‘ನೆನಪಿನ ಜಗುಲಿ, ಭಾವನೆಗಳ ಮೆರವಣಿಗೆ’ ಕೃತಿ ಪರಿಚಯ

ಡಾ.ಶ್ವೇತಾ ಪ್ರಕಾಶ್ ಅವರ ‘ನೆನಪಿನ ಜಗುಲಿ, ಭಾವನೆಗಳ ಮೆರವಣಿಗೆ’ ಅವರ ಐದನೆಯ ಸಾಹಿತ್ಯ ಕೃತಿಯಾಗಿದ್ದು, ಈ ಕೃತಿಯ ಕುರಿತು ಪದ್ಮನಾಭ. ಡಿ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಪುಸ್ತಕ : ನೆನಪಿನ ಜಗುಲಿ, ಭಾವನೆಗಳ ಮೆರವಣಿಗೆ
ಲೇಖಕರು : ಡಾ. ಶ್ವೇತಾ ಪ್ರಕಾಶ್

ಜಾಲತಾಣಗಳಲ್ಲಿ ಪರಿಚಯವಾದ ಶ್ರೀಮತಿ ಶ್ವೇತಾ ಪ್ರಕಾಶ್ ರವರು ಬೆಂಗಳೂರಿನ ನಿವಾಸಿಯಾಗಿದ್ದು ಸಾಮಾಜಿಕ ಸೇವೆ ಹಾಗೂ ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಾರ್ಥಕ ಜೀವನ ನಡೆಸುತ್ತಿದ್ದಾರೆ. ಇವರ ಸಮಾಜಮುಖಿ ಕೆಲಸಗಳಿಗೆ ಸಾಕಷ್ಟು ಪ್ರಶಸ್ತಿಗಳು ಇವರನ್ನು ಅರಸಿ ಬಂದಿವೆ.

ಎಂ. ಎ. ಪದವೀಧರೆಯಾದ ಇವರು ಕೌಟುಂಬಿಕ ಜವಾಬ್ದಾರಿಯನ್ನು ನಿರ್ವಹಿಸುತ್ತಲೇ ಸಮಾಜಸೇವೆ ಹಾಗೂ ಸಾಹಿತ್ಯವಲಯದಲ್ಲಿ ಚಟುವಟಿಕೆಯಿಂದ ಇದ್ದು ನಾಲ್ಕು ಕವನಸಂಕಲನಗಳನ್ನು ಹೊರತಂದಿದ್ದಾರೆ.

ಅಂಕುರ, ಅಸ್ಮಿತೆ, ಅಕ್ಷರಗಳು ಹಾಗೂ ನವಿರಾದ ಸಾಲು ಇವರ ಕವನಸಂಕಲನಗಳು. ಪ್ರಸ್ತುತ ನೆನಪಿನ ಜಗುಲಿ ಇವರ ಐದನೆಯ ಸಾಹಿತ್ಯ ಕೃತಿ. ಈ ಕೃತಿಯ ಬಗ್ಗೆ ನನ್ನೆರಡು ಮಾತುಗಳನ್ನು ಹಂಚಿಕೊಳ್ಳುವೆ.

ಬಾಳೆನ್ನುವ ಪಯಣದಲ್ಲಿ ಪ್ರತಿಯೊಬ್ಬರೂ ನೆನಪಿನ ಬುಟ್ಟಿಯನ್ನು ಹೊತ್ತು ತಿರುಗುತ್ತೇವೆ. ಆ ಬುಟ್ಟಿಯಲ್ಲಿ ಮುದವನ್ನು ನೀಡುವ ಹೂವುಗಳಿರುತ್ತವೆ. ಅಂತೆಯೇ ಬುಸುಗುಟ್ಟುವ ಹಾವುಗಳೂ ಇರುತ್ತವೆ. ಕೆಲವೊಂದು ಮುಳ್ಳುಗಳೂ ಇರಬಹುದು. ಹಾವುಗಳನ್ನು ಮುಳ್ಳುಗಳನ್ನೂ ಪದೇಪದೇ ನೋಡುತ್ತಿದ್ದರೆ ಬದುಕು ಹಸನಾಗುವುದಿಲ್ಲ. ಮನಸ್ಸು ಖಿನ್ನತೆಗೆ ಜಾರುವ ಸಂಭವವೂ ಇರುತ್ತದೆ. ಆದರೆ ಮುದ ನೀಡುವ ಸವಿನೆನಪುಗಳಿಂದ ಕವಿ ಒಂದು ಸುಂದರ ಓದಿನ ಲೋಕ ಸೃಷ್ಟಿಸುತ್ತಾನೆ. ಇಂತಹ ಒಂದು ಪ್ರಯತ್ನವನ್ನು ಶ್ರೀಮತಿ ಶ್ವೇತಾ ಪ್ರಕಾಶ್ ರವರು ಈ ಕೃತಿಯ ಮೂಲಕ ಯಶಸ್ವಿಯಾಗಿ ಮಾಡಿದ್ದಾರೆ. ಇದಕ್ಕಾಗಿ ಅವರಿಗೆ ಅಭಿನಂದನೆಗಳು ಬನ್ನಿ ನೆನಪಿನ ಜಗುಲಿಯಲ್ಲಿ ಕುಳಿತು ಮಾತನಾಡುವ.ಎನ್ನುತ್ತಲೇ 1970-1980 ರ ಕಾಲಘಟ್ಟದ ಸಾಮಾಜಿಕ ಪರಿಸ್ಥಿತಿಗಳ ಚಿತ್ರಣವನ್ನೇ ಸೊಗಸಾಗಿ ಕಣ್ಣ ಮುಂದೆ ತಂದಿರಿಸಿದ್ದಾರೆ.

ಕೌಟುಂಬಿಕ ಜೀವನದ ಚಿತ್ರಣ ಎನಿಸದೆ ನಾವು ಅಂದು ಸಮಾಜದಲ್ಲಿ ನೋಡಿದ ಪರಿಸರವೇ ಇದು ಎನ್ನುವ ಭಾವನೆ ಓದಿದವರಿಗೆ ಖಂಡಿತ ಬರುತ್ತದೆ. ಅಂದಿನ ಕಾಲದ ಹಬ್ಬಗಳ ಶ್ರಾದ್ಧಗಳ ಆಚರಣೆಯ ಬಗ್ಗೆ ಅಭಿಮಾನದಿಂದ ಹೇಳುತ್ತಲೇ ಆಡಂಬರಕ್ಕಿಂತ ಶೃದ್ಧೆ ಮುಖ್ಯ ಆಶಯವನ್ನು ಅರಿಯುವುದು ಮುಖ್ಯ ಎಂಬ ಸಂದೇಶ ನೀಡಿದ್ದಾರೆ ಹಿಂದೆ ಅಂಚೆಯ ಮೂಲಕ ಭಾವನೆಗಳ ವಿನಿಮಯ ಆಗುತ್ತಿದ್ದುದು ಟೆಂಟ್ ಸಿನೆಮಾಗಳ ವೀಕ್ಷಣೆ ,ಮಕ್ಕಳ ಆಟಿಗಳು ಆಟಿಕೆಗಳು ಸಂತೋಷಕ್ಕೆ ‌ಹಣವೇ ಮುಖ್ಯ ಅಲ್ಲ ಎಂಬುದನ್ನು ಆ ಕಾಲದಲ್ಲಿ ಅರಿತಿದ್ದರು ಎಂಬುದಕ್ಕೆ ನಿದರ್ಶನ ನೀಡುತ್ತವೆ. ಪರೋಕ್ಷವಾಗಿ ಇವು ಇಂದಿನ ಪೀಳಿಗೆಗೆ ಉತ್ತಮ ಸಂದೇಶವನ್ನು ನೀಡಿವೆ.

ಕೊಂಕಣ ಸುತ್ತಿ ಮೈಲಾರಕ್ಕೆ ಬರುವ ರೈಲು ಪಯಣ ಅವಿಭಕ್ತ ಕುಟುಂಬ ಒರಳುಕಲ್ಲು ಇವುಗಳು ಕಾಲಕ್ರಮೇಣ ನೇಪಥ್ಯಕ್ಕೆ ಸರಿದರೂ ಬದಲಾವಣೆ ಯುಗಧರ್ಮ ಎನ್ನುತ್ತಾ ಹೊಂದಿಕೊಳ್ಳುವ ಅನಿವಾರ್ಯತೆಯನ್ನೂ ಹೇಳಿದ್ದಾರೆ. ವಿಶೇಷವಾಗಿ ಹೆಣ್ಣುಮಕ್ಕಳ ಅಲಂಕಾರ ಅಂದು ಹೇಗಿತ್ತು ಇಂದು ಹೇಗಿದೆ ಎಂದು ಬರೆದ ಲೇಖನ ಚೆನ್ನಾಗಿ ಮೂಡಿಬಂದಿದೆ. ಹೊರರೂಪದ ಪ್ರಸ್ತುತೀಕರಣ ಬದಲಾದರೂ ಆಂತರಿಕವಾಗಿ ಮೌಲ್ಯಗಳನ್ನು ಕಾಪಾಡಿಕೊಂಡು ಬರುವವರಿದ್ದಾರೆ.

ನಮ್ಮೆಲ್ಲ ಆಚರಣೆಗಳೂ ಪ್ರಕೃತಿಯೊಂದಿಗೆ ನಂಟನ್ನು ಬೆಳೆಸಿಕೊಂಡಿವೆ ಎಂಬುದಕ್ಕೆ ಅಶ್ವತ್ಥ ಪ್ರದಕ್ಷಿಣೆ, ಬೇವು ಬೆಲ್ಲ, ಮಾವಿನ ತೋರಣ, ಬಾಳೆಎಲೆಯ ಭೋಜನ ಇವುಗಳ ಉದಾಹರಣೆಯನ್ನು ಸಮರ್ಥವಾಗಿ ಸಮಯೋಚಿತವಾಗಿ ನೀಡಿದ್ದಾರೆ.

ನೆನಪುಗಳನ್ನು ಲೇಖನದಲ್ಲಿ ಬಿಂಬಿಸುತ್ತಲೇ ಮನದ ನೆನಪಿನಾಳದ ಭಾವಗಳಿಗೆ ಕವನರೂಪ ಕೊಟ್ಟು ಕೆಲವನ್ನು ನೆನಪಿನ ಜಗುಲಿಯಲ್ಲಿ ಹರಡಿದ್ದಾರೆ. ಹಿಜಾಬು ಕಿತಾಬು ಕವನ ಪ್ರಸ್ತುತ ವಿದ್ಯಮಾನದ ಕನ್ನಡಿಯೂ ಹೌದು. ಮನುಷ್ಯ ವರ್ತಮಾನದಲ್ಲಿ ಜೀವಿಸಿದರೂ ಮನಸ್ಸಿಗೆ ಭೂತಕಾಲವೇ ಹೆಚ್ಚು ಆಪ್ತವಾಗುತ್ತವೆ. ಈ ಪುಸ್ತಕ ಓದಿದಾಗ ನಿಮಗೂ ಅನಿಸುತ್ತದೆ ಇಂತಹ ಕೃತಿ ರಚಿಸಿದ ಶ್ರೀಮತಿ ಶ್ವೇತಾ ಪ್ರಕಾಶ್ ರವರಿಗೆ ಶುಭವಾಗಲಿ.

ಇವರ ಸಾಹಿತ್ಯ ಸೇವೆ ಸಮಾಜಸೇವೆ ನಿರಂತರವಾಗಲಿ ಎಂದು ಹಾರೈಸುತ್ತಾ ನನ್ನ ಮಾತುಗಳನ್ನು ಮುಗಿಸುವೆ.


  • ಪದ್ಮನಾಭ. ಡಿ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW