ಪ್ರಪಂಚದಲ್ಲಿ ೧೮,೦೦೦ ಕ್ಕಿಂತ ಜಾಸ್ತಿ ಪಕ್ಷಿ ಪ್ರಬೇಧವಿದ್ದು, ಪೆಂಗ್ವಿನ್‌ಗಳು, ಆಸ್ಟ್ರಿಚ್‌ಗಳು, ಎಮುಗಳು ಮತ್ತು ಕಿವಿ ಪಕ್ಷಿಗಳನ್ನು ಹೊರತು ಪಡಿಸಿದರೆ ಉಳಿದೆಲ್ಲಾ ಪಕ್ಷಿಗಳು ಹಾರುವ ಸಾಮರ್ಥ್ಯ ಹೊಂದಿವೆ. ಪಶುವೈದ್ಯರಾದ ಡಾ.ಎನ್.ಬಿ.ಶ್ರೀಧರ ಅವರು ‘ಹಕ್ಕಿಗಳ ವಿಸ್ಮಯ ಲೋಕ’ ಕುರಿತು ಕುತೂಹಲ ವಿಷಯವನ್ನು ತಪ್ಪದೆ ಮುಂದೆ ಓದಿ…
ಪಕ್ಷಿಗಳು ಭೂಮಿಯಲ್ಲಿರುವ ಅದ್ಭುತ ಪೃಕೃತಿಯ ವಿಸ್ಮಯಗಳು. ಆಕಾಶದಲ್ಲಿ ಹಾರುವ ಇವುಗಳನ್ನು ನೋಡಿಯೇ ಅಲ್ಲವೇ ಮನುಷ್ಯನಿಗೂ ಇವುಗಳಂತೇ ಆಕಾಶದಲ್ಲಿ ಹಾರಬೇಕೆಂಬ ಕಲ್ಪನೆಯಿಂದ ವಿಮಾನವನ್ನು ಕಂಡುಹಿಡಿದಿದ್ದು!!.
ಪ್ರಪಂಚದಲ್ಲಿ ೧೮,೦೦೦ ಕ್ಕಿಂತ ಜಾಸ್ತಿ ಪಕ್ಷಿ ಪ್ರಬೇಧವಿದ್ದು ಪ್ರಪಂಚದ ಹಕ್ಕಿಗಳ ಸಂಖ್ಯೆ ಅಂದಾಜು ೪೩೦ ಬಿಲ್ಲಿಯನ್ ಅಥವಾ ೪೩೦೦ ಕೋಟಿ ಅಥವಾ ಮನುಷ್ಯನ ಸಂಖ್ಯೆಗಿಂತ ೫ ಪಟ್ಟು ಜಾಸ್ತಿ!. ಪೆಂಗ್ವಿನ್‌ಗಳು, ಆಸ್ಟ್ರಿಚ್‌ಗಳು, ಎಮುಗಳು ಮತ್ತು ಕಿವಿ ಪಕ್ಷಿಗಳನ್ನು ಹೊರತು ಪಡಿಸಿದರೆ ಉಳಿದೆಲ್ಲಾ ಪಕ್ಷಿಗಳು ಹಾರುವ ಸಾಮರ್ಥ್ಯ ಹೊಂದಿವೆ. ಅವುಗಳ ಬಗ್ಗೆ ಅನೇಕ ವಿಸ್ಮಯಗಳು ನಮ್ಮನ್ನು ಬೆರಗಾಗಿಸುತ್ತವೆ.

- ಪ್ರಪಂಚದಲ್ಲಿ ಪಕ್ಷಿಗಳ ಉದಯ ೧೫೦ ಮಿಲಿಯನ್ ವರ್ಷಗಳ ಹಿಂದೆ ಆಯಿತು ಮತ್ತು ಇವು ಡೈನಾಸಾರುಗಳ ಜಾತಿಗೆ ಸೇರಿದ ಥೆರೋಪಾಡ್ಸ್ ಎಂಬ ಡೈನೋಸಾರ್‌ಗಳ ಗುಂಪಿನಿಂದ ಹೊರಹೊಮ್ಮಿ ಟೈರನೋಸಾರಸ್ ರೆಕ್ಸ್ ಇದರಂತೆ ಪ್ರಸಕ್ತ ರೂಪ ಪಡೆದವು ಎನ್ನಲಾಗಿದೆ.
- ಡೈನೋಸಾರುಗಳು ಹಲ್ಲುಗಳನ್ನು ಹೊಂದಿದ್ದು ಆಹಾರ ಸೇವನೆಯ ವಿಧಾನ ಬದಲಾದಂತೆ ಆ ಹಲ್ಲುಗಳು ಕೊಕ್ಕಿನ ರೂಪದಲ್ಲಿ ಪರಿವರ್ತನೆಗೊಂಡವು ಎನ್ನಲಾಗಿದೆ.
- ಪಕ್ಷಿಗಳು ಟೊಳ್ಳಾದ ಎಲುಬುಗಳನ್ನು ಹೊಂದಿರುವುದರಿಂದ ಅವುಗಳು ಹಾರಲು ಸುಲಭ. ಪಕ್ಷಿಗಳ ಶರೀರದ ತೂಕದ ಶೇ ೧೪ ಮಾತ್ರ ಎಲುಬುಗಳ ತೂಕವಾಗಿದ್ದರೆ ಇತರ ಮನುಷ್ಯನಂತ ಭೂಚರ ಪ್ರಾಣಿಗಳಲ್ಲಿ ಅದರ ತೂಕ ಶೇ ೭೫-೮೪%.
- ಬಿಸಿರಕ್ತದ ಜೀವಿಗಳಾದ ಎಲ್ಲಾ ಪಕ್ಷಿಗಳು ಸಹ ಮೊಟ್ಟೆಯನ್ನಿಡುತ್ತವೆ. ಅನೇಕ ಪಕ್ಷಿಗಳಿಗೆ ಮೊಟ್ಟೆಯಿಡಲು ಗಂಡಿನ ಸಂಪರ್ಕವೇ ಬೇಡ. ಕೋಳಿಗಳು ಇದರ ಮಹತ್ವದ ಉದಾಹರಣೆ.
- ಅರ್ಧ ಗ್ರಾಂ ತೂಕದ ಅತ್ಯಂತ ಸಣ್ಣ ತತ್ತಿಗಳನ್ನು ಇಡುವ ಬೀ ಹಮ್ಮಿಂಗ್ ಪಕ್ಷಿಯ ತೂಕ ಕೇವಲ ೧೦-೧೫ ಗ್ರಾಮ್ ಮಾತ್ರ ಮತ್ತು ಇದರ ಹೃದಯ ಮಿಡಿತ ಪ್ರತಿ ನಿಮಿಷಕ್ಕೆ ೧೨೬೦ ಮತ್ತು ಪ್ರಪಂಚದ ಎಲ್ಲಾ ಪಕ್ಷಿಗಳಲ್ಲಿ ಇದೇ ಅತ್ಯಂತ ಜಾಸ್ತಿ. ಮನುಷ್ಯನಿಗೆ ಹೋಲಿಸಿದರೆ ಇದು ೨೦೦ ಪಟ್ಟು ಜಾಸ್ತಿ.
- ಅತ್ಯಂತ ದೊಡ್ಡ ತತ್ತಿಗಳನ್ನು ಇಡುವ ಪಕ್ಷಿ ಉಷ್ಟ್ರಪಕ್ಷಿ ಅಥವಾ ಆಸ್ಟ್ರಿಚ್. ಅದರ ಮೊಟ್ಟೆ ಸುಮಾರು ೨ ಕಿಲೊ ತೂಗುತ್ತದೆ.
- ಪ್ರಪಂಚದ ಎಲ್ಲಾ ಖಂಡದಲ್ಲಿ ಬದುಕುವ ಏಕೈಕ ಜೀವಿಗಳು ಪಕ್ಷಿಗಳು. ಅತ್ಯಂತ ತಂಪು ತಾಪಮಾನದಿಂದ ಅತ್ಯಂತ ಗರೀಷ್ಟ ತಾಪಮಾನದಲ್ಲಿ ಇವು ಬದುಕುತ್ತವೆ.
- ಪೆರೆಗ್ರಿನ್ ಫಾಲ್ಕನ್ ಪಕ್ಷಿ ಅಂಟಾರ್ಕ್ಟಿಕಾವೂ ಸೇರಿದಂತೆ ಪ್ರಪಂಚದ ಎಲ್ಲಾ ದೇಶದಲ್ಲಿ ಬದುಕುತ್ತದೆ.
- ತಾಪಮಾನ ಬದಲಾದಂತೆ, ಆಹಾರ ಹುಡುಕಾಟಕ್ಕೆ, ಸಂತಾನೋತ್ಪತ್ತಿಗೆ ಪಕ್ಷಿಗಳು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ನಿರಂತರವಾಗಿ ವಲಸೆ ಹೋಗುತ್ತವೆ.
- ಸಂತತಿಯ ಅಭಿವೃದ್ಧಿಯ ಸಮಯ ಬಂದಾಗ ಚೊಟ್ಟಿರಿವ ಪಕ್ಷಿ (ಕ್ರೆಸ್ಟೆಡ್ ಟೆರ್ನ್) ಉಳಿದ ಪಕ್ಷಿ ಪ್ರಬೇಧಗಳ ಹಾಗೆ ಈ ಜೀವಿಯೂ ಕೂಡ ಸಂಗಾತಿಯನ್ನು ಆಕರ್ಷಿಸಲು ಬಲು ಪ್ರೀತಿಯಿಂದ ವರ್ತಿಸುತ್ತದೆ.ಮುಖ್ಯವಾಗಿ ಹೆಣ್ಣನ್ನು ಕಂಡೊಡನೆ ಮೀನೊಂದನ್ನು ಹಿಡಿದು ಕೊಕ್ಕಿನಿಂದ ಹೆಣ್ಣು ಪಕ್ಷಿಗೆ ಉಡುಗೊರೆ ರೂಪದಲ್ಲಿ ನೀಡುತ್ತದೆ. ನಂತರ ಸಂತಸಗೊಂಡ ಹೆಣ್ಣು, ಗಂಡಿನೊಂದಿಗೆ ಒಂದಾಗಲು ಮುಂದುವರೆಯುತ್ತದೆ. ಹೀಗೆ ಆರಂಭವಾದ ದಾಂಪತ್ಯ ಮೊಟ್ಟೆಯೊಡೆದು ಹೊಸ ಜೀವವೊಂದು ಭೂಮಿಗೆ ಬರುವವರೆಗೂ ಸರಾಗವಾಗಿ ಸಾಗುತ್ತದೆ.
- ಮನುಷ್ಯನ ಧ್ವನಿಯನ್ನು ಬಹಳ ಸಾಮ್ಯತೆಯಿಂದ ಅನುಸರಿಸುವ ಪಕ್ಷಿಗಳು ಗಿಳಿಗಳು. ಇವು ಮನುಷ್ಯನ ಭಾಷೆಯಲ್ಲಿ ಮಾತನಾಡಿ ಆತನನ್ನು ಸಂಪರ್ಕಿಸಲು ಪ್ರಯತ್ನಿಸುತ್ತವೆ.
- ಸುಮಾರು ೧೩೦-೧೫೦ ಕಿಲೋ ತೂಗುವ ವಿಶ್ವದ ಅತ್ಯಂತ ದೊಡ್ಡ ಗಾತ್ರದ ಪಕ್ಷಿ ಆಸ್ಟ್ರಿಚ್ ಪ್ರಪಂಚದ ಎಲ್ಲಾ ಪ್ರಾಣಿಗಳಲ್ಲಿಯೇ ಅತ್ಯಂತ ದೊಡ್ಡ ಕಣ್ಣು ಹೊಂದಿದೆ. ಮನುಷ್ಯನ ಕಣ್ಣಿನ ೫ ರಷ್ಟು ಗಾತ್ರದ ಇದರ ಕಣ್ಣು ಅದರ ಮೆದುಳಿಗಿಂತ ೩ ಪಟ್ಟು ದೊಡ್ಡದಾಗಿದ್ದು ಇದರ ವ್ಯಾಸ ೨ ಇಂಚ್ ಆಗಿದೆ.
- ಆಸ್ಟ್ರಿಚ್ಚುಗಳಿಗೆ ೩ ಹೊಟ್ಟೆ ಇರುತ್ತವೆ. ಇದು ಹೊಟ್ಟೆಯಲ್ಲಿ ಸದಾ ೧ ಕಿಲೊ ಕಲ್ಲುಗಳನ್ನು ಜೀರ್ಣಕ್ರಿಯೆಗಾಗಿ ಹೊಟ್ಟು ಸುತ್ತುತ್ತವೆ.
- ಆಸ್ಟ್ರಿಚ್ಚುಗಳು ನಡೆದಾಡುವ ವೇಗ ಗಂಟೆಗೆ ೭೦ ಕಿಮಿಗಿಂತಲೂ ಜಾಸ್ತಿ.ಆಸ್ಟ್ರಿಚ್ಚುಗಳು ಪಕ್ಷಿಗಳಲ್ಲಿಯೇ ಅತ್ಯಂತ ಸಾದು.
- ಸಿನಿಮಾಗಳಲ್ಲಿ ಹೀರೋ ಸಾಲ್ಸಾ, ಕಥಕ್ಕಳಿ, ಭರತನಾಟ್ಯ, ರುಂಬಾ ಇತ್ಯಾದಿ ತರಹೆವಾರಿ ನರ್ತನ ಮಾಡಿ ಸುಂದರ ಹಿರೋಯಿಣಿಯನ್ನು ಆಕರ್ಷಿಸುವಂತೆ ಗಂಡು ಆಸ್ಟ್ರಿಚ್ಚುಗಳು ವಿವಿಧ ರೀತಿಯಲ್ಲಿ ನರ್ತಿಸಿ ಹೆಣ್ಣನ್ನು ಬಲೆಗೆ ಬೀಳಿಸಿಕೊಂಡು ಮಿಲನಕ್ರಿಯೆ ನಡೆಸುತ್ತವೆ.
- ಏಕಪತ್ನಿ ವೃತಸ್ಥ ಕಪ್ಪು ಬಿಳಿ ಮಂಗಟ್ಟೆ ಹಕ್ಕಿ ಅಥವಾ ಗಂಡು ಹಾರ್ನ್‍ಬಿಲ್ಲುಗಳು ಒಳ್ಳೆಯ ಅಪ್ಪಂದಿರು . ರುಚಿಕರವಾದ ಹಣ್ಣು, ಬಣ್ಣ ಬಣ್ಣದ ಕಲ್ಲುಗಳನ್ನು ಉಡುಗರೆ ನೀಡಿ ಹೆಣ್ಣನ್ನು ಆಕರ್ಷಿಸಿ ಕೂಡುತ್ತದೆ. ಗರ್ಭವತಿ ಹೆಣ್ಣು ಹಕ್ಕಿಯನ್ನು ಮರದ ಪೊಟರೆಯೊಳಗೆ ಗೂಡಿ ಮಾಡಿ ಕೇವಲ ಕೊಕ್ಕು ಮಾತ್ರ ಕಾಣುವ ಹಾಗೆ ಕೂಡಿ ಹಾಕಿ ದಿನಕ್ಕೆ ೪-೫ ಬಾರಿ 50 ದಿನಗಳವರೆಗೆ ಆಹಾರವನ್ನು ನೀಡುತ್ತಾ ಮೊಟ್ಟೆ ಮರಿಯಾಗುವರೆಗೂ ರಕ್ಷಣೆ ಮಾಡಿ ಜತನದಿಂದ ಕಾಪಾಡಿಕೊಳ್ಳುತ್ತದೆ. ಗಂಡು ಹಕ್ಕಿ ಮರಣ ಹೊಂದಿದರೆ ಇಡೀ ಕುಟುಂಬ ನಿರ್ನಾಮವಾಗುತ್ತದೆ.
- ಬಹುತೇಕ ಪಕ್ಷಿಗಳು ಸರಾಸರಿ ೧೨ ತಾಸು ನಿದ್ರೆಯನ್ನು ಮಾಡಿದರೆ ಬಾತುಕೋಳಿಗಳು ಒಂದು ಕಣ್ಣು ಮಾತ್ರ ಮುಚ್ಚಿಕೊಂಡು ಒಂದು ಕಣ್ಣನ್ನು ಸದಾ ತೆರೆದುಕೊಂಡು ಶತ್ರುಗಳ ಆಗಮನದತ್ತ ನಿಗಾ ಇಡುತ್ತವೆ.
- ಸ್ಟಿಂಕ್ ಬರ್ಡ್ಸ್ ಎಂದೂ ಕರೆಯಲ್ಪಡುವ ಯುವ ಹಾಟ್ಜಿನ್, ತಮ್ಮ ರೆಕ್ಕೆಗಳ ಮೇಲೆ ಎರಡು ಉಗುರುಗಳನ್ನು ಹೊಂದಿರುತ್ತವೆ. ಅವು ಮರದ ಕೊಂಬೆಗಳನ್ನು ಏರಲು ಮತ್ತು ನೀರಿನಲ್ಲಿ ತಮ್ಮನ್ನು ರಕ್ಷಿಸಿಕೊಳ್ಳಲು ಈ ಉಗುರುಗಳನ್ನು ಬಳಸುತ್ತವೆ.
- ಕಡಲುಕೋಳಿಗಳು ಅತ್ಯಂತ ದೊಡ್ಡ ಕಡಲ ಪಕ್ಷಿಗಳಲ್ಲಿ ಒಂದಾಗಿದೆ. ಪ್ರಪಂಚದ ಹೆಚ್ಚಿನ ಪಕ್ಷಿಗಳ ಉದ್ದದ ರೆಕ್ಕೆಗಳನ್ನು ಹೊಂದಿರುವ ಈ ಪಕ್ಷಿಯು ಆಕಾಶದಲ್ಲಿ ಸಲೀಸಾಗಿ ಗಂಟೆಗಟ್ಟಲೆ ಹಾರಬಲ್ಲದು.
- ಕಡಲುಕೋಳಿಗಳು ತಮ್ಮ ರೆಕ್ಕೆಗಳ ಅಡಿಯಲ್ಲಿ ಗಾಳಿಯ ಶಕ್ತಿಯನ್ನು ಬಳಸಿಕೊಳ್ಳುವ ಮೂಲಕ ಎಲ್ಲಿಯೂ ಇಳಿಯದೆ ಮೀನುಗಳನ್ನು ತಿನ್ನುತ್ತಾ ನೂರಾರು ಮೈಲುಗಳಷ್ಟು ಹೋಗಬಹುದು. ಕುತೂಹಲಕಾರಿಯಾಗಿ, ಯುವ ಕಡಲುಕೋಳಿಗಳು ತಮ್ಮ ಜೀವನದ ವರ್ಷಗಳನ್ನು ಭೂಮಿಯನ್ನು ಮುಟ್ಟದೆ ಸಮುದ್ರದಲ್ಲಿ ಕಳೆಯಬಹುದು.
- ಇನ್ನೂ ಹೆಚ್ಚು ಆಕರ್ಷಕವೆಂದರೆ ಕಡಲುಕೋಳಿಗಳು ಹಾರುವಾಗಲೇ ಕೆಲವು ಸೆಕೆಂಡುಗಳ ಕಾಲ ನಿದ್ರೆಯನ್ನೂ ಮಾಡುತ್ತವೆ.
- ಮನುಷ್ಯನಂತೆ ನೇರವಾಗಿ ನಡೆಯುವ ಪೆಂಗ್ವಿನ್ನುಗಳು ಹಾರಲಾಗದ ಪಕ್ಷಿಗಳು ಸುಮಾರು ೯ ಅಡಿ ಎತ್ತರಕ್ಕೆ ಹಾರುತ್ತವೆ.
- ಕಾಗೆಗಳು ಮಾನವ ಮುಖಗಳನ್ನು ಗುರುತಿಸಬಲ್ಲವು. ರಾವೆನ್ ಕುಟುಂಬಕ್ಕೆ ಸೇರಿದ ಕಾಗೆಗಳು ನಂಬಲಾಗದಷ್ಟು ಬುದ್ಧಿವಂತ ಪಕ್ಷಿಗಳು. ಅವು ಮಾನವರ ಮುಖಗಳನ್ನು ಗುರುತಿಸಬಹುದು. ಸಮುದ್ರದಲ್ಲಿ ಭೂಪ್ರದೇಶವನ್ನು ಪತ್ತೆ ಮಾಡಲು ಹಡಗಿನಲ್ಲಿ ಇವುಗಳನ್ನು ಬಳಸುತ್ತಾರೆ ಮತ್ತು “ಕ್ರೌ ಬಾರ್” ಎಂಬ ವಾಸಸ್ಥಳ ನಿರ್ಮಿಸುತ್ತಾರೆ.
- ಕಾಗೆಗಳು ಕುಟುಂಬ ಪ್ರೇಮಿಗಳು ಮತ್ತು ಆಹಾರ ಸಿಕ್ಕಾಗ ಇತರ ಕಾಗೆಗಳನ್ನು ಕರೆಯುವ ಪಕ್ಷಿಗಳು. ಇವು ಕುಟುಂಬದ ಸದಸ್ಯ ಸತ್ತಾಗ ಸಂತಾಪವನ್ನು ಸಹ ವ್ಯಕ್ತಪಡಿಸುತ್ತವೆ ಮತ್ತು ಸಾವಿಗೆ ಕಾರಣವಾದ ಮಾನವ ಅಥವಾ ಪ್ರಾಣಿಯನ್ನು ಶಿಕ್ಷಿಸಬಯಸುತ್ತವೆ.
- ಪೆರೆಗ್ರಿನ್ ಫಾಲ್ಕನ್ ಅತ್ಯಂತ ವೇಗದ ಹಕ್ಕಿಯಾಗಿದ್ದು, ಪ್ರತಿ ಗಂಟೆಗೆ ೩೨೦ ಕಿಲೊಮೀಟರಿಗಿಂತಲೂ ಹೆಚ್ಚು ಹಾರಾಟದ ವೇಗವನ್ನು ಹೊಂದಿದೆ.
- ಪಕ್ಷಿಗಳು ಪರಸ್ಪರ ಸಂವಹನವನ್ನು ಕೀರಲು ಧ್ವನಿಗಳು, ಹಾಡುಗಾರಿಕೆ, ಶಿಳ್ಳೆಗಳು, ಗೊಗ್ಗರು ಶಬ್ಧ, ಕಿಚಿ ಕಿಚಿ ಇತ್ಯಾದಿ ಅನೇಕ ಶಬ್ಧಗಳ ಮೂಲಕ ನಡೆಸುತ್ತವೆ. ಪ್ರತಿ ಪ್ರಬೇಧದ ಪಕ್ಷಿಗಳು ವಿವಿಧ ರೀತಿಯ ಶಬ್ಧಗಳನ್ನು ಹೊರಡಿಸುತ್ತಿದ್ದು ಆಯಾ ವರ್ಗದ ಹಕ್ಕಿಗಳು ಮಾತ್ರ ಅದಕ್ಕೆ ಸ್ಪಂಧಿಸುತ್ತವೆ.
- ರುಪ್ಪೆಲ್ಸ್ ಗ್ರಿಫನ್ ರಣಹದ್ದು ೩೭೦೦೦ ಅಡಿ ಎತ್ತರದಲ್ಲಿ ಹಾರುತ್ತ ಅತ್ಯಂತ ಎತ್ತರದಲ್ಲಿ ಹಾರುವ ಪಕ್ಷಿಯಾಗಿದ್ದು ಅಷ್ಟು ಎತ್ತರದಿಂದಲೂ ಸಹ ಇಲಿಯಂತ ಸಣ್ಣ ಪ್ರಾಣಿಯನ್ನು ಗುರುತು ಹಿಡಿಯುವಷ್ಟು ಚುರುಕಾದ ದೃಷ್ಟಿಯನ್ನು ಹೊಂದಿರುತ್ತದೆ.
- ಪ್ರಪಂಚದ ಯಾವುದೇ ಹಕ್ಕಿಗಳಿಗೆ ಹಲ್ಲು ಇಲ್ಲ. ಅವು ಆಹಾರವನ್ನು ಇಡಿಯಾಗಿ ನುಂಗಿಬಿಡುತ್ತವೆ. ಗಿಝರ್ಡ್ ಎಂಬ ವಿಶೇಷ ಹೊಟ್ಟೆ ಎಲ್ಲವನ್ನೂ ಜೀರ್ಣ ಮಾಡುತ್ತದೆ.
- ಹಕ್ಕಿಗಳಿಂದ ಪೃಥ್ವಿಗೆ ಪ್ರತಿ ವರ್ಷ 86,೦೦೦ ಸಾವಿರ ಟನ್ ಗೊಬ್ಬರವನ್ನು ದೊರಕುತ್ತದೆ. ಭೂಮಿ ಫಲವತ್ತಾಗಿ ಇರಲು ಇವುಗಳ ಕೊಡುಗೆ ಅಪಾರ. ಪ್ರತಿ ವರ್ಷ ಇವು ೧೮,೦೦೦ ಟನ್ ಕೀಟಗಳನ್ನು ಭಕ್ಷಿಸುವುದರಿಂದ ಅವುಗಳ ಸಂಖ್ಯೆ ಹತೋಟಿಯಲ್ಲಿದೆ.
- ಮನುಷ್ಯನೂ ಸೇರಿದಂತೆ ಪಕ್ಷಿಗಳನ್ನು ಮತ್ತು ಅವುಗಳ ತತ್ತಿಗಳನ್ನು ಭಕ್ಷಿಸಿ ಬದುಕುವ ೧೮೯೦ ಕ್ಕೂ ಹೆಚ್ಚು ಜೀವಿಗಳಿದ್ದು ಅವುಗಳ ಬದು ಪಕ್ಷಿಗಳ ಮೇಲೆಯೇ ನಿಂತಿದೆ.
ಹೀಗೇ ಒಂದೇ ಎರಡೇ? ಪಕ್ಷಿ ಪ್ರಪಂಚದ ವಿಸ್ಮಯಗಳಿಗೆ ಕೊನೆಯೇ ಇಲ್ಲ. ಪ್ರಕೃತಿಯಲ್ಲಿ ಅವುಗಳ ಉಳಿವು ಅತ್ಯಂತ ಅವಶ್ಯ.
- ಡಾ. ಎನ್.ಬಿ.ಶ್ರೀಧರ – ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಪಶುವೈದ್ಯಕೀಯ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗ, ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ.
