ಅಮ್ಮನ ಸೆರಗೆಂದರೆ ಸೀರೆಯ ಭಾಗವಲ್ಲ, ದೈವಕ್ಕೂ ಮಡಿಲಕ್ಕಿ ಇಡುವ ಪುಣ್ಯ ಸೆರಗು…ಕವಿ ರಶ್ಮಿ ಪ್ರಸಾದ್ ಅವರ ಲೇಖನಿಯಲ್ಲಿ ಮೂಡಿದ ಅಮ್ಮನ ಪ್ರೀತಿಯನ್ನು ತಪ್ಪದೆ ಮುಂದೆ ಓದಿ…
ಅಮ್ಮನ ಸೆರಗೆಂದರೆ ಸೀರೆಯ ಭಾಗವಲ್ಲ
ಪ್ರೀತಿ ಮಮತೆ ವಾತ್ಸಲ್ಯಗಳ ಸುಯೋಗ
ಅಮಿತ ಕರುಣೆ ಅಂತಃಕರಣದ ಭೋಗ
ಅಪಾರ ಅಕ್ಕರಾನುಭಾವಗಳ ದಿವ್ಯರಾಗ.!
ಮಡಿಲಿನ ಹಸುಳೆಗೆ ಬೆಚ್ಚನೆಯ ಹೊದಿಕೆ
ಬೆವರಿದ ಕಂದನಿಗೆ ತಂಗಾಳಿಯ ಬೀಸಣಿಕೆ
ಮಳೆಯಲಿ ಮಗುವಿನ ತಲೆಕಾಯುವ ವಸ್ತ್ರ
ಕಂಬನಿ ಒರೆಸುವ ಸಾಂತ್ವಾನದ ಪ್ರೇಮದಸ್ತ್ರ .!
ಅನಂತ ಕಲ್ಪ ಸಂಕಲ್ಪಗಳ ಅಮ್ಮನ ಸೆರಗು
ಕಂದನ ಪಾಲಿಗೆಂದು ಚಿರ ಚಿರಂತನ ಬೆರಗು
ಸ್ಫುರಿವ ಕಕ್ಕುಲತೆ ಕಾರುಣ್ಯತೆಯ ಮಿನುಗು
ಜಗಕೆಂದು ತಾಯ್ತನದ ಪಾವಿತ್ರ್ಯದ ಮೆರಗು.!
ದೈವಕ್ಕೂ ಮಡಿಲಕ್ಕಿ ಇಡುವ ಪುಣ್ಯ ಸೆರಗು
ಮೂಲೋಕವನೇ ಕಾಪಿಡುತಿದೆ ಅಡಿಗಡಿಗು
ಬಾಗಿನವಿಟ್ಟು ಪೊರೆವ ಭಕ್ತಿಭಾವದ ಸೆರಗು
ಸತ್ಯಗುಡಿಯಂತೆ ಜಗದ ಪ್ರತಿ ಜೀವನಾಡಿಗು.!
- ರಶ್ಮಿ ಪ್ರಸಾದ್ (ರಾಶಿ)
