ಎಂ.ವಿ. ನಾಗರಾಜ ರಾವ್ ಅವರ ಅನುವಾದದ ‘ಬಂಕಿಮಚಂದ್ರರ ಶ್ರೇಷ್ಠ ಕತೆಗಳು’ ಕೃತಿಯಲ್ಲಿ ಅಂದಿನ ಸ್ವಾತಂತ್ರ್ಯ ಹೋರಾಟದ ದಿನಗಳಲ್ಲಿ ಈ ಏಕತೆಯ ಪ್ರೇರಣಾ ಗೀತೆಯನ್ನು ರಚಿಸಿದ ಮಹಾನ್ ದೇಶಭಕ್ತರಾದ ಬಂಕಿಮಚಂದ್ರರ ೮ ಕಾದಂಬರಿಗಳ ಕಥಾರೂಪ ಸಂಗ್ರಹವಿದು. ಈ ಕೃತಿಯ ಕುರಿತು ಮಾಲತಿ ರಾಮಕೃಷ್ಣ ಭಟ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಕೃತಿ : ಬಂಕಿಮಚಂದ್ರರ ಶ್ರೇಷ್ಠ ಕತೆಗಳು
ಅನುವಾದ ಲೇಖಕರು: ಎಂ.ವಿ. ನಾಗರಾಜ ರಾವ್
ವಸಂತ ಪ್ರಕಾಶನ ಬೆಂಗಳೂರು.
ಮುದ್ರಣದ ವರ್ಷ: ೨೦೧೬.
ಪುಟಗಳು: ೨೪೦.
ಬೆಲೆ: ರೂ. ೧೭೦.
————————————————-
“ವಂದೇ ಮಾತರಂ” ಗೀತೆಗೆ ಈಗ ೧೫೦ ವರ್ಷ.!!
ಅಂದಿನ ಸ್ವಾತಂತ್ರ್ಯ ಹೋರಾಟದ ದಿನಗಳಲ್ಲಿ ಈ ಏಕತೆಯ ಪ್ರೇರಣಾ ಗೀತೆಯನ್ನು ರಚಿಸಿದ ಮಹಾನ್ ದೇಶಭಕ್ತರಾದ ಬಂಕಿಮಚಂದ್ರರ ೮ ಕಾದಂಬರಿಗಳ ಕಥಾರೂಪ ಸಂಗ್ರಹವಿದು. ಸರ್ಕಾರದ ಬೇರೆ ಬೇರೆ ಇಲಾಖೆಗಳಲ್ಲಿ ಅಧಿಕಾರಿಯಾಗಿ ಕೆಲಸ ನಿರ್ವಹಿಸಿದ ಬಂಕಿಮಚಂದ್ರರ ಸೇವೆಯನ್ನು ಗಮನಿಸಿ ಬ್ರಿಟಿಷ್ ಸರ್ಕಾರವು ಅವರಿಗೆ “ರಾವ್ ಬಹದ್ದೂರ್ “ಎಂಬ ಬಿರುದು ನೀಡಿ ಗೌರವಿಸಿತ್ತು.
ಭಾರತದ ಚಾರಿತ್ರಿಕ ಘಟನೆಗಳನ್ನು ಆಧಾರವಾಗಿಟ್ಟುಕೊಂಡು ಬರೆದ ಇವರ ಅನೇಕ ಕಾದಂಬರಿಗಳು ಅವರೇ ನಡೆಸುತ್ತಿದ್ದ ಬಂಗಾಳಿ ಪತ್ರಿಕೆ “ವಂಗ ದರ್ಶನ”ದಲ್ಲಿ ಧಾರಾವಾಹಿಯಾಗಿ ಪ್ರಕಟವಾದವು.ಅದನ್ನು ಲೇಖಕರಾದ ಎಂ.ವಿ. ನಾಗರಾಜ ರಾವ್ ಅವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ.

ಇನ್ನು ಕತೆಗಳ ಪರಿಚಯ ನೋಡೋಣವೇ…?
*ರಾಧಾ ರಾಣಿ
ಮಹೇಶಪುರದಲ್ಲಿ ಲಕ್ಷಾಂತರ ರೂಪಾಯಿಗಳನ್ನು ಖರ್ಚುಮಾಡಿ ರಾಧಾರಾಣಿಯು “ರುಕ್ಮಿಣಿ ಕುಮಾರ” ಎನ್ನುವ ಹೆಸರಿನ ಅನಾಥಶ್ರಮವೊಂದನ್ನು ಪ್ರಾರಂಭಿಸಿದಳು. ಹಣವಂತರ ಮನೆಯಲ್ಲಿಯೇ ಹುಟ್ಟಿ ಬೆಳೆದ ಆಕೆಯ ತಂದೆ ಅನಾರೋಗ್ಯದಿಂದ ಮರಣಿಸಿದ್ದರು.ತಾಯಿ ಆಸ್ತಿಯನ್ನು ಉಳಿಸಿ ಕೊಳ್ಳಲು ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದಳು. ನ್ಯಾಯಾಲಯದ ಖರ್ಚಿಗಾಗಿ ಉಳಿದ ಹಣವೆಲ್ಲಾ ಖಾಲಿಯಾಗಿ ಈಗ ಚಿಕ್ಕದೊಂದು ಮನೆಯಲ್ಲಿ ತಾಯಿ-ಮಗಳು ಇರುವಂತ ಸ್ಥಿತಿ ಉಂಟಾಗಿತ್ತು.
ರಾಧಾರಾಣಿಯು ರಥಯಾತ್ರೆಯಲ್ಲಿ ಹೂ ಮಾರುತ್ತಿದ್ದಳು.ಅದೊಂದು ದಿನ ಜೋರು ಮಳೆಯಿಂದಾಗಿ ಹೂವಿನ ವ್ಯಾಪಾರವಾಗದೇ, ದಾರಿಯುದ್ದಕ್ಕೂ ಇರುವ ನೀರಿನ ಗುಂಡಿಯಲ್ಲಿ ಕಾಲಿಡುತ್ತಾ ಆಕೆ ತಡವರಿಸಿಕೊಂಡು ನಿರಾಶೆಯಿಂದ ಬರುತ್ತಿದ್ದಳು. ಗಾಢಾಂಧಕಾರದಲ್ಲಿ ಯಾರಿಗೋ ಡಿಕ್ಕಿ ಹೊಡೆದಳು.
‘ಯಾರು ನೀನು?.. ಎಂದು ಕೇಳಿದ ಅದೊಂದು ಪುರುಷನ ಧ್ವನಿಯಾಗಿತ್ತು.! ಆತ ಅವಳ ಬಗ್ಗೆ ವಿಚಾರಿಸಿ ಮನೆತನಕ ಬಿಟ್ಟು, ಅಷ್ಟೂ ಹೂವನ್ನೂ ತಾನೇ ಕೊಂಡು, ಅವಳಿಗೆ ದಮಡಿ ನಾಣ್ಯ ಕೊಟ್ಟು ನಡೆದಿದ್ದ.
ಕರುಣಾಮಯಿಯಾದ ಆತನ ಮುಖವನ್ನೂ ನೋಡಲಾಗದ ಆಕೆಗೆ ರೂಪಾಯಿಯ ಮೇಲೆ “ರುಕ್ಮಿಣಿರಾಯ “ಎಂದು ಬರೆದಿದ್ದನ್ನು ಕಂಡು ಆ ಹೆಸರಿನ ವ್ಯಕ್ತಿಯನ್ನು ಹುಡುಕಲು ಪ್ರಯತ್ನಿಸುತ್ತಾ , ತನ್ನಷ್ಟಕ್ಕೇ ಕುರುಡು ಪ್ರೇಮವನ್ನು ಬೆಳೆಸಿಕೊಂಡು ಆತನನ್ನೇ ಮದುವೆಯಾಗಲು ಬಯಸಿದಳು .
ಅದೃಷ್ಟವಶಾತ್ ಮೊಕದ್ದಮೆಯ ತೀರ್ಪು ಅವರ ಪರವಾಗಿಯೇ ಆಗಿ ಸಮಸ್ತ ಆಸ್ತಿಯೂ ಅವಳ ಕೈ ಸೇರಿತ್ತು. ಅವಳ ತಾಯಿಯ ಆರೋಗ್ಯವೂ ಬಿಗಡಾಯಿಸುತ್ತಿತ್ತು.ಮಗಳ ಮದುವೆಯ ಕುರಿತು ಪರಿಚಯದ ವ್ಯಕ್ತಿ ಕಾಮಾಖ್ಯ ಬಾಬು ಅವರಲ್ಲಿ ಹೇಳಿದ್ದಳು.ಅವರ ಮಗಳು ಬಸಂತಿ ರಾಧಾಳ ವಯಸ್ಸಿನವಳೇ ಆಗಿದ್ದು ಅವರಿಬ್ಬರೂ ಸ್ನೇಹಿತೆಯರಾಗಿದ್ದರು. ತನ್ನ ಮನಸ್ಸಿನಲ್ಲಿದ್ದುದನ್ನು ಅವಳಲ್ಲಿ ಹೇಳಿ, ಬೇರೆ ಯಾರನ್ನೂ ತಾನು ಮದುವೆಯಾಗಲಾರೆ ಎಂದು ಒಂಟಿಯಾಗಿ ಉಳಿದಿದ್ದಳು.
ಅದೊಂದು ದಿನ ಅನಾಥಾಶ್ರಮಕ್ಕೆ ಬಂದ ಬೆಲೆಬಾಳುವ ವಜ್ರದುಂಗುರ ಧರಿಸಿದ ಶ್ರೀಮಂತ ವ್ಯಕ್ತಿ ಯಾರು? ಆತ ರಾಧಾರಾಣಿಯನ್ನು ಗುರ್ತಿಸಿದನೆ?.. ಗೆಳತಿ ಬಸಂತಿ ಅವನಿಗೊಡ್ಡಿದ ಪರೀಕ್ಷೆಯೇನು?.. ದೇವೇಂದ್ರ ಉರುಫ್ ರುಕ್ಮಿಣಿರಾಯನ ಮೂಲಹೆಸರು ಏನು?…

*ಸೀತಾರಾಮ
ನೂರಾ ಎಂಬತ್ತು ವರ್ಷಗಳ ಹಿಂದಿನ ಮಾತು. ಒಬ್ಬ ಫಕೀರ ನಗರದ ಕಿರಿದಾದ ಗಲ್ಲಿಯಲ್ಲಿ ರಸ್ತೆಗೆ ಅಡ್ಡಲಾಗಿ ಮಲಗಿದ್ದ. ಇದರಿಂದ ಗಲ್ಲಿಯಲ್ಲಿ ನಡೆಯುವ ಜನರಿಗೆ ತೊಂದರೆಯಾಗುತ್ತಿತ್ತು. ದಾರಿಹೋಕ ಗಂಗಾರಾಮ ಹಿಂದೂ ಜಾತಿಯಲ್ಲಿ ಕಾಯಸ್ಥ. ಮೃತ್ಯುಶಯ್ಯೆಯಲ್ಲಿದ್ದ ತಾಯಿಗಾಗಿ ವೈದ್ಯರನ್ನು ಕರೆಯಲು ಹೊರಟಿದ್ದ ಆತ “ದಾರಿಬಿಡಿ.. ನಾನು ತೊಂದರೆಯಲ್ಲಿದ್ದೇನೆ’ ಎಂದು ಫಕೀರನನ್ನು ಬೇಡಿಕೊಂಡ.
ಆದರೆ ಆತ ಬೇಕೆಂದೇ ಹಾಯಾಗಿ ಕಣ್ಮುಚ್ಚಿ ಮಲಗಿದ್ದ. ಬೇರೆ ಏನೂ ತೋಚದೇ ಗಂಗಾರಾಮ ಅನಿವಾರ್ಯವಾಗಿ ಫಕೀರನ ಮೇಲೆ ಹಾರಿ ಮುಂದೆ ನಡೆದ. ಆದರೆ ದುರಾದೃಷ್ಟವಶಾತ್ ಅವನ ಕಾಲು ಫಕೀರ ತಗುಲಿತು. ಇದರಲ್ಲಿ ಫಕೀರನ ತಂತ್ರವೂ ಅಡಗಿತ್ತು. ಇದರಿಂದ ದುಃಖಗೊಂಡ ಗಂಗಾರಾಮ ದಾಪುಗಾಲು ಹಾಕುತ್ತಾ ವೈದ್ಯರ ಮನೆಗೆ ಬಂದ. ಆದರೆ ಎಲ್ಲವೂ ವ್ಯರ್ಥವಾಗಿತ್ತು.ತಾಯಿ ತೀರಿಕೊಂಡಿದ್ದಳು. ಶ್ಮಶಾನದಿಂದ ಹಿಂದಿರುಗುವಾಗ ಫಕೀರನ ದೂರಿನ ಮೇರೆಗೆ ಸಿಪಾಯಿಗಳು ಅವನನ್ನು ಬಂಧಿಸಿದ್ದರು. ಗಂಗಾರಾಮನ ಸೋದರಿ ಶ್ರೀ ನೆರೆಮನೆಯ ಕಿಟಕಿಯಿಂದ ಇದನ್ನೆಲ್ಲಾ ನೋಡುತ್ತಿದ್ದಳು. ಅವಳ ಕಣ್ಣೀರು ಖೋಡಿಯಾಗಿ ಹರಿಯಿತು. ಕಾರಣವೇನೆಂದರೆ ಶಾಹಿ ಸಾಹಿಬ್ ಕಾಜಿ ಫಕೀರನ ಪರವಾಗಿ ನ್ಯಾಯತೀರ್ಮಾನ ಮಾಡಿ ಗಂಗಾರಾಮನನ್ನು ಜೀವಂತವಾಗಿ ಸಮಾಧಿ ಮಾಡುವಂತೆ ಆಜ್ಞೆ ಮಾಡಿದ್ದ.
ಶ್ರೀ ನೆರೆಮನೆಯ ವೃದ್ಧೆಯೊಡನೆ ರಾಜನನ್ನು ಕಾಣಲು ಹೋದಳು.ಅಲ್ಲಿ ಕಾವಲುಗಾರರು ತಡೆದಾಗ ಅವಳು ಮಾಡಿದ ಉಪಾಯವೇನು?. ಸ್ವಾಮಿ ಸೀತಾರಾಮನಲ್ಲಿ ಅವಳು ಅಳುತ್ತಾ ತನ್ನ ಅಣ್ಣನನ್ನು ಬಿಡಿಸಲು ಸಹಾಯ ಮಾಡುವಂತೆ ಕೋರಿದಳು. ಎಷ್ಟೇ ಕಷ್ಟವಾದರೂ ಸರಿ ತಾನು ಗಂಗಾರಾಮನನ್ನು ಬಿಡಿಸಿಕೊಂಡು ಬರುವೆನೆಂದು ಸೀತಾರಾಮ ಶ್ರೀಗೆ ಮಾತು ಕೊಟ್ಟ.
ಮುಂದೇನಾಯಿತು?… ಅವನಿಗೊದಗಿದ ಅಪಾಯಗಳೇನು?. ಸೀತಾರಾಮನು ಶ್ರೀ ಗೆ ಅಷ್ಟೊಂದು ಕೃಪೆ ತೋರಲು ಕಾರಣವೇನು?. ಎನ್ನುವುದು ಕುತೂಹಲಕಾರಿಯಾಗಿದೆ.
ಮಹಮ್ಮದ್ ಪುರದ ಫಕೀರ ಹಾಗೂ ಶ್ಯಾಮಪುರದ ಸೀತಾರಾಮ ಇವರ ರಾಜ್ಯಸ್ಥಾಪನೆಯ ಕೆಲಸದಲ್ಲಿ ಸೋತವರು ಯಾರು?. ಶ್ರೀ ತಪ್ಪಿಸಿಕೊಳ್ಳಲು ಹೋಗಿದ್ದೆಲ್ಲಿಗೆ? ಅವಳಿಗೆ ಸಹಾಯ ಮಾಡಿದವರು ಯಾರು?…ಇದೆಲ್ಲವೂ ಸಾಹಸಮಯವಾಗಿದೆ.
ಒಂದು ರಾಜ್ಯದ ಅಧಿಕಾರ -ಆಡಳಿತದ ವಿಷಯ ಬಂದಾಗ ನಿಷ್ಠಾವಂತ ಜನರು ಏನೆಲ್ಲಾ ಕಷ್ಟ ಅನುಭವಿಸ ಬೇಕಾಗುತ್ತದೆ.!! ದ್ವೇಷ -ದಂಗೆಯ ಗಲಾಟೆ ಎಬ್ಬಿಸಲು ಚಿಕ್ಕ ಪುಟ್ಟ ವಿಷಯಗಳೇ ಸಾಕು.
ಕೊನೆಗಾದರೂ ಶ್ರೀ ಗೆ ತನ್ನ ಸಹೋದರ ಸಿಕ್ಕಿದನೆ?. ಸೀತಾರಾಮನ ರಾಜ್ಯ ಮುಸಲ್ಮಾನರ ಲಗ್ಗೆಯಿಂದ ಅವಸಾನ ಕಂಡಿದ್ದು ಹೇಗೆ?… ಎಲ್ಲವನ್ನೂ ತಿಳಿಯಲು ನೀವು ಕೃತಿಯನ್ನು ಓದಿ. ಕೃತಿಯಲ್ಲಿರುವ ಕಪಾಲಕುಂಡಲ, ಎರಡು ಉಂಗುರಗಳು, ರಜನಿ, ವಿಷವೃಕ್ಷ, ಮೃಣಾಲಿನಿ, ಇಂದಿರಾ, ಹೀಗೆ ಬಹುತೇಹ ಸ್ತ್ರೀ ಸಮಸ್ಯೆಗಳ ಚಿಂತನೆ ಇರುವ ಕಥೆಗಳೇ ಆಗಿದ್ದು ,ಅಂದಿನ ಕಾಲದ ಮುಗ್ಧ ಹೆಣ್ಣುಮಕ್ಕಳ ಜೀವನದ ಬಗ್ಗೆ ಹೇಳುತ್ತದೆ.
ಅಂದಿಗೂ- ಇಂದಿಗೂ ಸಮಾಜದಲ್ಲೂ ಮತ್ತು ಜನರ ವ್ಯಕ್ತಿತ್ವದಲ್ಲಿಯೂ ಸಾಕಷ್ಟು ಸುಧಾರಣೆಯಾಗಿದೆ ಎಂಬುದು ಸತ್ಯವೇ ಆಗಿದ್ದರೂ, ಇಲ್ಲಿನ ಕಥೆಗಳು ಸೊಗಸಾಗಿದ್ದು ಓದಿಸಿಕೊಂಡು ಹೋಗುತ್ತದೆ.
- ಮಾಲತಿ ರಾಮಕೃಷ್ಣ ಭಟ್
