‘ಇನ್ನೂರು ಹನಿಗಳು’ ಕೃತಿ ಪರಿಚಯ

ಉತ್ತರ ಕನ್ನಡ ಜಿಲ್ಲೆಯ ಅಂಕೋಲದ ಸಾಹಿತಿ ವಿಷ್ಣುನಾಯ್ಕರು ತಮ್ಮ ಹಲವಾರು ಕೃತಿಗಳ ಮೂಲಕ ಕನ್ನಡ ಸಾಹಿತ್ಯಲೋಕಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ. ಲೇಖಕರಾದ ಮಾಲತಿ ರಾಮಕೃಷ್ಣ ಭಟ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಕೃತಿ  : ಇನ್ನೂರು ಹನಿಗಳು
ಲೇಖಕರು: ವಿಷ್ಣು ನಾಯ್ಕ
ಪ್ರಕಾಶನ : ಪರಿಮಳ ಪ್ರಕಾಶನ ಅಂಕೋಲ
ಮುದ್ರಣದ ವರ್ಷ : ೨೦೧೮
ಪುಟಗಳು : ೧೦೦
ಬೆಲೆ : ೮೦ 

ಒಂದು ದೀರ್ಘ ಕವನದ ಹಿಂದಿನ ಮತ್ತು ಮುಂದಿನ ನುಡಿಗಳ ಸಂಬಂಧದಿಂದ ಮುಕ್ತಾಯಗೊಂಡ ಇವನ್ನು “ಮುಕ್ತಕ ಅಥವಾ ಹನಿಗವನ “ಎನ್ನಬಹುದು. ‘ಚುಟುಕು ಬ್ರಹ್ಮ’ ಎಂದೇ ಖ್ಯಾತರಾದ ದಿನಕರ ದೇಸಾಯಿ ಅವರ ಅನೇಕ ಚುಟುಕು, ಚೌಪದಿಗಳನ್ನು ಬಹುವಾಗಿ ಮೆಚ್ಚಿಕೊಂಡ ತಾವು ಅದೇ ಆಶಯದ ದೃಷ್ಟಿಯಿಂದ ಬರೆದ ಹನಿಗವನಗಳು ಇವೆಂದು ಅವರು ಹೇಳಿದ್ದಾರೆ.

ಮಿತ ಪದಗಳ ಬಳಕೆ, ಸರಳತೆ ಹಾಗೂ ಸಂಕ್ಷಿಪ್ತತೆ ಈ ಕವನಗಳ ವಿಶೇಷತೆ ಎನ್ನಬಹುದು. ಹಾಗಾಗಿ ಇವುಗಳ ಬಗ್ಗೆ ಮತ್ತೆ ವಿವರಣೆ ಅಗತ್ಯವಿಲ್ಲ. ಅಲ್ಲವೇ?. ಸುಮಾರು ೨೦೦ ಮುಕ್ತಕಗಳಿರುವ ಈ ಕೃತಿಯಲ್ಲಿ ನನಗೆ ತುಂಬಾ ಮೆಚ್ಚುಗೆಯೆನಿಸಿದ ಇವು ಹೇಗಿದೆ ನೋಡಿ.

*ಧನ್ಯತೆ.

ಬಾಗಿದ
ಬಾಳೆಗೆ
ಗೊನೆ ತುಂಬ
ಹಣ್ಣುಗಳು!

ಈ ಮೇಲಿನ ನಾಲ್ಕಾರೇ ಶಬ್ಧಗಳು ಅದೆಷ್ಟು ಅರ್ಥವಂತಿಕೆ ಇದೆಯಲ್ಲವೇ?

* ಬೆಳಕು

ಬೆಳಕೇ ಅಲ್ಲ;
ಕತ್ತಲೆಯ
ಸುಖದಣ್ಣ!

* ಹೆತ್ತವರಿಗೆ

ಕಲ್ಪನಾ ಚಾವ್ಲಾಗೆ
ಮಂಗಳನ
ಲೋಕ
ಹೆತ್ತ ತಾಯ್ತಂದೆಯರಿಗೆ
ಮಗಳದೇ
ಶೋಕ!

* ಸಲಹೆ – ಸಿಟ್ಟು.

‘ಹತ್ತು ಹೆತ್ತವಳಾಗು ‘
ಹರಸಿದನು
ಪೂಜಾರಿ
ಧುಮು ಧುಮಿಸುತ ನಿಂತು
‘ಥೂ ‘ಎಂದಳು
ನಾರಿ!

* ತಾಯಿ ದೇವರು.

‘ತಾಯಿ ದೇವರೆಂದು ವೇದ
ಬಾಯಿ ಬಿಟ್ಟು ಹೇಳುತಿಹುದು ‘
ಅದಕೆ ಅವಳ ಮನೆಯಲಿಟ್ಟು
ಮಕ್ಕಳೆಲ್ಲ ಹಾರುತಿಹರು!

*ಬುದ್ಧ.

ಮನಸಿನ
ಯುದ್ಧ
ಗೆದ್ದವ
ಬುದ್ಧ!

ಬದಲಾದ ಕಾಲದ ಒತ್ತಡದ ಅಶಾಂತಿಯ ದಿನಗಳಲ್ಲಿ ಚಿಂತಿಸುತ್ತಲೇ ನೆಮ್ಮದಿ ಕಳೆದುಕೊಂಡು ಬಾಳುವ ಮನುಜರಿಗೆ ಅನ್ವಯಿಸುವ ನಿಜವಾದ ಮಾತು ಇದು ಎನಿಸುವುದಿಲ್ಲವೇ?…

* ದುಷ್ಟ

ಹುಡುಕಿಯೇ
ಹುಡುಕಿದರು
ಹೊರಗೆಲ್ಲೂ
ಸಿಗಲಿಲ್ಲ!

ಇಂದಿನ ದಿನಗಳಲ್ಲಿ ನಮ್ಮಲ್ಲೇ ಇರುವ ಸಾಕಷ್ಟು ಅವಗುಣಗಳನ್ನು ತಿಳಿಯದ ನಾವು ಇಂತಹ ಸಾಲುಗಳನ್ನು ಓದಿಯೇ ಅರಿವು ಮೂಡಿಸಿ ಕೊಳ್ಳುವ ಜರೂರು ಇದೆ… ಎಂದೆನಿಸಿತು ನನಗೆ.

ಮಾಲತಿ ರಾಮಕೃಷ್ಣ ಭಟ್ ಅವರು ಸಾಕಷ್ಟು  ಪುಸ್ತಕಗಳನ್ನು ಓದಿ ಓದುಗರಿಗೆ ಪರಿಚಯವನ್ನು ಮಾಡಿಕೊಟ್ಟಿದ್ದಾರೆ. ಅವರು ಮಾಡಿದ  ಪುಸ್ತಕಗಳ ಪರಿಚಯ : 


  • ಮಾಲತಿ ರಾಮಕೃಷ್ಣ ಭಟ್ – ಕಿರಿಯ ಸಹಾಯಕರು, ಲೋಕೋಪಯೋಗಿ ಇಲಾಖೆ ಉಪವಿಭಾಗ, ಸಿದ್ದಾಪುರ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading