ಕವಿ ಹೇಮಂತ್ ಪಾರೇರ್ ಅವರ ಹೊಸ ಕೃತಿ ‘ಬೆಳ್ಳಿ ಗೆಜ್ಜೆ’ ಕವನ ಸಂಕಲನದ ಕುರಿತು ವೀರಕಪುತ್ರ ಶ್ರೀನಿವಾಸ ಅವರು ಮುನ್ನುಡಿಯನ್ನು ಮತ್ತು ಚಿತ್ರಸಾಹಿತಿಗಳಾದ ಡಾ. ವಿ. ನಾಗೇಂದ್ರ ಪ್ರಸಾದ್ ಅವರು ಬೆನ್ನುಡಿಯನ್ನು ಬರೆದಿದ್ದಾರೆ. ತಪ್ಪದೆ ಮುಂದೆ ಓದಿ…
ಪುಸ್ತಕ : ಬೆಳ್ಳಿ ಗೆಜ್ಜೆ
ಕವಿಗಳು : ಹೇಮಂತ್ ಪಾರೇರ್
ಪ್ರಕಾರ : ಕವನ ಸಂಕಲನ
ಮುನ್ನುಡಿ
ಕಾವ್ಯವು ಯಾವಾಗಲೂ ನಮ್ಮ ಸಾಮಾಜಿಕ ಸ್ಥಿತಿಗತಿಗಳನ್ನು ಅರ್ಥಮಾಡಿಕೊಳ್ಳಲು ಪ್ರಮುಖ ಮಾರ್ಗವಾಗಿ ಕಾರ್ಯನಿರ್ವಹಿಸುತ್ತದೆ. ಆ ಹಿನ್ನಲೆಯಲ್ಲಿ ಕಾವ್ಯದ ಮಹತ್ವ ಯಾವ ಕಾಲದಲ್ಲಿಯೂ ಅಪ್ರಸ್ತುತವಾಗಿಲ್ಲ. ಆದರೆ ಇತ್ತೀಚೆಗೆ ಕವನಗಳನ್ನು ವ್ಯಂಗ್ಯವಾಡುವ ಒಂದು ಪರಿಪಾಠ ಆರಂಭವಾಗಿಬಿಟ್ಟಿದೆ. ಆದರೂ ಕವನ ರಚನೆಯಲ್ಲಿ ಕನ್ನಡ ಸಾಹಿತ್ಯಲೋಕ ಹಿಂದೆ ಬಿದ್ದಿಲ್ಲ.

ಸಮಕಾಲೀನ ಕಾವ್ಯದ ಕ್ಷೇತ್ರದಲ್ಲಿ ಮಾನವ ಅನುಭವದ ಸಂಕೀರ್ಣತೆಯೊಂದಿಗೆ ಅನೇಕ ಧ್ವನಿಗಳು ಪ್ರತಿಧ್ವನಿಸುತ್ತಿರುವುದನ್ನು ಕಾಣುತ್ತಿರುವೆ. ಅದರಲ್ಲಿ ಹೇಮಂತ್ ಅವರೂ ಪ್ರಮುಖರು. ಹೇಮಂತ್ ಅವರ ಆಳವಾದ ತಿಳುವಳಿಕೆ, ತೀಕ್ಷ್ಣವಾದ ಗ್ರಹಿಕೆ , ಸಮಾಜ ಮತ್ತು ಜೀವನದ ಸುಖ ದುಃಖಗಳು ಇಲ್ಲಿನ ಕವನಗಳಿಗೆ ಉತ್ತಮ ಎಂಬ ಹಣೆಪಟ್ಟಿಯನ್ನು ದೊರಕಿಸಿಕೊಟ್ಟಿವೆ. ಇಲ್ಲಿನ ಕವನಗಳು, ಪ್ರಾಸ, ಲಯ ಮತ್ತು ಕೌಶಲ್ಯಪೂರ್ಣತೆಯಿಂದ ಬರೆಯಲ್ಪಟ್ಟಿವೆ. ಕವನದ ಸಾಲುಗಳು ಸ್ಪಷ್ಟತೆಯ ಪ್ರಜ್ಞೆಯಿಂದ ತುಂಬಿಕೊಂಡಿವೆ. ಕವಿ ತಾನು ಹೇಳಬೇಕಾಗಿದ್ದನ್ನು ಯಾವುದೇ ಗೊಂದಲ ಮತ್ತು ಮುಜುಗರವಿಲ್ಲದೆ ಹೇಳುತ್ತಾ ಸಾಗಿದ್ದಾರೆ. ಕೆಲವೊಮ್ಮೆ ಪ್ರಾಸಗಳಿಗೇ ಹೆಚ್ಚು ಒತ್ತುಕೊಟ್ಟಿದ್ದಾರೆ ಅನ್ನಿಸುತ್ತದೆ. ಮತ್ತು ಅದೇ ಕಾರಣಕ್ಕೆ ಇವು ಓದುಗರಿಗೆ ಆಪ್ತವೂ ಮತ್ತು ಸಾರ್ವರ್ತಿಕ ಭಾವವನ್ನೂ ಮೂಡಿಸುತ್ತವೆ. ಇವುಗಳನ್ನು ಕವಿತೆಗಳು ಅನ್ನುವುದಕ್ಕಿಂತ ಕವಿಯ ಆಶಯಗಳು ಎನ್ನಬೇಕು. ಸಮಾಜ, ಸಂಸಾರ, ಹೆಣ್ಣು, ಕಾಡು, ಆನೆ, ಮನುಷ್ಯ, ನೋವು, ನಲಿವು, ಪ್ರೀತಿ ಎಲ್ಲದರ ಬಗ್ಗೆಯೂ ಕವಿ ಸಹೃದಯಿಯಂತೆ ಯೋಚಿಸುತ್ತಾ ಹೋಗುವುದರಿಂದ ಇಲ್ಲಿನ ಕವನಗಳನ್ನು ಹೃದಯವಂತರೂ ಅನ್ನಬಹುದು. ಇಂತಹ ಆಪ್ತಭಾವದ ಕಾರಣಕ್ಕೋ ಏನೋ ಓದುಗರೂ ಸಹ ಕವಿಯ ಆಶಯದಂತೆ ಪರಿವರ್ತನಾ ಪ್ರಯಾಣಕ್ಕೆ, ಆಶಯಕ್ಕೆ ಹ್ಮೂಗುಡುತ್ತಾರೆ.
ಓದುವ ಸುಖ ನಿಮ್ಮದಾಗಲಿ.
ವೀರಕಪುತ್ರ ಶ್ರೀನಿವಾಸ
ವೀರಲೋಕ ಪ್ರತಿಷ್ಠಾನ ಮತ್ತು ವೀರಲೋಕ ಪುಸ್ತಕ ಸಂಸ್ಥೆಯ ಸಂಸ್ಥಾಪಕರು
ಬೆಂಗಳೂರು
***
ಬೆನ್ನುಡಿ
ಕೊಡಗಿನ ಹೇಮಂತ್ ಪಾರೇರಾ ವೃತ್ತಿಯಲ್ಲಿ ಕೃಷಿಕರು ಪ್ರವೃತ್ತಿಯಲ್ಲಿ ಕಾವ್ಯ ಕೃಷಿಕರು. ‘ಬೆಳ್ಳಿಗೆಜ್ಜೆ’ ಇವರ ಮೂರನೆಯ ಕೃತಿಯಾಗಿದೆ. ‘ಮೌನ ಮುರಿದ ಕನವರಿಕೆಗಳು’ ಮೊದಲ ಕವನ ಸಂಕಲನ. ‘ಒಲವಿನ ಸವಾರಿ’ ಕಥಾ ಸಂಕಲನ ಮತ್ತು ‘ಬೆಳ್ಳಿ ಗೆಜ್ಜೆ’ ಇದೀಗ ನಿಮ್ಮ ಕೈಯಲ್ಲಿರುವ ಕವನ ಸಂಕಲನವಾಗಿದೆ. ಒಂದು ಹಿಡಿಯಷ್ಟು ಪದ್ಯಗಳನ್ನು ಇಲ್ಲಿ ಹರವಿದ್ದಾರೆ.
ಅವರದೇ ಕವನದ ಆಶಯದಂತೆ
‘ಆಯ್ಕೆಗಿಟ್ಟರೆ ಆಯ್ಕೆಯುಂಟೇ…’ ಅನ್ನುವಂತೆ ಇಲ್ಲಿ ಅನೇಕ ಆಯ್ಕೆಗಳಿವೆ ಕಾಣ್ಕೆಗಳಿವೆ. ಪ್ರೇಮ, ಪ್ರಣಯ, ವಿರಹ, ಮೌಲ್ಯಗಳು, ಪ್ರಕೃತಿ , ಆತ್ಮವಿಮರ್ಶೆ, ಹೀಗೆ… ಹೇಮಂತರ ಕಾವ್ಯ ಕಾವೇರಿ ನಾನಾ ದಿಕ್ಕುಗಳಲ್ಲಿ ಪಸರಿಸಿ ನಾಡಿನಾದ್ಯಂತ ಹರಿದಿದ್ದಾಳೆ. ಇಲ್ಲಿನ ಕಾವ್ಯ ಗುಣವುಳ್ಳ ಲಾಲಿತ್ಯ ಭರಿತ ಪದ್ಯಗಳು ನಮ್ಮನ್ನು ಲಯದಲ್ಲಿ ಹಾಡಿಕೊಳ್ಳುವಂತೆ ಮಾಡುತ್ತವೆ.
ಹೇಮಂತ್ ಪಾರೇರಾ ಕೊಡಗಿನ ಬೆಡಗನ್ನು ಲೇಖನಿಗೆ ತೊಡಿಸಿದ್ದಾರೆ. ಆ ಮೂಲಕ ಪದ್ಯಗಳೂ ರಮ್ಯತೆ ಮತ್ತು ಗಾಂಭೀರ್ಯತೆಯಿಂದ ಕೂಡಿವೆ. ಇವರ ಸಾಹಿತ್ಯ ಪಯಣವು ಹೀಗೆ ಮುಂದುವರೆಯಲಿ. ಇನ್ನಷ್ಟು ಕೃತಿಗಳು ಇವರ ಲೇಖನಿಯಿಂದ ಹೊರಬರಲಿ ಎನ್ನುತ್ತಾ ಹೇಮಂತರಿಗೆ ಶುಭವಾಗಲೆಂದು ಹಾರೈಸುತ್ತೇನೆ.
ನಿಮ್ಮ
ಡಾ. ವಿ. ನಾಗೇಂದ್ರ ಪ್ರಸಾದ್
ಚಲನಚಿತ್ರ ಗೀತೆ ರಚನೆಗಾರರು
ಚಲನಚಿತ್ರ ನಿರ್ದೇಶಕರು. ಸಾಹಿತಿಗಳು
ಬೆಂಗಳೂರು
- ಹೇಮಂತ್ ಪಾರೇರ್
