ಬದುಕಿಗೊಂದು ಸೆಲೆ (ಭಾಗ- ೬೪)

ಬಹುಶಹ ತನ್ನ ಜೀವಮಾನದಲ್ಲಿ ಓರ್ವ ಹೆಣ್ಣು ಅನುಭವಿಸುವ ನೋವು, ಹತಾಶೆ, ಸಂಕಟಗಳು ಒಂದೆಡೆಯಾದರೆ ತನ್ನ ವಿರುದ್ಧ ಇಡೀ ಸಮಾಜ ಹರಿಸುವ ಟೀಕಾ ಪ್ರಹಾರಗಳು ಮತ್ತೊಂದೆಡೆ. ಈ ಎಲ್ಲದರ ಮಧ್ಯದಲ್ಲಿ ಇಂದಿಗೂ ಕೂಡ ತನ್ನ ಅಸ್ಮಿತೆಯನ್ನು ಉಳಿಸಿಕೊಳ್ಳಲು ಹೋರಾಡುವ ಹೆಣ್ಣು ಮಕ್ಕಳದು ಅಕ್ಷರಶಃ ವೈರುಧ್ಯಗಳ ನಡುವಿನ ಬದುಕು. ಲೇಖಕಿ ವೀಣಾ ಹೇಮಂತ್ ಗೌಡ ಅವರ ‘ಬದುಕಿಗೊಂದು ಸೆಲೆ’ ಅಂಕಣದಲ್ಲಿ ‘ ವೈರುಧ್ಯಗಳ ನಡುವೆ…. ಹೆಣ್ಣಿನ ಬದುಕು’ ತಪ್ಪದೆ ಮುಂದೆ ಓದಿ…

ಸಾಮಾಜಿಕ ವ್ಯವಸ್ಥೆಯ ದಿಕ್ಕಿಗೆ ನಡೆಯದೆ ಹೋದರೆ ಬದುಕನ್ನೇ ದುರ್ಬರವಾಗಿಸುವ, ಆಕೆಯ ಅಸ್ತಿತ್ವವನ್ನೇ ಪ್ರಶ್ನಿಸುವ ಆಕೆಯ ವೈಚಾರಿಕತೆಯ ಕುರಿತು ಕೆಟ್ಟದಾಗಿ ಮಾತನಾಡಿಕೊಳ್ಳುವ ಸಮಾಜ ಹೆಣ್ಣು ಮಕ್ಕಳಿಗಾಗಿ ತನ್ನದೇ ಆದ ಮಾನದಂಡಗಳನ್ನು ರೂಪಿಸಿದೆ.

ಬಹುತೇಕ ಬಾರಿ ಈ ಮಾನದಂಡಗಳು ಹೆಣ್ಣು ಮಕ್ಕಳ ಸುರಕ್ಷತೆಗೆಂದು ಮಾಡಲ್ಪಟ್ಟಿದ್ದರೂ ಅವುಗಳ ಹಿಂದಿನ ಹುನ್ನಾರ ಆಕೆಯನ್ನು ಆಕ್ರಮಣಕಾರಿಯಾಗದಂತೆ, ಸೊಲ್ಲೆತ್ತದಂತೆ ತನ್ನ ಮೇಲಾಗುವ ಮಾನಸಿಕ, ದೈಹಿಕ ಅತ್ಯಾಚಾರ ಅನಾಚಾರಗಳನ್ನು ಮೌನವಾಗಿ ಸಹಿಸಿಕೊಳ್ಳುವಂತೆ ಮಾಡಿವೆ ಎಂಬುದು ಸರ್ವವಿದಿತ.

ನಮ್ಮ ಸಮಾಜದಲ್ಲಿ ತಾಯಿ, ಸಹೋದರಿ, ಸ್ನೇಹಿತೆ, ಪತ್ನಿ, ಮಗಳು ಹೀಗೆ ಎಲ್ಲ ರೀತಿಯಿಂದಲೂ ಪುರುಷನೊಂದಿಗೆ ಆತನ ಬದುಕಿನ ಅವಿಭಾಜ್ಯ ಅಂಗವಾಗಿ ಇರುವ ಹೆಣ್ಣು ಮಕ್ಕಳು ಆತನ ದೈನಂದಿನ ಬದುಕು ನಡೆಸಲು ಅಗತ್ಯವಾದ ಅನುಕೂಲತೆಗಳನ್ನು ಒದಗಿಸಿ ಕೊಡುವವರೆಗೆ ಮಾತ್ರ ಆತ ಅವರೊಂದಿಗೆ ಉತ್ತಮ ಸಂಬಂಧವನ್ನು ಕಾಯ್ದುಕೊಳ್ಳಬಲ್ಲ.
ಒಂದೊಮ್ಮೆ ಆತನಿಗೆ ಎಲ್ಲ ರೀತಿಯಲ್ಲಿಯೂ ಸಹಾಯ ಸಹಕಾರ ಮಾಡುವ ಹೆಣ್ಣು ಮಕ್ಕಳು ಮುನಿಸಿಕೊಂಡು ಆ ಕೆಲಸದಲ್ಲಿ ಹಿಂಜರಿದರೆ, ಮಾಡದೆ ಹೋದರೆ ಸ್ವತಹ ಆತನೇ ಅವರನ್ನು ತನ್ನ ಮಾತಿನ ಬಾಣಗಳ ಮೂಲಕ, ಕೊಂಚ ಅನಾಗರಿಕನಾದರೆ ಕೈ ಎತ್ತುವ ಮೂಲಕ, ತಿಳುವಳಿಕೆಯೇ ಇಲ್ಲದವನಾದರೆ ದುಶ್ಚಟಗಳ ದಾಸನಾಗಿ ಅದಕ್ಕೂ ಕೂಡ ಹೆಣ್ಣು ಮಕ್ಕಳನ್ನೇ ಹೊಣೆಯಾಗಿಸುವ ಸಮಾಜದ ಪ್ರಬಲ ವರ್ಗಕ್ಕೆ ಸೇರಿದ್ದಾನೆ.

ಪಿತೃ ಸತ್ತಾತ್ಮಕ ಅಥವಾ ಪುರುಷ ಸ್ವಾಮ್ಯದ ನಮ್ಮ ಭಾರತೀಯ ಸಮಾಜದಲ್ಲಿ ಸ್ತ್ರೀಯನ್ನು ಸದಾ ಪುರುಷನಿಗೆ ಅನುಯಾಯಿಯಾಗಿ, ಹಿಂಬಾಲಕಳಾಗಿ ಇರಲು ಒತ್ತಾಯಿಸಲಾಗುತ್ತದೆಯೇ ಹೊರತು ಅವರಿಬ್ಬರೂ ಪರಸ್ಪರರಿಗೆ ಪೂರಕವಾಗಿರಲು ಅಲ್ಲ.

ಹೊರಗಿನಿಂದ ದುಡಿದು ತಂದು ಹಾಕುವುದು ತನ್ನ ಕರ್ತವ್ಯ ಎಂದು ಭಾವಿಸುವ ಗಂಡಸರು ಮನೆವಾರ್ತೆಯನ್ನು ನಿರ್ವಹಿಸುವುದು ತನ್ನ ಪತ್ನಿಯ ಕರ್ತವ್ಯ ಎಂದೇ ತಿಳಿಯುತ್ತಾರೆ. ಇದರಲ್ಲಿ ತಪ್ಪಿಲ್ಲ. ಹೆಣ್ಣು ಮಕ್ಕಳು ಗಂಡ, ಮನೆ, ಮಕ್ಕಳು, ಅತ್ತೆ-ಮಾವ ಕುಟುಂಬದ ಎಲ್ಲ ಆಗುಹೋಗುಗಳನ್ನು ನೋಡಿಕೊಳ್ಳುವುದರ ಜೊತೆಗೆ ಕಾಲಕಾಲಕ್ಕೆ ಮನೆಯ ಎಲ್ಲಾ ಸದಸ್ಯರಿಗೆ ಅವರ ಅವಶ್ಯಕತೆಗಳನ್ನು ಪೂರೈಸುವ ಕಾರ್ಯನಿರ್ವಹಿಸುವುದರಲ್ಲಿ ಖಂಡಿತವಾಗಿಯೂ ಯಾವುದೇ ತಪ್ಪಿಲ್ಲ. ಇದೆಲ್ಲವೂ ಆಕೆಯ ಕರ್ತವ್ಯದ ಪರಿಧಿಯಲ್ಲಿ ಬರುತ್ತದೆ ಅಲ್ಲವೇ?.

ಆದರೆ ಕರ್ತವ್ಯದ ಜೊತೆ ಜೊತೆಗೆ ನಾಣ್ಯದ ಇನ್ನೊಂದು ಮುಖವಾದ ಹಕ್ಕುಗಳು ಕೂಡ ಪರಿಪಾಲಿಸಲ್ಪಡಬೇಕು ಅಲ್ಲವೇ? ಹೆಣ್ಣು ಮಕ್ಕಳು ಕೂಡ ತನ್ನದೇ ಆದ ಅಸ್ಮಿತೆಯನ್ನು ಬೆಳೆಸಿಕೊಳ್ಳಲು ಇಚ್ಚಿಸುವುದು ಹಾಗೂ ಅದಕ್ಕೆ ಪೂರಕವಾಗಿ ತನ್ನ ಬದುಕನ್ನು ರೂಪಿಸಿಕೊಳ್ಳುವುದು ಕೂಡ ಆಕೆಯ ಹಕ್ಕಲ್ಲವೇ?. ತನ್ನ ಬದುಕಿನ ತೀರ್ಮಾನಗಳನ್ನು ತಾನೇ ತೆಗೆದುಕೊಳ್ಳುವ ಹಕ್ಕು ಆಕೆಗೆ ಖಂಡಿತವಾಗಿಯೂ ಇದೆ ಅಲ್ಲವೇ? ಹಾಗೊಂದು ವೇಳೆ ಆಕೆ ತನ್ನ ಆಸೆ ಆಕಾಂಕ್ಷೆಗಳನ್ನು ಪೂರೈಸಿಕೊಳ್ಳಲು ಬಾಹ್ಯ ಜಗತ್ತಿನ ಭಾಗವಾಗಿ ಸಾಮಾಜಿಕ ಚಟುವಟಿಕೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಲು ಇಚ್ಚಿಸುವುದಾದರೆ ಆಕೆಯ ಈ ಇಚ್ಛೆಗಳಿಗೆ ಅಡ್ಡಿಯಾಗಬಾರದು ಎಂಬುದನ್ನು ಅರಿತು ಅದಕ್ಕೆ ಪೂರಕವಾಗಿ ನಡೆದುಕೊಳ್ಳುವುದು ಕೂಡ ಪುರುಷರ ಕರ್ತವ್ಯ ಅಲ್ಲವೇ?.

ವೈರುಧ್ಯಗಳ ಮಧ್ಯದಲ್ಲಿ ಹೆಣ್ಣು ಮಕ್ಕಳ ಬದುಕು ಸಾಗುತ್ತದೆ ಎಂದು ಹೇಳಲು ಕಾರಣ ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ವಂಶವನ್ನು ಮುನ್ನಡೆಸುವ ಗುರುತರ ಜವಾಬ್ದಾರಿಯನ್ನು ಮನೆಯ ಮಗ ನಿರ್ವಹಿಸುತ್ತಾನೆ ಮನೆಯ ಮಗನಿಂದಲೇ ತಂದೆ ತಾಯಿಗಳ ಲೌಕಿಕ ಹಾಗೂ ಪಾರಮಾರ್ಥಿಕ ಬದುಕಿನ ಮುಕ್ತಿ ಎಂಬ ಸನಾತನ ಭಾವ. ಬಹುಶಹ ಇದರಲ್ಲಿ ತಪ್ಪಿಲ್ಲದೆ ಇರಬಹುದು. ತಂದೆ ತಾಯಿಗಳ ಪ್ರೀತಿಯ ಮುದ್ದು ಮಗಳಾಗಿ ಹುಟ್ಟುವ ಹೆಣ್ಣು ಮಕ್ಕಳು ಚಿಕ್ಕಂದಿನಿಂದಲೂ ಅಡುಗೆ, ಹಾಡು, ಹಸೆ, ಮನೆವಾರ್ತೆಯ ಕೆಲಸಗಳಲ್ಲಿ ಮಾತ್ರ ಪರಿಣಿತರಾಗಲು ನಮ್ಮ ಸಮಾಜದಲ್ಲಿ ಉತ್ತೇಜನ ದೊರೆಯುತ್ತದೆಯೇ ಹೊರತು ಶೈಕ್ಷಣಿಕವಾಗಿ ಅಲ್ಲ.

ಹೆತ್ತವರು ಉಟ್ಟು ತೊಟ್ಟು ಸಿಂಗರಿಸಿ ನಕ್ಕು ನಲಿವ ತಮ್ಮ ಹೆಣ್ಣು ಮಕ್ಕಳನ್ನು ಯೋಗ್ಯ ವರನಿಗೆ ಕೊಟ್ಟು ಮದುವೆ ಮಾಡಿ ತಮ್ಮ ಜವಾಬ್ದಾರಿಯನ್ನು ಪೂರೈಸಿ ಕೃತರ್ಥರಾದವು ಎಂಬ ಭಾವದಲ್ಲಿ ಇರುತ್ತಾರೆ. ಯಾವಾಗ ಹೆಣ್ಣು ಮಕ್ಕಳು ಅವರಿಗೆ ಜವಾಬ್ದಾರಿಯಾಗಿ ತೋರುತ್ತಾರೆಯೋ ಆಗ ಅವರನ್ನು ಮತ್ತೊಂದು ಮನೆಗೆ ಹೊತ್ತು ಹಾಕುವ, ಸಾಗಿಸುವ ಹುನ್ನಾರ ನಡೆಯುತ್ತದೆ. ಇದರಲ್ಲಿ ಖಂಡಿತವಾಗಿಯೂ ತಪ್ಪಿಲ್ಲ, ನಿಜ… ಅದರೆ ಒಂದೊಮ್ಮೆ ಬದುಕಿನ ಆಕಸ್ಮಿಕ ತಿರುವುಗಳಲ್ಲಿ ಬಾಣ ಗುರಿ ತಪ್ಪಿ ಮರಳಿ ಬರುವಂತೆ ಹೆಣ್ಣು ಮಕ್ಕಳ ಬದುಕು ಹಳಿ ತಪ್ಪಿ ಆಕೆ ಪಾಲಕರ ಆಸರೆ ಪಡೆಯಬೇಕಾದ ಸಂದರ್ಭ ಬಂದಾಗ ಅದನ್ನು ನಿಭಾಯಿಸುವ ಶಕ್ತಿ ಅವರಿಗೆ ಇರುತ್ತದೆಯೇ ? ಎಲ್ಲಿಯವರೆಗೆ ಆಕೆ ಪಾಲಕರ ಅನುಕಂಪ, ಕರುಣೆ, ಒಡಹುಟ್ಟಿದವರ ಅಸಹನೆಗೆ ಕಾರಣವಾಗುತ್ತಾ ತನ್ನ ಬದುಕು ಹೀಗಾಗಲು ಕಾರಣವಾದ ವಿಧಿಯನ್ನು ಹಳಿಯುತ್ತಾ ತನ್ನ ಅಸಹಾಯಕತೆಗೆ ನೊಂದು ನಿಟ್ಟುಸಿರುಡುತ್ತಾ ಬದುಕಬೇಕು. ಆಕೆಗೆ ಬದುಕಿನಲ್ಲಿ ಸೆಕೆಂಡ್ ಆಪ್ಷನ್ ಇಲ್ವೇ?.

ಕೇವಲ ಹತ್ತು ನಿಮಿಷಗಳ ಜಾಲಿ ರೈಡ್ ಎಂದು ನಾವು ಹತ್ತುವ ಎಲ್ಲ ರೀತಿಯಲ್ಲಿಯೂ ಸುಸಜ್ಜಿತವಾದ ಬೋಟ ನಲ್ಲಿ ಎಲ್ಲ ಸುರಕ್ಷತಾ ಕ್ರಮಗಳನ್ನು ಕೈಗೊಂಡರೂ ಕೂಡ ಪ್ರತಿಯೊಬ್ಬ ಪ್ರಯಾಣಿಕರಿಗೂ ಲೈಫ್ ಜಾಕೆಟ್ ಗಳನ್ನು ಕಡ್ಡಾಯವಾಗಿ ಹಾಕಿಕೊಳ್ಳಲು ಒತ್ತಾಯಿಸುತ್ತಾರೆ. ಅಂತದ್ದರಲ್ಲಿ ತಮ್ಮ ಇಡೀ ಬದುಕನ್ನೇ ತಾವು ನಡೆಸಲು ಅತ್ಯವಶ್ಯಕವಾದ ಶಿಕ್ಷಣ ಎಂಬ ಲೈಫ್ ಜಾಕೆಟ್ ಅನ್ನು ತಮ್ಮ ಮಕ್ಕಳಿಗೆ ತೊಡಿಸಲು ಮುಜುಗರವೇಕೆ? ಉದ್ಯೋಗ ಎಂಬ ಸುರಕ್ಷಿತ ಆರ್ಥಿಕ ವ್ಯವಸ್ಥೆಯನ್ನು ಆಕೆ ಹೊಂದಲು ಅನುಕೂಲ ಮಾಡಿಕೊಡಲು ತಪ್ಪಿತಸ್ಥ ಭಾವನೆ ಏಕೆ ?.

ಅದೆಷ್ಟೇ ಶೂರಾದಿ ಶೂರ, ವೀರಾಧಿವೀರ ವ್ಯಕ್ತಿಯೇ ಇರಲಿ ಯುದ್ಧಕ್ಕೆ ಹೊರಡುವಾಗ ತನ್ನ ದೇಹದ ಸುತ್ತಲೂ ಉಕ್ಕಿನ ರಕ್ಷಾ ಕವಚಗಳನ್ನು ತಲೆಗೆ ಉಕ್ಕಿನ ಶಿರಸ್ತ್ರಾಣವನ್ನು ಧರಿಸಲು ಕಾರಣ ಆತನಿಗೆ ತನ್ನ ಮೇಲೆ ನಂಬಿಕೆ ಇಲ್ಲವೆಂದಲ್ಲ ಬದಲಾಗಿ ಅಷ್ಟ ದಿಕ್ಕುಗಳಿಂದ ಅನಿರೀಕ್ಷಿತವಾಗಿ ತನಗೆ ಬಂದೆರಗಬಹುದಾದ ತೊಂದರೆಗಳಿಂದ ತಪ್ಪಿಸಿಕೊಳ್ಳಲು.
ಅಂತೆಯೇ ಬದುಕಿನ ಯುದ್ಧದಲ್ಲಿ ಅನಿರೀಕ್ಷಿತವಾಗಿ ಬಂದೆರಗುವ ನೂರೆಂಟು ವಿಘ್ನಗಳಿಂದ ತಮ್ಮ ಹೆಣ್ಣು ಮಕ್ಕಳನ್ನು ಪಾರುಗಾಣಿಸಲು, ಅವರಿಗೆ ಶೈಕ್ಷಣಿಕ ಅರ್ಹತೆ,ಉದ್ಯೋಗ, ಕೌಟುಂಬಿಕ ಹಾಗೂ ಸಾಮಾಜಿಕ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಲು ಸಚ್ಚಾಗಿಸುವುದು ಸೂಕ್ತ ಅಲ್ಲವೇ ?.

ಬದುಕಿನ ಎಲ್ಲಾ ಹಂತದಲ್ಲಿಯೂ ಎಲ್ಲ ಸಮಯದಲ್ಲಿಯೂ ಹೆಣ್ಣು ಮಕ್ಕಳಿಗೆ ಒಬ್ಬ ಮನೋ ದೈಹಿಕ ಬಾಡಿಗಾರ್ಡ್ ಅವಶ್ಯಕತೆ ಇಲ್ಲ. ಆಕೆ ಖುದ್ದು ಓರ್ವ ವೀರ ಯೋಧಳು. ಮನೆಯ ನೂರೆಂಟು ಸಮಸ್ಯೆಗಳನ್ನು ಬಗೆಹರಿಸುವ ದೈನಂದಿನ ಬದುಕಿನ ಹತ್ತು ಹಲವು ಸವಾಲುಗಳನ್ನು ಎದುರಿಸುತ್ತಾ ಪುರುಷನಿಗೆಂತಲೂ ಹೆಚ್ಚು ಮಾನಸಿಕವಾಗಿ ಗಟ್ಟಿಯಾಗಿರುವ ಹೆಣ್ಣು ಮಕ್ಕಳು ತಮಗೆ ತಾವೇ ರಕ್ಷಾ ಕವಚವಾಗಿ ಪರಿಣಮಿಸಬಲ್ಲರು.

ಅರೆ ! ನಮ್ಮ ಹೆಣ್ಣುಮಕ್ಕಳಿಗೆ ನಾವು ಒಳ್ಳೆಯ ಮನೆತನಕ್ಕೆ ಮದುವೆ ಮಾಡಿಕೊಟ್ಟಿದ್ದೇವೆ ಆ ಕುಟುಂಬದವರು ಆಕೆಯನ್ನು ಎಲ್ಲ ರೀತಿಯಿಂದಲೂ ನೋಡಿಕೊಳ್ಳಲು ಸಮರ್ಥರು. ಒಂದು ವೇಳೆ ಅವಘಡಗಳು ಸಂಭವಿಸಿದರೆ ನೋಡಿಕೊಳ್ಳಲು ನಾವಿದ್ದೇವಲ್ಲ ಎಂಬ ಭಾವ ಖಂಡಿತವಾಗಿಯೂ ಬೇಡ. ಆಕೆ ನಿಮ್ಮಿಂದ ಅಕ್ಕರೆ, ಪ್ರೀತಿ, ವಿಶ್ವಾಸ, ನಂಬಿಕೆಗಳನ್ನು ಬಯಸುತ್ತಾಳೆಯೇ ಹೊರತು ಕರುಣೆ, ಅನುಕಂಪಗಳನ್ನಲ್ಲ. ಬದುಕಿನುದ್ದಕ್ಕೂ ಆಕೆ ಅಸಹನೆಗೆ ಈಡಾಗುವಂತೆ, ಮತ್ತೊಬ್ಬರ ಕರುಣೆಗೆ ಪಾತ್ರ ವಾಗುವಂತೆ, ಮಾನಸಿಕವಾಗಿ ವ್ಯಥೆಪಡುವಂತೆ ಬದುಕುವುದು ಬೇಡ.

ಆಕೆ ಸ್ವಾವಲಂಬಿಯಾಗಿ ತನ್ನ ಬದುಕಿನ ಚುಕ್ಕಾಣಿಯನ್ನು ತಾನೇ ಹಿಡಿಯಲಿ. ಮುಖ್ಯವಾಗಿ ಹೆಣ್ಣು ಮಕ್ಕಳಿಗೆ ಬೇಕಾಗಿರುವುದು ಅವರ ಆತ್ಮ ಗೌರವಕ್ಕೆ ಚ್ಯುತಿ ಬರದೇ ಇರುವಂತೆ
ಅವರೊಂದಿಗೆ ವರ್ತಿಸುವ ಜನರು.

ಎಲ್ಲರನ್ನೂ ನೆಲೆಗಾಣಿಸುವ ಆಕೆಗೆ ಸ್ವಂತದೊಂದು ನೆಲೆ ಇಲ್ಲ ಎಂಬುದು ವಿಪರ್ಯಾಸ. ಸತ್ತ ಮನೆಯಲ್ಲಿ ಮುಂದಿನ ಎರಡು ದಶಕಗಳ ನಂತರ ಮದುವೆಯಾಗಿ ಹೋಗುವ ಆಕೆ ಹೊರಗಿನವಳು ಎಂದೂ…. ಅದಕ್ಕೆ ಪೂರಕವಾಗಿ ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ ಎಂಬ ಮಾತುಗಳನ್ನು, ಏನನ್ನಾದರೂ ಮಾಡಲು ಇಚ್ಚಿಸಿ ಆ ಇಚ್ಛೆಯನ್ನು ವ್ಯಕ್ತಪಡಿಸಿದಾಗ ನಿನ್ನ ಗಂಡನ ಮನೆಯಲ್ಲಿ ಮಾಡಿಕೋ ಎಂಬ ಅತಿರೇಕಗಳನ್ನು ಕೇಳುತ್ತಲೇ ಹೆಣ್ಣು ಮಕ್ಕಳು ಬೆಳೆಯುತ್ತಾರೆ.

