ಹಿರಿಯ ಲೇಖಕರಾದ ಪ್ರೊ ವಿರೂಪಾಕ್ಷಪ್ಪ ಕೋರಗಲ್ ಅವರ “ಕಲ್ಯಾಣದ ಉಳಿವು” ಕಾದಂಬರಿಗೆ ೨೦೨೪ನೇ ವರ್ಷದ ಕನ್ನಡ ಸಾಹಿತ್ಯ ಪರಿಷತ್ತಿನ ‘ಗುಬ್ಬಿ ಸೋಲೂರು ಮುರುಘಾರಾದ್ಯ ದತ್ತಿ ನಿಧಿ’ ಪ್ರಶಸ್ತಿ ಸಂದಿದೆ. ಈ ಕೃತಿಯನ್ನು ಬಸವ ಧರ್ಮ ಪ್ರಸಾರಕ ಸಂಸ್ಥೆ, ಹಿರೇಮಠ ಸಂಸ್ಥಾನ ಮಠ ಭಾಲ್ಕಿ ಅವರು ಪ್ರಕಟಿಸಿದ್ದಾರೆ. ಈ ಕೃತಿಯ ಕುರಿತು ಇನ್ನಷ್ಟು ಓದಿ…
ಹನ್ನೆರಡನೆಯ ಶತಮಾನದ ಶರಣರು ಕಲಚೂರಿ ಸೈನಿಕರ ಕೈಯಲ್ಲಿ ನಾಶವಾಗಬಹುದಾಗಿದ್ದ ವಚನಗಳನ್ನು ಹೆಗಲ ಮೇಲೆ ಹೊತ್ತು ಕಲ್ಯಾಣದಿಂದ ಉಳವಿಯ ವರೆಗೆ ಪ್ರಾಣದ ಹಂಗು ತೊರೆದು ಓಡಿ ಹೋಗಿ ಉಳಿಸಿದ ಕಥೆಯನ್ನು ಈ ಕಾದಂಬರಿಯಲ್ಲಿ ವರ್ಣಿಸಲಾಗಿದೆ. ಕಲ್ಯಾಣದಿಂದ ಉಳವಿಯ ವರೆಗೆ ಹಲವು ಬಾರಿ ಅಡ್ಡಾಡಿ ಶರಣರು ಪಯಣಿಸಿರಬಹುದಾಗಿದ್ದ ಹಾದಿಯನ್ನು ಪುರಾವೆ ಸಹಿತ ನಿಷ್ಕರ್ಷೆ ಮಾಡಿದ್ದಾರೆ. ಅದಕ್ಕೆ ಇದೊಂದು ಸಂಶೋಧನಾತ್ಮಕ ಕೃತಿಯಾಗಿದೆಯೆಂದು ಹೇಳಬಹುದು. ಶರಣರು ಪಯಣಿಸಿದ ದಾರಿಯನ್ನು ಈ ಪುಸ್ತಕದಲ್ಲಿ ಫೋಟೋ ಸಹಿತ ಚಿತ್ರಿಸಿದ್ದಾರೆ. ಅಂದರೆ ಅವರು ಚಿತ್ರಿಸಿರುವ ಈ ಕಾದಂಬರಿಯಲ್ಲಿ ಪ್ರಾಣಕ್ಕೆರವಾದ ಶರಣರ ಸಮಾಧಿಗಳನ್ನು ದಾರಿ ದಾರಿಯಲ್ಲಿ ಸಮಾಧಿ ಮಾಡುತ್ತಾ ಹೋಗಿರುವುದನ್ನು ನೋಡಬಹುದು.

ಕಲ್ಯಾಣದಿಂದ ಉಳಿವಿಯತ್ತ ಪ್ರಸ್ಥಾನಗೈದ ಶರಣರ ದಂಡಿನ ದಾರಿಯನ್ನು ಸ್ವತಃ ಎಂಬತ್ತೈದರ ಈ ಪ್ರಾಯದಲ್ಲಿ ದಣಿವನ್ನು ಲೆಕ್ಕಿಸದೆ ಸಂಚರಿಸಿ, ಕ್ಷೇತ್ರಕಾರ್ಯ ಕೈಗೊಂಡು ಪ್ರಸ್ತುತ ಕಾದಂಬರಿಯನ್ನು ರಚಿಸಿದ್ದಾರೆ. ಕಾದಂಬರಿ ಸುಮಾರು ಮೂವತ್ತಾರು ಅಧ್ಯಾಯಗಳ ಹರಿವಿನಲ್ಲಿ ಷಟ್‌ಸ್ಥಲಜ್ಞಾನಿ ಚೆನ್ನಬಸವಣ್ಣನವರ ತಾಯಿ ನಾಗಲಾಂಬಿಕೆ, ಅತ್ತೆ ಗಂಗಾಂಬಿಕೆ, ನೀಲಾಂಬಿಕೆ, ಮಡಿವಾಳ ಮಾಚಿದೇವರು, ಡೋಹರ ಕಕ್ಕಯ್ಯನವರು ಮುಂತಾದ ಅನೇಕ ಜನ ಶರಣ-ಶರಣೆಯರ ಸಂಘಟಿತ ನೇತೃತ್ವದಲ್ಲಿ ಸುಮಾರು ಇಪ್ಪತ್ತು ಸಾವಿರ ಸಂದೋಹದೊoದಿಗೆ ಉಳವಿಯತ್ತ ಪಯಣ ಹೊರಡುತ್ತಾರೆ. ಬಹುದೊಡ್ಡ ಸಂಖ್ಯೆಯ ಶರಣ ಸಮುದಾಯದೊಂದಿಗೆ ಆರಂಭವಾದ ಈ ಕಾರವಾನ್ ಸಾಗಲು ಆರಿಸಿಕೊಂಡಿದ್ದು ನದಿಯ ಹರಿವಿನ ಹೆಜ್ಜೆಗಳನ್ನು. ಹೀಗೆ ನೀರಮಾರ್ಗದ ಹೆಜ್ಜೆ ತುಳಿಯುವ ಅನೇಕ ಸಂದರ್ಭಗಳಲ್ಲಿ ಆ ನೀರಿನಲ್ಲಿ ಶರಣರ ಮೈಯೊಳಗಣ ರಕ್ತವು ಸೇರಿ ನೀರು ತನ್ನ ಬಣ್ಣವನ್ನೇ ಬದಲಿಸಿದ ಚಿತ್ರಗಳು ಇಲ್ಲಿ ಚಿತ್ರಿತವಾಗಿವೆ.

ದಾರಿಯುದ್ದಕ್ಕೂ ಶರಣರು ಅನುಭವಿಸಿದ ಕಷ್ಟ, ಎದುರಿಸಿದ ಸವಾಲು, ಬದಲಾಯಿಸಿದ ಮಾರ್ಗ, ಜನರಿಂದ ಪಡೆದ ಸಹಾಯ ವಿಶೇಷವಾಗಿ ಸಾಗುವ ಹಾದಿಯಲ್ಲಿ ಬರುವ ಜನಪದರು ಬಸವಣ್ಣನ ಪರಿವಾರ ಹಾಗೂ ಶರಣರ ಕುರಿತಾಗಿ ಕೇಳಿ, ನೋಡಿವ್ಯಕ್ತಗೊಳಿಸಿದಗೌರವ ಚಿತ್ರಗಳು ದಾರಿ ಚಲಿಸಿದಂತೆ ಕಣ್ಣಮುಂದೆ ಚಲಿಸುತ್ತವೆ. ಈ ಪ್ರಶಸ್ತಿ ನಮ್ಮ ತಂದೆಯವರ ಪರಿಶ್ರಮ, ಅಧ್ಯಯನ ಹಾಗೂ ಬರವಣಿಗೆಗೆ ಸಂದ ಗೌರವವಾಗಿದೆ.
- ಆಕೃತಿಕನ್ನಡ
