‘ಆರದ ದೀಪ’ ಸಣ್ಣಕತೆ

ನಿಮ್ಮ ಪ್ರೀತಿಯ ಮೊಮ್ಮಗ ಸಿಕ್ಕನೇ?’ ಎಂದು ಕೇಳಿದ ಕುಮಾರನು, ಅದಕ್ಕೆ ತಾತ ಹೇಳಿದ “ನೀನೇ ಕಣಯ್ಯ, ಚಿಕ್ಕ ಹುಡುಗನಿಗೆ ದೊಡ್ಡ ವಯಸ್ಸಿನ ಸ್ನೇಹಿತ” ಎಂದು ನಸುನಗುತ್ತಾ ಮಾತು ತೇಲಿಸಿದರು. ಕಥೆಗಾರರಾದ ಹರಿಹರ ಬಿ ಆರ್ ಅವರ ‘ಆರದ ದೀಪ’ ಸಣ್ಣಕತೆಯನ್ನು ಸಂಪೂರ್ಣವಾಗಿ ಓದಿ…

ಕುಮಾರನು ತನ್ನ ವಿದ್ಯಾಭ್ಯಾಸದ ಶ್ರಮ ಹಾಗೂ ಅಪರಿಚಿತ ವ್ಯಕ್ತಿಯ ಆಶೀರ್ವಾದದ ಫಲವಾಗಿ ವಿದ್ಯುತ್ ಘಟಕದ ಅಧೀಕ್ಷಕನಾಗಿ ಆಯ್ಕೆಯಾಗಿದ್ದನು. ಅದಕ್ಕೂ ಮುನ್ನ ಅವನು ಒಂದು ಖಾಸಗಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದನು.

ವಿದ್ಯಾಭ್ಯಾಸ ಮುಗಿಯುತ್ತಿದ್ದಂತೆ ತನ್ನ ಬಾಡಿಗೆ ಮನೆಯು ವಠಾರದಲ್ಲಿರುವಂತೆ ಆಯ್ಕೆ ಮಾಡಿದ್ದ. ವಠಾರಕ್ಕೆ ಬಂದ ಹೊಸತೇನಲ್ಲ. ಒಂದು ವರ್ಷವಾಗಿತ್ತು. ವಾಸ್ತವದಲ್ಲಿ ಪಕ್ಕದ ಮನೆಯ ಐವತ್ತರ ಮಹಿಳೆ ಕೂಡು ಕುಟುಂಬದಲ್ಲಿ ಇದ್ದವರು. ಅವರೇನೋ ತಿಂಡಿ ಕಾಫಿ ಕಳಿಸುತ್ತಿದ್ದರು. ಒಮ್ಮೆ ಮನೆಗೆ ಬಂದು ತಾಯಿಯಂತೆ ಮಾತನಾಡಿದ್ದರೂ ಮತ್ತೆ ಅವನ ಮನೆಗೆ ಬಂದಿರಲಿಲ್ಲ. ಅವರ ಮಮತೆಯನ್ನು ಬಯಸಿದಷ್ಟು ಅವರು ದೂರಾಗುತ್ತಿರುವಂತೆ ಅನ್ನಿಸತೊಡಗಿತು. ಅವರಿಗೆ ಯಾವುದಾದರೂ ನೆಪದಲ್ಲಿ ಮಾತನಾಡಿಸಿ ಅಥವಾ ಸಹಾಯ ಮಾಡಿ ವಿಶ್ವಾಸಗಳಿಸುವ ಪ್ರಯತ್ನ ಮಾಡುತ್ತಿದ್ದ. ಅದಾವುದೂ ಫಲಿಸಲಿಲ್ಲ.

ಬಿಡುವಿದ್ದಾಗ ‘ನನ್ನ ಬಾಳು ಹೀಗೇಕಾಯಿತು?’ ಎಂದು ಯೋಚಿಸುತ್ತ ನೆನಪಿನಂಗಳದಲ್ಲಿ ವಿಹರಿಸತೊಡಗಿದ. ಹತ್ತು ವರ್ಷದವನಿದ್ದಾಗ ಅವನಿಗೆ ತನ್ನ ಕುಟುಂಬದಲ್ಲಿ ಅಪ್ಪ ಅಮ್ಮನ ಪ್ರೀತಿ ಸಿಗದೆ ಬೇಸರದ ಮನದಲ್ಲಿಯೇ ಬೆಳೆದಿದ್ದವನು. ತನಗಾದ ಖುಷಿಯನ್ನು ಹಂಚಿಕೊಂಡರೂ ಕೇಳುವ ಕಿವಿಗಳಿಲ್ಲದ ಸಂದರ್ಭ ಒದಗಿತ್ತು. ಅಪ್ಪ, ಅಮ್ಮ ಇಬ್ಬರ ಪ್ರೀತಿಯಿಂದ ವಂಚಿತನಾಗಿ ವಸತಿ ಗೃಹದಲ್ಲಿ ಸೇರಿಸಲ್ಪಟ್ಟವನಾಗಿದ್ದ. ಅಪ್ಪ ಅಮ್ಮನ ನಡೆಗಳು ಅವನಿಗೆ ಒಗಟಾಗಿಯೇ ಇತ್ತು. ಅವರ ಎದುರಿನಲ್ಲಿ ಕೇಳುವುದಿರಲಿ ಮಾತನಾಡಲೂ ಹೆದರುವಂತೆ ಮಾಡಿದ್ದವರು.

ವಸತಿ ಗೃಹದಲ್ಲಿದ್ದಾಗ ಅಲ್ಲಿನ ಅಧಿಕಾರಿಗಳು ಅನುಮತಿಸದಿದ್ದರೂ ವಿನಂತಿ ಮೇರೆಗೆ ಅಡಿಗೆ ಮಾಡುವ ಹೆಂಗಸನ್ನೇ ದೇವರಂತೆ ಕಂಡು ಅವರಿಗೆ ತರಕಾರಿ ಹೆಚ್ಚುವುದು, ಭಾರವಾದ ಪದಾರ್ಥಗಳನ್ನು ಇಳಿಸಲು, ಎತ್ತಿಡಲು ಸಹಾಯ ಮಾಡುತ್ತ ಅವರಿಂದ ವಿಶ್ವಾಸ ಗಳಿಸಿದ್ದ. ಕ್ರಮೇಣ ಅವರು ತನ್ನ ಮಗನಿಗೆ ಸಂಸ್ಕಾರಗಳನ್ನು ಹೇಳಿಕೊಡುವಂತೆ ಬುದ್ದಿ ಮಾತು ಹೇಳುತ್ತಿದ್ದರು.

ಅಲ್ಲಿರುವಾಗ ಶಾಲೆಗೆ ಹೋಗುವ ದಾರಿಯಲ್ಲಿ ಐವತ್ತು ವರ್ಷದ ಹಿರಿಯರೊಬ್ಬರ ಪರಿಚಯವಾಯಿತು. ಆಗಾಗ ಭೇಟಿ ಮಾಡಿ ಮಾತನಾಡಿಸುತ್ತಿದ್ದರು. ಕುಮಾರನಿಗೆ ಹೆಚ್ಚಾಗಿ ನಗುವಂತೆ ಮಾತನಾಡುತ್ತಾ ಅವನಿಗೆ ಹತ್ತಿರವಾಗತೊಡಗಿದರು. ಕುಮಾರನಿಗೆ ಅವರ ಪರಿಚಯವಿಲ್ಲದೆ ಕಸಿವಿಸಿಯಾಯಿತು. ಅಪರಿಚಿತ ವ್ಯಕ್ತಿ ಯಾರೆಂದು ತಿಳಿಯಲು ಹೋದಾಗಲೆಲ್ಲ ಮರೆಮಾಚುತ್ತ, ಬೆಳಕಿಲ್ಲದ ಬೀದಿ ದೀಪದಡಿಯಲ್ಲಿ ಕುಳಿತಿರುತ್ತಿದ್ದರು.

“ಯಾಕೆ….” ಏನೆಂದು ಕರೆಯಲಿ ಎಂದು ಯೋಚಿಸುತ್ತಿದ್ದಾಗ, ಅವರು ಕೂಡಲೇ “ಕಳೆದು ಹೋದ ಮೊಮ್ಮಗನೆಲ್ಲಿರುವನೋ? ನೀನೇ ನನ್ನನ್ನ ತಾತ ಎಂದು ಕರಿ” ಎಂದರು.

“ಯಾಕೆ ತಾತ! ನೀವು ಯಾವಾಗಲೂ ಆರಿದ್ದ ದೀಪದ ಕೆಳಗೆ ಕೂಡಬಯಸುತ್ತೀರ?” ಎಂದು ಕೇಳಿದ.

“ಬಾಳು ಒದಗಿರುವ ಸ್ಥಿತಿಗೆ ಹೀಗೆ” ಎಂದು ಹೇಳಿ, ಮನದಲ್ಲಿದ್ದ ‘ನನ್ನ ಗುರುತು ಯಾರಿಗೂ ಸಿಗದಿರಲಿ. ಈಗ ದುಡ್ಡಿಲ್ಲದೆ ಭಿಕಾರಿ’ ಎನ್ನುವ ಮಾತನ್ನು ಬಿಟ್ಟುಕೊಡಲಿಲ್ಲ.

“ಚಿಕ್ಕ ಹುಡುಗನಿಗೆ ದೊಡ್ಡವ ನಿನ್ನ ಸ್ನೇಹಿತ ತಾತ” ಎಂದು ನಸುನಗುತ್ತಾ ಮಾತು ತೇಲಿಸಿದರು. ಮತ್ತೆ ಅವರೇ “ಅಯ್ಯೋ ಮರೆತೆ ನೀನು ಬೆಳಕಲ್ಲೇ ಇರು. ಇನ್ನೂ ಓದುತ್ತಿರುವೆ. ಸರಸ್ವತಿಯ ದಯೆಯಿಂದ ಚೆನ್ನಾಗಿ ಓದು. ಹಿರಿಯರಂತಹ ನನ್ನನ್ನು ಮಾತನಾಡಿಸಿ ಖುಷಿ ಕೊಡುತ್ತಿರುವೆ. ಸದಾ ನನ್ನ ಆಶೀರ್ವಾದವಿದೆ. ಆದಷ್ಟು ದುರ್ಜನರಿಂದ ದೂರವಿರು. ಒಳ್ಳೆಯ ಮನುಷ್ಯನಾಗಿ ನೂರ್ಕಾಲ ಬಾಳು” ಎನ್ನುತ್ತಿದ್ದರು. ಇದನ್ನು ಕೇಳಿ ಕೇಳಿ ಉರು ಹೊಡೆದಿದ್ದನಾದರೂ ಅವರಿಗೆ ಬೇಸರ ಮಾಡದೆ ಅವರ ಮೊಣಕಾಲಿನ ಕೆಳಭಾಗ ಮುಟ್ಟಿ ನಮಿಸುತ್ತಿದ್ದ.

ಅಂದು ಬುದ್ಧಿ ಹೇಳಿದ್ದ ಹಿರಿಯ ನಾಗರಿಕರನ್ನರಸುತ್ತಾ ಜೊತೆಗೆ ರಸ್ತೆಯಲ್ಲಿ ಕೆಟ್ಟಿದ್ದ ಬೀದಿ ದೀಪಗಳನ್ನು ಬದಲಾಯಿಸುತ್ತಿದ್ದಾಗ, ಮುದುಕರೊಬ್ಬರು ಬೆಳಕಿಲ್ಲದ ದೀಪದ ಕಂಬವನ್ನರಸುತ್ತಿದ್ದುದ್ದನ್ನು ಕಂಡವನೇ ಅವರ ಕಾಲಿಗೆರಗಿ ‘ಅಂದು ತಾವು ತಿಳಿಸಿದ್ದ ನಿಮ್ಮ ಪ್ರೀತಿಯ ಮೊಮ್ಮಗ ಸಿಕ್ಕನೇ?’ ಎಂದು ಕೇಳಲು, “ನೀನೇ ಕಣಯ್ಯ, ನಾನಾಗ ನಿರ್ಗತಿಕನಾಗಿದ್ದೆ. ನಿನ್ನ ಅಪ್ಪ ಆಸ್ಥಿಯನ್ನು ಬರೆಸಿಕೊಂಡು ಈಗ ಹೆಂಡತಿಯ ಗುಲಾಮನಾಗಿರುವನು. ನಾನು ವೃದ್ಧಾಶ್ರಮದಲ್ಲಿದ್ದಾಗ ಸರಿಯಾಗಿ ಹಣ ಕಳಿಸದೆ ನನಗೆ ಈ ಅವಸ್ಥೆ ತಂದಿಟ್ಟಿದ್ದಾನೆ.” ಎಂದಾಗ ‘ಅಂದೇ ಏಕೆ ಹೇಳಲಿಲ್ಲ’ ಎಂದು ಬೇಸರದಿಂದ ತನ್ನ ಜೊತೆಗೆ ವಯೋ ವೃದ್ಧರನ್ನು ತನ್ನ ಮನೆಗೆ ಕರೆದುಕೊಂಡು ಹೋಗುತ್ತಿದ್ದ. ಮುಂದೆ ತಾತನೇ ಅವನಿಗೆ ಆರದ ದೀಪವಾಗಿ ಆಶೀರ್ವಾದ ಸಹಿತ ಮಾರ್ಗದರ್ಶನ ನೀಡುತ್ತಿದ್ದರು.


  • ಹರಿಹರ ಬಿ ಆರ್ – “ಅಕ್ಷಂತಲ ಬರಹ”, ಬೆಂಗಳೂರು.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading