ಲೇಖಕಿ ಗೀತಾ ಶಣೈ ಅವರು ಕನ್ನಡಕ್ಕೆ ಅನುವಾದಿಸಿರುವ ‘ಅರಣ್ಯಕಾಂಡ’ ಕಾದಂಬರಿಯ ಕುರಿತು ಮಾಲತಿ ರಾಮಕೃಷ್ಣ ಭಟ್ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ….
ಕೃತಿ : ಅರಣ್ಯಕಾಂಡ
ಕೊಂಕಣಿ ಲೇಖಕರು: ಮಹಾಬಲೇಶ್ವರ ಸೈಲ್
ಕನ್ನಡ ಅನುವಾದ: ಗೀತಾ ಶಣೈ
ಕೊಂಕಣಿ ಭಾಸ ಆನಿ ಸಂಸ್ಕೃತಿ ಕೇಂದ್ರ ಮಂಗಳೂರು.
ಮುದ್ರಣದ ವರ್ಷ: ೨೦೨೦.
ಪುಟಗಳು: ೮೨.
ಬೆಲೆ: ರೂ. ೧೦೦.
ಅಲಕ್ಷಿತ- ಅಲೆಮಾರಿ ವೃತ್ತಿ ಜನಾಂಗದವರ ಜೀವನ ವಿಧಾನದ ಕುರಿತು ಕಾದಂಬರಿಗಳನ್ನು ರಚಿಸಿದವರಲ್ಲಿ ಕೊಂಕಣಿ ಲೇಖಕರಾದ ಮಹಾಬಲೇಶ್ವರ ಸೈಲ್ ಅವರು ಪ್ರಮುಖರು.
ಪ್ರಸ್ತುತ ಈ ಕಾದಂಬರಿಯನ್ನು ಲೇಖಕಿ ಗೀತಾ ಶಣೈ ಇವರು ಕನ್ನಡಕ್ಕೆ ಅನುವಾದಿಸಿ ಕನ್ನಡ ಓದುಗರಿಗೆ ಒದಗಿಸಿದ್ದಾರೆ.
ಹೊಟ್ಟೆಪಾಡಿಗಾಗಿ ಬೇರೆಯವರ ಮನೆ -ಹೊಲಗಳಲ್ಲಿ ದುಡಿಯುತ್ತಿದ್ದ ಜೀತದಾಳುಗಳಿಗೆ ಜಾತಿಯಿಲ್ಲ. ಬಡತನದ ಕೆಳವರ್ಗದ ಈ ಜನರು ವಿದ್ಯೆಯಿಂದಲೂ ವಂಚಿತರು. ಇಂತಹ ಜನರ ಜೀವನ ವಿಧಾನವನ್ನು ನಾವಿಲ್ಲಿ ಕಾಣ ಬಹುದು.

ಒಟ್ಟೂ ೫ ಮನೆಗಳಿಂದ ೨೧ ಸದಸ್ಯರು ಇದ್ದ ತಂಡವದು. ಎದೆ ಹಾಲು ಕುಡಿಯುವ ಚಿಕ್ಕ ಮಕ್ಕಳಿಂದ ಹಿಡಿದು ಕೋಲೂರಿ ನಡೆವ ವೃದ್ಧ ರಾಮಪ್ಪನವರೆಗೂ ಅಲ್ಲಿದ್ದರು. ಕಲ್ಲುಗಣಿಗಳ ಕ್ವಾರಿಗಳಲ್ಲಿ ಕೆಲಸ ಮಾಡಿ ಮೊದಲೇ ಜರ್ಜರಿತರಾದ ಕೊಳಕು ಬಟ್ಟೆಯ ಅವರ ಸ್ಥಿತಿ ದಯನೀಯವಾಗಿತ್ತು. ಕಾಶಿರಾಮನ ಮುಷ್ಟಿಯಿಂದ ತಪ್ಪಿಸಿ ಕೊಳ್ಳಲು ಊರು ಬಿಟ್ಟು ಬಂದು ಈಗ ಮತ್ತೂ ಕಷ್ಟಕ್ಕೆ ಸಿಕ್ಕ ಹಾಗಾಯಿತೆಂದು ಅವರು ಚಿಂತಿಸುತ್ತಿದ್ದರು.
ಆ ಊರಿನ ಹೊರಗೆ ಗುಡಿಸಲುಗಳಲ್ಲಿ ಅವರ ವಾಸ. ಸಮಾಜದಲ್ಲಿ ಪ್ರತಿಯೊಬ್ಬ ಜಾತಿಯವರಿಗೂ ಸಮಾಜವೇ ನಿರ್ಣಯಿಸಿ ನೀಡಿದ ವ್ಯವಸಾಯವಿದ್ದರೆ ಈ ಜನರು ಮಾತ್ರ ಏನೂ ಇಲ್ಲದ ದಟ್ಟ ದರಿದ್ರರು. ಕಷ್ಟ ಪಟ್ಟು ದುಡಿಯುವುದು ಮತ್ತು ಸಾಲದಲ್ಲಿ ಸಿಕ್ಕಿ ಹಾಕಿ ಕೊಳ್ಳುವುದು ಮಾತ್ರ ಇಂತವರಿಗೆ ತಿಳಿದಿರುವುದು.
ಆ ಊರಲ್ಲಾಗ ಬರಗಾಲ ಶುರುವಾಗಿ ಕುಡಿಯುವ ನೀರಿಗೂ ಹಾಹಾಕಾರವೆದ್ದಿತ್ತು. ಜಮೀನುದಾರರ ಬಳಿ ತೆಗೆದುಕೊಂಡ ಸಾಲ ಮನ್ನಾ ಆಗಿರದೇ ತಾಂಡಾದ ಜನರು ಹಸಿವಿನಿಂದ ಕಂಗಾಲಾಗಿದ್ದರು.
ಅದೇ ಸಮಯದಲ್ಲಿ ಒಬ್ಬ ದಲಾಲ ಸ್ಕೂಟರ್ ನಲ್ಲಿ ಊರಿಗೆ ಬಂದು ನಿಮ್ಮ ಸಾಲ ತಾನು ತೀರಿಸುವೆ. ಆದರೆ ಬದಲಿಗೆ ನೀವೆಲ್ಲಾ ನನ್ನ ಜೊತೆ ಕ್ರಶರ್ ಯಂತ್ರಕ್ಕೆ ಕಲ್ಲು ಒಡ್ಡುವ ಕೆಲಸಕ್ಕೆ ಬರಬೇಕು ಎಂದಾಗ ತಾಂಡಾದ ಮುಖ್ಯಸ್ಥ ವೀರಣ್ಣ ಒಪ್ಪಿದ್ದ. ದಲಾಲ ಕಾಗದ ಪತ್ರಗಳನ್ನು ಸಿದ್ಧ ಪಡಿಸಿ, ಅದರ ಮೇಲೆ ಇವನ ಹೆಬ್ಬೆಟ್ಟು ಒತ್ತಿಸಿ ಎಲ್ಲರಿಗೂ ಸಾಲ ತೀರಿಸುವುದಕ್ಕಾಗಿ ಹಣ ಹಂಚಿದ್ದ. ಸಾವಿರದ ನೋಟುಗಳನ್ನು ಕಂಡು ದಿಗ್ಭ್ರಮೆಗೊಂಡ ಆ ದಡ್ಡ ಜನ ಊರ ಧಣಿಗೆ ಹಣ ಕೊಟ್ಟು ಸಾಲದ ಬಿಡುಗಡೆಯ ಮುಕ್ತಿಯ ಕ್ಷಣವನ್ನು ಅನುಭವಿಸಿದ್ದರು.
ಆದರೆ ಅದು ಅಸಲು ಹಣ ಈಗ ಬಡ್ಡಿ ಇನ್ನೂಬಾಕಿ ಇದೆ. ನೀವು ಊರು ಬಿಟ್ಟು ಹೋಗಕೂಡದು ಎಂದು ಬೆದರಿಕೆ ಒಡ್ಡಿದರೂ, ದಲಾಲನ ಕಪಿ ಮುಷ್ಟಿಯಲ್ಲಿ ಸಿಕ್ಕು ಭಯದಿಂದ ರಾತ್ರೋ ರಾತ್ರಿ ಅವನ ಹಿಂದೆ ಗಂಟು ಮೂಟೆ ಕಟ್ಟಿ ಊರು ಬಿಟ್ಟು ಬಸ್ಸು ಹತ್ತಿ ಇಳಿದು, ಕಾಣದ ಕಾಡನ್ನು ದಾಟಿ ದಲಾಲ ತೋರಿದ ಗುಡಿಸಲಿಗೆ ಬಂದಿದ್ದರು.
ಇಲ್ಲಿ ಹೆಂಗಸರು ಗಂಡಸರೆನ್ನದೇ ಬೆಳಗಿನಿಂದ ಸಂಜೆವರೆಗೆ ಕಲ್ಲು ಹೊತ್ತು ಸುಸ್ತಾಗುತ್ತಿದ್ದರು. ಸಂಜೆ ಮನೆಗೆ ಬಂದಾಗ ದೇಹವೆಲ್ಲಾ ನೋಯುತ್ತಿತ್ತು.ಅಲ್ಲಿ ಕೊಡುವ ರೇಷನ್ ನಲ್ಲಿ ಅಡುಗೆ ಮಾಡಿ,ಏನೋ ತಿಂದು ಎಲ್ಲರೂ ಸತ್ತು ಬಿದ್ದ ಹಾಗೆ ಮಲಗುತ್ತಿದ್ದರು. ಅವರಿಗೆ ಮುಂಗಡ ಹಣ (ಸಾಲದ್ದು) ಈಗಾಗಲೇ ಕೊಟ್ಟಾಗಿದೆ. ಎಂದು ಕಾಗದ ಪತ್ರಗಳನ್ನು ತೋರಿಸಿ ಸಾಹುಕಾರ ಕೂಲಿ ನೀಡುತ್ತಿರಲಿಲ್ಲ.

ಒಂದು ವರ್ಷದಿಂದ ಆ ಜನರಿಗೆ ಇಲ್ಲಿಂದ ಹೇಗಾದರೂ ಬಿಡಿಸಿಕೊಂಡು ಹೋಗುವ ಕಾತುರವಿದ್ದರೂ ಪಾರಾಗುವ ದಾರಿಯಂತೂ ತೋಚುತ್ತಿರಲಿಲ್ಲ. ಒಮ್ಮೆ ಹೀಗೆ ಪ್ರಯತ್ನಿಸಿದಾಗ ದೊಣ್ಣೆಯಿಂದ ಏಟು ತಿಂದಿದ್ದರು. ಅಲ್ಲದೇ ಕಾವಲುಗಾರನನ್ನು ಅವರನ್ನು ಕಾಯಲು ಬಿಟ್ಟಿದ್ದರು.
ಅಲ್ಲಿ ಆ ಜನ ಅನುಭವಿಸಿದ ಕಷ್ಟ, ಹೊಟ್ಟೆಪಾಡು ಕುಟುಂಬದ ಹೆಣ್ಣು ಮಕ್ಕಳು ಹಾದಿ ತಪ್ಪಿದ್ದು, ಕೆಲಸ ಕೊಟ್ಟ ಸಾಹುಕಾರ,ಮೇಸ್ತ್ರಿಯ ದರ್ಪ, ದಬ್ಬಾಳಿಕೆ ಇವುಗಳನ್ನು ಲೇಖಕರು ನೈಜವಾಗಿ ಬರೆದಿದ್ದಾರೆ. ಕಡೆಗೂ ಆ ಜನರು ಕೊನೆಯಿಲ್ಲದ ಕಾಡಲ್ಲಿ ತಪ್ಪಿಸಿ ಕೊಳ್ಳುವ ಪ್ರಯತ್ನ ಮಾಡಿದ್ದರು. ಇವನ್ನೆಲ್ಲಾ ಓದಿಯೇ ಅನುಭವಿಸ ಬೇಕು. ಅಷ್ಟು ಹೃದಯ ಕಲಕುತ್ತದೆ.
ಬರಗಾಲದಲ್ಲಿ ನೀರಿನ ಆಶ್ರಯ ಬಯಸಿ ಅಲೆಮಾರಿ ಜನರ ತಂಡ, ಶೋಷಕ ವರ್ಗದವರ ಕೈಯಲ್ಲಿ ಸೆರೆಯಾಗಿ ಅಪಾರ ಕಷ್ಟ ನಷ್ಟಗಳನ್ನು ಅನುಭವಿಸಿ ಕೊನೆಯಲ್ಲಿ ಪಾರಾಗಲು ಹೋಗಿ, ಬಾಯಾರಿ ಪ್ರಾಣ ತೆತ್ತು ಕಾಡು ಪಾಲಾಗುವ ಭೀಕರ ಚಿತ್ರಣವು ಹೃದಯಸ್ಪರ್ಶಿಯಾಗಿದೆ.
ಆದರೆ ಊರಿಂದ ‘ಗುಡಿಸಲು ರಿಪೇರಿ ಮಾಡಿಸಲು ವೀರಣ್ಣನ ಪತ್ರ’ ಬಂದಿತ್ತು. ಎಂದು ಒಂದು ಕಡೆ ಹೇಳಿದ್ದಾರೆ. ಎಲ್ಲರೂ ಅನಕ್ಷರಸ್ಥರು!!ಅಲ್ಲದೇ ತಪ್ಪಿಸಿ ಕೊಂಡು ಬಂದ ಇವರ ವಿಳಾಸವೇ ಗೊತ್ತಿಲ್ಲದೇ ಇಲ್ಲಿದ್ದವರಿಗೂ ತಾವೆಲ್ಲಿದ್ದೇವೆ ಎಂಬ ಅರಿವಿರುವುದಿಲ್ಲ ಹಾಗಿರುವಾಗ ‘ಪತ್ರ’ ದ ವಿಷಯ ಪ್ರಸ್ತಾಪ ಕೊಂಚ ಗಲಿಬಿಲಿ ತಂದಿತು.
ಮೂಲಭೂತ ಅವಶ್ಯಕತೆಯನ್ನೂ ಪಡೆಯಲಾರದ ಇಂತಹ ಜನರು ಶೋಷಣೆಗೊಳಗಾಗುತ್ತಾ ಇಂದಿಗೂ ಸಮಾಜದಲ್ಲಿ ಇದ್ದಾರೆ. ಅಂತಹವರ ಪರಿಸ್ಥಿತಿ ಬದಲಾಗ ಬೇಕು ಎನ್ನುವ ಕರುಣೆ ನಮ್ಮಲ್ಲಿಯೂ ಸ್ಪುರಿಸುವಂತಿದೆ. ಒಳ್ಳೆಯ ಪುಸ್ತಕ. ನೀವೂ ಓದಿ…
- ಮಾಲತಿ ರಾಮಕೃಷ್ಣ ಭಟ್
