ಬದುಕಿಗೊಂದು ಸೆಲೆ (ಭಾಗ- ೭೩)

79ನೇ ವಯಸ್ಸಿನ ಉಷಾ ರೈ ಅವರ ಕಥೆ ಕೇವಲ ಒಂದು ಶೈಕ್ಷಣಿಕ ಸಾಧನೆಯ ಕಥೆಯಲ್ಲ. ಮನುಷ್ಯ ತನ್ನ ಬದುಕಿನ ಯಾವುದೇ ಹಂತದಲ್ಲಿಯಾದರೂ ಮತ್ತೆ ಮುಂದೆ ಸಾಗಬಹುದು. ಅಂಕಣಕಾರ್ತಿ ವೀಣಾ ಹೇಮಂತ್ ಗೌಡ ಅವರ ‘ಬದುಕಿಗೊಂದು ಸೆಲೆ’ ಅಂಕಣದಲ್ಲಿ ‘ಜೀವನೋತ್ಸಾಹಕ್ಕೆ ಮಾದರಿ ಉಷಾ ರೈ’ ತಪ್ಪದೆ ಮುಂದೆ ಓದಿ…

ಬದುಕಿನ ಇಳಿ ವಯಸ್ಸಿನ ಒಂದು ಹಂತದಲ್ಲಿ ಉಳಿದವರು ಇನ್ನು ಸಾಕು ಆರಾಮಾಗಿರೋಣ ಎಂದು ಅಂದುಕೊಳ್ಳುವ ಸಮಯದಲ್ಲಿ ಈ ಹೆಣ್ಣು ಮಗಳು ಬೆಳೆಯಲು ಇಚ್ಛಿಸಿದಳು. ಹಿಂದೆಂದಿಗಿಂತಲೂ ಹೆಚ್ಚಾಗಿ ಬೆಳೆಯಬೇಕೆಂಬುದು ಆಕೆಯ ಇಚ್ಛೆಯಾಗಿತ್ತು.

ಆಕೆಯ ಬದುಕಿನ ಪಯಣದ ಕಥೆ ಪ್ರೇರಣಾದಾಯಿಯಾಗಿದ್ದು ಇತರರನ್ನು ಆಕೆಯಂತೆಯೇ ಸಾಧನೆಯ ಹಾದಿಯಲ್ಲಿ ಮುನ್ನುಗ್ಗಲು ಪ್ರೋತ್ಸಾಹ ನೀಡುತ್ತದೆ. ಉಷಾ ರೈ ವಯಸ್ಸು ಅವರ ಅಸಾಧಾರಣ ಸಾಮರ್ಥ್ಯಕ್ಕೆ ಅಡ್ಡಿ ಪಡಿಸಲಿಲ್ಲ. ಅದರಲ್ಲೂ ಉಷಾ ನಾಲ್ಕನೇ ಹಂತದ ಕ್ಯಾನ್ಸರ್ ಖಾಯಿಲೆಗೆ ಎರಡೆರಡು ಬಾರಿ ಗುರಿಯಾಗಿ ಕಾಯಿಲೆಯೊಂದಿಗೆ ಹೋರಾಡಿ ಯಶಸ್ಸನ್ನು ಗಳಿಸಿದವರು. ಭಯ ಮತ್ತು ಭ್ರಮನಿರಸನಗಳಿಗೆ ಒಳಗಾಗದೆ ತಮ್ಮನ್ನು ತಾವು ಯಾವುದೇ ಮಿತಿಗೊಳಪಡಿಸಿಕೊಳ್ಳದೆ ತಮ್ಮ ಬದುಕಿನಲ್ಲಿ ಶೈಕ್ಷಣಿಕ ಪಯಣವನ್ನು ತಮ್ಮ 79ನೇ ವಯಸ್ಸಿನಲ್ಲಿಯೂ ಕೂಡ ಮುಂದುವರೆಸಿದ್ದಾರೆ. ದೃಢವಾದ ನಿರ್ಧಾರ ಹೊಂದಿದ್ದರೆ ಬದುಕಿನ ಎಲ್ಲ ರೀತಿಯ ಕಠಿಣ ಸವಾಲುಗಳನ್ನು ಎದುರಿಸಿ ಮುಂದೆ ಸಾಗಲು ಸಾಧ್ಯ ಎಂಬುದನ್ನು ಆಕೆ ಸಾಬೀತು ಪಡಿಸಿದ್ದಾರೆ.

2023 ರ ಏಪ್ರಿಲ್ ನಲ್ಲಿ ಸಲ್ವತ್ತೈದು ವರ್ಷಗಳ ನಂತರದ ತಮ್ಮ ಶೈಕ್ಷಣಿಕ ಬದುಕನ್ನು ಮುಂದುವರೆಸಿದ ಆಕೆ ಎಂಬಿಎ ನಲ್ಲಿ ಹೆಲ್ತ್ ಕೇರ್ ಮ್ಯಾನೇಜ್ಮೆಂಟ್ ಎಂಬ ಆರೋಗ್ಯ ಕೇಂದ್ರಿತ ನಿರ್ವಹಣೆಯ ಕುರಿತಾದ ಸ್ನಾತಕೋತ್ತರ ಪದವಿ ಅಧ್ಯಯನಕ್ಕೆ ಅರ್ಜಿ ಹಾಕಿದರು. ಬಹಳಷ್ಟು ಜನರಿಗೆ ದಶಕಗಳ ನಂತರ ಮತ್ತೆ ಓದುವುದು, ಬರೆಯುವುದು ಎಂದರೆ ತಲೆನೋವಿನ ಕೆಲಸ. ಅದರಲ್ಲೂ ಈಗಾಗಲೇ ಸಾಕಷ್ಟು ಆರೋಗ್ಯ ಸಮಸ್ಯೆಗಳನ್ನು ಹೊಂದಿದ್ದು ಅದರೊಂದಿಗೆ ಹೋರಾಡುತ್ತಿದ್ದ ಉಷಾ ರೈ ಅವರಿಗೆ ಇದು ಮತ್ತಷ್ಟು ಕಷ್ಟಕರವಾಗಬೇಕಾಗಿತ್ತು. ಅದೂ ಅಲ್ಲದೆ ಪೆನ್ನು, ಪೇಪರ್ ಪುಸ್ತಕಗಳ ಕಾಲದಲ್ಲಿ ಓದನ್ನು ಪೂರೈಸಿದವರು. ಇಂದಿನ ಆಧುನಿಕ ತಂತ್ರಜ್ಞಾನ ಕಾಲದಲ್ಲಿ, ಶಿಕ್ಷಣ ವ್ಯವಸ್ಥೆಯೇ ಬದಲಾದ ಕಾಲದಲ್ಲಿ ಮತ್ತೆ ಓದಿಗೆ ಮರಳುವುದು ತುಸು ಕಠಿಣವೇ ಸರಿ. ಆದರೆ ಈ ಸವಾಲನ್ನು ಅತ್ಯಂತ ಉತ್ಸಾಹದಿಂದ ಉಷಾ ಸ್ವೀಕರಿಸಿದರು.

ಉಷಾ ರೈ ಅವರೇ ಹೇಳುವಂತೆ ಅವರಿಗೆ ಈ ಮೊದಲು ಲ್ಯಾಪ್ಟಾಪ್ ಬಳಸುವುದು ಗೊತ್ತಿರಲಿಲ್ಲ. ಇಂದಿನ ಡಿಜಿಟಲ್ ಜಗತ್ತಿನಲ್ಲಿ ಆನ್ಲೈನ್ ಕ್ಲಾಸ್ ಗಳು, ಪ್ರೆಸೆಂಟೇಶನ್ ಗಳು ಅಸೈನ್ಮೆಂಟ್ಗಳು ಶೈಕ್ಷಣಿಕ ದಿನಚರಿಯ ಭಾಗವಾಗಿದ್ದು ಆಕೆ ಇದನ್ನೇ ಒಂದು ನೆಪವಾಗಿಸಿಕೊಂಡು ಓದುವುದನ್ನು ಬಿಟ್ಟುಬಿಡಬಹುದಿತ್ತು. ಆದರೆ ಆಕೆ ಓದುವುದನ್ನು ತಾನಾಗಿಯೇ ಆಯ್ದುಕೊಂಡರು. ಹೊಸದೊಂದು ಲ್ಯಾಪ್ಟಾಪ್ ಅನ್ನು ಖರೀದಿಸಿದ ಆಕೆ ಪ್ರತಿದಿನವೂ ಅದರ ಬಳಕೆಯ ತರಬೇತಿ ಪಡೆದರು. ನಂತರ ಆಧುನಿಕ ಶಿಕ್ಷಣ ಪದ್ಧತಿಯನ್ನು ತಮ್ಮ ಶೈಕ್ಷಣಿಕ ಬದುಕಿನಲ್ಲಿ ಅಳವಡಿಸಿಕೊಳ್ಳುತ್ತಾ ಸಾಗಿದರು. ಈ ಎಲ್ಲದರ ಹಿಂದೆ ಕಾರ್ಯ ನಿರ್ವಹಿಸಿದ್ದು ಆಕೆಯ ದೃಢತೆ.

ಇಂತಹ ಸಮಯದಲ್ಲಿ ತಮ್ಮನ್ನು ತಾವು ವಯಸ್ಸಾಯ್ತು ಎಂದು ಬಹುತೇಕ ಜನರು ಎಲ್ಲಾ ಕ್ರಿಯಾತ್ಮಕ ಚಟುವಟಿಕೆಗಳಿಂದ ನಿಧಾನವಾಗಿ ದೂರ ಸರಿಯುವರು. ಯಾವುದೇ ರೀತಿಯ ರಿಸ್ಕಗಳನ್ನು ತೆಗೆದುಕೊಳ್ಳಲು ಹಿಂಜರಿಯುವ, ತಮ್ಮ ದೈನಂದಿನ ಹಾಗೂ ತಮ್ಮದೇ ವಲಯದಲ್ಲಿ ಮಾತ್ರ ವ್ಯಸ್ತರಾಗುವ ಸಮಯದಲ್ಲಿ ಉಷಾ ಅವರು ಆ ಅವಸ್ಥೆಗೆ ಸವಾಲೊಡ್ಡುವಂತೆ ತರಗತಿಯ ಕೋಣೆಯಲ್ಲಿ ಕಾಲಿಟ್ಟರು, ಪರೀಕ್ಷೆಗೆ ತಯಾರಾದರು. ತಮ್ಮ ಮೊಮ್ಮಕ್ಕಳ ವಯಸ್ಸಿನ ಮಕ್ಕಳೊಂದಿಗೆ ಕುಳಿತು ಅಸೈನ್ ಮೆಂಟ್, ಪರೀಕ್ಷೆ ಎಂದೆಲ್ಲ ಕಾರ್ಯನಿರ್ವಹಿಸಿದರು.
ಬದುಕು ಕಲಿಸುವುದನ್ನು ನಿಲ್ಲಿಸುವುದಿಲ್ಲ ಹಾಗೂ ನಮ್ಮ ಉಸಿರು ಇರುವವರೆಗೂ ನಾವು ಕಲಿಯುವುದನ್ನು ನಿಲ್ಲಿಸಬಾರದು ಎಂಬುದಕ್ಕೆ ಆಕೆ ಜೀವಂತ ಉದಾಹರಣೆಯಾದರು.

ಈ ಹಿಂದೆ ತಾನು ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿದ್ದು ಇದೀಗ ಆಕೆಗೆ ವಿಧೇಯ ವಿದ್ಯಾರ್ಥಿನಿಯಾಗಿ ತನ್ನನ್ನು ತಾನು ತೊಡಗಿಸಿಕೊಳ್ಳಲು ಅನುಕೂಲವಾಯಿತು. ತರಗತಿ ಕೋಣೆಯಲ್ಲಿ ಹೊಸ ವಿಷಯಗಳನ್ನು ಕಲಿಯುವ ಅವುಗಳನ್ನು ಅಳವಡಿಸಿಕೊಳ್ಳುವ ಹಾಗೂ ತನ್ನ ಜ್ಞಾನವನ್ನು ವಿಕಸಿತಗೊಳಿಸಿಕೊಳ್ಳುತ್ತ ಆಕೆ ಮುಂದೆ ಸಾಗಿದರು.

ವಯಸ್ಸು, ಹುದ್ದೆ ಹಾಗೂ ನಾವಿರುವ ಪರಿಸ್ಥಿತಿಗಳು ನಮ್ಮ ಕಲಿಯುವ ಆಸಕ್ತಿಯನ್ನು ಕುಂದಿಸಬಾರದು ಎಂಬುದು ಆಕೆಯ ಅಭಿಪ್ರಾಯವಾಗಿತ್ತು. ವೈದ್ಯಕೀಯ ತಜ್ಞರು ಬಹಳಷ್ಟು ಬಾರಿ ಇಂತಹ ಭಾವನಾತ್ಮಕ ಸಾಮರ್ಥ್ಯದ ಪ್ರಾಮುಖ್ಯತೆಯ ಕುರಿತು ಮಾತನಾಡುತ್ತಾರೆ. ದೊಡ್ಡ ದೊಡ್ಡ ಕಾಯಿಲೆಗಳಿಂದ ಬಳಲಿ ಗುಣಮುಖರಾಗುವ ಹೊತ್ತಿನಲ್ಲಿ ಈ ರೀತಿಯ ಸವಾಲುಗಳನ್ನು ಎದುರಿಸುವ ಮೂಲಕ ಮತ್ತಷ್ಟು ಮನೋ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಈ ರೀತಿಯ ನಿರ್ಧಾರಗಳು ಅತ್ಯುತ್ತಮ ಮಾದರಿಗಳಾಗಿ ತೋರುತ್ತವೆ.

ನೋಡಿದಿರಾ ಸ್ನೇಹಿತರೆ, ಉಷಾ ರೈಯವರ ಬದುಕು ಹಾಗೂ ಛಲವನ್ನು. ಆಕೆ ಕೇವಲ ಬದುಕಿ ಉಳಿಯಲಿಲ್ಲ ಬದಲಾಗಿ ತನ್ನ ಬದುಕನ್ನು ಹೊಸದಾಗಿ ರೂಪಿಸಿಕೊಂಡರು. ಶೈಕ್ಷಣಿಕವಾಗಿ ಹೆಚ್ಚಿನ ಓದನ್ನು ತನ್ನದಾಗಿಸಿಕೊಂಡರು. ಕೌಟುಂಬಿಕವಾಗಿ ತಮ್ಮ ಕುಟುಂಬದ ಯೋಗಕ್ಷೇಮ ಹಾಗೂ ತಮ್ಮ ವೈಯುಕ್ತಿಕ ಆರೋಗ್ಯವನ್ನು ಕಾಯ್ದುಕೊಂಡರು. ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಬತ್ತದ ಜೀವನೋತ್ಸಾಹವನ್ನು ತಮ್ಮದಾಗಿಸಿಕೊಂಡರು ಉಷಾ..

ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಉಷಾ ರೈ ಅವರ ಸಾಧನೆ, ಆಕೆಯ ಧ್ಯೇಯ ಹಾಗೂ ಛಲವನ್ನು ಅಭಿನಂದನಾರ್ಹ ಎಂದು ಹೇಳಿರುವರು. ಸ್ನೇಹಿತರೆ, ಬದುಕು ಎಂದರೆ ಕೇವಲ ಕಠಿಣ ತೊಂದರೆಗಳ ಸರಮಾಲೆಯಲ್ಲ, ಸೋಲು ನಮ್ಮನ್ನು ಕಂಗೆಡಿಸಬೇಕಿಲ್ಲ, ಅನಾರೋಗ್ಯ ನಮ್ಮನ್ನು ಮೂಲೆಗೆ ಕೂರಿಸಬೇಕಿಲ್ಲ, ವಯಸ್ಸು ನಮ್ಮಲ್ಲಿ ನಿರುತ್ಸಾಹವನ್ನು ತುಂಬಬೇಕಿಲ್ಲ. ಎಲ್ಲಿಯವರೆಗೂ ನಾವು ನಮ್ಮ ಜೀವನೋತ್ಸಾಹವನ್ನು ಕಳೆದುಕೊಳ್ಳುವುದಿಲ್ಲವೋ, ಎಲ್ಲಿಯವರೆಗೂ ನಮ್ಮ ಆತ್ಮಬಲ ನಮ್ಮೊಂದಿಗೆ ಅಚಲವಾಗಿ ಇರುತ್ತದೆಯೋ ಅಲ್ಲಿಯವರೆಗೆ ನಾವು ನಮ್ಮ ಪ್ರಯತ್ನವನ್ನು ಮುಂದುವರಿಸಬೇಕು.

ಉಷಾ ರೈ ಅವರ ಕಥೆ ಕೇವಲ ಒಂದು ಶೈಕ್ಷಣಿಕ ಸಾಧನೆಯ ಕಥೆಯಲ್ಲ. ಅಯ್ಯೋ! ಇದೆಲ್ಲ ಈಗ ಆಗ ಹೋಗುವ ಮಾತಲ್ಲ. ತುಂಬಾ ತಡವಾಯಿತು ಎಂದು ತಮ್ಮ ಕನಸಿಗೆ ತಡೆಗೋಡೆ ಹಾಕುವ, ತಮ್ಮ ಆಸೆಗಳನ್ನು ಕೈಬಿಡುವ ಮೂಲಕ ಸೋಲೊಪ್ಪುವ ಪ್ರತಿಯೊಬ್ಬ ಹೆಣ್ಣು ಮಕ್ಕಳಿಗೆ ಒಂದು ಪಾಠ. ಈಗಲೂ ತಡವಾಗಿಲ್ಲ ಸ್ನೇಹಿತರೆ, ನಿಮ್ಮ ಕನಸನ್ನು ನನಸಾಗಿಸಲು, ಹೊಸ ವಿಷಯವೊಂದನ್ನು ಕಲಿಯಲು ಮತ್ತೆ ಬದುಕಿನಲ್ಲಿ ಹೊಸ ವಿಶ್ವಾಸದೊಂದಿಗೆ ಮುನ್ನಡೆಯಲು ನಮ್ಮನ್ನು ನಮ್ಮ ವಿನಃ ತಡೆಹಿಡಿಯುವವರು ಯಾರೂ ಇಲ್ಲ. ಇಂದಿಗೂ ಕೂಡ ಈ ಜಗತ್ತು ಕುತೂಹಲ ಇರುವ ಕಾರಣದಿಂದಲೇ ಜೀವಂತಿಕೆಯನ್ನು ಹೊಂದಿದೆ ಹಾಗೂ ಮನುಷ್ಯ ತನ್ನ ಬದುಕಿನ ಯಾವುದೇ ಹಂತದಲ್ಲಿಯಾದರೂ ಮತ್ತೆ ಮುಂದೆ ಸಾಗಬಹುದು.
ಏನಂತೀರಾ ಸ್ನೇಹಿತರೇ ?


  • ವೀಣಾ ಹೇಮಂತಗೌಡ ಪಾಟೀಲ್ – ಮುಂಡರಗಿ, ಗದಗ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading