೨೦೨೬ರ ಸಾಲಿನ ಕೆಎಸ್ ಸಿಎ 16 ವಯೋಮಿತಿಯ ಅಂತರ ಕ್ಲಬ್ ಪದ್ಯಾವಳಿಯಲ್ಲಿ ರಾಜಾಜಿನಗರ ಕ್ರಿಕೆಟರ್ ತಂಡ ಗೆಲುವನ್ನು ಸಾಧಿಸಿತು. ತಪ್ಪದೆ ಮುಂದೆ ಓದಿ…
೨೦೨೬ರ 16 ವಯೋಮಿತಿಯ ಅಂತರ ಕ್ಲಬ್ ಪದ್ಯಾವಳಿಯಲ್ಲಿ ಒಟ್ಟು 62 ಕ್ಕೂ ಹೆಚ್ಚು ಕ್ರಿಕೆಟ್ ಕ್ಲಬ್ ಗಳು ಭಾಗವಹಿಸಿದ್ದವು. ಒಂದು ತಿಂಗಳ ಕಾಲ ನಿರಂತರವಾಗಿ ನಡೆದ ಈ ಪಂದ್ಯಾವಳಿಯನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ ಸಿಎ) ನಡೆಸುತ್ತದೆ. ಈ ಪಂದ್ಯಾವಳಿ ಮೂಲಕ ಉದಯೋನ್ಮುಖ ಯುವ ಕ್ರಿಕೆಟ್ ಆಟಗಾರರು ಪರಿಚಯವಾಗುತ್ತಾರೆ. ಇದೊಂದು ಯುವ ಕ್ರಿಕೆಟ್ ಆಟಗಾರರಿಗೆ ಬಹುದೊಡ್ಡ ಅವಕಾಶವಾಗಿರುತ್ತದೆ.
16 ರ ವಯೋಮಿತಿಯ ಅಂತರ್ ಕ್ಲಬ್ ನ ಅಂತಿಮ ಪಂದ್ಯಾವಳಿಯಲ್ಲಿ ರಾಜಾಜಿನಗರ ಕ್ರಿಕೆಟ್ ಕ್ಲಬ್ ಮತ್ತು ಬೆಂಗಳೂರು ಸ್ಪೋರ್ಟ್ಸ್ ಕ್ಲಬ್ ನಡುವೆ ಬಾರಿ ಸ್ಪರ್ಧೆ ಏರ್ಪಟ್ಟಿತ್ತು. ಮೊದಲು ಬ್ಯಾಟಿಂಗ್ ಮಾಡಿದ ರಾಜಾಜಿನಗರ ಕ್ರಿಕೆಟರ್ ತಂಡ 50 ಓವರ್ ಗೆ 178 ರನ್ ಗಳಿಸಿತು. ಬೆಂಗಳೂರು ಸ್ಪೋರ್ಟ್ಸ್ ಕ್ರಿಕೆಟ್ ಕ್ಲಬ್ 41.3 ಓವರ್ ಗೆ 173 ರನ್ ನಲ್ಲಿ ತನ್ನ ತಂಡದ ಸಂಪೂರ್ಣ ವಿಕೆಟ್ ಕಳೆದುಕೊಂಡಿತು. ಕೇವಲ 5 ರನ್ ನಿಂದ ಬೆಂಗಳೂರು ಸ್ಪೋರ್ಟ್ಸ್ ಕ್ರಿಕೆಟ್ ಕ್ಲಬ್ ಸೋಲನ್ನು ಒಪ್ಪಿಕೊಳ್ಳಬೇಕಾಯಿತು.

ಫೋಟೋ ಕೃಪೆ : deccan herald
ಬೆಂಗಳೂರು ಸ್ಪೋರ್ಟ್ಸ್ ಕ್ರಿಕೆಟರ್ ಕ್ಲಬ್ ಗೆಲುವಿಗೆ ಹತ್ತಿರದಲ್ಲಿ ಇರುವಾಗಲೇ ರಾಜಾಜಿನಗರ ಕ್ರಿಕೆಟರ್ ಕ್ಲಬ್ ನ ಬೌಲರ್ ಅರಣವ್ ರವೀಂದ್ರ ಅವರು ಐದು ವಿಕೆಟ್ ಗಳಿಸುವುದರ ಮೂಲಕ ಆಟದ ದಿಕ್ಕನ್ನೇ ಬದಲಾಯಿಸಿದರು. ಆಟಗಾರರು ಮನಸ್ಸು ಮಾಡಿದರೆ ಒಂದು ಆಟ ಕೊನೆಯ ಕ್ಷಣದಲ್ಲಿ ಹೇಗೆ ಬೇಕಾದರೂ ಬದಲಾಗುತ್ತದೆ ಎನ್ನುವುದಕ್ಕೆ ಈ ಆಟ ಸಾಕ್ಷಿಯಾಗಿತ್ತು.
ರಾಜಾಜಿನಗರ ಕ್ರಿಕೆಟರ್ಸ್ ಕ್ಲಬ್ ನಲ್ಲಿ ಈಗಾಗಲೇ ರಾಜ್ಯಮಟ್ಟದಲ್ಲಿ ಕ್ರಿಕೆಟ್ ಆಟವನ್ನು ಪ್ರತಿನಿಧಿಸಿರುವ ಪ್ರಭಾವ್ ಪೈದಾ, ನೀರಜ್ ಮತ್ತು ಸ್ಟೇಟ್ ಪ್ರೊಬಬಲ್ಸ್ ಆಡಿದ ನಿರಂಜನ್ ಅಶೋಕ ತಂಡಕ್ಕೆ ಬಲ ನೀಡಿದರೆ, ಅರಣವ್ ರವೀಂದ್ರ, ರಾಜವೀರ, ದೇಬರಾಜ್, ಧಾತ್ವಿಕ್, ಜೀವನ, ರಾಘವ್, ಸ್ಪರ್ಶ ಇವರೆಲ್ಲರೂ ತಂಡಕ್ಕೆ ಶಕ್ತಿಯಾಗಿದ್ದರು.
ಪ್ರತಿಯೊಬ್ಬರಿಗೂ ಮುಂದೆ ಗುರಿ, ಬೆನ್ನ ಹಿಂದೆ ಗುರುವಿರಬೇಕು ಎನ್ನುವ ಮಾತಿದೆ. ಮುಂದೆ ಗುರಿಯಿದ್ದರೂ ಆ ಗುರಿಯನ್ನು ಸನ್ಮಾರ್ಗದಲ್ಲಿ ನಡೆಸಲು ಸರಿಯಾದ ಗುರುವಿರಬೇಕು. ಆಟಗಾರರ ಆ ಗುರಿಯನ್ನು ಮುಟ್ಟಿಸುವಲ್ಲಿ ರಾಜಾಜಿನಗರ ಕ್ರಿಕೆಟ್ ತಂಡದ ಕೋಚ್ ಗಳಾದ ವಿನಯ್, ಯಶೀತ್ ಮತ್ತು ಹರ್ಷ ಅವರು ಸಾಕಷ್ಟು ಶ್ರಮವಹಿಸಿದ್ದರು. ಅವರ ಶ್ರಮ ಗೆಲುವಿಗೆ ಮತ್ತೊಂದು ಕಾರಣವೆನ್ನಬಹುದು.
ಎರಡು ವರ್ಷದಿಂದ ಎರಡು ಬಾರಿ ಸಮಿಫೈನಲ್ ವರೆಗೂ ತಲುಪಿ ಸೋಲು ಕಂಡಿದ್ದ ರಾಜಾಜಿನಗರ ಕ್ರಿಕೆಟರ್ಸ್ ತಂಡಕ್ಕೆ ಈ ಗೆಲುವನ್ನು ಸಾಧಿಸುವುದು ಮುಖ್ಯವಾಗಿದ್ದರೆ, ಬೆಂಗಳೂರು ಸ್ಪೋರ್ಟ್ಸ್ ಕ್ರಿಕೆಟರ್ಸ್ ತಂಡ ಸತತವಾಗಿ ಎರಡು ವರ್ಷಗಳಿಂದ ಕೆಎಸ್ ಸಿಎ 16 ರ ವಯೋಮಿತಿ ಅಂತರ ಕ್ರಿಕೆಟ್ ಕ್ಲಬ್ ನಲ್ಲಿ ಎರಡು ಬಾರಿ ಗೆಲುವನ್ನು ಸಾಧಿಸಿತ್ತು. ಈ ಸಲ ಎರಡು ತಂಡಗಳ ಮಧ್ಯೆ ಬಾರಿ ಪೈಪೋಟಿ ಏರ್ಪಟ್ಟು ಕೊನೆಗೆ ಕೇವಲ ಐದು ರನ್ ನಿಂದ ಬೆಂಗಳೂರು ಸ್ಪೋರ್ಟ್ಸ್ ಕ್ರಿಕೆಟರ್ಸ್ ಸೋಲನ್ನು ಕಂಡಿತು.
ಆಟವನ್ನು ನೋಡುತ್ತಿದ್ದ ಪ್ರೇಕ್ಷಕರಲ್ಲಿ ಕೊನೆಯವರೆಗೂ ಕುತೂಹಲ ಮೂಡಿಸಿದ್ದ ಕೆಎಸ್ ಸಿಎ 16 ರ ವಯೋಮಿತಿ ಅಂತರ ಕ್ರಿಕೆಟ್ ಕ್ಲಬ್ ಅಂತಿಮ ಆಟದಲ್ಲಿ ಕೊನೆಗೆ ರಾಜಾಜಿನಗರ ಕ್ರಿಕೆಟರ್ಸ್ ಗೆಲುವನ್ನು ಸಾಧಿಸುವಲ್ಲಿ ಯಶಸ್ವಿಯಾಯಿತು.
ರಾಜಾಜಿನಗರ ಕ್ರಿಕೆಟರ್ ತಂಡಕ್ಕೆ ಆಕೃತಿಕನ್ನಡ ಪತ್ರಿಕೆಯು ಶುಭಕೋರುತ್ತದೆ.
- ಶಾಲಿನಿ ಹೂಲಿ ಪ್ರದೀಪ್ – ಆಕೃತಿಕನ್ನಡ ಸಂಪಾದಕಿ, ಬೆಂಗಳೂರು.




