ಅವರೆಕಾಯಿ ಮಹಿಮೆ

ಅವರೆಕಾಯಿ ಸೀಸನ್ ಅಂದರೆ ಎಲ್ಲಿಲ್ಲದ ಸಂತೋಷ. ಅವರೆಕಾಯಿ ಇಷ್ಟಪಡದೆ ಇರುವವರು ಯಾರು ಇಲ್ಲ. ಅದರಲ್ಲಿ ನಾನಾ ವಿಧದ ತಿಂಡಿ ತಿನಿಸು ಮಾಡಿ ಅವರೆಕಾಯಿಯನ್ನು ಸ್ವಾದಿಸುವವರಿಗೆ ಶಕುಂತಲ ಪಿ ಆಚಾರ್ ಅವರ ಈ ಲೇಖನ. ತಪ್ಪದೆ ಮುಂದೆ ಓದಿ…

ಅವರೆಕಾಯಿ ಸೀಸನ್ ಅಂದ್ರೆ ಸಂತೆ ಪೇಟೆಯಲ್ಲಿ ಅದರದೇ ಕಾರುಬಾರು. ಚಿಕ್ಕಂದಿನಲ್ಲಿ ಅಪ್ಪ ತರ್ತಾ ಇದ್ದಿದ್ದು ಒಂದು ಅಥವಾ ಎರಡು ಕೆಜಿ. ಅದ್ರಲ್ಲಿ ದಪ್ಪ ಗಟ್ಟಿ ಕಾಯಿ ಆರಿಸಿ ಅಮ್ಮ ನೆನೆಯಲು ಇಟ್ಟು ಉಳಿದ ಬಿಡಿಸಿದ ಕಾಳಿನಲ್ಲಿ ಕುರಿಶಣಿ ಪುಡಿ (ಬಯಲು ಸೀಮೆಯಲ್ಲಿ ಗುಳಾಲ್ ಪುಡಿ ) ಹಾಕಿ ಮಾಡಿದ ಪಲ್ಯದ ಜೊತೆಗೆ ಕಟ್ಟಿಗೆ ಒಲೆಯಲ್ಲಿ ಬೇಯಿಸುತ್ತಿದ್ದ ರೊಟ್ಟಿ ಹೆಂಚಿನಿಂದ ತಟ್ಟೆಗೆ ಬೀಳುತ್ತಿದ್ದವು. ಎಷ್ಟು ಎನ್ನದೆ ತಿನ್ನುತ್ತಿದ್ದೆವು. ಮರುದಿನ ಹಿಸುಕಿದ ಅವರೇಬೇಳೆ ಸಾರು ಮುದ್ದೆಯ ಕಾಂಬಿನೇಶನ್ ಒಳಗೊಬ್ಬ ಕುಳಿತು ಎಳೆಯುತ್ತಿದ್ದಾನೆ ಎನ್ನುವಂತೆ ಬಿಸಿ ಅರುವ ಮುಂಚೆ ಗುಳುಂ. ಆಗ ಮನೆ ತುಂಬಾ ಜನ. ಫ್ರಿಡ್ಜ್ ಬಂದಿರಲಿಲ್ಲ. ಒಂದೇ ದಿನಕ್ಕೆ ಮಾಡಿದ್ದು ಖಾಲಿಯಾಗುತ್ತಿತ್ತು. ನಿಜ ಹೇಳಬೇಕೆಂದರೆ ಆಗಿನ ಊಟದ ರುಚಿಯೇ ಹಾಗಿತ್ತು. ಹಾಗೆ ನಮ್ಮ ಹೊಟ್ಟೆ ಕೂಡ ದೊಡ್ಡದಿತ್ತೇನೋ. ಈಗಿನವರು ಅಷ್ಟು ಉಂಡಿದ್ದು ನೋಡಲೇ ಇಲ್ಲ. ಮೋಸ್ಟ್ ಲೀ ಸ್ನಾಕ್ಸ್ ಊಟದ ಗಮ್ಮತ್ತು ಕಸಿದುಕೊಂಡಿರಬೇಕು.

