‘ಮೇಣಕ್ಕಂಟಿದ ಬತ್ತಿ’ ಕೃತಿ ಪರಿಚಯ

ಅನಿತಾ ಪಿ ತಾಕೊಡೆ ಅವರ ಪ್ರಶಸ್ತಿಗೆ ಪಾತ್ರವಾದ ‘ಮೇಣಕ್ಕಂಟಿದ ಬತ್ತಿ’ ಕವನ ಸಂಕಲನ, ಪರಂಪರೆಯಲ್ಲಿ ಬೇರು ಬಿಟ್ಟು ಅರಳಿದ ಕಾವ್ಯವಾಗಿದೆ. ಈ ಕೃತಿಯ ಕುರಿತು ರಘುನಾಥ್ ಕೃಷ್ಣಮಾಚಾರ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…

ಪುಸ್ತಕ : ಮೇಣಕ್ಕಂಟಿದ ಬತ್ತಿ
ಲೇಖಕರು : ಅನಿತಾ ಪಿ ತಾಕೊಡೆ
ಪ್ರಕಾಶನ : ತಾಕೋಣೆ ಎ೦ಟರ್ಪ್ರೈಸೆರ್ ಮುಂಬಯಿ ಪ್ರಕಾಶನ
ಬೆಲೆ : ೧೫೦ ರೂಪಾಯಿ

ಇಲ್ಲಿ ಪರಂಪರೆಗೆ ಎರಡು ಆಯಾಮಗಳು ಇವೆ. ಒಂದು ಭಾರತೀಯ ಪೌರಾಣಿಕ ಪರಂಪರೆ. ಎರಡು ಮಧ್ಯಕಾಲೀನ ಕನ್ನಡ ಕಾವ್ಯ ಪರಂಪರೆ. ಇದಲ್ಲದೆ ಆಧುನಿಕ ಕನ್ನಡ ರಮ್ಯಕಾವ್ಯ ಪರಂಪರೆಯೂ ಇದರ ಬೆನ್ನಿಗಿದೆ.

ಮೊದಲ ಭಾರತೀಯ ಪೌರಾಣಿಕ ಪರಂಪರೆಗೆ ನಿದರ್ಶನಗಳು ಎರಡು, ಒಂದು ರಾಮಾಯಣದ ಅಹಲ್ಯೆಯ ಪಾತ್ರವನ್ನು ಉಲ್ಲೇಖ ಹೊಂದಿದ ಕವನ. ಕಲ್ಲುಗಳ ಮೇಲೆ ಹರಿಯುವ ತೊರೆಯನ್ನು ಕಂಡು ಕಲ್ಲಾದ ಅಹಲ್ಯೆಯ ನೆನಪು ಕವಿಗೆ ಆಗುತ್ತದೆ. ಆದರೆ ಅದು ಅಲ್ಲಿಗೆ ನಿಲ್ಲದೆ ,ಕಶ್ಮಲವನ್ನು ದಾಟಿ ಹರಿಯತೊಡಗುವುದು, ಅದರ ಹರಿವಿಗೆ ಸಹಜವಾಗಿದೆ.ಇದು ಹೆಣ್ಣಿನ ಜೀವಂತಿಕೆಯ ಪ್ರತೀಕವಾಗಿದೆ. ಈ ಮೂಲಕ ಪುರಾಣ ಮತ್ತು ಆಧುನಿಕತೆಯನ್ನು ಒಟ್ಟಿಗೆ ಬೆಸೆದಿದ್ದಾರೆ.:

“ಒಳಗಿನ ಕಶ್ಮಲಗಳನು ತೊಳೆದು ನಿತ್ಯ ನಿರ್ಮಲವಾಗಬೇಕು ಹರಿವ ತೊರೆಯಂತೆ”( ಕಲ್ಲಾದವರು) ಎರಡನೆಯದು ಮಹಾಭಾರತದ ಕತೆಯ ನಿರ್ವಚನ. ಇದು ಭಾರತೀಯ ಪರಂಪಯಲ್ಲಿ ಕವಿ ಬೇರು ಬಿಟ್ಟಿರುವುದಕ್ಕೆ ನಿದರ್ಶನ.

ಮಧ್ಯಕಾಲೀನ ಕನ್ನಡ ಕಾವ್ಯ ಛಂದೋಪರಂಪರೆಯನ್ನು ಭಾಮಿನಿ ಮತ್ತು ಶರ ಷಟ್ಪದಿಗಳ ರಚನಾ ವಿನ್ಯಾಸದ ( ಕನ್ನಡ ಕಲರವ) ಮೂಲಕ ಮುಂದುವರೆಸಿದ್ದಾರೆ. ಇದಲ್ಲದೆ ಇಂಗ್ಲಿಷ್ ನ. ಸಾನೆಟ್ ನ್ನು ಸುನೀತವಾಗಿಸುವುದರ ಮೂಲಕ ಕಣವಿಯರ ಪರಂಪರೆಯನ್ನು ಮುಂದುವರಿಸಿದ್ದಾರೆ. ಆಧುನಿಕ ಕನ್ನಡ ರಮ್ಯಪರಂಪರೆಗೆ ನಿದರ್ಶನವಾಗಿ, ಇಲ್ಲಿ ಮೋಡವನ್ನು ಕುರಿತು ಬರೆದ ಕವನವನ್ನು ನೋಡಬಹುದು. ಇದು ದಟ್ಟವಾಗಿ ಕುವೆಂಪು ಅವರ ಪ್ರಕೃತಿ ಕಾವ್ಯವನ್ನು ನೆನಪಿಗೆ ತರವಷ್ಟು ಸಶಕ್ತವಾಗಿದೆ. ಇದಲ್ಲದೆ ಅವರ ನಾಡಗೀತೆಯ ರಚನಾ ವಿನ್ಯಾಸವನ್ನು ನೆನಪಿಸುವ ಡಲ್ಲಾಸ್ ಸಮ್ಮೇಳನದ ಸ್ಮರಣ ಸಂಚಿಕೆಯಲ್ಲಿ ಪ್ರಕಟಗೊಂಡ ಹಾಡನ್ನು ನೋಡಬಹುದು.

(ಕನ್ನಡ ಕಲರವ) ಇವರ ಪಸಾಯದಾನ ಕಲೆಗೆ ನಿದರ್ಶನವಾಗಿ, ಅವರ ಗೋಡೆಯನ್ನು ಕುರಿತು ಬರೆದ ಕವಿತೆಯನ್ನು ನೋಡಬಹುದು. ಈಗಾಗಲೇ ನಮ್ಮ ಮೇಷ್ಟ್ರು ಜಿ ಎಸ್ ಎಸ್ ಅವರು ಮನುಷ್ಯರ ನಡುವಿನ ಅಡ್ಡಗೋಡೆಗಳನ್ನು ನಿರ್ಮಿಸುವ ‘ಗೋಡೆ ‘ಕುರಿತು ಬರೆದಿದ್ದಾರೆ. ಇದರಲ್ಲಿ ಅದಕ್ಕೆ ಜೀವವನ್ನು ಆರೋಪಿಸಿ ಅದರ ನಿಟ್ಟುಸಿರನ್ನು ಸೆರೆಹಿಡಿದಿರುವುದು, ಈ ಕವಿತೆಯ ಸಜೀವತೆಗೆ ನಿದರ್ಶವಾಗಿದೆ.

ಮೊದಲಿನ ಮೆರುಗು ಮಾಸಿದೆ
ಬೆರಳಚ್ಚು ಕಾಲಚ್ಚುಗಳ ಕಲೆ ಮೂಡಿದೆ
ವೃಥಾ ಗುದ್ದಿಸಿಕೊಂಡ ಬೇಗುದಿಯೇಟಿಗೊ
ಪಾತ್ರೆಗಳ ಸದ್ದಿನಲಗಿಗೊ ( ಗೋಡೆಯೊಳಗಿನ ಮಾತು)

ಇಂತಹ ವೈವಿಧ್ಯಮಯ ಕವನಗಳನ್ನು ಒಳಗೊಂಡಿರುವುದು ಈ ಕಾವ್ಯ ಸಂಕಲನದ ವೈಶಿಷ್ಟ್ಯ. ಇದಕ್ಕಾಗಿ ನನ್ನ ಈ ಶಿಷ್ಯೆ ಅನಿತಾಳನ್ನು ಅಭಿನಂದಿಸುತ್ತಾ, ಇದನ್ನು ಕಳಿಸಿಕೊಟ್ಟದ್ದಕ್ಕೆ ವಂದನೆ.


  • ರಘುನಾಥ್ ಕೃಷ್ಣಮಾಚಾರ್ – ಲೇಖಕರು, ಚಿಂತಕರು, ರಾಮನಿರಂಜನ್ ಝುನ್ಝುನ್ವಾಲ ಕಾಲೇಜು ಉಪನ್ಯಾಸಕರು.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading