ಬದುಕಿಗೊಂದು ಸೆಲೆ (ಭಾಗ- ೭೨)

ಮಾರ್ಗರೇಟ್ ಸಾರಾಳಿಗೆ ಕೊನೆಯ ಬಾರಿ ಒಂದೊಳ್ಳೆಯ ಊಟ ಮಾಡಿದ ದಿನ ಯಾವುದು ಎಂದು ಕೇಳಿದಾಗ ಅದನ್ನು ನೆನಪಿಸಿಕೊಳ್ಳಲು ಕೂಡ ಆಗದ ಸ್ಥಿತಿಯಲ್ಲಿ ಆಕೆಯಿದ್ದಳು. ಅವಳ ದೀನ ಸ್ಥಿತಿಯನ್ನು ಕಂಡ ಮಾರ್ಗರೇಟ್ ಮನನೊಂದಳು. ಕೊನೆಗೆ ಆಕೆ ಒಂದು ನಿರ್ಧಾರಕ್ಕೆ ಬಂದಳು ಅದು ಏನು ಎನ್ನುವುದನ್ನು ಅಂಕಣಕಾರ್ತಿ ವೀಣಾ ಹೇಮಂತ್ ಗೌಡ ಅವರ ‘ಬದುಕಿಗೊಂದು ಸೆಲೆ’ ಅಂಕಣದಲ್ಲಿ ‘ಒಂದು ಸಹಾನುಭೂತಿಯ ಕಥೆ’ಯನ್ನು ಪೂರ್ತಿ ಓದಿ…

ಆಕೆ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಓರ್ವ ನರ್ಸ್. ಪ್ರತಿ ಬಾರಿಯೂ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುವ ಆ ಬಾಲಕಿಯನ್ನು ತೀವ್ರವಾಗಿ ಗಮನಿಸುತ್ತಿದ್ದಳು. ಅತ್ಯಂತ ಭಯದಿಂದ ಕೂಡಿದ ಆಕೆಯ ಚರ್ಯೆ ಮತ್ತು ಅದದೇ ಗಾಯಗಳು ಆಕೆ ಯಾವುದೋ ಅನಿವಾರ್ಯದ ತೊಂದರೆಗೆ ಸಿಲುಕಿಸಿಕೊಂಡಿದ್ದಾಳೆ ಎಂಬುದನ್ನು ಸ್ಪಷ್ಟಪಡಿಸುತ್ತಿದ್ದವು. ಇದನ್ನು ಕೋರ್ಟ್ ನಲ್ಲಿ ಹೇಳಬೇಕಾದ ಪ್ರಸಂಗ ಬಂದೊದಗಿದಾಗ ಆ ನರ್ಸ್ ಹಿಂಜರಿಯದೆ ಇದ್ದ ಕಾರಣ ಆ ಮಗುವಿನ ಭವಿಷ್ಯ ಸುಭದ್ರವಾಯಿತು.

ಮಾರ್ಗರೇಟ್ ಸುಲಿವಾನ್ ಎಂಬ ಆ ಮಹಿಳೆ ಬೋಸ್ಟನ್ ನ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಳೆದ ಎಂಟು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಳು. ಅದೊಂದು ದಿನ ಆಕೆ 14 ವರ್ಷದ ಸಾರಾ ಮಿಶೆಲ್ ಎಂಬ ಬಾಲಕಿಯನ್ನು ಆಸ್ಪತ್ರೆಯಲ್ಲಿ ಮೊದಲ ಬಾರಿ ಏಪ್ರಿಲ್ 1933 ರಲ್ಲಿ ಭೇಟಿಯಾದಳು. ಆಕೆಯ ಮಣಿಕಟ್ಟಿನ ಭಾಗದಲ್ಲಿ ಕೈ ಮುರಿದಿದ್ದು ಆಕೆಯ ಕಣ್ಣುಗಳ ಕೆಳಗೆ ಕಪ್ಪು ವರ್ತುಲಗಳು ಮೂಡಿದ್ದವು. ಆಕೆಯ ಧ್ವನಿ ಅತ್ಯಂತ ತೆಳುವಾಗಿದ್ದು, ಆಕೆಯ ಬಾಯಿಯ ಬಳಿ ಕಿವಿ ಒಡ್ಡಿದರೆ ಮಾತ್ರ ಕೇಳಿಸುವಂತಿತ್ತು. ಮನೆಯೊಳಗಿನ ಮೆಟ್ಟಿಲ ಮೇಲಿಂದ ಬಿದ್ದೆ ಎಂದು ಆಕೆ ವೈದ್ಯರ ಬಳಿ ಹೇಳಿದಳು.

ಮಾರ್ಗರೇಟ್ ಆಕೆಯ ಗಾಯಕ್ಕೆ ಚಿಕಿತ್ಸೆಯನ್ನು ನೀಡಿದಳಾದರೂ ಆಕೆಯ ನುರಿತ ವೃತ್ತಿಪರತೆ ಆಕೆಯನ್ನು ಚಿಂತನೆಗೆ ಹಚ್ಚಿತು. ಅತ್ಯಂತ ತೆಳುಕಾಯದ ಆ ಹುಡುಗಿಯ ಬಟ್ಟೆಗಳು ಅಲ್ಲಲ್ಲಿ ತೇಪೆ ಹಾಕಲ್ಪಟ್ಟಿದ್ದು ಹೊಲಸಾಗಿದ್ದವು. ಆಕೆಯ ಕಣ್ಣುಗಳಲ್ಲಿ ಹಾಗೂ ದೇಹದಲ್ಲಿ 14 ವರ್ಷದ ಮಕ್ಕಳಿಗೆ ಇರಬೇಕಾದ ಲವಲವಿಕೆಯ ಜಾಗದಲ್ಲಿ ವಿಪರೀತ ಒತ್ತಡ ಹಾಗೂ ದಣಿದ ಭಾವ ಇರುವುದನ್ನು ಮಾರ್ಗರೇಟ್ ಗಮನಿಸಿದಳು.

 ಫೋಟೋ ಕೃಪೆ : ಅಂತರ್ಜಾಲ

ಹೆಚ್ಚಿನ ಒತ್ತಡವನ್ನು ನಿನ್ನ ಮಣಿಕಟ್ಟು ಸಹಿಸುವುದಿಲ್ಲವಾದ್ದರಿಂದ ವಿಶ್ರಾಂತಿಯ ಅಗತ್ಯ ನಿನಗೆ ಅತ್ಯಂತ ಸೂಕ್ಷ್ಮವಾಗಿ ಬಾಲಕಿಗೆ ಹೇಳಿದ ಮಾರ್ಗರೇಟ್ ನಿನಗೆ ಏನಾದರೂ ಸಹಾಯ ಬೇಕಿದ್ದರೆ ನನ್ನ ಬಳಿ ಬಾ ಎಂದು ಕೂಡ ಸೇರಿಸಿದರು. ಏನೊಂದನ್ನೂ ಮಾತನಾಡದೆ ಸುಮ್ಮನೆ ತಲೆಯಾಡಿಸಿದಳು ಬಾಲಕಿ ಸಾರಾ.

ಐದಾರು ವಾರಗಳು ಉರುಳಿರಬಹುದು ಸಾರಾ ಮತ್ತೆ ಮರಳಿ ಬಂದಳು. ಈ ಬಾರಿ ಶಿಕ್ಷಕಿಯೊಬ್ಬರು ಶಾಲೆಯ ಕಾರಿಡಾರ್ ನಲ್ಲಿ ಎಚ್ಚರ ತಪ್ಪಿ ಬಿದ್ದಿದ್ದ ಸಾರಾಳನ್ನು ಕರೆತಂದಿದ್ದರು. ಆಕೆಯನ್ನು ಪರೀಕ್ಷಿಸಿದ ಮಾರ್ಗರೇಟ್ ಅವರಿಗೆ ಗಾಬರಿ ಮತ್ತು ಆತಂಕ ಒಟ್ಟಿಗೆ ಆಯಿತು. ಕಾರಣವಿಷ್ಟೇ ಅತ್ಯಂತ ಕಡಿಮೆ ತೂಕವನ್ನು ಹೊಂದಿದ್ದ ಆಕೆ ನಿರ್ಜಲೀಕರಣದಿಂದ ಎಚ್ಚರ ತಪ್ಪಿದಳು. ಆಕೆಯ ದೇಹದ ಪರಿಸ್ಥಿತಿ ಸಂಪೂರ್ಣ ನೀರಿನ ಕೊರತೆಯಿಂದ ಒಣಗಿದ ಗಿಡದಂತೆ ಆಗಿದ್ದು ಪೋಷಣೆಯಿಂದ ನರಳುತ್ತಿದ್ದಳು. ಅಂತಿಮವಾಗಿ ಮಾರ್ಗರೇಟ್ ಆಕೆಗೆ ಕೊನೆಯ ಬಾರಿ ಆಕೆ ಒಂದೊಳ್ಳೆಯ ಊಟವನ್ನು ಮಾಡಿದ ದಿನ ಯಾವುದು ಎಂದು ಕೇಳಿದಾಗ ಅದನ್ನು ನೆನಪಿಸಿಕೊಳ್ಳಲು ಕೂಡ ಆಗದ ಸ್ಥಿತಿಯಲ್ಲಿ ಸಾರಾ ಇದ್ದಳು.

ಇದೀಗ ಮಾರ್ಗರೇಟ್ ಅತ್ಯಂತ ಮೆದುವಾಗಿ ಸಾರಾ ನೀನು ನನ್ನೊಂದಿಗೆ ಪ್ರಾಮಾಣಿಕವಾಗಿ ನಿನ್ನ ಕುರಿತು ಹೇಳಬೇಕು ಎಂದು ಆಕೆಯ ಪಕ್ಕದಲ್ಲಿಯೇ ಕುಳಿತು ಕೇಳಿದಾಗ ಆಕೆ ಮೆಲ್ಲನೆ ತಲೆಯಾಡಿಸಿದಳು. ಆಕೆಯ ಹೆಗಲ ಮೇಲೆ ಕೈ ಹಾಕಿ ಭರವಸೆಯಿಂದ ತಟ್ಟಿದ ಮಾರ್ಗರೇಟ್ ಮನೆಯಲ್ಲಿ ಏನು ನಡೆಯುತ್ತಿದೆ ಎಂದು ಅತ್ಯಂತ ಸೂಕ್ಷ್ಮವಾಗಿ ಕೇಳಿದರು. ಬಾಲಕಿಯ ಕಣ್ಣುಗಳು ತುಂಬಿದವು. ಆದರೆ ತಲೆ ಮಾತ್ರ ಅಲುಗಿಸುತ್ತ ನಾನು ಏನನ್ನೂ ಹೇಳಲಾರೆ ಮೇಡಂ. ಅವರು ನನ್ನಿಂದ ಕೆಲಸವನ್ನು ಮಾತ್ರ ಅಪೇಕ್ಷಿಸುತ್ತಾರೆ ಎಂದು ಹೇಳಿದಳು. ಮಾರ್ಗರೇಟಳ ಹೃದಯ ನೋವಿನಿಂದ ಒದ್ದಾಡಿತು. ಮುಂಚೆಯೂ ಇಂತಹ ಹಲವಾರು ಕಥೆಗಳನ್ನು ಆಕೆ ಕೇಳಿದ್ದಳು. ತಮ್ಮ ಕುಟುಂಬದ ಆರ್ಥಿಕ ಮುಗ್ಗಟ್ಟನ್ನು ಪರಿಹರಿಸಲು, ಕೌಟುಂಬಿಕ ಅವಶ್ಯಕತೆಗಳನ್ನು ಪೂರೈಸಲು ಮಕ್ಕಳನ್ನು ಒತ್ತಾಯದಿಂದ ಕೆಲಸದಲ್ಲಿ ತೊಡಗಿಸುವುದನ್ನು ಆಕೆ ಕಂಡಿದ್ದಳು. ಆದರೆ ಸಾರಾಳ ಕೇಸ್ ಕೊಂಚ ಬೇರೆಯೇ ಇತ್ತು. ಕುಟುಂಬವನ್ನು ಸಂರಕ್ಷಿಸುವ ಮಕ್ಕಳು ಕಠಿಣ ಪರಿಸ್ಥಿತಿಯಿಂದ ಹಾದು ಹೋದರೂ ಕೂಡ ಈಕೆಯಷ್ಟು ಗಂಭೀರ ತೊಂದರೆಗೆ ಒಳಗಾಗಿರಲಿಲ್ಲ.

ಸಾರಾಳ ವೈದ್ಯಕೀಯ ಕಡತದಲ್ಲಿ ಇದೆಲ್ಲವನ್ನು ಮಾರ್ಗರೇಟ್ ನಮೂದಿಸಿದಳು. ಆಕೆಯ ಕುಪೋಷಣೆ ಆಕೆಯ ದೇಹದಲ್ಲಿ ಉಂಟಾದ ನಿರ್ಜಲೀಕರಣ, ಆಕೆಯ ಒತ್ತಡಗಳು, ದಣಿವು ಮುಂತಾದ ಎಲ್ಲಾ ದೈಹಿಕ ಮತ್ತು ಮಾನಸಿಕ ಲಕ್ಷಣಗಳನ್ನು ಆಕೆ ಅದರಲ್ಲಿ ಗುರುತು ಹಾಕಿದಳು.

ಮುಂದಿನ ಎರಡು ತಿಂಗಳಲ್ಲಿ ಸಾರಾ ಮತ್ತೆ ಆಸ್ಪತ್ರೆಗೆ ಮರಳಿ ಬಂದಳು. ಈ ಬಾರಿ ಆಕೆ ತಾನು ಶಾಲೆಯ ಅವಧಿಯ ನಂತರ ಕೆಲಸ ನಿರ್ವಹಿಸುತ್ತಿದ್ದ ಬಟ್ಟೆಯ ಮಿಲ್ ಒಂದರಲ್ಲಿ ಎಚ್ಚರ ತಪ್ಪಿ ಬಿದ್ದಿದ್ದಳು. ಆಕೆಯೊಂದಿಗೆ ಕಾರ್ಯನಿರ್ವಹಿಸುತ್ತಿದ್ದ ಸಹೋದ್ಯೋಗಿ ಒಬ್ಬಳು ಆಕೆಯನ್ನು ಆಸ್ಪತ್ರೆಗೆ ಕರೆತಂದಿದ್ದಳು. ಮತ್ತೊಮ್ಮೆ ಆಕೆಯನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಚಿಕಿತ್ಸೆಗೆ ಒಳಪಡಿಸಿದ ಮಾರ್ಗರೇಟ್ ಆಕೆಯ ಪರಿಸ್ಥಿತಿ ಅತ್ಯಂತ ಗಂಭೀರವಾಗಿರುವುದನ್ನು ಗಮನಿಸಿದಳು. ಮತ್ತಷ್ಟು ಕೃಶವಾಗಿದ್ದ ಆಕೆಯ ಕಣ್ಣುಗಳ ಸುತ್ತ ಕಪ್ಪು ವರ್ತುಲಗಳು ಗಾಢವಾಗಿ ಮೂಡಿದ್ದು ಆಕೆಯ ಕೈಗಳು ಅತ್ಯಂತ ಬಿರುಸಾಗಿದ್ದವು. ಬಟ್ಟೆ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಕಾರಣ ಕೈಕಾಲುಗಳು ಕಲೆಗಳಿಂದ ಕೂಡಿದ್ದವು. ತನ್ನ ಆತಂಕವನ್ನು ಬಚ್ಚಿಡುತ್ತಾ ಮಾರ್ಗರೇಟ್ ಸಾರಾಳಿಗೆ ನೀನು 14 ವರ್ಷದ ಹುಡುಗಿ. ಶಾಲೆಯಲ್ಲಿ ಓದಬೇಕಾದ ವಯಸ್ಸಿದಾಗಿದೆ. ಆದರೆ ನೀನು ವಿಪರೀತ ಕೆಲಸ ಮಾಡುತ್ತಿದ್ದು ನಿನ್ನನ್ನು ನೀನು ಸಾವಿಗೆ ದೂಡಿಕೊಳ್ಳುತ್ತಿರುವೆ ಎಂದು ಹೇಳಿದಳು.

ನನ್ನ ಮಲ ತಂದೆ ನಮಗೆ ಸಾಕಷ್ಟು ಹಣ ಬೇಕು ಎಂದು ಹೇಳುತ್ತಾನೆ ಎಂದು ತುಸು ದನಿಯನ್ನು ತಗ್ಗಿಸಿದ ಆಕೆ. ಹೆಚ್ಚು ಊಟ ಮಾಡುವುದರಿಂದ ಮನೆಯಲ್ಲಿ ಕೆಲಸ ನಿರ್ವಹಿಸಲು ಸಾಧ್ಯವಾಗುವುದಿಲ್ಲ ಎಂದು ಆತ ಹೇಳುತ್ತಾನೆ. ನನ್ನ ಖರ್ಚನ್ನು ನಿರ್ವಹಿಸಲು ನಾನು ದುಡಿಯಲೇ ಬೇಕು ಎಂದು ಆತ ಒತ್ತಾಯಿಸುತ್ತಾನೆ ಎಂದು ಅತ್ಯಂತ ಮೆಲುವಾಗಿ ಆಕೆ ಹೇಳಿದಳು. ಕೆಲ ನಿಮಿಷಗಳ ಕಾಲ ಯೋಚಿಸಿದ ಮಾರ್ಗರೇಟ್ ನಿರ್ಧಾರಕ್ಕೆ ಬಂದು ಕೂಡಲೇ ಮಕ್ಕಳ ರಕ್ಷಣೆಯ ( ಚಿಲ್ಡ್ರನ್ ಏಡ್ ಸೊಸೈಟಿ ) ಕೇಂದ್ರಕ್ಕೆ ಕರೆ ಮಾಡಿದಳು.

ಸಾರಾಳ ಆರೋಗ್ಯದ ಕುರಿತ ವರದಿಯನ್ನು ತಯಾರಿಸಿ ಅವರಿಗೆ ನೀಡಿದ ಆಕೆ ಹಾಗೇನಾದರೂ ಕೋರ್ಟಿಗೆ ಬಂದು ಸಾಕ್ಷಿ ನೀಡುವ ಅವಶ್ಯಕತೆ ಬಂದರೆ ತಾನು ಖುದ್ದಾಗಿ ಬಂದು ಆಕೆಯ ಪರವಾಗಿ ಮಾತನಾಡಲು ಸಿದ್ದ ಎಂಬುದನ್ನು ಇಲಾಖೆಗೆ ಸ್ಪಷ್ಟಪಡಿಸಿದಳು. ಸಾರಾ ಅನುಭವಿಸುತ್ತಿದ್ದ ನೋವು ಮತ್ತು ಯಾತನೆಗಳು ಆಕೆಯ ಇಂದಿನ ಪರಿಸ್ಥಿತಿಗೆ ಕಾರಣವಾದವರ ಕ್ರೌರ್ಯ ಆಕೆಯ ಈ ನಿರ್ಧಾರಕ್ಕೆ ಕಾರಣವಾಗಿತ್ತು. ಯಾವುದೇ ಆತಂಕ ಎದುರಾದರೂ ಕೂಡ ಆಕೆ ಸಿದ್ಧರಾಗಲು ಆಕೆಗಿದ್ದ ಮಾನವ ಸಹಜ ಕಾಳಜಿ ಕಾರಣವಾಗಿತ್ತು.

1933 ಅಕ್ಟೋಬರ್ ನಲ್ಲಿ ಮಾರ್ಗರೇಟ್ ಳನ್ನು ಕೋರ್ಟ್ ನ ಹಾಲಿಗೆ ಕರೆಯಿಸಲಾಯಿತು. ಬೈಬಲ್ನ ಮೇಲೆ ಕೈ ಇಟ್ಟ ಮಾರ್ಗರೇಟ್ ಸುಳ್ಳನ್ನು ಹೇಳುವುದಿಲ್ಲ ಎಂದು ಪ್ರಮಾಣ ಮಾಡಿದಳು. ಓರ್ವ ಸಾಮಾಜಿಕ ಕಾರ್ಯಕರ್ತರ ಜೊತೆಗೆ ಸಾರಾ ಅಲ್ಲಿ ಕುಳಿತಿದ್ದಳು. ಕುರ್ಚಿಯಲ್ಲಿ ಗುಬ್ಬಿಯಂತೆ ತನ್ನ ಪುಟ್ಟ ದೇಹವನ್ನು ತುರುಕಿಕೊಂಡು ಕುಳಿತಿದ್ದ ಸಾರಾಳನ್ನು ನೋಡಿದ ಮಾರ್ಗರೇಟ್ ಇನ್ನೊಂದು ತುದಿಯಲ್ಲಿ ಅತ್ಯಂತ ಸಿಟ್ಟು ಮತ್ತು ಆಕ್ರೋಶದಿಂದ ಆಕೆಯ ಮಲತಂದೆ ಮತ್ತು ತಾಯಿ ಕುಳಿತಿರುವುದನ್ನು ನೋಡಿದಳು.

ಬೆಳ್ಳಿಯ ತಲೆಗೂದಲನ್ನು ಹೊಂದಿದ ಹೆನ್ರಿ ಬ್ಲ್ಯಾಕ್ ಸ್ಟೋನ್ ಎಂಬ ನ್ಯಾಯಾಧೀಶರು ಮಾರ್ಗರೇಟ್ ಅವರನ್ನು ತಮ್ಮ ಕನ್ನಡಕದ ಅಂಚನ್ನು ಸರಿಪಡಿಸಿಕೊಳ್ಳುತ್ತಾ ಮಿಸ್ ಮಾರ್ಗರೇಟ್ ನೀವು ಸಾರಾ ಮಿಷನ್ ಅವರಿಗೆ ಕಳೆದ ಆರು ತಿಂಗಳಲ್ಲಿ ಹಲವಾರು ಬಾರಿ ಚಿಕಿತ್ಸೆ ನೀಡಿದ್ದೀರಿ ಎಂಬುದು ನಿಮ್ಮ ವೈದ್ಯಕೀಯ ರಿಪೋರ್ಟ್ ನ ಮೂಲಕ ನಮಗೆ ಗೊತ್ತಾಗುತ್ತದೆ. ಆಕೆ ನಿಮ್ಮ ಬಳಿ ಬಂದಾಗಿನಿಂದ ಆಕೆಯ ಚಿಕಿತ್ಸೆಯ ವಿವರಗಳನ್ನು ನೀವು ನ್ಯಾಯಾಲಯದ ಮುಂದೆ ಪ್ರಸ್ತುತ ಪಡಿಸುವಿರಾ? ಎಂದು ಕೇಳಿದರು. ದೀರ್ಘವಾಗಿ ಉಸಿರನ್ನು ಎಳೆದುಕೊಂಡ ಮಾರ್ಗರೇಟ್ ಖಂಡಿತವಾಗಿ ಯುವರ್ ಆನರ್.

ನಾನು ಮೊದಲ ಬಾರಿ ಸಾರಾಳಿಗೆ ಏಪ್ರಿಲ್ 12 ರಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದು ಆಕೆ ಅತ್ಯಂತ ಕಡಿಮೆ ತೂಕ ಹೊಂದಿದ್ದು ಒತ್ತಡದಿಂದ ಬಳಲುತ್ತಿದ್ದಳು. ಎರಡನೇ ಬಾರಿ ಜೂನ್ ಎರಡನೇ ತಾರೀಖಿನಂದು ಆಕೆ ಚಿಕಿತ್ಸೆಗೆ ಬಂದಾಗ ಆಕೆ ಶಾಲೆಯಲ್ಲಿ ಎಚ್ಚರ ತಪ್ಪಿದ್ದಳೆಂದು ಆಕೆಯ ಶಿಕ್ಷಕಿ ಚಿಕಿತ್ಸೆಗೆ ಕರೆತಂದಿದ್ದರು. ಈ ಬಾರಿ ಆಕೆಯ ತೂಕ ಮತ್ತಷ್ಟು ಕಡಿಮೆಯಾಗಿದ್ದು ತೀವ್ರ ನಿರ್ಜಲೀಕರಣದಿಂದ ಆಕೆ ಬಳಲುತ್ತಿದ್ದಳು.

ಮೂರನೇ ಬಾರಿ ನನ್ನ ಬಳಿ ಯಾಕೆ ಚಿಕಿತ್ಸೆಗೆ ಬಂದಾಗ ಆಕೆ ದೀರ್ಘ ಕಾಲದವರೆಗೆ ಬಟ್ಟೆಯ ಫ್ಯಾಕ್ಟರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಜೊತೆಗೆ ಶಾಲೆಗೆ ಕೂಡ ಹಾಜರಾಗುತ್ತಿದ್ದಳು. ಮೂರನೇ ಬಾರಿ ಅಗಸ್ಟ್ 15 ರಂದು ಆಕೆಯನ್ನು ನನ್ನ ಬಳಿ ಕರೆತಂದಾಗ ಆಕೆಯ ಆರೋಗ್ಯ ಸಂಪೂರ್ಣ ಕುಸಿದು ಹೋಗಿದ್ದು, ಆಕೆ ತೀವ್ರವಾದ ಕುಪೋಷಣೆ, ತೂಕ ಇಳಿಕೆ ಹಾಗೂ ನಿರ್ಜಲೀಕರಣ ಸಮಸ್ಯೆಯಿಂದ ಬಳಲುತ್ತಿದ್ದಳು. ಇದೇ ಪರಿಸ್ಥಿತಿ ಮುಂದುವರೆದರೆ ಆಕೆ ಸಾವಿನ ದವಡೆಗೆ ಸಿಲುಕಲು ದೂರವಿಲ್ಲ ಎಂಬ ಕಾರಣಕ್ಕೆ ನಾನು ರಕ್ಷಣಾ ಕೇಂದ್ರದವರಿಗೆ ಆಕೆಯ ಕುರಿತು ಮಾಹಿತಿ ನೀಡಿದೆ ಎಂದು ಅತ್ಯಂತ ಸ್ಪಷ್ಟವಾಗಿ ಮಾಹಿತಿಯನ್ನು ನೀಡಿದರು.

ಇದೀಗ ಸಾರಾಳ ಆರೋಗ್ಯದ ಮತ್ತಷ್ಟು ಬಿಗಡಾಯಿಸಿದ ಕಾರಣ ಕುರಿತು ನಿಮ್ಮ ವೃತ್ತಿಪರವಾದ ಅಭಿಪ್ರಾಯ ಏನು ? ಎಂದು ನ್ಯಾಯಾಧೀಶರು ಆಕೆಯನ್ನು ಮರು ಪ್ರಶ್ನಿಸಿದರು
ಜಡ್ಜ್ ರತ್ತ ನೇರವಾಗಿ ವೀಕ್ಷಿಸಿ ನೋಡಿದ ಮಾರ್ಗರೇಟ್ ನನ್ನ ವೃತ್ತಿಪರ ಅಭಿಪ್ರಾಯದ ಪ್ರಕಾರ ಸಾರಾ ತೀವ್ರವಾದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು ಅವಶ್ಯಕವಾದ ಪ್ರಮಾಣದಲ್ಲಿ ಆಹಾರ, ಪಾನೀಯ ಹಾಗೂ ವಿಶ್ರಾಂತಿ ದೊರೆಯುತ್ತಿಲ್ಲ. ತನ್ನ ದೈಹಿಕ ಸಾಮರ್ಥ್ಯವನ್ನು ಮೀರಿದ ಕಾರ್ಯ ಚಟುವಟಿಕೆಗಳನ್ನು ಆಕೆ ನಿರ್ವಹಿಸಬೇಕಾಗಿದ್ದು ಅದು ಆತಂಕಕ್ಕೆ ಕಾರಣವಾಗಿದೆ. ಇದೇ ರೀತಿಯ ಪರಿಸ್ಥಿತಿ ಮುಂದುವರೆದರೆ ಖಂಡಿತವಾಗಿಯೂ ಆಕೆಯ ಆರೋಗ್ಯ ಇನ್ನಷ್ಟು ಕೈ ಕೊಡುವ ಹಾಗೂ ಜೀವಕ್ಕೆ ಹಾನಿಯಾಗುವ ಸಂಭವವಿದೆ. ಪ್ರಸ್ತುತ ಆಕೆಗೆ ಸಂಪೂರ್ಣ ಮನೋದೈಹಿಕ ಕಾಳಜಿ ಹಾಗೂ ಆರೋಗ್ಯದ ಕುರಿತಾದ ಅಗತ್ಯ ಮಾರ್ಗದರ್ಶನದ ಅವಶ್ಯಕತೆ ಇದೆ.

ನ್ಯಾಯಾಲಯದ ಕೋಣೆಯಲ್ಲಿ ಸಂಪೂರ್ಣ ಮೌನ ಆವರಿಸಿತ್ತು. ಸಾರಾಳ ತಾಯಿ ತಲೆ ತಗ್ಗಿಸಿದ್ದರೆ, ಆಕೆಯ ಮಲ ತಂದೆ ದವಡೆಯನ್ನು ಗಟ್ಟಿಯಾಗಿ ಕಚ್ಚಿ ಹಿಡಿದಿದ್ದನು. ತುಸು ಮುಂದೆ ಬಾಗಿದ ನ್ಯಾಯಾಧೀಶರು ಸಾರಾ ತನ್ನ ಮನೆಯ ಪರಿಸ್ಥಿತಿಯ ಕುರಿತು ನಿಮಗೆ ಯಾವತ್ತಾದರೂ ಬಾಯಿ ಬಿಟ್ಟಿದ್ದಾಳೆಯೇ? ಎಂದು ಕೇಳಿದರು.

ತಾನು ಕೆಲಸ ಮಾಡಲೇಬೇಕಾದ ಅನಿವಾರ್ಯತೆಯಿದ್ದು ಕೆಲಸ ಮಾಡದಿದ್ದರೆ ತನ್ನನ್ನು ನೋಡಿಕೊಳ್ಳಲು ಆಗುವುದಿಲ್ಲ ಎಂಬ ಪರಿಸ್ಥಿತಿ ಇದೆ ಎಂದು ಆಕೆ ಹೇಳಿದಳು. ಆಕೆಯ ಮಲತಂದೆ ಆಕೆ ಹೆಚ್ಚಾಗಿ ತಿನ್ನುವುದರಿಂದ ತನ್ನ ಆಹಾರದ ಖರ್ಚನ್ನು ಆಕೆ ನಿಭಾಯಿಸಲೇಬೇಕು ಎಂದು ಹೇಳುತ್ತಾನೆ ಎಂದು ಸಾರಾ ಹೇಳಿದ್ದಾಳೆ. ಇಷ್ಟು ಹೇಳಬೇಕಾದರೂ ಆಕೆ ತುಂಬಾ ಹೆದರಿದ್ದಳು. ಯುವರ್ ಓನರ್ ಆಕೆ ತನ್ನ ಮನೆಯಲ್ಲಿ ಅಸುರಕ್ಷಿತಳು ಎಂದು ನನಗೆ ತೋರುತ್ತದೆ ಎಂದು ಮಾರ್ಗರೇಟ್ ಉತ್ತರಿಸಿದರು.

ಸಾರಾಳ ಮಲತಂದೆ ಎದ್ದು ನಿಂತು ಅತ್ಯಂತ ಕೋಪದ ದನಿಯಲ್ಲಿ ಆ ಬಾಲಕಿ ಸುಳ್ಳು ಹೇಳುತ್ತಿದ್ದಾಳೆ. ನಮ್ಮ ಬಳಿ ಏನೂ ಇಲ್ಲದಿದ್ದರೂ ಕೂಡ ನಾವು ಆಕೆಯನ್ನು ಚೆನ್ನಾಗಿ ಬೆಳೆಸುತ್ತಿದ್ದೇವೆ ಎಂದು ಹೇಳಿದ. ತಲೆಯಾಡಿಸಿದ ನ್ಯಾಯಾಧೀಶರು ನೀವು ಕುಳಿತುಕೊಳ್ಳಿ ನಿಮ್ಮ ಸರದಿ ಬಂದಾಗ ನೀವು ಮಾತನಾಡಿ ಎಂದು ಆದೇಶಿಸಿದರು.

ಮುಂದಿನ ಒಂದು ಗಂಟೆಯಲ್ಲಿ ಸಾಮಾಜಿಕ ಕಾರ್ಯಕರ್ತರು ಸಾರಾಳ ಮನೆಯ ಆಗುಹೋಗುಗಳ ಕುರಿತು ತಾವು ದಾಖಲಿಸಿದ ವಿಷಯಗಳ ಕುರಿತು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟರು. ತೀವ್ರವಾದ ಚಳಿಯಲ್ಲಿ ಸರಿಯಾದ ಹೊದಿಕೆ ಮತ್ತು ಹೀಟರ್ ನ ವ್ಯವಸ್ಥೆ ಇಲ್ಲದ ಕೋಣೆಯಲ್ಲಿ ನಡುಗುತ್ತಾ ಮಲಗುವ ಸಾರ ಮರಗಟ್ಟಿದಂತೆ ಆಗುವ ಸ್ಥಿತಿಯನ್ನು ಸಾಮಾಜಿಕ ಕಾರ್ಯಕರ್ತರು ವಿವರಿಸಿದರು. ಮನೆಯಲ್ಲಿ ಆಕೆಗೆ ಸರಿಯಾದ ಆಹಾರ ಮತ್ತು ಕಾಳಜಿ ದೊರೆಯದೆ ಇರುವುದರಿಂದ ಕುರಿತು ಹಾಗೂ ಶಾಲೆಯ ಅವಧಿಯ ನಂತರ ಮಧ್ಯಾಹ್ನ 4 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೆ ಆಕೆ ಫ್ಯಾಕ್ಟರಿಯಲ್ಲಿ ಕಾರ್ಯನಿರ್ವಹಿಸುವುದನ್ನು ಅವರು ಕೋರ್ಟಿಗೆ ನಿರೂಪಿಸಿದರು. ರಾತ್ರಿ ತಡವಾಗಿ ಮಲಗಿದರೂ ಕೂಡ ಮರುದಿನ ಮುಂಜಾನೆ ಆಕೆ ಓಡೋಡುತ್ತಲೇ ಮತ್ತೆ ಶಾಲೆಗೆ ಹೋಗಬೇಕಾದ ಅನಿವಾರ್ಯತೆಯನ್ನು ಕೂಡ ಕೋರ್ಟಿಗೆ ಮನದಟ್ಟು ಮಾಡಿಕೊಟ್ಟರು.

ಕೆಲ ನಿಮಿಷಗಳ ವಿರಾಮವನ್ನು ಘೋಷಿಸಿದ ಜಡ್ಜ್ ಅವರು ಮತ್ತೆ ಮರಳಿ ತಮ್ಮ ಸ್ಥಾನಕ್ಕೆ ಬಂದು ಕುಳಿತಾಗ ಅವರ ಮುಖ ವ್ಯಗ್ರವಾಗಿತ್ತು. ನಾನು ಸಾಕಷ್ಟು ಮಾಹಿತಿಯನ್ನು ಪಡೆದಿದ್ದೇನೆ ಎಂದು ಹೇಳಿದ ನ್ಯಾಯಾಧೀಶ ಬ್ಲಾಕ್ ಸ್ಟೋನ್ ಮುಂದುವರೆಸಿ ಸಾರಾ ಮಿಶೆಲ್ ಎಂಬ ಈ ಬಾಲಕಿ ತೀವ್ರವಾದ ನಿರ್ಲಕ್ಷ ಮತ್ತು ಶೋಷಣೆಗೆ ಒಳಗಾಗಿದ್ದಾಳೆ. ಆಕೆ ಓರ್ವ ಮಗಳೇ ಹೊರತು ಸೇವಕಿ ಅಲ್ಲ. ಆಕೆಯ ಸ್ಥಾನ ಶಾಲೆಯಲ್ಲಿ ಇರಬೇಕೆ ಹೊರತು ಕುಟುಂಬದ ಜನರ ಹೊಟ್ಟೆ ತುಂಬಿಸುವ ಕೆಲಸ ಕಾರ್ಯಗಳಲ್ಲಿ ಅಲ್ಲ. ಆಕೆ ತನ್ನ ವಯಸ್ಸಿನ ಇತರ ಮಕ್ಕಳಂತೆ ಚೆನ್ನಾಗಿ ತಿಂದುಂಡು, ಓದು, ಆಟ ಹಾಗೂ ವಿಶ್ರಾಂತಿಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರಬೇಕೇ ಹೊರತು ತೀವ್ರ ದೈಹಿಕ ಕೆಲಸ ಕಾರ್ಯಗಳನ್ನು ಮಾಡಬೇಕಾಗಿಲ್ಲ ಎಂದು ಹೇಳಿದರು.

ನಂತರ ಸಾರಾಳ ಮಲ ತಂದೆ ಹಾಗೂ ತಾಯಿಯತ್ತ ನೋಡಿದ ನ್ಯಾಯಾಧೀಶರು ಇನ್ನು ಮುಂದೆ ಸಾರಾ ಮಿಶೆಲ್ ಳನ್ನು ನೋಡಿಕೊಳ್ಳುವ ನಿಮ್ಮ ಪಾಲಕತ್ವವನ್ನು ತೆಗೆದು ಹಾಕಲಾಗಿದೆ. ಆಕೆಯನ್ನು ಪೋಷಿಸುವ ಹಾಗೂ ಕಾಳಜಿಪೂರ್ವಕವಾಗಿ ನೋಡಿಕೊಳ್ಳುವ ಒಂದು ಪೋಷಕ ಕುಟುಂಬಕ್ಕೆ ಆಕೆಯನ್ನು ಕಳುಹಿಸಲಾಗುತ್ತದೆ ಎಂದು ಆದೇಶಿಸಿದರು. ನಂತರ ಮಾರ್ಗರೇಟರತ್ತ ತಿರುಗಿದ ನ್ಯಾಯಾಧೀಶರು ನಿಮ್ಮ ಕಾರ್ಯ ತತ್ಪರತೆಯನ್ನು ಮೆಚ್ಚಬೇಕಾದದ್ದು ಈ ವಿಷಯದಲ್ಲಿ ಸಾಕಷ್ಟು ಧೈರ್ಯ ಮತ್ತು ಶ್ರದ್ಧೆಯ ಅವಶ್ಯಕತೆ ಇದ್ದು ನೀವು ಅದನ್ನು ತೋರಿದ್ದೀರಿ ಅದಕ್ಕಾಗಿ ನಿಮ್ಮನ್ನು ನಾನು ಅಭಿನಂದಿಸುತ್ತೇನೆ. ನಿಮ್ಮ ಈ ಕಾಳಜಿಯ ಕಾರಣದಿಂದಲೇ ಇಂದು ಬಾಲಕಿಯ ಜೀವವನ್ನು ಉಳಿಸಲು ಸಾಧ್ಯವಾಗಿದೆ ಆ ಕಾರಣಕ್ಕಾಗಿ ಈ ನ್ಯಾಯಾಲಯವು ನಿಮಗೆ ಕೃತಜ್ಞವಾಗಿದೆ ಎಂದು ಅಭಿನಂದಿಸಿದರು.

ಮಾರ್ಗರೇಟ್ ಳ ಕಣ್ಣುಗಳಲ್ಲಿ ನೀರು ತುಂಬಿತ್ತು. ಭರವಸೆ ಮೂಡಿತು. ಸಾರಾಳ ಮುಖದಲ್ಲಿ ಭಯ ಮತ್ತು ದಣಿವಿನ ಭಾವ ಮರೆಯಾಗಿ ನೆಮ್ಮದಿ ಹಾಗೂ ನಿರಾಳತೆ ಒಡಮೂಡಿತು. ಇಡೀ ಕೋರ್ಟ್ ರೂಮ್ನಲ್ಲಿ ಒಂದು ಬಗೆಯ ನಿರಾಳ ಭಾವ ಕಾಣುತ್ತಿತ್ತು.

ಕೋರ್ಟ್ ನ ಕಲಾಪಗಳು ಮುಗಿದು ನ್ಯಾಯಾಧೀಶರು ಅಲ್ಲಿಂದ ನಿರ್ಗಮಿಸಿದಾಗ ಮಾರ್ಗರೇಟ್ ಎದ್ದು ಸಾರಾಳ ಬಳಿ ನಡೆದರು. ತನ್ನ ದೊಡ್ಡದಾದ ಕಣ್ಣುಗಳಿಂದ ಮಾರ್ಗರೇಟ್ ರನ್ನು ದಿಟ್ಟಿಸಿ ನೋಡಿದ ಸಾರಾಳ ಕಣ್ಣುಗಳಲ್ಲಿ ಕೃತಜ್ಞತೆ ಇದ್ದರೂ ಮುಂದೇನು ? ಎಂದು ಆತಂಕದಿಂದ ಕೇಳಿದಳು.

ಸಾರಾಳ ಮುಂದೆ ಮೊಣಕಾಲನ್ನೂರಿ ಕುಳಿತ ಮಾರ್ಗರೇಟ್ ಆಕೆಯ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾ ನೀನು ಮತ್ತೆ ಮಗುವಾಗುವೆ, ಶಾಲೆಗೆ ಹೋಗುವೆ, ಒಳ್ಳೆಯ ಆಹಾರವನ್ನು ಸೇವಿಸುವೆ, ಬೆಚ್ಚಗಿನ ಹಾಸಿಗೆಯಲ್ಲಿ ನಿದ್ರಿಸುವೆ ಮತ್ತು ಓರ್ವ ಮಗುವಿಗೆ ದೊರೆಯಬೇಕಾದ ಎಲ್ಲ ರೀತಿಯ ಕಾಳಜಿ, ಪ್ರೀತಿ ಹಾಗೂ ಪ್ರೋತ್ಸಾಹಗಳನ್ನು ನೀನು ಪಡೆಯುವೆ ಎಂದು ಹೇಳಿದರು. ತನ್ನ ಕೃಶವಾದ ತೋಳುಗಳನ್ನು ಮಾರ್ಗರೇಟ್ ಕತ್ತಿನ ಸುತ್ತ ಸುತ್ತಿದ ಸಾರಾ ಜೋರಾಗಿ ಅತ್ತಳು.

ಮೂರು ತಿಂಗಳ ನಂತರ ಮಾರ್ಗರೇಟ್ ಅವರಿಗೆ ಅವರ ಆಸ್ಪತ್ರೆಯ ವಿಳಾಸಕ್ಕೆ ಒಂದು ಪತ್ರ ಬಂತು. ಅದನ್ನು ಬರೆದದ್ದು ಸಾರಾ. ಹತ್ತಿರದ ಒಂದು ಪುಟ್ಟ ಪಟ್ಟಣದಲ್ಲಿ ತನ್ನನ್ನು ದತ್ತು ತೆಗೆದುಕೊಂಡ ಪಾಲಕರ ಜೊತೆಗೆ ವಾಸಿಸುತ್ತಿದ್ದ ಸಾರಾ ಕಾಳಜಿಪೂರ್ವಕವಾಗಿ ಸುಂದರವಾದ ಕೈಬರಹದಲ್ಲಿ ಬರೆದ ಪತ್ರ ಅದಾಗಿತ್ತು.

ಪ್ರೀತಿಯ ನರ್ಸ್ ಮಾರ್ಗರೇಟ್ ಸುಲೆವಾನ್, ಪತ್ರ ಮುಖೇನ ನಿಮಗೆ ನಾನು ಚೆನ್ನಾಗಿ ಇರುವ ವಿಷಯವನ್ನು ಹೇಳಬೇಕೆಂದುಕೊಂಡಿದ್ದೆ. ನನ್ನನ್ನು ಪೋಷಿಸುತ್ತಿರುವ ತಾಯಿ ಅತ್ಯಂತ ಒಳ್ಳೆಯವಳು. ಆಕೆ ನನಗೆ ಚೆನ್ನಾಗಿ ದಿನದ ಮೂರು ಹೊತ್ತು ಊಟ ಮಾಡಲು ಪ್ರೋತ್ಸಾಹಿಸಿ ನಾನು ಊಟ ಮಾಡಿರುವ ಕುರಿತು ಖಚಿತಪಡಿಸಿಕೊಳ್ಳುತ್ತಾರೆ. ಇದೀಗ ನಾನು 15 ಪೌಂಡ್ ನಷ್ಟು ತೂಕವನ್ನು ಗಳಿಸಿಕೊಂಡಿದ್ದೇನೆ ನನ್ನನ್ನು ಪರೀಕ್ಷಿಸುತ್ತಿರುವ ವೈದ್ಯರು ಇದೀಗ ನನ್ನ ಆರೋಗ್ಯ ಮರುಕಳಿಸುತ್ತಿದೆ ಎಂದು ಹೇಳಿದ್ದಾರೆ. ನಾನು ಪ್ರತಿದಿನ ಶಾಲೆಗೆ ಹೋಗುತ್ತಿದ್ದು ನನಗೆ ಸಾಕಷ್ಟು ಜನ ಸ್ನೇಹಿತರು ದೊರೆತಿದ್ದಾರೆ. ಪ್ರತಿ ವಾರವು ಚರ್ಚಗೆ ಹೋಗುವ ನಾನು ಅಲ್ಲಿ ಎಲ್ಲರೊಂದಿಗೆ ಸೇರಿ ಪ್ರಾರ್ಥನೆ ಮಾಡುತ್ತೇನೆ. ನಂತರ ನಾವೆಲ್ಲರೂ ಸೇರಿ ಹಾಡು ನೃತ್ಯಗಳಲ್ಲಿ ತೊಡಗಿಕೊಳ್ಳುತ್ತೇವೆ. ನನ್ನ ಜೀವನದಲ್ಲಿ ಈ ದಿನವನ್ನು ಕಾಣುತ್ತೇನೆ ಎಂದು ನಾನು ಯಾವತ್ತೂ ಭಾವಿಸಿರಲಿಲ್ಲ ನನ್ನನ್ನು ರಕ್ಷಿಸಿದ ತಮಗೆ ತುಂಬಾ ಧನ್ಯವಾದಗಳು. ನಿಮ್ಮ ಈ ಸಹಾಯವನ್ನು ನಾನೆಂದೂ ಮರೆಯುವುದಿಲ್ಲ.

ಕೃತಜ್ಞತೆಯೊಂದಿಗೆ ಸಾರಾ ತನ್ನ ವೃತ್ತಿ ಜೀವನದ ಕೊನೆಯವರೆಗೂ ಆ ಪತ್ರವನ್ನು ತನ್ನ ಕೋಣೆಯ ಡ್ರಾವರಿನಲ್ಲಿ ಇಟ್ಟುಕೊಂಡಿದ್ದ ಮಾರ್ಗರೇಟ್ ತನ್ನ ಅತ್ಯಂತ ಕಷ್ಟದ ದಿನಗಳಲ್ಲಿ, ದಣಿವನ್ನು ಅನುಭವಿಸುತ್ತಿರುವ ಸಮಯದಲ್ಲಿ ಎದೆಗುಂದಿದ ಹೊತ್ತಿನಲ್ಲಿ ಆ ಪತ್ರವನ್ನು ತೆಗೆದು ಮತ್ತೆ ಮತ್ತೆ ಓದುತ್ತಿದ್ದಳು.

ನಿಜವನ್ನು ಹೇಳಿದ ಆಕೆಯ ಗಟ್ಟಿ ಧ್ವನಿ ಒಂದು ಮಗುವಿನ ಸಂಪೂರ್ಣ ಬದುಕನ್ನು ಬದಲಾಯಿಸಿತು. ಕಷ್ಟಕ್ಕೆ ಮರುಗಿದ ಕಾರಣ ಅವರ ಬದುಕಿನ ದಿಕ್ಕನ್ನೇ ಅಗಾಧ ಬದಲಾವಣೆಗೆ ಕಾರಣವಾಯಿತು.  ಮುಂದೆ ಹಲವಾರು ವರ್ಷಗಳ ನಂತರ ತನ್ನ ನಿವೃತ್ತಿಯನ್ನು ಹೊಂದಿದ ಮಾರ್ಗರೆಟ ಅವರಿಗೆ ಸಾರಾಳಿಂದ ಮತ್ತೊಂದು ಪತ್ರ ಬಂತು. ಇದೀಗ ಆಕೆ ಬೆಳೆದ ಹೆಣ್ಣುಮಗಳಾಗಿದ್ದು ತನ್ನದೇ ಮಕ್ಕಳನ್ನು ಹೊಂದಿದ್ದಳು ಆಕೆ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಪತಿ ಮತ್ತು ಮಕ್ಕಳೊಂದಿಗೆ ಸಂತೋಷವಾಗಿ ಜೀವನ ನಡೆಸುತ್ತಿದ್ದಳು.ಅಮೂಲ್ಯವಾದ ಮತ್ತು ಸುಂದರವಾದ ಜೀವನವನ್ನು ನಡೆಸಲು ಅನುವು ಮಾಡಿಕೊಟ್ಟ ಮಾರ್ಗರೇಟ್ ಅವರಿಗೆ ಮತ್ತೊಮ್ಮೆ ಕೃತಜ್ಞತೆಯನ್ನು ಸೂಚಿಸಿದ ಪತ್ರ ಅದಾಗಿತ್ತು. ಇದೀಗ ಆ ಪತ್ರಕ್ಕೆ ಚೌಕಟ್ಟನ್ನು ಹಾಕಿಸಿ ಅದನ್ನು ತನ್ನ ಮನೆಯ ಮುಖ್ಯ ಗೋಡೆಯ ಮೇಲೆ ನೇತು ಹಾಕಿದ ಮಾರ್ಗರೇಟ್ ಪತ್ರದ ಅಡಿಭಾಗದಲ್ಲಿ ಒಂದಷ್ಟು ಪದಗಳನ್ನು ತಾವು ಜೋಡಿಸಿದ್ದರು.

ನಮಗೆ ಎಲ್ಲರನ್ನೂ ರಕ್ಷಿಸಲು ಸಾಧ್ಯವಿಲ್ಲ ಆದರೆ ಯಾರನ್ನಾದರೂ ರಕ್ಷಿಸಲು ಸಾಧ್ಯವಿದೆ. ಆ ಒಬ್ಬರು ಎಲ್ಲಕ್ಕಿಂತ ಮಿಗಿಲಾದವರು ಎಂದು ಬರೆದಿದ್ದರು. ನೋಡಿದಿರಾ? ಸ್ನೇಹಿತರೆ ಮಾರ್ಗರೇಟ್ ಸುಲೆವಾನ್ ಎಂಬ ನರ್ಸ ಒಬ್ಬರ ಕಥೆ ನಮಗೆ ಅತ್ಯಂತ ಸಾಧಾರಣ ವ್ಯಕ್ತಿ ಕೂಡ ಅಸಾಧಾರಣ ಸಹಾನುಭೂತಿಯಿಂದ ಬದುಕಿನ ದಿಕ್ಕನ್ನೇ ಬದಲಿಸಬಹುದು ಎಂಬುದನ್ನು ನೆನಪಿಸುತ್ತದೆ. ತಮ್ಮದೇ ಆದ ದನಿ ಇಲ್ಲದವರಿಗಾಗಿ ದನಿ ಎತ್ತುವುದು ಅತ್ಯಂತ ಒಳ್ಳೆಯ ಹಾಗೂ ಧೈರ್ಯದ ಕೆಲಸ. ಮೌನವಾಗಿರುವುದನ್ನು ಕೆಲ ಕ್ಷಣಗಳಿಗಾದರೂ ನಿರಾಕರಿಸಿದ ಧ್ವನಿಯು ಹತ್ತು ಹಲವು ತಲೆಮಾರುಗಳ ವರೆಗೆ ಪ್ರತಿಧ್ವನಿಸುತ್ತದೆ.


  • ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ, ಗದಗ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading