‘ಕೇದಗೆ ಪುಷ್ಪ’ ಕೃತಿ ಪರಿಚಯ : ಮಾಲತಿ ರಾಮಕೃಷ್ಣ ಭಟ್ 

ಲೇಖಕರಾದ ವನರಾಗ ಶರ್ಮಾ ‘ಕೇದಗೆ ಪುಷ್ಪ’ ಕವನ ಸಂಕಲನದಲ್ಲಿ ೨೮ ಕವಿತೆಗಳಿವೆ, ಈ ಕವನ ಸಂಕಲನದ ಕುರಿತು ಲೇಖಕಿ ಮಾಲತಿ ರಾಮಕೃಷ್ಣ ಭಟ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಕೃತಿ  : ಕೇದಗೆ ಪುಷ್ಪ
ಲೇಖಕರು: ವನರಾಗ ಶರ್ಮಾ
ಪ್ರೇಮ ಪ್ರಕಾಶನ ಮೈಸೂರು
ಮುದ್ರಣದ ವರ್ಷ: ೨೦೨೨
ಪುಟಗಳು:೧೫೬
ಬೆಲೆ: ರೂ.೧೫೦

ಶಿಕ್ಷಕರಾಗಿ ನಿವೃತ್ತರಾಗಿರುವ ಕವಿ /ಲೇಖಕರಾದ ವನರಾಗ ಶರ್ಮಾರವರು ಈಗಾಗಲೇ ತಮ್ಮ ಅನೇಕ ಕೃತಿಗಳ ಮೂಲಕ ಸಾಹಿತ್ಯ ಲೋಕದಲ್ಲಿ ಚಿರಪರಿಚಿತರಾಗಿದ್ದಾರೆ.ಮಕ್ಕಳ ಸಾಹಿತ್ಯಕ್ಕೂ ಇವರ ಕೊಡುಗೆ ಅಪಾರ. ಅವರ ಕೇದಗೆ ಪುಷ್ಪ ಎಂಬ ಈ ಕವನ ಸಂಕಲನವು ୭೮ ವಿವಿಧ ಬಗೆಯ ಕವಿತೆಗಳನ್ನೊಳಗೊಂಡಿದೆ.

ಮಳೆಗಾಲದಲ್ಲಿ ನೆರೆ ಬಂದು ಮಲೆನಾಡಿನ ಹಳ್ಳಿಗಳಲ್ಲಿ ಆಗುವ ಅನಾಹುತಗಳು ಒಂದೆರಡಲ್ಲ. ಈ ಕುರಿತು ಬರೆದ ಪದ್ಯದ ಶೀರ್ಷಿಕೆ.

* ಹೇಳಲು ಶಬ್ಧಗಳಿಲ್ಲ* ಇಲ್ಲಿನ ಕೆಲವು ಪದ್ಯಗಳ ಸಾಲುಗಳ ಪರಿಚಯ.

ಕಡಲಾಯಿತು ನದೀ ಬಯಲು.
ಕುಸಿದು ಬಿತ್ತು ಗುಡ್ಡ
ಕೊಚ್ಚಿ ಹೋಯಿತು ಬದುಕು
ಮತ್ತೆ ಕನಸುಗಳ ಮೂಟೆ
ಎಲ್ಲಾ ಬಯಲು ಬಯಲು
ಮುಗಿಲು ಮುಟ್ಟಿದೆ ಸಂತ್ರಸ್ತರ ಅಳಲು.

* ಜೀಕು ಜೋಕಾಲಿ*

ಜೀಕುತ್ತಲೇ ಇರು ಜೋಕಾಲಿ
ನಿಲ್ಲಿಸ ಬೇಡ ಗೆಳತಿ, ಜೋರಾಗಿ ಜೀಕು.
ಮೆಲ್ಲ ಮೆಲ್ಲನೆ ತೂಗಿ ತೂಗಿ ಆಮೇಲೆ ಜೋರಾಗಿ
ಬೀಳ ಬಾರದು ಆಯತಪ್ಪಿ, ಮಣೆಜಾರಿ, ತಲೆತಿರುಗಿ.

ಎಂದು ಬಾಳೆಂಬ ಜೋಕಾಲಿಯನ್ನು ಸಾಮರಸ್ಯದಿಂದ ಜೀಕುವಂತೆ ‘ಕಿವಿಮಾತು’ ಹೇಳಿದ್ದಾರೆ.

* ಅವಧಿ*

ಎಲ್ಲದಕ್ಕೂ ಒಂದು ಅವಧಿ ನಿಗದಿಯಾಗಿರುತ್ತದೆ. ಎಲ್ಲವೂ ಮುಗಿದ ಮೇಲೆ ನಿರೂಪಯುಕ್ತವಾದುದನ್ನು ಬಿಸಾಕುತ್ತಲೇ ಹೋಗುವ ನಮ್ಮ ನೆನಪೂ ಕೂಡ ಅವಧಿ ಮುಗಿದ ನಂತರ ಸಾಯುತ್ತದೆ. ಎಂದು ಈ ಪದ್ಯದಲ್ಲಿ ಹೇಳುವ ಕವಿ,

ಅವಧಿ ಮುಗಿಯಲಿ ಎಂದು ಕಾತರದಿಂದ
ಕಾಯುವುದು ಕಚೇರಿಯ ವೇಳೆಯಲ್ಲಿ….
ಮುಗಿಯುವುದೇ ಬೇಡವೆಂಬ ಭಾವ
ಅಧಿಕಾರ ಆಯುಷ್ಯದ ಗಳಿಗೆಯಲ್ಲಿ
ಅವಧಿಗೆ ಮಾತ್ರ ಇದಾವುದೂ ಬಾಧಿಸುವುದಿಲ್ಲ.
ಎನ್ನುವ ಸತ್ಯವನ್ನೂ ಬಿಚ್ಚಿಡುತ್ತಾರೆ.

* ಮುಖಾಮುಖಿ.* ಎಂಬ ಪದ್ಯ ನಮ್ಮೆಲ್ಲರ ಅಂತರಂಗ ಬಗೆಯುವಂತಿದೆ. ನಮ್ಮ ನಡೆಗೆ ಕನ್ನಡಿ ಹಿಡಿದು ಇನ್ನೊಮ್ಮೆ ನೋಡಿಕೊಂಡು ಯೋಚಿಸುವಂತೆ ಮಾಡುತ್ತದೆ. ನೋಡಿ…

ಮುಂಜಾನೆ ವಾಕಿಂಗ್ ಹೋಗುತ್ತಿದ್ದಾಗ
ಇಂದು ಅಕಸ್ಮಾತ್ ಹಳೆಯ ಗೆಳೆಯ
ಮತ್ತು ಒಳಗೊಳಗೇ ಶತ್ರು
ಆಗಿದ್ದ ಆತ ಸಿಕ್ಕಿದ.
ಮಾತು ಆಡಲೇ ಬೇಕಾದ ಅನಿವಾರ್ಯತೆಯೇನೂ
ಇಬ್ಬರಿಗೂ ಇರಲಿಲ್ಲ, ಆದರೂ
ಗೊಂದಲದಲ್ಲೇ ಇಬ್ಬರೂ ಮುಗುಳ್ನಕ್ಕೆವು.
ಗರಜು ಇಲ್ಲದಿದ್ದರೂ, ಬಹಳ ಮಾತಾಡಿದೆವು.
ಊರ ವಿಷಯದಿಂದ ಹಿಡಿದು
ಉದ್ಭವ ಠಾಕ್ರೆ, ವಿಪಕ್ಷ, ಯಾರು ಶತ್ರು ಯಾರು ಮಿತ್ರ
ಇತ್ಯಾದಿ… ನಮ್ಮ ಮಾತಿನ ಒಳಸುಳಿಯಲ್ಲಿ
ಇದ್ದುದು ದ್ವೇಷವೇ… ತಿರಸ್ಕಾರವೇ ತಿಳಿಯದೇ
ಒಂದಷ್ಟು ಹೊತ್ತು ಮಾತಾಡಿದೆವು.
ಮುಖಾಮುಖಿಯಾದ ಕಾರಣಕ್ಕೆ.

ಮರುದಿನ ಮುಂಜಾನೆ ಅದೇ ವಾಕಿಂಗ್ ಹೋದಾಗ
ಸಿಕ್ಕಿದ ಹಾಲಿನವ ಹೇಳಿದ:
‘ಆತ’ ನಿನ್ನೆ ಇಹಲೋಕ ತ್ಯಜಿಸಿದ!
ನಾನು ಒಂದು ಕ್ಷಣ ಕಾಲೇ ಏಳದೇ ನಿಂತು ಬಿಟ್ಟೆ.
ಆಮೇಲೆ ನಿನ್ನೆ ಮಾತಾಡಿದ್ದೇ ಒಳ್ಳೆಯದಾಯಿತು.
ಎಂದು ಮೇಲೆ ನೋಡಿ ಶಾಂತಿ ಕೋರಿದೆ.

ನಮ್ಮ ಅಹಮ್ಮಿನ ಕೋಟೆಯಿಂದ ಹೊರಬರದೇ, ದ್ವೇಷ ಸಾಧಿಸುವ ಜನರ ಮನಸ್ಥಿತಿಯನ್ನು ಹೇಳುವ ಈ ಸಾಲುಗಳು ಎಷ್ಟು ಮಾರ್ಮಿಕವಾಗಿದೆ ಅಲ್ಲವೇ?. ನವೋದಯ ಮಾದರಿಯ ಕವನಗಳು ಇವುಗಳಾದರೂ ಕಾಲಿಕ ಪ್ರಭಾವ, ಭಾವನೆ ಹಾಗೂ ಅರ್ಥಗಳು ಹಾಸು ಹೊಕ್ಕಾಗಿರುವುದನ್ನು ನಾವು ಕಾಣಬಹುದಾಗಿದೆ.

ಒಮ್ಮೆ ನೀವೂ ಓದಿ ನೋಡಿ…


  • ಮಾಲತಿ ರಾಮಕೃಷ್ಣ ಭಟ್ 

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW