ವೃತ್ತಿಯಲ್ಲಿ ಅಂಚೆ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸುರೇಶ್ ತಂಗೋಡ ಅವರು ಸೃಜನಶೀಲ ಬರಹಗಾರರು ಅವರ ‘ಅಂಗೈಯಲ್ಲಿ ಅಂಚೆ’ ಮತ್ತು ‘ಕಾಂಕ್ರೀಟ್ ಕಾಡು’ ಎರಡು ಕೃತಿಗಳ ಕುರಿತು ಲೇಖಕರಾದ ಶ್ರೀಧರ್ ಡಿ ಸಿ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…
ಕೃತಿಗಳು : ‘ಅಂಗೈಯಲ್ಲಿ ಅಂಚೆ ಮತ್ತು ‘ಕಾಂಕ್ರೀಟ್ ಕಾಡು’
ಲೇಖಕರು : ಸುರೇಶ್ ತಂಗೋಡ
ಅಂಚೆ ಇಲಾಖೆಯ ಶಿಸ್ತಿನ ವೃತ್ತಿಯ ನಡುವೆಯೂ ಅಕ್ಷರ ಲೋಕದ ಸೃಜನಶೀಲ ಹಸಿವನ್ನು ಜೀವಂತವಾಗಿರಿಸಿಕೊಂಡಿರುವ ಅಪರೂಪದ ಲೇಖಕ ಸುರೇಶ್ ತಂಗೋಡ ಅವರು, ವೃತ್ತಿಯ ಅನುಭವ ಮತ್ತು ಪ್ರವೃತ್ತಿಯ ಸೃಜನಶೀಲತೆಯನ್ನು ಸಮರ್ಥವಾಗಿ ಮೇಳವಿಸಿದವರು. ಅವರ ‘ಅಂಚೆ ರತ್ನ’ ಗೌರವಕ್ಕೆ ಪಾತ್ರವಾದ ಅನುಭವಗಳ ಸಾರವಾದ ‘ಅಂಗೈಯಲ್ಲಿ ಅಂಚೆ’ ಮತ್ತು ಸಾಮಾಜಿಕ ತಲ್ಲಣಗಳ ಪ್ರತಿಬಿಂಬವಾದ ‘ಕಾಂಕ್ರೀಟ್ ಕಾಡು’ ಕವನ ಸಂಕಲನಗಳು ಓದುಗರ ಮನಸ್ಸಿನಲ್ಲಿ ಮಧುರ ಸಂಚಲನ ಮೂಡಿಸುತ್ತವೆ.

ಡಿಜಿಟಲ್ ಯುಗದ ಅಬ್ಬರದಲ್ಲಿ ಮರೆಯಾಗುತ್ತಿರುವ ಪತ್ರ ಸಂಸ್ಕೃತಿಯನ್ನು ಮರುಜೀವಗೊಳಿಸುವ ಪ್ರಯತ್ನ ‘ಅಂಗೈಯಲ್ಲಿ ಅಂಚೆ’ ಕೃತಿಯಲ್ಲಿ ಎದ್ದು ಕಾಣುತ್ತದೆ. ಇದು ಕೇವಲ ಅಂಚೆ ಇಲಾಖೆಯ ಇತಿಹಾಸವಲ್ಲ, ಬದಲಾಗಿ ಅದೊಂದು ಭಾವನಾತ್ಮಕ ದಸ್ತಾವೇಜು. ಅಂಚೆ ಪೆಟ್ಟಿಗೆಯನ್ನು ‘ಮಾತೃ ಹೃದಯಿ’ ಎಂದು ಲೇಖಕರು ಬಣ್ಣಿಸಿರುವ ರೀತಿ ಅದ್ಭುತವಾಗಿದ್ದು, ಅದು ಜಾತಿ-ಮತಗಳ ಭೇದವಿಲ್ಲದೆ ಎಲ್ಲರ ಸುಖ-ದುಃಖಗಳನ್ನು ಮೌನವಾಗಿ ಹೊತ್ತು ನಿಲ್ಲುವ ಸಂಕೇತವಾಗಿ ಮೂಡಿಬಂದಿದೆ. ಇಲ್ಲಿ ಅಂಚೆಯಣ್ಣ ಕೇವಲ ಸರ್ಕಾರಿ ನೌಕರನಲ್ಲ, ಗ್ರಾಮೀಣ ಜನರ ಪಾಲಿಗೆ ಮನೆಗೊಬ್ಬ ಮಗನಿದ್ದಂತೆ ಆತ್ಮೀಯನಾಗಿದ್ದಾನೆ. “ಒಂಚೂರು ವಿಷಯ, ಒಂಚೂರು ಸಾಹಿತ್ಯ” ಎಂಬ ಅಡಿಬರಹದಂತೆ, ಮಾಹಿತಿಯ ಜೊತೆಗೆ ಹನಿಗವಿತೆಗಳು ಸೇರಿ ಓದುಗರನ್ನು ಆಪ್ತವಾಗಿ ಆವರಿಸಿಕೊಳ್ಳುತ್ತವೆ.

ಇನ್ನೊಂದೆಡೆ ಲೇಖಕರ ಚೊಚ್ಚಲ ಕವನ ಸಂಕಲನ ‘ಕಾಂಕ್ರೀಟ್ ಕಾಡು’ ಆಧುನಿಕ ನಾಗರಿಕತೆಯ ಅಬ್ಬರಕ್ಕೆ ಸಿಲುಕಿ ನಲುಗುತ್ತಿರುವ ಮಾನವೀಯ ಸಂಬಂಧಗಳ ಬಗ್ಗೆ ಆತ್ಮಾವಲೋಕನ ಮಾಡಿಸುತ್ತದೆ. ಅತಿಯಾದ ನಗರೀಕರಣದ ನಡುವೆ ಕಳೆದುಹೋಗುತ್ತಿರುವ ಹಸಿರು ಮತ್ತು ಹಳ್ಳಿಗಳ ಮುಗ್ಧತೆಯನ್ನು ಇಲ್ಲಿನ ಕವಿತೆಗಳು ಮನಮುಟ್ಟುವಂತೆ ಚಿತ್ರಿಸಿವೆ. ‘ಎಲ್ಲಿ ಹೋದವು?’ ಎಂಬ ಪ್ರಶ್ನೆಯ ಮೂಲಕ ಮರೆಯಾದ ಮೌಲ್ಯಗಳ ಬಗ್ಗೆ ವಿಷಾದ ವ್ಯಕ್ತಪಡಿಸುತ್ತಲೇ, ಸಮಾನತೆಯ ಆಶಯವನ್ನೂ ಕವಿ ಸಾರುತ್ತಾರೆ. ಅವ್ವ ಮತ್ತು ಚಿಂದಿಯಾಯುವವನ ಅರಿವಿನಲ್ಲಿ ಜೀವನದ ಪರಮ ಸತ್ಯವನ್ನು ಹುಡುಕುವ ಪ್ರಯತ್ನ ಇಲ್ಲಿ ಪ್ರಮುಖವಾಗಿ ಗೋಚರಿಸುತ್ತದೆ.

ಸುರೇಶ್ ತಂಗೋಡ ಅವರ ಬರವಣಿಗೆಯಲ್ಲಿ ಯಾವುದೇ ಸಂಕೀರ್ಣತೆಯಿಲ್ಲ; ಅದು ನೇರವಾಗಿ ಹೃದಯಕ್ಕೆ ತಟ್ಟುವ ಸರಳ ಕನ್ನಡದ ಹೂರಣ. ಮಣ್ಣಿನ ವಾಸನೆ ಮತ್ತು ಭಾವಗಳ ತೀವ್ರತೆ ಅವರ ಎರಡೂ ಕೃತಿಗಳಲ್ಲಿ ಅಂತರ್ಗತವಾಗಿವೆ. ಅಂಚೆ ಇಲಾಖೆಯ ಪರಿಕರಗಳಿಗೆ ಕಾವ್ಯದ ಸ್ಪರ್ಶ ನೀಡಿ ಜೀವ ತುಂಬುವ ಶಕ್ತಿ ಹಾಗೂ ಸಮಕಾಲೀನ ಸಮಸ್ಯೆಗಳಿಗೆ ಕನ್ನಡಿ ಹಿಡಿಯುವ ಸಾಮಾಜಿಕ ಜವಾಬ್ದಾರಿ ಲೇಖಕರಲ್ಲಿ ಎದ್ದುಕಾಣುತ್ತದೆ. ‘ಅಂಗೈಯಲ್ಲಿ ಅಂಚೆ’ ಹಳೆಯ ತಲೆಮಾರಿನವರಿಗೆ ನೆನಪಿನ ಬುತ್ತಿಯಾದರೆ, ಹೊಸ ತಲೆಮಾರಿನವರಿಗೆ ಇತಿಹಾಸದ ಕೈಪಿಡಿಯಾಗಿದೆ. ಅತ್ತ ‘ಕಾಂಕ್ರೀಟ್ ಕಾಡು’ ನಗರೀಕರಣದ ನಡುವೆ ಕಳೆದುಹೋದ ನೈತಿಕತೆಯನ್ನು ಮರುಸ್ಥಾಪಿಸಲು ಹಂಬಲಿಸುವ ಕಾವ್ಯಯಾನವಾಗಿದೆ. ಒಟ್ಟಾರೆಯಾಗಿ, ಸುತ ಅವರ ಈ ಬರಹಗಳು ಮಾಹಿತಿಯ ಕಣಜ ಮಾತ್ರವಲ್ಲದೆ, ಅವು ನೊಂದ ಜೀವಗಳ ಧ್ವನಿಯೂ ಮತ್ತು ಕಳೆದುಹೋದ ಮಧುರ ಸಂಸ್ಕೃತಿಯ ಕೊಂಡಿಯೂ ಆಗಿವೆ.
- ಶ್ರೀಧರ್ ಡಿ ಸಿ – ಲೇಖಕರು, ಬೆಂಗಳೂರು.