ಅವರೆಕಾಯಿ ಬಿಡಿಸುವಾಗ ಕೈಗೆ ಮೆತ್ತಿಕೊಳ್ಳುವ ಜಿಡ್ಡು, ಸೊಗಡಿನ ಗಮ ಅನುಭವಿಸುತ್ತ ಜಿಪ್ ನಂತೆ ನಾರು ಎಳೆದು ಬಾಯಿ ಬಿಡಿಸುವಾಗ ಮುಲುಗುಟ್ಟುತ್ತಾ ಯಾರು, ನನ್ನ ಡಿಸ್ಟರ್ಬ್ ಮಾಡ್ದೋರು ಎನ್ನುವಂತೆ ತಲೆಯೆತ್ತಿ ನೋಡುವ ಮೆತ್ತಗಿನ ಹುಳು ನೋಡುತ್ತಲೇ ಕಾಯಿ ದೂರ ಎಸೆದು ಅಮ್ಮನಿಂದ ಬೈಸಿಕೊಂಡಿದ್ದು ಅದೆಷ್ಟು ಬಾರಿಯೋ. ಈಗ ಆ ಕಟು ಗಮ ಹಾಗೂ ಜಿಡ್ಡು ಮರೆತೇ ಹೋಗಿದೆ ಎನ್ನಬೇಕು.

ಸೀಸನ್ ಮುಗಿಯಿತೇ ಮತ್ತೆ ಕಾಯಬೇಕು ಎನ್ನುವ ಚಿಂತೆ ಈಗಿಲ್ಲ. ಎಲ್ಲಾ ಕಾಲದಲ್ಲಿಯೂ ಲಭ್ಯ. ಆದರೆ ಅದರಲ್ಲಿ ರುಚಿಯಿಲ್ಲ. ಮದುವೆಯಾಗಿ ಗಂಡನ ಮನೆಗೆ ಬಂದಾಗ ಇಲ್ಲಿ ಹೆಚ್ಚು ಜನ ಇರಲಿಲ್ಲ. ಆದರೆ ವಾರದ ಸಂತೆಯಲ್ಲಿ ನನ್ನತ್ತೆ ಬರೋಬ್ಬರಿ 8-10 ಕೆಜಿಯಷ್ಟು ಅವರೆಕಾಯಿ ಹೊತ್ತು ತರುತ್ತಿದ್ದರು. ಹಳ್ಳಿಗೆ ಹೋದರೆ ತೆಂಗು, ಅಡಿಕೆ, ಅವರೆ, ತರಕಾರಿ ಎಲ್ಲಾ ಸೇರಿ ಒಂದು ಗೋಣಿ ಚೀಲ ಬಸ್ಸಿಗೆ ಹಾಕಿಕೊಂಡು ತರುತ್ತಿದ್ದರು. ಆಗ ಹಳ್ಳಿಗರಲ್ಲಿ ದಾರಾಳತನವಿತ್ತು. ಹಳ್ಳಿ ಬಿಟ್ಟು ಪೇಟೆ ಸೇರಿದ್ದವರು ಬಂದಿದ್ದಾರೆಂದು ತಿಳಿದರೆ ಸಾಕು, ಎಲ್ಲಾ ತಾವಾಗಿ ಬಂದು ಕಷ್ಟ ಸುಖ ವಿಚಾರಿಸುತ್ತಿದ್ದರು. ಊಟ ಉಪಚಾರಕ್ಕಂತು ಬರವೇ ಇರಲಿಲ್ಲ.

ಅತ್ತೆ ಅವರೆಕಾಯಿ ತಂದು ಸುಮ್ಮನೆ ಇಟ್ಟವರಲ್ಲ. ಅವರೇ ಕೂತು ಕಾಯಿ ಬಿಡಿಸಿ, ಉಪ್ಪಿಟ್ಟಿಗೆ ಒಗ್ಗರಣೆಯಲ್ಲಿಯೇ ಬೇಯುವಂತಹ ಎಳೆಯ ಸಣ್ಣ ಕಾಳು, ಸಂಕ್ರಾಂತಿ ಹಬ್ಬಕ್ಕೆ ಹಿಸಕಲೆಂದು ನೆನೆ ಹಾಕಲು ದಪ್ಪ ಬಲಿತ ಕಾಳು, ತರಕಾರಿ ಜೊತೆ ಉಳಿದದ್ದು ಮಾಡಲು ಮೀಡಿಯಂ ಹಸಿರು ಕಾಳು ಅಲ್ಲದೇ ಅಂದೇ ಸಂಜೆ ಇಡಿಯಾಗಿ ಉಪ್ಪು ಹಾಕಿ ಬೇಯಿಸಿ ತಿನ್ನಲೆಂದೆ ಸಿಪ್ಪೆ ಬಿಚ್ಚದೆ ಒತ್ತಿ ಒತ್ತಿ ಪರೀಕ್ಷಿಸಿ ಆರಿಸಿಡುವ ದಪ್ಪ ಕಾಯಿ. ಮೊದಮೊದಲು ಒಮ್ಮೆಲೇ ಅಷ್ಟೊಂದು ನೋಡಿ ದಿಗಿಲಾಗುತ್ತಿತ್ತು. ನನ್ನ ಗಂಡ ಮಾತ್ರ ಹೆಚ್ಚು ತಿನ್ನುತ್ತಿರಲಿಲ್ಲ. ಎಲ್ರು ಮುಂದೆ ಹೂಸು ಬಂದ್ರೆ ಅಂತ, ಅತ್ತೆ ಸಮಾಜಯಿಷಿ ಕೊಟ್ಟಾಗ ದೊಡ್ಡಮ್ಮ ಹೇಳುತ್ತಿದ್ದ ಅವರೆಗೆ ಆರು, ತೊಗರಿಗೆ ಮೂರು, ಅಬ್ಬಬ್ಬರಿಸಿ ಬಾರೋ ಹಲಸಂದೆರಾಯ ಅನ್ನೋ ಗಾದೆ ನೆನಪಾಗಿ ಒಳಗೇ ನಗುತ್ತಿದ್ದೆ.

ಹಳ್ಳಿಯಲ್ಲಿದ್ದಾಗ ಹಲಸಿನಹಣ್ಣು ಸುಲಿದು ಒಂದೂ ತೊಳೆ ಬಿಡದಂತೆ ಪೂರ್ತಿಯಾಗಿ ಒಬ್ಬರೇ ತಿಂದು ಮುಗಿಸುತ್ತಿದ್ದರಂತೆ, ಅತ್ತೆ ಹೆಮ್ಮೆಯಿಂದ ಹೇಳುತ್ತಿದ್ದರು. ಇನ್ನು ಅವರೆಕಾಯಿ ಕೇಳಬೇಕೇ. ಸೀಸನ್ ಮುಗಿಯುವತನಕ ದಿನಕ್ಕೊಂದು ಪದಾರ್ಥ. ಅವರು ಹೇಳಿದ ಅಡಿಗೆ ಮಾಡಲು ಕಷ್ಟ ಆಗಿರಲಿಲ್ಲ. ದಿನವೂ ಅದೇ ತಿನ್ನಲು ಮಾತ್ರ ಕಷ್ಟ ಅನ್ನಿಸಿ, ಕೊನೆಕೊನೆಗೆ ಅಭ್ಯಾಸವಾಯ್ತು. ಎಲ್ಲಾ ಓಕೆ, ಆದ್ರೆ ಸಮಸ್ಯೆ ಅನ್ನಿಸಿದ್ದು ಕುಪ್ಪೆ ಹುಳು. ಮೊಗ್ಗಿನಲ್ಲೇ ಮೊಟ್ಟೆಯಿಟ್ಟು, ಕಾಯಿಯೊಳಗೆ ಬೆಳೆದು ಜೀವಿಸುವ ಕುಪ್ಪೆ ಹುಳು, ಎಷ್ಟೇ ಕಣ್ಣಲ್ಲಿ ಕಣ್ಣಿಟ್ಟು ಆರಿಸಿದ್ದರೂ ಹೇಗೋ ಅಡಗಿ ಬಂದು ಉಣ್ಣುವಾಗ ಬಾಯಿಗೆ ಸಿಕ್ಕು ಕಚಕ್ ಅಂದಾಗ ಆ ಹಿಂಸೆ ಬೇಡ. ಸೂಡ್ರು ಕಡಿಮೆ ಇದ್ದ ವರ್ಷ ಈ ಸಂತತಿ ಜಾಸ್ತಿ ಎನ್ನುವ ಅತ್ತೆ ತರುವುದು ಮಾತ್ರ ಬಿಡುತ್ತಿರಲಿಲ್ಲ. ಹಾಗೆ ತಾಳ್ಮೆಯಿಂದ ಬಿಡಿಸಿ ಅರಿಸಿ ಕೊಡುತ್ತಿದ್ದರು.

ಅವರೆಕಾಯಿ ಮೇಲೆ ಚೆನ್ನಾಗಿ ಕಂಡರೂ ಒಳಗೆ ಕಪ್ಪು ಕಪ್ಪಾಗಿ ಕಾಳಿನೊಳಗೆ ಸೇರಿದಂತಿರುವ ಕುಪ್ಪೆ ಹುಳು ಚಳಿ ಕಡಿಮೆಯಾದಾಗ ಜಾಸ್ತಿಯಂತೆ. ನನ್ಕೈಲಿ ಬಿಡಿಸಲು ಆಗಲ್ಲ, ಇನ್ನು ತರುವುದೇ ಬೇಡಪ್ಪಾ ಅನ್ನಿಸಿ, ತರದೇ ಇದ್ದರೆ ತಿಂಡಿ, ಊಟ ಮಾಡುವಾಗ ಯಾಕೆ ಅವರೆಕಾಳು ಇಲ್ವಾ, ಎನ್ನುವ ಗಂಡ ಮಕ್ಕಳ ವರಾತ. ಆಗೆಲ್ಲಾ ಎಲ್ಲಾ ಬಿಡಿಸಿ ಆರಿಸಿ, ಇವತ್ತು ಇಂಥದು, ಹೀಗೆ ಮಾಡು, ಹಾಗೆ ಮಾಡಿದ್ರೆ ರುಚಿಯಾಗುತ್ತೆ ಎನ್ನುತ್ತ ಮಾಡಿದ್ದನ್ನು ಇಷ್ಟಪಟ್ಟು ತಿನ್ನುತ್ತಿದ್ದ ಅತ್ತೆ ನೆನಪಾಗುತ್ತಾರೆ.

ಚಿತ್ರದುರ್ಗದ ಕಡೆ ಸಂಕ್ರಾಂತಿಗಾಗಿಯೇ ಹಿಸಕವರೇ ಮಾಡಿ ಇಡುತ್ತಾರೆ. ಬೋಗಿ ಹಬ್ಬದ ದಿನ ಎಳ್ಳು, ಮೆಣಸಿನ ಬೀಜ ಹಾಕಿ ಮಾಡುವ ಸಜ್ಜೆ ರೊಟ್ಟಿ ಜೊತೆ ಹಿಸಗವರೇಕಾಳಿನ ಸಾರಿನದೇ ಕಾರುಬಾರು. ಇದು ಹಳ್ಳಿಗಳಲ್ಲಿ ಕೆಲವು ಕಡೆ ಕಾಣುವ ಪದ್ಧತಿ, ಬೇಯಿಸಿದ ಅವರೆಕಾಯಿ, ಸಿಹಿ ಗುಂಬಳ, ಗೆಣಸು. ಚಳಿಯ ಸೂಡರಿಗೆ ಬರಗೆಟ್ಟ ದೇಹಕ್ಕೆ ಬೇಕಾದ ಪೌಷ್ಟಿಕತೆ ಕೊಡವಂತೆ ಕಬ್ಬು, ಹಸಿ ಕಡಲೆ, ಎಳ್ಳು ಬೆಲ್ಲ, ಸೇಂಗಾ. ಸುಗ್ಗಿ ಸಮಯದಲ್ಲಿ ಚುಮುಗುಡುವ ಚಳಿಯಲ್ಲಿ ಹೊಸ ಬಟ್ಟೆ ತೊಟ್ಟು ಎಳ್ಳು ಬೀರಿ ಸಂಭ್ರಮಿಸುವ ಮಕ್ಕಳು.

ಹೀಗೆ ಅವರೆಕಾಯಿಯ ಜೊತೆಗೆ ಬೆಸೆದ ನೂರಾರು ನೆನಪುಗಳು ಎರಡೂ ಮನೆಗಳ ಸಂಬಂಧಗಳ ನೆನಪು ಮಾಡಿಕೊಡುತ್ತದೆ.


  • ಶಕುಂತಲ ಪಿ ಆಚಾರ್ – ಚಿತ್ರದುರ್ಗ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading