‘ಬೊಗಸೆ ನೀರು’ ಕೃತಿ ಪರಿಚಯ

ಅರುಣ್ ಕುಮಾರ್ ಹಬ್ಬು ಅವರು ನಿಷ್ಠಾವಂತ ಮತ್ತು ಸಹೃದಯಿ ಪತ್ರಕರ್ತರು. ಅವರ ಬದುಕಿನ ಅನುಭವ ಕಥನ ಅದೆಷ್ಟು ಹೃದಯ ಸ್ಪರ್ಶಿಯೆಂದರೆ ಓದು ಮುಗಿಸಿದರೂ ಅದು ಕಾಡುತ್ತಲೇ ಇರುತ್ತದೆ. ಬೊಗಸೆ ನೀರು ಕೃತಿಯ ಕುರಿತು ಲೇಖಕಿ ಕವಿತಾ ಹೆಗಡೆ ಅಭಯಂ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…

ಪುಸ್ತಕ : ಬೊಗಸೆ ನೀರು
ಲೇಖಕರು : ಅರುಣ್ ಕುಮಾರ್ ಹಬ್ಬು​
ಪ್ರಕಾರ : ಅನುಭವ ಕಥನ

“ಬೊಗಸೆ ನೀರು” ಎನ್ನುವುದು ಹೃದಯವಂತ ಪತ್ರಕರ್ತ ಅರುಣಕುಮಾರ ಹಬ್ಬು ಅವರ ಬದುಕಿನ ಅನನ್ಯ ಅನುಭವ ಕಥನ. ಬದುಕಿನ ಗಾಲಿ ಕರೆದುಕೊಂಡು ಹೋದ ಕಡೆಗೆಲ್ಲ ಹೋಗಲೇಬೇಕು. ಈ ಪಥದಲ್ಲಿ ಬೆಳಕು, ಕತ್ತಲೆ, ನಯ, ಕಲ್ಲು, ಮುಳ್ಳು, ನೋವು, ನಲಿವು ಎಲ್ಲವೂ ತಮ್ಮ ತಮ್ಮ ಪರಿಧಿಯಲ್ಲಿ ಮೈಚಾಚಿ ಬಿದ್ದಿರುತ್ತವೆ. ಯಾರ ಪ್ರಭಾವಕ್ಕೆ ಎಷ್ಟು ಒಳಗಗುತ್ತೇವೋ ತಿಳಿಯದೆ ಮುಂದೆ ಸಾಗುತ್ತಲೇ ಇರುವುದೇ ಬದುಕು. ಹಬ್ಬು ಅವರು ಈ ಪುಸ್ತಕದಲ್ಲಿ ತಮ್ಮ ಬದುಕಿನ ಇಂಥ ಹಲವು ಬಣ್ಣಗಳನ್ನು ದರ್ಶಿಸಿದ್ದಾರೆ.

ಪತ್ರಿಕೋದ್ಯಮದ ಮತ್ತು ಬದುಕಿನ ಹಲವು ವಿಚಿತ್ರವಿಭಿನ್ನ ಸವಾಲುಗಳನ್ನು ಎದುರಿಸಿ ಗಟ್ಟಿಯಾದವರು. ಕನ್ನಡ ಮತ್ತು ಇಂಗ್ಲೀಷ ಭಾಷೆಯಲ್ಲಿ ನೈಪುಣ್ಯ ಸಾಧಿಸಿ ಬಲು ವಿಶ್ಲೇಷಣಾತ್ಮಕ ಬರಹವನ್ನು ರೂಢಿಸಿಕೊಂಡ ಅವರು ತಮ್ಮ ಬಾಲ್ಯದಿಂದ ಇದುವರೆಗಿನ ಆಸಕ್ತಿಕರ ಘಟ್ಟಗಳನ್ನು ಪರಿಚಯಿಸಿದ್ದಾರೆ.

ಅವರ ಬದುಕೊಂದು ಅದಮ್ಯ ಹೋರಾಟದ ಕಥನ. ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡ ಇವರನ್ನು ತಾಯಿಯೂ ಬಿಟ್ಟು ತನ್ನ ತವರು ಮನೆಗೆ ತೆರಳಿದಾಗ ನಿಜಕ್ಕೂ ಅನಾಥರಾಗಿಬಿಡುತ್ತಾರೆ. ಮಂಚಿಕೇರಿ ಎಂಬ ಪುಟ್ಟ ಊರಿನ ಸಹೃದಯಿಗಳ ಮನೆಗಳಲ್ಲಿ ನೆರಳು ಪಡೆದು, ಕಡು ಕಷ್ಟದಲ್ಲೂ ಓದಿ, ಬೆಳೆದು, ಉದ್ಯೋಗ ಮಾಡಿ, ಆರೋಗ್ಯ ಸಮಸ್ಯೆಯ ನಡುವೆಯೂ ನಿಸ್ಪ್ರಹ ವೃತ್ತಿಧರ್ಮ ತೋರಿದ ಅಜಾತ ಶತ್ರು. ಬದುಕಿನಲ್ಲಿ ಸುಖ, ಸೌಲಭ್ಯ, ನೆಮ್ಮದಿ ಅವರ ಬೊಗಸೆಯಲ್ಲಿ ನೀರು. ಅನುಭವಿಸುವಷ್ಟರಲ್ಲಿ ಓಡಿ ಹೋಗುತ್ತಿದ್ದ ಮಾಯಾಮೃಗ.

ಹಿಡಿದು ಇದೀಗ ಬದುಕಿನ ತಂದೆ ಸುಗುಣ ಶಂಕರ ಹಬ್ಬು ಅವರ ಮೃತ್ಯು, ತಾಯಿಯ ಅಗಲಿಕೆಯ ನೋವಿನ ನಡುವೆ ಅವರು ಎಲ್ಲೋ ಬೆಳೆದು, ಹೇಗೋ ಓದಿ, ಇನ್ನೇನು ನೌಕರಿ ದೊರೆತು ನೆಮ್ಮದಿ ದೊರೆಯಿತು ಎನ್ನುವಾಗ ಆರೋಗ್ಯವೇ ಕೈಕೊಡುವುದು ಓದುಗರ ಎದೆಯನ್ನು ಕರಗಿಸುತ್ತದೆ. ಈ ಪುಸ್ತಕದಲ್ಲಿ ಬಡತನ, ಹಸಿವು, ವಿದ್ಯೆ ಕಲಿಯಲು ಮಾಡಿದ ಹೋರಾಟ, ಅಸಹಾಯಕತೆ, ಅವಮಾನ ಸೋಲು, ಗೆಲುವು ಎಲ್ಲವೂ ಕಾಣುತ್ತವೆ. ಬದುಕಿನ ಸಂಧ್ಯಾಕಾಲದಲ್ಲಿ ಅವರು ನಿರ್ಲಿಪ್ತರಾಗಿಯೇ ಎಲ್ಲವನ್ನೂ ನೆನೆಯುತ್ತ ಹಗುರಾಗಬಯಸುವ ಪ್ರಾಮಾಣಿಕತೆಯಿದೆ. ಹಲವು ಸವಾಲುಗಳಿಗೆ ಹೀಗೆ ಉತ್ತರಿಸಬಹುದೆನ್ನುವ ದಿಟ್ಟ ಸಂದೇಶವಿದೆ. ಲೋಕದಲ್ಲಿನ ಹಲವು ಮಾನವೀಯ ಮೌಲ್ಯ ಹೊತ್ತವರ ಕಾರಣದಿಂದಾಗಿ ತನ್ನ ಬದುಕಿನ ಬಂಡಿಯನ್ನು ಹೇಗೆ ಎಳೆಯುವುದು ಸಾಧ್ಯವಾಯಿತು ಎಂಬ ಕೃತಜ್ಞತೆಯ ಭಾವವಿದೆ.

ಮಂಚಿಕೇರಿಯಿಂದ ಆರಂಭವಾದ ಬದುಕು ಕಾರವಾರ, ಹಳದೀಪುರ, ಧಾರವಾಡ, ಬೆಂಗಳೂರು, ಬೀದರ ಹೀಗೆ ಹಲವು ಊರುಗಳಲ್ಲಿ ನೆಲೆ ಕಂಡ ಕಥನವಿದೆ. ತನ್ನ ಬದುಕಿನ ಯಾವ ಘಟನೆಗಳಿಗೂ ಯಾರನ್ನೂ ದೂರದೇ ಇತಿ ಮಿತಿಗಳ ನಡುವೆಯೇ ಘನತೆಯಿಂದ ಬದುಕಿನ ಅಪೂರ್ವ ಚಿತ್ರಣವಿದೆ.

ಚಿಕ್ಕಂದಿನಲ್ಲಿಯೇ ಒಂದೊಂದು ದಿಕ್ಕಿಗೆ ಬದುಕು ಅರಸಿಹೋದ ಅಣ್ಣತಮ್ಮಂದಿರ ಎಂದೂ ಮುರಿಯದ ಬಾಂಧವ್ಯ, ಅಣ್ಣ ಮೋಹನ ದಾದ ತನ್ನ ತಮ್ಮಂದಿರ ಸಲುವಾಗಿ ಶಕ್ತಿ ಮೀರಿ ಯತ್ನಿಸಿದ ನಿಸ್ವಾರ್ಥ ನೋಟವಿದೆ. ಎಂಥಾ ಕಷ್ಟದಲ್ಲೂ ಕೈಬಿಡದ ಧರ್ಮಪತ್ನಿ ಸುಮಾ ಅವರ ಪ್ರೀತಿಯ ಸಾಂಗತ್ಯ ಹೊರ ಹೊಮ್ಮಿಸಿದ ಪ್ರೇಮ ಕಾವ್ಯವಿದೆ. ಪದೇ ಪದೇ ಧುತ್ತೆಂದು ಎರಗುವ ಸಮಸ್ಯೆಗಳಿಗೆ ಬದುಕು ಹೇಗೆ ಬಾಡಿತೆನ್ನುವ ಕರುಣೆಯ ಚಿತ್ರವಿದೆ. ಒಳಗಿನ ನೋವನ್ನು ಹೊರಗೆ ತೋರದೆ,ಒಬ್ಬ ಪತ್ರಕರ್ತ ಹೇಗೆ ತನ್ನ ಬದುಕನ್ನು ಮಾದರಿಯಾಗಿ ಬದುಕಬೇಕೆನ್ನುವ ಪಾಠವಿದೆ. ಅವರ ಜೊತೆ ಅವರ ನಾಲ್ಕು ಸೋದರರೂ ಸಹ ತಮ್ಮ ಅನುಭವ /ಆತ್ಮ ಕಥನ ಬರೆದು ದಾಖಲೆ ಸ್ಥಾಪಿಸಿದ್ದಾರೆ.

ಪ್ರಜಾವಾಣಿಯ ಜೊತೆಗಿನ ಹಬ್ಬು ಅವರ ಬಾಂಧವ್ಯ ಅದ್ಭುತವಾದದ್ದು. ಏನೇ ಇರಲಿ ಕೈಹಿಡಿದ ಪತ್ರಿಕೆಯನ್ನು, ಅಲ್ಲಿನ ಸಿಹಿ ಕಹಿ ಗಳಿಗೆಗಳನ್ನು, ಉತ್ತಮ ಸಿಬ್ಬಂದಿ ವರ್ಗ ತೋರಿದ ಪ್ರೀತಿಯನ್ನು ಅವರಿಲ್ಲಿ ಮನದುಂಬಿ ನೆನೆಯುತ್ತಾರೆ.

ಅವರು ಬರೆದ ಲೇಖನಗಳು ಸದಾ ವಸ್ತುನಿಷ್ಠ. ಲಾಥೂರಿನ ಭೂಕಂಪದ ಸುದ್ದಿ ಕೇಳಿ ಮೊದಲು ತಾವೇ ಅಲ್ಲಿಗೆ ಧಾವಿಸಿ ವರದಿ ಮಾಡಿದ್ದು, ಬೀದರಿನ ಐತಿಹಾಸಿಕ ಸ್ಮಾರಕಗಳ ಮಹತ್ವ, ಬೇಡ್ತಿ ಜಲವಿದ್ಯುತ್ ಯೋಜನೆಯ ವಿರುದ್ಧ ನಡೆದ ಹೋರಾಟದ ಪರಿಣಾಮಕಾರಿ ವರದಿ ಇವರ ಕೆಲವು ಅವಿಸ್ಮರಣೀಯ ಕೊಡುಗೆಗಳು. ತುಂಬ ದಣಿದು ಬಾಯಾರಿದವರಿಗೆ ಕೇವಲ ಒಂದೇ ಒಂದು ಬೊಗಸೆ ನೀರು ಬಾಯಾರಿಕೆ ತಣಿಸುವ ಅಮೃತಧಾರೆಯೇ ಸರಿ. ಓದುಗ ಬಂಧುವಿನ ಓದಿನ ತೃಷೆ ತಣಿಸುವ ಇಂಥದ್ದೊಂದು ಒಂದು ಅತ್ಯುತ್ತಮ ಕಥನದ ಜೊತೆಗೆ ಜೊತೆಗೆ ಕೈಲಿರುವುದನ್ನು ಹೇಗೆ ಬಳಸಬೇಕು, ಕಾಪಾಡಬೇಕು ಎಂಬ ಮೌಲ್ಯವನ್ನು ಕೂಡ ತಿಳಿಸಿಕೊಡುವ ಈ ಪುಸ್ತಕ ಅತ್ಯಂತ ಸೊಗಸಾಗಿದೆ.

ಅರುಣ್ ಕುಮಾರ್ ಹಬ್ಬು ಅವರ ಎಲ್ಲ ಹೆಜ್ಜೆಗಳಿಗೂ ಶುಭ ಕೋರುತ್ತ ಇಂಥದ್ದೊಂದು ಅಮೂಲ್ಯ ಪುಸ್ತಕವಿತ್ತಿದ್ದಕ್ಕಾಗಿ ಹೃದಯಪೂರ್ವಕ ಅಭಿನಂದನೆಗಳು.


  • ಕವಿತಾ ಹೆಗಡೆ ಅಭಯಂ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW