ರಕ್ತ ಸಂಬಂಧಗಳಾಚೆಗಿನ ಶ್ರೇಷ್ಠ ಬಂಧ ಸ್ನೇಹ-ಸಂಬಂಧ

ಸ್ನೇಹವು ರಕ್ತದಿಂದ ಹುಟ್ಟಿದ ಸಂಬಂಧವಲ್ಲ, ಅದು ವಿಶ್ವಾಸದಿಂದ ಅರಳಿದ ಸಂಬಂಧ. ಒಬ್ಬರ ಸಂತೋಷ ಮತ್ತೊಬ್ಬರ ನಗುವಾಗುತ್ತದೆ, ಒಬ್ಬರ ನೋವು ಮತ್ತೊಬ್ಬರ ಕಣ್ಣೀರಾಗುತ್ತದೆ.ಆದ್ದರಿಂದಲೇ ಬದುಕಿನಲ್ಲಿ ಸಾವಿರ ಪರಿಚಯಗಳಿದ್ದರೂ, ಒಬ್ಬ ನಿಜವಾದ ಸ್ನೇಹಿತನೇ ಸಾಕು ಎನ್ನುವ ಮಾತು ಇಂದಿಗೂ ಅಮರವಾಗಿದೆ. ಸ್ನೇಹದ ವಿಶೇಷತೆಯ ಕುರಿತು ಲೇಖಕರಾದ ಗೀತಾಂಜಲಿ ಎನ್ ಎಮ್ ಅವರು ಬರೆದ ಲೇಖನವನ್ನು ತಪ್ಪದೆ ಓದಿ…

ರಕ್ತ ಸಂಬಂಧ ದೇಹವನ್ನು ಜೋಡಿಸಿದರೆ, ಸ್ನೇಹ ಸಂಬಂಧ ಆತ್ಮವನ್ನು ಜೋಡಿಸುತ್ತದೆ.

ಹಾಗಾಗಿ ಸಂಬಂಧಗಳೆಂದು ಬಂದಾಗ ಸ್ನೇಹ ಸಂಬಂಧವು ಅಗ್ರಸ್ಥಾನದಲ್ಲಿ ನಿಲ್ಲುತ್ತದೆ. ಕೆಲವು ಸಂಬಂಧಗಳನ್ನು ವಿಧಿ ಬರೆದರೆ ಕೆಲವು ಸಂಬಂಧಗಳನ್ನು ಸಮಾಜ ಗುರುತಿಸುತ್ತದೆ. ಆದರೆ ಒಂದು ಸಂಬಂಧವನ್ನು ಮಾತ್ರ ನಮ್ಮ ಹೃದಯವೇ ಗುರುತಿಸುತ್ತದೆ. ಆ ಸಂಬಂಧಕ್ಕೆ ರಕ್ತದ ಬಣ್ಣವಿಲ್ಲ, ಜಾತಿಯ ಗೋಡೆಯಿಲ್ಲ, ಧರ್ಮದ ಗಡಿಯಿಲ್ಲ, ಸ್ವಾರ್ಥದ ಮುಖವಾಡವಿಲ್ಲ, ಅದೇ ಸ್ನೇಹ ಸಂಬಂಧ ಅದಕ್ಕೇ ಅದು ನಮ್ಮ ಬದುಕಿನ ಅತ್ಯಂತ ಗಾಢವಾದ ಬಂಧವಾಗುತ್ತದೆ.

ಮನುಷ್ಯರಾದ ನಾವು ಹುಟ್ಟುವಾಗ ನಮ್ಮೊಂದಿಗೆ ಅನೇಕ ಸಂಬಂಧಗಳನ್ನು ಹೊತ್ತು ಬರುತ್ತೇವೆ, ಆದರೆ ಬದುಕನ್ನು ಅರಿಯುವ ಹೊತ್ತಿಗೆ ಜೀವನದ ಏಳು ಬೀಳುಗಳ ಪಥದಲ್ಲಿ ಸಾಗುವಾಗ ಹೃದಯದ ಭಾಷೆಯನ್ನು, ಮನಸಿನ ಪ್ರತಿಬಿಂಬವನ್ನು ಅರ್ಥಮಾಡಿಕೊಳ್ಳಬಲ್ಲ ಇನ್ನೊಂದು ಮನಸ್ಸು ಬೇಕೇನಿಸುತ್ತದೆ. ಕಾರಣ ಮನುಷ್ಯನು ಸಂಘ ಜೀವಿ ಬದುಕಿನ ಪಯಣದಲ್ಲಿ ಅಪ್ಪ-ಅಮ್ಮ, ಬಂಧು-ಬಳಗ ಎಲ್ಲರೂ ಜೊತೆಯಾಗುತ್ತಾರೆ ಆದರೆ ನಮ್ಮ ಎಲ್ಲಾ ರಕ್ತ ಸಬಂಧಗಳಾಚೆ ಮನಸ್ಸ ಬಿಚ್ಚಿ ಮಾತನಾಡಲು ಒಂದು ನಂಬಿಕೆಯ ಮನಸು ಪ್ರತಿಯೊಬ್ಬರಿಗೂ ಅವಶ್ಯವಾಗಿರುತ್ತದೆ. ಅಲ್ಲಿ ನಾವು ನಮ್ಮ ನೋವು ನಲಿವು, ಅಸೆ, ಆಕಾಂಕ್ಷೆ, ಕನಸು ಹೀಗೆ ಎಲ್ಲವನ್ನು ಯಾವುದೇ ಒಂದು ಅಂಜಿಕೆ ಇಲ್ಲದೆ ನಂಬಿಕೆಯಿಂದ ಮುಕ್ತವಾಗಿ ಮಾತನಾಡುತ್ತೇವೆ ಎಂದರೆ ಆ ಸಂಬಂಧ ಅಷ್ಟು ತೂಕವುಳ್ಳದ್ದಾಗಿರುತ್ತದೆ ಆ ಪವಿತ್ರ ಸಂಬಂಧವೇ ಸ್ನೇಹ ಹಾಗಾಗಿ ಸ್ನೇಹಕ್ಕೆ ಜಾತಿ ಇಲ್ಲ, ಧರ್ಮ ಇಲ್ಲ, ಭಾಷೆ ಇಲ್ಲ, ವರ್ಗ ಇಲ್ಲ ವಯಸ್ಸಿನ ಮಿತಿಯಿಲ್ಲ, ಅದು ಹೃದಯಗಳ ನಡುವೆ ಕಟ್ಟುವ ವಿಶ್ವಾಸದ ಸೇತುವೆ. ಜೀವನದಲ್ಲಿ ಸಾವಿರ ಜನರನ್ನು ಭೇಟಿಯಾಗಬಹುದು ಆದರೆ ಮನಸ್ಸಿನ ಬಾಗಿಲ ದಾಟಿ ಒಳಗೆ ಪ್ರವೇಶಿಸುವವರು ಕೆಲವೇ ಕೆಲವರು ಅವರೇ ಬದುಕಿನ ಪಯಣದ ನಿಜವಾದ ಸ್ನೇಹಿತರು.

ಮಾತುಗಳು ಮುಗಿದರೂ ಮೌನವನ್ನು ಅರ್ಥಮಾಡಿಕೊಳ್ಳುವ, ಕಣ್ಣೀರು ಜಾರುವ ಮೊದಲೇ ನೋವನ್ನು ಓದುವ, ಯಶಸ್ಸಿಗಿಂತ ವ್ಯಕ್ತಿಯನ್ನು ಪ್ರೀತಿಸುವ ಆ ಅಪರೂಪದ ಬಂಧವೇ ಸ್ನೇಹ. “ಆ ಸ್ನೇಹವು ರಕ್ತದಿಂದ ಹುಟ್ಟಿದ ಸಂಬಂಧವಲ್ಲ, ಅದು ವಿಶ್ವಾಸದಿಂದ ಅರಳಿದ ಸಂಬಂಧ” ಅಲ್ಲಿ ಅಧಿಕಾರವಿಲ್ಲ, ಅಹಂಕಾರವಿಲ್ಲ, ಲೆಕ್ಕಾಚಾರವಿಲ್ಲ. ಒಬ್ಬರ ಸಂತೋಷ ಮತ್ತೊಬ್ಬರ ನಗುವಾಗುತ್ತದೆ, ಒಬ್ಬರ ನೋವು ಮತ್ತೊಬ್ಬರ ಕಣ್ಣೀರಾಗುತ್ತದೆ. ಆದ್ದರಿಂದಲೇ ಬದುಕಿನಲ್ಲಿ ಸಾವಿರ ಪರಿಚಯಗಳಿದ್ದರೂ, ಒಬ್ಬ ನಿಜವಾದ ಸ್ನೇಹಿತನೇ ಸಾಕು ಎನ್ನುವ ಮಾತು ಇಂದಿಗೂ ಅಮರವಾಗಿದೆ. ಹಾಗಾಗಿ ಸ್ನೇಹವು ಜೀವನದ ಒಂದು ಅಧ್ಯಾಯವಲ್ಲ,ಇಡೀ ಬದುಕನ್ನು ಓದಿಸಿಕೊಂಡು ಹೋಗುವ ಅಕ್ಷರಮಾಲೆ ಇದ್ದಂತೆ, ಮನುಷ್ಯನ ಬದುಕಿನಲ್ಲಿ ದೇವರು ಕೊಡುವ ಅತ್ಯಂತ ಸುಂದರ ಉಡುಗೊರೆಗಳು ಎಂದಿದ್ದರೆ ಅದರಲ್ಲಿ ಒಂದು ನಿಜವಾದ ಪ್ರಾಮಾಣಿಕ ಸ್ನೇಹ.

ಸ್ನೇಹ ದಿನದ ಹಿನ್ನೆಲೆ

ಸ್ನೇಹದ ಮಹತ್ವವನ್ನು ವಿಶ್ವದಾದ್ಯಂತ ಸಾರುವ ಉದ್ದೇಶದಿಂದ ಪ್ರತಿವರ್ಷ ಜುಲೈ 30ರಂದು ಅಂತರರಾಷ್ಟ್ರೀಯ ಸ್ನೇಹ ದಿನವನ್ನು ಆಚರಿಸಲಾಗುತ್ತದೆ. 2011ರಲ್ಲಿ ವಿಶ್ವಸಂಸ್ಥೆಯು ಈ ದಿನವನ್ನು ಅಧಿಕೃತವಾಗಿ ಘೋಷಿಸಿತು. ಆದರೆ ಇಲ್ಲಿ ಗಮನಿಸಬೇಕಾದ ವಿಷಯ ಎಂದರೆ, ವಿಶ್ವದ ಎಲ್ಲ ದೇಶಗಳಲ್ಲಿ ಒಂದೇ ದಿನಾಂಕದಲ್ಲಿ ಆಚರಿಸಲಾಗುವುದಿಲ್ಲ,ಭಾರತ ಹಾಗೂ ಇತರೆ ಕೆಲವು ದೇಶಗಳಲ್ಲಿ ಆಗಸ್ಟ್ ತಿಂಗಳ ಮೊದಲ ಭಾನುವಾರ ಆಚರಿಸುವ ಸಂಪ್ರದಾಯವಿದೆ.

ಹಾಗಾಗಿ ಈ ಬಾರಿ ಆಗಸ್ಟ್ 2, ಭಾನುವಾರ ಬಂದಿದೆ, ವಿಭಿನ್ನ ದೇಶಗಳು, ಸಂಸ್ಕೃತಿಗಳು ಮತ್ತು ಜನಾಂಗಗಳ ನಡುವೆ ಶಾಂತಿ, ಪರಸ್ಪರ ಗೌರವ ಮತ್ತು ಸೌಹಾರ್ದವನ್ನು ಬೆಳೆಸುವ ಸೇತುವೆಯಾಗಿ ಸ್ನೇಹ ಕಾರ್ಯನಿರ್ವಹಿಸಬೇಕು ಎಂಬುದು ಇದರ ಆಶಯ.

ಫೋಟೋ ಕೃಪೆ : ಅಂತರ್ಜಾಲ

ಭಾರತದ ಸಂಸ್ಕೃತಿಯಲ್ಲಿ ಸ್ನೇಹ

ನಮ್ಮ ಪುರಾಣ ಇತಿಹಾಸಗಳನ್ನು ನೋಡಿದಾಗ ಪ್ರಾಚೀನ ಕಾಲದಿಂದಲೂ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಸ್ನೇಹಕ್ಕೆ ಅತ್ಯಂತ ಉನ್ನತ ಸ್ಥಾನ ನೀಡಲಾಗಿದೆ,ಇದು ಮನುಷ್ಯ ನಾಗರಿಕತೆಯಷ್ಟೇ ಹಳೆಯದು ಇದಕ್ಕೆ ಸಾಕ್ಷಿ ಎಂದರೆ ನಮ್ಮ ರಾಮಾಯಣ ಮಹಾಭಾರತದಲ್ಲಿ ಬರುವ ಶ್ರೀಕೃಷ್ಣ-ಸುಧಾಮರ ಸ್ನೇಹ, ರಾಮ-ಸುಗ್ರೀವರ ವಿಶ್ವಾಸ, ಕರ್ಣ-ದುರ್ಯೋಧನರ ನಿಷ್ಠೆ ಇವೆಲ್ಲವೂ ಸ್ನೇಹದ ಪವಿತ್ರತೆಯನ್ನು ಮತ್ತು ಮಹತ್ವವನ್ನು ಪರಿಚಯಿಸುತ್ತವೆ. ನಮ್ಮ ಸಾಹಿತ್ಯ, ಇತಿಹಾಸ ಮತ್ತು ಜೀವನದ ಪ್ರತಿಯೊಂದು ಅಧ್ಯಾಯದಲ್ಲೂ ಸ್ನೇಹಕ್ಕೆ ವಿಶಿಷ್ಟ ಸ್ಥಾನವಿದೆ ಹಾಗಾಗಿ ಈ ಕಥೆಗಳು ಕೇವಲ ಪುರಾಣಗಳಲ್ಲ, ಬದುಕಿನಲ್ಲಿ ಸ್ನೇಹದ ಅರ್ಥವನ್ನು ಕಲಿಸುವ ಶಾಶ್ವತ ಪಾಠಗಳಾಗಿವೆ.

ಇಂದಿನ ಸಮಾಜದಲ್ಲಿ ಸ್ನೇಹ

ಇಂದಿನ ತಾಂತ್ರಿಕ ಯುಗದಲ್ಲಿ ಸಾಮಾಜಿಕ ಜಾಲತಾಣಗಳದ್ದೇ ದರ್ಬಾರು, ಇಂದು ಫೇಸ್ಬುಕ್ ಇನ್ಸ್ಟಾಗ್ರಾಮ್ ಸೇರಿ ಅನೇಕ ಸಂಪರ್ಕಗಳಲ್ಲಿ ಸಾವಿರಾರು “ಫ್ರೆಂಡ್ಸ್” ಗಳು ನಮ್ಮ ಪಟ್ಟಿಯಲ್ಲಿದ್ದರೂ ಎಲ್ಲವೂ ವ್ಯರ್ಥವೇ ಹೊರತು ಅರ್ಥವಿಲ್ಲ. ನಮ್ಮ ಕಷ್ಟದ ನಷ್ಟದ ಪರಿಸ್ಥಿತಿಯಲ್ಲಿ ಮನದ ನೋವನ್ನು ಹಂಚಿಕೊಳ್ಳಲು ನಂಬಿಕೆಗೆ ಅರ್ಹವಾದ ಒಂದು ನಿಜವಾದ ಸಂಬಂಧ ಸಿಕ್ಕರೆ ಅದೇ ದೊಡ್ಡ ಭಾಗ್ಯ, ಇದು ತಾಂತ್ರಿಕ ಡಿಜಿಟಲ್ ಯುಗ ಒಂದು ಕ್ಷಣದಲ್ಲಿ ಯಾರನ್ನಾದರೂ ಸಹ ಮಾತನಾಡಿಸಬಹುದು, ಎಲ್ಲಿಯಾದರೂ ಸಹ ಹೋಗಬಹುದು ಯಾವುದೇ ವಿಚಾರಗಳನ್ನು ಫೋನ್ ಮೂಲಕ ತಕ್ಷಣವೇ ಹಂಚಿಕೊಳ್ಳಬಹುದು, ಭೇಟಿಯಾಗಬೇಕೆಂದರೆ ಅನಿಸಿದಾಗಲೇ ಭೇಟಿಯಾಗಬಹುದು ಅಷ್ಟೊಂದು ಸ್ನೇಹಿತರ ಸಂಪರ್ಕವಿರುತ್ತದೆ,
ಆದರೆ ಇವೆಲ್ಲದರ ನಡುವೆ ಒಂದು ಕಹಿ ಸತ್ಯವೆಂದರೆ ಇಂದು ಜನರು ಹಿಂದೆಂದಿಗಿಂತ ಹೆಚ್ಚು ಸಂಪರ್ಕದಲ್ಲಿದ್ದಾರೆ ಹಾಗೆಯೇ ಹಿಂದೆಂದಿಗಿಂತ ಹೆಚ್ಚು ಏಕಾಂಗಿಗಳಾಗಿದ್ದಾರೆ ಎಂಬುದು ವಿಚಿತ್ರವಾದರೂ ಸತ್ಯ.

ಜೀವನದ ಹೋರಾಟದಲ್ಲಿ ನಾವು ಕುಸಿದಾಗ, ಮನಸ್ಸು ನೋವಿನಿಂದ ಮೌನವಾದಾಗ, ಕೈ ಹಿಡಿದು ಧೈರ್ಯ ತುಂಬುವವರು ಬಹಳ ವಿರಳ ಇಂದು ಸಂಬಂಧಗಳಿಗಿಂತ ಸ್ವಾರ್ಥವೇ ಹೆಚ್ಚಾಗುತ್ತಿರುವುದು, ವಿಶ್ವಾಸಕ್ಕಿಂತ ಮೋಸವೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದು ನೋವಿನ ಸಂಗತಿ. ಇಂತಹ ಕಾಲಘಟ್ಟದಲ್ಲಿ ನಮ್ಮ ಕಣ್ಣೀರನ್ನು ಮಾತಿಲ್ಲದೆ ಅರ್ಥಮಾಡಿಕೊಳ್ಳುವ, ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಜೊತೆಯಾಗುವ ಒಂದು ನಿಜವಾದ ಸ್ನೇಹ ಸಿಕ್ಕರೆ ಅದಕ್ಕಿಂತ ದೊಡ್ಡ ಸಂಪತ್ತು ಮತ್ತೊಂದಿಲ್ಲ. ತಂತ್ರಜ್ಞಾನ ನಮಗೆ ಸಾವಿರಾರು ಸಂಪರ್ಕಗಳನ್ನು ನೀಡಬಹುದು, ಆದರೆ ನಿಸ್ವಾರ್ಥ ಸ್ನೇಹವನ್ನು ನೀಡಲು ಸಾಧ್ಯವಿಲ್ಲ. ನಿಜವಾದ ಸ್ನೇಹ ಹುಟ್ಟುವುದು ಹೃದಯಗಳಲ್ಲಿ, ಮೊಬೈಲ್ ಪರದೆಗಳಲ್ಲಲ್ಲ.

ಫೋಟೋ ಕೃಪೆ : ಅಂತರ್ಜಾಲ

ಇಂದು ಮೊಬೈಲ್, ಸಾಮಾಜಿಕ ಜಾಲತಾಣಗಳು ಕೃತಕ ಸಂವಹನಗಳ ನಡುವೆ ಮನಸ್ಸುಗಳು ದೂರವಾಗುತ್ತಿವೆ. ಇಂತಹ ಸಂದರ್ಭದಲ್ಲಿ ಒಂದು ನಿಜವಾದ ನಿಸ್ವಾರ್ಥ ಸ್ನೇಹ ಸಂಬಂಧ ಸಿಕ್ಕಿದರೆ ಅದು ಅದೃಷ್ಟವೆನ್ನಬಹುದು ಆ ಸ್ನೇಹ ಒಬ್ಬರನ್ನು ಖಿನ್ನತೆಯಿಂದ ಹೊರತೆಗೆದು ಬದುಕಿನತ್ತ ಮರಳಿ ಕರೆತರುವ ಶಕ್ತಿಯಾಗಬಹುದು, ಕಷ್ಟಕ್ಕೆ ಹೆಗಲಾಗಬಹುದು
ನೋವಿಗೆ ಮುಲಾಮು ಆಗಬಹುದು.

ಇಂದು ದ್ವೇಷಗಳು ವೈರಲ್ ಆಗುತ್ತಿವೆ. ಸುಳ್ಳು ಸುದ್ದಿಗಳು ಕ್ಷಣಾರ್ಧದಲ್ಲಿ ಹರಡುತ್ತಿವೆ. ಸ್ವಾರ್ಥ ಸಂಬಂಧಗಳು ಹೆಚ್ಚಾಗುತ್ತಿವೆ. ಇಂತಹ ಸಮಯದಲ್ಲಿ ಮನುಷ್ಯರನ್ನು ಮತ್ತೆ ಮನುಷ್ಯರನ್ನಾಗಿಸುವ ಶಕ್ತಿ ಸ್ನೇಹದಲ್ಲಿದೆ.

ಒಳ್ಳೆಯ ಸ್ನೇಹಿತ ಒಳ್ಳೆಯ ನಾಗರಿಕನನ್ನು ರೂಪಿಸುತ್ತಾನೆ. ಒಳ್ಳೆಯ ನಾಗರಿಕ ಉತ್ತಮ ಸಮಾಜವನ್ನು ಕಟ್ಟುತ್ತಾನೆ. ಉತ್ತಮ ಸಮಾಜವೇ ಶಾಂತಿಯುತ ಸಮಾಜಕ್ಕೆ ಮುನ್ನುಡಿ, ಕುವೆಂಪು ಅವರ ಮಾನವತೆಯ ಚಿಂತನೆಯ ಸಾರವೂ ಇದೇ ಆಗಿದೆ ಅವರು ಮನುಷ್ಯನನ್ನು ಮನುಷ್ಯನಾಗಿ ಕಾಣುವ ವಿಶ್ವಮಾನವತೆಯ ಕನಸು ಕಂಡರು. ಆ ಕನಸನ್ನು ಸಾಕಾರಗೊಳಿಸುವ ಮೊದಲ ಮೆಟ್ಟಿಲೇ ನಿಸ್ವಾರ್ಥ ಸ್ನೇಹ ಅದು ರಾಷ್ಟ್ರದ ಏಕತೆಗೆ ಅಡಿಪಾಯವಾಗುತ್ತದೆ.

ಹಾಗಾಗಿ ಸ್ನೇಹ ವ್ಯಕ್ತಿಗಳನ್ನು ಮಾತ್ರವಲ್ಲ, ಸಮಾಜವನ್ನೂ ಕಟ್ಟುತ್ತದೆ. ದ್ವೇಷ ಇರುವಲ್ಲಿ ಸ್ನೇಹ ಬೆಳೆದರೆ ಶಾಂತಿ ಹುಟ್ಟುತ್ತದೆ. ಭಿನ್ನಾಭಿಪ್ರಾಯಗಳಿರುವಲ್ಲಿ ಸ್ನೇಹ ಬೆಳೆಯಿದರೆ ಸಹಬಾಳ್ವೆ ಸಾಧ್ಯವಾಗುತ್ತದೆ. ಕುಟುಂಬದಿಂದ ರಾಷ್ಟ್ರದವರೆಗೆ ಎಲ್ಲೆಡೆ ಸ್ನೇಹದ ಮನೋಭಾವ ಬೆಳೆದಾಗ ಮಾತ್ರ ಸಮಾನತೆ, ಸಹಿಷ್ಣುತೆ ಮತ್ತು ಮಾನವೀಯತೆ ಗಟ್ಟಿಯಾಗುತ್ತದೆ.


  • ಗೀತಾಂಜಲಿ ಎನ್ ಎಮ್ – ಕೊಡಗು.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading