ಬ ದೀಪಾವಳಿ ’ (ಭಾಗ-೨೮)
- ಬದುಕಿಗೊಂದು ಸೆಲೆ ‘ಸಡಗರ ಸಂಭ್ರಮದ ಕನ್ನಡ ರಾಜ್ಯೋತ್ಸವ’ (ಭಾಗ-೨೯)
- ಬದುಕಿಗೊಂದು ಸೆಲೆ ‘ಸಡಗರ ಸಂಭ್ರಮದ ಕನ್ನಡ ರಾಜ್ಯೋತ್ಸವ’ (ಭಾಗ-೩೦)
- ಬದುಕಿಗೊಂದು ಸೆಲೆ ‘ನಿಮ್ಮ ಮಕ್ಕಳ ವರ್ತನೆ ಮಿತಿಯಲ್ಲಿರಲಿ… ಯಾವುದೂ ಅತಿಯಾಗದಿರಲಿ ’ (ಭಾಗ-೩೧)
- ಬದುಕಿಗೊಂದು ಸೆಲೆ ಹಸಿರಲ್ಲಿ ಒಂದಾದ ಸಾಲುಮರದ ತಿಮ್ಮಕ್ಕ (ಭಾಗ-೩೨)
- ಬದುಕಿಗೊಂದು ಸೆಲೆ (ಭಾಗ-೩೩)
- ಬದುಕಿಗೊಂದು ಸೆಲೆ ‘ಪ್ರೀತಿಯ ತೀವ್ರತೆ’ (ಭಾಗ-೩೪)
- ಬದುಕಿಗೊಂದು ಸೆಲೆ ‘ಖಾಲಿ ಕುರ್ಚಿ ಎಂಬ ತತ್ವವೂ…ನಮ್ಮ ಬದುಕೂ’ (ಭಾಗ-೩೫)
- ಬದುಕಿಗೊಂದು ಸೆಲೆ ‘ಒಂದು ಸುತ್ತು….ಋತುಚಕ್ರ ರಜೆಯ ಸುತ್ತ’ (ಭಾಗ-೩೬)
- ಬದುಕಿಗೊಂದು ಸೆಲೆ ‘ಮೌನ ಸಾಧನೆ’ (ಭಾಗ-೩೭)
- ಬದುಕಿಗೊಂದು ಸೆಲೆ ‘ಮಹತ್ವಕಾಂಕ್ಷಿ ಕ್ರೀಡಾ ಯೋಜನೆಗಳು ಹಾಗೂ ಕ್ರೀಡೆಯ ಭವಿಷ್ಯ??’ (ಭಾಗ-೩೮)
- ಬದುಕಿಗೊಂದು ಸೆಲೆ ‘ಮಾಧ್ಯಮಗಳ ವೈಭವೀಕೃತ ಸುದ್ದಿ ನಿರೂಪಣೆ…. ಒಂದು ವಿವೇಚನೆ’ (ಭಾಗ-೩೯)
- ಬದುಕಿಗೊಂದು ಸೆಲೆ ‘ಎಳ್ಳು ಅಮಾವಾಸ್ಯೆ…ಚರಗ ಚೆಲ್ಲುವ ಹಬ್ಬನೆ’ (ಭಾಗ-೪೦)
- ಬದುಕಿಗೊಂದು ಸೆಲೆ ‘ಅವರಿವರನ್ನು ಕಂಡು ಕರುಬದಿರಿ… ನೀವು ನೀವಾಗಿಯೇ ಇರಿ’ (ಭಾಗ-೪೧)
- ಬದುಕಿಗೊಂದು ಸೆಲೆ ‘ಶ್ರೀ ಸಿದ್ದೇಶ್ವರ ಸ್ವಾಮಿಗಳು’ (ಭಾಗ-೪೨)
- ಬದುಕಿಗೊಂದು ಸೆಲೆ ‘ಯುವ ಜನತೆಗೆ ಹಣಕಾಸಿನ ಕುರಿತಾದ ಚಿನ್ನದಂತಹ ನಿಯಮಗಳು’ (ಭಾಗ-೪೩)
- ಬದುಕಿಗೊಂದು ಸೆಲೆ ‘ಮಕ್ಕಳಲ್ಲಿ ಆತ್ಮವಿಶ್ವಾಸ ಬೆಳೆಸುವುದು ಹೇಗೆ ?’ (ಭಾಗ-೪೪)
- ಬದುಕಿಗೊಂದು ಸೆಲೆ ‘ದಾಂಪತ್ಯದಲ್ಲಿ ಸಮಾನತೆ ’ (ಭಾಗ-೪೫)
- ಬದುಕಿಗೊಂದು ಸೆಲೆ ‘ಹೀಗೊಂದು ವಧು/ವರ ಪರೀಕ್ಷೆ ’ (ಭಾಗ-೪೭)
- ಬದುಕಿಗೊಂದು ಸೆಲೆ ‘ಒಂಟಿ ಧ್ವನಿಗೆ… ಜಂಟಿಯಾದ ನೂರಾರು ಧ್ವನಿಗಳು’ (ಭಾಗ-೪೮)
- ಬದುಕಿಗೊಂದು ಸೆಲೆ ‘ಹಕ್…… ತನ್ನ ಹಕ್ಕಿಗಾಗಿ ಹೆಣ್ಣು ಮಗಳ ಹೋರಾಟ’ (ಭಾಗ-೪೯)
- ಬದುಕಿಗೊಂದು ಸೆಲೆ ಶಾಂತಿ ಸುಧಾ ಘೋಷ್ (ಭಾಗ- ೫೧)
- ಬದುಕಿಗೊಂದು ಸೆಲೆ ಪೋಲ್ಯಾಂಡ್ ದೇಶದ ಮಕ್ಕಳ ದುರಂತದ ಕತೆ (ಭಾಗ- ೫೨)
- ಬದುಕಿಗೊಂದು ಸೆಲೆ ಕಾಶಿಯ ಲತಾ ಮಂಗಳ ಕಪೂರ್ ಗೆ ಪದ್ಮಶ್ರೀ ಪುರಸ್ಕಾರ (ಭಾಗ- ೫೩)
- ಬದುಕಿಗೊಂದು ಸೆಲೆ ‘ಶಿವರಾತ್ರಿ, ಶಿವನ ಆರಾಧನೆಯ ದಿನ’ (ಭಾಗ- ೫೪)
- ಬದುಕಿಗೊಂದು ಸೆಲೆ ‘ಅಸಹನೀಯವಾಗದಿರಲಿ ವೃದ್ಧಾಪ್ಯ’ (ಭಾಗ- ೫೫)
- ಬದುಕಿಗೊಂದು ಸೆಲೆ ‘ಸಮತೋಲಿತ ಆಹಾರ’ (ಭಾಗ- ೫೬)
- ಬದುಕಿಗೊಂದು ಸೆಲೆ ‘ನವಜಾತ ಶಿಶು ವಿಜ್ಞಾನ ಶಾಸ್ತ್ರದ ಮಹಾತಾಯಿ….ಡಾಕ್ಟರ್ ಅಮಿದಾ ಫರ್ನಾಂಡಿಸ್’ (ಭಾಗ- ೫೭)
- ಬದುಕಿಗೊಂದು ಸೆಲೆ ‘ಬಣ್ಣಗಳ ಹಬ್ಬ…. ಹೋಳಿ’ (ಭಾಗ- ೫೮)
- ಬದುಕಿಗೊಂದು ಸೆಲೆ ‘ಇರಲಿ ಆಸರೆ, ಹಿರಿ ಜೀವಗಳಿಗೆ ’ (ಭಾಗ- ೫೯)
- ಬದುಕಿಗೊಂದು ಸೆಲೆ ‘ಸಂಕಲ್ಪ ಶಕ್ತಿ ಮತ್ತು ಯಶೋಗಾಥೆ ’ (ಭಾಗ- ೬೦)
- ಬದುಕಿಗೊಂದು ಸೆಲೆ ಅನುರಾಧ ಕೊಯಿರಾಲ (ಭಾಗ- ೬೧)
- ಬದುಕಿಗೊಂದು ಸೆಲೆ ‘ಗ್ರಾಮೀಣ ಬದುಕಿನಲ್ಲಿ ಯುಗಾದಿ ಹಬ್ಬದ ಸಂಭ್ರಮ’ (ಭಾಗ- ೬೨)
- ಬದುಕಿಗೊಂದು ಸೆಲೆ ‘ ಯುಥನೇಶಿಯ…. ದಯಾಮರಣಕ್ಕೆ ಅಸ್ತು’ (ಭಾಗ- ೬೩)
- ಬದುಕಿಗೊಂದು ಸೆಲೆ ‘ ವೈರುಧ್ಯಗಳ ನಡುವೆ…. ಹೆಣ್ಣಿನ ಬದುಕು’ (ಭಾಗ- ೬೪)
- ಬದುಕಿಗೊಂದು ಸೆಲೆ ‘ಗೃಹಕೃತ್ಯ…ಕಾನೂನಿನಲ್ಲಿ ಮಾನ್ಯತೆ’ (ಭಾಗ- ೬೫)
- ವೀಣಾ ಹೇಮಂತ್ ಗೌಡ ಪಾಟೀಲ್ – ಮುಂಡರಗಿ, ಗದಗ