ಇನ್ನು ಗಂಡನ ಮನೆಯಲ್ಲಿ ಹೊರಗಿನಿಂದ ಬಂದವಳು, ಆಕೆಯ ಬದುಕಿನ ಸರ್ವ ಆಗುಹೋಗುಗಳು ತಮ್ಮ ಮರ್ಜಿಯ ಪ್ರಕಾರ ನಡೆಯಲೇಬೇಕು ಎಂಬ ಭಾವ ಮನೆಯವರಲ್ಲಿರುತ್ತದೆ. ಬಹಳ ಕಾಲದವರೆಗೆ…. ಕೆಲವೊಮ್ಮೆ ಆಕೆ ಕಾಲವಾಗುವವರೆಗೆ ಆಕೆಯನ್ನು ತಮ್ಮವಳು ಎಂದು ಒಪ್ಪಿಕೊಳ್ಳುವುದಿಲ್ಲ. ಇದು ಬಹುತೇಕ ಹೆಣ್ಣು ಮಕ್ಕಳನ್ನು ಎಲ್ಲ ಕಡೆ ಎಲ್ಲವನ್ನು ಅನುಭವಿಸಿ ಒಪ್ಪಿ ಅಪ್ಪಿಕೊಂಡರೂ ಕೂಡ ಎಲ್ಲಿಯೂ ಸಲ್ಲದವರು ಎಂಬ ಅಭದ್ರತಾ ಭಾವನೆಯನ್ನು ಮನದಲ್ಲಿ ಹೊತ್ತು ಇರುವ ಅನಿವಾರ್ಯತೆಯನ್ನು ಸೃಷ್ಟಿಸುತ್ತದೆ.

ಇಂತಹ ಹತ್ತು ಹಲವು ವೈರುಧ್ಯತೆಗಳ ನಡುವೆ ಹೆಣ್ಣಿನ ಬದುಕು ಸಾಗುತ್ತದೆ. ಸೂಕ್ಷ್ಮ ಮನಸ್ಥಿತಿಯುಳ್ಳ ಹೆಣ್ಣು ಮಕ್ಕಳು ಅತಂತ್ರ ಭಾವದಿಂದ ಕೊರಗುತ್ತಾರೆ ಮರುಗುತ್ತಾರೆ. ಎಲ್ಲರನ್ನು ಎಲ್ಲವನ್ನು ಪೊರೆಯುವ ಅವರು ಖುದ್ದು ತಮ್ಮ ಮನಸ್ಥಿತಿಯನ್ನು ಸ್ಥಿರವಾಗಿ ಇಟ್ಟುಕೊಳ್ಳಲು ಸಾಧ್ಯವಾಗದ ಪರಿಸ್ಥಿತಿಯನ್ನು ತಲುಪುತ್ತಾರೆ. ಇಂತಹ ವೈರುಧ್ಯಗಳ ನಡುವೆ ಬದುಕುವ ಲಕ್ಷಾಂತರ ಹೆಣ್ಣು ಮಕ್ಕಳ ಬದುಕು ಹಸನಾಗುವ ನಿಟ್ಟಿನಲ್ಲಿ ಒಂದು ಬೃಹತ್ ಆಂದೋಲನದ ಅವಶ್ಯಕತೆ ಇದೆ… ಅಂತಹ ಚಳುವಳಿ ಹಲವಾರು ವರ್ಷಗಳ ಕಾಲ ಜಾರಿಯಲ್ಲಿದ್ದು ಹೆಣ್ಣು ಮಕ್ಕಳ ಬದುಕಿನಲ್ಲಿ ನವ ಮನ್ವಂತರವನ್ನು ತರಲಿ ಎಂದು ಹಾರೈಸುವ…


  • ವೀಣಾ ಹೇಮಂತ್ ಗೌಡ ಪಾಟೀಲ್ – ಮುಂಡರಗಿ, ಗದಗ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading